Tag: ಪಬ್ಲಿಕ್ ಟಿವಿ raichur

  • ಹಣಕ್ಕಾಗಿ ಬಾಂಬ್ ಸ್ಫೋಟ – ವ್ಯಾಪಾರಿಗೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ

    ಹಣಕ್ಕಾಗಿ ಬಾಂಬ್ ಸ್ಫೋಟ – ವ್ಯಾಪಾರಿಗೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ

    ರಾಯಚೂರು: ಸಿರವಾರದಲ್ಲಿ ವ್ಯಾಪಾರಿಯೊಬ್ಬರಿಗೆ 10 ಲಕ್ಷ ರೂ ನೀಡದಿದ್ದರೆ ಬಾಂಬ್ ಸ್ಫೋಟಗೊಳಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ದೇವದುರ್ಗ ತಾಲೂಕಿನ ನಾಗಡದಿನ್ನಿಯ ರಾಜಶೇಖರ್ ಬಂಧಿತ ಆರೋಪಿ. ಸಿರವಾರ ಪಟ್ಟಣದ ಅಮರೇಶಪ್ಪ ಅಚ್ಚಾ ಎಂಬವರಿಗೆ 10 ಲಕ್ಷ ರೂಪಾಯಿ ನೀಡದಿದ್ದರೆ ಪೆಟ್ರೋಲ್ ಬಾಂಬ್ ಹಾಕುವುದಾಗಿ ಆರೋಪಿ ಬೆದರಿಕೆಯೊಡ್ಡಿದ್ದನು. ಅಲ್ಲದೆ ಫೆಬ್ರವರಿ 23ರ ಮಧ್ಯರಾತ್ರಿ ಪಟ್ಟಣದ ದೇವದುರ್ಗ ಕ್ರಾಸ್ ಬಳಿ ಇರುವ ಅಮರೇಶಪ್ಪನ ಮನೆ ಮುಂದೆ ಪಟಾಕಿ ಸಿಡಿಸಿ ಇದು ಸಣ್ಣ ಬಾಂಬ್ ಮುಂದೆ ದೊಡ್ಡ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದಾನೆ.

    ಈ ಕುರಿತಂತೆ ಅಮರೇಶಪ್ಪ ಅಚ್ಚಾ ಮೊಬೈಲ್‍ನಲ್ಲಿ ಮೆಸೇಜ್ ಮಾಡಿ ಹತ್ತು ಲಕ್ಷ ರೂ.ಗೆ ನೀಡುವಂತೆ ಆರೋಪಿ ಬೆದರಿಕೆ ಹಾಕಿದ್ದು, ಮೊಬೈಲ್ ಆಪ್‍ವೊಂದನ್ನು ಬಳಸಿ ತನ್ನ ಗುರುತು ಸಿಗದಿರುವಂತೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ತನಿಖೆ ವೇಳ ಅಮರೇಶಪ್ಪನ ಅಂಗಡಿಗೆ ಆಗಾಗ ಬರುತ್ತಿದ್ದ ರಾಜಶೇಖರನನ್ನು ಅನುಮಾನದ ಮೇಲೆ ಪೊಲೀಸರು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.

  • ಸಿಂಧನೂರಿನ ಹೆಡಗಿನಾಳ ಶಾಲೆ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಟ್ಯಾಬ್ ವಿತರಣೆ

    ಸಿಂಧನೂರಿನ ಹೆಡಗಿನಾಳ ಶಾಲೆ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಟ್ಯಾಬ್ ವಿತರಣೆ

    ರಾಯಚೂರು: ಪಬ್ಲಿಕ್ ಟಿವಿ, ರೋಟರಿ ಕ್ಲಬ್ ವತಿಯಿಂದ ನಡೆಯುತ್ತಿರುವ ಜ್ಞಾನದೀವಿಗೆ ಅಭಿಯಾನದ ಅಡಿ ಜಿಲ್ಲೆಯ ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದಲ್ಲಿ ಇಂದು ಟ್ಯಾಬ್‍ಗಳನ್ನು ವಿತರಿಸಲಾಯಿತು. ಹೆಡಗಿನಾಳ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 14 ಜನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ 7 ಉಚಿತ ಟ್ಯಾಬ್‍ಗಳನ್ನು ವಿತರಿಸಲಾಯಿತು.

    ಶಾಲೆಯ ಮೊದಲ ಬ್ಯಾಚ್‍ನ ವಿದ್ಯಾರ್ಥಿಗಳು ಟ್ಯಾಬ್‍ಗಳನ್ನು ಪಡೆದಿದ್ದಾರೆ. ಆದರೆ ಶಾಲೆಗೆ ಇನ್ನೂ ಮೂಲಭೂತ ಸೌಲಭ್ಯಗಳಾಗಲಿ ಪೂರ್ಣ ಪ್ರಮಾಣದ ಶಿಕ್ಷಕರಾಗಲಿ ನೇಮಕವಾಗಿಲ್ಲ. ಪ್ರೌಢಶಾಲೆಗೆ ಕೇವಲ ಮೂರು ಜನ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಹೀಗಾಗಿ ಟ್ಯಾಬ್‍ಗಳನ್ನು ವಿತರಿಸಿರುವುದಕ್ಕೆ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಆನ್‍ಲೈನ್ ತರಗತಿಗಳಲ್ಲಿ ಏನನ್ನೂ ಕಲಿಯಲು ಸಾಧ್ಯವಾಗಿಲ್ಲ. ತಾಲೂಕಿನಲ್ಲೇ ಹಿಂದುಳಿದ ಗ್ರಾಮವಾಗಿರುವುದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಮೇಲೂ ಪ್ರಭಾವ ಬೀರಿದ್ದು ಲಾಕ್‍ಡೌನ್ ವೇಳೆ ಕೆಲ ವಿದ್ಯಾರ್ಥಿಗಳು ಕೂಲಿ ಕೆಲಸಕ್ಕೆ ಸೇರಿದ್ದು, ಮಕ್ಕಳನ್ನು ಶಾಲೆಗೆ ಕರೆತರುವುದು ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಹಾಗೂ ರೋಟರಿ ಇಂಟರ್ ನ್ಯಾಷನಲ್ ಉಚಿತವಾಗಿ ಟ್ಯಾಬ್‍ಗಳನ್ನ ವಿತರಿಸಿರುವುದು ಮಕ್ಕಳ ಶೈಕ್ಷಣಿಕ ಉನ್ನತಿಗೆ ಸಹಕಾರಿಯಾಗಲಿದೆ ಎಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಟ್ಯಾಬ್ ದಾನಿಗಳಾದ ಹರೀಶ್ ಪತ್ತಾರ್, ವಿರೇಶ್ ಒಳಬಳ್ಳಾರಿ, ಮಂಜುನಾಥ್ ಪಾಟೀಲ್, ಶಾಲಾ ಮುಖ್ಯೋಪಾಧ್ಯಾಯ ರವಿ ಬಿ.ಆರ್. ನಟರಾಜ್ ಕುರಕಿ, ಅನುಸೂಯ ಹವಳೆ, ನಾಗಪ್ಪ, ಮಹಾಂತೇಶ್ ಹಾಗೂ ಗ್ರಾಮದ ಮುಖಂಡರು ಸೇರಿದಂತೆ ಇತರರು ಭಾಗವಹಿದ್ದರು.

  • 500 ವರ್ಷ ಹಳೆಯ ಭಾರೀ ಬೆಲೆಯುಳ್ಳ ಉತ್ಸವ ಮೂರ್ತಿ ಕಳ್ಳತನ

    500 ವರ್ಷ ಹಳೆಯ ಭಾರೀ ಬೆಲೆಯುಳ್ಳ ಉತ್ಸವ ಮೂರ್ತಿ ಕಳ್ಳತನ

    ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರಿನಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಪಂಚಲೋಹ ಉತ್ಸವ ಮೂರ್ತಿ ಕಳ್ಳತನವಾಗಿದೆ.

    ಶ್ರೀಮಾರಟೇಶ್ವರ ದೇವಾಲಯದಲ್ಲಿದ್ದ ಶಿವಪಾರ್ವತಿಯರ ಉತ್ಸವ ಮೂರ್ತಿ ಕಳ್ಳತನವಾಗಿದ್ದು ಭಕ್ತರು ಗ್ರಾಮಕ್ಕೆ ಕೇಡು ಕಾದಿದೆ ಅಂತ ಆತಂಕಗೊಂಡಿದ್ದಾರೆ.

    ಸುಮಾರು 15 ಕೆ.ಜಿ ತೂಕದ 500 ವರ್ಷಗಳಷ್ಟು ಹಳೆಯದಾದ ಪಂಚಲೋಹದ ಉತ್ಸವ ಮೂರ್ತಿಯನ್ನ ದೇವಾಲಯದ ಬಾಗಿಲ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಹಳೆಯ ಕಾಲದ ಪಂಚಲೋಹ ಮೂರ್ತಿಗೆ ಭಾರಿ ಬೇಡಿಕೆ ಹಾಗೂ ಬೆಲೆಯಿರುವ ಕಾರಣಕ್ಕೆ ಕಳ್ಳತನ ಮಾಡಿರುಬಹುದು ಎಂಬ ಶಂಕಿಸಲಾಗಿದೆ.

    ಹಳೆಯ ಪಂಚಲೋಹದ ಮೂರ್ತಿಗಳ ಬಗ್ಗೆ ಹಲವಾರು ನಂಬಿಕೆಗಳಿದ್ದು ಸುಮಾರು ಒಂದು ಕೋಟಿ ರೂಪಾಯಿವರೆಗೆ ಬೆಲೆ ಇರಬಹುದು ಎಂಬ ಅಂದಾಜಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹುಳುಬಿದ್ದ ಆಹಾರ ಕಿಟ್ ಹಂಚಿಕೆ – ಶಾಸಕ ಶಿವನಗೌಡ ನಾಯಕ್ ಮೇಲೆ ಆರೋಪ

    ಹುಳುಬಿದ್ದ ಆಹಾರ ಕಿಟ್ ಹಂಚಿಕೆ – ಶಾಸಕ ಶಿವನಗೌಡ ನಾಯಕ್ ಮೇಲೆ ಆರೋಪ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದಲ್ಲಿ ಶಾಸಕ ಶಿವನಗೌಡ ನಾಯಕ್ ವಿತರಿಸಿದ ಆಹಾರ ಕಿಟ್‍ನಲ್ಲಿ ಹುಳು, ನುಸಿ ಪತ್ತೆಯಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಲಾಕ್ ಡೌನ್ ಸಂದರ್ಭದಲ್ಲಿ ಹಟ್ಟಿ ಚಿನ್ನದಗಣಿ ಕಂಪನಿ ಬಡವರಿಗೆ ವಿತರಿಸಲು ನೀಡಿದ್ದ ಫುಡ್ ಕಿಟ್‍ಗಳನ್ನ ಹಂಚಲಾಗಿದ್ದು ಇದರಲ್ಲಿ ಹುಳು ಪತ್ತೆಯಾಗಿವೆ.

    ತಹಶೀಲ್ದಾರರ ಮುಖಾಂತರ ಬಡವರಿಗೆ ಹಂಚಿಕೆ ಮಾಡಲು ಕೊಟ್ಡಿದ್ದ 2 ಸಾವಿರ ಫುಡ್ ಕಿಟ್‍ನನ್ನು ಲಾಕ್ ಡೌನ್ ಸಂದರ್ಭದಲ್ಲಿ ವಿತರಿಸದೇ ಶನಿವಾ ಸ್ವತಃ ದೇವದುರ್ಗ ಶಾಸಕ ಶಿವನಗೌಡ ನಾಯಕ್ ವಿತರಿಸಿದ್ದರು. ಶಾಸಕ ಶಿವನಗೌಡ ವಿತರಿಸಿದ ಫುಡ್ ಕಿಟ್‍ಗಳಲ್ಲಿ ಹುಳು, ನುಸಿ ಪತ್ತೆಯಾಗಿದ್ದು, ಧಾನ್ಯಗಳು ಉಂಡೆಯಾಗಿದ್ದು ಬಳಸಲು ಯೋಗ್ಯವಾಗಿಲ್ಲದ್ದಾಗಿದೆ.

    ಹಾಳಾಗಿರುವ ಪದಾರ್ಥಗಳನ್ನು ವಿತರಣೆ ಮಾಡಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಆಹಾರ ಕಿಟ್‍ನ್ನು ಮನೆಗೆ ತಂದು ನೋಡಿದಾಗ ಹಾಳಾದ ಪದಾರ್ಥಗಳನ್ನ ಕಂಡು ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸಿಎಂ ಯಡಿಯೂರಪ್ಪ ಜೆಟ್ ಪೈಲಟ್ ಇದ್ದಂತೆ: ಸಿದ್ದರಾಮಯ್ಯ ಹೇಳಿಕೆಗೆ ಶ್ರೀರಾಮುಲು ಟಾಂಗ್

    ಸಿಎಂ ಯಡಿಯೂರಪ್ಪ ಜೆಟ್ ಪೈಲಟ್ ಇದ್ದಂತೆ: ಸಿದ್ದರಾಮಯ್ಯ ಹೇಳಿಕೆಗೆ ಶ್ರೀರಾಮುಲು ಟಾಂಗ್

    ರಾಯಚೂರು: ನಮ್ಮ ಸಿಎಂ ಯಡಿಯೂರಪ್ಪ ಜೆಟ್ ಪೈಲಟ್ ಇದ್ದಂತೆ, ಆ ಜೆಟ್ ಪೈಲಟ್ ನಲ್ಲಿ ಕುಳಿತು ನಾವು ಪ್ರಯಾಣ ಮಾಡುತ್ತಿದ್ದೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ರಾಯಚೂರಿನ ಮಸ್ಕಿಯ ವಟಗಲ್‍ನಲ್ಲಿ ಇಂದಿರಾ ಗಾಂಧಿ ವಸತಿ ಶಾಲೆಯ ಉದ್ಘಾಟನೆ ಬಳಿಕ ಮಾತನಾಡಿದ ಶ್ರೀರಾಮುಲು ನಮ್ಮ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ, ಕಲ್ಯಾಣ ಕರ್ನಾಟಕಕ್ಕೆ ಒತ್ತು ನೀಡುತ್ತಿದೆ. ಉಪ ಚುನಾವಣೆ ಬಳಿಕ ಮತ್ತಷ್ಟು ಜನರಿಗೆ ಸಚಿವ ಸ್ಥಾನ ಸಿಗಲಿದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಇಬ್ಬರು ಅಥವಾ ಮೂವರು ಮಂತ್ರಿಗಳಾಗುವ ಅವಕಾಶ ಇದೆ ಎಂದು ಹೇಳಿದರು.

    ಈ ವೇಳೆ ನಮ್ಮ ಸಿಎಂ ಯಡಿಯೂರಪ್ಪ ಜೆಟ್ ಪೈಲೆಟ್ ಇದ್ದಂತೆ. ಆ ಜೆಟ್ ಪೈಲಟ್ ನಲ್ಲಿ ಕುಳಿತು ನಾವು ಪ್ರಯಾಣ ಮಾಡುತ್ತಿದ್ದೇವೆ. ಜೆಟ್ ಎಷ್ಟು ವೇಗವಾಗಿ ಹೋಗುತ್ತೋ ಅದೇ ಮಾದರಿಯಲ್ಲಿ ಬಿಜೆಪಿ ಸರ್ಕಾರ ನಡೆದಿದೆ ಎಂದು ಹೇಳುವ ಮೂಲಕ ರಾಜ್ಯದ ಬಿಎಸ್ ವೈ ಸರ್ಕಾರ ಡಕೋಟಾ ಬಸ್ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಟಾಂಗ್ ನೀಡಿದ್ದಾರೆ.

    ಅಲ್ಲದೆ ರಾಜ್ಯದಲ್ಲಿ ಕುರುಬರು ಹಾಗೂ ಪಂಚಮಸಾಲಿಯವರು ಹೋರಾಟ ನಡೆಸಿದ್ದಾರೆ. ಎರಡು ಸಮಾಜದ ಗುರುಗಳ ಪಾದಯಾತ್ರೆ ನಾನು ನೋಡಿದ್ದೇನೆ. ಕುರುಬರಿಗೆ ಎಸ್ ಟಿ ಸೇರಿಸಲು ಕೆಲವು ಕಾನೂನು ತೊಡಕುಗಳು ಇವೆ. ಕುಲಶಾಸ್ತ್ರ ಅಧ್ಯಯನ ನಡೆಯಬೇಕಿದೆ. ಅಧ್ಯಯನದ ಬಳಿಕ ಸರ್ಕಾರ ಅಂತಿಮ ತೀರ್ಮಾನಕ್ಕೆ ಬರುತ್ತೆ. ಪಂಚಮ ಸಾಲಿಗೆ 2 ಎ ನೀಡುವ ವಿಚಾರದ ಬಗ್ಗೆ ಸಿಎಂ ಬಿಎಸ್ ವೈ ಈಗಾಗಲೇ ಅಧ್ಯಯನಕ್ಕಾಗಿ ಆದೇಶ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದಿಂದ ಅಧ್ಯಯನದ ವರದಿ ಬರಲಿ ಎಂದು ಸಚಿವ ಶ್ರೀ ರಾಮುಲು ಹೇಳಿದ್ದಾರೆ.

    ಇದಕ್ಕೂ ಮುನ್ನ ನಡೆದ ಇಂದಿರಾ ಗಾಂಧಿ ವಸತಿ ಶಾಲೆಯ ಉದ್ಘಾಟನಾ ಸಮಾರಂಭದ ವೇದಿಕೆ ಸರ್ಕಾರಿ ಕಾರ್ಯಕ್ರಮದ ಬದಲು ರಾಜಕೀಯ ಮತ ಪ್ರಚಾರ ವೇದಿಕೆಯಾಗಿ ಮಾರ್ಪಟ್ಟಿತ್ತು. ಸಚಿವ ಶ್ರೀರಾಮುಲು, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮುಂಬರುವ ಮಸ್ಕಿ ಉಪಚುನಾವಣೆಗೆ ಈಗಾಗಲೇ ಮತಯಾಚನೆ ಮಾಡಿದರು. ಮಸ್ಕಿ ಉಪಚುನಾವಣೆ ಬಿಜೆಪಿ ಉಸ್ತುವಾರಿಯಾಗಿರುವ ಶ್ರೀರಾಮುಲು, ಪ್ರತಾಪ್ ಗೌಡರಿಂದ ನಾನು ಸಚಿವನಾಗಿದ್ದೇನೆ ಹಾಗಾಗಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಶಾಸಕ ಪ್ರತಾಪ್ ಗೌಡ ಪಾಟೀಲ್ ತಮ್ಮ ಸಾಧನೆಗಳನ್ನ ಹೇಳಿ ಮತಯಾಚನೆ ಮಾಡಿದರು.

  • ಗುಜುರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ – 4 ಲಕ್ಷ ಮೌಲ್ಯದ ವಸ್ತುಗಳು ಭಸ್ಮ

    ಗುಜುರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ – 4 ಲಕ್ಷ ಮೌಲ್ಯದ ವಸ್ತುಗಳು ಭಸ್ಮ

    ರಾಯಚೂರು: ತಡರಾತ್ರಿ ಗುಜುರಿ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನ ಕೋಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಗುಜುರಿ ಅಂಗಡಿಯು ಸೈಯದ್ ಉಸ್ಮಾನ್ ಎಂಬವರಿಗೆ ಸೇರಿದೆ. ಘಟನೆಯಿಂದ ಅಂಗಡಿಯಲ್ಲಿದ್ದ ನಾಲ್ಕು ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಕೂಡಲೇ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿನಂದಿಸಿದ್ದರಿಂದ ಕೆಲವಷ್ಟು ವಸ್ತುಗಳು ಉಳಿದುಕೊಂಡಿದೆ.

    ಸುಮಾರು ಎಂಟು ಲಕ್ಷ ಮೌಲ್ಯದ ವಸ್ತುಗಳಲ್ಲಿ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ವಸ್ತು ಸುಟ್ಟುಹೋಗಿವೆ. ಆದರೆ ಬೆಂಕಿ ಹೊತ್ತಿಕೊಂಡಿದ್ದರ ಕಾರಣ ಇನ್ನೂ ತಿಳಿದು ಬಂದಿಲ್ಲ. ಕಳೆದ ವರ್ಷ ಸಹ ಗುಜುರಿ ಅಂಗಡಿಗೆ ಆಕಸ್ಮಿಕ ಬೆಂಕಿ ಹೊತ್ತಿ ಎರಡು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಹಾಳಾಗಿದ್ದವು. ಈಗ ಪುನಃ ಬೆಂಕಿ ಅವಘಡ ಸಂಭವಿಸಿದೆ.

    ಈ ಸಂಬಂಧ ಸಿಂಧನೂರು ನಗರ ಪೋಲೀಸ್ ಠಾಣೆಯಲ್ಲಿ ಸೈಯದ್ ಉಸ್ಮಾನ್ ಪ್ರಕರಣ ದಾಖಲಿಸಿದ್ದಾರೆ.

  • ಕೆಡಿಪಿ ಸಭೆ  – ಡಿಸಿಎಂ ಸವದಿಯಿಂದ ಅಧಿಕಾರಿಗಳಿಗೆ ತರಾಟೆ

    ಕೆಡಿಪಿ ಸಭೆ – ಡಿಸಿಎಂ ಸವದಿಯಿಂದ ಅಧಿಕಾರಿಗಳಿಗೆ ತರಾಟೆ

    ರಾಯಚೂರು: ಡಿಸಿ, ಸಿಇಓ ,ಎಸ್‍ಪಿ ಸೇರಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಿರಾ? ಅಕ್ರಮ ಮರಳುಗಾರಿಕೆ, ಮಟಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ನೀವುಗಳು ಇದರಲ್ಲಿ ಶಾಮೀಲಾಗಿದ್ದಾರಾ? ಅಕ್ರಮ ನಡೆಯುತ್ತಿದ್ದರೂ ಯಾಕೆ ಸುಮ್ಮನಿದ್ದೀರಿ ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಮುಂದೆ ನಾನು ಎಂತಹ ಉಸ್ತುವಾರಿ ಸಚಿವ ಎನ್ನುವುದನ್ನು ತೋರಿಸುತ್ತೇನೆ ಲಕ್ಷ್ಮಣ್ ಸವದಿ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡಿದ್ದಾರೆ.

    ನಗರದ ಜಿ.ಪಂ ಸಭಾಂಗಣದಲ್ಲಿ ಉಪಮುಖ್ಯಮಂತ್ರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲೆಯ ಶಾಸಕರು ಜಿಲ್ಲಾಡಳಿತ ವಿರುದ್ಧ ಆರೋಪಗಳ ಸುರಿಮಳೆಗೈದರು. ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಜಿಲ್ಲೆಯಲ್ಲಿ ಕೆಲಸಗಳು ಆಗುತ್ತಿಲ್ಲ ಎಂದು ಸಭೆಯಲ್ಲಿ ಶಾಸಕ ದದ್ದಲ ಬಸನಗೌಡ ಹಾಗೂ ಶಿವನಗೌಡ ಆರೋಪಿಸಿದರು. ಶಾಸಕರು ಲಂಚಕೊಟ್ಟು ಅಧಿಕಾರಿಗಳ ಹತ್ತಿರ ಕೆಲಸ ಮಾಡಿಸಿಕೊಳ್ಳಬೇಕಿದೆ ಅಂತ ಶಿವನಗೌಡ ನಾಯಕ್ ಬೇಸರ ವ್ಯಕ್ತಪಡಿಸಿದರು.

    ಮರಳುಗಾರಿಕೆಗೆ ಬ್ರೇಕ್ ಬೀಳುತ್ತಿಲ್ಲ ಎಂದು ಶಾಸಕ ಬಸನಗೌಡ ಆಕ್ರೋಶಗೊಂಡರು. ದೊಡ್ಡ ಗಾಡಿಗಳಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಗೆ ಬರುವ ಅನುದಾನವೇ ಕಡಿಮೆಯಿದೆ. ಹತ್ತಿ ಹೊತ್ತು ಬರುವ ರೈತರ ಗಾಡಿಗಳಿಗೆ ದಂಡ ಹಾಕ್ತಾರೆ ಮರಳು ಲಾರಿಗಳನ್ನ ಹಾಗೆಯೇ ಬಿಡುತ್ತಾರೆ ಎಂದು ಶಾಸಕ ಬಸನಗೌಡ ಹೇಳಿದರು.

    ಶಾಸಕರ ಆರೋಪ ಕುರಿತು ಅಧಿಕಾರಿಗಳನ್ನ ಪ್ರಶ್ನಿಸಿದ ಡಿಸಿಎಂ ಒಬ್ಬೊಬ್ಬರನ್ನೆ ತರಾಟೆಗೆ ತೆಗೆದುಕೊಂಡರು. ಆರ್ ಟಿ ಓ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಒಟ್ಟಾರೆ ಜಿಲ್ಲಾಡಳಿತ ಅಕ್ರಮದಲ್ಲಿ ಭಾಗಿಯಾಗಿದ್ದಾರಾ ಯಾಕೆ ಅಕ್ರಮ ತಡೆಯುತ್ತಿಲ್ಲ. ಅಕ್ರಮಕ್ಕೆ ಬ್ರೇಕ್ ಬೀಳದಿದ್ದರೆ ತಪ್ಪಿತಸ್ಥರನ್ನ ಅಮಾನತ್ತು ಮಾಡುವುದಾಗಿ ಎಚ್ಚರಿಕೆ ನೀಡಿದರು. ಮುಂದೆ ಅಕ್ರಮ ನಡೆದರೆ ಎಸ್ ಪಿ ಹಾಗೂ ಜಿಲ್ಲಾಧಿಕಾರಿಯೇ ಹೊಣೆಗಾರರಾಗುತ್ತಾರೆ ಎಂದರು.

    ಇನ್ನೂ ಫಸಲ್ ಭೀಮಾ ಯೋಜನೆ ವಿಮಾ ಹಣ ರೈತರಿಗೆ ಸರಿಯಾಗಿ ತಲುಪುತ್ತಿಲ್ಲ, ಅಧಿಕಾರಿಗಳ ಕಿವಿ ಹಿಡಿದು ಶಾಸಕರು ಕೆಲಸಮಾಡಿಸಬೇಕಿದೆ. ಹಾಗಾದರೆ ಮಾತ್ರ ರೈತರು ಕಟ್ಟಿದ ಇನ್ಸೂರೆನ್ಸ್ ಹಣ ರೈತರಿಗೆ ಸಿಗುತ್ತದೆ ಅಂತ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

    ಸಭೆಯಲ್ಲಿ ಮಾನ್ವಿ ಶಾಸಕ ವೆಂಕಟಪ್ಪ ನಾಯಕ್ ಟಿಎಲ್ ಬಿಸಿ ಕೆಳ ಭಾಗದ ರೈತರಿಗೆ ನೀರು ಕೊಡುವಂತೆ ಒತ್ತಾಯ ಮಾಡಿದರು. ಐಸಿಸಿ ನಿರ್ಣಯದಂತೆ 3300 ಕ್ಯೂಸೆಕ್ ನೀರು ಹರಿಸುತ್ತಿಲ್ಲ. ಇದರಿಂದ ರೈತರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಕೂಡಲೇ ನೀರು ಹರಿಸುವ ಕಡೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಹಿಂದೆ ಭದ್ರಾದಿಂದ ನೀರು ತರಲಾಗಿತ್ತು ಈಗಲೂ ಬೇರೆಡೆಯಿಂದ ನೀರು ತಂದು ಕೊಡಿ ಎಂದು ವೆಂಕಟಪ್ಪ ನಾಯಕ್ ಪಟ್ಟು ಹಿಡಿದರು. ಭದ್ರಾದಿಂದ ನೀರು ತರುವ ಬಗ್ಗೆ ಮಾತನಾಡುವುದಾಗಿ ಸಚಿವ ಲಕ್ಷ್ಮಣ್ ಸವದಿ ಭರವಸೆ ನೀಡಿದರು.

  • ರಾಯಚೂರಿನ ಎರಡು ಸುತ್ತಿನ ಕೋಟೆಯ ಕಂದಕದಲ್ಲಿ ಗೀಜಗ ಹಕ್ಕಿಗಳ ಕಲರವ

    ರಾಯಚೂರಿನ ಎರಡು ಸುತ್ತಿನ ಕೋಟೆಯ ಕಂದಕದಲ್ಲಿ ಗೀಜಗ ಹಕ್ಕಿಗಳ ಕಲರವ

    – ಗೂಡು ಕಟ್ಟುವ ರೊಮ್ಯಾಂಟಿಕ್ ಕಥನ ಇಲ್ಲಿದೆ

    ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಈಗ ಎಲ್ಲಿ ನೋಡಿದರು ಬಣ್ಣ ಬಣ್ಣ. ಹಸಿರು ಮೈಹೊದ್ದುಕೊಂಡ ದೃಶ್ಯ ಮಳೆಗಾಲದಲ್ಲೂ ಕೂಡ ಅಪರೂಪ. ಆದರೆ ನಗರದ ಐತಿಹಾಸಿಕ ಎರಡು ಸುತ್ತಿನ ಕೋಟೆ ಪಕ್ಷಿಧಾಮವಾಗಿ ಮಾರ್ಪಟ್ಟಿದೆ. ಹಕ್ಕಿಗಳ ಕಲರವ ಕಣ್ಮನ ಸೆಳೆಯುತ್ತಿದೆ. ಜಿಲ್ಲೆಯ ಕೆರೆಗಳಿಗೆ ಬೇಸಿಗೆಯಲ್ಲಿ ವಲಸೆ ಹಕ್ಕಿಗಳು ಸಾಮಾನ್ಯವಾಗಿ ಬರುತ್ತವೆ. ಆದರೆ ಈ ಬಾರಿ ಚಳಿಗಾಲದಲ್ಲಿ ಸ್ಥಳೀಯ ಹಕ್ಕಿಗಳ ಕಲರವವೇ ಜೋರಾಗಿದೆ. ನಗರದ ಕೇಂದ್ರ ಬಸ್ ನಿಲ್ದಾಣ ಬಳಿ ಕೋಟೆಯ ಕಂದಕ ಪ್ರದೇಶದಲ್ಲಿ ಗೀಜಗ ಹಕ್ಕಿಗಳು ಗೂಡಗಳನ್ನು ಕಟ್ಟಿ ಚಿಲಿಪಿಲಿಗುಟ್ಟುತ್ತಿವೆ.

    ಕಂದಕದ ತುಂಬಾ ಚರಂಡಿ ನೀರು ಹರಿಯುತ್ತಿದ್ದರೂ ಹಕ್ಕಿಗಳಿಗೆ ಅದೇ ಆಸರೆಯಾಗಿದೆ. ಹಳದಿ ಬಣ್ಣದ ತಳಿಯ ಗೀಜಗ, ನೇಕಾರ ಹಕ್ಕಿ, ಬಯಾ ಹಕ್ಕಿಗಳು ನೋಡುಗರನ್ನು ಆಕರ್ಷಿಸುತ್ತಿವೆ. ಮುಂಗಾರು ಮಳೆ ಪ್ರಾರಂಭವಾಗುವ ಮುನ್ನ ಗಂಡುಹಕ್ಕಿಗಳು ಗೂಡುಗಳನ್ನು ಕಟ್ಟಲು ಆರಂಭಿಸುತ್ತವೆ. ನೀರು ಹತ್ತಿರ ಇರಬೇಕು, ಸಾಕಷ್ಟು ಆಹಾರ ಸಿಗುತ್ತಿರಬೇಕು, ಇತರ ಪಕ್ಷಿ ಪ್ರಾಣಿಗಳಿಂದ ಅಪಾಯ ಇರಬಾರದು ಅಂತಹ ಸ್ಥಳ ಹುಡುಕಿ ಗೂಡು ಕಟ್ಟುವುದು ಗಿಜಗಹಕ್ಕಿಯ ಜಾಣತನ. ಹತ್ತಿ, ತೆಂಗಿನ ನಾರು, ಈಚಲು ನಾರು, ಭತ್ತದ ಹುಲ್ಲು ನಾರಿನಿಂದ ಗೂಡು ಕಟ್ಟುತ್ತವೆ. ಗಿಡದ ರೆಂಬೆ ಕೊಂಬೆಗಳ ತುದಿಯಲ್ಲಿ, ನೀರಿನ ಕಡೆ ಭಾಗಿದ ಕಡೆಗಳಲ್ಲಿ ಗೂಡುಗಳನ್ನ ಕಟ್ಟುತ್ತವೆ. ಶಂಕಾಕಾರದಲ್ಲಿ ಗೂಡು ಕಟ್ಟಿ ತುದಿಯಲ್ಲಿ ಬಾಲದ ರೀತಿಯಲ್ಲಿ ಗೂಡು ಹೆಣೆದಿರುತ್ತವೆ. ಬೇರೆ ಪಕ್ಷಿಗಳು ಗೂಡು ಪ್ರವೇಶಿಸುವುದನ್ನು ತಡೆಯಲು ಈ ರೀತಿ ಮಾಡಿರುತ್ತವೆ. ಸಾಮಾನ್ಯವಾಗಿ ಹಕ್ಕಿಗಳು ಸಂತಾನೋತ್ಪತ್ತಿ ಬಳಿಕ ಗೂಡು ಖಾಲಿ ಮಾಡುತ್ತವೆ ಆದರೆ ಈ ಬಾರಿ ಹಕ್ಕಿಗಳ ಕಲರವ ಮುಂದುವರಿದಿದೆ.

    ಗೀಜಗ ಪಕ್ಷಿಗಳು ಗೂಡು ಕಟ್ಟುವುದು ಒಂದು ರೊಮ್ಯಾಂಟಿಕ್ ಕಥನ ಎಂದು ಪಕ್ಷಿ ಪ್ರೇಮಿ, ನಿವೃತ್ತ ಪ್ರಾಣಿಶಾಸ್ತ್ರ ಉಪನ್ಯಾಸಕ ಪ್ರೋ.ಶಾನು ಕುಮಾರ್ ಹೇಳಿದ್ದಾರೆ. ಗಂಡು ಹಕ್ಕಿ ಅರ್ಧದಷ್ಟು ಗೂಡುಕಟ್ಟಿ ಹೆಣ್ಣು ಹಕ್ಕಿಗಾಗಿ ಕಾಯುತ್ತಿರುತ್ತವಂತೆ. ಹೆಣ್ಣು ಹಕ್ಕಿ ಗೂಡನ್ನು ಪರಿಶೀಲಿಸಿ ಒಪ್ಪಿಗೆ ಕೊಟ್ಟರೆ ಗೂಡು ಕಟ್ಟುವುದನ್ನ ಗಂಡು ಹಕ್ಕಿ ಮುಂದುವರಿತ್ತದೆ. ಇಲ್ಲದಿದ್ದರೆ ಗಂಡು ಹಕ್ಕಿ ಗೂಡುಕಟ್ಟಲು ಮತ್ತೊಂದು ಸ್ಥಳವನ್ನ ಹುಡುಕುತ್ತದೆ. ಇನ್ನೂ ಕೆಲ ಗಂಡು ಹಕ್ಕಿ ಮೂರ್ನಾಲ್ಕು ಗೂಡುಗಳನ್ನು ಅರ್ಧಕ್ಕೆ ಹೆಣೆದಿರುತ್ತವೆ, ಹೆಣ್ಣು ಹಕ್ಕಿ ಆಯ್ಕೆಮಾಡುವ ಗೂಡನ್ನು ಒಟ್ಟಾಗಿ ಪೂರ್ಣ ಕಟ್ಟಿಕೊಳ್ಳುತ್ತವೆ. ಗೂಡು ಪೂರ್ಣಗೊಂಡ ನಂತರ ಸಂತಾನೋತ್ಪತ್ತಿ ಮಾಡುತ್ತವೆ. ಮಳೆ ನೀರು ಒಳಗೆ ಬರದಂತೆ ಗೂಡನ್ನ ಮಣ್ಣಿನಿಂದ ಮೆತ್ತಿ ಕಟ್ಟಿರುತ್ತವೆ. ಮಿಂಚು ಹುಳುಗಳನ್ನ ತಂದಿಟ್ಟುಕೊಂಡು ಬೆಳಕು ಮಾಡಿಕೊಳ್ಳುತ್ತವೆ. 18 ರಿಂದ 20 ದಿನದಲ್ಲಿ ಒಂದು ಗೂಡನ್ನ ಕಟ್ಟುತ್ತವೆ. ಸುಮಾರು ಐವತ್ತು ಸಾವಿರ ಹುಲ್ಲಿನ ಎಳೆಗಳಿಂದ ಗೂಡು ಕಟ್ಟಿಕೊಳ್ಳುತ್ತವೆ.

    ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಗೂಡುಕಟ್ಟಲು ಗೀಜಗ ಹಕ್ಕಿಗಳು ಪ್ರಾರಂಭಿಸುತ್ತವೆ. ಮಳೆಗಾಲ ಮುಗಿದ ಬಳಿಕ ಗೂಡು ಬಿಡುತ್ತವೆ. ಈ ಬಾರಿ ಚಳಿಗಾಲದಲ್ಲೂ ರಾಯಚೂರಿನಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತಿದೆ.

  • ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್‍ನಲ್ಲಿ ಬಿಜೆಪಿ ಹಾಳಾಗ್ತಿದೆ : ಹೆಚ್.ವಿಶ್ವನಾಥ್

    ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್‍ನಲ್ಲಿ ಬಿಜೆಪಿ ಹಾಳಾಗ್ತಿದೆ : ಹೆಚ್.ವಿಶ್ವನಾಥ್

    – ವಿಜಯೇಂದ್ರನಿಂದ ಬಿಜೆಪಿಗೆ ಸನ್ ಸ್ಟ್ರೋಕ್
    – ಶೀಘ್ರದಲ್ಲಿಯೇ ಸಿಡಿ ಬ್ಲಾಸ್ಟ್ ಆಗುತ್ತೆ

    ರಾಯಚೂರು: ಈ ಹಿಂದೆ ಕಾಂಗ್ರೆಸ್, ಜನತಾದಳದ ರೀತಿಯಲ್ಲಿಯೇ ಬಿಜೆಪಿ ಸಹ ಸನ್ ಸ್ಟ್ರೋಕ್ ಮತ್ತು ಫ್ಯಾಮಿಲಿ ಸ್ಟ್ರೋಕ್ ನಲ್ಲಿ ಹಾಳಾಗುತ್ತಿದೆ ಎಂದು ಎಂಎಲ್‍ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.

    ಇಂದು ರಾಯಚೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಈಗ ನಡೆಯುತ್ತಿರುವುದು ಸನ್ ಸ್ಟ್ರೋಕ್, ಈ ಸನ್ ಸ್ಟ್ರೋಕ್‍ಗೆ ಹಿಂದೆ ಜನತಾ ಪರಿವಾರ ಮುಳುಗಿತು. ಕಾಂಗ್ರೆಸ್ ಸಹ ಸನ್ ಸ್ಟ್ರೋಕ್ ನಲ್ಲಿ ಹಾಳಾಗಿ ಹೋಗಿದೆ. ಇದೀಗ ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್ ನಲ್ಲಿ ಬಿಜೆಪಿ ಹಾಳಾಗುತ್ತಿದೆ. ಸಿಎಂ ಪುತ್ರ ವಿಜಯೆಂದ್ರನಿಂದ ಈಗ ಬಿಜೆಪಿಗೆ ಸನ್ ಸ್ಟ್ರೋಕ್ ಆವರಿಸಿದೆ. ಯಾರ ಮುಲಾಜು, ಯಾರ ಭಿಕ್ಷೆಯಿಂದ ಸಿಎಂ ಸ್ಥಾನದಲ್ಲಿ ಕುಳಿತಿದ್ದಿರಾ ಯೋಚಿಸಿ ಎಂದು ಪ್ರಶ್ನಿಸಿದರು.

    ಭಷ್ಟನಿಗೆ ಮಂತ್ರಿ ಸ್ಥಾನ: ಸಂಪುಟ ವಿಸ್ತರಣೆ, ಪುನರ್ ರಚನೆ ಸಿಎಂ ಪರಮಾಧಿಕಾರ. ಹಲವು ಒತ್ತಾಯಗಳು ಬರುವುದು ಸಹಜ. ಆದರೆ ಆದ್ರೆ ಭ್ರಷ್ಟರನ್ನು ಮಂತ್ರಿ ಮಾಡುವ ಒತ್ತಾಯ ಸಾಮಾನ್ಯವಾಗಿ ಬರುವುದಿಲ್ಲ. ಭ್ರಷ್ಟನನ್ನು, ದಲ್ಲಾಳಿಯನ್ನು ಮಂತ್ರಿ ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ. ಯೋಗೇಶ್ವರ್ ಭ್ರಷ್ಟಾಚಾರವನ್ನು ಹೊತ್ತು ಮಲಗಿದ್ದಾನೆ. 9,731 ಜನರ ಬಳಿ ಮೆಗಾ ಸಿಟಿಗೆ ನೂರಾರು ಕೋಟಿ ದುಡ್ಡು ತೆಗೆದುಕೊಂಡಿದ್ದಾನೆ. ಭ್ರಷ್ಟನ ವಿರುದ್ಧ ಮೋಸ ಹೋದವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನ್ಯಾಯಾಲಯ ಸಿರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಗೆ ರೆಫರ್ ಮಾಡಿದೆ. ಸಾವಿರಾರು ಜನರಿಗೆ ಟೋಪಿ ಹಾಕಿದವನಿಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಇಷ್ಟೆಲ್ಲಾ ಮಾಡಿರುವ ಆತನಿಗೆ ನಿನ್ನೆ ಬಾಯಿ ತಪ್ಪಿ ಸೈನಿಕ ಎಂದೆ ಹಾಗೆ ಕರೆದರೆ ಅದು ನಿಜವಾದ ಸೈನಿಕನಿಗೂ ಅವಮಾನ ಎಂದು ಯೋಗೇಶ್ವರ್ ವಿರುದ್ಧ ಗುಡುಗಿದರು.

    ಯಡಿಯೂರಪ್ಪನವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದೆವು. ಬಿಎಸ್‍ವೈರವರಿಗೆ ಒಳ್ಳೆಯದಾಗಲಿ ಎಂದು 17 ಜನ ಕ್ಷಿಪ್ರ ಕ್ರಾಂತಿಗೆ ಬಂದಿದ್ದೇವು. ಆದರೆ ಸಂಪುಟದಿಂದ ದಲಿತ ನಾಗೇಶ್ ರನ್ನು ಕಿತ್ತು ಹಾಕಿದ್ದಿರಾ, ಹಿಂದುಳಿದ ವರ್ಗದ ಮುನಿರತ್ನನಿಗೆ ಅವಕಾಶ ನೀಡಿಲ್ಲ ಎಂದು ಸಿಎಂ ಬಿಎಸ್ ವೈ ವಿರುದ್ಧ ಆಕ್ರೋಶ ಹೊರಹಾಕಿದರು.

    ಶೀಘ್ರದಲ್ಲಿಯೇ ಸಿಡಿ ಬ್ಲಾಸ್ಟ್: ಈ ಬಾರಿ ಸಂಕ್ರಮಣಕ್ಕೆ ಹೋರಿ ಹಿಡಿದಾಗೆ ಹಿಡಿಯಲಾಗುತ್ತದೆ. ಸಿಡಿ ಶೀಘ್ರವೇ ಬಿಡುಗಡೆಯಾಗಲಿದೆ. ಅದನ್ನು ಯತ್ನಾಳ್ ಅಥವಾ ಯಾರೋ ಒಬ್ಬರು ಬಿಡುಗಡೆ ಮಾಡುತ್ತಾರೆ. ಈಗಲೂ ಯಡಿಯೂರಪ್ಪರವರ ಬಗ್ಗೆ ಅಭಿಮಾನವಿದೆ. ಆದರೆ ಅವರು ಕುಟುಂಬ ರಾಜಕಾರಣಕ್ಕೆ ಬಲಿಯಾಗುತ್ತಿದ್ದಾರಲ್ಲಾ ಎಂದು ಬೇಸರವಾಗುತ್ತಿದೆ. ಹಾಗಾಗಿ ಇಂದು ನಾಲಿಗೆ ಇಲ್ಲದ ನಾಯಕರೂ ಆಗಿದ್ದಾರೆ. ಅವರು ಕರೆದು ಮಾತನಾಡಿದರೆ ಮಾತನಾಡುತ್ತೇವೆ, ನಾವು ಸದ್ಯ ಪರಿಸ್ಥಿತಿಯಲ್ಲಿ ಶಿಶುಗಳಂತಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

    ಸಾರಾ ಮಹೇಶ್ ಕೊಚ್ಚೆಗುಂಡಿ: ಅಂದು ಕುಮಾರಸ್ವಾಮಿ, ಸಿದ್ದರಾಮಯ್ಯ ಸರಿಯಾಗಿದ್ದರೆ ಇಂದು ಇದೆಲ್ಲಾ ಆಗುತ್ತಿರಲಿಲ್ಲ ಎಂದರು. ಇನ್ನೂ ಸಾರಾ ಮಹೇಶ್ ಕೊಚ್ಚೆಗುಂಡಿ. ಅವನ ಬಗ್ಗೆ ಯಾವುದೇ ಮಾತನಾಡುವುದಿಲ್ಲ. ನನ್ನನ್ನು ನಮ್ಮವರು ನಡುನೀರಲ್ಲಿ ಬಿಟ್ಟಿಲ್ಲ, ಇಲ್ಲಿ ಯಾವ ನೀರೇ ಇಲ್ಲಾ. ನಾನೇನಾದರೂ ಅಸಂಬದ್ಧವಾಗಿ ಮಾತನಾಡಿದರೆ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದು ವಾಗ್ದಾಳಿ ತಿಳಿಸಿದರು.