Tag: ಪಬ್ಲಿಕ್ ಟಿವಿ Rain

  • ರಣ ಮಳೆಗೆ ಮಹಾರಾಷ್ಟ್ರದಲ್ಲಿ 100 ಮಂದಿ ಬಲಿ- 1,000ಕ್ಕೂ ಹೆಚ್ಚು ಮಂದಿ ಸ್ಥಳಾಂತರ

    ರಣ ಮಳೆಗೆ ಮಹಾರಾಷ್ಟ್ರದಲ್ಲಿ 100 ಮಂದಿ ಬಲಿ- 1,000ಕ್ಕೂ ಹೆಚ್ಚು ಮಂದಿ ಸ್ಥಳಾಂತರ

    ಮುಂಬೈ: ಮಹಾರಾಷ್ಟ್ರದಲ್ಲಿ ಎಡಬಿಡದೇ ಸುರಿಯುತ್ತಿರುವ ರಣ ಮಳೆಗೆ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ ಮತ್ತು ಹಲವಾರು ಜಿಲ್ಲೆಗಳಲ್ಲಿ ಭೂ ಕುಸಿತ ಮತ್ತು ಪ್ರವಾಹ ಸಂಭವಿಸಿದೆ.

    ಸಶಸ್ತ್ರ ಪಡೆಗಳು ಮತ್ತು ಎನ್‍ಆರ್‍ಎಫ್ ತಂಡ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ತಕ್ಷಣಕ್ಕೆ ಮಳೆ ನಿಲ್ಲುವಂತೆ ಕಾಣಿಸುತ್ತಿಲ್ಲ. ಅಲ್ಲದೇ ಮಹಾರಾಷ್ಟ್ರದ ಕರಾವಳಿ ಕೊಂಕಣ, ಪುಣೆಯ ರಾಯಗಡ, ರತ್ನಾಗಿರಿ, ಸಿಂಧುದುರ್ಗ್, ಪಶ್ಚಿಮ ಮಹಾರಾಷ್ಟ್ರದ ಸತಾರಾ ಮತ್ತು ಕೊಲ್ಹಾಪುರದಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಗಳಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆ ಈ ಆರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

    ಶನಿವಾರ ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ದಕ್ಷಿಣ ಗೋವಾದ ದೂಧ್ ಸಾಗರ್ ಮತ್ತು ಸೋನೌಲಿಮ್ ನಡುವಿನ ಪ್ಯಾಸೆಂಜರ್ ರೈಲು ಮತ್ತು ವಶಿಷ್ಠಿ ನದಿ ಉಕ್ಕಿ ಹರಿದ ಪರಿಣಾಮ ಮಹಾರಾಷ್ಟ್ರದ ಚಿಪ್ಲುನ್ ಮತ್ತು ಕಾಮಥೆ ನಡುವಿನ ಪ್ಯಾಸೆಂಜರ್ ರೈಲು ಹಳಿ ತಪ್ಪಿದೆ.

    ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಲವೆಡೆ ಭೂಕುಸಿತ ಮತ್ತು ಪ್ರವಾಹ ಉಂಟಾಗಿದ್ದು, ಸುಮಾರು 136 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿಯೂ ರಾಯಗಡ ಹಾಗೂ ಸತಾರಾ ಜಿಲ್ಲೆಯಲ್ಲಿ ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಶ್ವಾನದ ಸವಿನೆನಪಿಗೆ ಕಂಚಿನ ಪ್ರತಿಮೆ – ಬಿಡಿಸಲಾಗದ ಮಾಲೀಕ, ಶ್ವಾನದ ನಂಟು

  • ಕೋಟೆನಾಡಿನಲ್ಲಿ ಸತತ ಮೂರು ದಿನಗಳಿಂದ ಜಿಟಿ ಜಿಟಿ ಮಳೆ – ನಾಲ್ಕು ಮನೆಗಳ ಗೋಡೆ ಕುಸಿತ

    ಕೋಟೆನಾಡಿನಲ್ಲಿ ಸತತ ಮೂರು ದಿನಗಳಿಂದ ಜಿಟಿ ಜಿಟಿ ಮಳೆ – ನಾಲ್ಕು ಮನೆಗಳ ಗೋಡೆ ಕುಸಿತ

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ವರುಣನ ಅಬ್ಬರ ಜೋರಾಗಿದೆ. ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ತೇಕಲವಟ್ಟಿ, ಕಂಚಿಪುರ, ದುಗ್ಗಾವರ ಗ್ರಾಮಗಳಲ್ಲಿ ಮನೆಗಳ ಗೋಡೆ ಕುಸಿದಿವೆ.

