Tag: ಪಬ್ಲಿಕ್ ಟಿವಿ Hospital

  • ರಾಜ್ಯದಲ್ಲೇ ಪ್ರಥಮ ಮಾಗಡಿ ಆಸ್ಪತ್ರೆಯಲ್ಲಿ ಮಾಡ್ಯೂಲರ್ ಐಸಿಯು ಲೋಕಾರ್ಪಣೆ

    ರಾಜ್ಯದಲ್ಲೇ ಪ್ರಥಮ ಮಾಗಡಿ ಆಸ್ಪತ್ರೆಯಲ್ಲಿ ಮಾಡ್ಯೂಲರ್ ಐಸಿಯು ಲೋಕಾರ್ಪಣೆ

    – ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ಘಟಕ
    – ಕೊರತೆ ಸಿಬ್ಬಂದಿ ತಕ್ಕಣವೇ ನೇಮಕ
    – ಎರಡು ತಿಂಗಳಲ್ಲೇ ಮಾಗಡಿ ಆಸ್ಪತ್ರೆಗೆ ಆಕ್ಸಿಜನ್ ಘಟಕ

    ಬೆಂಗಳೂರು: ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತಾಲೂಕು ಆಸ್ಪತ್ರೆಯೊಂದರ ಆವರಣದಲ್ಲಿ ಸ್ಥಾಪನೆ ಮಾಡಲಾಗಿರುವ ಅತ್ಯಾಧುನಿಕ ಮಾಡ್ಯೂಲರ್ ಐಸಿಯು ಅನ್ನು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಲೋಕಾರ್ಪಣೆ ಮಾಡಿದರು.

    ಕೋವಿಡ್ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಅನುಕೂಲವಾಗುವ ಈ ಮಾಡ್ಯೂಲರ್ ಐಸಿಯು ಅನ್ನು ಆ್ಯಕ್ಟ್ ಗ್ರಾಂಟ್ ಮತ್ತು ರೆನಾಕ್ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಈ ರೀತಿಯ ಐಸಿಯುಗಳನ್ನು ಈಗಾಗಲೇ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಬಳಕೆ ಮಾಡಲಾಗುತ್ತಿದೆ.

    ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಅಶ್ವತ್ಥನಾರಾಯಣ ಅವರು, “ಎಸಿಟಿ (ಆಕ್ಷನ್ ಕೋವಿಡ್ ಟೀಂ) ಗ್ರಾಂಟ್ಸ್ ಈ ಮಾಡ್ಯೂಲರ್ ಐಸಿಯು ಅನ್ನು ಮಾಗಡಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದೆ. ಅದಕ್ಕೆ ಅಗತ್ಯವಾದ ಮಾನಿಟರ್‍ಗಳನ್ನು ಬಿಡದಿಯ ಟೊಯೊಟ ಕಿರ್ಲೋಸ್ಕರ್ ಕಂಪನಿ ನೀಡಿದ್ದು, ವೆಂಟಿಲೇಟರ್‍ಗಳು ಪಿ.ಎಂ ಕೇರ್‍ನಿಂದ ಬಂದಿವೆ. ಈ ಐಸಿಯುನಿಂದ ಹೊರಗಿನಿಂದ ಒಳ ಬರುವ ಅಥವಾ ಒಳಗಿನಿಂದ ಹೊರ ಬರುವ ಗಾಳಿಯು ಸಂಪೂರ್ಣವಾಗಿ ಶುದ್ಧೀಕರಣಗೊಳ್ಳುತ್ತದೆ. ಜೊತೆಗೆ, ಪ್ರತ್ಯೇಕ ಆಕ್ಸಿಜನ್ ಸಂಪರ್ಕದ ಜತೆಗೆ, ನೀರು ಹಾಗೂ ಒಳಚರಂಡಿ ಪ್ರತ್ಯೇಕ ಸಂಪರ್ಕ ಇರುತ್ತದೆ. ಇಡೀ ರಾಜ್ಯದಲ್ಲೇ ಇಂಥ ಆಧುನಿಕ ಐಸಿಯು ಅನ್ನು ಮಾಗಡಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ” ಎಂದರು.

    ಇಲ್ಲಿಗೆ ಅಗತ್ಯವಾದ ಎಲ್ಲ ಔಷಧಿ, ಆಮ್ಲಜನಕ, ವೈದ್ಯಕೀಯ ಸರಂಜಾಮುಗಳು, ಸಿಬ್ಬಂದಿ ಕೊರತೆ ಇಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ. ನಾಲ್ವರಿಗೆ ಈ ಐಸಿಯುವಿನಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುತ್ತದೆ ಎಂದು ಹೇಳಿದರು.

