Tag: ಪಬ್ಲಿಕ್ ಟಿವಿ ST Somashekhar

  • ಮೈಸೂರು ಮೇಯರ್ ಸ್ಥಾನ ಬಿಟ್ಕೊಡುವಂತೆ ಸಾ.ರಾ.ಮಹೇಶ್ ಜೊತೆ ಮಾತನಾಡಿದ್ದೇನೆ: ಸೋಮಶೇಖರ್

    ಮೈಸೂರು ಮೇಯರ್ ಸ್ಥಾನ ಬಿಟ್ಕೊಡುವಂತೆ ಸಾ.ರಾ.ಮಹೇಶ್ ಜೊತೆ ಮಾತನಾಡಿದ್ದೇನೆ: ಸೋಮಶೇಖರ್

    – ಮೈಸೂರು ಮೇಯರ್ ಪಟ್ಟಕ್ಕೆ ಜೆಡಿಎಸ್ ಜೊತೆ ಬಿಜೆಪಿ ‘ಷರತ್ತು’ ಒಪ್ಪಂದ!

    ಚಾಮರಾಜನಗರ: ಮೇಯರ್ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುವಂತೆ ಜೆಡಿಎಸ್ ನ ಮಾಜಿ ಸಚಿವ ಸಾ.ರಾ.ಮಹೇಶ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಯರ್ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟು ಕೊಡುವಂತೆ ಸಾ.ರಾ.ಮಹೇಶ್ ಅವರು ಕೇಳಿದ್ದಾರೆ. ನಾನು 3 ಷರತ್ತು ಹಾಕಿದ್ದೇನೆ, ಅವರು ಸಹ ಷರತ್ತು ಹಾಕಿದ್ದಾರೆ. ಸಾ.ರಾ. ಮಹೇಶ್ ಅವರು ಅವರ ಹೈಕಮಾಂಡ್ ಜೊತೆ ಮಾತನಾಡಲಿದ್ದಾರೆ. ಈ ವಿಚಾರವಾಗಿ ನಾನು ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮಾತನಾಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಪಿಕ್ಚರ್ ಅಭೀ ಬಾಕಿ ಹೈ ಎಂದ ಆನಂದ್ ಸಿಂಗ್‍ಗೆ ಥಿಯೇಟರ್ ಬಂದ್ ಹೈ ಎಂದ ರಾಜೂ ಗೌಡ

    ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ಹಾಗೂ ಮೈಸೂರು ಬಿಜೆಪಿ ನಗರಾಧ್ಯಕ್ಷ ಅವರು ಸಹ ಹೆಚ್.ಡಿ.ಕುಮಾರಸ್ವಾಮಿ ಜೊತೆ ಮಾತನಾಡಲಿದ್ದಾರೆ. ನಾಳೆ ಸಂಜೆ ಅಥವಾ ನಾಳಿದ್ದು ಮೈಸೂರು ಮೇಯರ್ ಯಾರೆಂದು ತಿಳಿಯಲಿದೆ ಎಂದಿದ್ದಾರೆ. ಅಲ್ಲದೇ ಸಚಿವ ಆನಂದ್ ಸಿಂಗ್ ವಿಚಾರವಾಗಿ, ಅವರಿಗೆ ಸಿಎಂ ಅವರು ಏನೆಲ್ಲಾ ಹೇಳಬೇಕೊ ಅದೆಲ್ಲವನ್ನೂ ಎರಡು ದಿನಗಳ ಹಿಂದೆಯೇ ಹೇಳಿದ್ದಾರೆ. ಇನ್ನೊಂದು ವಾರದ ಒಳಗೆ ಎಲ್ಲವೂ ಸರಿಹೋಗಲಿದೆ ಎಂದು ಹೇಳಿದ್ದಾರೆ.

