Tag: ಪಬ್ಲಿಕ್ ಟಿವಿ Lockdown

  • ನಾಳೆಯಿಂದ ಗದಗ ಜಿಲ್ಲೆ 5 ದಿನ ಲಾಕ್‍ಡೌನ್ – ಮಾರ್ಕೆಟ್‍ಗೆ ಮುಗಿಬಿದ್ದ ಜನ

    ನಾಳೆಯಿಂದ ಗದಗ ಜಿಲ್ಲೆ 5 ದಿನ ಲಾಕ್‍ಡೌನ್ – ಮಾರ್ಕೆಟ್‍ಗೆ ಮುಗಿಬಿದ್ದ ಜನ

    ಗದಗ: ನಾಳೆಯಿಂದ 5 ದಿನ ಜಿಲ್ಲೆಯಾದ್ಯಂತ ಲಾಕ್‍ಡೌನ್ ಜಾರಿಗೊಳಿಸಿರುವ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿಬಿದ್ದಿದ್ದರು.

    ಜಿಲೆಯಾದ್ಯಂತ ಮತ್ತೆ ಜೂನ್ 7ರ ವರೆಗೆ ಸಂಪೂರ್ಣ ಕಠಿಣ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಜನರಿಗೆ ಇಂದು ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ, ಜನ ಮಾತ್ರ ಎಷ್ಟೇ ಹೇಳಿದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮೈ ಮರೆತು ಓಡಾಡಿದ್ದರು.

    ನಗರದ ನಾಮ ಜೋಶಿ ರೋಡ್, ಗ್ರೀನ್ ಮಾರ್ಕೆಟ್, ಬ್ಯಾಂಕ್ ರೋಡ್, ಪಟೇಲ್ ರೋಡ್, ನಾನ್ ವೆಜ್ ಮಾರ್ಕೆಟ್‍ನಲ್ಲಿ ಜನ ಜಂಗುಳಿಯೇ ತುಂಬಿತ್ತು. ಇಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿರುವ ಜನರು ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರ ಮರೆತು ಅಗತ್ಯ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದರು.

    ಗದಗ- ಬೆಟಗೇರಿ ಅವಳಿ ನಗರದ ಜನರು ಸೇರಿದಂತೆ ಗ್ರಾಮೀಣ ಭಾಗದ ಜನರು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಹೀಗಾಗಿ ಮಾರುಕಟ್ಟೆಗಳು ಜನ ಜಾತ್ರೆಯಂತಾಗಿತ್ತು. ಬಹುತೇಕರು ಮಾಸ್ಕ್‌ಗಳನ್ನೇ ಹಾಕಿಕೊಂಡು ಬಂದಿರಲಿಲ್ಲ. ಇನ್ನು ಕೆಲವರು ನಾಮಕಾವಸ್ತೆಗೆ ಮಾಸ್ಕ್ ಹಾಕಿಕೊಂಡಿದ್ದರು. ಸಾಮಾಜಿಕ ಅಂತರವಂತೂ ಅವರಿಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದರು.

    ಸರ್ಕಾರ ಹಾಗೂ ಜಿಲ್ಲಾಡಳಿತ ಹಲವು ಕಾರ್ಯಕ್ರಮಗಳ ಮೂಲಕ ಹಾಗೂ ಲಾಕ್‍ಡೌನ್ ಮೂಲಕ ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರೂ ಜನರು ಮಾತ್ರ ಸುಧಾರಿಸುತ್ತಿಲ್ಲ. ಅಧಿಕಾರಿಗಳು ಎಷ್ಟೇ ಬುದ್ಧಿ ಹೇಳಿದರೂ ಜನ ಮಾತ್ರ ತಮ್ಮ ವರ್ತನೆಯಿಂದಲೇ ಎಲ್ಲವನ್ನೂ ಖರೀದಿಸಿ ಮನೆಗಳತ್ತ ಮುಖ ಮಾಡಿದರು.

