Tag: ಪಬ್ಲಿಕ್ ಟಿವಿ School

  • ಶಾಲೆಯೊಳಗೆ ಬಿಯರ್ ಬಾಟ್ಲಿ ತೂರಿದ ಕಿಡಿಗೇಡಿಗಳು – ವಿದ್ಯಾಮಂದಿರಕ್ಕೆ ಅಪಮಾನ

    ಶಾಲೆಯೊಳಗೆ ಬಿಯರ್ ಬಾಟ್ಲಿ ತೂರಿದ ಕಿಡಿಗೇಡಿಗಳು – ವಿದ್ಯಾಮಂದಿರಕ್ಕೆ ಅಪಮಾನ

    ಚಿಕ್ಕಬಳ್ಳಾಪುರ: ತಡರಾತ್ರಿ ಮದ್ಯಪಾನ ಮಾಡಿ ಕಿಡಿಗೇಡಿಗಳು ಖಾಸಗಿ ಶಾಲೆಯೊಳಗೆ ಬಿಯರ್ ಬಾಟಲಿ ತೂರಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಕೋಟೆ ವೃತ್ತದಲ್ಲಿರುವ ಆಕಾಶ್ ಗ್ಲೋಬಲ್ ಶಾಲೆಯ ಕಿಟಕಿಗೆ ಬಿಯರ್ ಬಾಟಲಿಯನ್ನು ತೂರಿದ್ದು, ಕಿಟಕಿ ಗಾಜು ಪುಡಿ, ಪುಡಿಯಾಗಿದೆ. ಈ ಪರಿಣಾಮ ಶಾಲೆಯ ಪ್ರವೇಶ ದ್ವಾರದ ಮುಂಭಾಗ ಹಾಗೂ ಆಡಳಿತ ಕಚೇರಿ ತುಂಬಾ ಬಿಯರ್ ಬಾಟಲಿಯ ಚೂರು ಹಾಗೂ ಕಿಟಕಿ ಗಾಜಿನ ಚೂರುಗಳು ತುಂಬಿಕೊಂಡಿವೆ. ಅಂದಹಾಗೇ ಮಧ್ಯರಾತ್ರಿ ಕುಡಿದ ಅಮಲಿನಲ್ಲಿ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದು, ಈ ಹಿಂದೆ ಸಹ ಇದೇ ಶಾಲೆಯ ಮತ್ತೊಂದು ಕಿಟಕಿ ಗಾಜಿಗೆ ಕಲ್ಲು ತೂರಾಟ ಮಾಡಿ ಹೊಡೆದು ಹಾಕಿದ್ದಾರೆ. ಹೀಗೆ ಪದೇ ಪದೇ ಶಾಲೆಯ ಕಿಟಿಕಿಗಳನ್ನು ಕಲ್ಲು ಹಾಗೂ ಮದ್ಯದ ಬಾಟಲಿಯಿಂದ ಹೊಡೆದು ಹಾಕುತ್ತಿರುವುದು ಶಾಲೆಯ ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಇದನ್ನೂ ಓದಿ:ದರೋಡೆ ಮಾಡಲು ಹೋಗಿ ಏನೂ ಸಿಗದಿದ್ದಾಗ ಯುವತಿಯ ಅತ್ಯಾಚಾರವೆಸಗಿದ ಕಾಮುಕರು!