    ಕಮಲಮ್ಮ, ನಾಗಮ್ಮ, ಅನಿತ ಹಾಗೂ ಓಂಕಾರಪ್ಪ ಮನೆ ಕಳೆದುಕೊಂಡವರು. ಜಿಟಜಿಟಿ ಮಳೆಯಿಂದಾಗಿ ನಿರಂತರವಾಗಿ ನೆನೆದು ನಾಲ್ಕು ಮನೆಗಳ ಗೋಡೆಗಳು ಕುಸಿದಿದೆ. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಈ ವಿಷಯ ತಿಳಿದ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಟೆನಾಡಲ್ಲಿ ಕಳೆದ ಮೂರು ದಿನಗಳಿಂದ ಸೂರ್ಯನ ದರ್ಶನವಾಗಿಲ್ಲ. ಹೀಗಾಗಿ ಚಳಿಗಾಳಿ ಮಿಶ್ರಿತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದನ್ನೂ ಓದಿ: ನಿರಂತರ ಮಳೆಗೆ ವರದಾ ನದಿಯ ಬ್ಯಾರೇಜ್ ಬಂದ್

  • ಮಹಾರಾಷ್ಟ್ರ, ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆ – 8 ಸೇತುವೆಗಳು ಜಲಾವೃತ

    ಮಹಾರಾಷ್ಟ್ರ, ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆ – 8 ಸೇತುವೆಗಳು ಜಲಾವೃತ

    ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿರುವ ಹಿನ್ನೆಲೆ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದೆ.

    ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಚಿಕ್ಕೋಡಿ ಉಪವಿಭಾಗದ ಎಂಟು ಸೇತುವೆಗಳು ಜಲಾವೃತವಾಗಿವೆ. ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳ ಎಂಟು ಸೇತುವೆಗಳು ಜಲಾವೃತಗೊಂಡಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಡೂರು-ಕಲ್ಲೋಳ ಸೇತುವೆ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಜತ್ರಾಟ-ಭೀವಶಿ, ಭೋಜ-ಕಾರದಗಾ, ಅಕ್ಕೋಳ-ಸಿದ್ನಾಳ, ನಾಗನೂರು-ಗೋಟೂರ, ಹುನ್ನರಗಿ-ಮಮದಾಪೂರ, ಭೋಜವಾಡಿ-ಕುನ್ನೂರ, ಮಲಿಕವಾಡ-ದತ್ತವಾಡ ಸೇತುವೆಗಳು ಮುಳುಗಡೆಯಾಗಿವೆ. 16 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಗಳು, ಪರ್ಯಾಯ ಮಾರ್ಗಗಳ ಮೂಲಕ ಜನರು ಸಂಚಾರ ಮಾಡುತ್ತಿದ್ದಾರೆ.

    ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಮಹಾರಾಷ್ಟ್ರದ ಕೊಯ್ನಾ- 347ಮಿಮೀ ನವಜಾ- 427ಮಿಮೀ ರಾಧಾನಗರಿ 194ಮಿಮೀ ಹಾಗೂ ಮಹಾಬಳೇಶ್ವರದಲ್ಲಿ 424ಮಿಮೀ ಗಳಷ್ಟು ಮಳೆ ಪ್ರಮಾಣ ದಾಖಲಾಗಿದೆ. ಚಿಕ್ಕೋಡಿ ಭಾಗದ ವಿವಿಧೆಡೆ ಸರಾಸರಿ 50 ಮಿಲೀ ಮೀಟರ್ ಗಳಷ್ಟು ಮಳೆಯಾಗಿದೆ.

    ಕೃಷ್ಣಾ ನದಿಗೆ 78 ಸಾವಿರ ಕ್ಯೂಸೆಕ್ ಗೂ ಹೆಚ್ಚು ಪ್ರಮಾಣದ ಒಳ ಹರಿವು ಇದ್ದು, ಹಿಪ್ಪರಗಿ ಬ್ಯಾರೇಜ್‍ನಿಂದ 74,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನದಿ ತೀರದಲ್ಲಿ ಬೆಳಗಾವಿ ಜಿಲ್ಲಾಡಳಿತ ಪ್ರವಾಹ ಭೀತಿಯಿಂದ ಹೈ ಅಲರ್ಟ್ ಘೋಷಿಸಿದೆ. ಇದನ್ನೂ ಓದಿ:ಜಿಟಿ ಜಿಟಿ ಮಳೆ – ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಪರದಾಟ

  • ಮುಂಬೈನಲ್ಲಿ ಭಾರೀ ಮಳೆ – ಜನ ಜೀವನ ಅಸ್ತವ್ಯಸ್ತ

    ಮುಂಬೈನಲ್ಲಿ ಭಾರೀ ಮಳೆ – ಜನ ಜೀವನ ಅಸ್ತವ್ಯಸ್ತ

    ಮುಂಬೈ: ಮುಂಬೈನಲ್ಲಿ ಕಳೆದ ರಾತ್ರಿಯಿಂದ ನಿರಂತರ ಧಾರಾಕಾರ ಮಳೆಯಾಗುತ್ತಿದೆ. ಈ ಹಿನ್ನೆಲೆ ಹಲವು ಪ್ರದೇಶಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

    ಮುಂಬೈ, ಥಾಣೆ, ಪಾಲ್ಘರ್ ಮತ್ತು ರಾಯಗಢ್‍ದಲ್ಲಿ ಬಿಡುವಿಲ್ಲದೇ ನಿರಂತರವಾಗಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಐಎಂಡಿಯ ಪ್ರಾದೇಶಿಕ ಹವಮಾನ ಕೇಂದ್ರವು ಮುಂಬೈನಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಿದೆ.

    ಬುಧವಾರ ಅತೀ ಹೆಚ್ಚು ಮಳೆಯಾಗಿದ್ದರು ರಸ್ತೆ ಮತ್ತು ರೈಲು ಸಂಚಾರಕ್ಕೆ ಮಳೆಯಿಂದಾಗಿ ಯಾವುದೇ ತೊಂದರೆಯುಂಟಾಗಿಲ್ಲ. ಭಾನುವಾರ ಮತ್ತು ಸೋಮವಾರ ಹೆಚ್ಚಾಗಿ ಸುರಿದ ಮಳೆ, ಬುಧವಾರ ಮಧ್ಯಾಹ್ನ ಕೊಂಚ ಕಡಿಮೆಯಾಗಿತ್ತು. ಆದರೆ ಮತ್ತೆ ರಾತ್ರಿ ಇಡೀ ಮಳೆ ಧಾರಕಾರವಾಗಿ ಸುರಿದಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.

    ಗುಜರಾತ್‍ನ ಕರಾವಳಿಯಿಂದ ಕರ್ನಾಟಕದ ತೀರದವರೆಗೂ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲಿಯೂ ಮುಂಬೈನಲ್ಲಿ ಕೆಲವು ದಿನಗಳ ಕಾಲ ಗಾಳಿ ಸಹಿತ ಭಾರೀ ಮಳೆಯಾಗಲಿದ್ದು, ಕೊಂಕಣ, ಗೋವಾ ಮತ್ತು ಮಧ್ಯ ಮಹಾರಾಷ್ಟ್ರ, ಬೆಟ್ಟಗಾಡು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿಂದು ರೈತರ ಪ್ರತಿಭಟನೆ – ಗಡಿಯಲ್ಲಿ ಬಿಗಿ ಭದ್ರತೆ

  • ಕೊಡಗಿನಲ್ಲಿ ಧಾರಕಾರ ಮಳೆ – ಧುಮ್ಮುಕ್ಕಿ ಹರಿಯುತ್ತಿದೆ ಜಲಧಾರೆಗಳು

    ಕೊಡಗಿನಲ್ಲಿ ಧಾರಕಾರ ಮಳೆ – ಧುಮ್ಮುಕ್ಕಿ ಹರಿಯುತ್ತಿದೆ ಜಲಧಾರೆಗಳು

    ಮಡಿಕೇರಿ: ಕಳೆದ ಮೂರು ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಲಪಾತಗಳು ಧುಮ್ಮುಕಿ ಹರಿಯುತ್ತಿದೆ.

    ಕೊಡಗು ಎಂದ ಕೂಡಲೇ ನೆನಪಾಗುವುದು ಹಚ್ಚ ಹಸಿರಿನ ವನರಾಶಿ. ಭೂಮಿಗೆ ಮುತ್ತಿಡುತ್ತಿರುವ ಮಂಜು, ಸದಾ ನೀರಿನಿಂದ ಭೋರ್ಗರೆಯುವ ಜಲಪಾತಗಳು. ಕೊಡಗಿನಲ್ಲಿ ಮಳೆಗಾಲ ಶುರುವಾದರೆ ಸಾಕು, ಗಿರಿಕಾನನದ ನಡುವಿನಿಂದ ಧುಮ್ಮಿಕ್ಕುವ ಜಲಧಾರೆಗಳ ವಯ್ಯಾರವನ್ನು ನೋಡುವುದೇ ಚೆಂದ, ನೈಜ ಸೌಂದರ್ಯದ ಕೊಡಗಿನಲ್ಲಿಗ ಜಲಸುಂದರಿಯರದ್ದೇ ದರ್ಬಾರ್ ಆಗಿದೆ.

