Tag: ಪಬ್ಲಿಕ್ ಟಿವಿ Sandalwood

  • ಮನೆಗೆ ಹೋದಾಗ ಮಗನೇ ಅಂತ ಕರೀತಿದ್ರು – ವಿಜಿ ತಾಯಿ ನಿಧನಕ್ಕೆ ನವೀನ್ ಸಜ್ಜು ಕಣ್ಣೀರು

    ಮನೆಗೆ ಹೋದಾಗ ಮಗನೇ ಅಂತ ಕರೀತಿದ್ರು – ವಿಜಿ ತಾಯಿ ನಿಧನಕ್ಕೆ ನವೀನ್ ಸಜ್ಜು ಕಣ್ಣೀರು

    – ಅಮ್ಮನ ಮುಂದೆ ಕೊನೆ ಬಾರಿ ಹಾಡಿದ ವೀಡಿಯೋ ಶೇರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್‍ರವರ ತಾಯಿ ನಾರಾಯಣಮ್ಮರವರು ವಿಧಿವಶರಾಗಿದ್ದಾರೆ. ಈ ಹಿನ್ನೆಲೆ ಬಿಗ್‍ಬಾಸ್ ಸೀಸನ್-8 ಸ್ಪರ್ಧಿ ಗಾಯಕ ನವೀನ್ ಸಜ್ಜು, ನಾರಾಯಣಮ್ಮ ಅವರೊಂದಿಗೆ ಕಳೆದ ಕೆಲವು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

    ಈ ಕುರಿತಂತೆ ನವೀನ್ ಸಜ್ಜುರವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ವೀಡಿಯೋದಲ್ಲಿ ನಾರಾಯಣಮ್ಮನವರು ಅನಾರೋಗ್ಯದಿಂದ ಬೆಡ್ ಮೇಲೆ ಮಲಗಿಕೊಂಡಿದ್ದು, ವೀಡಿಯೋ ಕಾಲ್ ಮೂಲಕ ನವೀನ್ ಸಜ್ಜುರವರು ‘ಒಳಿತು ಮಾಡು ಮನುಜ’ ಹಾಡನ್ನು ಹೇಳುತ್ತಿರುವುದನ್ನು ಕಾಣ ಬಹುದಾಗಿದೆ.

    ವೀಡಿಯೋ ಜೊತೆಗೆ, ವಿಜಿಯಣ್ಣನ ಅಮ್ಮ ನಿನ್ನೆ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ. ಮನೆಗೆ ಹೋದಾಗಲೆಲ್ಲಾ ಮಗನೆ ಎಂದು ಬಾಯಿ ತುಂಬಾ ಕರೆಯುತ್ತಿದ್ದ ಅಮ್ಮ, ನಮ್ಮನ್ನು ನೋಡಿಕೊಳ್ಳುತ್ತಿದ್ದ ಪ್ರೀತಿಗೆ ಸರಿಸಾಟಿಯೇ ಇಲ್ಲ. ಅವರಿಗೆ ನಾನು ಹಾಡುವ ‘ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ..’ ಹಾಡೆಂದರೆ ಬಹಳ ಇಷ್ಟ. ಅವರಿಗೆ ಇಷ್ಟವಾದಾಗಲೆಲ್ಲ ಈ ಹಾಡು ಹೇಳಪ್ಪ ಎಂದು ಹೇಳಿ ಕೇಳುತ್ತಿದ್ದರು. ಇದನ್ನೂ ಓದಿ: ಒಂದು ರೀತಿ ನನ್ನ ಮಗುವನ್ನು ನಾನು ಕಳ್ಕೊಂಡಂತೆ ಭಾಸವಾಗ್ತಿದೆ: ಕಣ್ಣೀರಿಟ್ಟ ವಿಜಿ

