Tag: ಪಬ್ಲಿಕ್ ಟಿವಿ. mandya

  • ದೇವಸ್ಥಾನ, ಮನೆಯಲ್ಲಿ ಕಳ್ಳರ ಕೈಚಳಕ -ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪಾರಾರಿ

    ದೇವಸ್ಥಾನ, ಮನೆಯಲ್ಲಿ ಕಳ್ಳರ ಕೈಚಳಕ -ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪಾರಾರಿ

    ಮಂಡ್ಯ/ಮೈಸೂರು/ಕೊಪ್ಪಳ: ದಿನೆ ದಿನೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಂಡ್ಯ, ಮೈಸೂರು ಹಾಗೂ ಕೊಪ್ಪಳದಲ್ಲಿ ಪ್ರತ್ಯೇಕ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.

    ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಮನೆಯ ಬೀಗ ಒಡೆದು ಮನೆಯಲ್ಲಿದ್ದ ಸುಮಾರು 100 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಕೆ.ಎಸ್.ನಗರ ಬಡಾವಣೆಯಲ್ಲಿ ಜರುಗಿದೆ. ಕೊಪ್ಪ ಶುಗರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕುಮಾರ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಕುಮಾರ್ ಹಾಗೂ ಅವರು ಕುಟುಂಬ ಸದಸ್ಯರು ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಮೈಸೂರಿನ ಹುಣಸೂರಿನಲ್ಲಿ ವೃದ್ಧ ದಂಪತಿಯ ಹಲ್ಲೆ ನಡೆಸಿ ನಗದು ಹಾಗೂ ಆಭರಣ ದೋಚಿದ್ದ ಘಟನೆ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಣಸೂರು ಪೊಲೀಸರು 6 ಮಂದಿ ಆರೋಪಿಯನ್ನು ಬಂಧಿಸಿದ್ದಾರೆ. ಪಿರಿಯಾಪಟ್ಟಣದ ಮೋಸಿನ್, ಹುಣಸೂರಿನ ಇಮ್ರಾನ್, ಮಿರ್ಜಾ ತಸ್ವೀರ್ ಬೇಗ್, ಕುಶಾಲನಗರದ ಅಫ್ರಿನ್, ಮಡಿಕೇರಿ ತಾಲೂಕು ಮೇಕೇರಿ ಗ್ರಾಮದ ಅಶಿಕ್ ಹುಸೇನ್ ಮತ್ತು ಮಡಿಕೇರಿ ಪಟ್ಟಣದ ಮಹಮ್ಮದ್ ಅಜರುದ್ದೀನ್ ಬಂಧಿತರು.

    ಜುಲೈ 26 ರಂದು ಸಂಜೆ ಹುಣಸೂರು ಪಟ್ಟಣ ನಿವಾಸಿ ಗಜಾಲಾ ತರಾನಮ್ ಮತ್ತು ಅವರ ಕುಟುಂಬದವರು ಮನೆಯಲ್ಲಿದ್ದಾಗ, ದುಷ್ಕರ್ಮಿಗಳು ಕಾಲಿಂಗ್ ಬೆಲ್ ಮಾಡಿದ್ದಾರೆ. ಬಾಗಿಲು ತೆರೆದ ತಕ್ಷಣ ಮನೆಯೊಳಗೆ ನುಗ್ಗಿದ್ದ ಅಪರಿಚಿತರು 36 ಲಕ್ಷ ನಗದು ಮತ್ತು 500 ಗ್ರಾಂ ತೂಕದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಆರೋಪಿಗಳು 20 ರಿಂದ 35 ವರ್ಷ ಒಳಗಿನವರಾಗಿದ್ದು, ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇನ್ನೂ ಕೆಲವರು ಕೃತ್ಯದಲ್ಲಿ ಭಾಗಿಯಾಗಿದ್ದು, ಅವರ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಎಸ್ಪಿ ಆರ್.ಚೇತನ್ ತಿಳಿಸಿದ್ದಾರೆ.

    ಆರೋಪಿಗಳಲ್ಲಿ ಮಿರ್ಜಾ ತನ್ವೀರ್ ಬೇಗ್ ಎಂಬವನು ಹುಣಸೂರಿನಲ್ಲಿ ನಡೆದ ವಿದ್ಯಾರ್ಥಿಗಳ ಜೋಡಿ ಕೊಲೆ ಪ್ರಕರಣ ಮತ್ತು ತ್ಯಾಗರಾಜ ಪಿಳ್ಳೆ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಅಫ್ರಿನ್ ಎಂಬಾತ ಕುಶಾಲನಗರದ ಪ್ರವೀಣ್ ಪೂಜಾರಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.

    ಕೊಪ್ಪಳ ನಗರದಲ್ಲಿರುವ ಹೇಮರಡ್ಡಿ ಮಲ್ಲಮ್ಮ ದೇವಾಲಯದ ಹುಂಡಿ, ದೇವರ ಮೂರ್ತಿ ಹಾಗೂ ಅಲ್ಲಿಯ ಆಭರಣಗಳನ್ನೂ ಸಹ ಬಿಡದೇ ಕಳ್ಳರು ದೋಚಿರುವ ಘಟನೆ ನಡೆದಿದೆ. ಕಳ್ಳತನದ ಮೊದಲು ಆರೋಪಿಗಳು ದೇವಸ್ಥಾನದಲ್ಲಿದ್ದ ಸಿಸಿ ಕ್ಯಾಮೆರಾದ ಕನೆಕ್ಷನ್ ಡಿಸ್ ಕನೆಕ್ಟ್ ಮಾಡಿರುವ ಬಗ್ಗೆ ಪರಿಶೀಲನೆ ವೇಳೆ ಕೊಪ್ಪಳ ನಗರ ಠಾಣೆಯ ಪೊಲೀಸರಿಗೆ ತಿಳಿದುಬಂದಿದೆ. ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಸಣ್ಣ ಬೆಟ್ಟದ ಮೇಲಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನವು ಸುಂದರ ಹಾಗೂ ಪ್ರಶಾಂತವಾಗಿದೆ. ಈ ದೇವಸ್ಥಾನವು ಬೆಟ್ಟದಲ್ಲಿದ್ದು, ಬೆಟ್ಟದ ಕೆಳಗೆ ಮನೆಗಳಿವೆ. ಸಂಜೆ ವೇಳೆ ಇಲ್ಲಿ ಜನರ ಸಂಚಾರ ಕಡಿಮೆ, ಇಂತಹ ದೇವಸ್ಥಾನದಲ್ಲಿ ಮಧ್ಯರಾತ್ರಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.