    ಕೊಡಗಿನಲ್ಲಿ ಕಳೆದ ಎರಡು, ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೊಡಗಿನ ಜಲಪಾತಗಳು ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಮಡಿಕೇರಿಯ ಚೆಟ್ಟಳ್ಳಿ ರಸ್ತೆ ಬದಿಯಲ್ಲಿ ಎತ್ತರದಿಂದ ದುಮ್ಮಿಕ್ಕುತ್ತಿರುವ ಅಭ್ಯಾಲ ಜಲಪಾತ ಪ್ರಕೃತಿ ಪ್ರಿಯರನ್ನು ತನ್ನೆಡೆಗೆ ಸೆಳೆಯುತ್ತಿದೆ. ಈ ಮಾರ್ಗವಾಗಿ ತೆರಳುತ್ತಿರುವ ಪ್ರವಾಸಿಗರು ಜಲಧಾರೆಯಲ್ಲಿ ಮಿಂದು ಮುಂದೆ ಸಾಗುತ್ತಿದ್ದಾರೆ.

    ಜಿಲ್ಲೆಯ ಇತರ ಭಾಗಗಳ ಜಲಪಾತಗಳು ಕೂಡ ಜಲರಾಶಿಯಿಂದ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದು, ಮಾನ್ಸೂನ್ ಕಾಲದ ಪ್ರವಾಸಿಗರಿಗೆ ಇವುಗಳೇ ಆಕರ್ಷಣೀಯ ಕೇಂದ್ರಗಳಾಗಿವೆ. ಪ್ರವಾಸಿಗರು ಸ್ಥಳೀಯರು ಇದೀಗ ಜಲಪಾತದತ್ತ ಮುಖ ಮಾಡುತ್ತಿದ್ದಾರೆ. ಇದನ್ನೂ ಓದಿ:ಮಳೆಯ ನಡುವೆಯೂ ಕೆ.ಆರ್ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು

  • ಕೊಡಗಿನಲ್ಲಿ ಗಾಳಿ ಸಹಿತ ಮಳೆ ಅರ್ಭಟ – ಉಕ್ಕಿ ಹರಿಯುತ್ತಿರುವ ನದಿಗಳು

    ಕೊಡಗಿನಲ್ಲಿ ಗಾಳಿ ಸಹಿತ ಮಳೆ ಅರ್ಭಟ – ಉಕ್ಕಿ ಹರಿಯುತ್ತಿರುವ ನದಿಗಳು

    ಮಡಿಕೇರಿ: ಕಳೆದ ರಾತ್ರಿಯಿಂದ ಕೊಡಗು ಜಿಲ್ಲೆಯಾದ್ಯಂತ ಮಳೆ ಬಿರುಸು ಪಡೆದುಕೊಂಡಿದೆ. ಮಡಿಕೇರಿ ತಾಲೂಕಿನಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗುತ್ತಿದ್ದು, ಚಳಿಯ ವಾತಾವರಣ ಮುಂದುವರೆದಿದೆ.

    ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ನಿರಂತರ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಹಾರಂಗಿ ವ್ಯಾಪ್ತಿಯಲ್ಲೂ ಮಳೆ ಸುರಿಯುತ್ತಿದ್ದು, ಜಲಾಶಯದ ನೀರಿನ ಮಟ್ಟ ಹೆಚ್ಚಾಗಿದೆ. ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಮಳೆಯಾಗುತ್ತಿದ್ದು, ಕೃಷಿಕ ವರ್ಗ ಹರ್ಷಗೊಂಡಿದೆ. ಜಿಲ್ಲೆಯ ಬೆಟ್ಟಗುಡ್ಡ ಹಾಗೂ ನದಿ ತೀರದ ನಿವಾಸಿಗಳು ಮಳೆ ಹೆಚ್ಚಾಗುವ ಆತಂಕದಲ್ಲಿದ್ದಾರೆ.