    ಹಾಡು ಕೇಳಿ ಮೌನವಾಗಿ ಕಣ್ಣಂಚಲ್ಲಿ ನೀರು ತಂದುಕೊಳ್ಳುತ್ತಿದ್ದರು. ನಂತರ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಕೋಮಾ ಸ್ಥಿತಿಗೆ ತೆರಳಿದ ಅಮ್ಮ ಯಾರನ್ನು ಗುರುತು ಹಿಡಿಯುವ, ಮಾತಾಡುವ ಶಕ್ತಿ ಕಳೆದುಕೊಂಡಿದ್ದರು. ಒಮ್ಮೆ ವಿಜಿಯಣ್ಣ ವೀಡಿಯೋ ಕಾಲ್ ಮಾಡಿ ಈ ಹಾಡನ್ನು ಹಾಡುವಂತೆ ಹೇಳಿದ್ದರು. ಬಹುಶಃ ಹಾಡನ್ನು, ನನ್ನನ್ನು ಗುರುತಿಸುತ್ತಾರಾ? ಎಂಬ ಆಸೆಯಿಂದ ಹೀಗೆ ಮಾಡಿದ್ದರು. ಅದರಂತೆ ಹಾಸಿಗೆ ಮೇಲೆ ಕೋಮಾ ಸ್ಥಿತಿಯಲ್ಲಿ ಮಲಗಿದ್ದ ಅಮ್ಮನ ಎದುರು ಫೋನ್ ನಲ್ಲಿ ಹಾಡನ್ನು ಹಾಡಿದೆ. ಹಾಡು ಮುಗಿದ ಕೊನೆಗೆ ಅವರ ಕಣ್ಣಂಚಲ್ಲಿ ನೀರು ತುಂಬಿತ್ತು. ಆದರೆ ಮಾತನಾಡುವ ಶಕ್ತಿ ಇರಲಿಲ್ಲ. ಇನ್ನು ಅಮ್ಮ ಬರೀ ನೆನಪಾಗಿ ಮಾತ್ರ ಉಳಿಯಲಿದ್ದಾರೆ. ಅವರೊಂದಿಗೆ ಕಳೆದ ಕ್ಷಣ, ಅವರು ತೋರುತ್ತಿದ್ದ ಪ್ರೀತಿ, ಹಾಡು ಕೇಳುತ್ತಿದ್ದ ಪರಿ. ನೆನಪುಗಳಾಗಿ ಉಳಿದು ಹೋಗಲಿವೆ. ಮಿಸ್ ಯು ಅಮ್ಮ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಅನಾರೋಗ್ಯದ ಹಿನ್ನೆಲೆ ನಟ ದುನಿಯ ವಿಜಯ್‍ರವರ ತಾಯಿ ನಾರಾಯಣಮ್ಮನವರು ಗುರುವಾರ ಕೊನೆಯುಸಿರೆಳೆದಿದ್ದು, ಸ್ಯಾಂಡಲ್‍ವುಡ್‍ನ ಹಲವಾರು ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

     

    View this post on Instagram

     

    A post shared by Naveen Sajju Official (@naveensajju)

  • 34ನೇ ವಸಂತಕ್ಕೆ ಕಾಲಿಟ್ಟ ಡೈನಾಮಿಕ್ ಪ್ರಿನ್ಸ್ – ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್

    34ನೇ ವಸಂತಕ್ಕೆ ಕಾಲಿಟ್ಟ ಡೈನಾಮಿಕ್ ಪ್ರಿನ್ಸ್ – ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಪ್ರಜ್ವಲ್ ದೇವರಾಜ್‍ರವರು ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಅಭಿಮಾನಿಗಳೆಗೆ ಗಿಫ್ಟ್ ನೀಡಿದ್ದಾರೆ.

    34ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಜ್ವಲ್ ದೇವರಾಜ್‍ರವರು ಈ ಬಾರಿ ಕೊರೊನಾ ಇರುವುದರಿಂದ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ಪ್ರಜ್ವಲ್ ದೇವರಾಜ್‍ರವರು ಅಭಿನಯಿಸಿರುವ ಮಾಫಿಯಾ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ.

    ಈ ಸಿನಿಮಾಕ್ಕೆ ನಿರ್ದೇಶಕ ಗುರುದತ್ ಆ್ಯಕ್ಷನ್ ಕಟ್ ಹೇಳಿದ್ದು, ಪೋಸ್ಟರ್‌ನಲ್ಲಿ ಪ್ರಜ್ವಲ್ ಪೊಲೀಸ್ ಆಫೀಸರ್ ಡ್ರೆಸ್ ತೊಟ್ಟು, ಜೀಪಿನೊಳಗೆ ಕುಳಿತುಕೊಂಡು ಖಡಕ್ ಲುಕ್ ನೀಡಿದ್ದಾರೆ.

    ಈ ಮುನ್ನ ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯಿಸಿದ್ದ ಅಂಬಿ ನಿಂಗೆ ವಯಸ್ಸಾಯ್ತು ಸಿನಿಮಾವನ್ನು ನಿರ್ದೇಶಿಸಿದ್ದ ಗುರುದತ್‍ರವರು ಇದೇ ಮೊದಲ ಬಾರಿಗೆ ಮಾಫಿಯಾ ಸಿನಿಮಾದ ಮೂಲಕ ಥ್ರಿಲ್ಲರ್ ಕಥಾಹಂದರವನ್ನು ಕೈಗೆತ್ತಿಕೊಂಡಿದ್ದಾರೆ. ಇನ್ನೂ ನಿರ್ಮಾಪಕ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಲಿದ್ದಾರೆ. ಇದನ್ನೂ ಓದಿ:ಕಿಚ್ಚನ ಮುಂದೆ ಕಲರ್ ಕಲರ್ ಕಾಗೆ ಬಂತು ಅಂದ ಶಮಂತ್

     

    View this post on Instagram

     

    A post shared by Prajwal Devaraj (@prajwaldevaraj)

  • ಕೊಲ್ಲೂರು ದೇವಿಗೆ ಮಗನ ಮುಡಿ ಕೊಟ್ಟು ಹರಕೆ ತೀರಿಸಿದ ರಿಷಬ್ ಶೆಟ್ಟಿ

    ಕೊಲ್ಲೂರು ದೇವಿಗೆ ಮಗನ ಮುಡಿ ಕೊಟ್ಟು ಹರಕೆ ತೀರಿಸಿದ ರಿಷಬ್ ಶೆಟ್ಟಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯವರು ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ಮಗನ ಮುಡಿ ತೆಗೆಸಿ ಹರಕೆಯನ್ನು ತೀರಿಸಿದ್ದಾರೆ.

    ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರಾದ ರಿಷಬ್ ಶೆಟ್ಟಿಯವರು ಇಂದು ಪತ್ನಿ ಪ್ರಗತಿ ಹಾಗೂ ಮಗ ರನ್ವಿತ್ ಸಮೇತ ಕೊಲ್ಲೂರಿಗೆ ಭೇಟಿ ನೀಡಿ ದೇವಿ ದರ್ಶನ ಪಡೆದುಕೊಂಡಿದ್ದಾರೆ.

    ಅನ್‍ಲಾಕ್ ಆರಂಭವಾದ ಮೊದಲ ದಿನವೇ ದೇವಾಲಯಕ್ಕೆ ಭೇಟಿ ನೀಡಿದ ರಿಷಭ್ ಶೆಟ್ಟಿ ಅವರು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ರಿಷಬ್ ಶೆಟ್ಟಿ ಫಿಲ್ಮ್ಸ್ ಎಂಬ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ರಿಷಬ್ ಪಂಚೆ ಹಾಗೂ ಶಲ್ಯ ಹಾಗೂ ಅವರ ಪತ್ನಿ ನೀಲಿ ಬಣ್ಣದ ಸೀರೆಯುಟ್ಟಿದ್ದಾರೆ. ಮಗ ರನ್ವಿತ್ ಬಿಳಿ ಬಣ್ಣದ ಬಟ್ಟೆ ಧರಿಸಿದ್ದಾರೆ.

    ಏಪ್ರಿಲ್ ತಿಂಗಳಿನಲ್ಲಿ ರಿಷಬ್ ಶೆಟ್ಟಿಯವರು, ತಮ್ಮ ಮಗನ ಹುಟ್ಟುಹಬ್ಬವನ್ನು ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಚಂಡಿಕಾಹೋಮ ಮಾಡಿಸುವ ಮೂಲಕ ಆಚರಿಸಿದ್ದರು.

  • ರಾಷ್ಟ್ರೀಯ ಪ್ರತಿಭಟನಾ ದಿನಕ್ಕೆ ಬೆಂಬಲ ಸೂಚಿಸಿದ ನಟಿ ಆಶಿಕಾ ರಂಗನಾಥ್

    ರಾಷ್ಟ್ರೀಯ ಪ್ರತಿಭಟನಾ ದಿನಕ್ಕೆ ಬೆಂಬಲ ಸೂಚಿಸಿದ ನಟಿ ಆಶಿಕಾ ರಂಗನಾಥ್

    ಬೆಂಗಳೂರು: ದೇಶಾದ್ಯಂತ ಇಂದು ವೈದ್ಯ ಸಂಘಟನೆಗಳು ರಾಷ್ಟ್ರೀಯ ಪ್ರತಿಭಟನಾ ದಿನ ಆಚರಿಸುತ್ತಿವೆ. ಕರ್ನಾಟಕ ವೈದ್ಯರ ಪ್ರೋಟೆಸ್ಟ್ ಗೆ, ಸ್ಯಾಂಡಲ್ ವುಡ್ ಖ್ಯಾತ ನಟಿ ಆಶಿಕಾ ರಂಗನಾಥ್ ಬೆಂಬಲ ಸೂಚಿಸಿದ್ದಾರೆ.

    ಈ ಪ್ರತಿಭಟನೆ ಬಗ್ಗೆ ಮಾತನಾಡಿರುವ ಅವರು, ಡಾಕ್ಟರ್ಸ್ ಎಂದರೆ ನನಗೆ ಮೊದಲು ನೆನಪಾಗುವ ಪದ ಸಂರಕ್ಷಕರು ಎಂದು. 14 ತಿಂಗಳಿನಿಂದ ಕೋವಿಡ್ ಮಹಾಮಾರಿಯ ಆರ್ಭಟ ನೆಡೆಯುತ್ತಿದೆ. ಈ ಸಂದರ್ಭದಲ್ಲಿ ಕುಟುಂಬದ ಜೊತೆ ತಮ್ಮ ಜೀವನವನ್ನು ಕೂಡ ಅಪಾಯಕ್ಕೆ ಒಡ್ಡಿಕೊಂಡು ಸಮಾಜಕ್ಕೋಸ್ಕರ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೂ ಅಭಾರಿಯಾಗಿದ್ದೇನೆ. ಆರೋಗ್ಯ ಕಾರ್ಯಕರ್ತರ ಪ್ರಯತ್ನ ಮತ್ತು ಸೇವಾ ಮನೋಭಾವಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