  • ಮಹಾರಾಷ್ಟ್ರದಲ್ಲಿ ಜೂನ್ 15ರವರೆಗೆ ಲಾಕ್‍ಡೌನ್ ವಿಸ್ತರಣೆ

    ಮಹಾರಾಷ್ಟ್ರದಲ್ಲಿ ಜೂನ್ 15ರವರೆಗೆ ಲಾಕ್‍ಡೌನ್ ವಿಸ್ತರಣೆ

    ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಲಾಕ್‍ಡೌನ್‍ನನ್ನು ಜೂನ್ 15 ರವರೆಗೆ ವಿಸ್ತರಿಸಲಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

    ಕೊರೊನಾ ಪಾಸಿಟಿವ್ ಶೇಕಡಾ ಪ್ರಮಾಣ 10 ಕ್ಕಿಂತ ಕಡಿಮೆ ಮತ್ತು ಆಕ್ಸಿಜನ್, ಬೆಡ್‍ಗಳು ಶೇಕಡಾ 40ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಕೋವಿಡ್ ನಿರ್ಬಂಧಗಳನ್ನು ಹಂತ ಹಂತವಾಗಿ ತೆಗೆಯಲಾಗುತ್ತದೆ. ಮತ್ತೊಂದೆಡೆ ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಇದನ್ನು ಓದಿ: ಕೊರೊನಾದಿಂದ ಮೃತಪಟ್ಟ ಪತ್ರಕರ್ತರಿಗೆ 10 ಲಕ್ಷ ಪರಿಹಾರ: ಸಿಎಂ ಯೋಗಿ ಆದಿತ್ಯನಾಥ್

    ಹಲವಾರು ಮಂದಿ ಲಾಕ್‍ಡೌನ್ ತೆರವುಗೊಳಿಸದಿದ್ದರೆ, ಆಂದೋಲನ ನಡೆಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅವರಿಗೆ ತಾಳ್ಮೆಯಿಂದ ಇರಬೇಕೆಂದು ನಾನು ವಿನಂತಿಸುತ್ತೇನೆ. ಅಲ್ಲದೆ ನಾವು ತುಂಬಾ ಕಟ್ಟುನಿಟ್ಟಾದ ಲಾಕ್‍ಡೌನ್ ವಿಧಿಸಿಲ್ಲ. ನಿರ್ಬಂಧಗಳನ್ನು ನಿಮ್ಮ ಮೇಲೆ ಹೇರಿ ನಾನು ಆನಂದಿಸುತ್ತಿಲ್ಲ. ಆದರೆ ಈ ಸಮಯದಲ್ಲಿ ನಿರ್ಬಂಧದ ಅವಶ್ಯಕತೆ ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

  • ಮೂರು ಎಕರೆ ಕಲ್ಲಂಗಡಿ ಬೆಳೆಯನ್ನು ನಾಶಗೊಳಿಸಿದ ರೈತ

    ಮೂರು ಎಕರೆ ಕಲ್ಲಂಗಡಿ ಬೆಳೆಯನ್ನು ನಾಶಗೊಳಿಸಿದ ರೈತ

    ಕಲಬುರಗಿ: ಲಾಕ್‍ಡೌನ್‍ನಿಂದ ಕಲ್ಲಂಗಡಿ ಹಣ್ಣು ಮಾರಾಟವಾಗದ ಹಿನ್ನಲೆ, ಟ್ರ್ಯಾಕ್ಟರ್ ಹೊಡೆದು ತಾನೇ ಬೆಳೆದ ಕಲ್ಲಂಗಡಿ ಹಣ್ಣನ್ನು ರೈತ ಹಾಳು ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದುಗನೂರು ಗ್ರಾಮದಲ್ಲಿ ನಡೆದಿದೆ.

    ರಾಮಲಿಂಗಯ್ಯ ಕಲಾಲ್ ಎಂಬ ರೈತ ಮೂರು ಎಕರೆಯಲ್ಲಿ ಎರಡು ಲಕ್ಷ ಹಣ ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದರು. ಆದರೆ ಲಾಕ್‍ಡೌನ್‍ನಿಂದ ಹಣ್ಣು ಮಾರಾಟವಾಗದೇ ಹೊಲದಲ್ಲಿಯೇ ಹಾಳಾಗಿ ಹೋಗಿದೆ. ಹೀಗಾಗಿ ಕಲ್ಲಂಗಡಿ ಕಿತ್ತು ಬೇರೆ ಬೆಳೆಯಲು ರಾಮಲಿಂಗಯ್ಯ ಮುಂದಾಗಿದ್ದಾರೆ. ಇದನ್ನು ಓದಿ:ಕಠಿಣ ಲಾಕ್‍ಡೌನ್ ಮಧ್ಯೆ ಹೊರ ರಾಜ್ಯಗಳಿಂದ ಕಳ್ಳ ದಾರಿಗಳ ಮೂಲಕ ಎಂಟ್ರಿ- ಕೊರೊನಾ ಹೊತ್ತು ತರುವ ಆತಂಕ

    ಕಳೆದ ವರ್ಷ ಸಹ ಜಮೀನಿನಲ್ಲಿ ಕಲ್ಲಂಗಡಿ ಬೆಳೆದು ಕೈ ಸುಟ್ಟುಕೊಂಡಿದ್ದರು. ಈ ಬಾರಿ ಸಹ ಕೊರೊನಾ ಲಾಕ್ ಡೌನ್ ಹಿನ್ನಲೆ ಅದೇ ಪರಿಸ್ಥಿತಿ ಬಂದಿದೆ. ಮಾರುಕಟ್ಟೆಗೆ ಹಣ್ಣು ತೆಗೆದುಕೊಂಡು ಹೋಗಬೇಕು ಅಂದರೂ, ಗೂಡ್ಸ್ ವಾಹನದವರು ಯಾರು ಮುಂದೆ ಬರುತ್ತಿಲ್ಲ. ನಾವಾದರೂ ಹೋಗಿ ಮಾರಾಟ ಮಾಡಬೇಕು ಅಂದರೂ ಖರೀದಿ ಮಾಡುವವರಿಲ್ಲ. ಹೀಗಾಗಿ ಕಲ್ಲಂಗಡಿ ಹಣ್ಣು ಬೆಳೆದು ಕೈ ಸುಟ್ಟಾಗಿದೆ. ಹೀಗಾಗಿ ಸರ್ಕಾರ ಕಲ್ಲಂಗಡಿ ಬೆಳೆಗಾರರಿಗೆ ಹೆಚ್ಚಿನ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

  • ಜೂನ್ 5, 6ರ ಪರಿಸ್ಥಿತಿ ಮೇಲೆ ಲಾಕ್‍ಡೌನ್ ನಿರ್ಧಾರ – ಸಿಎಂ ಬಿಎಸ್‍ವೈ

    ಜೂನ್ 5, 6ರ ಪರಿಸ್ಥಿತಿ ಮೇಲೆ ಲಾಕ್‍ಡೌನ್ ನಿರ್ಧಾರ – ಸಿಎಂ ಬಿಎಸ್‍ವೈ

    ಬೆಂಗಳೂರು: ಲಾಕ್‍ಡೌನ್ ವಿಸ್ತರಣೆ ಮಾಡಿ ಎಂದು ತಜ್ಞರು ಯಾವುದೇ ವರದಿ ಕೊಟ್ಟಿಲ್ಲ. ಲಾಕ್‍ಡೌನ್ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿಎಂ ಬಿಎಸ್ ಯಡಿಯೂರಪ್ಪನವರು ತಿಳಿಸಿದ್ದಾರೆ.

    ಇಂದು ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಲಾಕ್‍ಡೌನ್ ಕುರಿತಂತೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ. ಜೂನ್ 5, 6 ರ ವೇಳೆಗೆ ಪರಿಸ್ಥಿತಿ ನೋಡಿಕೊಂಡು, ತಜ್ಞರ ಜತೆ, ಸಚಿವರ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

    ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಜಾಸ್ತಿ ಇದೆ. ಅಲ್ಲದೆ ಲಾಕ್ಡೌನ್ ವಿಸ್ತರಣೆ ಮಾಡಿ ಅಂತ ತಜ್ಞರು ಸದ್ಯ ಯಾವುದೇ ವರದಿ ಕೊಟ್ಟಿಲ್ಲ. ಹೀಗಾಗಿ ಲಾಕ್‍ಡೌನ್ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.

    ಕೇಂದ್ರ ಸರ್ಕಾರ ಕೂಡ ಆಯಾ ರಾಜ್ಯಗಳಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲು ಸೂಚಿಸಿದೆ. ಹೀಗಾಗಿ ನಾವು ಸಹ ಇಲ್ಲಿನ ಪರಿಸ್ಥಿತಿ ನೋಡಿಕೊಂಡು ನಿರ್ಧಸುತ್ತೇವೆ. ಸದ್ಯ ಎರಡನೇ ಹಂತದ ಪರಿಹಾರ ಪ್ಯಾಕೇಜ್ ರೆಡಿಯಾಗುತ್ತಿದೆ ಎಂದು ಹೇಳಿದರು.

    ಕೇಂದ್ರದಲ್ಲಿ ಬಿಜೆಪಿ ಸರ್ಕಾರಕ್ಕೆ ಇಂದು ಏಳು ವರ್ಷ ತುಂಬಿದ ಹಿನ್ನೆಲೆ ಸಿಎಂ ಯಡಿಯೂರಪ್ಪನವರು ತಮ್ಮ ಕಾವೇರಿ ನಿವಾಸ ಬಳಿ ಪೌರಕಾರ್ಮಿಕರಿಗೆ ಫುಡ್ ಕಿಟ್ ವಿತರಿಸಿದರು.

  • ಬೈಕಿನಲ್ಲಿ ಹೋಗುತ್ತಿದ್ದ ಯುವಕನ ಹತ್ಯೆಗೈದ ಕಿಡಿಗೇಡಿಗಳು

    ಬೈಕಿನಲ್ಲಿ ಹೋಗುತ್ತಿದ್ದ ಯುವಕನ ಹತ್ಯೆಗೈದ ಕಿಡಿಗೇಡಿಗಳು

    ಹಾಸನ: ಲಾಕ್‍ಡೌನ್ ನಡುವೆ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊರ್ವನನ್ನು ಕಿಡಿಗೇಡಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.

    ಹಾಸನದ ವಲ್ಲಭಾಯಿ ರಸ್ತೆಯ ಹೂವಿನ ವ್ಯಾಪಾರಿ ಭರತ್ ಕೊಲೆಯಾದ ಯುವಕನಾಗಿದ್ದು, ಸಂತೆಪೇಟೆಯ 80 ಅಡಿ ರಸ್ತೆಯ ಮಧ್ಯೆ ಇಂತಹುದೊಂದು ಬರ್ಬರ ಕೊಲೆಯಾಗಿದೆ.

    ಬಿಡಿ ಹೂಗಳನ್ನು ತೆಗೆದುಕೊಂಡು ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ದಾಳಿ ನಡೆಸಿದ ದುಷ್ಕರ್ಮಿಗಳು, ಆತನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.

    ಹೂವಿನ ವ್ಯಾಪಾರಿಯಾಗಿದ್ದ ಭರತ್ ರೌಡಿಶೀಟರ್ ಎರಡು ವಾರದ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ. ಆದರೆ ಇವತ್ತು ಲಾಕ್‍ಡೌನ್ ನಡುವೆಯೂ ಆತನನ್ನು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಬಹಳ ಬರ್ಬರವಾಗಿ ಕೊಲೆಗೈದು ತಲೆಯನ್ನು ಎರಡು ಭಾಗ ಮಾಡಿದ್ದಾರೆ.

    ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಈಗಾಗಲೇ ವಿಶೇಷ ತಂಡ ರಚನೆ ಮಾಡಿದ್ದು, ಕೆಲವು ಸುಳಿವುಗಳ ಆಧಾರದ ಮೇಲೆ ಅವರನ್ನು ಒಂದೆರಡು ದಿನಗಳಲ್ಲಿ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.

  • ಲಾಕ್‍ಡೌನ್ ಹೊಡೆತಕ್ಕೆ ನೆಲಕಚ್ಚಿದ ಸೀಬೆ ಬೆಳೆ – ರೈತನ ಸಂಕಷ್ಟಕ್ಕೆ ಮರುಗಿದ ರಿಯಲ್ ಸ್ಟಾರ್

    ಲಾಕ್‍ಡೌನ್ ಹೊಡೆತಕ್ಕೆ ನೆಲಕಚ್ಚಿದ ಸೀಬೆ ಬೆಳೆ – ರೈತನ ಸಂಕಷ್ಟಕ್ಕೆ ಮರುಗಿದ ರಿಯಲ್ ಸ್ಟಾರ್

    ದಾವಣಗೆರೆ: ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರವರು ಹತ್ತು ಬಾಕ್ಸ್ ಸೀಬೆ ಹಣ್ಣು ಖರೀದಿಸುವ ಮೂಲಕ ರೈತರೊಬ್ಬರ ಕಷ್ಟಕ್ಕೆ ಆಸರೆಯಾಗಿದ್ದಾರೆ.

    ದಾವಣಗೆರೆ ತಾಲೂಕಿನ ಮೆಳ್ಳೆಕಟ್ಟಿ ಗ್ರಾಮದ ರೈತ ಜಯವರ್ಧನ್ ಎಂಬವರು ಮೂರು ಎಕರೆಯಲ್ಲಿ ಸೀಬೆ ಹಣ್ಣನ್ನು ಬೆಳೆದಿದ್ದರು. ಆದರೆ ಲಾಕ್‍ಡೌನ್‍ನಿಂದ ನೂರಾರು ಕ್ವಿಂಟಲ್ ಪೇರಲೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆ ಸಿಗದೆ ನಷ್ಟ ಅನುಭವಿಸುವಂತಾಗಿತ್ತು.

    25 ಕೆಜಿ ಹಣ್ಣಿನ ಒಂದು ಬಾಕ್ಸ್ ಗೆ ಮಾಮೂಲಿ ದಿನಗಳಲ್ಲಿ 700 ರಿಂದ 800 ರವರೆಗೆ ಬೆಲೆ ಸಿಗುತ್ತಿತ್ತು. ಇದೀಗ ಲಾಕ್‍ಡೌನ್‍ನಿಂದ ಕೇವಲ 150 ರೂಪಾಯಿಗೆ ದಲ್ಲಾಳಿಗಳು ಕೇಳುತ್ತಿದ್ದು, ರೈತ ಜಯವರ್ಧನ್ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೆ ಕೊಯ್ದ ಕೂಲಿ ಹಾಗೂ ಮಾರುಕಟ್ಟೆಗೆ ಸಾಗಿಸುವ ವಾಹನದ ಖರ್ಚು ಕೂಡ ಅವರ ಮೇಲೆ ಬೀಳುತ್ತಿತ್ತು.

    ಫೇಸ್ ಬುಕ್‍ನಲ್ಲಿ ರೈತ ಜಯವರ್ಧನ್ ಹಾಗೂ ದೇವರಾಜ್‍ರವರು ತಾವು ಬೆಳೆದ ಸೀಬೆ ಹಣ್ಣಿನ ಬೆಳೆಯ ಬಗ್ಗೆ ವೀಡಿಯೋ ಮಾಡುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಲಕ್ಷಾಂತರ ರೂಪಾಯಿ ಹಣ ವ್ಯಯ ಮಾಡಿ ಸೀಬೆ ಬೆಳೆ ಬೆಳೆದ ರೈತ ಜಯವರ್ಧನ್ ಅವರ ನೆರವಿಗೆ ನಟ ಉಪೇಂದ್ರರವರು ಮುಂದಾಗಿದ್ದಾರೆ.

    ಈ ವೀಡಿಯೋ ನೋಡಿ ಉಪೇಂದ್ರರವರು ರೈತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದು, ಬಳಿಕ ಸ್ಥಳೀಯ ಅಭಿಮಾನಿಗಳನ್ನು ಸಂಪರ್ಕಿಸಿ 25 ಕೆಜಿಯಂತೆ ಹತ್ತು ಬಾಕ್ಸ್ ಸೀಬೆ ಹಣ್ಣನ್ನಯ ಒಂದು ಬಾಕ್ಸ್‍ಗೆ 300 ರೂಪಾಯಿಯಂತೆ ಮೂರು ಸಾವಿರ ಹಣ ನೀಡಿ ಖರೀದಿ ಮಾಡಿದ್ದಾರೆ. ಅಲ್ಲದೆ ಉಚಿತವಾಗಿ ದಾವಣಗೆರೆಯಲ್ಲಿ ಬಡ ಜನರಿಗೆ ಹಂಚಿಕೆ ಮಾಡಿದ್ದಾರೆ. ಇದೇ ರೀತಿ ಜನಪ್ರತಿನಿಧಿಗಳು ಕೆಲಸ ಮಾಡಿದರೆ ರೈತರು ಸಂಕಷ್ಟದಿಂದ ಪಾರಗಬಹುದು ಎಂದು ಮನವಿ ಮಾಡಿಕೊಂಡಿದ್ದಾರೆ.

  • ನಾಳೆಯಿಂದ ಮೇ24 ರವರೆಗೆ ಉತ್ತರ ಕನ್ನಡ ಜಿಲ್ಲೆ ಸಂಪೂರ್ಣ ಲಾಕ್‍ಡೌನ್

    ನಾಳೆಯಿಂದ ಮೇ24 ರವರೆಗೆ ಉತ್ತರ ಕನ್ನಡ ಜಿಲ್ಲೆ ಸಂಪೂರ್ಣ ಲಾಕ್‍ಡೌನ್

    -ಇಂದಿನಿಂದ ಉತ್ತರ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳು ಸಂಪೂರ್ಣ ಬಂದ್

    ಕಾರವಾರ: ಕೋವಿಡ್ ಪ್ರಕರಣ ನಿರಂತರವಾಗಿ ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ವಾರಾಂತ್ಯ ಅಂದರೆ ಮೇ 22ರ ಬೆಳಿಗ್ಗೆ 6 ಗಂಟೆಯಿಂದ ಮೇ 24ರ ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ಕಠಿಣ ಲಾಕ್‍ಡೌನ್ ಘೋಷಿಸಿ ಜಿಲ್ಲಾಧಿಕಾರಿ ಮುಲೈ ಮುಗಿಲನ ಎಂ.ಪಿ.ರವರು ಆದೇಶ ಹೊರಡಿಸಿದ್ದಾರೆ.

    ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ ನಾಲ್ಕು ತಾಲೂಕುಗಳು ಲಾಕ್ ಡೌನ್ ಮಾಡಲು ಸೂಚನೆ ನೀಡಲಾಗಿದೆ. ಸಿದ್ದಾಪುರ, ಶಿರಸಿ, ಯಲ್ಲಾಪುರ ಮತ್ತು ಮುಂಡಗೋಡು ಪಟ್ಟಣಗಳಲ್ಲಿ ಅತೀ ಹೆಚ್ಚು ಸೋಂಕು ಪತ್ತೆಯಾಗುತ್ತಿದ್ದು, ಈ ತಾಲೂಕುಗಳನ್ನು ಕಂಟೈನ್ಮೆಂಟ್ ವಲಯವಾಗಿ ಘೋಷಣೆ ಮಾಡಲಾಗಿದ್ದು, ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.

    ಉಳಿದ ತಾಲೂಕುಗಳಲ್ಲಿ ಮೇ 22ರ ಬೆಳಿಗ್ಗೆ ಆರು ಗಂಟೆಯಿಂದ ಲಾಕ್‍ಡೌನ್ ಮಾಡಲಾಗುತ್ತಿದೆ. ಸದ್ಯ ಕಾರವಾರದ 17 ಪ್ರಮುಖ ರಸ್ತೆಗಳನ್ನು ಇಂದು ಸಂಪೂರ್ಣ ಬಂದ್ ಮಾಡಲಾಗಿದೆ. ಕಾರವಾರ, ಹಳಿಯಾಳ, ಯಲ್ಲಾಪುರ, ಶಿರಸಿ, ಸಿದ್ದಾಪುರ, ಮುಂಡಗೋಡು ತಾಲೂಕಿನಲ್ಲೂ ಸಂಪೂರ್ಣ ಬಂದ್ ಮಾಡಲಾಗಿದ್ದು, ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ.

  • 6 ರಿಂದ 8 ವಾರ ಲಾಕ್‍ಡೌನ್ ಮಾಡುವುದು ಉತ್ತಮ: ಕೇಂದ್ರಕ್ಕೆ ಐಸಿಎಂಆರ್ ಸಲಹೆ

    6 ರಿಂದ 8 ವಾರ ಲಾಕ್‍ಡೌನ್ ಮಾಡುವುದು ಉತ್ತಮ: ಕೇಂದ್ರಕ್ಕೆ ಐಸಿಎಂಆರ್ ಸಲಹೆ

    ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಹೆಚ್ಚು ಸೋಂಕಿರುವ ಜಿಲ್ಲೆಗಳಲ್ಲಿ ಎರಡು ತಿಂಗಳ ಕಾಲ ಲಾಕ್‍ಡೌನ್‍ಗೊಳಿಸುವುದು ಉತ್ತಮ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮುಖ್ಯಸ್ಥ ಡಾ. ಬಲರಾಂ ಭಾರ್ಗವ್ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಈ ಕುರಿತಂತೆ ಮಾತನಾಡಿದ ಅವರು, ಪ್ರತಿ ದಿನ ಶೇ.10ಕ್ಕಿಂತ ಹೆಚ್ಚು ಕೋವಿಡ್ ಪರೀಕ್ಷೆಗಳು ದಾಖಲಾಗುತ್ತಿರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರೆಸುವುದು ಸೂಕ್ತ ಎಂದು ಹೇಳಿದ್ದಾರೆ.

    ದೇಶದ 718 ಜಿಲ್ಲೆಗಳಲ್ಲಿ ಮೂರು-ನಾಲ್ಕು ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ.10ಕ್ಕಿಂತ ಹೆಚ್ಚಾಗುತ್ತಿದ್ದು, ಮುಖ್ಯವಾಗಿ ನವದೆಹಲಿ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದೆ.

    ಕೋವಿಡ್ ಸಂಕ್ರಾಮಿಕ ರೋಗಕ್ಕೆ ದೇಶವು ಸಿಲುಕಿದೆ. ಈ ಮುನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವಷ್ಟರಲ್ಲಿ ವಿಳಂಬವಾಗಿತ್ತು. ಸದ್ಯ ಚಿಕಿತ್ಸೆ ಸಿಗುತ್ತಿಲ್ಲ, ಬೆಡ್ ಸಿಗುತ್ತಿಲ್ಲ. ವೈದ್ಯಕೀಯ ಸುಧಾರಿಸಬೇಕಾಗಿದೆ. ಲಸಿಕೆ ಸರಿಯಾಗಿ ಸಿಗುತ್ತಿಲ್ಲ. ಸಾವಿನ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಮುನ್ನ 6 ರಿಂದ 8 ವಾರಗಳ ಕಾಲ ಲಾಕ್‍ಡೌನ್ ಘೋಷಿಸುವುದು ಉತ್ತಮ ಎಂದಿದ್ದಾರೆ.

    ರಾಷ್ಟ್ರೀಯ ಕಾರ್ಯಪಡೆ ಏಪ್ರಿಲ್ 15ರ ಸಭೆಯ ಬಳಿಕ ಶೇ. 10 ರಷ್ಟು ಪಾಸಿಟಿವ್ ರೇಟ್ ಅಧಿಕವಾಗಿ ಹೊಂದಿರುವ ಪ್ರದೇಶಗಳನ್ನು ಲಾಕ್‍ಡೌನ್ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ತಿಳಿಸಿದರು.

  • ಮಧ್ಯ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಲಾಕ್‍ಡೌನ್ ಜಾರಿ

    ಮಧ್ಯ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಲಾಕ್‍ಡೌನ್ ಜಾರಿ

    ಭೋಪಾಲ್: ಮಧ್ಯಪ್ರದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಸರ್ಕಾರ ನಾಲ್ಕು ಜಿಲ್ಲೆಗಳಲ್ಲಿ ಲಾಕ್‍ಡೌನ್ ಜಾರಿ ಮಾಡಿದೆ.

    ಈಗಾಗಲೇ ಛಿಂದ್ವಾರಾ ಮತ್ತು ರತ್ಲಾಮ್ ನಗರದ ಕೆಲವು ಭಾಗಗಳಲ್ಲಿ ಲಾಕ್‍ಡೌನ್ ವಿಧಿಸಿರುವ ಸರ್ಕಾರ, ಇದೀಗ ಬೆತುಲ್ ಮತ್ತು ಖಾರ್ಗೋನೆ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದ ಲಾಕ್‍ಡೌನ್ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗುರುವಾರ ರಾತ್ರಿ 10 ಗಂಟೆಯಿಂದ ಛಿಂದ್ವಾರಾ ಮತ್ತು ರತ್ಮಾಮ್ ನಗರಗಳಲ್ಲಿ ಲಾಕ್‍ಡೌನ್ ಜಾರಿಯಾಗಿದ್ದು, ಇದು ಏಪ್ರಿಲ್ 5ರ ಬೆಳಗ್ಗೆ 6 ಗಂಟೆಯವರೆಗೂ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಬೆತುಲ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಮತ್ತು ಖಾರ್ಗೋನ್ ಜಿಲ್ಲೆಯಲ್ಲಿ ರಾತ್ರಿ 8 ಗಂಟೆಯಿಂದ ಲಾಕ್‍ಡೌನ್ ಜಾರಿಯಾಗಲಿದೆ.

    ಈ ಕುರಿತಂತೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಾಲ್ಕು ಜಿಲ್ಲೆಗಳನ್ನು ಲಾಕ್‍ಡೌನ್ ಗೊಳಿಸಿರುವುದರಿಂದ ತೀವ್ರ ನಿಗಾ ವಹಿಸಲು ಆ ಪ್ರದೇಶಗಳಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.