Tag: ಪಬ್ಲಿಕ್ ಟಿವಿ Public tv

  • ಫೋನ್ ಕದ್ದಾಲಿಕೆ ಸಣ್ಣ ಸಾಕ್ಷಿ ನೀಡಿದ್ರೂ ಕ್ರಮ: ಬಿಎಸ್‍ವೈಗೆ ಸಿಎಂ ಸವಾಲು

    ಫೋನ್ ಕದ್ದಾಲಿಕೆ ಸಣ್ಣ ಸಾಕ್ಷಿ ನೀಡಿದ್ರೂ ಕ್ರಮ: ಬಿಎಸ್‍ವೈಗೆ ಸಿಎಂ ಸವಾಲು

    ರಾಮನಗರ: ರಾಜ್ಯ ಸರ್ಕಾರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎನ್ನುವುದಕ್ಕೆ ಯಡಿಯೂರಪ್ಪನವರು ಯಾವುದೇ ಸಣ್ಣ ಸಾಕ್ಷ್ಯ ನೀಡಿದರೂ ಕೂಡ ನಾನೇ ನೇರ ಕ್ರಮಕೈಗೊಳ್ಳುವುದಾಗಿ ಸಿಎಂ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

    ಜಿಲ್ಲೆಯ ಕೈಲಾಂಚದಲ್ಲಿ ಮಾತನಾಡಿದ ಸಿಎಂ, ಕೇಂದ್ರದಲ್ಲಿ ಅವರದ್ದೇ ಸರ್ಕಾರ ಆಡಳಿತ ನಡೆಸುತ್ತಿದೆ. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಯಾರ ಯಾರ ಫೋನ್ ಕದ್ದಾಲಿಕೆ ಆಗುತ್ತಿದೆ ಎಂಬುವುದನ್ನು ತನಿಖೆ ನಡೆಸಲು ಅವಕಾಶವಿದ್ದು, ತನಿಖೆ ನಡೆಸಲಿ. ಈ ಹಿಂದೆ ಬಿಜೆಪಿ ಸರ್ಕಾರದ ನಾಯಕರು ತಮ್ಮ ಆಡಳಿತದಲ್ಲಿ ಮಾಡಿದ ಕೆಲಸವನ್ನು ತಲೆಯಲ್ಲಿ ಇಟ್ಟುಕೊಂಡು ಈ ಆರೋಪ ಮಾಡಿರಬೇಕು. ಯಾವುದೇ ಪಕ್ಷದ ಮುಖಂಡರ ಅಥವಾ ವ್ಯಕ್ತಿಯ ಫೋನ್ ಕದ್ದಾಲಿಕೆ ಮಾಡುವ ಚಟವಿಲ್ಲ. ಇಂತಹ ಹವ್ಯಾಸದಲ್ಲಿ ನಾನು ಬೆಳೆದು ಬಂದಿಲ್ಲ. ಈ ಬಗ್ಗೆ ಸಣ್ಣ ಸಾಕ್ಷಿ ತಂದು ಕೊಟ್ಟರು ನಾನೇ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಎಸೆದರು.

    ಇದೇ ವೇಳೆ ಕೊಡಗು ಪ್ರವಾಹದಲ್ಲಿ ಉಂಟಾದ ನಷ್ಟದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ವರದಿ ನೀಡಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಈ ಕುರಿತು ಕ್ರಮಕೈಗೊಳ್ಳಲಾಗುತ್ತದೆ. ಕೇವಲ ಕೊಡಗು ಮಾತ್ರವಲ್ಲದೇ ಇತರೇ ಜಿಲ್ಲೆಗಳಲ್ಲಿ ಉಂಟಾದ ನಷ್ಟ ಕುರಿತು ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುತ್ತದೆ. ಇದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.

    ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದ ಬಿಎಸ್‍ವೈ, ಸಮ್ಮಿಶ್ರ ಸರ್ಕಾರ ಎಲ್ಲಿ ಬಿದ್ದು ಹೋಗುತ್ತದೆಯೋ ಎನ್ನುವ ಭೀತಿಯಿಂದ ರಾಜ್ಯಸರ್ಕಾರ ನನ್ನ ಹಾಗೂ ಸಿದ್ದರಾಮಯ್ಯನವರ ಫೋನ್‍ಗಳನ್ನು ಕದ್ದಾಲಿಕೆ ಮಾಡುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದ್ದರು. ಅಲ್ಲದೇ ಕಾಂಗ್ರೆಸ್ಸಿನ ಹಿರಿಯ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ. ಲೋಕಸಭಾ ಚುನಾವಣಾ ವೇಳೆಗೆ ಯಾವ ಯಾವ ನಾಯಕರು ಸೇರುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದ್ದರು.

    ಏನಿದು ಫೋನ್ ಟ್ಯಾಪಿಂಗ್?
    ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಫೋನ್ ಟ್ಯಾಪಿಂಗ್‍ಗೆ ವಿರೋಧದ ನಡುವೆಯೂ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ಅಂದಿನ ಕಾಂಗ್ರಸ್ಸಿನ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಅತ್ಯಾಧುನಿಕ ತಂತ್ರಜ್ಞಾನದ ದೂರವಾಣಿ ಕರೆ ಹಾಗೂ ಸಂಭಾಷಣೆಗಳ ಸಂಪೂರ್ಣ ಮಾಹಿತಿ ನೀಡುವ ಎರಡು ಸಾಧನಗಳನ್ನು ಖರೀದಿ ಮಾಡಲಾಗಿತ್ತು. ಅವುಗಳಲ್ಲಿ ಒಂದನ್ನು ರಾಜ್ಯ ಗುಪ್ತಚರ ಇಲಾಖೆಯಲ್ಲಿ ಇರಿಸಿದ್ದಾರೆ. ಇಂತಿಷ್ಟು ಮೀಟರ್ ಪರಿಧಿಯಲ್ಲಿ ಈ ಸಾಧನವನ್ನು ಅಳವಡಿಸಿ ಅದರಲ್ಲಿ ನಿಗಧಿತ ಫೋನ್ ನಂಬರ್‍ಗಳನ್ನು ಅನ್ನು ನಮೂದಿಸಿದರೆ, ಆ ನಂಬರಿನ ಒಳ ಮತ್ತು ಹೊರ ಕರೆಗಳ ಸಂಭಾಷಣೆಗಳನ್ನು ಯಥಾವತ್ತಾಗಿ ಕೇಳಬಹುದಾಗಿದೆ. ಅಲ್ಲದೇ ಅವುಗಳನ್ನು ಧ್ವನಿಮುದ್ರಿಕೆ ಕೂಡ ಮಾಡಬಹುದಾಗಿದೆ.

    ಮಾಹಿತಿಗಳ ಪ್ರಕಾರ ಕಾಂಗ್ರೆಸ್‍ನ 15 ಶಾಸಕರು ಹಾಗೂ ಒಬ್ಬ ಸಚಿವರು ಸೇರಿದಂತೆ ಇಬ್ಬರು ಜೆಡಿಎಸ್ ಒಬ್ಬರು ಹಾಗೂ ಮೂವರು ಮಾಜಿ ಶಾಸಕರ ಫೋನ್ ಕದ್ದಾಲಿಕೆ ನಡೆದಿದ್ದು, ಸಂಭಾಷಣೆಯಲ್ಲಿ ಸಂಪುಟ ವಿಸ್ತರಣೆ ಗಣೇಶ ಹಬ್ಬಕ್ಕೆ ಮೊದಲು ಆಗದಿದ್ದರೆ, ಲೋಕಸಭಾ ಚುನಾವಣೆಗೂ ಮುನ್ನವೇ ಸರ್ಕಾರಕ್ಕೆ ಆಪತ್ತು ಬರುವ ಸೂಚನೆ ಇದೆ. ಸಾಧ್ಯವಾದರೆ ಬದಲಿ ಸರ್ಕಾರವನ್ನು ರಚನೆ ಮಾಡೋಣ, ಇಲ್ಲವೇ ಹೊಸದಾಗಿ ಚುನಾವಣೆ ಎದುರಿಸುವ ಕುರಿತು ದಾಖಲಾಗಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv