Tag: ಪಬ್ಲಿಕ್ ಟಿವಿ Sandalwood

  • ಮಂತ್ರಾಲಯದ ಗೋ ಶಾಲೆ ವೀಕ್ಷಿಸಿದ ದರ್ಶನ್

    ಮಂತ್ರಾಲಯದ ಗೋ ಶಾಲೆ ವೀಕ್ಷಿಸಿದ ದರ್ಶನ್

    ರಾಯಚೂರು: ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂತ್ರಾಲಯದಲ್ಲಿ ನಡೆಯುತ್ತಿರುವ ಗುರುವೈಭವೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾರೆ.

    ಮಂತ್ರಾಲಯ ಗುರುವೈಭವೋತ್ಸವ ಕಾರ್ಯಕ್ರದಲ್ಲಿ ಭಾಗವಹಿಸಿರುವ ದರ್ಶನ್, ಸ್ನೇಹಿತರೊಂದಿಗೆ ಮಂತ್ರಾಲಯದಲ್ಲಿ ಗೋ ಶಾಲೆಗಳಲ್ಲಿರುವ ಗೋವುಗಳನ್ನು ವೀಕ್ಷಿಸಿದರು. ಈ ವೇಳೆ ದರ್ಶನ್ ಗೋವುಗಳನ್ನು ಹಿಡಿದುಕೊಂಡಿರುವ ಹಾಗೂ ಕರುವನ್ನು ಹಿಡಿದುಕೊಂಡಿದ್ದಾರೆ.

    ಚಿಕ್ಕವರಿದ್ದಾಗ ಹಸುವನ್ನು ಸಾಕಿ ಅದರಿಂದ ಬಂದ ಹಾಲನ್ನು ಮಾರಿ ಸಂಪಾದಿಸಿ ಜೀವನ ನಡೆಸುತ್ತಿದ್ದ ದರ್ಶನ್‍ಗೆ ಗೋವಿನ ಮೇಲೆ ಅಪಾರವಾದ ಗೌರವ, ಭಕ್ತಿ ಹಾಗೂ ನಂಬಿಕೆ ಹೊಂದಿದ್ದಾರೆ.

    ದರ್ಶನ್‍ಗೆ ಪ್ರಾಣಿಗಳೆಂದರೆ ಮೊದಲಿನಿಂದಲೂ ಬಹಳ ಇಷ್ಟ. ಇದಕ್ಕೆ ಸಾಕ್ಷಿ ಎಂಬಂತೆ ದರ್ಶನ್ ಮೈಸೂರು ಮೃಗಾಲಯದಲ್ಲಿ ಹಲವಾರು ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದಾರೆ. ಅಲ್ಲದೆ ತಮ್ಮ ಫಾರ್ಮ್ ಹೌಸ್‍ನಲ್ಲಿ ಕುದುರೆ, ಕುರಿ, ಕೋಳಿ, ಪಕ್ಷಿ, ಶ್ವಾನ ಹೀಗೆ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೆ ಸಿನಿಮಾದಿಂದ ಕೊಂಚ ಬಿಡುವು ಸಿಕ್ಕಿದರೆ ಸಾಕು ಸಫಾರಿಗೆ ಹೋಗಿ ತಮ್ಮ ಕೈಯಾರೆ ಕ್ಯಾಮೆರಾದ ಮೂಲಕ ಪ್ರಾಣಿಗಳ ಫೋಟೋವನ್ನು ಸೆರೆಹಿಡಿಯುತ್ತಾರೆ.

    ಇತ್ತೀಚೆಗೆ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆಯಾಗಿದ್ದು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಆಂಧ್ರ ಹಾಗೂ ತೆಲಂಗಾಣದಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಈ ಸಿನಿಮಾದಲ್ಲಿ ದರ್ಶನ್‍ಗೆ ಜೋಡಿಯಾಗಿ ಆಶಾ ಭಟ್ ಅಭಿನಯಿಸಿದ್ದು, ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

  • ಮೇಘನಾರನ್ನು ಭೇಟಿ ಮಾಡಿದ ಮಲೆಯಾಳಂ ನಟ ಇಂದ್ರಜಿತ್ ಸುಕುಮಾರನ್

    ಮೇಘನಾರನ್ನು ಭೇಟಿ ಮಾಡಿದ ಮಲೆಯಾಳಂ ನಟ ಇಂದ್ರಜಿತ್ ಸುಕುಮಾರನ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಇತ್ತೀಚೆಗಷ್ಟೇ ಮಲೆಯಾಳಂ ನಟ ಇಂದ್ರಜಿತ್ ಸುಕುಮಾರನ್‍ರನ್ನು ಜೊತೆಗಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಮೇಘನಾ ಇಂದ್ರಜಿತ್‍ರನ್ನು ಪ್ರೀತಿಯಿಂದ ಇಂದ್ರು ಎಂದು ಕರೆಯುತ್ತಾರೆ. ಅಲ್ಲದೆ ಫೋಟೋ ಜೊತೆ ಮೇಘನಾ, ಕೆಲವು ದಿನಗಳ ಹಿಂದೆ ಇಂದ್ರಜಿತ್‍ರನ್ನು ಭೇಟಿ ಮಾಡಿದ್ದು, ಇದೀಗ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಳ್ಳುತ್ತಿರುವ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ಜೊತೆಗೆ ಮೇಘನಾ ಹಾಗೂ ಇಂದ್ರಜಿತ್ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಜ್ಯೂನಿಯರ್ ಚಿರು ಇಂದ್ರಜಿತ್‍ರವರ ಕಂಪನಿಯನ್ನು ಬಹಳ ಎಂಜಾಯ್ ಮಾಡಿದ್ದಾರೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

