Tag: ಪಬ್ಲಿಕ್ ಟಿವಿ Raichuru

  • ಮೋದಿಗೆ ಮನುಷ್ಯತ್ವ ಇದ್ಯಾ ಅನ್ನೋದೆ ಅನುಮಾನ: ನಾಡಗೌಡ ವಾಗ್ದಾಳಿ

    ಮೋದಿಗೆ ಮನುಷ್ಯತ್ವ ಇದ್ಯಾ ಅನ್ನೋದೆ ಅನುಮಾನ: ನಾಡಗೌಡ ವಾಗ್ದಾಳಿ

    ರಾಯಚೂರು: ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿರುವ ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡರು ಬಿಜೆಪಿಗಾಗಿ ದುಡಿದ ಹಿರಿಯ ನಾಯಕ ಎಲ್.ಕೆ ಅಡ್ವಾಣಿಯನ್ನು ಪ್ರಧಾನಿ ನರೇಂದ್ರ ಮೋದಿ ಮೂಲೆ ಗುಂಪು ಮಾಡಿದ್ದಾರೆ. ಅವರಿಗೆ ಮನುಷ್ಯತ್ವ ಇದೆಯಾ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

    ಇಂದು ಜಿಲ್ಲೆ ಲಿಂಗಸಗೂರಿನ ಮುದಗಲ್ ಪಟ್ಟಣದಲ್ಲಿ ನಡೆದ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯ ಹಿರಿಯ ನಾಯಕರಾದ ಅಡ್ವಾಣಿ, ಎಂಎಂ ಜೋಶಿ ಅವರನ್ನು ಮೋದಿ ಕಡೆಗಣಿಸಿದ್ದಾರೆ. ಬಿಜೆಪಿ ಈ ದೇಶದಲ್ಲಿ ನಿಲ್ಲಲು ಅಡ್ವಾಣಿಯವರ ಪಾತ್ರ ದೊಡ್ಡದಿದೆ. ಅಂತಹ ಹಿರಿಯ ನಾಯಕರನ್ನು ಮೋದಿ ಮೂಲೆ ಗುಂಪು ಮಾಡಿದ್ದಾರೆ. ಎಲ್ಲಿ ಅವರು ಈ ದೇಶದ ರಾಷ್ಟ್ರಪತಿ ಆಗುತ್ತಾರೋ ಎನ್ನುವ ಕಾರಣಕ್ಕೆ ಎಲ್ಲೋ ಇದ್ದ ವ್ಯಕ್ತಿಯನ್ನು ಇಂದು ರಾಷ್ಟ್ರಪತಿ ಮಾಡಿದರು. ಹಿಂದೊಮ್ಮೆ ಬಿಜೆಪಿ ಕಾರ್ಯಕ್ರಮದಲ್ಲಿ ಅಡ್ವಾಣಿ ನಮಸ್ಕಾರ ಮಾಡಿದಾಗಲೂ ತಿರುಗಿ ಕೂಡ ನೋಡಿರಲಿಲ್ಲ. ಇದನ್ನೆಲ್ಲ ಗಮನಿಸಿದರೆ ಮೋದಿಗೆ ಮನುಷ್ಯತ್ವ ಇದೆಯಾ ಎನ್ನುವುದನ್ನೇ ಪ್ರಶ್ನೆ ಮಾಡಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಈ ಚುನಾವಣೆಯ ನಂತರ ಬಿಜೆಪಿಯವರು ಸ್ಟ್ರೀಮ್ ಲೈನ್‍ನಲ್ಲಿ ಇರೋದಿಲ್ಲ. ಮೋದಿ ಅವರು 70 ವರ್ಷಕ್ಕಿಂತ ಮೆಲ್ಪಟ್ಟ ನಾಯಕರನ್ನು ಲೋಕಸಭಾ ಚುನಾವಣೆಯಿಂದ ದೂರವಿರುವಂತೆ ಮಾಡಿದರು. ಹಾಗೆಯೇ ಬಿಜೆಪಿಯ ಹಿರಿಯ ನಾಯಕ ಅನಂತ್‍ಕುಮಾರ್ ಅವರು ತೀರಿಕೊಂಡ ಸಂದರ್ಭದಲ್ಲಿ ಅವರ ಪತ್ನಿ ತೇಜಸ್ವಿನಿಗೆ ಆಶ್ವಾಸನೆ ನೀಡಿ, ಕೊನೆಗೆ ಚುನಾವಣೆ ವೇಳೆ ಕೈಬಿಟ್ಟರು. ಈಗ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಯಾವುದೋ ಒಂದು ಹುಡುಗನನ್ನು ತಂದು ನಿಲ್ಲಿಸಿದ್ದಾರೆ. ಆ ಹುಡುಗನಿಗೆ ಇನ್ನೂ ಕೂದಲೇ ಆರಿಲ್ಲ. ಭಾಷಣ ಮಾಡ್ತಾನೆ ಅಂತ ಕರೆದುಕೊಂಡು ಬಂದಿದ್ದಾರೆ. ಅದು ಅವರ ಪಕ್ಷದ ವಿಚಾರ ಬಿಡಿ ಎಂದು ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಟಿಕೆಟ್ ನೀರುವುದಕ್ಕೆ ಪ್ರತಿಕ್ರಿಯಿಸಿದರು. ಬಳಿಕ ಇದನ್ನೆಲ್ಲ ಗಮನವಿಟ್ಟುಕೊಂಡು ವೀರಶೈವ ಸಮಾಜದವರು ಎಚ್ಚರಿಕೆಯಿಂದ ಮತ ಹಾಕಬೇಕು ಎಂದು ಹರಿಹಾಯ್ದರು.