    ಎರಡು ತಿಂಗಳಲ್ಲಿ ಆಕ್ಸಿಜನ್ ಘಟಕ: ಮಾಗಡಿ ಆಸ್ಪತ್ರೆಯಲ್ಲಿ ಈಗಾಗಲೇ 100 ಹಾಸಿಗೆಗಳಿದ್ದು, ಈ ಪೈಕಿ 50 ಬೆಡ್‍ಗಳಿಗೆ ಆಕ್ಸಿಜನ್ ಸೌಲಭ್ಯವಿದೆ. ಇನ್ನು ಕೆಲ ದಿನಗಳಲ್ಲಿಯೇ ಉಳಿದ 50 ಹಾಸಿಗೆಗಳನ್ನೂ ಆಕ್ಸಿಜನ್ ಬೆಡ್‍ಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ಅಲ್ಲದೆ, ನಿಮಿಷಕ್ಕೆ 600 ಕೆಎಲ್ ಪೂರೈಕೆ ಸಾಮಥ್ರ್ಯದ ಆಮ್ಲಜನಕ ಉತ್ಪಾದಕ ಘಟಕವನ್ನೂ ಎರಡು ತಿಂಗಳಲ್ಲಿ ಸ್ಥಾಪನೆ ಮಾಡಲಾಗುವುದು. ಜೊತೆಗೆ, ಒಟ್ಟು ಬೆಡ್‍ಗಳಲ್ಲಿ 25% ಐಸಿಯು ಬೆಡ್‍ಗಳ ವ್ಯವಸ್ಥೆ ಮಾಡುವ ಉದ್ದೇಶವೂ ಇದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ಘಟಕಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

    ಇದಲ್ಲದೆ, ಪ್ರಾಥಮಿಕ & ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸುಸಜ್ಜಿತ ಲ್ಯಾಬ್ ಹಾಗೂ ತುರ್ತು ಸಂದರ್ಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಮ್ಲಜನಕ ಸಾಂದ್ರಕಗಳನ್ನೂ ಒದಗಿಸಲಾಗುವುದು ಎಂದರು.

    ತಕ್ಷಣವೇ ಸಿಬ್ಬಂದಿ ನೇಮಕ: ಎಲ್ಲ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕೂಡಲೇ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಮುಖ್ಯವಾಗಿ ಸೋಲೂರು ಮತ್ತು ತಿಪ್ಪಸಂದ್ರ ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಕ್ಷಣವೇ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಇದಾದ ಮೇಲೆ ಉಪ ಮುಖ್ಯಮಂತ್ರಿಗಳು ಸಿದ್ಧಾರೂಢ ಮಠದ ಆಶ್ರಮದಲ್ಲಿ ಮುಂಚೂಣಿ ವಾರಿಯರ್ಸ್ ಹಾಗೂ ಆದ್ಯತಾ ಗುಂಪಿಗೆ ಲಸಿಕೆ ನೀಡುತ್ತಿರುವುದನ್ನು ವೀಕ್ಷಿಸಿದರು. ಬಳಿಕ ಹುಲಿಕೋಟೆಯ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿ ಅಲ್ಲಿ ನೇರವಾಗಿ ಸೋಂಕಿತರ ಯೋಗ ಕ್ಷೇಮ ವಿಚಾರಿಸಿದರು. ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಔಷಧಿ, ಆಹಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.

    ಅಂತಿಮವಾಗಿ ವಿಜಿ ದೊಡ್ಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ಪರಿಶೀಲನೆ ನಡೆಸಿದರಲ್ಲದೆ, ಕೊರತೆ ಇರುವ ಸಿಬ್ಬಂದಿ ನೇಮಕಕ್ಕೆ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಹಾಗೂ ಕೆಲ ದಿನಗಳಲ್ಲಿಯೇ ಇಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಅಳವಡಿಸಲಾಗುವುದು ಎಂದರು.

    ಮಾಗಡಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ರಾಕೇಶ ಕುಮಾರ, ಸಿಇಒ ಇಕ್ರಂ,ಡಿಎಚ್ ಒ ಡಾ.ನಿರಂಜನ್, ರೆನಾಕ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸಾಜಿ ಅಬ್ರಹಾಂ, ಹಿರಿಯ ಪ್ರಧಾನ ವ್ಯವಸ್ಥಾಪಕ ಸುಧೀರ್ ಮೆನನ್, ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್, ಬಿಜೆಪಿ ಮುಖಂಡ ಕೃಷ್ಣಮೂರ್ತಿ, ಮಂಡಲಾಧ್ಯಕ್ಷ ಧನಂಜಯ, ತಾಲೂಕು ವೈದ್ಯಾಧಿಕಾರಿ ಮತ್ತಿತರರು ಡಿಸಿಎಂ ಜೊತೆಯಲ್ಲಿ ಉಪಸ್ಥಿತಿಯಲ್ಲಿದ್ದರು.

  • ಆಸ್ಪತ್ರೆಯಲ್ಲಿ ಬೆಂಕಿ ಅವಘಢ, ಐವರ ಸಾವು – 4 ಲಕ್ಷ ಪರಿಹಾರ ಘೋಷಿಸಿದ ಸಿಎಂ

    ಆಸ್ಪತ್ರೆಯಲ್ಲಿ ಬೆಂಕಿ ಅವಘಢ, ಐವರ ಸಾವು – 4 ಲಕ್ಷ ಪರಿಹಾರ ಘೋಷಿಸಿದ ಸಿಎಂ

    – ಐವರು ಕೋವಿಡ್ ರೋಗಿಗಳ ಮರಣ

    ರಾಯಪುರ: ಆಸ್ಪತ್ರೆಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಐವರು ಕೋವಿಡ್ ರೋಗಿಗಳು ಮೃತಟ್ಟಿರುವ ಘಟನೆ ಶನಿವಾರ ಛತ್ತೀಸ್‍ಗಢದ ರಾಯಪುರದಲ್ಲಿ ನಡೆದಿದೆ. ಸದ್ಯ ಘಟನೆ ವೇಳೆ ಮೃತಪಟ್ಟ ಕುಟುಂಬಸ್ಥರಿಗೆ ಛತ್ತೀಸ್‍ಗಢದ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ 4 ಲಕ್ಷ ರೂ. ಹಣವನ್ನು ಪರಿಹಾರ ಘೋಷಿಸಿದ್ದಾರೆ.

    ರಾಜಧಾನಿ ರಾಯಪುರದ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ 5 ಗಂಟೆಗೆ ಮೊದಲನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಆಸ್ಪತ್ರೆಯಲ್ಲಿ 34 ಮಂದಿ ರೋಗಿಗಳು ದಾಖಲಾಗಿದ್ದರು ಹಾಗೂ 9 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    ಘಟನೆ ವೇಳೆ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಆದರೆ ಬೆಂಕಿ ಅವಘಡದಿಂದ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಬೆಂಕಿ ನಂದಿಸಲು ಸುಮಾರು 2 ಗಂಟೆಗಳ ಸಮಯ ಬೇಕಾಯಿತು. ಇದೀಗ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತರ್ಕೆಶ್ವರ್ ಪಟೇಲ್ ತಿಳಿಸಿದ್ದಾರೆ.

    ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ರಾಯ್ಪುರದ ಆಸ್ಪತ್ರೆಯ ಐಸಿಯುವಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಬಹಳ ದುಃಖಕರವಾಗ ಸಂಗತಿ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ದುಃಖಿತ ಕುಟುಂಬಗಳಿಗೆ ಎಲ್ಲಾ ರೀತಿಯ ನೆರೆವು ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.

  • ವೈದ್ಯರ ಎಡವಟ್ಟು – ಸಾವು, ಬದುಕಿನ ಮಧ್ಯೆ ಹೋರಾಡುತ್ತಿದೆ 2 ತಿಂಗಳ ಕಂದಮ್ಮ

    ವೈದ್ಯರ ಎಡವಟ್ಟು – ಸಾವು, ಬದುಕಿನ ಮಧ್ಯೆ ಹೋರಾಡುತ್ತಿದೆ 2 ತಿಂಗಳ ಕಂದಮ್ಮ

    ಯಾದಗಿರಿ: ವೈದ್ಯರು ದೇವರ ಸಮಾನ ಎಂದು ಕರೆಯುತ್ತಾರೆ. ಆದರೆ ಯಾದಗಿರಿಯಲ್ಲಿ ಮಾತ್ರ ವೈದ್ಯರು ಮಾಡಿರುವ ಎಡವಟ್ಟಿನಿಂದ 2 ತಿಂಗಳ ಹಸುಗೂಸು ಸಾವು ಬದುಕಿನ ಮಧ್ಯೆ ಹೋರಾಡುವಂತಾಗಿದೆ. ನಗರದ ವಾತ್ಸಲ್ಯ ಮಕ್ಕಳ ಆಸ್ಪತ್ರೆಯ ವೈದ್ಯರು ಮಾಡಿದ ಕರ್ತವ್ಯ ಲೋಪದಿಂದ ನೆಗಡಿ ಕೆಮ್ಮುನಿಂದ ಬಳಲುತ್ತಿದ್ದ, ಎರಡು ವರ್ಷದ ಮಗು ಈಗ ಪ್ರಜ್ಞಾಹೀನ ಸ್ಥಿತಿಯಲ್ಲಿದೆ.