    ಡಾಕ್ಟರ್ಸ್‍ಗಳ ಮೇಲಿನ ಹಲ್ಲೆ ಖಂಡಿಸಿ, ಜನರಲ್ಲಿ ಸಾಮಾಜಿಕ ತಿಳುವಳಿಕೆ ಮೂಡಿಸಲು ಪ್ರತಿಭಟನೆ ನಡೆಸಲಾಗುತ್ತಿದೆ. ಈ ಜಾಗೃತಿ ಕಾರ್ಯಕ್ರಮಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತಿದ್ದೇನೆ. ಎಲ್ಲರೂ ಕೂಡ ಬೆಂಬಲ ನೀಡಿ ಎಂದು ಮನವಿಮಾಡಿದ್ದಾರೆ. ನಮ್ಮ ಡಾಕ್ಟರ್ಸ್‍ನ ನಾವು ಉಳಿಸಿಕೊಳ್ಳೋಣ, ಅವರ ಪ್ರಯತ್ನಗಳನ್ನು ಶ್ಲಾಘಿಸೋಣ… #Save the Saviours# ಎನ್ನುವ ಹ್ಯಾಶ್ ಟ್ಯಾಗ್ ಮುಖಾಂತರ ಈ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಟಾಪ್‍ಲೆಸ್ ಫೋಟೋ ಶೂಟ್‍ನಲ್ಲಿ ನಟಿ ಕಿಯಾರಾ ಅಡ್ವಾಣಿ ಸಖತ್ ಹಾಟ್

  • ಕಿಚ್ಚ ಸುದೀಪ್ ಪುಟ್ಟ ಅಭಿಮಾನಿಗಳಿಂದ ಸ್ವಚ್ಛತಾ ಅಭಿಯಾನ

    ಕಿಚ್ಚ ಸುದೀಪ್ ಪುಟ್ಟ ಅಭಿಮಾನಿಗಳಿಂದ ಸ್ವಚ್ಛತಾ ಅಭಿಯಾನ

    ಬಾಗಲಕೋಟೆ: ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಗ್ರಾಮದ ಕಿಚ್ಚ ಸುದೀಪ್ ಅವರ ಅಭಿಮಾನಿ ಸಂಘದ ಕಾರ್ಯಕರ್ತರಿಂದ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

    ಹೊನ್ನಾಕಟ್ಟಿ ಗ್ರಾಮದ ರಸ್ತೆ ಹಾಗೂ ಕಳೆಯಿಂದ ತುಂಬಿದ್ದ ಶಾಲೆಯ ಆವರಣಗಳಲ್ಲಿನ ಕಸ-ಕಡ್ಡಿಗಳನ್ನು ಆರಿಸಿ, ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡುವಂತೆ ತಮ್ಮ ಶ್ರಮದಾನ ಕಾರ್ಯದ ಮೂಲಕ ಸಂದೇಶ ನೀಡಿದರು. ಸ್ವಚ್ಛತೆಯಿಂದ ನಾವು ಸ್ವಾಸ್ಥ್ಯ ಮತ್ತು ಆರೋಗ್ಯಕರ ಜೀವನ ನಡೆಸಬಹುದು. ತಮ್ಮ ನೆಚ್ಚಿನ ನಟ ಕಿಚ್ಚ ಸುದೀಪ್ ಅವರ ಹೆಸರಿನಲ್ಲಿ ಈ ಕಾರ್ಯವನ್ನು ಮಾಡಿದ ಬಾಲ ಅಭಿಮಾನಿಗಳ ಕೆಲಸ ಶ್ಲಾಘನೀಯವಾದುದು.ಇದನ್ನೂ ಓದಿ: ಮಂಗಳಮುಖಿಯರಿಗೆ ಕಿಚ್ಚನ ನೆರವು

    ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಮಾತೆಯರಾದ ಲಲಿತಾ ಖೋತ್ ಹಾಗೂ ಸಹಶಿಕ್ಷಕರಾದ ಶಿವಪ್ಪ ದೇವಸಂಗಿ, ಮತ್ತು ಎಸ್.ಆರ್.ಸೂಳಿಭಾವಿಯವರು ಉಪಸ್ಥಿತರಿದ್ದರು. ಮಕ್ಕಳ ಈ ನಿಸ್ವಾರ್ಥ ಸೇವೆ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆಯ 40ಕ್ಕೂ ಹೆಚ್ಚು ಮಕ್ಕಳಿರುವ ಪೃಥ್ವಿ ವಿಶೇಷ ಚೇತನರ ಶಾಲೆಯಲ್ಲಿರುವ ಬುದ್ದಿಮಾಂದ್ಯ ಮಕ್ಕಳು ಲಾಕ್‍ಡೌನ್ ವೇಳೆ ಆಹಾರಕ್ಕೂ ಪರದಾಡುವ ಸ್ಥಿತಿಯನ್ನು ಮನಗಂಡು ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ನೆರವು ನೀಡಿದ್ದರು. ಇದನ್ನೂ ಓದಿ: ವಿಶೇಷ ಚೇತನ ಮಕ್ಕಳ ಶಾಲೆಯ ನೆರವಿಗೆ ನಿಂತ ನಟ ಸುದೀಪ್

  • ಸ್ಯಾಂಡಲ್‍ವುಡ್ ಹಿರಿಯ ನಟ ಸುರೇಶ್ ಚಂದ್ರ ಕೊರೊನಾಗೆ ಬಲಿ

    ಸ್ಯಾಂಡಲ್‍ವುಡ್ ಹಿರಿಯ ನಟ ಸುರೇಶ್ ಚಂದ್ರ ಕೊರೊನಾಗೆ ಬಲಿ

    ಬೆಂಗಳೂರು: ಪತ್ರಕರ್ತ ಹಾಗೂ ಸ್ಯಾಂಡಲ್‍ವುಡ್‍ನ ಹಿರಿಯ ನಟ ಸುರೇಶ್ ಚಂದ್ರ ಕೊರೊನಾದಿಂದ ನಿಧನರಾಗಿದ್ದಾರೆ.

    ಕೆಲವು ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಸುರೇಶ್ ಚಂದ್ರರವರು ಜಯನಗರದಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

    ಬೆಂಗಳೂರಿನ ಸುಬ್ರಹ್ಮಣ್ಯ ನಗರದ ನಿವಾಸಿಯಾಗಿದ್ದ ಸುರೇಶ್ ಚಂದ್ರರವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಆಗಲಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಖ್ಯಾತಿ ಪಡೆದಿದ್ದ ಸುರೇಶ್ ಚಂದ್ರರವರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ನಟ ಅಜಯ್‍ರಾವ್ ಮೇಕಪ್ ಮ್ಯಾನ್ ಕೊರೊನಾಗೆ ಬಲಿ

    80ರ ದಶಕದಲ್ಲಿ ಪತ್ರಿಕೋದ್ಯಮದಲ್ಲಿ ಹೆಸರುವಾಸಿಯಾಗಿದ್ದ ಸುರೇಶ್ ಚಂದ್ರರವರು ಸಂಜೆ ವಾಣಿ ಪತ್ರಿಕೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಚಂದನವನದ ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಶ್, ದೇವರಾಜ್ ಸೇರಿದಂತೆ ಹಲವಾರು ಸ್ಟಾರ್ ನಟರ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ನಟಿಸಿದ್ದ ನಿತೀಶ್ ವೀರಾ ಕೊರೊನಾಗೆ ಬಲಿ

  • ಸದಾ ನೆನಪಿನಲ್ಲಿಯೇ ಇರ್ತಿಯಾ ಗೆಳೆಯ: ಚಿರು ನೆನೆದ ದಚ್ಚು

    ಸದಾ ನೆನಪಿನಲ್ಲಿಯೇ ಇರ್ತಿಯಾ ಗೆಳೆಯ: ಚಿರು ನೆನೆದ ದಚ್ಚು

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾರವರು ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ. ಈ ಹಿನ್ನೆಲೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‍ರವರು ಚಿರು ಜೊತೆಗಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಚಿರುರನ್ನು ನೆನಪಿಸಿಕೊಂಡಿದ್ದಾರೆ. ಇದನ್ನು ಓದಿ: ಡಿ ಬಾಸ್ ಮನವಿಗೆ ಭರ್ಜರಿ ಪ್ರತಿಕ್ರಿಯೆ-2 ದಿನದಲ್ಲಿ 25 ಲಕ್ಷ ಸಂಗ್ರಹ

    ಕಳೆದ ವರ್ಷ ಜೂನ್ 7ರಂದು ನಟ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ದರು. ಚಿರು ಸಾವಿನ ವಿಚಾರ ಒಂದು ಘಳಿಗೆ ಚಂದನವನಕ್ಕೆ ಮಂಕು ಬಳಿದಂತಾಗಿತ್ತು. ಆದರೆ ಇಂದು ಚಿರು ಸತ್ತು ಒಂದು ವರ್ಷ ತುಂಬಿದ್ದು, ಕುಟುಂಬದವರು, ಸ್ನೇಹಿತರು ಹಾಗೂ ಅಭಿಮಾನಿಗಳು ಹೀಗೆ ಗಣ್ಯಾತಿ ಗಣ್ಯರು ಚಿರು ಜೊತೆಗೆ ಕಳೆದ ಕೆಲವು ಕಾಲಗಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಓದಿ: ದರ್ಶನ್‍ಗೆ ಕೃತಜ್ಞತೆ ಸಲ್ಲಿಸಿದ ಅರವಿಂದ ಲಿಂಬಾವಳಿ

    ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್‍ರವರು ಚಿರು ಜೊತೆಗಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನೀನು ಸದಾ ನೆನಪಿನಲ್ಲಿಯೇ ಇರುತ್ತೀಯಾ ನನ್ನ ಗೆಳೆಯ ಚಿರು ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಅಲ್ಲದೆ ಫೋಟೋದಲ್ಲಿ ಚಿರು ಬ್ಲೂ ಕಲರ್ ಟಿ ಶರ್ಟ್ ಧರಿಸಿದ್ದು, ನಾಯಿ ಮರಿಯೊಂದನ್ನು ದರ್ಶನ್ ಜೊತೆ ಕೈಯಲ್ಲಿ ಹಿಡಿದುಕೊಂಡಿರುವುದನ್ನು ಕಾಣಬಹುದಾಗಿದೆ.

    ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾರವರ ಪುತ್ರಿ ಐಶ್ವರ್ಯ ಅರ್ಜುನ್ ಕೂಡ ಚಿರುರವರ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ನೀನು ಸದಾ ನಮ್ಮ ಹೃದಯದಲ್ಲಿ ಇರುತ್ತೀಯಾ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ: ಇಂದು ಚಿರಂಜೀವಿ ಸರ್ಜಾ ಪುಣ್ಯಸ್ಮರಣೆ- ಕುಟುಂಬಸ್ಥರಿಂದ ಪೂಜೆ

     

    View this post on Instagram

     

    A post shared by Aishwarya Arjun (@aishwaryaarjun)

  • ರೆಬಲ್ ಸ್ಟಾರ್ ಅಂಬರೀಷ್ ಮುದ್ದಿನ ಕನ್ವರ್ ಇನ್ನಿಲ್ಲ

    ರೆಬಲ್ ಸ್ಟಾರ್ ಅಂಬರೀಷ್ ಮುದ್ದಿನ ಕನ್ವರ್ ಇನ್ನಿಲ್ಲ

    ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ರೆಬಲ್ ಸ್ಟಾರ್ ಅಂಬರೀಶ್ ಪ್ರೀತಿಯ ಶ್ವಾನ ಕನ್ವರ್ ಲಾಲ್ ಇಂದು ಬೆಳಗ್ಗೆ ನಿಧನವಾಗಿದೆ.

    ಮೊದಲಿನಿಂದಲೂ ಪ್ರಾಣಿಪ್ರಿಯರಾಗಿದ್ದ ಅಂಬರೀಶ್‍ರವರಿಗೆ ಶ್ವಾನಗಳೆಂದರೆ ಬಹಳ ಪ್ರೀತಿ. ಹೀಗಾಗಿ ತಮ್ಮ ಮನೆಯಲ್ಲಿ ಎರಡು ಶ್ವಾನಗಳನ್ನು ಸಾಕಿದ್ದರು. ಆ ಶ್ವಾನಗಳಿಗೆ ಕನ್ವರ್ ಲಾಲ್ ಹಾಗೂ ಬುಲ್‍ಬುಲ್ ಎಂದು ಹೆಸರಿಟ್ಟಿದ್ದರು.

    ಅಂಬರೀಶ್‍ರವರ ವೃತ್ತಿ ಜೀವನದಲ್ಲಿ ನಾಗರ ಹಾವು ಸಿನಿಮಾದ ಬುಲ್ ಬುಲ್ ಮಾತಾಡಕ್ಕಿಲ್ವಾ.. ಹಾಗೂ ಅಂತ ಚಿತ್ರದ ಕುತ್ತೇ..ಕನ್ವರ್ ನಹೀ ಕನ್ವರ್ ಲಾಲ್ ಬೋಲೋ ಡೈಲಾಗ್‍ಗಳು ಬಹಳ ಖ್ಯಾತಿ ತಂದುಕೊಟ್ಟಿತ್ತು. ಇದರ ನೆನಪಿಗಾಗಿ ಅಂಬರೀಶ್‍ರವರು ತಮ್ಮ ಎರಡು ಶ್ವಾನಗಳಿಗೆ ಬುಲ್‍ಬುಲ್ ಹಾಗಾ ಕನ್ವರ್ ಎಂದು ನಾಮಕರಣ ಮಾಡಿದ್ದರು.

    ಸೇಂಟ್ ಬರ್ನಾಡ್ ತಳಿಯ ಶ್ವಾನಕ್ಕೆ ಕನ್ವರ್ ಲಾಲ್ ಕರೆಯುತ್ತಿದ್ದರು. ಅದು ಒಂಟಿಯಾಗಿರಬಾರದು ಎಂದು ಕನ್ವರ್ ಲಾಲ್ ಜೊತೆಗೆ ಬುಲ್‍ಬುಲ್ ನಾಯಿಯನ್ನು ತಂದು ಜೋಡಿ ಮಾಡಿದ್ದರು. ಪ್ರತಿ ನಿತ್ಯ ತಮಗೆ ಬಿಡುವು ಸಿಕ್ಕಾಗಲೆಲ್ಲಾ ಅಂಬರೀಶ್‍ರವರು ಕನ್ವರ್ ಲಾಲ್ ಹಾಗೂ ಬುಲ್ ಬುಲ್ ಜೊತೆಗೆ ಕಾಲ ಕಳೆಯುತ್ತಿದ್ದರು. ಬೆಳಗ್ಗೆ ವಾಕಿಂಗ್ ಹೋಗುವಾಗ ಕೂಡ ಜೊತೆಯಲ್ಲಿ ಕನ್ವರ್‍ನನ್ನು ಕರೆದುಕೊಂಡು ಹೋಗುತ್ತಿದ್ದರು.

    ಕುಟುಂಬದ ಸದಸ್ಯನಂತಿದ್ದ ಕನ್ವರ್ ಅಂಬರೀಶ್- ನಿಧನರಾದ ಬಳಿಕ ಮಾನಸಿಕವಾಗಿ ನೊಂದಿತ್ತು. ಸರಿಯಾಗಿ ಊಟಮಾಡುತ್ತಿರಲಿಲ್ಲ ಹಾಗೂ ಒಬ್ಬಂಟಿಯಾಗಿ ಇರುತ್ತಿತ್ತು. ಇದೀಗ ಅಂಬಿ ನಿಧನರಾದ ಎರಡು ವರ್ಷದ ಬಳಿಕ ಕನ್ವರ್ ಲಾಲ್ ಕೊನೆಯುಸಿರೆಳೆದಿದ್ದಾನೆ. ಅದರಲ್ಲಿಯೂ ಅಂಬರೀಶ್‍ರವರ 69ನೇ ಜನ್ಮದಿನೋತ್ಸವಕ್ಕೆ ಇನ್ನೂ ಐದು ದಿನಗಳು ಬಾಕಿ ಇರುವಾಗಲೇ ಕನ್ವರ್ ಬಾರದ ಲೋಕಕ್ಕೆ ತೆರಳಿದ್ದಾನೆ. ಇದೀಗ ಬೆಂಗಳೂರಿನಲ್ಲಿ ಕನ್ವರ್ ಲಾಲ್‍ನನ್ನು ಮಣ್ಣು ಮಾಡಲಾಗಿದೆ.

    ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ತಮ್ಮ ಮುದ್ದಿನ ಶ್ವಾನ ಅಸುನೀಗಿದ್ದರಿಂದ ದುಃಖದಲ್ಲಿದ್ದಾರೆ.

  • ಸ್ಯಾಂಡಲ್‍ವುಡ್‍ಗೆ ರಾಮ್ ಕುಮಾರ್ ರೀ ಎಂಟ್ರಿ

    ಸ್ಯಾಂಡಲ್‍ವುಡ್‍ಗೆ ರಾಮ್ ಕುಮಾರ್ ರೀ ಎಂಟ್ರಿ

    ಬೆಂಗಳೂರು: ಹಲವು ವರ್ಷಗಳ ಹಿಂದೆ ಚಂದನವನದಲ್ಲಿ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ನಟ ರಾಮ್ ಕುಮಾರ್ ಇದೀಗ ಕಲರ್ ಫುಲ್ ಸಿನಿ ಜಗತ್ತಿಗೆ ರೀ ಎಂಟ್ರಿ ನೀಡಿದ್ದಾರೆ.

    ಇಷ್ಟು ದಿನ ಚಿತ್ರರಂಗದಿಂದ ದೂರ ಸರಿದಿದ್ದ ರಾಮ್ ಕುಮಾರ್, ಹಲವು ವರ್ಷಗಳ ಗ್ಯಾಪ್ ನಂತರ ಇದೀಗ ‘ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಮತ್ತೆ ಬಣ್ಣ ಹಚ್ಚಿದ್ದಾರೆ. ದಿಯಾ ಸಿನಿಮಾದ ನಟ ದೀಕ್ಷಿತ್ ಹೀರೋ ಆಗಿ ಮಿಂಚುತ್ತಿರುವ ಈ ಸಿನಿಮಾದಲ್ಲಿ ರಾಮ್ ಕುಮಾರ್ ಕೃಷ್ಣಮೂರ್ತಿ ಎನ್ನುವ ಪ್ರಾಧ್ಯಾಪಕರ ಪಾತ್ರದಲ್ಲಿ ಅಭಿನಯಿಸಿದ್ದು, ಸಿನಿಮಾಕ್ಕೆ ನಿರ್ದೇಶಕ ಚೆನ್ನಪ್ಪ ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಇತ್ತೀಚೆಗೆ ಶೀರ್ಷಿಕೆ ವಿಚಾರವಾಗಿ ವಿವಾದಲ್ಲಿ ಸಿಲುಕಿದ್ದ ಈ ಸಿನಿಮಾದ ಸಮಸ್ಯೆ ಇದೀಗ ಬಗೆಹರಿದಿದ್ದು, ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಈಗಾಗಲೇ ಚಿತ್ರೀಕರಣದಲ್ಲಿ ರಾಮ್ ಕುಮಾರ್ ಭಾಗಿಯಾಗಿದ್ದು, ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಇದೀಗ ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸಲಾಗುತ್ತಿದೆ.

