Tag: ಪಬ್ಲಿಕ್ ಟಿವಿ Rajasthan

  • ಕುಡಿದ ಮತ್ತಿನಲ್ಲಿ ಪತ್ನಿಗೆ ಬೆಲ್ಟಿನಿಂದ ಹೊಡೆದು ಹತ್ಯೆಗೈದ ಪತಿ

    ಕುಡಿದ ಮತ್ತಿನಲ್ಲಿ ಪತ್ನಿಗೆ ಬೆಲ್ಟಿನಿಂದ ಹೊಡೆದು ಹತ್ಯೆಗೈದ ಪತಿ

    ಜೈಪುರ: 35 ವರ್ಷದ ವ್ಯಕ್ತಿಯೊರ್ವ ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಬೆಲ್ಟಿನಿಂದ ಹೊಡೆದು ಹತ್ಯೆಗೈಯ್ದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಘಟನೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಈ ಕುರಿತಂತೆ ಮಾತನಾಡಿದ ಪೊಲೀಸರು, ಪತಿ ರಾಕೇಶ್ ಮೀನಾ ಕುಡಿದ ಮತ್ತಿನಲ್ಲಿ ಪತ್ನಿ ವಿಮ್ಲಾಬಾಯಿ(31)ಗೆ ಹಿಗ್ಗಾಮುಗ್ಗಾ ಚರ್ಮದ ಬೆಲ್ಟ್‍ನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಭಾನುವಾರ ಮೃತಪಟ್ಟಿರುದಾಗಿ ತಿಳಿಸಿದ್ದಾರೆ.

    ಪ್ರಕರಣ ಸಂಬಂಧಿಸಿದಂತೆ ಮಹಿಳೆಯ ಪೋಷಕರು ಆರೋಪಿ ವಿರುದ್ಧ ದೂರು ದಾಖಲಿಸಿದ್ದು, ಇದೀಗ ಪೊಲೀಸರು ಆರೋಪಿ ರಾಕೇಶ್ ಮೀನಾರನ್ನು ಬಂಧಿಸಿದ್ದಾರೆ.

  • ಐವರು ಹೆಣ್ಣು ಮಕ್ಕಳಿಂದ ತಂದೆಯ ಅಂತ್ಯಸಂಸ್ಕಾರ

    ಐವರು ಹೆಣ್ಣು ಮಕ್ಕಳಿಂದ ತಂದೆಯ ಅಂತ್ಯಸಂಸ್ಕಾರ

    ಜೈಪುರ: ಐವರು ಹೆಣ್ಣು ಮಕ್ಕಳು ತಂದೆಯ ಶವಕ್ಕೆ ಕೊಳ್ಳಿ ಇಡುವ ಮೂಲಕ ರಾಜಸ್ಥಾನದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ.

    ರಾಜಸ್ಥಾನದ ದುಂಗರ್‍ಪುರ್ ಜಿಲ್ಲೆಯ ನವಶ್ಯಾಮ್ ಗ್ರಾಮದ ನಿವಾಸಿ ಕರುಲಾಲ್ ತ್ರಿವೇದಿ ಎಂಬವರು ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಶನಿವಾರ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಅವರ ಐವರು ಪುತ್ರಿಯರಾದ ನಿರ್ಮಲಾ, ಚಂದ್ರಕಾಂತ, ನೀತಾ, ಜಯಶ್ರೀ ಮತ್ತು ಸುರೇಖ ತಂದೆಯ ಅಂತಿಮ ವಿಧಿವಿಧಾನವನ್ನು ತಾವೇ ಮಾಡಲು ನಿರ್ಧರಿಸಿದರು. ಇವರ ಈ ನಿರ್ಧಾರಕ್ಕೆ ಅವರ ಸಂಬಂಧಿಗಳು ಸಂತೋಷದಿಂದ ಸಮ್ಮತಿ ಸೂಚಿಸಿದರು.

    ಈ ಐವರು ಹೆಣ್ಣು ಮಕ್ಕಳು ತಂದೆಯ ಶವವನ್ನು ತಮ್ಮ ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಕರೆದೊಯ್ದಿದ್ದಾರೆ. ಬಳಿಕ ಹಿಂದೂ ಸಂಪ್ರದಾಯದ ಪ್ರಕಾರ ತಂದೆಯ ದೇಹಕ್ಕೆ ಕೊಳ್ಳಿ ಇಟ್ಟು ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ಅಲ್ಲದೆ ನಮ್ಮ ಪೋಷಕರ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ಎಂದಿಗೂ ಅವರು ಗಂಡು ಮಕ್ಕಳ ಮೇಲೆ ವ್ಯಾಮೋಹ ಹೊಂದಿರಲಿಲ್ಲ ಎಂದು ನೀತಾ ಹೇಳಿದ್ದಾರೆ.

  • ಮಗನ ಅಗಲಿಕೆಯಿಂದ ಆತ್ಮಹತ್ಯೆಗೆ ಶರಣಾದ ಇಡೀ ಕುಟುಂಬ

    ಮಗನ ಅಗಲಿಕೆಯಿಂದ ಆತ್ಮಹತ್ಯೆಗೆ ಶರಣಾದ ಇಡೀ ಕುಟುಂಬ

    ಜೈಪುರ: 45 ವರ್ಷದ ವ್ಯಕ್ತಿಯೊರ್ವ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾನುವಾರ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.

    ಮೃತ ಪಟ್ಟ ವ್ಯಕ್ತಿ ಹನುಮಾನ್ ಪ್ರಸಾದ್(45), ಪತ್ನಿ ತಾರಾ(40), ಇಬ್ಬರು ಮಕ್ಕಳಾದ ಪೂಜಾ(22) ಹಾಗೂ ಅನು(22) ಎಂದು ಗುರುತಿಸಲಾಗಿದೆ.

    ಈ ಘಟನೆ ಉದ್ಯೋಗ್ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಈ ಕುರಿತಂತೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ ಕುನ್ವರ್ ರಾಷ್ಟ್ರದೀಪ್, ಐದು ತಿಂಗಳ ಹಿಂದೆ ಹನುಮಾನ್ ಪ್ರಸಾದ್‍ರವರ ಏಕೈಕ ಪುತ್ರ ಹೃದಯಾಘಾತದಿಂದ ಅಗಲಿದ್ದಾರೆ. ಇದರಿಂದ ಇಡೀ ಕುಟುಂಬ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ.

    ಸೂಸೈಡ್ ಡೆತ್ ನೋಟ್‍ವೊಂದು ಪತ್ತೆಯಾಗಿದ್ದು, ಇದರಲ್ಲಿ ಹನುಮಾನ್ ಪ್ರಸಾದ್, ನಮ್ಮ ಮಗನ ಮರಣದ ನಂತರ ಇನ್ನುಮುಂದೆ ನಾವು ಬದುಕಲು ಇಚ್ಛಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

  • ಹ್ಯಾಂಡ್ ಬ್ರೇಕ್ ಹಾಕದ್ದರಿಂದ ಕಾಲುವೆಗೆ ಬಿತ್ತು ಕಾರು – ನಾಲ್ವರ ಸಾವು

    ಹ್ಯಾಂಡ್ ಬ್ರೇಕ್ ಹಾಕದ್ದರಿಂದ ಕಾಲುವೆಗೆ ಬಿತ್ತು ಕಾರು – ನಾಲ್ವರ ಸಾವು

    ಜೈಪುರ: ಹ್ಯಾಂಡ್ ಬ್ರೇಕ್ ಹಾಕದ ಪರಿಣಾಮ ಕಾರೊಂದು ಕಾಲುವೆಗೆ ಮುಳುಗಿ ನಾಲ್ವರು ಮೃತಪಟ್ಟಿರುವ ಘಟನೆ ಬುಧವಾರ ರಾಜಸ್ಥಾನ ಹನುಮನ್‍ಗರ್ ಜಿಲ್ಲೆಯಲ್ಲಿ ನಡೆದಿದೆ.

    ಕಾರಿನಲ್ಲಿ ದಂಪತಿ ಸೇರಿದಂತೆ ಅವರ ಮಗಳು ಮತ್ತು ಸಂಬಂಧಿಕರು ಸಿಕಾರ್‍ನಿಂದ ರಾವತ್ಸರ್‍ಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತಪಟ್ಟವರ ಕುಟುಂಬ ಸ್ನೇಹಿತ ರಮೇಶ್ ಕುಮಾರ್ ಎಂಬವರು ಕಾರು ಚಲಾಯಿಸುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿದ್ದಾರೆ. ಆದರೆ ಹ್ಯಾಂಡ್ ಬ್ರೇಕ್ ಹಾಕುವುದನ್ನು ಮರೆತು ಕಾರನ್ನು ಹಾಗೇ ಬಿಟ್ಟು ಹೋದ ಪರಿಣಾಮ ಕಾರು ಉರುಳಿ ಇಂದಿರಾಗಾಂಧಿ ಕಾಲುವೆಗೆ ಬಿದ್ದಿದೆ ಎಂದು ಹುಮನ್‍ಗರ್ ಪಟ್ಟಣದ ಪೊಲೀಸ್ ಠಾಣೆ ಇನ್‍ಚಾರ್ಜ್ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.