    ಮತ್ತೊಂದೆಡೆ ಕೇರಳ ರಾಜ್ಯದಿಂದ ಇತ್ತೀಚಿನ ದಿನಗಳಲ್ಲಿ ಕೆಲವು ಮಂದಿ ಕರ್ನಾಟಕ ರಾಜ್ಯದೊಳಗೆ ಪ್ರವೇಶಿಸಲು ನಕಲಿ ಆರ್‌ಟಿಪಿಸಿಆರ್ ವರದಿಗಳನ್ನು ತರುತ್ತಿರುವುದು ಚೆಕ್ ಪೋಸ್ಟ್ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಅವರನ್ನು ಹಿಂತಿರುಗಿಸಿ ಕಳುಹಿಸುತ್ತಿದ್ದಾರೆ. ಇದನ್ನು ರಾಜ್ಯ ಸರ್ಕಾರವು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ನಕಲಿ ಆರ್‌ಟಿಪಿಸಿಆರ್ ವರದಿ ಹೊಂದಿರುವವರ ವಿರುದ್ಧ ಕೂಡಲೇ ಕ್ರಮ ಕೂಡಲೇ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವ ಜೊತೆಗೆ ಸ್ಥಳದಲ್ಲೇ ಜಪ್ತಿ ಮಾಡುವಂತೆ ಸ್ಥಳದಲ್ಲಿದ್ದ ಚೆಕ್ ಪೋಸ್ಟ್ ಅಧಿಕಾರಿಗಳು ಹಾಗೂ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ:ಅಕ್ಕೈ ಪದ್ಮಶಾಲಿ ಆಸೆ ನೆರವೇರಿಸಿದ ನಟ ಧನಂಜಯ್

  • ಮನೆ ಮನೆ ಸರ್ವೆಗೆ ಮೇ 31ರ ವರೆಗೆ ಗಡುವು – ಎಸ್.ಟಿ.ಸೋಮಶೇಖರ್

    ಮನೆ ಮನೆ ಸರ್ವೆಗೆ ಮೇ 31ರ ವರೆಗೆ ಗಡುವು – ಎಸ್.ಟಿ.ಸೋಮಶೇಖರ್

    – ಯಾವ ಸಂದರ್ಭದಲ್ಲಾದರೂ ಭೇಟಿ ನೀಡುವೆ 
    – ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ

    ಮೈಸೂರು: ಪಿರಿಯಾಪಟ್ಟಣದ 4 ಹೋಬಳಿಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಆ 4 ಹೋಬಳಿಗಳು ಕೊರೊನಾ ಮುಕ್ತ ಹಳ್ಳಿಗಳಾಗಬೇಕು. ಮೇ 31ರೊಳಗಾಗಿ ಮನೆ ಮನೆ ಸರ್ವೆಯನ್ನು ಮಾಡಿ ಮುಗಿಸಬೇಕು. ಜೂ 1 ರಿಂದ ಯಾವಾಗಲಾದರೂ ಆ ಹೋಬಳಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಲಿರುವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ರವರು ಹೇಳಿದ್ದಾರೆ.

    ಭಾನುವಾರ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ, ಹುಣಸೂರು ವಿಧಾನ ಸಭಾ ಕ್ಷೇತ್ರದ ಆರೋಗ್ಯ ಕೇಂದ್ರಗಳಿಗೆ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಬೈಲುಕುಪ್ಪೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, ಅಲ್ಲಿನ ಜನರಿಂದ ಮತ್ತಷ್ಟು ಜನರಿಗೆ ಹರಡುವ ಸಂಭವವಿರುವುದರಿಂದ ಅದನ್ನು ಸಂಪೂರ್ಣ ಲಾಕ್ ಡೌನ್ ಮಾಡಬೇಕು. ಬೈಲುಕುಪ್ಪೆಗೆ ಹೊರಗಡೆಯಿಂದ ಯಾರು ಬರಬಾರದು. ಇಲ್ಲಿಂದ ಹೊರಗಡೆಗೆ ಯಾರು ಹೋಗಬಾರದು. ಅವರಿಗೆ ಎಲ್ಲಾ ವಸ್ತುಗಳು ಅಲ್ಲಿಯೇ ಸಿಗುವಂತೆ ಕಲ್ಪಿಸಿ ಎಂದು ಸೂಚಿಸಿದರು.

    ಮನೆಮನೆ ಸರ್ವೆಯನ್ನು ನಡೆಸಲು ಪಿಡಿಒಗಳಿಗೆ ಒಂದು ಗುರಿಯನ್ನು ನಿಗದಿಪಡಿಸಿ. ಅವರೂ ಸಹ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಲಿ. ನಂಜನಗೂಡಿನ ಪಿಡಿಒಗಳಂತೆ ಕಾರ್ಯನಿರ್ವಹಿಸಲಿ ಎಂದರು.

    ವ್ಯಾಕ್ಸಿನೇಷನ್ ಹಾಗೂ ಔಷಧದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. 4 ಹೋಬಳಿಗಲ್ಲಿ ಶೇ.100ರಷ್ಟು ವ್ಯಾಕ್ಸಿನೇಷನ್ ಆಗಿರಬೇಕು. ಸಂಸದ ಪ್ರತಾಪ್ ಸಿಂಹ ಅವರು ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ಮೇಲೆ ಔಷಧಿಗಾಗಲಿ, ಆಕ್ಸಿಜನ್ ಸಿಲಿಂಡರ್‌ಗಳಿಗಾಗಲಿ ಯಾವುದಕ್ಕೂ ಕೊರತೆ ಕಂಡು ಬಂದಿಲ್ಲ. ಇದರಿಂದ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

    ಮನೆ ಮನೆ ಸರ್ವೆಯನ್ನು ನಡೆಸಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರನ್ನು ಬಳಸಿಕೊಳ್ಳಿ. ಅವರಿದ್ದರೆ ಸರ್ವೆಯನ್ನು ಆದಷ್ಟು ಬೇಗ ಮುಗಿಸಬಹುದು. ಅವರಿಗಾಗಿ ಫೇಸ್ ಶೀಲ್ಡ್ ಸೇರಿದಂತೆ ಕಿಟ್ ಗಳನ್ನು ಒದಗಿಸಲಾಗುತ್ತದೆ ಎಂದು ನುಡಿದರು.

    ಕೋವಿಡ್ ರೋಗಿಗಳು ಇರುವ ಕೇಂದ್ರಗಳಿಗೆ ತೆರಳಿ ಅಲ್ಲಿನ ಕುಂದು ಕೊರತೆಗಳನ್ನು ಆಲಿಸಿದರು. ಅವರಿಗೆ ಆರೋಗ್ಯದಲ್ಲಾಗಲಿ, ಆಹಾರದಲ್ಲಾಗಲಿ ಯಾವುದೇ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಿ ಎಂದು ವೈದ್ಯಾಧಿಕಾರಿಗಳಿಗೆ ತಿಳಿಸಿದರು.

    ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಮಹದೇವ್, ಹೆಚ್.ಪಿ.ಮಂಜುನಾಥ್, ಜಿಲ್ಲಾ ಪಂಚಾಯತಿಯ ಮುಖಕಾರ್ಯನಿರ್ವಾಣಾಧಿಕಾರಿ ಎ.ಎಂ.ಯೋಗೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ತಹಶಿಲ್ದಾರ್ ಗಳಾದ ಬಸವರಾಜು ಚಂದ್ರಮೌಳಿ, ತಾಲ್ಲೂಕು ವೈದ್ಯಾಧಿಕಾರಿ ಶರತ್ ಬಾಬು, ಮುಖ್ಯ ವೈದ್ಯಾದಿಕಾರಿ ಡಾ.ಜೆ.ಶ್ರೀನಿವಾಸ್, ಡಾ.ದೇವಿಕ ಸೇರಿದಂತೆ ಇತರರು ಹಾಜರಿದ್ದರು.

  • ಸೋಮಶೇಖರ್ ಕಾರ್ಯವೈಖರಿ ಆಶ್ಚರ್ಯ ತಂದಿದೆ – ಮಾನವೀಯ ಕಾರ್ಯಕ್ಕೆ ನಂಜಾವಧೂತ ಶ್ರೀ ಶ್ಲಾಘನೆ

    ಸೋಮಶೇಖರ್ ಕಾರ್ಯವೈಖರಿ ಆಶ್ಚರ್ಯ ತಂದಿದೆ – ಮಾನವೀಯ ಕಾರ್ಯಕ್ಕೆ ನಂಜಾವಧೂತ ಶ್ರೀ ಶ್ಲಾಘನೆ

    ಬೆಂಗಳೂರು: ಯಶವಂತಪುರ ಕ್ಷೇತ್ರದ ಶಾಸಕರು, ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಎಲ್ಲರಿಗೂ ಮಾದರಿಯಾಗುವ ಕಾರ್ಯವನ್ನು ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ನನಗೂ ಆಶ್ಚರ್ಯವನ್ನು ತಂದಿದೆ. ಕ್ಷೇತ್ರದ ಜನರಿಗೆ ಈ ರೀತಿಯಾಗಿ ಬೆನ್ನೆಲುಬಾಗಿ ನಿಲ್ಲುವ ಮೂಲಕ ನಿಮಗೆ ನಾವಿದ್ದೇವೆ ಎಂಬ ಅಭಯವನ್ನು ಅವರು ನೀಡುವ ಮುಖಾಂತರ ಆರ್ಥಿಕ ನೆರವು ನೀಡುತ್ತಿರುವುದು ಮಾದರಿ ಹಾಗೂ ಮಾನವೀಯ ಕ್ರಮವಾಗಿದೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಂಜಾವಧೂತ ಮಹಾಸ್ವಾಮೀಜಿ ಹೇಳಿದ್ದಾರೆ.

    ಯಶವಂತಪುರ ವಿಧಾನಸಭಾ ಕ್ಷೇತ್ರ ನಗರ ಮಂಡಲದ ದೊಡ್ಡ ಬಿದರಕಲ್ಲು ವಾರ್ಡ್ 40ರಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್‍ರವರು ಕೋವಿಡ್ 19ರಿಂದ ಮೃತಪಟ್ಟ 34 ಮಂದಿಯ ಕುಟುಂಬದವರಿಗೆ ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿಯವರು, ತಮಗೆ ಎಷ್ಟು ಸಮಸ್ಯೆಯಾದರೂ ಜನರ ಪರ ನಿಲ್ಲುತ್ತೇವೆ ಎಂಬ ಮನೋಭಾವ ಎಲ್ಲರಿಗೂ ಇರುವುದಿಲ್ಲ. ಅದನ್ನು ಸಚಿವರಾದ ಸೋಮಶೇಖರ್ ಅವರು ಮಾಡಿ ತೋರಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

    ಸಾಂಕ್ರಾಮಿಕ ರೋಗದ ಭಯದಿಂದ ಜನ ಭಯಗೊಳ್ಳುತ್ತಿದ್ದಾರೆ, ಆಕ್ಸಿಜನ್ ಅವಶ್ಯಕತೆ ಇಲ್ಲದಿದ್ದರೂ ಬೇಕೆನ್ನುವುದು, ಬೆಡ್ ಬೇಡವಾದರೂ ಬೇಕೆಂದು ಹಠ ಮಾಡಿ ಪಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ, ನಾವು ಒಬ್ಬರು ಧೈರ್ಯದಿಂದ್ದರೆ 300 ಜನಕ್ಕೆ ಸೋಂಕು ಹರಡುವುದನ್ನು ತಪ್ಪಿಸಬಹುದು ಎಂದು ನಂಜಾವಧೂತ ಮಹಾಸ್ವಾಮೀಜಿಯವರು ತಿಳಿಸಿದರು.

    ಭಾರತೀಯ ಆಹಾರ ಪದ್ಧತಿ ಪಾಲಿಸಿ: ಈಗಾಗಲೇ ಕೊಟ್ಟಿರುವ ವರದಿಗಳ ಪ್ರಕಾರ, ನಾವು ಆಸ್ಪತ್ರೆಗಳನ್ನು, ಬೆಡ್ ಗಳನ್ನು ಒದಗಿಸಲು ಎಲ್ಲ ರಾಜ್ಯಗಳಿಗೂ ಕಷ್ಟವಾಗಿದೆ. ಈಗ ಅವುಗಳ ವಿಸ್ತರಣೆ ಮಾಡಲಾಗುತ್ತಿದೆ. ಇದು ಎದುರಿಸಲಾಗದ ರೋಗವಲ್ಲ. ಸಾಮಾಜಿಕ ಅಂತರವನ್ನು ಎಲ್ಲರೂ ಕಾಯ್ದುಕೊಳ್ಳಬೇಕು. ಎಲ್ಲರೂ ಧೈರ್ಯದಿಂದ ಇರಬೇಕು. ಅಮೆರಿಕದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ವೈದ್ಯರಾದ ಎಂ.ಎಸ್.ರೆಡ್ಡಿರವರು ಹೇಳುವ ಪ್ರಕಾರ, ಇಂಥ ಅನೇಕ ವೈರಸ್ ಗಳು ಬಂದು ಹೋಗಿವೆ. ಮಾಸ್ಕ್ ಗಳನ್ನು ಹಾಕುವುದರ ಜೊತೆಗೆ ನಮ್ಮ ಆಹಾರ ಪದ್ಧತಿಯಲ್ಲಿ ಬಳಸಿಕೊಳ್ಳಬೇಕು ಎಂದರು.