    ಈ ವಿಚಾರವಾಗಿ ಶಾಲೆಯ ಮುಖ್ಯ ಶಿಕ್ಷಕಿ ಪವಿತ್ರರವರು, ಶಾಲೆ ಮುಖ್ಯ ರಸ್ತೆಯಲ್ಲಿದ್ದು, ಶಾಲೆಯ ಮುಂಭಾಗ, ಅಕ್ಕ-ಪಕ್ಕ ರಾತ್ರಿ ವೇಳೆ ಕೆಲ ಪುಂಡ ಪೋಕರಿಗಳು ಕೂರುತ್ತಾರೆ. ಸಿಗರೇಟ್ ಹಾಗೂ ಮದ್ಯ ಸೇವನೆ ಮಾಡಿ ಬಾಟಲಿ ಬಿಸಾಡುವುದನ್ನು ಮಾಡುತ್ತಿದ್ದರು. ಆಗ ನಾವೇ ಕ್ಲೀನ್ ಮಾಡಿಕೊಂಡು ಸುಮ್ಮನಾಗುತ್ತಿದ್ವಿ. ಈ ಹಿಂದೆ ಸಹ ಶಾಲೆಯ ಮತ್ತೊಂದು ಕಿಟಕಿಯ ಗಾಜಿಗೆ ಕಲ್ಲು ತೂರಿ ಪುಡಿ ಪುಡಿ ಮಾಡಿದ್ದರು. ಆಗಲೂ ಸುಮ್ಮನಿದ್ವಿ. ಈಗ ತಡರಾತ್ರಿ ಶಾಲೆಯ ಮುಂಭಾಗದ ಕಿಟಕಿಗೆ ಬಿಯರ್ ಸಮೇತ ಬಾಟಲಿ ತೂರಿದ್ದು, ಕಿಟಕಿ ಗಾಜು ಹೊಡೆದು ಬಿಯರ್ ಬಾಟಲಿ ಒಳಗೆ ಬಂದಿದೆ. ಚೂರುಗಳೆಲ್ಲವೂ ಶಾಲೆ ಹಾಗೂ ಆಡಳಿತ ಕಚೇರಿಯಲ್ಲಿ ಹರಡಿವೆ. ಶಾಲೆ ಅಂದರೆ ದೇವಾಲಯ ಅಂತಾರೆ. ಅವರ ಮನೆ ಮಕ್ಕಳು ಸಹ ಯಾವುದೋ ಶಾಲೆಯಲ್ಲಿ ಓದುತ್ತಿರುತ್ತಾರೆ. ಆ ಶಾಲೆಯಲ್ಲಿ ಇಂತಹ ಘಟನೆ ಆದರೆ ಅವರಿಗೆಷ್ಟು ನೋವಾಗುತ್ತೆ? ಇದು ಶಾಲೆ ಅಲ್ವಾ. ಇಲ್ಲಿಗೂ ಮಕ್ಕಳು ಬರುತ್ತಾರೆ ಅಲ್ವಾ. ಯಾಕೆ ಹೀಗೆ ಮಾಡಿದ್ರು ಅಂತ ತಮ್ಮ ಆಕ್ರೋಶ ಮತ್ತು ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ:ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ

    ಕೋಟೆ ಪ್ರಮುಖ ವೃತ್ತವಾಗಿದ್ದು, ನಗರದ ಮುಖ್ಯ ಭಾಗದಲ್ಲಿ ಈ ಶಾಲೆಯಿದೆ. ಇಂತಹ ಸ್ಥಳದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಚಿಕ್ಕಬಳ್ಳಾಪುರ ನಗರ ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ. ಬೀಟ್ ವ್ಯವಸ್ಥೆ ಹೆಚ್ಚು ಮಾಡಬೇಕಿದೆ ಅಂತ ಶಾಲೆಯ ಶಿಕ್ಷಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ. ಇದೀಗ ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಪೇದೆಗಳು ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಗುಜರಾತ್‍ನಲ್ಲಿ ಜುಲೈ 26 ರಿಂದ 9 ಮತ್ತು 11ನೇ ತರಗತಿಗಳು ಓಪನ್

    ಗುಜರಾತ್‍ನಲ್ಲಿ ಜುಲೈ 26 ರಿಂದ 9 ಮತ್ತು 11ನೇ ತರಗತಿಗಳು ಓಪನ್

    ಗಾಂಧೀನಗರ: 9ನೇ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕವಾಗಿ ಶೇ.50ರಷ್ಟು ಆಸನ ವ್ಯವಸ್ಥೆಯೊಂದಿಗೆ ಜುಲೈ 26ರಿಂದ ಶಾಲೆ ತೆರೆಯಲು ಗುಜರಾತ್ ಸರ್ಕಾರ ಅನುಮತಿ ನೀಡಿದೆ.