    ಮಡಿಕೇರಿ ನಗರದಲ್ಲಿ ಬೆಳ್ಳಗ್ಗೆಯಿಂದಲೂ, ಗಾಳಿ ಸಹಿತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಜೊತೆಗೆ, ಚಳಿಯ ವಾತಾವರಣವಿದೆ. ಈ ವಾತಾವರಣದಲ್ಲಿ ಕಾಲ ಕಾಳೆಯಲು ರಾಜ್ಯ ಮತ್ತು ಹೊರ ರಾಜ್ಯದಿಂದ ಪ್ರವಾಸಿಗರ ಆಗಮನವಾಗುತ್ತಿದ್ದು, ಮಳೆಯಿಂದ ಪ್ರವಾಸಿತಾಣಗಳು ಕೂಡ ಹಸಿರಿನಿಂದ ಆಕರ್ಷಣೆ ಪಡೆದುಕೊಂಡಿದೆ. ಜಲಪಾತಗಳು ತುಂಬಿ ಕರೆಯುತ್ತಿವೆ. ಹರಿಯುತ್ತಿದ್ದು, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಇದನ್ನೂ ಓದಿ: ಎರಡು ಲಸಿಕೆಗಳನ್ನು ಮಿಶ್ರಣ ಮಾಡುವುದು ಅಪಾಯಕಾರಿ ಬೆಳವಣಿಗೆ – ಡಬ್ಲ್ಯೂಎಚ್‍ಒ

  • ಕೊಡಗು ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನ ರೆಡ್ ಅಲರ್ಟ್

    ಕೊಡಗು ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನ ರೆಡ್ ಅಲರ್ಟ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದು, ಇಂದಿನಿಂದ ಜಿಲ್ಲೆಯಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಮೂರು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಿದೆ.

    ಜುಲೈ 11 ರಿಂದ 13ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಜಲಪ್ರಳಯದಿಂದ ಬೆಚ್ಚಿರುವ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಈಗಾಗಲೇ ಅಪಾಯದ ಸ್ಥಳದಲ್ಲಿರುವ ಜನರು, ಬೆಟ್ಟ-ಗುಡ್ಡಗಳಲ್ಲಿ ವಾಸ ಮಾಡುತ್ತಿರುವ ಜನರು ನದಿ ಅಂಚಿನಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಆದೇಶಿಸಿದ್ದಾರೆ.

    ಜಿಲ್ಲೆಯಲ್ಲಿ ಅನಾಹುತ ಸಂಭವಿಸಿದಂತೆ ಎಚ್ಚರವಹಿಸಲು ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್‍ಎಫ್) ತಂಡವನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ ಸುರಿಯುತ್ತಿರುವ ಮಳೆಯಿಂದ ಕಾವೇರಿ ನೀರಿನ ಮಟ್ಟ ಏರಿಕೆಯಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಾರಂಗಿ ನೀರಿನ ಮಟ್ಟ ಏರಿಕೆಯಾಗಿದ್ದು, ನದಿ ಪಾತ್ರದ ಜನರು ಮತ್ತೆ ಆತಂಕದಲ್ಲಿ ಜೀವನ ಕಳೆಯುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೆಡ್ ಅಲರ್ಟ್-ಹವಾಮಾನ ಎಚ್ಚರಿಕೆ

  • ಚಿಕ್ಕಮಗಳೂರು, ಬೀದರ್‌ನಲ್ಲಿ ಭಾರೀ ಮಳೆ – ಜನ ಜೀವನ ಅಸ್ತವ್ಯಸ್ತ

    ಚಿಕ್ಕಮಗಳೂರು, ಬೀದರ್‌ನಲ್ಲಿ ಭಾರೀ ಮಳೆ – ಜನ ಜೀವನ ಅಸ್ತವ್ಯಸ್ತ

    – ಮಲೆನಾಡಿನಲ್ಲಿ 10 ದಿನಗಳ ನಂತರ ಮತ್ತೆ ವರುಣನ ಅಬ್ಬರ

    ಚಿಕ್ಕಮಗಳೂರು/ಬೀದರ್: ಶುಕ್ರವಾರ ಚಿಕ್ಕಮಗಳೂರು ಮತ್ತು ಬೀದರ್ ಜಿಲ್ಲೆಯ ಔರಾದ್ ನಲ್ಲಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೀದರ್ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಜಾಗರಣೆ ಮಾಡುವಂತಾಗಿತ್ತು. ಇತ್ತ ಚಿಕ್ಕಮಗಳೂರು ಜಿಲ್ಲೆಯ ಜನರಲ್ಲಿ ಸಂತಸದ ಜೊತೆ ಆತಂಕ ಸಹ ಹೆಚ್ಚಾಗಿದೆ.

    ಮುಂಗಾರು ಮಳೆ ಆಶಾದಾಯಕವಾಗಿ ಆರಂಭವಾಗಿದ್ದರೂ ಕೂಡ ಕಳೆದ ಹತ್ತು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಸಂಪೂರ್ಣ ಕ್ಷೀಣಿಸಿತ್ತು. ಆದರೆ, ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಡೀ ದಿನ ಆಗಾಗ್ಗೆ ಭಾರೀ ಮಳೆ ಸುರಿದಿದೆ.