    ನಾವು ಭಾರತೀಯರು ನಮ್ಮ ಆಹಾರ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ದಿನ ನಿತ್ಯ ಮಜ್ಜಿಗೆ ಸೇವನೆ, ಉತ್ತಮ ಆಹಾರವನ್ನು ಸೇವಿಸಬೇಕು. ನಾವು ಮನೋಸ್ಥೈರ್ಯದಿಂದ್ದರೆ ಮಾತ್ರ ಕೊರೊನಾವನ್ನು ಎಲ್ಲರೂ ಜಯಿಸಬಹುದು. ಹಾವು ಕಚ್ಚಿದವರೂ ಬದುಕುತ್ತಾರೆ. ಆದರೆ, ಭಯ ಅವರನ್ನು ಕೊಲ್ಲುತ್ತದೆ ಎಂದು ಸ್ವಾಮೀಜಿಗಳು ಹೇಳಿದರು.

    ಜನ, ಆಪ್ತರನ್ನು ಕಳೆದುಕೊಂಡು ಆತಂಕ: ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್‍ರವರು ಮಾತನಾಡಿ, ಈ ಕೊರೊನಾ ಬಹಳ ಸಂಕಷ್ಟವನ್ನು ತಂದೊಡ್ಡಿದೆ. ಜನರು, ಆಪ್ತರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ನಾನು ಶಾಸಕನಾಗಿ ಆಯ್ಕೆಯಾಗಲು ಹಗಲಿರುಳು ಶ್ರಮಿಸಿದ ಆಪ್ತರು ಸಹ ಇಂದು ಬಲಿಯಾಗುತ್ತಿರುವುದು ನನಗೆ ಆತಂಕ ಹಾಗೂ ನೋವನ್ನು ತಂದೊಡ್ಡಿದೆ. ಹೀಗಾಗಿ ಎಲ್ಲರನ್ನೂ ಕಾಪಾಡಿಕೊಳ್ಳಬೇಕು, ಧೈರ್ಯ ತುಂಬಬೇಕು ಎಂಬ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇನೆ. ಕೊರೊನಾ ಮೊದಲನೇ ಅಲೆಯೇ ಬೇರೆ, ಎರಡನೇ ಅಲೆಯೇ ಬೇರೆ. ಕರ್ನಾಟಕದ ಎಲ್ಲ ಕಡೆಗೂ ಬಹಳ ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ನಮ್ಮ ಇಡೀ ಕ್ಷೇತ್ರ ಹಾಗೂ ಪಾಸಿಟಿವ್ ಬಂದಂತವರ ಮನೆಗಳಿಗೆ ವೈಯಕ್ತಿಕವಾಗಿ ಹಣ ಖರ್ಚು ಮಾಡಿ ಸ್ಯಾನಿಟೈಸ್ ಮಾಡುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಸಚಿವ ಸೋಮಶೇಖರ್‍ರವರು ನುಡಿದರು.

    ಟ್ರಯಾಜ್ ಸೆಂಟರ್ ನಲ್ಲಿ ಸೂಕ್ತ ಮಾರ್ಗದರ್ಶನ: ಇಂದು ಕ್ಷೇತ್ರದಲ್ಲಿ ಹೇರೋಹಳ್ಳಿ, ರಾಜರಾಜೇಶ್ವರಿ ನಗರ ಹಾಗೂ ಕೆಂಗೇರಿ ಸೇರಿ ಮೂರು ಟ್ರಯಾಜ್ ಸೆಂಟರ್ ರನ್ನು ತೆರೆದಿದ್ದು, ಜನಸೇವಾ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ರನ್ನು ತೆರೆದಿದ್ದೇವೆ. ಇಲ್ಲಿ ವೈದ್ಯರು ಸೋಂಕಿತರಿಗೆ ಸೂಕ್ತ ಮಾರ್ಗದರ್ಶನ ನೀಡುವುದಲ್ಲದೆ, ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿ ಎಲ್ಲ ವ್ಯವಸ್ಥೆಗಳು ಇಲ್ಲಿವೆ. ಇನ್ನೂ ನಾಲ್ಕು ಕಡೆ ಕೋವಿಡ್ ಕೇರ್ ಸೆಂಟರ್ ರನ್ನು ತೆರೆಯಲಿದ್ದೇವೆ. ಪಾಸಿಟಿವ್ ಬಂದ ತಕ್ಷಣ ಈ ಟ್ರಯಾಜ್ ಸೆಂಟರ್‍ಗಳಿಗೆ ಜನ ಹೋದರೆ ಸೂಕ್ತ ಮಾರ್ಗದರ್ಶನ ಸಿಗಲಿದೆ ಎಂದರು.

    ಕ್ಷೇತ್ರದಲ್ಲಿ ಗುಣಮುಖರ ಸಂಖ್ಯೆ ಹೆಚ್ಚಳ: ನನ್ನ ಕ್ಷೇತ್ರದಲ್ಲಿ ಏಳೂವರೆ ಸಾವಿರ ಪಾಸಿಟಿವ್ ಬಂದಿದೆ. ಅದರಲ್ಲೀಗ ಆರೂವರೆ ಸಾವಿರದಷ್ಟು ಮಂದಿ ಗುಣಮುಖರಾಗಿದ್ದಾರೆ. ಯಾರೂ ಹೆದರಬೇಕಾದ ಅಗತ್ಯವಿಲ್ಲ. ಬಿಜಿಎಸ್ ಆಸ್ಪತ್ರೆಯಲ್ಲಿ ಸಹ ಸಾರ್ವಜನಿಕ ಬಳಕೆಗೆ 200 ಬೆಡ್ ಗಳನ್ನು ನೀಡಿದ್ದು, ಮುಖ್ಯಮಂತ್ರಿಗಳು ಮೂರ್ನಾಲ್ಕು ದಿನಗಳ ಹಿಂದೆ ಅದಕ್ಕೆ ಚಾಲನೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗಳಿಂದ ಶೇ. 50 ಬೆಡ್ ಗಳನ್ನು ಪಡೆಯಲಾಗಿದೆ ಎಂದು ಹೇಳಿದರು.

    1,300 ವಾರಿಯರ್ಸ್ ಗೆ ಸೌಲಭ್ಯ: ಕ್ಷೇತ್ರದಲ್ಲಿ ಜನರಿಗೆ ಸೇವೆ ಸಲ್ಲಿಸಲೆಂದೇ 1300 ವಾರಿಯರ್ಸ್ ಗಳನ್ನು ನೇಮಿಸಿದ್ದು, ಅವರಿಗೆ ಹೆಲ್ತ್ ಕಿಟ್, ಮಾಸ್ಕ್, ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆಗೇ ಒದಗಿಸುತ್ತಿದ್ದೇನೆ. ಇನ್ನೆರೆಡು ದಿನದಲ್ಲಿ ವ್ಯಾಕ್ಸಿನೇಶನ್ ಸರಿಹೊಂದಲಿದೆ. ಬೇರೆ ಬೇರೆ ಕಡೆಗಳಿಂದ ಬಂದು ಆನ್ ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡು ಬರುತ್ತಿರುವುದು ಸಮಸ್ಯೆಯಾಗುತ್ತಿದೆ. ಹೀಗಾಗಿ ಆಯಾ ಕ್ಷೇತ್ರದಲ್ಲಿ ಕ್ಷೇತ್ರದವರಿಗೆ ಆದ್ಯತೆ ನೀಡುವ ಕೆಲಸ ಆಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರಾದ ಸಿ.ಟಿ. ರವಿ ಅವರು ಹಾಗೂ ಉಪ ಮುಖ್ಯಮಂತ್ರಿಗಳಾದ ಅಶ್ವತ್ಥ ನಾರಾಯಣ ರವರ ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು.

    ಪ್ರತಿಪಕ್ಷದವರಿಗೆ ಸಚಿವರ ತಿರುಗೇಟು: ತಜ್ಞರು ಹೇಳಿರುವ ಪ್ರಕಾರ ನಡೆದುಕೊಳ್ಳಬೇಕು. ಲಾಕ್ ಡೌನ್ ಅನ್ನು ಇನ್ನೂ ಎಂಟು ದಿನಗಳ ಕಾಲ ವಿಸ್ತರಣೆ ಮಾಡಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ. ಕೊರೊನಾ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಕಾಂಗ್ರೆಸ್ ಮೊದಲಿನಿಂದಲೂ ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಾ ಬಂದಿದೆ. ಅವರಿಗೆ ವಿರೋಧ ಮಾಡಲು ಏನಾದರೂ ವಿಷಯ ಬೇಕು. ಹೀಗಾಗಿ ಈಗ ಲಸಿಕೆ ಬಗ್ಗೆ ಮಾತನಾಡುತ್ತಾ, ಕೊರತೆ ಆಗಿರೋ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿವರಾದ ಸೋಮಶೇಖರ್ ಅವರು ಪ್ರತಿಪಕ್ಷದವರಿಗೆ ತಿರುಗೇಟು ನೀಡಿದರು.

    ಬದುಕು ಕಟ್ಟಿಕೊಳ್ಳಲು ಅವರಿಗೆ ನೆರವಾಗಬೇಕು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರಾದ ಸಿ.ಟಿ. ರವಿ ಅವರು ಮಾತನಾಡಿ, ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ವೈರಸ್ ಗಿಂತಲೂ ಮುಂದೆ ಸಾಗಲು ಆಗಲಿಲ್ಲ. ಅಮೆರಿಕದಂತಹ ಮುಂದುವರೆದ ದೇಶಗಳೇ ಇದರಿಂದ ತಪ್ಪಿಸಿ ಕೊಳ್ಳಲು ಆಗಲಿಲ್ಲ. ದೇಶವಿದೇಶಗಳಿಂದ ಸಹಾಯ ಕೋರಿದರೂ, ವೈದ್ಯರು ಹಗಲಿರುಳು ಶ್ರಮಿಸಿದರೂ ಎಲ್ಲರನ್ನೂ ಉಳಿಸಿಕೊಳ್ಳಲು ಆಗಲಿಲ್ಲ. ಉಳಿದವರ ನೆರವಿಗಾದರೂ ನಾವು ಧಾವಿಸಬೇಕಿದೆ. ಇಂದು 9 ಸಾವಿರ ಮೆಟ್ರಿಕ್ ಟನ್ ನಷ್ಟು ಆಕ್ಸಿಜನ್ ಪೂರೈಕೆ ಮಾಡಿದರೂ ಸಹ ಬೇಡಿಕೆ ಮುಟ್ಟಲು ಕಷ್ಟವಾಗುತ್ತಿದೆ. ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ವಿದೇಶಗಳಿಂದಲೂ ಸಹ ಸಹಕಾರ ಪಡೆದು ಆಕ್ಸಿಜನ್ ಸಹಿತ, ಔಷಧಗಳನ್ನು ಆಮದು ಮಾಡಿಸಿಕೊಳ್ಳುತ್ತಿದ್ದಾರೆ. ವೈದ್ಯರೂ ಸಹ ಹಗಳಿರುಳು ಶ್ರಮಿಸುತ್ತಿದ್ದಾರೆ. ಹೀಗಾಗಿ ಇದರ ವಿರುದ್ಧ ಸಂಘಟಿತರಾಗಿ ಹೋರಾಡೋಣ ಎಂದು ತಿಳಿಸಿದರು.

    ಜನರ ಜೊತೆ ಇರುವುದು ನಮ್ಮ ಕರ್ತವ್ಯ: ಕೊರೊನಾ ಸಂಕಷ್ಟದ ಕಾಲದಲ್ಲಿ ನಾವು ಮಾನವೀಯ ನೆಲೆಯಲ್ಲಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸಚಿವರಾದ ಸೋಮಶೇಖರ್ ಅವರು ಅತ್ಯಂತ ಮಾನವೀಯತೆ ಹಾಗೂ ಔದಾರ್ಯದ ಕಾರ್ಯವನ್ನು ಮಾಡುತ್ತಿದ್ದಾರೆ. ಇದು ಎಲ್ಲರ ಕರ್ತವ್ಯ ವಾಗಬೇಕು ಸಹ. ಬದುಕು ಕಟ್ಟಿಕೊಳ್ಳಲು ಅವರಿಗೆ ನೆರವಾಗಬೇಕಿದೆ. ಎಸ್ ಟಿ ಸೋಮಶೇಖರ್ ಅವರು ಕ್ಷೇತ್ರದ ಜನರ ಜೊತೆ ತಾವಿದ್ದೇವೆ ಎಂದು ಸಹಾಯ ಮಾಡುತ್ತಿದ್ದಾರೆ. ಜನರ ಜೊತೆ ಇರುವುದು ನಮ್ಮ ಕರ್ತವ್ಯ. ಜೊತೆಗೆ ಜನರಿಗೆ ಮಾನಸಿಕ ಧೈರ್ಯವನ್ನು ತುಂಬುವ ಕೆಲಸ ಮಾಡಬೇಕಿದೆ ಎಂದು ಸಿ.ಟಿ. ರವಿರವರು ಹೇಳಿದರು.