    ಈ ಕುರಿತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಶಾಲೆಯಲ್ಲಿ ದೈಹಿಕ ಶಿಕ್ಷಣ ತರಗತಿಗೆ ಹಾಜರಾಗಲು ಸಿದ್ಧರಿರುವ ವಿದ್ಯಾರ್ಥಿಗಳ ಪೋಷಕರು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಸಲ್ಲಿಸಬೇಕಾಗುತ್ತದೆ.

    ಈ ದೈಹಿಕ ಶಿಕ್ಷಣ ತರಗತಿಗೆ ಹಾಜರಿ ಕಡ್ಡಾಯವಾಗಿಲ್ಲವಾದರೂ, ಆನ್‍ಲೈನ್ ಶಿಕ್ಷಣ ಎಂದಿನಂತೆ ಮುಂದುವರಿಯಲಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಕೋವಿಡ್-19 ನಿಯಮಗಳ ಅನುಸಾರ ಶಾಲೆಗಳನ್ನು ತೆರೆಯಲಾಗಿದ್ದು, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

    ಕಳೆದ ವಾರ ಕೊರೊನಾ ವೈರಸ್ ಪ್ರಕರಣದಲ್ಲಿ ಇಳಿಕೆ ಕಂಡಿದ್ದು, ಶಾಲೆಗಳು, 12ನೇ ತರಗತಿ, ಕಾಲೇಜುಗಳು ಹಾಗೂ ತಾಂತ್ರಿಕ ಸಂಸ್ಥೆಗಳನ್ನು ಪುನಃ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಗುಜರಾತ್‍ನಲ್ಲಿ ಗುರುವಾರ 34 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸಾವಿನಕ್ಕೆ ಶೂನ್ಯವಾಗಿದೆ. ಇದನ್ನೂ ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಮಂಗಳೂರಿನ ವಿನಂತಿ ಹರಿಕಾಂತ

  • ಲಾಕ್ ಡೌನ್ ಬಿಟ್ಟು ಕೆಲವೇ ದಿನಗಳಲ್ಲಿ ಶುರುವಾಗಿದೆ ಖಾಸಗಿ ಶಾಲೆಗಳ ಫೀಸ್ ಕಿರುಕುಳ

    ಲಾಕ್ ಡೌನ್ ಬಿಟ್ಟು ಕೆಲವೇ ದಿನಗಳಲ್ಲಿ ಶುರುವಾಗಿದೆ ಖಾಸಗಿ ಶಾಲೆಗಳ ಫೀಸ್ ಕಿರುಕುಳ

    ಆನೇಕಲ್: ರಾಜ್ಯದಲ್ಲಿ ಸರ್ಕಾರ ಅನ್‍ಲಾಕ್ ಘೋಷಿಸುತ್ತಿದ್ದಂತೆಯೇ ಕೆಲವು ಖಾಸಗಿ ಶಾಲೆಗಳು ಶುರುವಾಗಿದ್ದು ಫೀಸ್ ಕಟ್ಟುವಂತೆ ಪೋಷಕರಿಗೆ ಕಿರುಕುಳ ನೀಡುತ್ತಿದ್ದಾರೆ.

    ಕೊರೊನಾ ಎರಡನೇ ಅಲೆಯಿಂದಾಗಿ ಜನಸಾಮಾನ್ಯರಿಗೆ ಎಲ್ಲಿಲ್ಲದ ಸಮಸ್ಯೆ ಎದುರಾಗಿದೆ. ಹೀಗಿರುವಾಗ ವಿದ್ಯಾರ್ಥಿಗಳ ಭವಿಷ್ಯದ ಸಲುವಾಗಿ ಶಿಕ್ಷಣ ತಜ್ಞರು ಶಾಲೆಗಳನ್ನು ತೆರೆಯ ಬೇಕೆಂದು ಸಲಹೆ ನೀಡಿದೆ. ಆದರೆ ಈ ಕುರಿತಂತೆ ಸರ್ಕಾರ ಯಾವುದೇ ಅಧಿಕೃತ ಆದೇಶವನ್ನು ನೀಡಿಲ್ಲ. ಹೀಗಿರುವಾಗ ಆನೇಕಲ್ ತಾಲೂಕಿನ ಸುತ್ತಮುತ್ತಲಿನ ಅನೇಕ ಖಾಸಗಿ ಶಾಲೆಗಳು ಲಾಕ್ ಡೌನ್ ತೆಗೆದು ಕೇವಲ ಮೂರು ದಿನಗಳಲ್ಲಿ ಆರಂಭವಾಗಿದೆ. ಸರಕಾರದ ಆದೇಶಕ್ಕಾಗಿ ಕಾಯದೇ ಈಗಾಗಲೇ ಶಾಲೆಗಳಲ್ಲಿ ದಾಖಲಾತಿ ಪ್ರಾರಂಭ ಮಾಡಿ ಪೋಷಕರಿಗೆ ಶಾಲಾ ಶುಲ್ಕ ಕಟ್ಟುವಂತೆ ಟಾರ್ಚರ್ ನೀಡಲು ಮುಂದಾಗಿವೆ.

