Tag: ಪಬ್ಲಿಕ್ ಟಿವಿ Rain

  • ಮಲೆನಾಡಲ್ಲಿ ಮಳೆ ಅಬ್ಬರ – ಅಜ್ಜಿ ಪಾರು, ಹೆದ್ದಾರಿ ಬಂದ್, ಮನೆ-ಕಟ್ಟಡಗಳ ಕುಸಿತ

    ಮಲೆನಾಡಲ್ಲಿ ಮಳೆ ಅಬ್ಬರ – ಅಜ್ಜಿ ಪಾರು, ಹೆದ್ದಾರಿ ಬಂದ್, ಮನೆ-ಕಟ್ಟಡಗಳ ಕುಸಿತ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಕೂಡ ಮಳೆಯ ಅಬ್ಬರ ಮುಂದುವರಿದಿದೆ. ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕಳಸ ತಾಲೂಕಿನಲ್ಲಿ ಭಾರೀ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

    ಕಳೆದ ರಾತ್ರಿಯಿಂದ ಸುರಿಯುತ್ತಿರುವ ಮಹಾ ಮಳೆಗೆ ಕೊಪ್ಪ ತಾಲೂಕಿನ ಗುಡ್ಡೆ ತೋಟ ಗ್ರಾಮದ ಬಳಿ ಬೈಂದೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಳಿ ರಸ್ತೆ ಬದಿಯಲ್ಲಿ ಗುಡ್ಡ ಕುಸಿದಿದ್ದು, ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದೇ ವೇಳೆ, ಜಯಪುರ ಸಮೀಪದ ಕೊಗ್ರೆ ಗ್ರಾಮದಲ್ಲಿ ಬೃಹತ್ ಮರಗಳು ರಸ್ತೆಗುರುಳಿವೆ ಹಾಗೂ ಧರೆ ಕುಸಿತ ಉಂಟಾಗಿದೆ.

    ಧಾರಾಕಾರ ಮಳೆಯಿಂದ ಮರ-ಮಣ್ಣು ರಸ್ತೆಗೆ ಉರುಳಿ ಬಿದ್ದಿದ್ದರಿಂದ ಕೊಗ್ರೆ-ಬಸರೀಕಟ್ಟೆ ಗ್ರಾಮದ ಸಂಪರ್ಕ ಕೂಡ ಸಂಪೂರ್ಣ ಬಂದ್ ಆಗಿದ್ದು, ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲೂ ಭಾರೀ ಗಾಳಿ-ಮಳೆಗೆ ಸೀತಮ್ಮ ಎಂಬವರ ಮನೆ ಕುಸಿದಿದೆ. ಮನೆಯಲ್ಲೇ ಅಜ್ಜಿ ಒಬ್ಬರೇ ವಾಸವಿದ್ದು, ಮನೆ ಬೀಳುವುದನ್ನ ಕಂಡು ಹೊರಗಡೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತವೊಂದು ಪಾರಾಗಿದೆ.

    ಕಳಸ ತಾಲೂಕಿನ ಕುದುರೆಮುಖ ಸಮೀಪದ ನೆಲ್ಲಿಬೀಡು ಗ್ರಾಮದಲ್ಲಿ ಭಾರೀ ಮಳೆ-ಗಾಳಿಗೆ ಬಸ್ ತಂಗುದಾಣ ಕುಸಿದು ಬಿದ್ದಿದೆ. ಆ ಕುಸಿದ ಕಟ್ಟಡದ ಮತ್ತೊಂದು ಭಾಗದಲ್ಲಿ ಅಂಚೆ ಕಚೇರಿ ಇತ್ತು. ಆದರೆ, ಅಂಚೆ ಕಚೇರಿಗೆ ಏನೂ ಆಗಿಲ್ಲ. ಇನ್ನೂ ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ನೀರು ಹರಿದಿದ್ದು ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ವೇಗವಾಗಿ ಹರಿಯುತ್ತಿರೋ ಭದ್ರಾ ನದಿ ನೀರು ಸೇತುವೆ ಅಪ್ಪಳಿಸಿ ನೀರು ಸೇತುವೆ ಮೇಲೆ ನುಗ್ಗುತ್ತಿದ್ದು, ಈ ಸೇತುವೆ ಸಂಪೂರ್ಣ ಮುಳುಗಡೆಯಾದರೆ, ಮಾವಿನಹೊಳ್ಳ, ಮೆಣಸಿನಹಾಡ್ಯ, ತುರಾ, ಬಲಿಗೆ ಸೇರಿದಂತೆ ಏಳೆಂಟು ಗ್ರಾಮದ ಜನ ತೀವ್ರ ಸಂಕಷ್ಟಕ್ಕೀಡಾಗಲಿದ್ದಾರೆ.

    ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ದಾರದಹಳ್ಳಿ, ಬಣಕಲ್, ಚಾರ್ಮಾಡಿ ಘಾಟ್, ಬಾಳೂರು ಸುತ್ತಮುತ್ತ ಧಾರಾಕಾರ ಮಳೆ ಸುರಿದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ನಾಡಿನ ಜೀವನದಿಗಳಾದ ತುಂಗಾ-ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಮಲೆನಾಡಲ್ಲಿ ಇಂದು ಮಧ್ಯಾಹ್ನದ ಬಳಿಕ ಮಳೆಯ ಪ್ರಮಾಣ ಕೊಂಚ ತಗ್ಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರು ಪ್ರಾರಂಭ – ಡಿಸಿಗಳ ಜೊತೆ ಸಿಎಂ ಸಭೆ

  • ಬೆಂಗಳೂರಿನಲ್ಲಿ ಮುಂದಿನ 2 ದಿನ ಮಳೆ ಸಾಧ್ಯತೆ

    ಬೆಂಗಳೂರಿನಲ್ಲಿ ಮುಂದಿನ 2 ದಿನ ಮಳೆ ಸಾಧ್ಯತೆ

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಕರ್ನಾಟಕದ ಹಲವೆಡೆ ವರುಣನ ಆರ್ಭಟ ಮುಂದುವರಿದೆ. ಜೊತೆಗೆ ರಾಜಧಾನಿ ಬೆಂಗಳೂರಿನಲ್ಲಿಯೂ ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಿನ್ನೆ ಹಾಗೂ ಇಂದು ಉತ್ತಮ ಮಳೆಯಾಗಿದ್ದು, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ 22 ಸೆಂ.ಮೀ. ಮಳೆಯಾಗಿದೆ. ಬೆಳಗಾವಿಯ ನಿಪ್ಪಾಣಿಯಲ್ಲಿ 14 ಸೆಂಟಿ ಮೀಟರ್ ಮಳೆಯಾಗಿದೆ. ಉತ್ತರ ಕನ್ನಡದ ಮಂಚಿಗೆರೆಯಲ್ಲಿ 11 ಸೆಂ.ಮೀ. ಮಳೆ, ಚಿಕ್ಕಮಗಳೂರಿನ ಶೃಂಗೇರಿಯಲ್ಲಿ 12 ಸೆಂ.ಮೀ. ಮಳೆಯಾಗಿದೆ. ಜೂನ್ 17ರಿಂದ 21ರವರೆಗೆ ವ್ಯಾಪಕ ಮಳೆ ಸಾಧ್ಯತೆಯಿದೆಯೆಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

    ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ವ್ಯಾಪಕ ಮಳೆಯಾಗಿದ್ದು, ಜೂನ್ 17, 18 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಹಾಗೂ ಜೂನ್ 19, 20ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಮಳೆ ಜೂನ್ 17ರಂದು ಆರೆಂಜ್ ಅಲರ್ಟ್ ಹಾಗೂ ಜೂನ್ 18ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿಯಲ್ಲಿ ಯೆಲ್ಲೋ ಅಲರ್ಟ್, 3 ಜಿಲ್ಲೆಗಳಲ್ಲಿ ಜೂನ್ 17, 18ರಂದು ಯೆಲ್ಲೋ ಅಲರ್ಟ್‍ನ್ನು ಹವಾಮಾನ ಇಲಾಖೆ ಘೋಷಣೆ ಮಾಡಿದೆ. ಜೊತೆಗೆ ಬೆಂಗಳೂರಲ್ಲಿಯೂ ಮುಂದಿನ ಎರಡು ದಿನ ಮಳೆಯಾಗುವ ನಿರೀಕ್ಷೆಯಿದೆಯೆಂದು ತಿಳಿಸಿದೆ. ಇದನ್ನೂ ಓದಿ: ಮಲೆನಾಡಲ್ಲಿ ಮುಂಗಾರು ಚುರುಕು- ಜೋಗಕ್ಕೆ ಜೀವದ ಕಳೆ