    ಸುರಪುರದ ನಿವಾಸಿ ಮತ್ತು ಸುರಪುರ ನಗರಸಭೆ ಯುಆರ್ ಡ್ಲೂ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಝರಿನಾ ಬೇಗಂ ಎಂಬವರು ತಮ್ಮ ಎರಡು ತಿಂಗಳ ಇಮಜಾನ್‍ಗೆ, ನೆಗಡಿ ಕೆಮ್ಮು ಹಿನ್ನೆಲೆ ಯಾದಗಿರಿ ವಾತ್ಸಲ್ಯ ಮಕ್ಕಳ ಆಸ್ಪತ್ರೆಗೆ ಕರೆತಂದು, ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು.

    ಆಸ್ಪತ್ರೆ ಸಿಬ್ಬಂದಿ ಪಕ್ಕದ ಮಗುವಿಗೆ ಕೊಡುವ ಡೋಸ್ ಇಂಜೆಕ್ಷನ್‍ನ್ನು ಝರಿನಾ ಬೇಗಂ ಮಗುವಿಗೆ ನೀಡಿದ್ದಾರೆ. ಈ ಪರಿಣಾಮ ಮಗು ಗಾಢ ನಿದ್ದೆ ಜಾರಿ ಬಿಟ್ಟಿದೆ. ಕಳೆದ ಏಳೆಂಟು ಗಂಟೆಯಿಂದ ಮಗು ಕಣ್ಣು ಬಿಡುತ್ತಿಲ್ಲ. ಇದರಿಂದಾಗಿ ಗಾಬರಿಗೊಂಡ ಝರಿನಾ ಬೇಗಂ ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ಆಗ ಮಗುವಿನ ಔಷಧಿ ಬದಲಾದ ವಿಚಾರ ತಿಳಿದಿದೆ. ಈಗ ವೈದ್ಯರು ಉಲ್ಟಾ ಹೊಡೆದಿದ್ದು, ಮಗುವಿಗೆ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಆಗುವುದಿಲ್ಲ, ರಾಯಚೂರಿಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಾರೆ.

    ಹಲವು ವರ್ಷದ ಬಳಿಕ ಝರಿನಾ ಬೇಗಂ ಗಂಡು ಮಗುವಾಗಿದ್ದು, ಗಂಡ ಸಹ ಬಿಟ್ಟು ಹೋಗಿದ್ದಾನೆ. ಈಗ ಮಗುವನ್ನು ಉಳಿಸಿಕೊಳ್ಳಲು ನಾನಾ ಕಷ್ಟಪಡುವಂತಾಗಿದೆ. ಝರಿನಾ ಬೇಗಂ ಆರೋಪ ತಳ್ಳಿಹಾಕಿರುವ ಆಸ್ಪತ್ರೆ ವೈದ್ಯರು ಝರಿನಾ ಬೇಗಂ ಮಾನಸಿಕವಾಗಿ ಸರಿ ಇಲ್ಲ ಅಂತ ಹೇಳಿದ್ದಾರೆ.

  • ಕಾನ್ಪುರ ಆಸ್ಪತ್ರೆಯಲ್ಲಿ ಬೆಂಕಿ – 146 ರೋಗಿಗಳ ರಕ್ಷಣೆ

    ಕಾನ್ಪುರ ಆಸ್ಪತ್ರೆಯಲ್ಲಿ ಬೆಂಕಿ – 146 ರೋಗಿಗಳ ರಕ್ಷಣೆ

    ಲಕ್ನೋ: ಉತ್ತರ ಪ್ರದೇಶ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಇಂದು ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಹೃದಯ ರೋಗ ಕೇಂದ್ರದಲ್ಲಿ ಸುಮಾರು 146 ರೋಗಿಗಳು ದಾಖಲಾಗಿದರು. ಆದರೆ ಇಂದು ಬೆಳಗ್ಗೆ 8 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಇದೀಗ ಆಸ್ಪತ್ರೆಯಲ್ಲಿದ್ದ 146 ರೋಗಿಗಳನ್ನು ರಕ್ಷಿಸಿ ಸ್ಥಳಾಂತರಿಸಲಾಗಿದೆ. ಅದರಲ್ಲಿ 9 ಮಂದಿ ಐಸಿಯುವಿನಲ್ಲಿದ್ದಾರೆ ಮತ್ತು ಅವರನ್ನು ವೈದ್ಯಕೀಯ ಚಿಕಿತ್ಸೆ ಮೂಲಕ ರಕ್ಷಿಸಲಾಗಿದೆ.

    ಸರಿಯಾದ ಸಮಯಕ್ಕೆ ಅಗ್ನಿ ಶಾಮಕ ದಳ ಆಗಮಿಸಿದ್ದರಿಂದ ಯಾವುದೇ ಅಪಘಾತ ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.