Tag: ಪಬ್ಲಿಕ್ ಟಿವಿ New Delhi

  • ಕೋರ್ಟ್ ಮೊರೆ ಹೋದ 6 ಮಂದಿ ಸಚಿವರು – ಲಿಂಬಾವಳಿಯಿಂದ ನಡ್ಡಾ ಮಾಹಿತಿ ಸಂಗ್ರಹ

    ಕೋರ್ಟ್ ಮೊರೆ ಹೋದ 6 ಮಂದಿ ಸಚಿವರು – ಲಿಂಬಾವಳಿಯಿಂದ ನಡ್ಡಾ ಮಾಹಿತಿ ಸಂಗ್ರಹ

    – ಲಿಂಬಾವಳಿಗೆ ನಡ್ಡಾ ಪ್ರಶ್ನೆಗಳ ಮೇಲೆ ಪ್ರಶ್ನೆ

    ನವದೆಹಲಿ: ಮಾಜಿ ಸಚಿವರೊಬ್ಬರ ರಾಸಲೀಲೆ ಸಿಡಿ ಹೊರ ಬರುತ್ತಿದ್ದಂತೆಯೇ ಆರು ಮಂದಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಬೆನ್ನಲ್ಲೇ ಕೆಲಸದ ನಿಮಿತ್ತ ದೆಹಲಿಗೆ ಆಗಮಿಸಿರುವ ಸಚಿವ ಅರವಿಂದ ಲಿಂಬಾವಳಿಯಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಾಹಿತಿ ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. 6 ಮಂದಿ ಸಚಿವರು ಕೋರ್ಟ್ ಮೆಟ್ಟಿರುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ್ದ ಅರವಿಂದ ಲಿಂಬಾವಳಿ ಬಳಿಯಿಂದ ಜೆ.ಪಿ. ನಡ್ಡಾ ಇಂಚಿಂಚೂ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

    ಪಶ್ಚಿಮ ಬಂಗಾಳ ಚುನಾವಣೆಯ ಹಿನ್ನೆಲೆಯಲ್ಲಿ ಅರವಿಂದ ಲಿಂಬಾವಳಿ ದೆಹಲಿಗೆ ಆಗಮಿಸಿದ್ದಾರೆ. ಹೀಗೆ ಭೇಟಿ ವೇಳೆ ಜೆ.ಪಿ ನಡ್ಡಾ ಭೇಟಿ ಮಾಡಿ ಸಿಡಿ ಬಗ್ಗೆ ಚರ್ಚೆ ಮಾಡಿದ್ದಾರೆ. ಕೋರ್ಟ್ ಮೆಟ್ಟಿಲೇರಿ ತಾವೇ ತಪ್ಪಿತಸ್ಥರು ಎಂದು ಒಪ್ಪಿಕೊಂಡಂತಲ್ಲವೇ ಎಂದು ಲಿಂಬಾವಳಿಯನ್ನು ನಡ್ಡಾ ಪ್ರಶ್ನಿಸಿದ್ದಾರೆ. ಅಲ್ಲದೆ ಕೋರ್ಟಿಗೆ ಹೋಗುವ ಮುನ್ನ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿದ್ದರಾ…? ಮುಂದಿನ ನಡೆಗಳು ಏನು ಅನ್ನೊ ಬಗ್ಗೆ ಲಿಂಬಾವಳಿ ಬಳೀ ನಡ್ಡಾ ಸಮಾಲೋಚನೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಕೋರ್ಟ್ ಮೊರೆ ಹೋಗಿರುವ ಸಚಿವರು:
    ತಮ್ಮ ವಿರುದ್ಧ ಮಾಧ್ಯಮಗಳು ವರದಿ ಪ್ರಸಾರ ಮಾಡಬಾರದು ಎಂದು 6 ಮಂದಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ನಾರಾಯಣಗೌಡ, ಭೈರತಿ ಬಸವರಾಜ್ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕೆಂದು ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಆರು ಸಚಿವರಿಗೆ ಭೀತಿ ಹುಟ್ಟಿರುವುದು ಏಕೆ? ಇದ್ದಕ್ಕಿಂದ್ದಂತೆ ಯಾಕೆ ಕೋರ್ಟ್ ಮೊರೆ ಹೋಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

  • ಅಂತರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧ ವಿಸ್ತರಣೆ

    ಅಂತರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧ ವಿಸ್ತರಣೆ

    ನವದೆಹಲಿ: ಅಂತರಾಷ್ಟ್ರೀಯ ವಿಮಾನ ಹಾರಾಟದ ಮೇಲೆ ಹೇರಿದ್ದ ನಿರ್ಬಂಧವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಏವಿಯೇಷನ್ ವಾಚ್‍ಡಾಗ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ) ಶುಕ್ರವಾರ ತಿಳಿಸಿದೆ.

    ಭಾರತಕ್ಕೆ ಹೊರಗಿನಿಂದ ಬರುವ ಪ್ರಯಾಣಿಕರ ಸೇವೆಗಳಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಸುತ್ತೋಲೆಯನ್ನು 2021ರ ಮಾರ್ಚ್ 31ರವರೆಗೂ 2359 ಗಂಟೆಗಳ ಕಾಲ ವಿಸ್ತರಿಸಲಾಗಿದೆ ಹಾಗೂ ಈ ಸುತ್ತೋಲೆಗಳು ಕಾರ್ಗೋ ಕಾರ್ಯಚರಣೆ ನಡೆಸುತ್ತಿರುವ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ವಾಯುಯಾನ ಸಂಸ್ಥೆ ತಿಳಿಸಿದೆ. ಆದರೆ ಕೆಲವು ಆಯ್ದ ಮಾರ್ಗಗಳಿಗೆ ಅಂತರಾಷ್ಟ್ರೀಯ ವಿಮಾನಗಳಿಗೆ ಸಂಚಾರಿಸಲು ನಿಧಾನವಾಗಿ ಅನುಮತಿ ನೀಡಬಹುದು.

    2020ರ ಮಾರ್ಚ್‍ನಲ್ಲಿ ಕೊರೊನಾ ಸಾಂಕ್ರಮಿಕ ರೋಗದಿಂದ ಅಂತರಾಷ್ಟ್ರೀಯ ವಿಮಾನಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಕೆಲವು ತಿಂಗಳ ಬಳಿಕ ಕೆಲವು ನಿರ್ಬಂಧಗಳ ಆಧಾರದ ಮೇಲೆ ವಿಮಾನ ಸಂಚಾರ ಆರಂಭಗೊಂಡಿದ್ದು, ಆರ್ಥಿಕ ಬಿಕ್ಕಟ್ಟು ಇದೀಗ ಕೊಂಚ ಸುಧಾರಿಸಿದೆ.

    ಕಳೆದ ವರ್ಷ ಡಿಸೆಂಬರ್‍ನಲ್ಲಿ ಯುರೋಪಿನಲ್ಲಿ ಕೊರೊನಾ ವೈರಸ್ ಹೊಸ ತಳಿ ಪತ್ತೆಯಾಗಿದ್ದರಿಂದ ಅಂತರಾಷ್ಟ್ರೀಯ ವಿಮಾನಗಳ ಮೇಲೆ ನಿಷೇಧ ಹೇರಲಾಗಿತ್ತು. ಬಳಿಕ ನಿಷೇಧವನ್ನು ರದ್ದುಗೊಳಿಸಲಾಗಿತ್ತು.

  • ಪಂಜಾಬ್ ನಟ ದೀಪ್ ಸಿಧು ಹುಡುಕಿಕೊಟ್ಟವರಿಗೆ 1 ಲಕ್ಷ ಬಹುಮಾನ

    ಪಂಜಾಬ್ ನಟ ದೀಪ್ ಸಿಧು ಹುಡುಕಿಕೊಟ್ಟವರಿಗೆ 1 ಲಕ್ಷ ಬಹುಮಾನ

    ನವದೆಹಲಿ: ದೆಹಲಿ ಹಿಂಸಾಚಾರ ಘಟನೆಯ ಪ್ರಮುಖ ಆರೋಪಿಯಾಗಿರುವ ಪಂಜಾಬ್ ನಟ ದೀಪ್ ಸಿಧುನನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಪ್ರಕಟಿಸಿದ್ದಾರೆ.

    ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆ ಬಳಿ ನಡೆದ ರೈತರ ಪ್ರತಿಭಟನೆ ವೇಳೆಯ ಹಿಂಸಾಚಾರ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದೀಪ್ ಸಿಧು ಮತ್ತು ಇತರ ಆರೋಪಿಗಳು ನಾಪತ್ತೆಯಾಗಿದ್ದಾರೆ.

    ದೀಪ್ ಸಿಧು ಮತ್ತು ಇತರ ಆರೋಪಿಗಳನ್ನು ಬಂಧಿಸಲು ಸಹಾಯ ಮಾಡುವವರಿಗೆ 1 ಲಕ್ಷ ರೂಗಳ ಬಹುಮಾನ ನೀಡಲಾಗುತ್ತದೆ. ಇತರ 4 ಮಂದಿ ಆರೋಪಿಗಳ ಕುರಿತಂತೆ ಮಾಹಿತಿ ನೀಡಿದವರಿಗೆ 50,000 ರೂ ಬಹುಮಾನ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಣರಾಜ್ಯೋತ್ಸವ ನಡೆದ ಹಿಂಸಾಚಾರ ಘಟನೆಯಲ್ಲಿ ಜಗ್ಬೀರ್ ಸಿಂಗ್, ಬುಟಾ ಸಿಂಗ್, ಸುಖದೇವ್ ಸಿಂಗ್ ಮತ್ತು ಇಕ್ಬಾಲ್ ಸಿಂಗ್ ಪ್ರಮುಖ ಆರೋಪಿಗಳಾಗಿದ್ದಾರೆ.

    ಕೇಂದ್ರ ಸರ್ಕಾರದ ಕೃಷಿ ಕಾಯಿದೆಯನ್ನು ವಿರೋಧಿಸಿ ರೈತರು ನಡೆಸಿದ ಟ್ರಾಕ್ಟರ್ ರ್ಯಾಲಿ ಪ್ರತಿಭಟನೆ ವೇಳೆ ಬ್ಯಾರಿಕೇಡ್ ಮುರಿದು ಬಲವಂತವಾಗಿ ಕೆಂಪು ಕೋಟೆ ಒಳಗೆ ದಾರಿ ಮಾಡಿಕೊಂಡು ನುಗ್ಗಿ ಅಲ್ಲಿದ್ದ ಧ್ವಜರೋಹಣ ಕಂಬ ಏರಿದ ರೈತರು ಸಿಖ್ ಧಾರ್ಮಿಕ ಧ್ವಜವನ್ನು ಹಾಕಿದ್ದರು.

    ಈ ವೇಳೆ ಪೊಲೀಸರು ಶಾಂತಿಯತೆಯನ್ನು ಕಾಪಾಡುವಂತೆ ಹಾಗೂ ರೈತರು ಕೆಳಗೆ ಇಳಿದು ಹಿಂತಿರುಗುವಂತೆ ಕೇಳಿಕೊಂಡರೂ ಒಪ್ಪದೆ ರೈತರು ಪ್ರತಿಭಟನೆ ನಡೆಸಿದರು. ಕೊನೆಗೆ ಪರಿಸ್ಥಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಆಶ್ರುವಾಯು ಹಾಗೂ ಲಾಠಿ ಪ್ರಹಾರ ನಡೆಸಿದ್ದರು.

    ಜನವರಿ 26ರಂದು ನಡೆದ ಗಲಭೆಯ ಕೆಲವು ದೃಶ್ಯಾವಳಿಗಳನ್ನು ವೀಕ್ಷಿಸಿದ ದೆಹಲಿ ಕ್ರೈಂ ಬ್ರಾಂಚ್ ತಂಡದ ಪೊಲೀಸರು ಇದೀಗ 12 ಮಂದಿ ಆರೋಪಿಗಳ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಗೊಳಿಸಿರುವ ಫೋಟೋದಲ್ಲಿ ಆರೋಪಿಗಳು ಕೋಲುಗಳನ್ನು ಹಿಡಿದುಕೊಂಡಿರುವುದು ಕಂಡು ಬಂದಿದೆ.

  • ಮ್ಯಾಗಿ ಪ್ರಿಯರಿಗೆ ಗುಡ್ ನ್ಯೂಸ್ – ಮದುವೆ ಮನೆಗೂ ಕಾಲಿಟ್ಟಿದೆ ಮ್ಯಾಗಿ

    ಮ್ಯಾಗಿ ಪ್ರಿಯರಿಗೆ ಗುಡ್ ನ್ಯೂಸ್ – ಮದುವೆ ಮನೆಗೂ ಕಾಲಿಟ್ಟಿದೆ ಮ್ಯಾಗಿ

    ನವದೆಹಲಿ: ಮ್ಯಾಗಿ ಅಂದರೆ ಯಾರಿಗಿಷ್ಟ ಇಲ್ಲಾ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮ್ಯಾಗಿ ಎಲ್ಲರಿಗೂ ಅಚ್ಚು-ಮೆಚ್ಚು. 2 ನಿಮಿಷದಲ್ಲಿ ತಯಾರಾಗುವ ಬಿಸಿ ಬಿಸಿಯಾದ ಮ್ಯಾಗಿಯನ್ನು ನೋಡಿದವರು ಯಾರು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ಸದ್ಯ ಮ್ಯಾಗಿ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ.

    ನಿಮ್ಮ ನೆಚ್ಚಿನ ಮ್ಯಾಗಿ ಇದೀಗ ಮದುವೆ ಮನೆಯ ಊಟದ ಮೆನು ಲಿಸ್ಟ್‍ಗಳಲ್ಲಿ ಕೂಡ ಒಂದಾಗಿದೆ. ಕೊರೊನಾದಂತಹ ಸಾಂಕ್ರಾಮಿಕ ರೋಗ ದೇಶದಲ್ಲಿ ಹರಡಿದ್ದಾಗ ಎಷ್ಟೋ ಮಂದಿ ಲಾಕ್ ಡೌನ್ ಸಮಯದಲ್ಲಿ ಮ್ಯಾಗಿಯನ್ನೇ ಆಹಾರವಾಗಿ ಅವಲಂಬಿಸಿದ್ದರು.

    ಇತ್ತೀಚೆಗೆ ಪತ್ರಕರ್ತೆ ಸೌಮ್ಯ ಲೇಖನಿ ಎಂಬವರು ತಮ್ಮ ಸೋದರ ಸಂಬಂಧಿ ವಿವಾಹ ಮಹೋತ್ಸವಕ್ಕೆ ಹೋಗಿದ್ದಾಗ, ಅಲ್ಲಿನ ಫುಡ್ ಕೌಂಟರ್‍ನಲ್ಲಿ ಮ್ಯಾಗಿ ಕೂಡ ಇರುವುದನ್ನು ಕಂಡು ಮೊಬೈಲ್ ನಲ್ಲಿ ಫೋಟೋವನ್ನು ಸೆರೆಹಿಡಿದಿದ್ದಾರೆ. ಅಲ್ಲದೆ ಕ್ಯಾಪ್ಷನ್‍ನಲ್ಲಿ ನನ್ನ ಸೋದರ ಸಂಬಂಧಿ ಯೋಚಿಸಿರುವ ರೀತಿ ಮತ್ತು ಅವರ ಮದುವೆಯಲ್ಲಿ ಮ್ಯಾಗಿ ಕೌಂಟರ್ ಏರ್ಪಡಿಸಿರುವುದಕ್ಕಾಗಿ ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಇನ್ನೂ ಫೋಟೋದಲ್ಲಿ ಮರದ ರ್ಯಾಕ್‍ಗಳಲ್ಲಿ ಮ್ಯಾಗಿ ಪ್ಯಾಕೆಟ್‍ಗಳನ್ನು ಇಟ್ಟುಕೊಂಡು, ಸ್ವಲ್ಪ ಮ್ಯಾಗಿಯನ್ನು ಒಲೆ ಮೇಲೆ ಬಾಣಸಿಗ ಬೇಯಿಸುತ್ತಿರುವುದನ್ನು ಕಂಡು ಬಂದಿದೆ. ಈ ಫೋಟೋ ಟ್ವೀಟರ್ ನಲ್ಲಿ ವೈರಲ್ ಆಗುತ್ತಿದ್ದಂತೆಯೇ 1 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ಸ್ ಗಳು ಬಂದಿದೆ.

  • ಬಾಲ್ಕನಿಯಿಂದ ಮಗುವನ್ನು ರಕ್ಷಿಸಿದ ಬೆಕ್ಕಿನ ವೀಡಿಯೋ ವೈರಲ್

    ಬಾಲ್ಕನಿಯಿಂದ ಮಗುವನ್ನು ರಕ್ಷಿಸಿದ ಬೆಕ್ಕಿನ ವೀಡಿಯೋ ವೈರಲ್

    ನವದೆಹಲಿ: ಅಂಬೆಗಾಲಿಡುವ ಮಗು ಬಾಲ್ಕನಿಯಲ್ಲಿದ್ದ ಕಂಬದ ಮೇಲೆ ಕೈ ಇಟ್ಟು ಇಣುಕಿ ನೋಡುತ್ತಿದ್ದಾಗ ಬೆಕ್ಕು ತಡೆದು ಮಗುವಿನ ಪ್ರಾಣ ಉಳಿಸುತ್ತಿರುವ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನೆಟ್ಟಿಗರ ಮನ ಗೆಲ್ಲುತ್ತಿದೆ. ಈ ವೀಡಿಯೋ ತುಣಕನ್ನು ಭಾರತೀಯ ಅರಣ್ಯ ಸೇವೆ(ಐಎಫ್‍ಎಸ್) ಅಧಿಕಾರಿ ಸುಧಾ ರಾಮೆನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಇನ್ನೂ ಅಂಬೆಗಾಲಿಡುತ್ತಿರುವ ಮಗುವೊಂದು ಬಾಲ್ಕಾನಿಯಲ್ಲಿ ನಿಂತು ಹೊರಗೆ ನೋಡಲು ಅಲ್ಲಿದ್ದ ಕಂಬವನ್ನು ಹಿಡಿದು ಹತ್ತಲು ಪ್ರಯತ್ನಿಸುತ್ತಿರುವ ವೇಳೆ ಅಲ್ಲಿಯೇ ಕುಳಿತಿದ್ದ ಬೆಕ್ಕು ಮಗುವನ್ನು ಅಪಾಯದಿಂದ ರಕ್ಷಿಸುವ ಸಲುವಾಗಿ ರೇಲಿಂಗ್ ಮೇಲೆ ಇಟ್ಟಿದ್ದ ಆತನ ಕೈಗಳನ್ನು ಬಿಡಿಸಿದೆ. ಅಲ್ಲದೆ ಬಾಲ್ಕನಿ ಹಳಿಗಳ ಗೋಡೆ ಮೇಲೆ ನಡೆಯುವ ಮೂಲಕ ಬೆಕ್ಕು ತನ್ನ ಪ್ರಾಣವನ್ನು ಲೆಕ್ಕಿಸದೇ, ಮಗು ಕೆಳಗೆ ಇಣುಕಿ ನೋಡುವುದನ್ನು ತಡೆದಿದೆ.

    https://twitter.com/SudhaRamenIFS/status/1353192960972759042

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದಂತೆಯೇ ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ಕಮೆಂಟ್ ಗಳು ಹರಿದು ಬಂದಿದ್ದು, ಕೆಲವರು ವೀಡಿಯೋವನ್ನು ಅದ್ಭುತ ಎಂದು ಕಮೆಂಟ್  ಮಾಡಿದರೆ ಇನ್ನೂ ಕೆಲವರು ಮಗುವಿನ ಪೋಷಕರ ಬೇಜವಾಬ್ದಾರಿ ಕುರಿತಂತೆ ಟೀಕಿಸಿದ್ದಾರೆ.

  • ಸೊಸೆಯಿಂದ ತನ್ನನ್ನು ರಕ್ಷಿಸಿ – 90 ವರ್ಷದ ವೃದ್ಧೆ ಕಿರುಚಾಡುತ್ತಿರೋ ವೀಡಿಯೋ ವೈರಲ್

    ಸೊಸೆಯಿಂದ ತನ್ನನ್ನು ರಕ್ಷಿಸಿ – 90 ವರ್ಷದ ವೃದ್ಧೆ ಕಿರುಚಾಡುತ್ತಿರೋ ವೀಡಿಯೋ ವೈರಲ್

    ನವದೆಹಲಿ: ಮಾಹಿತಿ ನೀಡದೇ ಮನೆಯಿಂದ ಹೊರ ಹೋಗಿದ್ದ 90 ವರ್ಷದ ವೃದ್ಧ ಅತ್ತೆಗೆ ಬ್ರೂಮ್ ನಿಂದ 60 ವರ್ಷದ ಸೊಸೆ ಹಲ್ಲೆ ಮಾಡಿರುವ ಘಟನೆ ಆಗ್ರಾದ ಬಹುಪುರ ಪ್ರದೇಶದಲ್ಲಿ ನಡೆದಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅತ್ತೆ ಮಾಯಾದೇವಿ ತನ್ನನ್ನು ಸೊಸೆಯಿಂದ ರಕ್ಷಿಸುವಂತೆ ಕಿರುಚಾಡುತ್ತಿರುವ ದೃಶ್ಯ ಕಂಡು ಬಂದಿದೆ.

    ಈ ವೀಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಆಗ್ರಾ ಪೊಲೀಸರು ಮುನ್ನಿದೇವಿ ವಿರುದ್ಧ ಐಪಿಸಿ ಸೆಕ್ಷನ್ 151 ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿಕೊಂಡಿದ್ದರು. ಬಳಿಕ ಸೊಸೆ ಮುನ್ನಿ ದೇವಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು, ಇದೀಗ ಜಾಮೀನಿನ ಆಧಾರದ ಮೇಲೆ ಮುನ್ನಿದೇವಿಯನ್ನು ಸೋಮವಾರ ಬಿಡುಗಡೆ ಮಾಡಲಾಯಿತು.

    ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಕೆ. ವೆಂಕಟ್ ಅಶೋಕ್, ಇಬ್ಬರು ಮಹಿಳೆಯರು ವಿಧವೆಯರಾಗಿದ್ದು, ಬಹುಪುರ ಗ್ರಾಮದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ತಿಳಿಸಿದ್ದಾರೆ.

    ವಿಚಾರಣೆ ವೇಳೆ ತನ್ನ ಅತ್ತೆ ಮಾಯಾದೇವಿ ಮಾಹಿತಿ ನೀಡದೇ ಮನೆಯಿಂದ ಹೋಗುವ ಅಭ್ಯಾಸವಿದೆ. ಹಾಗೂ ಅವರಿಗಾಗಿ ನಾನು ಗ್ರಾಮವೆಲ್ಲಾ ಹುಡುಕಾಟ ನಡೆಸಿ ಬಳಿಕ ಬೇಸರಗೊಂಡು ಹೊಡೆದಿದ್ದೇನೆ ಎಂದು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಇದೀಗ ಪೊಲೀಸರು ವೃದ್ಧ ಮಹಿಳೆಯೊಂದಿಗೆ ಕೆಟ್ಟದಾಗಿ ವರ್ತಿಸದಂತೆ ತಿಳಿಸಿದ್ದು, ಆಕೆಗೆ ಗೌರವ ನೀಡುವಂತೆ ಎಚ್ಚರಿಕೆ ನೀಡಿದ್ದಾರೆ. ಬಳಿಕ ಮಾಯಾದೇವಿ ಸೇವಿಸಲು ಆಹಾರ ನೀಡಿ ಮುಂದೆ ಆಕೆಗೆ ತಮ್ಮ ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.