    ಇಂದ್ರಜಿತ್ ಸುಕುಮಾರನ್ ಮೇಘನಾ ಕುಟುಂಬದೊಂದಿಗೆ ಭೋಜನ ಮಾಡಿದ್ದಾರೆ. ಜೊತೆಗೆ ಜ್ಯೂನಿಯರ್ ಚಿರು, ಮೇಘನಾ ಹಾಗೂ ಅವರ ಪೋಷಕರಾದ ಸುಂದರ್ ರಾಜ್, ಪ್ರಮೀಳಾ ಜೋಷಾಯ್ ಜೊತೆ ಉತ್ತಮ ಕಾಲ ಕಳೆದಿದ್ದಾರೆ. ಅಲ್ಲದೆ ಮೇಘನಾ ಶೇರ್ ಮಾಡಿರುವ ಫೋಟೋದಲ್ಲಿ ಇಂದ್ರಜಿತ್ ಜ್ಯೂನಿಯರ್ ಚಿರುವನ್ನು ಎತ್ತಿಕೊಂಡಿರುವುದನ್ನು ಕಾಣಬಹುದಾಗಿದೆ.

     

    View this post on Instagram

     

    A post shared by Meghana Raj Sarja (@megsraj)

    ಫೋಟೋ ಜೊತೆಗೆ ಮೇಘನಾ ಇಂದ್ರಜಿತ್ ಅವರ ಪತ್ನಿ ಪೂರ್ಣಿಮರನ್ನು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಕೊಂಚ ತಡವಾಗಿ ಫೋಟೋವನ್ನು ಹಾಕುತ್ತಿದ್ದು, ಬಹಳ ವರ್ಷಗಳ ನಂತರ ನಾವು ಕೊನೆಗೂ ಭೇಟಿಯಾದೆವು, ಪೂರ್ಣಿಮರನ್ನು ಕೂಡ ಶೀಘ್ರವೇ ಕಾಣುತ್ತೇನೆಂದು ನಿರೀಕ್ಷಿಸುತ್ತೇನೆ. ಅದ್ಭುತ ಕ್ಷಣಗಳನ್ನು ಹೊಂದಿದೆ. ಬಿರಿಯಾನಿಯನ್ನು ಇಷ್ಟಪಟ್ಟಿದ್ದೀರಿ ಎಂದು ಭಾವಿಸುತ್ತೇನೆ. ಜ್ಯೂನಿಯರ್ ಚಿರು ನಿಮ್ಮ ಕಂಪನಿಯನ್ನು ಎಂಜಾಯ್ ಮಾಡಿದ್ದಾನೆ ಎಂದು ಕ್ಯಾಪ್ಷನ್ ಹಾಕಿದ್ದರು.

  • ನಾಳೆ ಪ್ರೇಕ್ಷಕರ ಎದುರಿಗೆ ರಾಬರ್ಟ್ ಎಂಟ್ರಿ

    ನಾಳೆ ಪ್ರೇಕ್ಷಕರ ಎದುರಿಗೆ ರಾಬರ್ಟ್ ಎಂಟ್ರಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ.

    ಕೊರೊನಾ ನಂತರ ಹಲವು ತಿಂಗಳ ಬಳಿಕ ಪ್ರೇಕ್ಷಕರ ಮುಂದೆ ದರ್ಶನ್ ತೆರೆ ಮೇಲೆ ಬರಲಿದ್ದು, ಶಿವರಾತ್ರಿ ಹಬ್ಬದ ದಿನದಂದು ಅಭಿಮಾನಿಗಳಿಗೆ ರಸದೌತಣ ನೀಡಲಿದ್ದಾರೆ. ನಾಳೆ ಬಿಡುಗಡೆಯಾಗುತ್ತಿರುವ ರಾಬರ್ಟ್ ಸಿನಿಮಾಕ್ಕೆ ನಿರ್ದೇಶಕ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ದರ್ಶನ್‍ಗೆ ಜೋಡಿಯಾಗಿ ಆಶಾ ಭಟ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಹಾಗೂ ವಿ ಹರಿಕೃಷ್ಣ ಸಂಗೀತಾ ಸಂಯೋಜಿಸಿದ್ದಾರೆ. ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಜಗಪತಿ ಬಾಬು, ರವಿ ಕೃಷ್ಣ, ದೇವರಾಜ್, ರವಿ ಶಂಕರ್, ವಿನೋದ್ ಪ್ರಭಾಕರ್ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

    ಈಗಾಗಲೇ ರಾಬರ್ಟ್ ಸಿನಿಮಾದ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನಾಳೆ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕನ್ನಡದಲ್ಲಿ ಅಷ್ಟೇ ಅಲ್ಲದೆ ತೆಲುಗಿನಲ್ಲಿ ಕೂಡ ರಾಬರ್ಟ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ಸಿನಿಮಾದ ಕಣ್ಣೆ ಅದರಿಂದಿ ಸಾಂಗ್ ಟಾಲಿವುಡ್‍ನಲ್ಲಿ ನ್ಯೂ ಟ್ರೆಂಡ್ ಸೃಷ್ಟಿಸಿದೆ.

    ಇತ್ತೀಚೆಗಷ್ಟೇ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿಯವರು ಯಾರಾದರೂ ಪೈರಸಿ ಮಾಡಿ ಸಿಕ್ಕಿಹಾಕಿಕೊಂಡರೆ ಪರಿಣಾಮ ಘೋರವಾಗಿರುತ್ತದೆ. ದಯವಿಟ್ಟು ಪೈರಸಿ ಮಾಡಬೇಡಿ. ಸಿನಿಮಾವನ್ನು ಎಲ್ಲರೂ ಥಿಯೇಟರ್‍ಗೆ ಬಂದು ನೋಡಿ ಎಂದು ಮನವಿಮಾಡಿದರು.