    ಒಂದೆಡೆ ಆನ್‍ಲೈನ್ ಕ್ಲಾಸ್‍ಗಳನ್ನು ಶುರು ಮಾಡಿ ಫೀಸ್ ಕಟ್ಟದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ನೀಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗುತ್ತಿದೆ. ಈ ಕೂಡಲೇ ಸಂಬಂಧಪಟ್ಟಂತಹ ಸಚಿವರು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಬೇಕೆಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಕ್ಯಾಂಡಿಡೇಟ್ ಎಂದು ಘೋಷಿಸಿದರೆ 150 ಸೀಟ್ ಫಿಕ್ಸ್: ಅಖಂಡ

    ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ, ಈಗಾಗಲೇ ಸರಕಾರ ಯಾವುದೇ ಮಾರ್ಗಸೂಚಿ ಪ್ರಕಟ ಮಾಡಿಲ್ಲ. ದಾಖಲಾತಿಯನ್ನು ಶಾಲೆಗಳು ಶುರು ಮಾಡಲಿ. ಆದರೆ ಫೀಸ್ ಕಟ್ಟುವಂತೆ ಸರಕಾರದ ಆದೇಶ ಬರುವವರೆಗೆ ಪೋಷಕರಿಗೆ ಒತ್ತಾಯಿಸಬಾರದು. ಜುಲೈ ಒಂದರಿಂದ ಶಾಲೆಗಳು ಶುರುವಾಗುವ ಸಾಧ್ಯತೆಗಳಿದ್ದು, ಈ ಕುರಿತಂತೆ ಶಾಲೆಗಳು ಫೀಸ್ ವಿಚಾರದಲ್ಲಿ ಕಾಲಾವಕಾಶ ನೀಡಬೇಕು. ಎಲ್‍ಕೆಜಿ, ಯುಕೆಜಿ ಮಕ್ಕಳನ್ನು ಕರೆಸಿ ಎಕ್ಸಾಮ್ ನಡೆಸಲು ಮುಂದಾಗಿದ್ದಾರೆ ಅಂತಹವರ ವಿರುದ್ದ ಕಾನೂನು ಕ್ರಮ ತೆಗೆದು ಕೊಳ್ಳುತ್ತೇವೆಂದು ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಡಿ.ಕೆ ಶಿವಕುಮಾರ್​ಗೆ ಇನ್ನೂ ವಯಸ್ಸಿದ್ದು, ಸಿದ್ದರಾಮಯ್ಯ ಸಿಎಂ ಆಗಲಿ: ರಾಮಪ್ಪ

  • ಅನುದಾನ ರಹಿತ ಶಿಕ್ಷಕರಿಗೆ ಆರ್ಥಿಕ ಸಹಾಯ ನೀಡಿ

    ಅನುದಾನ ರಹಿತ ಶಿಕ್ಷಕರಿಗೆ ಆರ್ಥಿಕ ಸಹಾಯ ನೀಡಿ

    – ಪೋಷಕರು ಶುಲ್ಕವನ್ನು ಕಟ್ಟಿಲ್ಲ
    – ಚಿನ್ಮಯ ವಿದ್ಯಾ ಕೇಂದ್ರ ಪ್ರೌಢಶಾಲೆಯಿಂದ ರಾಜ್ಯಪಾಲರಿಗೆ ಮನವಿ

    ಬೆಂಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲಿ ಅನುದಾನ ರಹಿತ ಶಾಲೆಗಳು ಹಲವಾರು ತೊಂದರೆಗಳನ್ನು ಅನುಭವಿಸುತ್ತಿದೆ. ಹೀಗಾಗಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಲ್ಯಾಣ ನಿಧಿಯಿಂದ ಸಂಕಷ್ಟಕ್ಕೊಳಗಾಗಿರುವ ರಾಜ್ಯ ಅನುದಾನ ರಹಿತ ರಾಜ್ಯ ಪಠ್ಯಕ್ರಮದ ಶಾಲೆಗಳ ಶಿಕ್ಷಕರಿಗೆ 2020-21 ನೇ ಸಾಲಿಗೆ ಆರ್ಥಿಕ ಸಹಾಯ ಮಾಡುವಂತೆ ಈಜಿಪುರದ ಚಿನ್ಮಯ ವಿದ್ಯಾ ಕೇಂದ್ರ ಪ್ರೌಢಶಾಲೆ ರಾಜ್ಯಪಾಲರಲ್ಲಿ ಮನವಿ ಮಾಡಿದೆ.

    ಈ ಕುರಿತಂತೆ ಸುದೀರ್ಘ ಮನವಿ ಪತ್ರವನ್ನು ನೀಡಿರುವ ಚಿನ್ಮಯ ವಿದ್ಯಾ ಕೇಂದ್ರ ಪ್ರೌಢಶಾಲೆಯ ಕಾರ್ಯದರ್ಶಿ ಡಾ.ವಿ.ರಾಘವೇಂದ್ರರಾವ್ ಅವರು, ಅನುದಾನರಹಿತ ಶಾಲೆಗಳು ರಾಜ್ಯದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿವೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಈ ಶಾಲೆಗಳ ಶಿಕ್ಷಕರಿಗೆ ಈಗ ಆರ್ಥಿಕ ಸಹಾಯದ ಅಗತ್ಯವಿದೆ. ಸರ್ಕಾರವು ಕೂಡ ಇಂತ ಶಿಕ್ಷಕರಿಗೆ ಯಾವುದೇ ಸಹಾಯಧನ ನೀಡುತ್ತಿಲ್ಲ. ಹೀಗಾಗಿ ಶಿಕ್ಷಕರ ಹಾಗೂ ವಿದ್ಯಾರ್ಥಿ ಕಲ್ಯಾಣ ನಿಧಿಯಲ್ಲಿ ಕೋಟ್ಯಾಂತರ ರೂ. ಇದೆ. ಇಂತಹ ಕಷ್ಟದ ಕಾಲದಲ್ಲಿ ಈ ಹಣವನ್ನು ಶಿಕ್ಷಕರಿಗೆ ನೀಡಿದರೆ ಅವರ ಬದುಕು ಹಸನಾಗುತ್ತದೆ ಎಂದು ವಿವರಿಸಿದ್ದಾರೆ.

    ಅನುದಾನ ರಹಿತ ರಾಜ್ಯ ಶಾಲೆಗಳು ಕಳೆದ ವರ್ಷದಿಂದಲೂ ಶಿಕ್ಷಣ ಇಲಾಖೆಯ ಗೊಂದಲಗಳ ಆದೇಶಗಳು, ಸುತ್ತೋಲೆಗಳು ಮತ್ತು ಸೂಚನೆಗಳಿಂದ ಪೋಷಕರು ಕೂಡ ಗೊಂದಲದಲ್ಲಿದ್ದು, ಶಾಲೆಗಳಿಗೆ ಕಟ್ಟಬೇಕಾದ ಶುಲ್ಕವನ್ನು ಕಟ್ಟುತ್ತಿಲ್ಲ. ಇದರಿಂದ ಸಾವಿರಾರು ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಇದರಿಂದ ಶಿಕ್ಷಕರಿಗೆ ವೇತನ ಕೊಡಲಾಗದಂತಹ ಅಸಹಾಕತೆಯಲ್ಲಿದ್ದೇವೆ ಎಂದು ತಮ್ಮ ನೋವನ್ನು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

    2019-20ರ ಕೊರೊನಾ ಸಂಕಷ್ಟದಲ್ಲಿ ಶಾಲೆಗಳನ್ನು ಬಂದ್ ಮಾಡಿದ ವೇಳೆ ವಿದ್ಯಾರ್ಥಿಗಳು ಕಟ್ಟಬೇಕಾದ ಶಾಲಾ ಶುಲ್ಕವನ್ನು ಕಟ್ಟಿರಲಿಲ್ಲ. ಹಲವಾರು ವಿದ್ಯಾರ್ಥಿಗಳು ಬಾಕಿ ಉಳಿಸಿಕೊಂಡಿದ್ದರು. ಸರ್ಕಾರದ ಗೊಂದಲದ ಹೇಳಿಕೆಗಳಿಂದ ಪೋಷಕರು ಕಟ್ಟಬೇಕಾದ ಶುಲ್ಕಗಳನ್ನು ಕಟ್ಟಲಿಲ್ಲ. ಇದು ಪೋಷಕರ ತಪ್ಪೂ ಅಲ್ಲ. ಸರ್ಕಾರ ನೀಡಿದ ಗೊಂದಲದ ಹೇಳಿಕೆಗಳೂ ಹಾಗೂ ಸುತ್ತೋಲೆಗಳಿಂದ ಅನಿವಾರ್ಯ ಪರಿಸ್ಥಿತಿಯಲ್ಲಿ ಶುಲ್ಕವನ್ನು ಪೋಷಕರು ತುಂಬದೆ ಮೌನ ವಹಿಸಿದ್ದರು. ಇದರಿಂದ ಶಾಲೆಗಳು ತೀವ್ರ ಸಂಕಷ್ಟಕ್ಕೊಳಗಾಗಿದ್ದವು.

    ಅದಾದ ನಂತರ ಶಾಲೆಗಳು ಆರಂಭವಾದವು, ಇನ್ನೇನು ಸಲೀಸಾಗಿ ನಡೆಯುತ್ತವೆ ಎನ್ನುವ ಹೊತ್ತಿಗೆ ಬಂದ ಎರಡನೇ ಅಲೆ ಇಡೀ ಬದುಕನ್ನೇ ನುಂಗಿದೆ. ಈ ವೇಳೆ ಶಿಕ್ಷಣ ಸಚಿವರು ಹೊರಡಿಸಿದ ಸುತ್ತೋಲೆಯಿಂದ ನಿಜಕ್ಕೂ ಖಾಸಗಿ ಅನುದಾನಿತ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ. ವಿದ್ಯಾಗಮ ಶುರುವಾಗುತ್ತಿದ್ದಂತೆ ಬಂದ ಎರಡನೇ ಅಲೆಯಿಂದ ಅದು ಕೂಡ ಸ್ಥಗಿತಗೊಂಡಿತು. ವಿದ್ಯಾರ್ಥಿಗಳು ಇಂತ ಹೊತ್ತಿನಲ್ಲಿ ಗೊಂದಲಕ್ಕೀಡಾದರು. ಈ ಸಮಯದಲ್ಲೇ ಶಿಕ್ಷಣ ಸಚಿವರು ಹೊರಡಿಸಿದ ಇನ್ನೊಂದು ಸುತ್ತೋಲೆ ಕೂಡ ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ಶಾಲೆಗೆ ದಾಖಲಾಗದಿದ್ದರೂ ಕೂಡ ಮಕ್ಕಳನ್ನು ಉತ್ತೀರ್ಣ ಮಾಡಿ ಮುಂದಿನ ತರಗತಿಗೆ ಅವಕಾಶ ನೀಡಬೇಕು ಎನ್ನುವುದು, ಆದರೆ ಶಿಕ್ಷಣ ನೀತಿಯ ಪ್ರಕಾರ ಯಾವುದೇ ಕಾರಣಕ್ಕೂ ವಿದ್ಯಾರ್ಥಿ ದಾಖಲಾಗದೆ ಮುಂದಿನ ತರಗತಿಗೆ ಉತ್ತೀರ್ಣ ಮಾಡುವಂತಿಲ್ಲ. ಆದರೂ ಶಿಕ್ಷಣ ಸಚಿವರ ಈ ಸುತ್ತೋಲೆ ಈಗ ಒಂದು ರೀತಿ ಗೊಂದಲಕ್ಕೆ ಕಾರಣವಾಗಿದೆ.

    ಇದರಿಂದ ಆಡಳಿತ ಮಂಡಳಿಗಳು ಹಾಗೂ ಶಿಕ್ಷಕರ ಪಾಡು ನಿಜಕ್ಕೂ ಶೋಚನೀಯವಾಗಿದೆ ಇಂತಹ ಅನುದಾನ ರಹಿತ ಶಾಲೆಗಳು ಶಿಕ್ಷಕರಿಗೆ ವೇತನವೂ ನೀಡಲಾಗದೆ ತೀವ್ರ ತೊಂದರೆಗಳನ್ನು ಅನುಭವಿಸುತ್ತಿವೆ. ಈ ಎಲ್ಲಾ ತಂತ್ರಗಳಿಂದ ಹೊರಬರಲು 2021-22ನೇ ಸಾಲಿನಲ್ಲಿ ಮಕ್ಕಳ ದಾಖಲಾತಿಯನ್ನು ಕಡ್ಡಾಯವಾಗಿ ಮಾಡುವಂತೆ ಪೋಷಕರಿಗೆ ತಿಳಿಸುವ ಸ್ಪಷ್ಟವಾದ ಸುತ್ತೋಲೆ ಹೊರಡಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿ ಶಾಲೆಗಳಿಗೆ ಸಹಾಯ ಮಾಡಬೇಕು ಎನ್ನುವುದು ನಮ್ಮ ಮನವಿ. ಈ ಎಲ್ಲಾ ವಿಷಯಗಳನ್ನು ತಾವು ಮನಗಂಡು ತಾವು ಶಿಕ್ಷಕರ ಸಹಾಯಕ್ಕೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

  • ಶಾಲೆ ಕಾಂಪೌಂಡ್ ಕುಸಿದು 6 ಸಾವು, ಮೂವರಿಗೆ ಗಾಯ

    ಶಾಲೆ ಕಾಂಪೌಂಡ್ ಕುಸಿದು 6 ಸಾವು, ಮೂವರಿಗೆ ಗಾಯ

    ಪಾಟ್ನಾ: ಶಾಲೆ ಕಟ್ಟಡದ ಕಾಂಪೌಂಡ್‍ವೊಂದು ಕುಸಿದು 6 ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಸೋಮವಾರ ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ನಡೆದಿದೆ.

    ರಾಜಧಾನಿ ಪಾಟ್ನಾದಿಂದ 190 ಕಿ.ಮೀ ದೂರದಲ್ಲಿರುವ ಮಹೆಶ್‍ಖುಂಟ್ ಪೊಲೀಸ್ ಠಾಣಾ ವ್ಯಾಪ್ತಿ ಬಳಿ ಬರುವ ಚಂಡಿ ಟೋಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. 12 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಗೋಡೆ ಕುಸಿದಿದೆ. ಇದೀಗ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶಾಲೆಯ ಬಳಿ ಚರಂಡಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಲ್ಲದೆ ಶಾಲೆಯ ಕಾಂಪೌಂಡ್ ನನ್ನು ಕೆಡವಲು ಜೆಸಿಬಿ ಯಂತ್ರವನ್ನು ಬಳಸಲಾಗಿತ್ತು. ಸರಿಯಾದ ಯೋಜನೆ ರೂಪಿಸದೆ ಗೋಡೆ ನಿರ್ಮಿಸಲು ಮುಂದಾಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ನಿರ್ಮಾಣದ ಉಸ್ತುವಾರಿ ಗುತ್ತಿಗೆದಾರನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.