Tag: ಪಬ್ಲಿಕ್ ಟಿವಿ Mangalore

  • ಅಕ್ರಮ ಮರಳು ದಂಧೆಕೋರರಿಗೆ ಶಾಕ್ ಕೊಟ್ಟ ಅಧಿಕಾರಿಗಳು

    ಅಕ್ರಮ ಮರಳು ದಂಧೆಕೋರರಿಗೆ ಶಾಕ್ ಕೊಟ್ಟ ಅಧಿಕಾರಿಗಳು

    ಮಂಗಳೂರು: ಬೈಕ್‍ನಲ್ಲಿ ಆಗಮಿಸಿದ ಕಮಿಷನರ್ ಮತ್ತು ಡಿಸಿಪಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಲಾರಿಯನ್ನು ತಡೆದಿರುವ ಘಟನೆ ನಿನ್ನೆ ಮಧ್ಯರಾತ್ರಿ ಮಂಗಳೂರಿನಲ್ಲಿ ನಡೆದಿದೆ.

    ಕೇರಳಕ್ಕೆ ಲಾರಿ ಮೂಲಕ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಲಾರಿಯನ್ನು ಬೈಕ್ ಮೂಲಕ ಹಿಂಬಾಲಿಸಿ ಮಂಗಳೂರಿನ ಕೇರಳ ಕರ್ನಾಟಕ ಗಡಿ ಭಾಗದ ತಲಪಾಡಿ ಟೋಲ್ ಗೇಟ್ ಬಳಿ ತಡೆದಿದ್ದಾರೆ.

    ಸದ್ಯ ಮರಳು ಲಾರಿಗೆ ಎಸ್ಕಾರ್ಟ್ ನೀಡುತ್ತಿದ್ದ ಚಂದ್ರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮರಳು ಲಾರಿಯನ್ನು ಸೀಝ್ ಮಾಡಿದ್ದಾರೆ. ಘಟನೆ ಸಂಬಂಧಿಸಿದಂತೆ ಅಕ್ರಮ ಮರಳು ಸಾಗಾಟ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಎರಡು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ತಲಪಾಡಿ ಟೋಲ್ ಗೇಟ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಪೊಲೀಸರು ನಡೆಸಿಸದ ಮಿಡ್ ನೈಟ್ ಅಪರೇಷನ್ ದೃಶ್ಯ ಸೆರೆಯಾಗಿದೆ.

  • ಕಟೀಲು ಶ್ರೀ ದುರ್ಗಾಪರಮೇಶ್ವರಿ ದರ್ಶನ ಪಡೆದ ನಟ ವಿಜಯ್ ರಾಘವೇಂದ್ರ ಕುಟುಂಬ

    ಕಟೀಲು ಶ್ರೀ ದುರ್ಗಾಪರಮೇಶ್ವರಿ ದರ್ಶನ ಪಡೆದ ನಟ ವಿಜಯ್ ರಾಘವೇಂದ್ರ ಕುಟುಂಬ

    – ಕೊರಗಜ್ಜನ ಕ್ಷೇತ್ರಕ್ಕೂ ‘ಚಿನ್ನಾರಿ ಮುತ್ತ’ ಭೇಟಿ

    ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಸ್ಯಾಂಡಲ್‍ವುಡ್ ನಟ ವಿಜಯ್ ರಾಘವೇಂದ್ರ ಕುಟುಂಬ ಸಮೇತರಾಗಿ ಇಂದು ಭೇಟಿ ನೀಡಿದ್ದಾರೆ. ಇದೇ ವೇಳೆ ದೇವಿಗೆ ಸೀರೆ ಕಾಣಿಕೆ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

    ವಿಜಯ್ ರಾಘವೇಂದ್ರ ಹಾಗೂ ಪತ್ನಿ ಸ್ಪಂದನಾರಿಗೆ ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಪ್ರಸಾದ ನೀಡಿ ಆಶೀರ್ವದಿಸಿದರು. ಅಲ್ಲದೆ ಈ ಸಂದರ್ಭದಲ್ಲಿ ದೇಗುಲಕ್ಕೆ ಬಂದಿದ್ದ ಭಕ್ತರು, ಶಾಲಾ ವಿದ್ಯಾರ್ಥಿಗಳು ವಿಜಯ್ ರಾಘವೇಂದ್ರ ಜೊತೆಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

    ಬಳಿಕ ನಟ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಈ ವೇಳೆ ಅರ್ಚಕ ರಾಮದಾಸ ಆಚಾರ್ಯ ಅನಂತಕೃಷ್ಣ ಆಚಾರ್ಯ, ವ್ಯವಸ್ಥಾಪನಾ ಸಮಿತಿಯ ರವೀಂದ್ರ ಎಚ್ ಶೆಟ್ಟಿ, ರಘುವೀರ ಶೆಣೈ, ರವಿಶಂಕರ ಪೈ ಮತ್ತಿತರು ಉಪಸ್ಥಿತರಿದ್ದರು. ಜೊತೆಗೆ ಜಾರಿಗೆ ಕಟ್ಟೆ ಕೊರಗಜ್ಜ ಕ್ಷೇತ್ರಕ್ಕೂ ವಿಜಯ್ ರಾಘವೇಂದ್ರ ಕುಟುಂಬ ಸಮೇತ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

  • ದಕ್ಷಿಣ ಕರ್ನಾಟಕ ಪ್ರವಾಸ – ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದ ಶ್ರುತಿ

    ದಕ್ಷಿಣ ಕರ್ನಾಟಕ ಪ್ರವಾಸ – ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದ ಶ್ರುತಿ

    ಬೆಂಗಳೂರು: ದಕ್ಷಿಣ ಕರ್ನಾಟಕದ ಪ್ರವಾಸದ ಸಮಯದಲ್ಲಿ ಪ್ರವಾಸಿಗರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡುವಂತೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ(ಕೆಎಸ್‍ಟಿಡಿಸಿ) ಅಧ್ಯಕ್ಷೆ ಶ್ರುತಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಮನವಿ ಸಲ್ಲಿಸಿದ್ದಾರೆ.

    ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು ಆಯೋಜಿಸುತ್ತಿರುವ ವ್ಯವಸ್ಥಿತ ಪ್ರವಾಸಗಳ ಪೈಕಿ, ದಕ್ಷಿಣ ಕರ್ನಾಟಕ ಪ್ರವಾಸದ ಸಮಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವು ಪ್ರಮುಖ ಕ್ಷೇತ್ರ ದರ್ಶನವಾಗಿದ್ದು, ಪ್ರವಾಸಿಗರಿಗೆ ಶ್ರೀ ಕ್ಷೇತ್ರ ದರ್ಶಿಸಲು ಶೀಘ್ರದರ್ಶನ ವ್ಯವಸ್ಥೆ ಕಲ್ಲಿಸಿಕೊಡುವಂತೆ ಕೋರಿ, ಕೆಎಸ್‍ಟಿಡಿಸಿ ಅಧ್ಯಕ್ಷೆ ಶ್ರುತಿ ಅವರು ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾರವರು ಉಪಸ್ಥಿತರಿದ್ದರು.

  • ಕಾಡಾನೆ ಸವಾರಿಗೆ ಗ್ರಾಮಸ್ಥರಿಂದಲೇ ಎಸ್ಕಾರ್ಟ್- ಸುಳ್ಯದಲ್ಲೊಂದು ಅಪರೂಪದ ವಿದ್ಯಮಾನ

    ಕಾಡಾನೆ ಸವಾರಿಗೆ ಗ್ರಾಮಸ್ಥರಿಂದಲೇ ಎಸ್ಕಾರ್ಟ್- ಸುಳ್ಯದಲ್ಲೊಂದು ಅಪರೂಪದ ವಿದ್ಯಮಾನ

    ಮಂಗಳೂರು: ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಬಹಳಷ್ಟು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಪೈಕಿ ಮನುಷ್ಯನಿಂದ ಹೆಚ್ಚು ತೊಂದರೆಗೊಳಗಾಗುವ ಮುಗ್ಧ, ಅಮಾಯಕ ಜೀವಿ ಎಂದರೆ ಅದು ಆನೆಗಳು. ಹೀಗಾಗಿ ಆನೆಗಳಿಗೂ, ಮನುಷ್ಯನಿಗೂ ನಡುವೆ ಇರುವ ಸಂಬಂಧ ಅಷ್ಟಕಷ್ಟೇ. ಎಷ್ಟೇ ಸಾಕಿ ಬೆಳೆಸಿದ ಆನೆಯೂ ಕೆಲವು ಸಂದರ್ಭಗಳಲ್ಲಿ ತನ್ನನ್ನು ಸಾಕಿದ ಮಾವುತನನ್ನೇ ಬಲಿ ಪಡೆದ ಉದಾಹರಣೆಗಳು ನಮ್ಮ ಮುಂದಿದೆ. ಸಾಕಾನೆಗಳೇ ಇಷ್ಟು ಅಪಾಯಕಾರಿಯಾಗಿರುವಾಗ ಇನ್ನು ಕಾಡಾನೆಗಳ ಸ್ವಭಾವವನ್ನು ಅರಿತುಕೊಳ್ಳುವುದು ಸಾಧ್ಯವೇ? ಖಂಡಿತಾ ಇಲ್ಲ ಎಂದು ನಾವೆಲ್ಲ ಅಂದುಕೊಳ್ಳಬಹುದು. ಆದರೆ ಅದಕ್ಕೆ ಅಪವಾದ ಎನ್ನುವಂತೆ ಅಪರೂಪದ ಆನೆ-ಮನುಷ್ಯನ ಬಾಂಧವ್ಯದ ಕಥೆ ಇಲ್ಲಿದೆ.

    ಕಾಡಾನೆಗಳು ನಾಡಿಗೆ ಆಹಾರ ಅರಸಿಕೊಂಡು ಲಗ್ಗೆಯಿಟ್ಟರೆ ಎಲ್ಲವನ್ನೂ ಪುಡಿಗೈಯುತ್ತವೆ ಎನ್ನುವುದು ಸಾಮಾನ್ಯ ನಂಬಿಕೆ. ಹೀಗಾಗಿ ಕಾಡಾನೆಗಳ ಸ್ವಭಾವವನ್ನು ಕಣ್ಣಾರೆ ಕಂಡ ಕಾಡಿನಂಚಿನಲ್ಲಿ ಬದುಕುವ ಕುಟುಂಬಗಳು ಸಾಧ್ಯವಾದಷ್ಟೂ ಕಾಡಾನೆಗಳ ಸಹವಾಸದಿಂದ ದೂರವೇ ಉಳಿಯುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದ ಕಾಡಿನಿಂದ ಕೊಡಗಿನ ಭಾಗಮಂಡಲ ಕಾಡಿಗೆ ಪ್ರತೀ ವರ್ಷವೂ ಸವಾರಿ ಹೋಗುವ ಆನೆಯೊಂದು ಇತರ ಕಾಡಾನೆಗಳಿಗಿಂತ ಕೊಂಚ ಭಿನ್ನ. ಪ್ರತಿ ಡಿಸೆಂಬರ್ ಕೊನೆ ವಾರದಲ್ಲಿ ಪಂಜ ಕಾಡಿನಿಂದ ಸವಾರಿ ಹೊರಡುವ ಈ ಕಾಡಾನೆ, ಕಾಡು-ನಾಡು, ನದಿ-ತೊರೆಗಳನ್ನು ದಾಟಿ ಕೊಡಗಿನ ಭಾಗಮಂಡಲ ಅರಣ್ಯವನ್ನು ಸೇರುತ್ತದೆ. ಆದರೆ ಈ ಬಾರಿ ಜನವರಿ ಕೊನೆಯ ವಾರದಲ್ಲಿ ಈ ಆನೆ ತನ್ನ ಸವಾರಿಯನ್ನು ಆರಂಭಿಸಿದ್ದು, ದಾರಿ ಮಧ್ಯೆ ಕೆಲವು ಮನೆಗಳ ಮುಂದೆಯೂ ಈ ಆನೆ ಹಾದು ಹೋಗುತ್ತದೆ.

    ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಪೆರಾಜೆ ನಿವಾಸಿ ಸುಧಾಕರ್ ರೈ ಮನೆಯ ಮುಂದೆ ಕಳೆದ ಹತ್ತು ವರ್ಷಗಳಿಂದ ಈ ಆನೆ ಹಾದು ಹೋಗುತ್ತಿದ್ದು, ಈವರೆಗೂ ಜನರಿಗೆ ಯಾವ ತೊಂದರೆಯನ್ನೂ ಮಾಡಿಲ್ಲ. ಕಾಡಿನ ದಾರಿಯಾಗಿ ಬರುವ ಈ ಆನೆ ಕಾಡಿನ ದಾರಿ ಮುಗಿದಾಗ ನಾಡಿನ ದಾರಿ ಮೂಲಕ ಮತ್ತೊಂದು ಕಾಡು ಸೇರುತ್ತದೆ. ಹೀಗೆ ಸಾಗುವ ಸಂದರ್ಭದಲ್ಲಿ ಹಸಿವಿನ ಅನುಭವವಾದಾಗ ದಾರಿ ಮಧ್ಯೆ ಸಿಗುವ ಬಾಳೆ ಗಿಡ, ಹೂವಿನ ಗಿಡಗಳನ್ನು ತಿಂದು ಸಾಗುವ ಈ ಆನೆ ಇದೀಗ ಈ ಗ್ರಾಮದಾದ್ಯಂತ ಚಿರ ಪರಿಚಿತವಾಗಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.

    ಸಾಮಾನ್ಯವಾಗಿ ಅರಣ್ಯ ಇಲಾಖೆಯು ಆನೆಗಳ ಚಲನವಲನಗಳನ್ನು ಗಮನಿಸಬೇಕಾಗಿದ್ದು, ಈ ಆನೆಯ ವಿಚಾರದಲ್ಲಿ ಮಾತ್ರ ಸಂಬಂಧಪಟ್ಟ ಗ್ರಾಮಸ್ಥರೇ ನೋಡಿಕೊಳ್ಳುತ್ತಿದ್ದಾರೆ. ಪಂಜ ಕಾಡಿನಿಂದ ಆನೆ ಸವಾರಿ ಹೊರಟಿದೆ ಎನ್ನುವುದನ್ನು ತಿಳಿದ ತಕ್ಷಣವೇ ಅಲರ್ಟ್ ಆಗುವ ಆ ಗ್ರಾಮದ ಜನ ಆನೆ ಸಾಗುವ ಗ್ರಾಮದ ಜನರಿಗೆ ಆನೆ ಸವಾರಿಯ ಸುದ್ದಿ ತಲುಪಿಸುತ್ತಾರೆ.

    ಸುಮಾರು 30 ರಿಂದ 35 ವರ್ಷ ಪ್ರಾಯದ ಈ ಆನೆ ಪಂಜ, ಉಬರಡ್ಕ, ದೇರಾಜೆ ಮಾರ್ಗವಾಗಿ ಪೆರಾಜೆ ಮೂಲಕ ಭಾಗಮಂಡಲ ಕಾಡನ್ನು ಸೇರುತ್ತದೆ. ಈ ಮಧ್ಯೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯನ್ನೂ ದಾಟುವ ಈ ಆನೆ ಪಯಸ್ವಿನಿ ನದಿಯನ್ನು ಈಜಾಡಿಯೇ ಭಾಗಮಂಡಲ ಅರಣ್ಯಕ್ಕೆ ಸೇರುತ್ತದೆ. ಹೀಗೆ ಹೊರಟ ಈ ಕಾಡಾನೆ ಫೆಬ್ರವರಿ ಕೊನೆಯ ವಾರಕ್ಕೆ ಮತ್ತೆ ಇದೇ ಮಾರ್ಗವಾಗಿ ಪಂಜ ಅರಣ್ಯವನ್ನು ಸೇರುತ್ತಿದ್ದು, ದಾರಿ ಮಧ್ಯೆ ಕಾಡಾನೆಗೆ ಯಾವುದೇ ರೀತಿಯ ತೊಂದರೆಯಾಗದಂತೆಯೂ ಗ್ರಾಮಸ್ಥರು ನೋಡಿಕೊಂಡಿದ್ದಾರೆ. ಹೀಗೆ ಒಂದು ಅಪರೂಪದ ಬಾಂಧವ್ಯ ಈ ಆನೆ ಮತ್ತು ಗ್ರಾಮಸ್ಥರ ನಡುವೆ ಬೆಳೆದಿದ್ದು ಈ ಬಾಂಧವ್ಯ ಹೀಗೆಯೇ ಉಳಿಯಲಿ ಎನ್ನುವುದು ಹಾರೈಕೆಯಾಗಿದೆ.

  • ಪೆಟ್ರೋಲ್ ಸುರಿದು ಬಸ್ ಚಾಲಕನ ಹತ್ಯೆಗೆ ಯತ್ನ – ವಿಶ್ವ ಹಿಂದೂ ಪರಿಷದ್ ಬಜರಂಗದಳ ಖಂಡನೆ

    ಪೆಟ್ರೋಲ್ ಸುರಿದು ಬಸ್ ಚಾಲಕನ ಹತ್ಯೆಗೆ ಯತ್ನ – ವಿಶ್ವ ಹಿಂದೂ ಪರಿಷದ್ ಬಜರಂಗದಳ ಖಂಡನೆ

    ಮಂಗಳೂರು: ಓವರ್ ಟೇಕ್ ಮಾಡುವ ನೆಪದಲ್ಲಿ ಮಂಗಳೂರಿನ ಸಿಟಿ ಬಸ್ಸೊಂದರ ಚಾಲಕ ಸಂಪತ್ ಪೂಜಾರಿಯನ್ನು ಪೆಟ್ರೋಲ್ ಸುರಿದು ಕೊಲೆ ಮಾಡಲು ಪ್ರಯತ್ನಿಸಲಾಗಿದೆ. ಇದು ಬಹಳ ಗಂಭೀರ ಪ್ರಕರಣವಾಗಿದ್ದರಿಂದ ಈ ಕೃತ್ಯವನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಖಂಡಿಸಿದೆ.

    ನಗರದಲ್ಲಿ ಓಡಾಡುವ ರೂಟ್ ನಂಬರ್ 33 ರ ಸುವರ್ಣ ಎಂಬ ಬಸ್ಸು, ಬೈಕಿಗೆ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಸವಾರ ಅಶ್ರಫ್ ಎಂಬಾತ ಬಸ್ಸಿಗೆ ಬೈಕ್ ಅಡ್ಡ ಇಟ್ಟು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಆತನಲ್ಲಿದ್ದ ಪೆಟ್ರೋಲನ್ನು ಬಸ್ ಚಾಲಕನ ಮೈ ಮೇಲೆ ಸುರಿದಿದ್ದಾನೆ. ಅಲ್ಲದೆ ಸಿಗರೇಟ್ ಲೈಟ್ ಉರಿಸಿ ಬೆಂಕಿ ಹಚ್ಚುವುದಾಗಿ ಬೆದರಿಸಿದ್ದಾನೆ. ಇದೀಗ ಬಸ್ ಚಾಲಕ ಆಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರ ಹತ್ಯೆಯ ಯತ್ನ, ಎನ್‍ಆರ್‍ಸಿ ಹೆಸರಿನಲ್ಲಿ ಗಲಭೆ, ಹನಿಟ್ರ್ಯಾಪ್, ಹಿಂದೂಗಳ ಮೇಲೆ ಹಲ್ಲೆ ಮುಂತಾದ ಗಂಭೀರವಾದ ಪ್ರಕರಣಗಳು ನಡೆಯುತ್ತಿದೆ. ಇದೀಗ ಮುಂದುವರಿದ ಭಾಗವಾಗಿ ಬಸ್ ಚಾಲಕನಿಗೆ ಪೆಟ್ರೋಲ್ ಸುರಿದು ಹತ್ಯೆ ಮಾಡಲು ಪ್ರಯತ್ನಿಸಿದ್ದನ್ನು ನೋಡುವಾಗ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಸಿರುವುದು ನಾಗರಿಕರಲ್ಲಿ ಆತಂಕ ಹುಟ್ಟಿಸಿದೆ.

    ಕೊಲೆಯತ್ನಕ್ಕೆ ಒಳಗಾದ ಚಾಲಕ ಸಂಪತ್ ಪೂಜಾರಿಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳದ ಪ್ರಮುಖರು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಆರೋಪಿ ಅಶ್ರಫ್ ನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್, ವಿಶ್ವ ಹಿಂದೂಪರಿಷತ್ ಜಿಲ್ಲಾ ಗೋರಕ್ಷಾ ಪ್ರಮುಖ್ ಪ್ರದೀಪ್ ಪಂಪವೆಲ್, ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಮತ್ತು ನಾಗುರಿ ಪ್ರಖಂಡ ಕಾರ್ಯದರ್ಶಿ ಶರತ್ ಕೆಂಬಾರ್ ಉಪಸ್ಥಿತರಿದ್ದರು.

  • ಮಂಗಳೂರಿನ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಕೊಲೆ ಯತ್ನ – ಆರು ಮಂದಿ ಆರೋಪಿಗಳ ಬಂಧನ

    ಮಂಗಳೂರಿನ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಕೊಲೆ ಯತ್ನ – ಆರು ಮಂದಿ ಆರೋಪಿಗಳ ಬಂಧನ

    ಮಂಗಳೂರು: ಇಲ್ಲಿನ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಇದೀಗ ಆರು ಮಂದಿಯನ್ನು ಬಂಧಿಸಲಾಗಿದೆ. ಮಂಗಳೂರು ಗೊಲೀಬಾರ್ ಗೆ ಪ್ರತಿಕಾರ ತೀರಿಸಲು ಪೊಲೀಸರ ಹತ್ಯೆಗೆ ಯತ್ನಿಸಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

    ಕಳೆದ ಡಿಸೆಂಬರ್ 16 ರಂದು ಮಂಗಳೂರಿನ ಕುದ್ರೋಳಿ ಬಳಿಯ ನ್ಯೂ ಚಿತ್ರ ಸರ್ಕಲ್ ನಲ್ಲಿ ಈ ಘಟನೆ ನಡೆದಿತ್ತು. ಕರ್ತವ್ಯ ನಿರತರಾಗಿದ್ದ ಬಂದರು ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗಣೇಶ್ ಕಾಮತ್ ಎಂಬವರಿಗೆ ಬೈಕ್ ನಲ್ಲಿ ಬಂದ ಇಬ್ಬರ ಪೈಕಿ ಓರ್ವ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಆರೋಪಿಯ ಈ ಕೃತ್ಯ ಸಿಸಿ ಕ್ಯಾಮರಾದಲ್ಲಿ ಬೆಳಕಿಗೆ ಬಂದಿತ್ತು. ಬಳಿಕ ಅಪ್ರಾಪ್ತನಾದ ಆರೋಪಿ ಹಾಗೂ ಆತನ ಜೊತೆ ಬೈಕ್ ಚಲಾಯಿಸಿಕೊಂಡು ಬಂದಿದ್ದ ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

    ಇದೀಗ ಈ ವಿಚಾರಕ್ಕೆ ಸಂಬಂಧಸಿದಂತೆ ಕೃತ್ಯ ಎಸಗಲು ಪ್ಲಾನ್ ರೂಪಿಸಿದ್ದ ಆರು ಮಂದಿಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳು ಸ್ಪೋಟಕ ಮಾಹಿತಿ ಬಾಯಿ ಬಿಟ್ಟಿದ್ದಾರೆ. ಕಳೆದ 2019 ರ ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ನಡೆದ ಸಿಎಎ.ಎನ್‍ಆರ್‍ಸಿ ಪ್ರತಿಭಟನೆಯ ವೇಳೆ ನಡೆದ ಗೊಲೀಬಾರ್ ಗೆ ಪ್ರತಿಕಾರ ತೀರಿಸಲು ಈ ಕೃತ್ಯ ಎಸಗಿದ್ದು, ಒಂದು ವರ್ಷದ ಬಳಿಕ 2020 ಡಿಸೆಂಬರ್ 19 ರಂದು ಪೊಲೀಸರನ್ನು ಹತ್ಯೆ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ಅದರಂತೆ ಮಾಯಾ ಗ್ಯಾಂಗ್ ಹಾಗೂ ಇನ್ನೊಂದು ಗ್ಯಾಂಗ್ ಸೇರಿ ಈ ಪ್ಲಾನ್ ಮಾಡಿದ್ದು, ಮಾಯಾಗ್ಯಾಂಗ್ ನ ಆರು ಮಂದಿಯನ್ನು ಬಂಧಿಸಲಾಗಿದ್ದು, ಇನ್ನೊಂದು ಗ್ಯಾಂಗ್ ನ ಆರೋಪಿಗಳ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.

    ಒಟ್ಟಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದವರಿಗೆ ನೂತನ ಪೊಲೀಸ್ ಕಮಿಷನರ್ ಶಶಿಕುಮಾರ್ ತಕ್ಕ ಪಾಠ ಕಲಿಸಿದ್ದು, ಇತರ ಪೊಲೀಸರಿಗೂ ಧೈರ್ಯ ತುಂಬಿದ್ದಾರೆ.