    ಒಟ್ಟಾರೆ ಕಳೆದ ವರ್ಷದಿಂದ ಬಿಡುಗಡೆಗೊಳಿಸಲು ಕಾಯುತ್ತಿದ್ದ ರಾಬರ್ಟ್ ಸಿನಿಮಾ ಭವಿಷ್ಯ ನಾಳೆ ನಿರ್ಧರವಾಗಲಿದೆ.

  • ಪತ್ನಿ ಜೊತೆ ಗೋವಾಗೆ ಹಾರಿದ ಧ್ರುವ ಸರ್ಜಾ

    ಪತ್ನಿ ಜೊತೆ ಗೋವಾಗೆ ಹಾರಿದ ಧ್ರುವ ಸರ್ಜಾ

    ಬೆಂಗಳೂರು: ಸ್ಯಾಂಡಲ್‍ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಕೊಂಚ ರಿಲೀಫ್ ಪಡೆದುಕೊಂಡಿರುವ ಧ್ರುವ ಸರ್ಜಾ ಪತ್ನಿ ಜೊತೆ ಗೋವಾ ಪ್ರವಾಸಕ್ಕೆ ಹಾರಿದ್ದಾರೆ. ಇವರಿಬ್ಬರ ಕೆಲವು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಸದಾ ಸಿನಿಮಾ, ಶೂಟಿಂಗ್, ಪ್ರಮೋಷನ್ ಎಂದು ಬ್ಯುಸಿಯಾಗಿದ್ದ ನಟ ಧ್ರುವ ಸರ್ಜಾ ಇದೀಗ ಕೊಂಚ ಬಿಡುವು ಮಾಡಿಕೊಂಡಿಕೊಂಡು ಪತ್ನಿ ಪ್ರೇರಣಾ ಜೊತೆ ಕಾಲ ಕಳೆಯಲು ಗೋವಾ ಪ್ರವಾಸಕ್ಕೆ ತೆರಳಿದ್ದಾರೆ. ಈ ವೇಳೆ ಸಮುದ್ರ ತೀರದ ಮಗ್ಗತ್ತಲಿನಲ್ಲಿ ಧ್ರುವ ಪತ್ನಿ ಮಡಿಲ ಮೇಲೆ ತಲೆಯಿಟ್ಟು ಮಲಗಿಕೊಂಡಿರುವ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

    ಫೋಟೋದಲ್ಲಿ ಧ್ರುವ ಪತ್ನಿಯ ಮಡಿಲ ಮೇಲೆ ಮಲಗಿದ್ದು, ಪ್ರೇರಣಾ ಕೂಡ ಪತಿಯ ಕೆನ್ನೆಯ ಮೇಲೆ ಕೈಯಿಟ್ಟು ಪ್ರೀತಿಯಿಂದ ಮುದ್ದಾಡುವಂತೆ ಕಾಣಿಸುತ್ತದೆ. ಅಲ್ಲದೆ ಧ್ರುವ, ಪ್ರೇರಣಾ ಇಬ್ಬರು ಒಬ್ಬರಿಗೊಬ್ಬರು ನೋಡುತ್ತಾ ಮುಗುಳು ನಗೆ ಬೀರಿದ್ದಾರೆ.

    ಮತ್ತೊಂದರಲ್ಲಿ ಧ್ರುವ ಪತ್ನಿ ಪ್ರೇರಣಾ ಭುಜದ ಮೇಲೆ ಕೈಹಾಕಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೊದಲ್ಲಿ ಧ್ರುವ ಹಳದಿ ಬಣ್ಣದ ಬನಿಯನ್ ಧರಿಸಿದ್ದರೆ, ಪ್ರೇರಣಾ ನೀಲಿ ಬಣ್ಣದ ಉಡುಪು ಧರಿಸಿದ್ದಾರೆ. ಜೊತೆಗೆ ಸೂರ್ಯನ ಬೆಳಕಿನಿಂದ ತಪ್ಪಿಸಿಕೊಳ್ಳಲು ಇಬ್ಬರು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮಿಂಚಿದ್ದಾರೆ. ಪ್ರವಾಸಕ್ಕೆ ಧ್ರುವ ಸರ್ಜಾ ಟಿಕ್‍ಟಾಕ್ ಸ್ಟಾರ್ ಅಲ್ಲು ರಘುರನ್ನು ಕೂಡ ಕರೆದೊಯಿದ್ದಾರೆ.

    ಇತ್ತೀಚೆಗಷ್ಟೇ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಗೊಂಡು ಅದ್ದೂರಿ ಪ್ರದರ್ಶನ ಕಾಣುತ್ತಿದ್ದು, ಗಾಂಧಿನಗರದ ಗಲ್ಲಾಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಈ ಸಿನಿಮಾಕ್ಕೆ ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳಿದ್ದು, ಧ್ರುವಗೆ ಜೋಡಿಯಾಗಿ ರಶ್ಮಿಕ ಮಂದಣ್ಣ ನಟಿಸಿದ್ದರು.

