ನವದೆಹಲಿ: ಇಂದು ದೇಶಕ್ಕೆ 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ರಾಷ್ಟ್ರ ರಾಜಧಾನಿ ಇದಕ್ಕಾಗಿ ನವವಧುವಿನಂತೆ ಸಿಂಗಾರಗೊಂಡಿದೆ. ದೆಹಲಿಯ ಕೆಂಪು ಕೋಟೆಯಲ್ಲಿ ಮೋದಿ ಎರಡನೇ ಬಾರಿ ಪ್ರಧಾನಿಯಾಗಿ ಮೊದಲ ಬಾರಿ ಧ್ವಜಾರೋಹಣ ಮಾಡಲಿದ್ದಾರೆ. ಈ ಬಾರಿ ಪ್ರಧಾನಿ ಮೋದಿ ದೇಶ ನಿವಾಸಿಗಳಿಗೆ ಏನ್ ಕೊಡ್ತಾರೆ ಅನ್ನೋ ನೀರಿಕ್ಷೆ ಒಂದು ಕಡೆ ಮತ್ತೊಂದು ಕಾಶ್ಮೀರ ಬೆಳವಣಿಗೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
73 ನೇ ಸ್ವಾತಂತ್ರ್ಯ ದಿನಾಚರಣೆಗೆ ದೆಹಲಿಯ ಕೆಂಪುಕೋಟೆ ಸಿದ್ಧವಾಗಿದೆ. ಬೆಳಗ್ಗೆ ಏಳು ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದು ಬಳಿಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ, ಒಟ್ಟು ಆರನೇ ಬಾರಿ ದಿಲ್ಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡುತ್ತಿದ್ದಾರೆ. ಹೀಗಾಗಿ ದೇಶದ ಜನ ಸಾಮಾನ್ಯರಲ್ಲಿ ಸಾಕಷ್ಟು ನಿರೀಕ್ಷೆಗಳು ಮೂಡಿದೆ. ಈ ಬಾರಿ ದೇಶವಾಸಿಗಳಿಗೆ ಮೋದಿ ಯಾವ ರೀತಿಯ ಭರಪೂರ ಕೊಡುಗೆಗಳನ್ನು ಕೊಡ್ತಾರೆ ಅನ್ನೋ ಕುತೂಹಲದಲ್ಲಿ ಜನರಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಹಾಗೂ ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಭಾಗಿಸಿದ್ದು ದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಲಡಾಖ್ ಬಳಿ ಇರುವ ಇಂಡೋ ಪಾಕ್ ಗಡಿಯಲ್ಲಿ ಪಾಕಿಸ್ತಾನ ತನ್ನ ಸೇನಾ ನೆಲದಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಿಕೊಳ್ಳುತ್ತಿದೆ. ಅಲ್ಲದೇ ಏಳು ಮಂದಿ ಆತ್ಮಾಹುತಿ ದಾಳಿಕೋರರು ದೇಶದ ಒಳಗೆ ನುಸುಳಿದ್ದಾರೆ ಅನ್ನೋ ಮಾಹಿತಿ ಆತಂಕ ಸೃಷ್ಠಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ದೆಹಲಿಯಲ್ಲಿ ಭಧ್ರತೆ:
* ದೆಹಲಿಯ ವಿಮಾನ, ರೈಲು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ತಪಾಸಣಾ ಹಂತಗಳನ್ನು ಹೆಚ್ಚಿಸಲಾಗಿದೆ.
* ದೆಹಲಿ ಸಂಸತ್ ಭವನ, ಇಂಡಿಯಾ ಗೇಟ್, ನಾರ್ತ್ ಮತ್ತು ಸೌತ್ ಬ್ಲಾಕ್ ಗೆ ಭದ್ರತೆ ಹೆಚ್ಚಳ
* ಕೆಂಪುಕೋಟೆಗೆ ವಿಶೇಷ ಭದ್ರತಾ ವ್ಯವಸ್ಥೆ
* ಕೆಂಪುಕೋಟೆ ಸುತ್ತು ಇಪ್ಪತ್ತು ಸಾವಿರ ಪೋಲಿಸರ ನೇಮಕ, 500ಸಿಸಿಟಿವಿ ಅವಳವಡಿಕೆ
* ಮೋದಿ ಭಾಷಣ ಮಾಡುವ ಸುತ್ತಾ ನಾಲ್ಕು ಹಂತದಲ್ಲಿ ಭದ್ರತೆ
* NSG, SPG, SWAT, ಆರ್ಮಿ, ಪ್ಯಾರಾ ಮಿಲಿಟರಿ ಮೂಲಕ ಭದ್ರತೆ ಒದಗಿಸಲಾಗಿದೆ.
ಕಾಶ್ಮೀರದಲ್ಲಿ ಅಮಿತ್ ಶಾ:
ದೆಹಲಿಯಲ್ಲಿ ಭಾರಿ ಬಿಗಿ ಭದ್ರತೆ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡ್ತಿದ್ರೆ ಇತ್ತ ಕಾಶ್ಮೀರಕ್ಕೆ ಗೃಹ ಸಚಿವ ಅಮಿತ್ ಶಾ ತೆರಳಿದ್ದಾರೆ. ಶ್ರೀನಗರದಲ್ಲಿರುವ ಲಾಲ್ ಚೌಕ್ ನಲ್ಲಿ ಧ್ವಜಾರೋಹಣ ಮಾಡಲಿದ್ದು ಪ್ರತ್ಯೇಕವಾದಿಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಉಗ್ರರ ಕರಿನೆರಳಿನ ಆತಂಕದ ವಾತಾವರಣ ನಡುವೆ 73 ರ ಸ್ವಾತಂತ್ರ್ಯ ಸಂಭ್ರಮ ನಡೆಯುತ್ತಿದ್ದು ಎಲ್ಲಿಯೂ ಕೂಡ ಅಚಾತುರ್ಯ ಆಗದಂತೆ ಎಚ್ಚರಿಕೆ ವಹಿಸಲಾಗಿದೆ.