    ಘಟನೆಯಲ್ಲಿ ಮೃತಪಟ್ಟವರನ್ನು ವಿನೋದ್ ಕುಮಾರ್(45), ಪತ್ನಿ ರೇಣು(42) ಹಾಗೂ 15 ವರ್ಷದ ಮಗಳು ಮತ್ತು ಅವರ ಸಂಬಂಧಿಕರಾದ ಸುನೀತ ಭತಿ(40) ಎಂದು ಪೊಲೀಸರು ಗುರುತಿಸಿದ್ದಾರೆ. ಇದೀಗ ಮೀನು ಹಿಡಿಯುವವರ ಸಹಾಯದಿಂದ ಮೃತಪಟ್ಟವರ ದೇಹವನ್ನು ಕಾಲುವೆಯಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಸಲಾಡ್ ವಾಸನೆ ಬರ್ತಿದೆ ಎಂದಿದ್ದಕ್ಕೆ ಗ್ರಾಹಕನ ತಲೆಗೆ ಹೊಡೆದ ಹೋಟೆಲ್ ಸಿಬ್ಬಂದಿ

    ಸಲಾಡ್ ವಾಸನೆ ಬರ್ತಿದೆ ಎಂದಿದ್ದಕ್ಕೆ ಗ್ರಾಹಕನ ತಲೆಗೆ ಹೊಡೆದ ಹೋಟೆಲ್ ಸಿಬ್ಬಂದಿ

    ಜೈಪುರ: ಹಳೆಯ ಸಲಾಡ್‍ನನ್ನು ಸರ್ವ್ ಮಾಡಿದ್ದೀರಾ ಎಂದು ಆರೋಪಿಸಿದ ಗ್ರಾಹಕನಿಗೆ ಹೋಟೆಲ್ ಮಾಲೀಕ ಮತ್ತು ಸಿಬ್ಬಂದಿ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಜೋಧ್ ಪುರ್‍ನಲ್ಲಿ ನಡೆದಿದೆ.

    ಹಲ್ಲೆಗೊಳಗಾಗಿರುವ ವ್ಯಕ್ತಿಯನ್ನು ಮಹೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಈತ ತಡರಾತ್ರಿ ಹೋಟೆಲ್ ವೊಂದರಲ್ಲಿ ಸಲಾಡ್ ಆರ್ಡರ್ ಮಾಡಿದ್ದಾನೆ. ಅಂತೆಯೇ ಸರ್ವರ್ ಸಲಾಡ್ ತಂದುಕೊಟ್ಟಿದ್ದಾನೆ. ಆದರೆ ಅದು ವಾಸನೆ ಬಂದಿದೆ. ಹೀಗಾಗಿ ಸಿಂಗ್, ಸಿಬ್ಬಂದಿ ಹಳೆಯ ಸಲಾಡ್ ನೀಡಿದ್ದಾನೆ ಎಂದು ಹೋಟೆಲ್ ಮಾಲೀಕನಿಗೆ ಕಂಪ್ಲೇಟ್ ಮಾಡಿದ್ದಾರೆ. ಬಳಿಕ ಹೋಟೆಲ್‍ನಲ್ಲಿ ಕೆಲಸ ಮಾಡುವವರಿಗೆ ನಿಂದಿಸಲು ಆರಂಭಿಸಿದ್ದಾರೆ. ಈ ವಿಚಾರವಾಗಿ ಆತ ಮತ್ತು ಹೋಟೆಲ್ ಸಿಬ್ಬಂದಿ ನಡುವೆ ವಾದ-ವಿವಾದ ಆರಂಭವಾಗಿದೆ. ಕೊನೆಗೆ ಜಗಳ ವಿಕೋಪಕ್ಕೆ ತಿರುಗಿ ಹೋಟೆಲ್ ನೌಕರರು ಮಹೇಂದ್ರ ಸಿಂಗ್ ತಲೆಗೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ.

    ಕೂಡಲೇ ಮಹೆಂದ್ರ ಸಿಂಗ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಹಾಮಂದಿರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹೇಂದ್ರ ಸಿಂಗ್ ಊಟ ಮಾಡಲು ಹೋಟೆಲ್ ಗೆ ತೆರಳಿದ್ದಾಗ ಹಳೆಯ ಸಲಾಡ್ ನೀಡಿದ್ದಕ್ಕೆ ದೂರು ನೀಡಿದ್ದಾರೆ. ಇದರಿಂದ ಕೋಪಗೊಂಡ ಹೋಟೆಲ್ ಸಿಬ್ಬಂದಿ ಶ್ರವಣ್ ಸಿಂಗ್ ಎಂಬಾತ ಕೆಟ್ಟ ರೀತಿಯಲ್ಲಿ ಮಹೇಂದ್ರ ಸಿಂಗ್‍ರನ್ನು ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

  • ರಾಹುಲ್ ಕಂಗೆಡಿಸಿದೆ ರಾಜಸ್ಥಾನ ಸಿಎಂ ಆಯ್ಕೆ

    ರಾಹುಲ್ ಕಂಗೆಡಿಸಿದೆ ರಾಜಸ್ಥಾನ ಸಿಎಂ ಆಯ್ಕೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ನೆಲೆಯಿಲ್ಲದೇ ಕಂಗಾಲಾಗಿದ್ದ ಕಾಂಗ್ರೆಸ್ ಪಂಚರಾಜ್ಯಗಳ ಚುನಾವಣೆ ಬಳಿಕ ಚೇತರಿಕೆ ಕಂಡಿದೆ. ಬಿಜೆಪಿ ಭದ್ರಕೋಟೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಡದಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ ಪಕ್ಷದಲ್ಲೀಗ ಸಿಎಂ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಿದೆ.

    ಸಿಎಂ ಆಯ್ಕೆ ಕುರಿತು ನವದೆಹಲಿ ತುಘಲಕ್ ರಸ್ತೆಯ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆಸಿತ್ತು. ಈ ಸಂಬಂಧ ಮಧ್ಯಪ್ರದೇಶದ ನೂತನ ಸಿಎಂ ಆಗಿ ಕಮಲ್‍ನಾಥ್‍ರನ್ನು ಅಧಿಕೃತವಾಗಿ ಆಯ್ಕೆ ಮಾಡಿ ಹೈಕಮಾಂಡ್ ಘೋಷಣೆ ಹೊರಡಿಸಿ ಹೊಸ ಯುಗ ಆರಂಭವಾಗಲಿ ಅಂತ ಶುಭಕೋರಿದೆ.

    ಆದ್ರೆ ರಾಜಸ್ಥಾನ ಸಿಎಂ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್ ನಾಯಕರಿಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವೆ ತೀವ್ರ ಪೈಪೋಟಿ ಇದ್ದು, ಮಧ್ಯರಾತ್ರಿ 12 ಗಂಟೆವರೆಗೆ ಸಭೆ ನಡೆಸಿದ್ರೂ ಅಂತಿಮವಾಗಿಲ್ಲ. ಉನ್ನತ ಮೂಲಗಳ ಪ್ರಕಾರ ಅಶೋಕ್ ಗೆಹ್ಲೋಟ್ ಅವರಿಗೆ ಸಿಎಂ ಪಟ್ಟ ನೀಡಲು ಸೋನಿಯಾ, ರಾಹುಲ್ ನಿರ್ಧರಿಸಿದ್ದಾರೆ. ಆದ್ರೆ ಸಚಿನ್ ಪೈಲಟ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಜೈಪುರದಲ್ಲಿ ಸಚಿನ್ ಪೈಲಟ್ ಪರವಾಗಿ ಪ್ರತಿಭಟನೆಗಳು ಜೋರಾಗಿದ್ದು, ರಾಹುಲ್ ಗಾಂಧಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

    ಛತ್ತೀಸ್‍ಗಡ ಸಿಎಂ ಆಯ್ಕೆ ಸಂಬಂಧ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಘೇಲಾ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಟಿ.ಎಸ್. ಸಿಂಗ್ದೇವ್, ಚರಣ್ ದಾಸ್ ಮಹಾಂತ್‍ಗೆ ರಾಹುಲ್ ಗಾಂಧಿ ಬುಲಾವ್ ನೀಡಿದ್ದಾರೆ. ಮೂವರು ನಾಯಕರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಲಿದ್ದು ಇಂದು ಬಹುತೇಕ ಎರಡು ರಾಜ್ಯಗಳಿಗೆ ಸಿಎಂ ಆಯ್ಕೆ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv