Tag: ಪಬ್ಲಿಕ್ ಟಿವಿ Private Bus

  • ಶಿವಮೊಗ್ಗದಲ್ಲಿ ಖಾಸಗಿ ಬಸ್ ಪ್ರಯಾಣ ದರ ಶೇ.25 ರಷ್ಟು ಹೆಚ್ಚಳಕ್ಕೆ ನಿರ್ಧಾರ

    ಶಿವಮೊಗ್ಗದಲ್ಲಿ ಖಾಸಗಿ ಬಸ್ ಪ್ರಯಾಣ ದರ ಶೇ.25 ರಷ್ಟು ಹೆಚ್ಚಳಕ್ಕೆ ನಿರ್ಧಾರ

    – ರಸ್ತೆ ಸಾರಿಗೆ ಪ್ರಾಧಿಕಾರದ ಸಭೆ
    – ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿಕೆ

    ಶಿವಮೊಗ್ಗ: ಜಿಲ್ಲೆಯಲ್ಲಿ ಖಾಸಗಿ ಬಸ್‍ಗಳ ಪ್ರಯಾಣ ದರವನ್ನು ಶೇ.25 ರಷ್ಟು ಹೆಚ್ಚಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ನೆರೆಯ ಜಿಲ್ಲೆಗಳಲ್ಲಿ ಈಗಾಗಲೇ ಖಾಸಗಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವಂತೆ ಜಿಲ್ಲೆಯಲ್ಲಿಯೂ ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‍ಗಳ ನಡುವೆ ಅನಾರೋಗ್ಯಕರ ಪೈಪೋಟಿ ತಪ್ಪಿಸಲು ಎರಡು ಕಡೆಯವರು ಸಹಕರಿಸಬೇಕು. ಸರ್ಕಾರಿ ಬಸ್ ನಿಲ್ದಾಣದ ಒಳಗೆ ಖಾಸಗಿಯವರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಅನಾರೋಗ್ಯಕರ ಪೈಪೋಟಿಯಲ್ಲಿ ತೊಡಗುವ ಬಸ್‍ಗಳನ್ನು ತಡೆದು ನಿಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಚಾರಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಸೂಚಿಸಿದ್ದಾರೆ.

    ಆಟೋ ರಿಕ್ಷಾ ಪ್ರಯಾಣದ ಕನಿಷ್ಟ ದರವನ್ನು ರೂ.40ಕ್ಕೆ ಪರಿಷ್ಕರಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಬೇರೆ ಜಿಲ್ಲೆಗಳಲ್ಲಿರುವ ಕನಿಷ್ಟ ದರ ಸೇರಿದಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಇದೇ ರೀತಿ ಶಿವಮೊಗ್ಗ ನಗರದ 20 ಕಿ.ಮೀ ವ್ಯಾಪ್ತಿಯಲ್ಲಿ ಆಟೋ ಚಾಲನೆಗೆ ಅವಕಾಶ ನೀಡಬೇಕೆಂಬ ಮನವಿ ಕುರಿತಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರು ಪರಿಶೀಲಿಸಿ ವರದಿ ಸಲ್ಲಿಸಲಿದ್ದಾರೆ. ಅದರ ಆಧಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

    ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಹೊಸ ಆಟೋ ಪರವಾನಿಗೆ ಅವಕಾಶ ನೀಡಲಾಗುತ್ತಿಲ್ಲ. ಇಲೆಕ್ಟ್ರಿಕಲ್ ಆಟೋಗಳಿಗೆ ಪರವಾನಿಗೆ ಅಗತ್ಯವಿಲ್ಲ. ಆದರೆ ಅದರ ಚಾಲಕರು ಸಹ ಸಮವಸ್ತ್ರವನ್ನು ಧರಿಸಬೇಕು. ಆಟೋ ಮೀಟರ್ ಹಾಕದಿರುವ ಬಗ್ಗೆ ಹೆಚ್ಚಿನ ದರ ವಸೂಲು ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿದ್ದು, ಅದಕ್ಕೆ ಅವಕಾಶ ಮಾಡಬಾರದು. ಎಲ್ಲರೂ ಕಡ್ಡಾಯವಾಗಿ ಮೀಟರ್ ಹಾಕಿ ಆಟೋ ಚಲಾಯಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಕೆಲವು ವಾಹನಗಳಲ್ಲಿ ಕಣ್ಣು ಕುಕ್ಕುವ ಎಲ್‍ಇಡಿ ಹೆಡ್‍ಲೈಟ್ ಅಳವಡಿಕೆಯಿಂದ ಅಪಘಾತಗಳು ಸಂಭವಿಸಿರುವ ಬಗ್ಗೆ ದೂರುಗಳು ಬಂದಿವೆ. ಅಂತಹ ವಾಹನಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್, ಆರ್‌ಟಿಒ ಶ್ರೀಧರ್, ವಿವಿಧ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಬೊಮ್ಮಾಯಿ ಜನತಾದಳದ ಸಿಎಂ – ಎಚ್‍ಡಿ ಕುಮಾರಸ್ವಾಮಿ

  • ಸಾರಿಗೆ ಅಧಿಕಾರಿಗಳ ವಿರುದ್ಧ ಖಾಸಗಿ ಬಸ್ ಚಾಲಕರ ಆಕ್ರೋಶ

    ಸಾರಿಗೆ ಅಧಿಕಾರಿಗಳ ವಿರುದ್ಧ ಖಾಸಗಿ ಬಸ್ ಚಾಲಕರ ಆಕ್ರೋಶ

    ಮೈಸೂರು: ಸಾರಿಗೆ ಅಧಿಕಾರಿಗಳು ಮತ್ತು ಖಾಸಗಿ ಬಸ್‍ಗಳ ಚಾಲಕರು, ನಿರ್ವಾಹಕರ ನಡುವೆ ವಾಗ್ವಾದ ನಡೆದಿರುವ ಘಟನೆ ಮೈಸೂರಿನ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಸಾರಿಗೆ ನೌಕರರು ಮುಷ್ಕರ ಮುಂದುವರಿದ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್‍ಗಳು ಇಲ್ಲದೇ ಖಾಸಗಿ ಬಸ್‍ಗಳು ಸೇವೆ ಸಲ್ಲಿಸುತ್ತಿವೆ. ಇದೀಗ ಒಂದೊಂದಾಗಿ ಕೆಎಸ್‌ಆರ್‌ಟಿಸಿ ಬಸ್‍ಗಳು ರಸ್ತೆಗಿಳಿಯುತ್ತಿದೆ.

    ಹಾಗಾಗಿ ಖಾಸಗಿ ಬಸ್‍ಗಳ ಚಾಲಕರು ಮತ್ತು ನಿರ್ವಾಹಕರು ನಾವು ಬೆಳಿಗ್ಗೆಯಿಂದಲೇ ನಮ್ಮ ಬಸ್‍ಗಳನ್ನು ತಂದು ನಿಲ್ಲಿಸಿ ಕಾದು ಕುಳಿತಿದ್ದೇವೆ. ನೀವು ಈಗ ಏಕಾಏಕಿ ಬಂದು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಮಾಡಲಿ ಬಿಟ್ಟರೆ ನಮ್ಮ ಗತಿಯೇನು? ನಮ್ಮನ್ನ ಉಪಯೋಗಿಸಿಕೊಂಡು ಬಿಸಾಡುತ್ತೀರಾ? ಎಂದು ಆಕ್ರೋಶ ಹೊರಹಾಕಿದ್ದಾರೆ.

    ನಾಲ್ಕು ದಿನಗಳಿಂದ ನಾವು ಸೇವೆ ನೀಡುತ್ತಿದ್ದೇವೆ. ಆದರೆ ಈಗ ಬಂದಿರುವ ಕೆಎಸ್‌ಆರ್‌ಟಿಸಿ ಬಸ್ ಭರ್ತಿಯಾದರೆ ನಾವು ಏನು ಮಾಡುವುದು. ನಮ್ಮ ಬಸ್‍ಗಳನ್ನು ಮೊದಲು ಬಿಡಿ ಆಮೇಲೆ ನಿಮ್ಮ ಬಸ್‍ಗಳು ಹೊರಡಲಿ ಎಂದು ಖಾಸಗಿ ಬಸ್ ಚಾಲಕರು, ನಿರ್ವಾಹಕರ ಒತ್ತಾಯಿಸಿದ್ದಾರೆ.

    ಸದ್ಯ ಖಾಸಗಿ ಬಸ್‍ಗಳ ಸಂಚಾರಕ್ಕೆ ಮೊದಲ ಆದ್ಯತೆ ನೀಡಿ. ನಿಲ್ದಾಣ ತುಂಬಾ ಬಸ್ ಇದೆ. ಆದರೆ ಪ್ರಯಾಣಿಕರೇ ಇಲ್ಲದ ಸ್ಥಿತಿಯಾಗಿದೆ ಎಂದು ಕಿಡಿಕಾರಿದ್ದಾರೆ.