  • ಮುಂಗಾರಿನ ಅಬ್ಬರಕ್ಕೆ ಕೊಡಗು ತತ್ತರ – ಗಾಳಿ ಮಳೆಗೆ ವಿದ್ಯುತ್, ರಸ್ತೆ ಸಂಪರ್ಕ ಕಡಿತ

    ಮುಂಗಾರಿನ ಅಬ್ಬರಕ್ಕೆ ಕೊಡಗು ತತ್ತರ – ಗಾಳಿ ಮಳೆಗೆ ವಿದ್ಯುತ್, ರಸ್ತೆ ಸಂಪರ್ಕ ಕಡಿತ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರಿನ ಅಬ್ಬರ ಮತ್ತಷ್ಟು ಹೆಚ್ಚಿದೆ. ಕಳೆದ ರಾತ್ರಿಯಿಂದ ಜಿಲ್ಲಾದ್ಯಂತ ಗಾಳಿ ಸಹಿತ ಮಳೆಯಾಗುತ್ತಿದ್ದು, ಕೊಡಗಿನ ವಿವಿಧೆಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸಂಪರ್ಕ ಹಾಗೂ ರಸ್ತೆ ಅಡಚಣೆಯಾಗಿದೆ.

    ಕೊಡಗು ಜಿಲ್ಲೆಯಲ್ಲಿ ಮಳೆಯ ಅರ್ಭಟ ನಾಲ್ಕು ಐದು ದಿನಗಳಿಂದ ಹೆಚ್ಚಾಗುತ್ತಿದೆ. ಇದರಿಂದಾಗಿ ಗುಡ್ಡಗಾಡಿನ ಜನರು ಹಾಗೂ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ. ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಬಲುಮುರಿಯಲ್ಲಿ ಪಾರಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಬಲುಮರಿ ಸೇತುವೆ ಮೇಲೆ 9 ಅಡಿಯಷ್ಟು ನೀರು ಹರಿಯುತ್ತಿದೆ. ಇದರಿಂದಾಗಿ ಪಾರಾಣೆ, ಕೂಡು ಪರಂಬು ಮತ್ತು ನಾಲ್ಕು ಮೈಲ್ ಗ್ರಾಮಗಳಿಗೆ ಸಂಚಾರಕ್ಕೆ ಅಡ್ಡಿಯಾಗಿದೆ. ಅಷ್ಟು ಗ್ರಾಮದಲ್ಲಿರುವ 60ಕ್ಕೂ ಹೆಚ್ಚು ಕುಟುಂಬಗಳಿಗೆ ಇದೀಗ ಸೇತುವೆ ಸಂಪರ್ಕ ಇಲ್ಲದೆ ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ ಮೇಲ್ಸೇತುವೆ ಬಳಸಿಕೊಂಡು ಸುಮಾರು 7 ಕಿಲೋಮೀಟರ್ ಸುತ್ತಿ ಬಳಸಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿಯಲ್ಲಿ ಮಳೆ ಎರಡು ಮೂರು ದಿನ ಮುಂದುವರಿದರೆ ಬಲುಮುರಿ ಗ್ರಾಮದ ಜನರಿಗೂ ಪ್ರವಾಹದ ಭೀತಿ ಎದುರಾಗಲಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಮಳೆಯ ಅರ್ಭಟ ಮುಂದುವರಿದಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಅಲ್ಲದೇ ವಿರಾಜಪೇಟೆ ತಾಲೂಕಿನ ಬೇತ್ರಿ ಸೇತುವೆ ಬಳಿಯು ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಅಲ್ಲದೇ ಮಂಜಿನ ನಗರಿ ಮಡಿಕೇರಿಯಲ್ಲೂ ಮಧ್ಯಾಹ್ನದ ಬಳಿಕ ಮಳೆ ತೀವ್ರಗೊಂಡಿದೆ. ಮಡಿಕೇರಿಯ ಸುತ್ತಮುತ್ತ ಧಾರಕಾರ ಮಳೆಯಾಗುತ್ತಿದ್ದು, ಭಾರೀ ಮಳೆಗೆ ಮಡಿಕೇರಿ ನಗರ ಮನೆ-ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.

    ನಗರದ ಕೈಗಾರಿಕಾ ಬಡಾವಣೆ ಕುಮಾರ್ ಎಂಬವರ ಮನೆಗೆ ಕಾಲುವೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿ ಇದ್ದ ಹಲವು ವಸ್ತುಗಳು ನೀರು ಪಾಲಾಗಿದೆ. ಮತ್ತೊಂದು ಮೊಬೈಲ್ ಶಾಪ್ ಗೂ ನೀರು ನುಗ್ಗಿರುವುದರಿಂದ ರವೂಫ್ ಎಂಬವರ ಅಂಗಡಿಯಲ್ಲಿ ಇದ್ದ ಸಾವಿರಾರು ರೂಪಾಯಿ ಮೌಲ್ಯದ ಮೊಬೈಲ್ ಬಿಡಿ ಭಾಗಗಳು ನೀರು ಪಾಲಾಗಿದೆ. ಘಟನ ಸ್ಥಳಕ್ಕೆ ಮಡಿಕೇರಿ ನಗರಸಭೆ ಆಯುಕ್ತ ರಾಮದಾಸ್. ವಾಡ್9ನ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ನಾಲ್ಕು ಐದು ದಿನದ ಮಳೆಗೆ ಇಲ್ಲಿಲ್ಲದ ಅವಾಂತರಗಳು ಸೃಷ್ಟಿಯಾಗಿದ್ದು, ಗ್ರಾಮೀಣ ಭಾಗದ ಜನರು ಕತ್ತಲೆಯಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ:ಮಲೆನಾಡಲ್ಲಿ ಭಾರೀ ಗಾಳಿ, ಮಳೆ – ಚಾರ್ಮಾಡಿಯಲ್ಲಿ ಧರೆಗುರುಳಿದ ಮರ

  • ಮಲೆನಾಡಲ್ಲಿ ಭಾರೀ ಗಾಳಿ, ಮಳೆ – ಚಾರ್ಮಾಡಿಯಲ್ಲಿ ಧರೆಗುರುಳಿದ ಮರ

    ಮಲೆನಾಡಲ್ಲಿ ಭಾರೀ ಗಾಳಿ, ಮಳೆ – ಚಾರ್ಮಾಡಿಯಲ್ಲಿ ಧರೆಗುರುಳಿದ ಮರ

    ಚಿಕ್ಕಮಗಳೂರು: ಭಾರೀ ಗಾಳಿ-ಮಳೆಗೆ ಎರಡು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಇದನ್ನೂ ಓದಿ: ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ

    ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ರಾತ್ರಿಯಿಂದ ಒಂದೇ ಸಮನೆ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಮಲೆನಾಡಿಗರ ಜನಜೀವನ ಕೂಡ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರ, ಚಾರ್ಮಾಡಿ ಘಾಟ್, ಬಾಳೂರು, ಕಳಸ, ಬಣಕಲ್ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಒಂದೇ ಸಮನೆ ಬೀಸುತ್ತಿರುವ ಗಾಳಿ ಹಾಗೂ ಸುರಿಯುತ್ತಿರುವ ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ಎರಡು ಮರಗಳು ಧರೆಗುರುಳಿವೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಬಣಕಲ್ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಮೂಲಕ ಧರೆಗುರುಳಿದ್ದ ಮರಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

    ಲಾಕ್‍ಡೌನ್ ಇರುವುದರಿಂದ ವಾಹನ ಸಂಚಾರ ಹೆಚ್ಚಿಲ್ಲದ ಕಾರಣ ಟ್ರಾಫಿಕ್ ಜಾಮ್ ಸೇರಿದಂತೆ ಯಾವುದೇ ತೊಂದರೆಯಾಗಿಲ್ಲ. ಕಳೆದ ಎರಡು ವರ್ಷವೂ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ಚಾರ್ಮಾಡಿ ಘಾಟಿಯಲ್ಲಿ ಭಾರೀ ಪ್ರಮಾಣದಲ್ಲಿ ಬೆಟ್ಟ-ಗುಡ್ಡಗಳು ಕುಸಿದಿದ್ದವು. ಇದರಿಂದ ಚಾರ್ಮಾಡಿ ಘಾಟಿಯಲ್ಲಿ ಮೂರು ತಿಂಗಳುಗಳ ಕಾಲ ಎಲ್ಲಾ ರೀತಿಯ ವಾಹನಗಳನ್ನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಇದನ್ನೂ ಓದಿ:ಮಲೆನಾಡಲ್ಲಿ ಭಾರೀ ಮಳೆ, ಮುಳುಗುವ ಭೀತಿಯಲ್ಲಿ ಹೆಬ್ಬಾಳೆ ಸೇತುವೆ, ಭೂ ಕುಸಿತ

    ಚಿಕ್ಕಮಗಳೂರು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಲು ಇರುವುದು ಚಾರ್ಮಾಡಿ ಘಾಟ್ ಒಂದೇ. ಬೇರೆ ಮಾರ್ಗವಿದ್ದರೂ 60-70 ಕಿ.ಮೀ. ಸುತ್ತಿಕೊಂಡು ಹೋಗಬೇಕು. ಈ ಮಾರ್ಗ ರಾಜ್ಯದ ಜನರಿಗೆ ತೀವ್ರ ಅನಿವಾರ್ಯ ಹಾಗೂ ಅಗತ್ಯವಿರುವ ಮಾರ್ಗವಾಗಿದೆ. ಈ ದಾರಿ ಕೇವಲ ರಸ್ತೆಯಾಗಿರದೆ ಸಾವಿರಾರು ಜನರ ಜೀವ ಉಳಿಸುವ ಸಂಜೀವಿನಿಯೂ ಆಗಿದೆ. ಇದನ್ನೂ ಓದಿ:ಕೊಡಗಿನಲ್ಲಿ ಮಳೆ ಆರ್ಭಟ- ಮನೆಗಳಿಗೆ ಹಾನಿ

  • ಉಡುಪಿಯಲ್ಲಿ ರೆಡ್ ಅಲರ್ಟ್ – ಬೈಂದೂರಲ್ಲಿ 102 ಮಿಲಿ ಮೀಟರ್ ಮಳೆ

    ಉಡುಪಿಯಲ್ಲಿ ರೆಡ್ ಅಲರ್ಟ್ – ಬೈಂದೂರಲ್ಲಿ 102 ಮಿಲಿ ಮೀಟರ್ ಮಳೆ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಭರ್ಜರಿಯಾಗಿ ಮುಂಗಾರು ಮಳೆ ಸುರಿಯುತ್ತಿದೆ. ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಇಂದು ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಪಶ್ಚಿಮಘಟ್ಟದ ತಪ್ಪಲಾದ, ಕಾರ್ಕಳ ಹೆಬ್ರಿಯಲ್ಲಿ ಕಳೆದ ರಾತ್ರಿಯಿಂದಲೇ ಗುಡುಗು ಸಹಿತ ಭಾರೀ ಮಳೆ ಬಿದ್ದಿದೆ.

    ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆಯ ಜೊತೆ ಗಾಳಿ ಕೂಡ ರಭಸದಿಂದ ಬೀಸುತ್ತಿದೆ. ಉಡುಪಿ ಜಿಲ್ಲೆಯ 24 ಗಂಟೆಯಲ್ಲಿ 86 ಮಿಲಿ ಮೀಟರ್ ಸರಾಸರಿ ಮಳೆಯಾಗಿದೆ. ಬೈಂದೂರು ತಾಲೂಕಿನಲ್ಲಿ ಅತೀಹೆಚ್ಚು 102 ಮಿಲಿಮೀಟರ್ ಮಳೆ ಬಿದ್ದಿದೆ. ಜಿಲ್ಲೆಯಾದ್ಯಂತ ಮುಂದಿನ ನಾಲ್ಕು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಇದನ್ನೂ ಓದಿ:  ಭಾರೀ ಮಳೆ- ಕಬಿನಿ ಒಳ ಹರಿವು ಹೆಚ್ಚಳ

    ಬ್ರಹ್ಮಾವರ 93 ಮಿ.ಮೀ, ಉಡುಪಿ 87, ಕಾಪು 94, ಕುಂದಾಪುರ 86, ಕಾರ್ಕಳ 83, ಹೆಬ್ರಿ 53 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ವಿಸ್ತರಣೆ ಮಾಡಲಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಮಳೆ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರಕ್ಕೆ ಇಳಿದು ಮೀನುಗಾರಿಕೆ ಮಾಡದಂತೆ ಉಡುಪಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣ ಸಂಪರ್ಕಿಸುವ ಸೇತುವೆ ಬಿರುಕು – ಬದಲಿ ಮಾರ್ಗ ವ್ಯವಸ್ಥೆ

  • ವಿಜಯಪುರ ಜಿಲ್ಲೆಯಾದ್ಯಂತ ಮಳೆಯ ಆರ್ಭಟ – ಬಾಳೆ ನಾಶಗೊಳಿಸಿದ ರೈತ ಮಹಿಳೆ

    ವಿಜಯಪುರ ಜಿಲ್ಲೆಯಾದ್ಯಂತ ಮಳೆಯ ಆರ್ಭಟ – ಬಾಳೆ ನಾಶಗೊಳಿಸಿದ ರೈತ ಮಹಿಳೆ

    ವಿಜಯಪುರ: ಬಿಸಿಲನಾಡು ವಿಜಯಪುರ ಜಿಲ್ಲೆಯಲ್ಲಿಂದು ವರುಣ ಆರ್ಭಟ ಭಾರೀ ಸದ್ದು ಮಾಡಿದೆ. ನಗರ ಸೇರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದೆ. ಬಿಟ್ಟು ಬಿಡದೇ ಸತತ ಎರಡು ಗಂಟೆಗಳ ಕಾಲ ಮಳೆ ಸುರಿದಿದೆ. ಮುದ್ದೇಬಿಹಾಳ, ಸಿಂದಗಿ, ಇಂಡಿ, ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮಳೆರಾಯ ಆರ್ಭಟಿಸಿದ್ದಾನೆ.

    ಈಗಾಗಲೇ ಮುಂಗಾರು ಬಿತ್ತನೆಯಲ್ಲಿ ಜಿಲ್ಲೆಯ ರೈತರು ತೊಡಗಿದ್ದಾರೆ. ಈ ತಿಂಗಳ ಪ್ರಾರಂಭದಿಂದಲೇ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿದ್ದು, ವರುಣನಿಗೆ ರೈತರು ಬಹುಪರಾಕ್ ಎಂದಿದ್ದಾರೆ. ಇದನ್ನೂ ಓದಿ:ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ವಾರ ಭಾರೀ ಮಳೆ- ರೆಡ್ ಅಲರ್ಟ್ ಘೋಷಣೆ

    ಬಾಳೆ ಬೆಳೆ ನಾಶಮಾಡಿದ ರೂತ ಮಹಿಳೆ
    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಗ್ರಾಮದಲ್ಲಿ ಬಾಳೆ ಮಾರಾಟವಾಗದ್ದಕ್ಕೆ ತಾನೇ ಬೆಳೆದ ಬೆಳೆಯನ್ನು ರೈತ ಮಹಿಳೆ ನಾಶ ಮಾಡಿದ್ದಾರೆ. ಮೂರು ಲಕ್ಷ ಖರ್ಚು ಮಾಡಿ, 5 ಎಕರೆಯಲ್ಲಿ ಬಾಳೆ ಬೆಳೆಯನ್ನ ಸಂಗಮ್ಮ ಹಿರೇಮಠ ಬೆಳೆದಿದ್ದರು. ಆದರೆ ಬಾಳೆ ಫಸಲು ಬಂದರೂ ಮಾರಾಟವಾಗಲಿಲ್ಲ. ಲಾಕ್‍ಡೌನ್ ನಿಂದ ಉತ್ತಮ ಬೆಲೆ ಸಿಗಲೆ ಇಲ್ಲ. ಕೇವಲ 2 ರೂ ಮಾರುಕಟ್ಟೆಯಲ್ಲಿ ಬೆಲೆ ಕೇಳುತ್ತಿದ್ದರು. ನಂತರ ಮಳೆ ಹೊಡೆತಕ್ಕೆ ಬಾಳೆ ಬೆಳೆ ಕೊಳೆತು ಹೋಗಿದೆ. ಹೀಗಾಗಿ ಜೆಸಿಬಿ ಮೂಲಕ ಸಂಗಮ್ಮ ಸಂಪೂರ್ಣ ಬಾಳೆ ಬೆಳೆ ನಾಶ ಮಾಡಿದ್ದಾರೆ. ರಾಜ್ಯ ಸರಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ರೈತ ವರ್ಗ ಒತ್ತಾಯಿಸಿದೆ.

    ಶನಿವಾರ ದಕ್ಷಿಣ ಕನ್ನಡ ಮಂಗಳೂರು ಸೇರಿದಂತೆ ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲೂ ಬಿರುಗಾಳಿ ಸಹಿತ ಭಾರೀ ಮಳೆಯ ಕೆಲ ಗಂಟೆಗಳ ಕಾಲ ಮಳೆ ಅಬ್ಬರಿಸಿದೆ. ಇನ್ನೂ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಮೂರು ದಿನಗಳ ಕಾಲ ಜಿಲ್ಲಾದ್ಯಂತ ಎಲ್ಲೋ ಅಲರ್ಟ್ ಘೋಷಿಸಿಲಾಗಿತ್ತು. ಗಾಳಿಯ ರಭಸ ಹೆಚ್ಚಾಗಿದ್ದರಿಂದ ನದಿ ಹಾಗೂ ಸಮುದ್ರ ತೀರದ ಜನ ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ಕೂಡ ನೀಡಿದೆ. ಇದನ್ನೂ ಓದಿ: ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

  • ಕಾಫಿನಾಡು ಮಲೆನಾಡು ಭಾಗದಲ್ಲಿ ಭಾರೀ ಮಳೆ – ರೈತರ ಮೊಗದಲ್ಲಿ ಮಂದಹಾಸ

    ಕಾಫಿನಾಡು ಮಲೆನಾಡು ಭಾಗದಲ್ಲಿ ಭಾರೀ ಮಳೆ – ರೈತರ ಮೊಗದಲ್ಲಿ ಮಂದಹಾಸ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದೆ. ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟ್, ಹೊರಟ್ಟಿ ಸುತ್ತಮುತ್ತ ಮಳೆರಾಯ ಅಬ್ಬರಿಸಿ ಬೊಬ್ಬರಿದಿದ್ದಾನೆ.

    ಕಳಸ ಭಾಗದಲ್ಲೂ ಮಳೆ ಸುರಿದಿದ್ದು, ಚಿಕ್ಕಮಗಳೂರು ನಗರದಲ್ಲೂ ಸುಮಾರು ಅರ್ಧ ಗಂಟೆಗಳ ಕಾಲ ಸಾಧಾರಣ ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ. ಕಳೆದ ಎಂಟತ್ತು ದಿನದಿಂದ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮಧ್ಯಾಹ್ನದ ನಂತರ ಆರಂಭವಾಗುತ್ತಿರೋ ಮಳೆ ಒಂದೆರಡು ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯುತ್ತಿದೆ. ಇಂದು ಕೂಡ ಮಲೆನಾಡಿನ ಕೆಲ ಭಾಗಗಳಲ್ಲಿ ಮಳೆ ಮುಂದುವರಿದಿದೆ. ಸಂಜೆ ಬಳಿಕ ಆರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಗುಡುಗು-ಸಿಡಿಲಿನೊಂದಿಗೆ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ.

    ಕಳೆದ ಎಂಟತ್ತು ದಿನಗಳಿಂದ ಜಿಲ್ಲೆಯಲ್ಲಿ ಪ್ರತಿ ದಿನ ಮಧ್ಯಾಹ್ನ – ಸಂಜೆಯಾಗುತ್ತಿದ್ದಂತೆ ಮಳೆ ಆರಂಭವಾಗುತ್ತಿದ್ದು ರೈತರು, ಕಾಫಿ-ಅಡಿಕೆ-ಮೆಣಸು ಬೆಳೆಗಾರರಿಗೆ ಬೆಳೆಗೆ ಬೇಕಾಗುವಷ್ಟು ಮಳೆ ಸುರಿಯುತ್ತಿದ್ದು ಮಲೆನಾಡಿಗರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಮಲೆನಾಡು ಭಾಗದಲ್ಲಿ ಭಾರೀ ಗುಡುಗು-ಸಿಡಿಲಿನೊಂದಿಗೆ ಸುರಿದ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲೇ ಮರಗಳು ಮುರಿದು ಬಿದ್ದಿವೆ.