  • ತೆಲುಗಿನಲ್ಲಿ ಭಾರೀ ಮೊತ್ತಕ್ಕೆ ರಾಕಿ ಭಾಯ್ ಸಿನಿಮಾ ಸೇಲ್

    ತೆಲುಗಿನಲ್ಲಿ ಭಾರೀ ಮೊತ್ತಕ್ಕೆ ರಾಕಿ ಭಾಯ್ ಸಿನಿಮಾ ಸೇಲ್

    ಬೆಂಗಳೂರು: ಸ್ಯಾಂಡಲ್‍ವುಡ್ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾದ ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ತೆಲುಗಿನಲ್ಲಿ ಮಾರಾಟವಾಗಿದೆ. ಈಗಾಗಲೇ ಕೆಜಿಎಫ್-2 ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಈ ಮಧ್ಯೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಬರೋಬ್ಬರಿ 65 ಕೋಟಿ ರೂ.ಗೆ ಕೆಜಿಎಫ್-2 ಸಿನಿಮಾ ಬಿಡುಗಡೆ ರೈಟ್ಸ್‍ನನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಕೆಜಿಎಫ್-1 ಅಮೆಜಾನ್ ಪ್ರೈಮ್ ಸೇರಿದಂತೆ ಡಿಜಿಟಲ್ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಹಣ ಗಳಿಸುವ ಮೂಲಕ ಈ ಹಿಂದೆ ಹೊಸ ದಾಖಲೆ ಸೃಷ್ಟಿಸಿತ್ತು. ಅಲ್ಲದೆ ಕೆಜಿಎಫ್-1 ಬಿಡುಗಡೆಯ ಹಕ್ಕನ್ನು ಈ ಮುನ್ನ ಕೇವಲ 5 ಕೋಟಿಗೆ ಖರೀದಿಸಲಾಗಿತ್ತು. ಆದರೆ ಅದರಿಂದ ಬಂದ ಲಾಭ ಬರೋಬ್ಬರಿ 12 ಕೋಟಿ. ಹಾಗಾಗಿ ಕೆಜಿಎಫ್-1ರ ಯಶಸ್ಸು ಕಂಡ ಹಲವಾರು ತೆಲುಗು ನಿರ್ಮಾಪಕರು ಕೆಜಿಎಫ್-2 ಸಿನಿಮಾದ ಬಿಡುಗಡೆ ಹಕ್ಕನ್ನು ಖರೀದಿಸಲು ನಾ ಮುಂದು, ತಾ ಮುಂದು ಎಂದು ಸಾಲಿನಲ್ಲಿ ನಿಂತಿದ್ದರು.

    ನಿರ್ಮಾಪಕ ವಿಜಯ್ ಕಿರಂಗದೂರು 70 ಕೋಟಿ ಬೇಡಿಕೆ ಇಟ್ಟಿದ್ದನ್ನು ನೋಡಿ ಹಲವು ನಿರ್ಮಾಪಕರು ಅಚ್ಚರಿಗೊಂಡು ಹಿಂದೆ ಸರಿದಿದ್ದರು. ಟಾಲಿವುಡ್‍ನ ಖ್ಯಾತ ನಿರ್ಮಾಪಕ ದಿಲ್ ರಾಜು, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿ ಎರಡು ತೆಲುಗು ರಾಜ್ಯಗಳಲ್ಲೂ ಕೆಜಿಎಫ್-2 ಸಿನಿಮಾ ಬಿಡುಗಡೆಯ ಹಕ್ಕನ್ನು 65 ಕೋಟಿ ರೂ.ಗೆ ಮಾತನಾಡಿ ಖರೀದಿಸುವ ಮೂಲಕ ಎಲ್ಲಾ ನಿರ್ಮಾಪಕರು ಗಪ್-ಚುಪ್‍ಗೊಳ್ಳುವಂತೆ ಮಾಡಿದ್ದಾರೆ.

    ಸದ್ಯ ಕೆಜಿಎಫ್-2 ಸಿನಿಮಾ ಬಿಡುಗಡೆಗೂ ಮುನ್ನವೇ ತೆಲುಗಿನಲ್ಲಿ ದೊಡ್ಡ ಬಿಸಿನೆಸ್ ಮಾಡುವ ಮೂಲಕ ಟಾಲಿವುಡ್ ಬಹುದೊಡ್ಡ ನಿರ್ಮಾಪಕ ದಿಲ್ ರಾಜುರವರ ಕೈ ಸೇರಿದೆ. ಅಲ್ಲದೆ ನಿರ್ಮಾಪಕ ದಿಲ್ ರಾಜು, ವಿಜಯ್ ಕಿರಂಗದೂರುರವರಿಗೆ ಮುಂಗಡವಾಗಿಯೂ ಹಣ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಇತ್ತೀಚೆಗಷ್ಟೇ ಹೈದರಾಬಾದ್‍ನಲ್ಲಿ ನಿರ್ಮಾಪಕ ದಿಲ್ ರಾಜು ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ಬರ್ತ್‍ಡೇಗೆ ದಕ್ಷಿಣ ಭಾರತದ ಗಣ್ಯಾತಿಗಣ್ಯರು ಆಗಮಿಸಿದ್ದರು ಹಾಗೂ ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್, ವಿಜಯ್ ಕಿರಂಗದೂರು ಅವರನ್ನು ಆಹ್ವಾನಿಸಿದ್ದರು.

  • ಕೆಜಿಎಫ್ -2 ಹಿಂದಿಗೆ ವಾಯ್ಸ್ ಡಬ್ ನೀಡಲಿದ್ದಾರಾ ಯಶ್?

    ಕೆಜಿಎಫ್ -2 ಹಿಂದಿಗೆ ವಾಯ್ಸ್ ಡಬ್ ನೀಡಲಿದ್ದಾರಾ ಯಶ್?