    ಮಲೆನಾಡಿಗರಿಗೆ ಸಂತಸದ ಜೊತೆ ಆತಂಕ:
    ಕಡುಗಟ್ಟಿದ ಮೋಡ, ಭಾರೀ ಗಾಳಿಯಿಂದ ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಕಳಸ, ಎನ್.ಆರ್.ಪುರ, ಶೃಂಗೇರಿ, ಕೊಪ್ಪ ಹಾಗೂ ಬಾಳೆಹೊನ್ನೂರು ಭಾಗದಲ್ಲಿ ಮಳೆಯಾಗಿದೆ. ಆದರೆ, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬೈರಾಪುರ, ಚಾರ್ಮಾಡಿಘಾಟ್, ಬಾಳೂರು, ಬಣಕಲ್ ಭಾಗದಲ್ಲಿ ಭಾರೀ ಮಳೆ ಸುರಿದಿದೆ. ಇದರಿಂದ ಮಲೆನಾಡಿಗರು ಮತ್ತೆ ಆತಂಕಗೊಂಡಿದ್ದಾರೆ. ಜಿಲ್ಲೆಗೆ ಈ ಮಳೆ ಅಗತ್ಯವಿತ್ತು. ಬಯಲುಸೀಮೆ ಹಾಗೂ ಮಲೆನಾಡು ಭಾಗಕ್ಕೂ ಮಳೆ ತೀರಾ ಅವಶ್ಯಕವಿತ್ತು. ಮಲೆನಾಡು ಭಾಗದಲ್ಲಿ ಭತ್ತ ಬೆಳೆದಿದ್ದ ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದರು. ಭತ್ತದ ಸಿಸಿ ಮಡಿ ಬಿಸಿಲಿಗೆ ಬಾಡುವಂತಾಗಿತ್ತು. ಆದರೆ, ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಡೀ ದಿನ ಆಗಾಗ್ಗೆ ಸಮೃದ್ಧ ಮಳೆಯಾಗಿರೋದು ಕಾಫಿ ಬೆಳೆಗಾರರರು ಹಾಗೂ ರೈತರ ಮೊಗದಲ್ಲಿ ಮಂದಹಾಸ ತರಿಸಿದೆ.

    ಮಳೆ ಮಲೆನಾಡಿಗರಿಗೆ ಸಂತಸ ತಂದರೂ ಅದಕ್ಕಿಂತ ಹೆಚ್ಚು ಆತಂಕ ತರುತ್ತಿದೆ. ಏಕೆಂದರೆ, ಕಳೆದ ಎರಡು ವರ್ಷದಲ್ಲಿ ಅಳಿದುಳಿದ ಬದುಕು ಎಲ್ಲಿ ಈ ಬಾರಿ ಕೊಚ್ಚಿ ಹೋಗುತ್ತೋ ಎಂದು ಮಲೆನಾಡಿಗರು ಮಳೆ ಬಂದರೆ ಖುಷಿಯ ಮಧ್ಯೆಯೂ ಕಂಗಾಲಾಗುತ್ತಿದ್ದಾರೆ. ಕಳೆದ ಎರಡು ವರ್ಷದ ಹಿಂದೆ, ಮಳೆಗಾಲದಲ್ಲಿ ಆದ ಅನಾಹುತಕ್ಕೆ ಪರಿಹಾರ ಸಿಕ್ಕಿಲ್ಲ. ಈ ವರ್ಷ ಮಳೆರಾಯ ಏನೇನು ಅವಾಂತರ ಸೃಷ್ಟಿಸುತ್ತಾನೋ, ಸರ್ಕಾರ ಸೂಕ್ತ ಪರಿಹಾರ ಕೊಡುತ್ತೋ ಅಥವಾ ಆಶ್ವಾಸನೆಯಲ್ಲೇ ಕಾಲ ಕಳೆಯುತ್ತೋ ಎಂದು ಜನ ಮಳೆ-ಸರ್ಕಾರ ಎರಡರ ಬಗ್ಗೆಯೂ ಚಿಂತೆಗೀಡಾಗಿದ್ದಾರೆ. 2019ರಲ್ಲಿ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದ 6 ಕುಟುಂಬಗಳು ಸಂಪೂರ್ಣ ಕೊಚ್ಚಿ ಹೋಗಿದ್ದವು. ಅಲ್ಲಿಯ ಜನರಿಗೆ ಇಂದಿಗೂ ಸೂಕ್ತ ಹಾಗೂ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಹಾಗಾಗಿ, ಮಲೆನಾಡಿಗರಿಗೆ ಮಳೆ ಅಂದರೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

    ಜಮೀನು, ಮನೆಗೆ ನುಗ್ಗಿದ ನೀರು:
    ಬೀದರ್‌ನಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಔರಾದ್ ತಾಲೂಕಿನಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಔರಾದ್ ತಾಲೂಕಿನ ಬೋರ್ಗಿ ಗ್ರಾಮದ ಜಗದೇವಿ ಎಂಬವರ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ಸಾವಿರಾರು ಮೌಲ್ಯದ ದವಸ ಧಾನ್ಯಗಳು ನೀರು ಪಾಲಾಗಿವೆ.

    ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಡರಾತ್ರಿ ಮನೆಗೆ ನೀರು ನುಗ್ಗಿ ನೀರು ಹೊರ ಹಾಕಲು ಕುಟುಂಬಸ್ಥರು ರಾತ್ರಿಯಿಡಿ ಹರಸಾಹಸ ಪಟ್ಟಿದ್ದಾರೆ. ಜೊತೆಗೆ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಔರಾದ್ ತಾಲೂಕಿನ ಜಮೀನುಗಳು ಜಲಾವೃತವಾಗಿ ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿವೆ. ಅಲ್ಲದೇ ಸುರಿದ ಧಾರಾಕಾರ ಮಳೆಗೆ ಜೋಜನಾ ಬಳಿ ಇರುವ ಹಳ್ಳ ತುಂಬಿ ಜೋಜನಾ ಟು ಲಿಂಗದ ಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂದು ಕೂಡಾ ದಟ್ಟ ಮೋಡ ಕವಿದ ವಾತಾವರಣವಿದ್ದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಹೀಗಾಗಿ ಜಿಲ್ಲೆಯಲ್ಲಿ 10 ರಿಂದ 13ರ ವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಧಾರಕಾರ ಮಳೆಗೆ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ದವಸ, ಧಾನ್ಯಗಳು ನೀರು ಪಾಲಾಗಿದೆ. ಒಳಚರಂಡಿ ವ್ಯವಸ್ಥೆ ಸೇರಿ ಮೂಲಭೂತ ಸೌಕರ್ಯ ಒದಗಿಸಿ ಎಂದು ಸ್ಥಳೀಯ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ, ಸ್ಪಂದಿಸಿಲ್ಲ ಎಂದು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮಳೆಯ ಅವಾಂತರದಿಂದಾಗಿ ನೊಂದವರು ಹಿಡಿಶಾಪ ಹಾಕುತ್ತಿದ್ದಾರೆ. ಇದನ್ನೂ ಓದಿ: ಯುವತಿ ನೇಣಿಗೆ ಶರಣು, ಯುವಕನ ಮನೆಗೆ ಬೆಂಕಿ – ಪತಿಯನ್ನ ಬಿಟ್ಟು ಇನಿಯನ ಜೊತೆ ಮದ್ವೆ

  • ಮಳೆಯಿಂದಾಗಿ ಹಳ್ಳದಾಟಲು ರೈತರ ಪರದಾಟ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

    ಮಳೆಯಿಂದಾಗಿ ಹಳ್ಳದಾಟಲು ರೈತರ ಪರದಾಟ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

    ಬೀದರ್: ಮುಂಗಾರು ಮಳೆಯ ಆರ್ಭಟಕ್ಕೆ ಬೀದರ್ ನಲ್ಲಿ ಮಳೆಯ ಅವಾಂತರ ಸೃಷ್ಟಿಯಾಗಿದ್ದು, ಹಳ್ಳದಾಟಲು ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಔರಾದ್ ತಾಲೂಕಿನಲ್ಲಿ ನಿನ್ನೆ ಸಂಜೆ ಸುರಿದ ಮಳೆಗೆ ತಾಲೂಕಿನ ಜೋಜನಾ ಗ್ರಾಮದ ರೈತರು ಹಳ್ಳದಾಟಲು ಕೆಲವು ಗಂಟೆಗಳ ಕಾಲ ಪರದಾಡಿದ್ದಾರೆ. ಕೂಲಿ ಕೆಲಸಕ್ಕಾಗಿ ಜಮೀನಿಗೆ ಹೋಗಿದ್ದ ರೈತರು ಸಂಜೆ ಬರುವ ವೇಳೆಗೆ ಹಳ್ಳ ತುಂಬಿ ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟಿದ್ದಾರೆ.

    ರೈತರು ಜಮೀನಿಗೆ ಹೋಗಲು ಕಷ್ಟವಾಗುತ್ತಿದ್ದು, ಇಲ್ಲಿ ಸೇತುವೆ ನಿರ್ಮಾಣ ಮಾಡಿ ಎಂದು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ಬಾರಿ ಮಳೆ ಬಂದಾಗ ರೈತರು ಹಳ್ಳ ದಾಟಲು ಹರ ಸಾಹಸಪಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸ್ವಕ್ಷೇತ್ರದಲ್ಲಿ ಜನರು ಪರದಾಡುತ್ತಿದ್ದು ಮಹಾ ನಿರ್ಲಕ್ಷ್ಯಕ್ಕೆ ರೈತರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇದನ್ನೂ ಓದಿ:ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರ ಸಿಂಗ್ ನಿಧನ

  • ಭಾರೀ ಗಾಳಿಗೆ ಮನೆ ಮೇಲೆ ಬಿದ್ದ ವಿದ್ಯುತ್ ಕಂಬ – ಸ್ಥಳದ ಅಕ್ಕಪಕ್ಕದಲ್ಲಿ ಗ್ರೌಂಡಿಂಗ್

    ಭಾರೀ ಗಾಳಿಗೆ ಮನೆ ಮೇಲೆ ಬಿದ್ದ ವಿದ್ಯುತ್ ಕಂಬ – ಸ್ಥಳದ ಅಕ್ಕಪಕ್ಕದಲ್ಲಿ ಗ್ರೌಂಡಿಂಗ್

    ಚಿಕ್ಕಮಗಳೂರು: ವಿದ್ಯುತ್ ಕಂಬವೊಂದು ಭಾರೀ ಗಾಳಿಗೆ ಮನೆ ಮೇಲೆ ಮುರಿದು ಬಿದ್ದು, ಕಂಬ ಬಿದ್ದ ಸ್ಥಳದ ಅಕ್ಕಪಕ್ಕದಲ್ಲಿ ಗ್ರೌಂಡಿಂಗ್ ಆಗುತ್ತಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಕಮಕ್ಕಿ ಗ್ರಾಮದಲ್ಲಿ ನಡೆದಿದೆ.

    ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಮಲೆನಾಡಿಗರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆ ಬೀಸುತ್ತಿರುವ ರಣ ಗಾಳಿಯಿಂದ ಮುರಿದು ಬಿದ್ದ ಮರ, ವಿದ್ಯುತ್ ಕಂಬಗಳು ಲೆಕ್ಕವೇ ಇಲ್ಲ. ಈ ಮಧ್ಯೆ ಮನೆ ಮೇಲೆ ಬಿದ್ದ ವಿದ್ಯುತ್ ಕಂಬದ ಸುತ್ತಮುತ್ತ ಗ್ರೌಂಡಿಂಗ್ ಆಗಿದೆ. ಇದನ್ನೂ ಓದಿ: ಮಲೆನಾಡಲ್ಲಿ ಮಳೆ ಅಬ್ಬರ – ಅಜ್ಜಿ ಪಾರು, ಹೆದ್ದಾರಿ ಬಂದ್, ಮನೆ-ಕಟ್ಟಡಗಳ ಕುಸಿತ

    ಹೀಗಾಗಿ ಕೂಡಲೇ ಸ್ಥಳಿಯರು ವಿಷಯವನ್ನು ಮೆಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮಳೆ ಸುರಿಯುತ್ತಿದೆ, ಸ್ಥಳದಲ್ಲಿ ಗ್ರೌಂಡಿಂಗ್ ಮತ್ತೊಂದು ಅನಾಹುತವಾಗುವುದು ಬೇಡವೆಂದು ಸ್ಥಳೀಯರೇ ಮುಂದಾಗಿ ರಸ್ತೆಗೆ ಮರದ ದಿಮ್ಮೆಗಳನ್ನು ಅಡ್ಡವಿಟ್ಟು ಸಂಚಾರವನ್ನೇ ಬಂದ್ ಮಾಡಿದ್ದಾರೆ.

    ನಂತರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ ವಿಷಯ ತಿಳಿದ ಬಣಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವ ವೇಳೆ ಸ್ಥಳೀಯರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಫೋನ್ ಮಾಡಿದ ಬಳಿಕವೂ ತಡವಾಗಿ ಬಂದ ಮೆಸ್ಕಾಂ ಸಿಬ್ಬಂದಿಗೆ ಕೂಡ ಸ್ಥಳೀಯರೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕೊಡಗಿನ ವಿವಿಧೆಡೆ ಮುಂದುವರಿದ ಮಳೆ- ಹೆಗ್ಗಳ ಗ್ರಾಮದಿಂದ ಕುಟುಂಬಗಳ ಸ್ಥಳಾಂತರ