    ಅನೇಕ ವರ್ಷಗಳ ಹಿಂದೆ ಬಿಗ್ ಸ್ಕ್ರೀನ್ ಮೇಲೆ ರಾಮ್ ಕುಮಾರ್‍ರನ್ನು ನೋಡಿದ್ದ ಅಭಿಮಾನಿಗಳು ಇದೀಗ ಮತ್ತೆ ಈ ಸಿನಿಮಾದ ಮೂಲಕ ರಾಮ್ ಕುಮಾರನ್ನು ನೋಡಲು ಕಾಯುತ್ತಿದ್ದಾರೆ. ಗೆಜ್ಜೆ ನಾದ, ಸ್ನೇಹ ಲೋಕ, ಹಬ್ಬ, ಕಾವ್ಯ, ಆವೇಶ ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ರಾಮ್ ಕುಮಾರ್ ಅಭಿನಯಿಸಿದ್ದಾರೆ.

  • ‘ಅಕ್ಷಿ’ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ – ಸಂತಸ ವ್ಯಕ್ತಪಡಿಸಿದ ಕಾಮಿಡಿ ಕಿಲಾಡಿ ಜಿಜಿ

    ‘ಅಕ್ಷಿ’ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ – ಸಂತಸ ವ್ಯಕ್ತಪಡಿಸಿದ ಕಾಮಿಡಿ ಕಿಲಾಡಿ ಜಿಜಿ

    ಬೆಂಗಳೂರು: ಅಕ್ಷಿ ಸಿನಿಮಾಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಿಕ್ಕಿದ್ದು, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದ ಗೋವಿಂದೇ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಕುರಿತಂತೆ ಮಾತನಾಡಿದ ಗೋವಿಂದ್ ಗೌಡ(ಜಿಜಿ) ಅಕ್ಷಿ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ದೊರೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಕನ್ನಡದ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ನಾನು ಆ ಸಿನಿಮಾದಲ್ಲಿ ಅಭಿನಯಿಸಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆಯಲು ಪ್ರಮುಖ ಕಾರಣ ಸಿನಿಮಾದ ನಿರ್ದೇಶಕ ಮನೋಜ್ ಕುಮಾರ್. ಹಾಗಾಗಿ ಅವರಿಗೆ ಈ ಕ್ರೆಡಿಟ್ ಸಲ್ಲಬೇಕು. ಸಿನಿಮಾ ಬಗ್ಗೆ ಹೇಳಿದಾಗ ಇಲ್ಲಿಯವರೆಗೂ ಜನರು ನನ್ನನ್ನು ಹಾಸ್ಯದ ಪಾತ್ರಗಳಲ್ಲಿ ಹೆಚ್ಚಾಗಿ ನೋಡಿದ್ದಾರೆ. ಆದರೆ ಅಕ್ಷಿ ಸಿನಿಮಾದಲ್ಲಿ ನನ್ನ ಪಾತ್ರ ಗಂಭೀರ ಪಾತ್ರವಾಗಿದ್ದು, ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಸಿನಿಮಾವನ್ನೂ ಪ್ರಾರಂಭಿಸುವುದಕ್ಕೂ ಮುನ್ನ ಒಮ್ಮೆ ಯೋಚನೆ ಮಾಡಿ ಎಂದು ನಿರ್ದೇಶಕರಿಗೆ ಹೇಳಿದ್ದೆ. ಆದರೆ ಅವರು ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ನೀನು ಈ ಪಾತ್ರವನ್ನು ಮಾಡಲೇಬೇಕು ಎಂದು ಹೇಳಿದ್ದರು. ನಿಜಕ್ಕೂ ಅವರ ಶ್ರಮದಿಂದ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಆದರೂ ಕೆಲವರು ಸಿನಿಮಾವನ್ನು ವೀಕ್ಷಿಸಿದ್ದು ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ ಎಂದರು.

    ಸದ್ಯ ಸಿನಿಮಾವನ್ನು ಏಪ್ರಿಲ್‍ನಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ತಯಾರಿ ನಡೆಸುತ್ತಿದ್ದು, ಮೊದಲ ಬಾರಿಗೆ ಮನೋಜ್‍ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಗೋವಿಂದೇ ಗೌಡ, ಇಳಾ ವಿಟ್ಲಾ, ಮಾಸ್ಟರ್ ಮಿಥುನ್, ಮಾಸ್ಟರ್ ಸೌಮ್ಯ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾಕ್ಕೆ ಶ್ರೀನಿವಾಸ್, ರಮೇಶ್ ಬಂಡವಾಳ ಹೂಡಿದ್ದು, ಕಲಾ ದೇಗುಲ ಶ್ರೀನಿವಾಸ್ ಸಂಗೀತ ಸಂಯೋಜಿಸಿದ್ದಾರೆ ಹಾಗೂ ಮುಕುಲ್ ಗೌಡ ಛಾಯಾಗ್ರಹಣ ಸಿನಿಮಾಕ್ಕಿದೆ.