    ಬೆಂಗಳೂರು: ವಿಶ್ವಾದ್ಯಂತ ಸದ್ದು ಮಾಡಿರುವ ಕೆಜಿಎಫ್ ಚಾಪ್ಟರ್ 2ಗೆ ಯಶ್ ಅವರೇ ಹಿಂದಿಗೆ ವಾಯ್ಸ್ ನೀಡುವ ಸಾಧ್ಯತೆಯಿದೆ.

    ಈ ವರ್ಷದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್-2. ರಾಕಿಂಗ್ ಸ್ಟಾರ್ ಯಶ್ ಮತ್ತೆ ನಟಿ ಶ್ರೀ ನಿಧಿ ಜೊತೆ ರಾಕಿಂಗ್ ಆಗಿ ಬಿಗ್ ಸ್ಕ್ರೀನ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇನ್ನೂ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದು, ಕೆಜಿಎಫ್-2 ಸಿನಿಮಾವನ್ನು ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲಿ ಬಿಡುಗಡೆಗೊಳ್ಳುತ್ತಿದೆ. ಎಲ್ಲ ನಟರೂ ತಮ್ಮ ಸಿನಿಮಾಗಳಿಗೆ ಧ್ವನಿ ಕೊಡಿಸಲು ಡಬ್ಬಿಂಗ್ ಆರ್ಟಿಸ್ಟ್‍ಗಳ ಸಾಲುಗಳನ್ನೇ ಹೊಂದಿರುತ್ತಾರೆ. ಆದರೆ ಯಶ್ ಈ ವಿಚಾರವಾಗಿ ಎಲ್ಲ ನಟರಿಗಿಂತಲೂ ವಿಭಿನ್ನವಾಗಿ ಯೋಚಿಸಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

    ದಕ್ಷಿಣ ಭಾರತದ ಸ್ಟಾರ್ ನಟರ ಹಿಂದಿ ಸಿನಿಮಾಗಳಿಗೆ ಡಬ್ಬಿಂಗ್ ಕಲಾವಿದರು ಧ್ವನಿ ನೀಡುತ್ತಿದ್ದಾರೆ. ಆದರೆ ಯಶ್ ಈ ಬಾರಿ ತಮ್ಮ ಪಾತ್ರಕ್ಕೆ ತಾವೇ ನೀಡಲಿದ್ದಾರೆ ಎಂದು ವರದಿಯಾಗಿದೆ.

    ಜನವರಿ 29ರಂದು ಟ್ವಿಟ್ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್-2 ಸಿನಿಮಾ 2021ರ ಜುಲೈ 16ಕ್ಕೆ ಸಿನಿಮಾ ಬಿಗ್ ಸ್ಕ್ರೀನ್‍ಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಇನ್ನೂ ಈ ಚಿತ್ರದ ಮುಖ್ಯಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅಧೀರ ಎಂಬ ಪಾತ್ರದಲ್ಲಿ ಮಿಂಚಲಿದ್ದು, ಜೊತೆಗೆ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    ಬಾಲಿವುಡ್ ನಟ ಸಂಜಯ್ ದತ್ ಮತ್ತು ರವೀನಾ ಜೊತೆ ಕೆಲಸ ಮಾಡಿರುವ ಅನುಭವ ಹಂಚಿಕೊಂಡಿರುವ ಯಶ್, ಇಬ್ಬರ ಜೊತೆ ಕೆಲಸ ಮಾಡಿದ್ದು ಅದ್ಭುತವಾಗಿತ್ತು. ಸಂಜಯ್ ಸರ್ ವೃತ್ತಿಪರ ಆಲೋಚನೆ ಮತ್ತು ಪರಿಶ್ರಮಕ್ಕೆ ಉದಾಹರಣೆಯಾಗಿದ್ದಾರೆ. ಅವರು ಆರೋಗ್ಯ ಸ್ಥಿತಿಯನ್ನು ಲೆಕ್ಕಿಸದೇ ತಮ್ಮ ಪಾತ್ರ ಮತ್ತು ಸಿನಿಮಾ ಕುರಿತಂತೆ ತೋರಿಸಿದ ಉತ್ಸಾಹ ಬಹಳ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.

    ರವೀನಾ ಮ್ಯಾಮ್ ಕೂಡ ಬಹುಮುಖ ಪ್ರತಿಭೆ ಹೊಂದಿರುವಂತಹ ಉತ್ತಮ ನಟಿ. ಅವರದ್ದು ರೋಮಾಂಚಕ ವ್ಯಕ್ತಿತ್ವ. ಇಬ್ಬರು ಬಾಲಿವುಡ್ ತಾರೆಯರೊಂದಿಗೆ ಕೆಲಸ ಮಾಡಿದ್ದು ನನಗೆ ಅದ್ಭುತ ಹಾಗೂ ಖುಷಿ ಅನುಭವ ತಂದಿದೆ ಎಂದು ಯಶ್ ತಿಳಿಸಿದ್ದಾರೆ.

  • ಟಾಲಿವುಡ್‍ನಲ್ಲಿ ‘ರಾಬರ್ಟ್’ ಸಿನಿಮಾಗೆ ಅಡ್ಡಿ – ಕಿಚ್ಚ ಸುದೀಪ್ ಹೇಳಿದ್ದೇನು?

    ಟಾಲಿವುಡ್‍ನಲ್ಲಿ ‘ರಾಬರ್ಟ್’ ಸಿನಿಮಾಗೆ ಅಡ್ಡಿ – ಕಿಚ್ಚ ಸುದೀಪ್ ಹೇಳಿದ್ದೇನು?