    ಮೊದಲಿಗೆ ದೇವಸ್ಥಾನಕ್ಕೆ ಅಳವಡಿಸಿದ್ದ ಸಿಸಿಟಿವಿ ವೈಯರನ್ನು ಡಿಸ್‍ ಕನೆಕ್ಟ್ ಮಾಡಿದ ಕಳ್ಳರು ಬಾಗಿಲು ಮುರಿದು ಒಳನುಗ್ಗಿದ್ದಾರೆ. ಬಳಿಕ ಅರ್ಧ ಕೆಜಿ ತೂಕದ ದೇವರ ವಿಗ್ರಹ, ದೇವರಿಗೆ ಹಾಕಿದ್ದ 15 ತೊಲ ಬಂಗಾರದ ಆಭರಣವನ್ನು ಕದ್ದಿದ್ದಾರೆ. ಇದೇ ವೇಳೆ ದೇವರ ಹುಂಡಿಯಲ್ಲಿದ್ದ ಸುಮಾರು 50 ಸಾವಿರ ರೂಪಾಯಿಯನ್ನು ಕದ್ದಿದ್ದಾರೆ. ದೇವರ ಹುಂಡಿಯನ್ನು ದೇವಸ್ಥಾನದಿಂದ ಹೊರ ತಂದು ಹುಂಡಿ ಒಡೆದು ಚಿಲ್ಲರೆ ಹಣ ಅಲ್ಲಿಯೇ ಬಿಟ್ಟು ನೋಟುಗಳನ್ನು ತೆಗೆದುಕೊಂಡಿದ್ದಾರೆ. ಈ ಘಟನೆಯ ನಂತರ ಕೊಪ್ಪಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಶ್ವಾನ ದಳ, ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:ಜಿಲ್ಲಾವಾರು ಪರಿಗಣಿಸಿ ಹೈಕಮಾಂಡ್ ಅವಕಾಶ ಕೊಟ್ರೆ ಕೆಲಸ ಮಾಡ್ತೀನಿ: ನಿರಂಜನ್ ಕುಮಾರ್

  • ಮಗಳನ್ನು ಪ್ರೀತಿ ಮಾಡಿದ್ದಕ್ಕೆ ಅಪ್ರಾಪ್ತನ ಮರ್ಡರ್

    ಮಗಳನ್ನು ಪ್ರೀತಿ ಮಾಡಿದ್ದಕ್ಕೆ ಅಪ್ರಾಪ್ತನ ಮರ್ಡರ್

    – ಮಂಡ್ಯದ ಕೌನ್ಸಿಲರ್ ಮೇಲೆ ಗಂಭೀರ ಆರೋಪ

    ಮಂಡ್ಯ: ಮಗಳನ್ನು ಪ್ರೀತಿಸಿದ ಪ್ರಿಯಕರನನ್ನು ತಂದೆ ಮಧ್ಯರಾತ್ರಿ ಮನೆಗೆ ಕರೆಸಿಕೊಂಡು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಹುಡುಗನ ಸಂಬಂಧಿಕರು ಆರೋಪ ಮಾಡುತ್ತಿರುವ ಘಟನೆ ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿ ನಡೆದಿದೆ.

    ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದಿದ್ದ 17 ವರ್ಷದ ಬಾಲಕ ಮೃತಪಟ್ಟಿದ್ದು, ಬಾಲಕಿಯ ತಂದೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು ಹಾಗೂ ಕುಟುಂಬಸ್ಥರ ಮೇಲೆ ಕೊಲೆ ಆರೋಪ ಕೇಳಿಬಂದಿದೆ.

    ಅಂದಹಾಗೇ ಒಂದೇ ಏರಿಯಾದವರಾಗಿದ್ದ ಇಬ್ಬರು ಅಪ್ರಾಪ್ತರು, ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬಾಲಕನ ತಂದೆ ಗಾರೆ ಕೆಲಸ ಮಾಡಿ ಸಂಸಾರದೂಗಿಸಿದರೆ, ತಾಯಿ ಪವಿತ್ರ ಚಿಲ್ಲರೆ ಅಂಗಡಿ ವ್ಯಾಪಾರ ಮಾಡುತ್ತಿದ್ದರು. ಬಾಲಕನ ಕುಟುಂಬಸ್ಥರು ಆರ್ಥಿಕವಾಗಿ ಹಿಂದುಳಿದಿದ್ದರಿಂದ ಹಾಗೂ ಜಾತಿ ಬೇರೆಯಾಗಿದ್ದರಿಂದ ಅಪ್ರಾಪ್ತರ ಪ್ರೀತಿ ಒಪ್ಪದ ಹುಡುಗಿ ತಂದೆ ಶಿವಲಿಂಗೂ ಒಂದೆರೆಡು ಬಾರಿ ಮಗಳ ಸಹವಾಸಕ್ಕೆ ಬರದಂತೆ ಎಚ್ಚರಿಕೆ ನೀಡಿದ್ದರಂತೆ. ಆದರೆ ಇಬ್ಬರೂ ಕೂಡ ಪ್ರೀತಿ ಮುಂದುವರಿಸಿದ್ದರು. ಜೆಡಿಎಸ್‍ನಿಂದ ನಗರಸಭೆ ಸದಸ್ಯರಾಗಿದ್ದ ಶಿವಲಿಂಗೂ ಮಗಳ ಪ್ರೀತಿಯಿಂದ ತನ್ನ ಮರ್ಯಾದೆಗೆ ಧಕ್ಕೆ ಆಗುಬಹುದೆಂದು ಭಾವಿಸಿ ಬಾಲಕನ್ನ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದರು ಅಂತ ಹೇಳಲಾಗುತ್ತಿದೆ.

    ಮರ್ಡರ್ ಮಾಡಲು ಪ್ರೀ ಪ್ಲಾನ್ ಮಾಡಿದ್ದ ಹುಡುಗಿ ಕುಟುಂಬಸ್ಥರು ಮಗಳ ಮೂಲಕ ಆತನಿಗೆ ಮನೆಬರುವಂತೆ ಮೆಸೆಜ್ ಕಳುಹಿಸಿದ್ದಾರೆ. ಪ್ರೇಯಸಿ ಮಾತು ನಂಬಿ ಮಧ್ಯರಾತ್ರಿ ಮನೆಗೆ ಬಂದಿದ್ದ ಪ್ರಿಯಕರನಿಗೆ ಚಪ್ಪಲಿ ಹೊರಗೆ ಬಿಟ್ಟು ಶಬ್ಧ ಮಾಡದಂತೆ ಒಳಗೆ ಬರಲು ಆಕೆ ತಿಳಿಸಿದ್ದಳು. ಬಳಿಕ ಕುಟುಂಬಸ್ಥರೆಲ್ಲಾ ಸೇರಿ ಬಾಲಕನ ಮೇಲೆ ಹಲ್ಲೆ ನಡೆಸಿದ್ದು. ಗಲಾಟೆ ಸೌಂಡ್ ಕೇಳಿದ ಸ್ಥಳೀಯರು ಬಾಲಕನ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ.

    ತೀವ್ರವಾಗಿ ಗಾಯಗೊಂಡಿದ್ದ ಆತನನ್ನ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೀಗ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಬಾಲಕ ಕೊನೆಯುಸಿರೆಳೆದಿದ್ದಾನೆ. ಆತನ ಸಾವಿನಿಂದ ಪೋಷಕರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದ್ದು, ಪ್ರಿ ಪ್ಲಾನ್ ಮಾಡಿ ಈ ಕೊಲೆ ಮಾಡಲಾಗಿದೆ. ಬುದ್ದಿ ಮಾತು ಹೇಳಿದರೆ ಆತ ಕೇಳುತ್ತಿದ್ದ. ತಪ್ಪಿತಸ್ಥರನ್ನ ಬಂಧಿಸಿ ಅಂತ ಸ್ನೇಹಿತರು ಆಗ್ರಹಿಸಿದ್ದಾರೆ.

    ಮೀಸೆ ಚಿಗುರದ ವಯಸ್ಸಿನಲ್ಲಿ ಆರಂಭವಾದ ಮೂರು ವರ್ಷದ ಪ್ರೀತಿ ಬೆಳೆದು ಹೆಮ್ಮರವಾಗುವ ಮೊದಲೇ ಪ್ರಿಯಕರನ ಸಾವಿನ ಮೂಲಕ ಅಂತ್ಯವಾಗಿದೆ. ಈ ಪ್ರಕರಣ ಸತ್ಯಾಸತ್ಯತೆಯನ್ನು ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

  • ಮಂಡ್ಯ ಜಿಲ್ಲೆಯಲ್ಲಿ ಆತಂಕ ಹುಟ್ಟಿಸುವ ನಿಗೂಢ ದೃಶ್ಯ – ಸಿಸಿಟಿವಿಯಲ್ಲಿ ಸೆರೆ

    ಮಂಡ್ಯ ಜಿಲ್ಲೆಯಲ್ಲಿ ಆತಂಕ ಹುಟ್ಟಿಸುವ ನಿಗೂಢ ದೃಶ್ಯ – ಸಿಸಿಟಿವಿಯಲ್ಲಿ ಸೆರೆ

    ಮಂಡ್ಯ: ಭೂಮಿಯ ಮೇಲೆ ಆತ್ಮಗಳು ಸಂಚಾರ ಮಾಡುತ್ತವೆ ಎಂದು ಕೆಲವರು ಹೇಳುತ್ತಾರೆ. ಇಲ್ಲ ಎನ್ನುವ ತರ್ಕಗಳು ಇಂದಿಗೂ ಸಹ ವೈಜ್ಞಾನಿಕವಾಗಿ ಹಾಗೂ ಧಾರ್ಮಿಕವಾಗಿ ನಡೆಯುತ್ತಿವೆ. ಇದರ ಮಧ್ಯೆ ಸಕ್ಕರೆ ನಾಡು ಮಂಡ್ಯದಲ್ಲಿ ಆತ್ಮ ಸಂಚಾರದ್ದು ಎನ್ನಲಾದ ದೃಶ್ಯವೊಂದು ಸಿಸಿಟಿವಿಯಲ್ಲಿ ಗೋಚರವಾಗಿದೆ. ಇದನ್ನು ನೋಡಿ ಇದೀಗ ಜನರಲ್ಲಿ ಆತಂಕ ಮನೆ ಮಾಡಿದೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗವಿನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ ಇಂತಹದ್ದೆ ಒಂದು ನಿಗೂಢವಾದ ದೃಶ್ಯ ಕಾಣಿಸಿಕೊಂಡಿದ್ದು, ಇದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ನಗುವಿನಹಳ್ಳಿ ಗ್ರಾಮದ ಗೋಪಾಲ್ ಎಂಬವರ ತೋಟದ ಮನೆಯಲ್ಲಿ ಜನವರಿ 31 ರಂದು ಇದ್ದಕ್ಕಿದ್ದ ಹಾಗೆ ಕಪ್ಪು ನೆರಳೊಂದು ಸಂಚಾರ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಕಂಡ ಜನರೆಲ್ಲಾ ಇದು ಆತ್ಮ ಸಂಚಾರ ಮಾಡುವ ದೃಶ್ಯ ಎಂದು ಹೇಳುತ್ತಿದ್ದಾರೆ.