  • ಮಲೆನಾಡಲ್ಲಿ ವರ್ಷಧಾರೆ – ಲಕ್ಷಾಂತರ ರೂಪಾಯಿ ಹಣ ಉಳಿಸಿದ ಮಳೆರಾಯ

    ಮಲೆನಾಡಲ್ಲಿ ವರ್ಷಧಾರೆ – ಲಕ್ಷಾಂತರ ರೂಪಾಯಿ ಹಣ ಉಳಿಸಿದ ಮಳೆರಾಯ

    ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಳೆಯಾಗಿದ್ದು, ಬಿಸಿಲಿನ ಝಳಕ್ಕೆ ಬಸವಳಿದು ಬೆಂದಿದ್ದ ಮಲೆನಾಡಿಗರಿಗೆ ಮಳೆರಾಯ ತಂಪೆರೆದಿದ್ದಾನೆ.

    ಇಂದು ಬೆಳಗ್ಗೆಯಿಂದಲೂ ಮಲೆನಾಡು ಭಾಗವಾದ ಕಳಸ, ಮೂಡಿಗೆರೆ ಹಾಗೂ ಕೊಪ್ಪ ಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು. ಮೋಡದ ಮಧ್ಯೆಯೂ ಸಿಕ್ಕಾಪಟ್ಟೆ ಸೆಕೆ ಕೂಡ ಇತ್ತು. ಜನ ಸಂಜೆ ವೇಳೆಗೆ ಮಳೆ ಬರಬಹುದು ಎಂದು ಭಾವಿಸಿದ್ದರು. ಅದರಂತೆ ಜಿಲ್ಲೆಯ ಕಳಸ ತಾಲೂಕಿನ ಕಳಸ, ಹೊರನಾಡು, ಹಿರೇಬೈಲು, ಹುಳುವಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ ಮೂರು ಗಂಟೆಯ ನಂತರ ಆರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರವಾಗಿ ಸುರಿದಿದೆ.

    ಭಾರೀ ಬಿಸಿಲಿನಿಂದ ಬಳಲುತ್ತಿದ್ದ ಕಾಫಿ ಗಿಡಗಳಿಗೆ ಬೆಳೆಗಾರರು ಕೂಡ ನಾನಾ ರೀತಿಯಲ್ಲಿ ನೀರಾಯಿಸುತ್ತಿದ್ದರು. ಸ್ಪ್ರಿಂಕ್ಲರ್ ಸಾವಿರಾರು ಹಣ ನೀಡಿ ಕಾಫಿಗಿಡವನ್ನು ತಣ್ಣಗೆ ಇಡಲು ಪ್ರಯತ್ನಿಸುತ್ತಿದ್ದರು. ಸದ್ಯಕ್ಕೆ ಮಲೆನಾಡಲ್ಲಿ ಕಾಫಿ-ಮೆಣಸು-ಅಡಿಕೆಗೆ ನೀರು ಬೇಕಿತ್ತು. ಆದರೆ ಸಂಜೆ ವೇಳೆಗೆ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆಯಾಗಿದ್ದು, ಕಾಫಿ-ಅಡಿಕೆ ಬೆಳೆಗಾರರಿಗೆ ವರವಾಗಿದೆ ಹಾಗೂ ಮಳೆರಾಯ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ಹಣ ಉಳಿಸಿದ್ದಾನೆ.

    ಧಾರಾಕಾರವಾಗಿ ಸುರಿದ ಮಳೆಯಿಂದ ಸುಮಾರು ಇನ್ನೊಂದು ವಾರಗಳ ಕಾಲ ನೀರಾಯಿಸದಿದ್ದರೂ ಯಾವುದೇ ತೊಂದರೆ ಇಲ್ಲ. ಈ ಅಕಾಲಿಕ ಮಳೆಯಿಂದ ಮಲೆನಾಡಿಗರು ಸಂತಸಗೊಂಡಿದ್ದಾರೆ. ಆದರೆ ಈ ಸಂತೋಷದ ಮಧ್ಯೆಯೂ ಮಳೆ ಅಂದರೆ ಮಲೆನಾಡಿಗರಿಗೆ ಭಯ- ಆತಂಕ ಕೂಡ ಇದೆ. ಯಾಕೆಂದರೆ ಕಳೆದೆರಡು ವರ್ಷ ಮಳೆಯ ಅವಾಂತರಗಳನ್ನು ನೆನೆದು ಮಲೆನಾಡಿಗರು ಈ ಮಳೆಯಿಂದ ಸಂತಸಗೊಂಡರೂ ಕೂಡ ಭವಿಷ್ಯದ ಮಳೆ ಬಗ್ಗೆ ಭಯ ಹಾಗೆಯೇ ಇದೆ.