    ಬೆಂಗಳೂರು: ನನ್ನ ಸಿನಿಮಾವನ್ನು ನಾನು ಕಾಪಾಡಿಕೊಂಡು ಬಂದಿದ್ದೇನೆ, ಅವರ ಸಿನಿಮಾವನ್ನು ಕಾಪಾಡಿಕೊಳ್ಳುವಷ್ಟು ತಾಕತ್ತು ದೇವರು ಅವರಿಗೂ ಕೊಟ್ಟಿದ್ದಾನೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

    ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಕನ್ನಡಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ಇಂದಿಗೆ 25 ವರ್ಷ ತುಂಬಿದೆ. ಈ ವೇಳೆ ಟಾಲಿವುಡ್ ನಲ್ಲಿ ನಟ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆ ಅಡ್ಡಿ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, ನಾನು ಇನ್ನೊಬ್ಬರ ಸಿನಿಮಾವನ್ನು ನಿಭಾಯಿಸುವಷ್ಟು ದೊಡ್ಡ ಕಲಾವಿದನಲ್ಲ. ಸಲಹೆ ನೀಡುವಂತ ವ್ಯಕ್ತಿ ಕೂಡ ಅಲ್ಲ. ಒಂದು ಸಿನಿಮಾ ಮಾಡಿದ ಮೇಲೆ ಅದು ನನ್ನ ಜವಾಬ್ದಾರಿ ನನ್ನ ಸಿನಿಮಾವನ್ನು ನಾನು ಕಾಪಾಡಿಕೊಂಡು ಬಂದಿದ್ದೇನೆ. ಅವರ ಸಿನಿಮಾವನ್ನು ಕಾಪಾಡಿಕೊಳ್ಳುವಷ್ಟು ತಾಕತ್ತು ದೇವರು ಅವರಿಗೂ ಕೊಟ್ಟಿದ್ದಾನೆ. ಹಾಗಾಗಿ ನಾವು ಆ ಸಿನಿಮಾದ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡುವುದು ತಪ್ಪಾಗಬಹುದು ಎಂದು ಹೇಳಿದ್ದಾರೆ.

    ಜನವರಿ 29ರಂದು ಟಾಲಿವುಡ್‍ನಲ್ಲಿ ರಾಬರ್ಟ್ ಚಿತ್ರ ಬಿಡುಗಡೆ ತಡೆ ಕುರಿತಂತೆ ಮಾಧ್ಯಮದವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಮ್ಮಲ್ಲಿರುವವರು ಕನ್ನಡಾಭಿಮಾನ ಬೆಳೆಸಿಕೊಳ್ಳಿ ಎಂದು ಹೇಳುತ್ತಾರೆ, ಆದರೆ ತಮಿಳು ಹಾಗೂ ತೆಲುಗಿನವರಿಗೆ ಇರುವಷ್ಟು ಭಾಷಾಭಿಮಾನ ನಮ್ಮವರಿಗೆ ಒಂದಿಷ್ಟು ಕೂಡ ಇಲ್ಲ ಎಂಬುವುದನ್ನು ನೇರವಾಗಿ ಹೇಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು. ಕನ್ನಡದವರ ಹತ್ತಿರ ಬಂದು ತಮಿಳಿನವರು ತಮಿಳಿನಲ್ಲಿ ಮಾತನಾಡಿದರೆ, ನಾವು ತಮಿಳಿನಲ್ಲಿಯೇ ಮಾತನಾಡುತ್ತೇವೆ. ತೆಲುಗಿನವರು ಬಂದು ತೆಲುಗಿನಲ್ಲಿ ಮಾತನಾಡಿಸಿದರೆ, ನಾವು ತೆಲುಗಿನಲ್ಲಿ ಮಾತನಾಡುತ್ತೇವೆ. ಆದರೆ ಅವರಲ್ಲಿ ಯಾರಾದರೂ ಕನ್ನಡದಲ್ಲಿ ಮಾತನಾಡುತ್ತಾರಾ? ಎಂದು ಮರು ಪ್ರಶ್ನೆ ಮಾಡಿದ್ದರು.

  • ವೈರಲ್ ಆಯ್ತು ಯಶ್, ಯಥರ್ವ್ ಫೋಟೋ

    ವೈರಲ್ ಆಯ್ತು ಯಶ್, ಯಥರ್ವ್ ಫೋಟೋ

    ಬೆಂಗಳೂರು : ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮಗ ಯಥರ್ವ ಜೊತೆ ಇರುವ ಫೋಟೋವೊಂದನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋ ಇದೀಗ ಎಲ್ಲೆಡೆ ಧೂಳ್ ಎಬ್ಬಿಸುತ್ತಿದೆ.

     

    View this post on Instagram

     

    A post shared by Yash (@thenameisyash)

    ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ಕುಟುಂಬ ಸಮೇತ ಐಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಬೇಬಿ ಶಾರ್ಕ್ ಗಳನ್ನು ನೋಡಲು ಭೇಟಿ ನೀಡಿದ್ದಾಗ ಮಗ ಯಥರ್ವ್ ಜೊತೆ ಯಶ್ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.