    ಗೋಪಾಲ್ ಅವರ ತೋಟದ ಮನೆ ನಗುವಿನಹಳ್ಳಿ ಗ್ರಾಮದ ಹೊರ ಭಾಗದಲ್ಲಿದ್ದು, ಪಕ್ಕದಲ್ಲಿಯೇ ಒಂದು ಹಳ್ಳ ಹರಿಯುತ್ತಿದೆ. ಅಲ್ಲದೇ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯು ಸಹ ಇದೆ. ಇಲ್ಲಿ ಹಲವು ವರ್ಷಗಳ ಹಿಂದೆ ಮಹಿಳೆ ಹಾಗೂ ಯುವಕ ಅಪಘಾತದಿಂದ ಮೃತಪಟ್ಟಿದ್ದರು. ಜೊತೆಗೆ ಓರ್ವ ಕುಡಿದ ಮತ್ತಿನಲ್ಲಿ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆಗಳು ಈಗ ಕಂಡಿರುವ ದೃಶ್ಯಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಗೋಪಾಲ್ ಅವರು ಕಳ್ಳರ ಭಯದಿಂದ ಸಿಸಿಟಿವಿ ಕ್ಯಾಮೆರಾವನ್ನು ತಮ್ಮ ತೋಟದ ಮನೆಯಲ್ಲಿ ಹಾಕಿಸಿದ್ದರು. ಇದೀಗ ಅದೇ ಸಿಸಿಟಿವಿಯಲ್ಲಿ ಕಳ್ಳರ ಬದಲಿಗೆ ಆತಂಕ ಹುಟ್ಟಿಸುವ ದೃಶ್ಯವೊಂದು ಸೆರೆಯಾಗಿರುವುದನ್ನು ನೋಡಿ ಗ್ರಾಮಸ್ಥರಲ್ಲಿ ಒಂದಷ್ಟು ಆತಂಕ ಹುಟ್ಟಿದೆ.

  • ಮಂಡ್ಯದಲ್ಲೊಬ್ಬ ಉಲ್ಟಾ ಸಿಂಗರ್ – ಕುರಿಗಾಹಿಯ ಪ್ರತಿಭೆಗೆ ಜನರ ಮೆಚ್ಚುಗೆ

    ಮಂಡ್ಯದಲ್ಲೊಬ್ಬ ಉಲ್ಟಾ ಸಿಂಗರ್ – ಕುರಿಗಾಹಿಯ ಪ್ರತಿಭೆಗೆ ಜನರ ಮೆಚ್ಚುಗೆ

    ಮಂಡ್ಯ: ಉಲ್ಟಾ ಹಾಡನ್ನು ಹಾಡುವ ಕುರಿಗಾಹಿ ಯುವಕನೊರ್ವ ಈಗ ಎಲ್ಲೆಡೆ ಜನಪ್ರಿಯಗೊಂಡಿದ್ದಾನೆ.

    ಹೌದು, ಹಾಡುಗಾರಿಕೆ ಅಂದರೆ ಎಲ್ಲರಿಗೂ ಇಷ್ಟ. ಹಾಡುವುದು, ಹಾಡು ಕೇಳುವುದು ಅದೆಷ್ಟೋ ಮಂದಿಗೆ ಹವ್ಯಾಸ. ಕೆಲವರಂತು ವಿಭಿನ್ನವಾದ ಹಾಡುಗಾರಿಕೆ ಮೂಲಕ ರಂಜಿಸುತ್ತಾರೆ. ಆದರೆ ಮಂಡ್ಯದ ಒಬ್ಬ ಕುರಿಗಾಹಿಯ ಉಲ್ಟಾ ಹಾಡುಗಾರಿಕೆ ಕೇಳುಗರನ್ನು ನಿಬ್ಬೆರಗಾಗಿಸುತ್ತಿದೆ.

    ಪಾಂಡವಪುರ ತಾಲೂಕಿನ ಬೇಬಿನಕುಪ್ಪೆ ಗ್ರಾಮದ ಪ್ರಕಾಶ್ ಎಂಬ ಕುರಿಗಾಹಿ ಹಾಡುವುದನ್ನು ಕೇಳಿದರೆ ಅಯ್ಯೋ ಇದ್ಯಾವ ಭಾಷೆ, ಈತ ಹಾಡುತ್ತಿರುವುದು ಕನ್ನಡ ಹಾಡುಗಳಾ? ಇಲ್ಲಾ ಬೇರೆಯಾವುದಾದರು ಭಾಷೆನಾ? ಎಂದು ಜನರಿಗೆ ಪ್ರಶ್ನೆಗಳು ಮೂಡುತ್ತದೆ. ಆದರೆ ಪ್ರಕಾಶ್ ಹಾಡುತ್ತಿರುವುದು ಅಪ್ಪಟ ಕನ್ನಡ ಹಾಡಗಳು. ಕನ್ನಡ ಹಾಡುಗಳ ಸಾಹಿತ್ಯವನ್ನ ಉಲ್ಟಾ ಹಾಡುವ ಈತ ಉಲ್ಟಾ ಸಿಂಗರ್ ಎನಿಸಿಕೊಂಡಿದ್ದಾರೆ.

    ಪಿಯುಸಿವರೆಗೂ ಓದಿಕೊಂಡಿರುವ ಪ್ರಕಾಶ್ ಕುರಿಗಳನ್ನು ಮೇಯಿಸುತ್ತ ಜೀವನ ಸಾಗಿಸುತ್ತಿದ್ದಾರೆ. ಕುರಿ ಮೇಯಿಸುವ ವೇಳೆ ಸಿಗುವ ಬಿಡುವಿನ ಸಮಯದಲ್ಲಿ ಏನಾದರೂ ವಿಭಿನ್ನ ಸಾಧನೆ ಮಾಡಬೇಕೆಂದು ಆಲೋಚಿಸಿದ ಇವರು 25 ಕನ್ನಡ ಹಾಡುಗಳ ಸಾಹಿತ್ಯವನ್ನು ಉಲ್ಟಾ ಕಲಿತು ನಿರರ್ಗಳವಾಗಿ ಹಾಡುತ್ತಾರೆ.

    ಅಲ್ಲದೆ ನೇರವಾಗಿ ಹಾಡುವವರನ್ನೇ ಟೀಕಿಸುವ ಜನ ಪ್ರಕಾಶ್ ಉಲ್ಟಾ ಹಾಡಿದಾಗಲು ಹಾಸ್ಯ ಮಾಡಿದ್ದರು. ಆದರೆ ಟೀಕೆಗಳ ನಡುವೆಯೂ ಪ್ರಯತ್ನ ಮುಂದುವರಿಸಿದ ಈ ಕುರಿಗಾಹಿ ಇಂದು ಹಾಡುಗಳನ್ನು ಉಲ್ಟಾ ಹಾಡುತ್ತಾ ಮಂಡ್ಯದ ಉಲ್ಟಾ ಸಿಂಗರ್ ಎಂದು ಮೆಚ್ಚುಗೆ ಗಳಿಸಿದ್ದಾರೆ. ಪ್ರಕಾಶ್ ಸಾಹಿತ್ಯದ ಬಗೆಗೂ ಆಸಕ್ತಿ ಹೊಂದಿದ್ದು ಬಿಡುವಿನ ವೇಳೆ ತಾವೇ ಬರೆದ 3 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

    ಪ್ರಕಾಶ್‍ರ ವಿಭಿನ್ನ ಹಾಡುಗಾರಿಕೆ ಜನರ ಮೆಚ್ಚುಗೆ ಗಳಿಸಿದ್ದು, ಎಲ್ಲ ಇದ್ದೂ ಏನು ಮಾಡದವರ ನಡುವೆ ಈ ಕುರಿಗಾಹಿ ವಿಶೇಷ ಎನಿಸುತ್ತಾರೆ.

  • ಅಂತ್ಯ ಸಂಸ್ಕಾರಕ್ಕೆ ಸಿದ್ದರಾಮಯ್ಯ, ಯಶ್ ಪಾಲ್ಗೊಳ್ಳಬೇಕು – ಡೆತ್‍ನೋಟ್ ಬರೆದು ಯುವಕ ಆತ್ಮಹತ್ಯೆ

    ಅಂತ್ಯ ಸಂಸ್ಕಾರಕ್ಕೆ ಸಿದ್ದರಾಮಯ್ಯ, ಯಶ್ ಪಾಲ್ಗೊಳ್ಳಬೇಕು – ಡೆತ್‍ನೋಟ್ ಬರೆದು ಯುವಕ ಆತ್ಮಹತ್ಯೆ

    ಮಂಡ್ಯ: ಸಿದ್ದರಾಮಯ್ಯ, ಯಶ್ ಅಂತ್ಯ ಸಂಸ್ಕಾರಕ್ಕೆ ಬರುವಂತೆ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ರಾಮಕೃಷ್ಣ(25) ಆತ್ಮಹತ್ಯೆ ಮಾಡಿಕೊಂಡ ಯುವಕ ಆಗಿದ್ದು, ಈತ ಪೆಟ್ರೋಲ್ ಬಂಕ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದನು. ಮೊನ್ನೆ ಕೆಲಸ ಮುಗಿಸಿಕೊಂಡು ಬಂದಿದ್ದ ಯುವಕ ನಿನ್ನೆ ರಜೆ ಹಾಕಿ ಮನೆಯಲ್ಲೇ ಇದ್ದ. ಆದರೆ ಮನೆಯಲ್ಲಿ ಯಾರೂ ಇಲ್ಲದಿರುವ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಸಾಯುವ ಮುನ್ನ ರಾಮಕೃಷ್ಣ ಡೆತ್ ನೋಟ್ ಬರೆದಿದ್ದು, ಅದರಲ್ಲಿ ನನ್ನ ಅಂತ್ಯಕ್ರಿಯೆಗೆ ರಾಕಿಂಗ್ ಸ್ಟಾರ್ ಯಶ್, ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಳ್ಳುವ ಮೂಲಕ ತನ್ನ ಕೊನೆಯ ಆಸೆಯನ್ನು ಹೇಳಿಕೊಂಡಿದ್ದಾನೆ. ಅಭಿಮಾನಿಯ ಈ ಕೋರಿಕೆ ಈಡೇರಿಸಲು ಸಿದ್ದರಾಮಯ್ಯ ಅವರು ಇಂದು ಕೋಡಿದೊಡ್ಡಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

    15 ವರ್ಷದ ಹಿಂದೆ ರಾಮಕೃಷ್ಣ ತಂದೆ ಚಂದ್ರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ರಾಮಕೃಷ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಮದುವೆಯಾಗಲು ಹೆಣ್ಣು ಸಿಕ್ತಿಲ್ಲ – ಯೋಗೇಶ್ವರ್ ಬಳಿ ಅಳಲು ತೋಡಿಕೊಂಡ ರೈತ

    ಮದುವೆಯಾಗಲು ಹೆಣ್ಣು ಸಿಕ್ತಿಲ್ಲ – ಯೋಗೇಶ್ವರ್ ಬಳಿ ಅಳಲು ತೋಡಿಕೊಂಡ ರೈತ

    – ನನ್ನದು ಮಾತ್ರವಲ್ಲ, ಇಡೀ ರೈತ ಯುವಕರ ಸಮಸ್ಯೆಯಿದು
    – ರೈತನನ್ನು ಮದುವೆಯಾದರೆ ಪ್ರೋತ್ಸಾಹ ಧನ ನೀಡಿ

    ಮಂಡ್ಯ: ಮದುವೆಯಾಗಲು ಹೆಣ್ಣು ನೀಡುತ್ತಿಲ್ಲ ಎಂದು ಸಚಿವ ಪಿ ಯೋಗೇಶ್ವರ್ ಬಳಿ ಯುವ ರೈತರೊಬ್ಬರು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

    ಲಾಕ್‍ಡೌನ್ ಸಂದರ್ಭದಲ್ಲಿ ಪಟ್ಟಣ ಪ್ರದೇಶದಲ್ಲಿ ವಾಸ ಮಾಡಲು ಸಾಧ್ಯವಾಗದೇ ಶೇ.75 ಜನರು ಹಳ್ಳಿಗಳಿಗೆ ವಾಪಸ್ ಬಂದಿದ್ದರು. ಈ ವೇಳೆ ಜನರು ಹಳ್ಳಿ ಲೈಫ್ ಸೂಪರ್, ರೈತನೇ ಗ್ರೇಟ್ ಎಂದು ಹೇಳುತ್ತಿದ್ದರು. ಆದರೆ ಲಾಕ್‍ಡೌನ್ ಮುಗಿದ ಬಳಿಕ ಹಳ್ಳಿ ಲೈಫ್‍ನ ಅನುಭವಿಸಲು ಇಷ್ಟ ಪಡುತ್ತಿಲ್ಲ ಹಾಗೂ ರೈತನಿಗೆ ಹೆಣ್ಣು ಕೊಡಲು ಹೆಣ್ಣೆತ್ತವರು ಮೂಗು ಮುರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ರೈತ ಪ್ರವೀಣ್ ಅವರು ರೈತರಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಸಚಿವ ಯೋಗೇಶ್ವರ್ ಹತ್ತಿರ ತನ್ನ ಕಣ್ಣೀರಿನ ಕಹಾನಿಯನ್ನು ಹೇಳಿಕೊಂಡಿದ್ದಾರೆ. ಸರ್ ನಾನೊಬ್ಬ 28 ವರ್ಷದ ಯುವಕ, ನಾನು ರೇಷ್ಮೆ ಕೃಷಿಯನ್ನು ಮಾಡುತ್ತೇನೆ. ಅದರಿಂದ ಒಳ್ಳೆಯ ಸಂಪಾದನೆಯನ್ನು ಮಾಡುತ್ತಿದ್ದೇನೆ. ಆದರೆ ನಾನು ಮದುವೆಯಾಗಲು ಹುಡುಗಿ ಕೇಳಲು ಹೋದರೆ, ನನಗೆ ಹುಡುಗಿ ಕೊಡುತ್ತಿಲ್ಲ. ನಾವು ರೈತರಿಗೆ ಕೊಡಲ್ಲ. ಸಿಟಿಯಲ್ಲಿ ಇದ್ದವರಿಗೆ ಹೆಣ್ಣು ಕೊಡುತ್ತೇವೆ ಎಂದು ಹೆಣ್ಣೆತ್ತವರು ಹೇಳುತ್ತಿದ್ದಾರೆ. ಇದು ನನ್ನೊಬ್ಬನ ಸಮಸ್ಯೆ ಮಾತ್ರವಲ್ಲ, ಇಡೀ ರೈತ ಯುವಕರ ಸಮಸ್ಯೆ ಎಂದು ಹೇಳಿದ್ದಾರೆ.

    ಈ ಸಮಸ್ಯೆ ಹೋಗಲಾಡಿಸಲು ಒಂದು ಕಾಯ್ದೆ ತನ್ನಿ. ಅಂತರ್ಜಾತಿ ಮದುವೆಯಾದವರಿಗೆ 2 ಲಕ್ಷ, 3 ಲಕ್ಷ ಎಂದು ಕೊಡುತ್ತೀರಾ. ಅದೇ ರೀತಿ ರೈತನನ್ನು ಮದುವೆಯಾದರೆ ಅವರಿಗೆ ಹುಟ್ಟಿಗೆ ಹುಟ್ಟಿದ ಮಕ್ಕಳಿಗೆ ವಿಮೆ ಅಥವಾ ಪ್ರೋತ್ಸಾಹ ಧನ ನೀಡುವಂತಹ ಯೋಜನೆಗಳನ್ನು ತನ್ನಿ. ಈ ಬಗ್ಗೆ ಸಿಎಂ ಸರ್‍ಗೂ ಹೇಳಿ ಸರ್, ಇದೊಂದು ಒಳ್ಳೆಯ ಕೆಲಸ ಮಾಡಿ ಎಂದು ಪ್ರವೀಣ್ ಅವರು ಮನವಿ ಮಾಡಿಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಪಿ.ಯೋಗೇಶ್ವರ್, ಹೌದು ಅಣ್ಣ ನೀನು ಹೇಳುತ್ತಿರುವುದು ಸರಿ ಇದೆ. ಯೋಚನೆ ಮಾಡೋಣಾ ಇದು ಬಹಳ ಗಂಭೀರ ಸಮಸ್ಯೆ. ಈ ಬಗ್ಗೆ ನಾನು ಮಾತನಾಡುತ್ತೇನೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

  • ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ, ಬಿಜೆಪಿ ಈಗ ಅರಳುತ್ತಿದೆ – ನಾರಾಯಣಗೌಡ

    ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ, ಬಿಜೆಪಿ ಈಗ ಅರಳುತ್ತಿದೆ – ನಾರಾಯಣಗೌಡ

    ಮಂಡ್ಯ: ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ ಎಂದು ಸಚಿವ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.

    ಮೈಸೂರಿನಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಸ್ಥಾನ ಗೆಲ್ಲುತ್ತಿದ್ದ ಬಿಜೆಪಿ ಗ್ರಾಮ ಪಂಚಾಯತಿಯಲ್ಲಿ 750-800 ಸ್ಥಾನ ಗೆದ್ದಿದೆ. ಇದನ್ನ ನೋಡಿದಾಗ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಗೊತ್ತಾಗುತ್ತೆ. ಮಂಡ್ಯದಲ್ಲಿ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ ಎಂದರು.

    ಕೆಳ ಹಂತದಿಂದ ಪಕ್ಷ ಸಂಘಟಿಸುವ ಕೆಲಸ ನಡೆಯುತ್ತಿದೆ. ನಾನು ಈ ಬಗ್ಗೆ ಕಾಂಗ್ರೆಸ್ ಜೆಡಿಎಸ್ ಪಕ್ಷದ ನಾಯಕರನ್ನು ದೂರುವುದಿಲ್ಲ. ನಮ್ಮ ಪಕ್ಷದ ಬಲವರ್ಧನೆಗೆ ಬೇಕಾದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

    ಬಿಜೆಪಿಗೆ ಶಾಸಕ ಎಂ.ಶ್ರೀನಿವಾಸ್ ಸೆಳೆಯುವ ಯತ್ನ ನಡೆಯುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ನಾವು ಯಾರನ್ನೂ ಸೆಳೆಯುವ ಪ್ರಯತ್ನ ಮಾಡಿಲ್ಲ. ಒಂದಿಬ್ಬರು ಎಂಎಲ್‍ಎ ಬಿಟ್ಟರೆ ಉಳಿದವರು ನಮ್ಮ ಜೊತೆಗಿದ್ದಾರೆ. ಕೆಲವು ಸಿಕ್ರೇಟ್‍ಗಳನ್ನು ಬಹಿರಂಗವಾಗಿ ಹೇಳಲಾಗುವುದಿಲ್ಲ. ಬಿಜೆಪಿ ಮುನ್ನಡೆಸಲು ಜೊತೆಯಾಗಿ ಬಂದವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.