     

    View this post on Instagram

     

    A post shared by Yash (@thenameisyash)

    ಮಾಲ್ಡೀವ್ಸ್ ಟ್ರಿಪ್‍ಗೆ ತೆರಳಿದ್ದ ವೇಳೆ ಯಶ್ ಮಗ ಯಥರ್ವ್ ಯಶ್‍ನನ್ನು ತಮ್ಮ ಕೈ ಮೇಲೆ ಎತ್ತಿಕೊಂಡಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇನ್ನೂ ಫ್ಯಾಮಿಲಿ ಜೊತೆ ಟ್ರಿಪ್ ಫುಲ್ ಎಂಜಾಯ್ ಮಾಡಿದ್ದ ಯಶ್, ಕಳೆದ ವಾರ ಬೆಂಗಳೂರಿಗೆ ಮರಳಿದ್ದಾರೆ. ಪ್ರವಾಸದ ವೇಳೆ ತೆಗೆದುಕೊಂಡಿದ್ದ ಮಗನೊಂದಿಗಿನ ಫೋಟೋವನ್ನು ಜನವರಿ 27ರಂದು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲೂ ವಿಶೇಷವೆನೆಂದರೆ ಯಶ್ ಕ್ಯಾಪ್ಷನ್ ಎಲ್ಲರ ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Yash (@thenameisyash)

    ಹೌದು.. ಬೇಬಿ ಶಾರ್ಕ್ ಡು..ಡು..ಡು ಜೊತೆಗೆ ಡಡ್ಡಾ ಶಾರ್ಕ್ ಡು..ಡು..ಡು ಎಂಬ ಪ್ರಾಸ ಪದಗಳೊಂದಿಗೆ ಕ್ಯಾಪ್ಷನ್ ಹಾಕಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೆ ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆ ತಂಗಿದ್ದ ರೆಸಾರ್ಟ್ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಹಾಲಿಡೇ ಬಹಳ ಮುಖ್ಯ. ಇದು ನಮ್ಮನ್ನು ಪುನರ್ ಯೌವನಗೊಳಿಸುತ್ತದೆ ಎಂದು ರಾಧಿಕಾ ಪಂಡಿತ್ ಹೇಳಿಕೊಂಡಿದ್ದಾರೆ.

     

    View this post on Instagram

     

    A post shared by Yash (@thenameisyash)

    ಸದ್ಯ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಿಗ್ ಬಜೆಟ್ ಚಿತ್ರ ಕೆಜಿಎಫ್-2 ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ, ಈ ಚಿತ್ರಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದು, ಹೊಂಬಾಳೆ ಬ್ಯಾನರ್ ಆಡಿ ಚಿತ್ರವನ್ನು ನಿರ್ಮಿಸಲಾಗಿದೆ. ಈ ವರ್ಷದ ಕೊನೆಯಲ್ಲಿ ಚಿತ್ರ ಎಲ್ಲ ಥಿಯೇಟರ್‍ಗಳ ಸ್ಕ್ರೀನ್ ಮೇಲೆ ಬರಲಿದೆ ಎನ್ನಲಾಗ್ತಿದೆ.

  • ರಾಗಿಣಿಗೆ ಬೆನ್ನು ನೋವು, ಆರೋಗ್ಯ ಸಮಸ್ಯೆ – ತಂದೆ ರಾಕೇಶ್

    ರಾಗಿಣಿಗೆ ಬೆನ್ನು ನೋವು, ಆರೋಗ್ಯ ಸಮಸ್ಯೆ – ತಂದೆ ರಾಕೇಶ್

    ಬೆಂಗಳೂರು: ಸದ್ಯ ಆರೋಗ್ಯ ಸಮಸ್ಯೆ ನಟಿ ರಾಗಿಣಿ ದ್ವಿವೇದಿಯನ್ನು ಕಾಡುತ್ತಿದ್ದು, ಚೇತರಿಕೆ ನಂತರ ಸುದ್ದಿಗೋಷ್ಠಿ ನಡೆಸುತ್ತಾರೆ ಎಂದು ತಂದೆ ರಾಕೇಶ್ ತಿಳಿಸಿದ್ದಾರೆ.

    ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಗಿಣಿಗೆ ಬೆನ್ನು ನೋವು ಮತ್ತು ಆರೋಗ್ಯ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಮನೆಯಲ್ಲಿಯೇ ಅವರು ರೆಸ್ಟ್ ಮಾಡುತ್ತಿದ್ದಾರೆ ಎಂದು ಹೇಳಿದರು.

    ಮೊದಲು ವೈದ್ಯರನ್ನು ಭೇಟಿ ಮಾಡಿ ರಾಗಿಣಿ ಚಿಕಿತ್ಸೆ ಪಡೆಯಬೇಕಿದೆ. ಎರಡು ಮೂರು ದಿನಗಳ ನಂತರ ವಕೀಲರ ಜೊತೆ ಮಾತುಕತೆ ನಡೆಸಬೇಕಾಗಿದೆ. ವಕೀಲರು ಮತ್ತು ವೈದ್ಯರ ಸಲಹೆ ಮೇರೆಗೆ ನಂತರ ರಾಗಿಣಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಅಷ್ಟೇ ಅಲ್ಲದೇ ನಮ್ಮ ಕಷ್ಟದ ಸಮಯದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳುವ ಮೂಲಕ ಕೃತಜ್ಞತೆ ಸಲ್ಲಿಸಿದರು.

    ಸ್ಯಾಂಡಲ್‍ವುಡ್ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿ ಸೋಮವಾರ ಪರಪ್ಪನ ಅಗ್ರಹಾರದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

  • ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ ಕತ್ತಲು ಆವರಿಸಿದೆ : ರಾಜೇಂದ್ರ ಸಿಂಗ್ ಬಾಬು

    ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ ಕತ್ತಲು ಆವರಿಸಿದೆ : ರಾಜೇಂದ್ರ ಸಿಂಗ್ ಬಾಬು

    ಬೆಂಗಳೂರು: ನಮ್ಮ ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ  ಕತ್ತಲು ಹಿಡಿದಿದೆ. ಅದು ಬಿಟ್ಟು ಹೋಗೋದಿಲ್ಲ ಅನಿಸುತ್ತದೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿಕೆ ನೀಡಿದ್ದಾರೆ.

    ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ನಡೆ ವಿಚಾರವಾಗಿ ಇಂದು ಸ್ಯಾಂಡಲ್‍ವುಡ್‍ನ ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರು ಸುದ್ದಿಗೋಷ್ಠಿ ನಡೆಸಿದರು. ರಾಜೇಂದ್ರಸಿಂಗ್ ಬಾಬು ಮಾತನಾಡಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಚುನಾವಣೆಗೆ ತಡೆಯೊಡ್ಡಿ ಸಹಕಾರ ಸಂಘಗಳ ಉಪನಿಬಂಧನಾ ಅಧಿಕಾರಿ ಮಧ್ಯಂತರ ಆದೇಶ ಹೊರಡಿಸಿದೆ. ಆದರೂ ವಾಣಿಜ್ಯ ಮಂಡಳಿ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಸಮಾನ ಮನಸ್ಕರೆಲ್ಲ ಸೇರಿ ಈ ಬಗ್ಗೆ ಹೋರಾಟ ಮಾಡಲು ನಿರ್ಧಸಿದ್ದೇವೆ ಎಂದು ತಿಳಿಸಿದರು.

    ನಮ್ಮ ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ ಕತ್ತಲು ಹಿಡಿದಿದೆ. ಅದು ಬಿಟ್ಟು ಹೋಗುವುದಿಲ್ಲ ಎನಿಸುತ್ತದೆ. ಚೇಂಬರ್‍ನಿಂದಾಗಿ ನಾವೇ ಧ್ವನಿ ಇಲ್ಲದೇ ಇರುವ ಹಾಗೇ ಆಗಿದ್ದೇವೆ. ಅಲ್ಲದೆ ರಿಜಿಸ್ಟ್ರಾರ್ ಆಫ್ ಸೊಸೈಟಿಯಿಂದ  ಫಿಲಂ ಚೇಂಬರ್ ಗೆ ಒಂದು ಪತ್ರ ಬಂದಿದೆ. ಅದರಲ್ಲಿ ಸಾಕಷ್ಟು ಆರೋಪಗಳಿವೆ ಎಂದು ಹೇಳಿದರು.

    ಚೇಂಬರ್ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದು ತಿಳಿಯುತ್ತಿಲ್ಲ. ಕೃಷ್ಣೇ ಗೌಡ ಮತ್ತು ಜೆಡಿ ಎಂಬುವವರು 20 ಅಂಶಗಳಲ್ಲಿ ಅಕ್ರಮ ನಡೆದಿದೆ ಎಂಬುವುದರ ಬಗ್ಗೆ ದೂರು ನೀಡಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯನ್ನು ತಡೆಹಿಡಿಯಲಾಗಿದೆ. ಈಗಾಗಲೇ ರಿಜಿಸ್ಟ್ರಾರ್‌ನ್ನ ಮಂಡಳಿಗೆ ನೇಮಕ ಮಾಡಲಾಗಿದೆ. ಆದರೆ ಮಂಡಳಿಯಿಂದ ರಾಜಕೀಯವಾಗಿ ಒತ್ತಡ ತಂದು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಇಲ್ಲಿ ಸತ್ಯ ಹೊರ ಬರಬೇಕು ಎಂಬ ಉದ್ದೇಶದಿಂದ ನಾವು  ರಿಜಿಸ್ಟ್ರಾರ್‌ಗೆ ಮನವಿ ಮಾಡುತ್ತಿದ್ದೇವೆ. ರಿಜಿಸ್ಟ್ರಾರ್ ಆಫೀಸಿಗೆ ಈ ಮನವಿ ನೀಡಿ ಅದು ಸಿಎಂ ಬಳಿಗೆ ತಲುಪಿಸುತ್ತೇವೆ. ಇಲ್ಲಿ ಯಾರು ತಪ್ಪು ಮಾಡಿದ್ದಾರೆ, ಸತ್ಯ ಯಾವುದು ಎನ್ನುವುದು ಎಲ್ಲರಿಗೂ ಗೊತ್ತಾಗಬೇಕು ಎಂದರು.

    ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೋವಿಡ್ ಸಂಕಷ್ಟ ಸಾಕು ಎನ್ನುತ್ತೀರುವಾಗಲೇ ಈ ಮರಿ ಕೋವಿಡ್ ಗಳನ್ನು ನೋಡಿ ಗಾಬರಿಯಾಗಿದೆ. ಚುನಾವಣಾ ಪ್ರಕ್ರಿಯೆ ನಡೆಯುವವರೆಗೂ ಯಾವುದು ಸರಿಯಾಗುವುದಿಲ್ಲ. ಅಲ್ಲಿ ಒಂದು ಗುಂಪು ಸೇರಿಕೊಂಡಿದೆ. ಅವರು ಬೈಲಾ ತಿದ್ದುಪಡಿ ಮಾಡುತ್ತಾರೆ, ಅದರಿಂದ ಅವರಿಗೆ ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡಿಕೊಳ್ಳುತ್ತಾರೆ. ನಾವು ನಮ್ಮ ಪಾಡಿಗೆ ಶೂಟಿಂಗ್ ಮಾಡುವುದರಲ್ಲಿ ನಿರತರಾಗಿರುತ್ತೇವೆ. ಆದರೆ ಇಲ್ಲಿ ನಡೆಯುವುದನ್ನು ಕೇಳುವವರು ಇಲ್ಲ ಎಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಶೈಲೇಂದ್ರ ಬಾಬು, ಸುರೇಶ್, ಮುರಳಿ, ಮದನ್ ಪಟೇಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.