    ಸದ್ಯ ಜಿಲ್ಲೆಯಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆ ನಡೆಯುತ್ತಿವೆ. ಅದನ್ನು ನಾನು ಈಗ ಬಹಿರಂಗ ಪಡಿಸುವುದಿಲ್ಲ. ಈಗ ಹೇಳಿದರೆ ನೀವು ಅದರ ದಾರಿ ತಪ್ಪಿಸುತ್ತೀರಿ. ಹಾಗಾಗಿ ಎಲ್ಲವೂ ಒಳ್ಳೆಯದಾದ ನಂತರ ನಿಮ್ಮ ಬಳಿ ಹೇಳುತ್ತೇನೆ ಎಂದು ತಿಳಿಸುವ ಮೂಲಕ ಪರೋಕ್ಷವಾಗಿ ಆಪರೇಷನ್ ಕಮಲದ ಸುಳಿವು ನೀಡಿದರು.

  • ಕೆಆರ್‌ಎಸ್‌ನಲ್ಲಿ ಕೊನೆಗೂ ಬೋನಿಗೆ ಬಿತ್ತು ಚಿರತೆ

    ಕೆಆರ್‌ಎಸ್‌ನಲ್ಲಿ ಕೊನೆಗೂ ಬೋನಿಗೆ ಬಿತ್ತು ಚಿರತೆ

    ಮಂಡ್ಯ: ಕೆಆರ್‌ಎಸ್‌ನ ಸ್ಥಳೀಯರು, ಪ್ರವಾಸಿಗರು ಹಾಗೂ ಅಧಿಕಾರಿಗಳ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದ್ದು, ಸ್ಥಳೀಯರ ಆತಂಕ ದೂರವಾಗಿದೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಅಣೆಕಟ್ಟೆಯ ಮುಖ್ಯದ್ವಾರದಲ್ಲಿ ಹಾಗೂ ಬೃಂದಾವನ ಗಾರ್ಡನ್‍ನಲ್ಲಿ ಕಳೆದ ಹಲವು ದಿನಗಳಿಂದ ಚಿರತೆಯೊಂದು ಪದೇ ಪದೇ ಕಾಣಿಸಿಕೊಂಡಿತ್ತು.

    ಕಳೆದ ಶುಕ್ರವಾರ ಚಿರತೆ ಓಡಾಡುವ ದೃಶ್ಯ ಇಲ್ಲಿನ ಸಿಸಿ ಟಿವಿಯಲ್ಲಿ ಸಹ ಸೆರೆಯಾಗಿತ್ತು. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯ ಸೆರೆಗೆ ಕೆಆರ್‌ಎಸ್‌ ಅಣೆಕಟ್ಟೆನ ಮುಖ್ಯದ್ವಾರದ ಬಳಿ ಬೋನ್ ಇರಿಸಿದ್ದರು.

    ಬೋನ್ ಇರಿಸಿದ ಐದು ದಿನಗಳ ಬಳಿಕ ಇಂದು ಚಿರತೆ ಬೋನ್‍ಗೆ ಬಿದ್ದಿದೆ. ಚಿರತೆ ಬೋನ್‍ಗೆ ಬಿದ್ದಿರುವುದರಿಂದ ಜನರಲ್ಲಿ ಇದ್ದ ಆತಂಕ ದೂರವಾಗಿದೆ. ಸದ್ಯ ಬೋನಿಗೆ ಬಿದ್ದ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಡಲು ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ.

  • ಗ್ರಾ.ಪಂ ಚುಕ್ಕಾಣಿಗೆ ಜೆಡಿಎಸ್‍ನಿಂದ ಖಾಲಿ ಚೆಕ್ ಅಸ್ತ್ರ ಪ್ರಯೋಗ?

    ಗ್ರಾ.ಪಂ ಚುಕ್ಕಾಣಿಗೆ ಜೆಡಿಎಸ್‍ನಿಂದ ಖಾಲಿ ಚೆಕ್ ಅಸ್ತ್ರ ಪ್ರಯೋಗ?

    – ಜೆಡಿಎಸ್ ಶಾಸಕರ ಮೇಲೆ ಗಂಭೀರ ಆರೋಪ

    ಮಂಡ್ಯ: ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುಕ್ಕಾಣಿ ಹಿಡಿಯಲು ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಖಾಲಿ ಚೆಕ್ ಅಸ್ತ್ರವನ್ನು ಪ್ರಯೋಗ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.

    ಮದ್ದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಯ ಚುಕ್ಕಾಣಿಯನ್ನು ಜೆಡಿಎಸ್ ಪಡೆಯಲು ಬೇರೆ ಪಕ್ಷದ ಬೆಂಬಲಿತ ಗ್ರಾಮಪಂಚಾಯತಿ ಸದಸ್ಯರ ಬಳಿ ಶಾಸಕ ತಮ್ಮಣ್ಣ ಅವರು ಖಾಲಿ ಚೆಕ್‍ಗೆ ಹಾಗೂ ಪ್ರನೋಟ್‍ಗೆ ಸಹಿ ಹಾಕಿಸಿಕೊಂಡಿದ್ದಾರೆ. ಬೇರೆ ಪಕ್ಷದಲ್ಲಿ ಇದ್ದ ಗ್ರಾಮಪಂಚಾಯತಿ ಸದಸ್ಯರು ಇದೀಗ ಜೆಡಿಎಸ್ ಸೇರಲು ಮದ್ದೂರು ಕ್ಷೇತ್ರದಲ್ಲಿ ಮುಂದಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

    ಬೇರೆ ಕ್ಷೇತ್ರದಿಂದ ಜೆಡಿಎಸ್‍ಗೆ ಬಂದ ಸದಸ್ಯರ ಬಳಿ ತಮ್ಮಣ್ಣ ಅವರು ಖಾಲಿ ಚೆಕ್‍ಗೆ ಹಾಗೂ ಪ್ರನೋಟ್‍ಗೆ ಸಹಿ ಹಾಕಿಸಿಕೊಂಡು ಪಕ್ಷ ಸೇರ್ಪಡೆ ಮಾಡಿಕೊಂಡಿದ್ದಾರೆ. ಜೊತೆಗೆ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಬೆಂಬಲಿಸುವಂತೆ ಸೇರ್ಪಡೆಗೊಂಡಿರುವ ಸದಸ್ಯರಿಗೆ ಸೂಚನೆ ನೀಡಿದ್ದಾರೆ.

    ಶಾಸಕ ಡಿ.ಸಿ.ತಮ್ಮಣ್ಣ ಅವರು ಚೆಕ್‍ಗೆ ಹಾಗೂ ಪ್ರನೋಟ್‍ಗೆ ಸಹಿ ಹಾಕಿಸಿಕೊಳ್ಳುವುದು ಮತ್ತು ಅವರನ್ನು ಜೆಡಿಎಸ್‍ಗೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಫೋಟೋಗಳು ವೈರಲ್ ಆಗಿದೆ.

  • ಮಂಡ್ಯದ ಪೋಸ್ಟ್ ಆಫೀಸ್‍ನಲ್ಲಿ ದೋಖಾ – ಸಾವನ್ನಪ್ಪಿ 5 ವರ್ಷ ನಂತ್ರ ಖಾತೆಯಿಂದ ಹಣ ಡ್ರಾ

    ಮಂಡ್ಯದ ಪೋಸ್ಟ್ ಆಫೀಸ್‍ನಲ್ಲಿ ದೋಖಾ – ಸಾವನ್ನಪ್ಪಿ 5 ವರ್ಷ ನಂತ್ರ ಖಾತೆಯಿಂದ ಹಣ ಡ್ರಾ

    ಮಂಡ್ಯ: ವೃದ್ಧೆಯೊಬ್ಬರು ಮೃತಪಟ್ಟು ಐದು ವರ್ಷವಾದ ಬಳಿಕ ಅವರ ಅಂಚೆ ಕಚೇರಿಯಲ್ಲಿ ಇದ್ದ ಖಾತೆಯಿಂದ 19 ಸಾವಿರ ಹಣ ಡ್ರಾ ಆಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಅಂಚೆ ಅಧಿಕಾರಿಗಳನ್ನು ಕೇಳಿದರೆ ಉತ್ತರವಿಲ್ಲದೆ ಸೈಲೆಂಟ್ ಆಗಿ ಇದ್ದಾರೆ.

    ಕೆರಗೋಡು ಗ್ರಾಮದ ನಿವಾಸಿ ವಿಜಯಾಂಭ ಎಂಬವರು 2011 ಜೂನ್ 18 ರಂದು ಮೃತಪಟ್ಟಿದ್ದಾರೆ. ಕುಟುಂಬಸ್ಥರಿಗೆ ವಿಜಯಾಂಭ ಅವರು ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ್ದಾರೆ ಎಂದು 2018ರಲ್ಲಿ ಮನೆಯನ್ನು ಸ್ವಚ್ಚಗೊಳಿಸುವ ವೇಳೆ ಸಿಕ್ಕ ಪಾಸ್‍ಬುಕ್‍ನಿಂದ ತಿಳಿದು ಬಂದಿದೆ. ನಂತರ ಆ ಪಾಸ್‍ಬುಕ್ ಹಾಗೂ ವಿಜಯಾಂಭ ಅವರ ಡೆತ್ ಸರ್ಟಿಫಿಕೇಟ್‍ನ್ನು ತೆಗೆದುಕೊಂಡು ಅಂಚೆ ಕಚೇರಿಗೆ ಹೋಗಿ ಅಂಚೆ ಅಕೌಂಟ್ ಬಗ್ಗೆ ಕುಟುಂಬಸ್ಥರು ಪರಿಶೀಲನೆ ಮಾಡಿದ್ದಾರೆ.

    ಈ ವೇಳೆ 2016ರ ಜೂನ್ 28 ರಂದು ವಿಜಯಾಂಭ ಖಾತೆಯಿಂದ 19 ಸಾವಿರ ಹಣ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ. ಅದಾಗಲೇ ವಿಜಯಾಂಭ ಅವರು ಮೃತಪಟ್ಟಿ 5 ವರ್ಷಗಳು ಆಗಿತ್ತು. ಈ ವೇಳೆ ಕುಟುಂಬಸ್ಥರು ವಿಜಯಾಂಭ ಅವರು ಸಾವನ್ನಪ್ಪಿರುವುದು 2011 ರಲ್ಲಿ ಅವರ ಖಾತೆಯಿಂದ 2015 ರಲ್ಲಿ ಹಣ ಹೇಗೆ ಡ್ರಾ ಆಯ್ತು ಎಂದು ಪ್ರಶ್ನೆ ಮಾಡಿದ್ದಾರೆ.

    ಕುಟುಂಬಸ್ಥರ ಪ್ರಶ್ನೆಗೆ ಅಂಚೆ ಅಧಿಕಾರಿಗಳು ಯಾವುದೇ ಉತ್ತರ ನೀಡದೇ ಬೇರೆ ಸಬೂಬನ್ನು ನೀಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದು ಮೂರು ವರ್ಷಗಳಾಗಿದ್ದು, ಇಲ್ಲಿಯವರೆಗೆ ಯಾವುದೇ ನ್ಯಾಯ ಈ ಕುಟುಂಬಕ್ಕೆ ದೊರೆತಿಲ್ಲ. ವಿಜಯಾಂಭ ಅವರ ಅಳಿಯ ಶಿವಪ್ರಕಾಶ್ ಅಂಚೆ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ಪತ್ರ ಬರೆದರೂ ಸಮಸ್ಯೆ ಪರಿಹಾರವಾಗಿಲ್ಲ. ಅಂಚೆ ಇಲಾಖೆಯಲ್ಲಿ ಈ ರೀತಿಯ ಮೋಸ ಆಗುತ್ತದೆ ಎಂದರೆ ಯಾರು ಹಣ ಕಟ್ಟುತ್ತಾರೆ. ಈ ರೀತಿ ಆದೆಷ್ಟು ಜನರಿಗೆ ಮೋಸ ಆಗಿದೆಯೋ. ನಮಗೆ ನ್ಯಾಯ ದೊರಕಿಸಿ, ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷಯಾಗಬೇಕೆಂದು ಶಿವಪ್ರಕಾಶ್ ಆಗ್ರಹ ಮಾಡುತ್ತಿದ್ದಾರೆ.