Tag: ಪಬ್ಲಿಕ್ ಟಿವಿ HD Kumaraswamy

  • ಯಾರ ಹಂಗಿನಲ್ಲೂ ಇರದ ಸರ್ಕಾರ ಕೊಡಿ: ಎಚ್.ಡಿ ಕುಮಾರಸ್ವಾಮಿ

    ಯಾರ ಹಂಗಿನಲ್ಲೂ ಇರದ ಸರ್ಕಾರ ಕೊಡಿ: ಎಚ್.ಡಿ ಕುಮಾರಸ್ವಾಮಿ

    -ನನ್ನ ಜೀವನದ ಕೊನೆಯ ಹೋರಾಟ 2023ರ ಚುನಾವಣೆ

    ಹಾವೇರಿ: ಕರ್ನಾಟಕದ ಆಡಳಿತ ಕನ್ನಡಿಗರಿಂದಲೇ ಎಂಬ ಹೊಸ ಅಧ್ಯಾಯ ಪ್ರಾರಂಭ ಮಾಡೋಣ. ಮುಖ್ಯಮಂತ್ರಿ ಮಾಡಿ ಅಂತ ನಾನು ಕೇಳಲ್ಲ. ನಿಮ್ಮ ಬದುಕು ಸರಿಪಡಿಸಲು ಪೂರ್ಣ ಸರ್ಕಾರ ಕೊಡಿ. ಯಾರ ಹಂಗಿನಲ್ಲೂ ಇರದ ಸರ್ಕಾರ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿದ್ದಾರೆ.

    ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಸರ್ವಜ್ಞ ವೃತ್ತದ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವಾರು ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡ್ತಿಲ್ಲ. ರಾಜ್ಯ ಸರ್ಕಾರದವರು ಕೇವಲ ಘೋಷಣೆ ಮಾಡುತ್ತಿದ್ದಾರೆ. ಮಳೆ ಅನಾಹುತಗಳಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ಕೊಡುತ್ತೇವೆ ಎಂದು ಹೇಳಿದರು. ಒಂದು ಕಂತು ಹಣ ನೀಡಿ ಮುಂದೆ ಹಣವನ್ನೇ ನೀಡಿಲ್ಲ. ಬೆಳೆ ಹಾನಿ ಪರಿಹಾರವೂ ಸಿಕ್ಕಿಲ್ಲ. ಸಾಲಮನ್ನಾ ಆಗಿಯೇ ಇಲ್ಲ ಎಂದು ಕೆಲವು ರೈತರು ನನಗೆ ಈಗ ಮನವಿ ಕೊಟ್ಟಿದ್ದಾರೆ. ಸಾಲಮನ್ನಾ ಮಾಡಿದಾಗ ಬಿಜೆಪಿ- ಕಾಂಗ್ರೆಸ್‍ನವರು ನನ್ನನ್ನು ಅಪಹಾಸ್ಯ ಮಾಡಿದರು. ನನಗೆ ಕಳೆದ ಚುನಾವಣೆಯಲ್ಲಿ ಬಹುಮತ ಕೊಡಲೇ ಇಲ್ಲ. ನನಗೆ ಯಾರ ಜೊತೆಗೂ ಸರ್ಕಾರ ಮಾಡುವ ಮನಸ್ಸಿರಲಿಲ್ಲ. ಆದರೆ ಕಾಂಗ್ರೆಸ್‍ನವರೇ ನಮ್ಮ ಮನೆಗೆ ಬಂದರು. ಅಂದು ದೇವೆಗೌಡರು ನಮ್ಮ ಪಕ್ಷಕ್ಕೆ ಸಿಎಂ ಹುದ್ದೆ ಬೇಡವೇ ಬೇಡ ಅಂದಿದ್ದರು. ಆದರೆ ರೈತರಿಗೆ ಸಾಲಮನ್ನಾ ಮಾತು ಕೊಟ್ಟ ಹಿನ್ನೆಲೆಯಲ್ಲಿ ಸಿಎಂ ಆಗಲು ಒಪ್ಪಿಕೊಂಡೆ ಎಂದಿದ್ದಾರೆ. ಇದನ್ನೂ ಓದಿ:ಕಾಂತ್ರಿಕಾರಿ ಅಂದ್ರೆ ಗುಂಡು ಹೊಡೆಯುವುದು ಅಲ್ಲ – ಚೇತನ್‍ಗೆ ಹೆಚ್‍ಡಿಕೆ ತಿರುಗೇಟು

    ಕೇಂದ್ರದ ಮುಂದೆ ನಾನೇನು ಅರ್ಜಿ ಹಿಡಿದುಕೊಂಡು ಹೋಗಲ್ಲ. ಕಮಿಷನ್ ತಿನ್ನುವುದು ಈಗ ನಡೆಯುತ್ತಿರುವುದು, ಎಲ್ಲದನ್ನೂ ಕಟ್ ಮಾಡುತ್ತೇನೆ. ಹಾವೇರಿ ಜಿಲ್ಲೆಯವರೇ ಈಗ ಸಿಎಂ ಆಗಿದ್ದಾರೆ. ಮುಂದಿನ ಎರಡು ವರ್ಷ ಏನ್ ಮಾಡುತ್ತಾರೆ ನೋಡೋಣ. ಇದು ನನ್ನ ಜೀವನದ ಕೊನೆಯ ಹೋರಾಟ 2023ರ ಚುನಾವಣೆ. ಕೋವಿಡ್ ಕಡಿಮೆ ಆದ ಮೇಲೆ ಜನರ ನಡುವೆ ಬರುತ್ತೇನೆ. ಹಿರೇಕೇರೂರು ಮಹಾನ್ ಅಭಿವೃದ್ಧಿ ಆಗಿ ಬಿಡ್ತಾ? ರಾಜೀನಾಮೆ ಕೊಟ್ಟು ನನ್ನ ಸರ್ಕಾರ ತೆಗೆದ್ರಲ್ಲಾ? ಹೊಸದಾಗಿ ಏನೂ ಅಭಿವೃದ್ದಿ ಆಗಿಲ್ಲ. ನಾನಿದ್ದಾಗ ಕೊಟ್ಟ ಅನುದಾನವೇ ಈಗಲೂ ನಡೆದಿದೆ ಎಂದು ಸಚಿವ ಬಿ.ಸಿ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    25,000 ಕೋಟಿ ಸಾಲಮನ್ನಾ ಮಾಡಿದ್ದಕ್ಕೆ ನನಗೇನು ಫಲ ಕೊಟ್ಟಿದ್ದೀರಿ? ಮುಂದೆ ಏನು ಅನಾಹುತ ಆಗುತ್ತೆ ನೋಡಿ. ಕೊರೊನಾ ಸಂದರ್ಭದಲ್ಲಿ ಶವ ಇಟ್ಟಕೊಂಡು ಜನ ಕಣ್ಣೀರು ಹಾಕುತ್ತಿದ್ದಾರೆ. ಜನತೆ ಜೊತೆ ಚೆಲ್ಲಾಟ ಆಡುವ ಸರ್ಕಾರ ತರಬೇಡಿ. ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತೀರಿ, ಆದರೆ ಪೀಸ್ ಕಟ್ಟುವುದಕ್ಕೆ ದುಡ್ಡಿಲ್ಲ. ಯೋಜನೆಗಳ ಹೆಸರಿನಲ್ಲಿ ಕಾಂಟ್ರ್ಯಾಕ್ಟರ್ ಗಳ ಬಳಿ ಕಮೀಷನ್ ತೆಗೆದುಕೊಳ್ಳುತ್ತಾರೆ. ಅದನ್ನೇ ತಂದು ನಿಮಗೆ ಹಂಚುತ್ತಾರೆ. ನಾನು 25,000 ಕೋಟಿ ಸಾಲಮನ್ನಾ ಮಾಡುವುದಕ್ಕೆ 10% ಕಮಿಷನ್ ತೆಗೆದುಕೊಂಡರೆ ಏನಾಗುತ್ತಿತ್ತು? ನಾನು ಓಟಿಗೆ 2,000, 3,000 ಹಂಚಬಹುದಿತ್ತಲ್ಲಾ? ನಿಮ್ಮ ಬದುಕು ಹಸನು ಮಾಡುವ ಸರ್ಕಾರ ಬೇಕಾ ಬೇಡವಾ? ಕೇಂದ್ರ ಸರ್ಕಾರ ನಂಬಿದರೆ ನಿಮಗೆ ಗೌರವ ಇಲ್ಲ. ಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿ ಜನ ಪ್ರಯೋಜನ ಪಡೆಯುತ್ತಿದ್ದಾರೆ. ಯುವಕರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡುತ್ತೇವೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಗೆ 15 ವರ್ಷಗಳ ಸಂಭ್ರಮ- ಜೆಡಿಎಸ್ ಸಂಭ್ರಮಾಚರಣೆ

    ಎಸಿ, ಡಿಸಿ ಪೋಸ್ಟಿಂಗ್ ಗೆ ಎಷ್ಟೆಷ್ಟು ಲಕ್ಷ ಕೊಟ್ಟು ಬರಬೇಕು ಅಧಿಕಾರಿಗಳು? ಇದರ ಬಗ್ಗೆ ಚರ್ಚೆ ಮಾಡುತ್ತೀರಾ ನೀವು? ಕೆಲವು ಭಾಗದಲ್ಲಿ ಕಾರ್ಯಕರ್ತರು ನಾನು ಬಂದಾಗ ಬರುತ್ತಾರೆ. ಆದರೆ ಕುಮಾರಸ್ವಾಮಿ ಹೋದ ಮೇಲೆ ಕಾರ್ಯಕರ್ತರು ಮನೇಲಿ ಮಲಗುತ್ತಾರೆ. ಈ ಬಗ್ಗೆ ಕಾರ್ಯಕರ್ತರಿಗೆ ಹೇಳಿದರೆ, ಅದನ್ನು ಅಪಹಾಸ್ಯ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ದೇವೇಗೌಡ್ರ ಮಾತಿನಿಂದಾಗಿ ಸಿಎಂ ಎಚ್.ಡಿ ಕುಮಾರಸ್ವಾಮಿ ಇನ್ಮುಂದೆ ಕೂಲ್ ಕೂಲ್!

  • ನೆರೆ ಮನೆ ಬೆಂಕಿಯಲ್ಲಿ ಬೇಳೆ ಬೇಯಿಸುವುದು ಕಾಂಗ್ರೆಸ್‍ನ ಜಾಡ್ಯ: ಹೆಚ್‍ಡಿಕೆ

    ನೆರೆ ಮನೆ ಬೆಂಕಿಯಲ್ಲಿ ಬೇಳೆ ಬೇಯಿಸುವುದು ಕಾಂಗ್ರೆಸ್‍ನ ಜಾಡ್ಯ: ಹೆಚ್‍ಡಿಕೆ

    ಬೆಂಗಳೂರು: ಮಾಜಿ ಸಿಎಂಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಮತ್ತೊಮ್ಮೆ ಟ್ವೀಟ್ ವಾರ್ ಶುರುವಾಗಿದೆ. ಲಸಿಕೆ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಮತ್ತು ಮಾಜಿ ಸಿಎಂ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಶಾಂತಿ ಕಾಲದಲ್ಲಿ ಕಲಹಕ್ಕೆ ಬರುವುದು, ನೆರೆ ಮನೆ ಬೆಂಕಿಯಲ್ಲಿ ಬೇಳೆ ಬೇಯಿಸುವುದು ಕಾಂಗ್ರೆಸ್ಸಿನ ಜಾಡ್ಯ. ಈ ಅಂಟುರೋಗಕ್ಕೆ ಒಳಗಾದವರು ಸಿದ್ದರಾಮಯ್ಯ. ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ಸಿನ ಆತ್ಮವಂಚನೆ ನೆನಪಿಸಿದ್ದಕ್ಕೆ ಸಿದ್ದರಾಮಯ್ಯ ನನ್ನ ವಿರುದ್ಧ ಕಾಲು ಕೆರೆದುಕೊಂಡು ಬಂದಿದ್ದಾರೆ. ಅವರ ಪ್ರತಿ ಎಸೆತಕ್ಕೆ ಸಿಕ್ಸರ್ ಕೊಡಬೇಕೆನಿಸಿದೆ.

    ಕೋವಿಡ್ ಲಸಿಕೆ ವಿಚಾರದಲ್ಲಿನ ಕಾಂಗ್ರೆಸ್ಸಿನ ಆತ್ಮವಂಚನೆಯನ್ನು ಪ್ರಸ್ತಾಪಿಸಿದ್ದಕ್ಕೆ ನಾನು ಸ್ವಯಂ ಗೋಲು ಹೊಡೆದುಕೊಂಡಿರುವುದಾಗಿ ನೀವು ಹೇಳಿದ್ದೀರಿ. ಸಿದ್ದರಾಮಯ್ಯನವರೇ ಲಸಿಕೆ ವಿಚಾರದಲ್ಲಿ ರಾಷ್ಟ್ರದ ಎದುರು ಬೆತ್ತಲಾಗಿ, ನಿಂತಿರುವುದು ಕಾಂಗ್ರೆಸ್. ಈ ವಿಚಾರದಲ್ಲಿ ನನ್ನನ್ನು ಟೀಕಿಸಲು ಬಂದು ನೀವು ಹಿಟ್ ವಿಕೆಟ್ ಆಗಿದ್ದೀರಿ.

    ಲಸಿಕೆ ವಿಚಾರವಾಗಿ ಕಾಂಗ್ರೆಸ್ ಅನುಮಾನದ ಮಾತುಗಳನ್ನು ಆಡಲಿಲ್ಲವೇ? ಭಾರತದ್ದೇ ಕೋವ್ಯಾಕ್ಸಿನ್‍ನ ಬಗ್ಗೆ ಅಪಪ್ರಚಾರ ಮಾಡಲಿಲ್ಲವೇ? ನಮ್ಮದೇ ಲಸಿಕೆಯನ್ನು ನೀವು ಪ್ರೋತ್ಸಾಹಿಸಬೇಕಿತ್ತೋ ಇಲ್ಲವೋ? ಅದು ಬಿಟ್ಟು ನೀವು ಮಾಡಿದ್ದೇನು? ಅಡಿಗಡಿಗೆ ಲಸಿಕೆ ಮೇಲೆ ಅನುಮಾನ. ಈ ಮೂಲಕ ಭಾರತೀಯ ವಿಜ್ಞಾನಿಗಳ ಅಪಮಾನ. ಇದನ್ನೇ ಅಲ್ಲವೇ ನಾನು ಹೇಳಿದ್ದು? ಎಂದು ಪ್ರಶ್ನಿಸಿದರು.

    ಕಾಂಗ್ರೆಸ್ಸಿನ ಲಸಿಕೆ ರಾಜಕಾರಣವನ್ನು ನಾನು ವಿವರಿಸಿದ್ದೇನೆ. ಕಾಂಗ್ರೆಸ್ಸಿನ ಅಪಪ್ರಚಾರದಿಂದ ಜನ ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ ಎಂದು ನಾನು ಹೇಳಿಲ್ಲ. ಲಸಿಕೆಗಾಗಿ ಜನರು ಸಿದ್ಧರಾಗಿಯೇ ಇದ್ದಾರೆ. ಕಾಂಗ್ರೆಸ್ ಹೇಳಿದ ಮಾತ್ರಕ್ಕೆ ಜನ ಲಸಿಕೆಯಿಂದ ವಿಮುಖರಾಗಿಲ್ಲ. ಜನ ಕಾಂಗ್ರೆಸ್ ಮಾತು ಕೇಳುತ್ತಾರೆ ಎಂಬ ಭ್ರಮೆ ಸಿದ್ದರಾಮಯ್ಯನವರಿಗೆ ಬೇಡ ಎಂದರು.

    ಲಸಿಕೆಯೊಂದು ಸಿಕ್ಕಾಗ ಅದನ್ನು ಮೊದಲಿಗೆ ಮುಂಚೂಣಿ ಹೋರಾಟಗಾರರಿಗೆ ನೀಡಲಾಗುತ್ತದೆ.ಇದು ನಿಮಗೆ ತಿಳಿದಿರಲಿ.ದೇಶದಲ್ಲಿ ಮೊದಲು ಕೋವಿಡ್ ವಾರಿಯರ್‍ಗಳಿಗೆ ಲಸಿಕೆ ನೀಡಲಾಯಿತು. ನನ್ನ ಸರದಿ ಬಂದಾಗ ನಾನು ಲಸಿಕೆ ಪಡೆದೆ. ಇಲ್ಲಿ ಕಾಂಗ್ರೆಸ್ ಮಾತು ನಂಬಿ ಕೂರುವಂಥದ್ದೇನಿತ್ತು. ಕಾಂಗ್ರೆಸ್ ಮಾತನ್ನು 50 ವರ್ಷದಿಂದಲೂ ಕೇಳದ ಕುಟುಂಬ ನಮ್ಮದು ಎಂದು ಕೆಂಡಕಾರಿದ್ದಾರೆ.

    ದೇಶದಲ್ಲಿ ಸರ್ವರಿಗೂ ಉಚಿತ ಲಸಿಕೆ ಹಾಕುವಂತೆ ಸೋನಿಯಾ ಗಾಂಧಿ ಅವರ ಜೊತೆಗೂಡಿ ಎಚ್.ಡಿ ದೇವೇಗೌಡರು ಪ್ರಧಾನಿಗೆ ಪತ್ರ ಬರೆದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯನವರೇ, ದೇಶದ ಹಲವು ವಿರೋಧಪಕ್ಷಗಳ ನಾಯಕರ ಜೊತೆಗೂಡಿ ದೇವೇಗೌಡರು ಪ್ರಧಾನಿಗೆ ಪತ್ರ ಬರೆದರೇ ಹೊರತು, ಸೋನಿಯಾ ಗಾಂಧಿ ಅವರ ಜೊತೆಗೂಡಿ ಪತ್ರ ಬರೆಯಲಿಲ್ಲ ನೆನಪಿರಲಿ ಎಂದು ಹೇಳಿದರು.

    ಅಷ್ಟಕ್ಕೂ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಸಹಿ ಮಾಡುವಂತೆ ದೇವೇಗೌಡರಿಗೆ ಯಾರೆಲ್ಲ ವಿನಂತಿಸಿದ್ದರು, ಎಷ್ಟು ಬೇಡಾಡಿದರು ಎಂಬುದು ಸಿದ್ದರಾಮಯ್ಯನವರಿಗೆ ಗೊತ್ತಿದೆಯೇ? ದೆಹಲಿಗೆ ಹೋಗಿ ಈ ವಿಚಾರವಾಗಿ ಸಿದ್ದರಾಮಯ್ಯನವರು ಮಾಹಿತಿ ಪಡೆದು ಬರಲಿ. ಮಾಹಿತಿ ಇಲ್ಲದೇ ಮಾತಾಡುವುದು ಸಿದ್ದರಾಮಯ್ಯನವರಿಗಿರುವ ದೊಡ್ಡ ಸಮಸ್ಯೆ ಎಂದು ನುಡಿದರು.

    ಅಸಮರ್ಪಕ ಲಸಿಕೆ ಅಭಿಯಾನ ವಿರುದ್ಧ ನಮ್ಮದೂ ಆಕ್ಷೇಪಣೆಗಳಿವೆ. ಆದರೆ ಲಸಿಕೆ ವಿರುದ್ಧ ನಮ್ಮ ನಿಲುವು ಇಲ್ಲ. ಲಸಿಕೆ ಅಭಿಯಾನ ಸಮರ್ಪಕವಾಗಿ ನಡೆಯಬೇಕೆಂದು ಒತ್ತಾಯಿಸಿ ನಾನು ಸರ್ಕಾರಗಳಿಗೆ ಹಲವು ಸಲಹೆ ನೀಡಿದ್ದೇನೆ. ಆದರೆ, ಕಾಂಗ್ರೆಸ್ ಲಸಿಕೆ ವಿರುದ್ಧವೇ ಮಾತಾಡಿತು. ಈಗ ಲಸಿಕೆ, ಲಸಿಕೆ ಎನ್ನುತ್ತಿದೆ. ಇದು ಕಾಂಗ್ರೆಸ್ಸಿನ ಇಬ್ಬಗೆ ನೀತಿ ಎಂದು ವಾಗ್ದಾಳಿ ನಡೆಸಿದರು.

    ಸೋಂಕು ಹೆಚ್ಚುತ್ತಿದ್ದರೂ, ಲಾಕ್‍ಡೌನ್ ಜಾರಿಯಲ್ಲಿ ಇದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಬೀದಿಗೆ ಬಿದ್ದಿದ್ದಾರೆ. ಜನರಿಗೆ ನೆರವಾಗುವುದು ಇವರ ಉದ್ದೇಶವಲ್ಲ. ರಾಜಕೀಯ ಮೈಲೇಜ್ ಪಡೆಯುವುದು ಇವರ ಉದ್ದೇಶ. ಜೊತೆಗೆ ಸಿಎಂ ಆಗುವ ಕನಸುಗಳು. ಶಾಂತಿ ಕಾಲದಲ್ಲಿ ಕಾಂಗ್ರೆಸ್ ಕಲಹಕ್ಕೆ ಇಳಿದು ಲಾಭ ಪಡೆಯುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹರಿಹಾಯ್ದಿದ್ದಾರೆ.

    ಲಸಿಕೆಗಾಗಿ 100 ಕೋಟಿ ಕೊಟ್ಟಿದ್ದಾಗಿ ಕಾಂಗ್ರೆಸ್ ಹೇಳುತ್ತಿದೆ. ಇದೇನು ಸಿದ್ದರಾಮಯ್ಯನವರ ಮನೆ ಗಂಟೇ? ಕಾಂಗ್ರೆಸ್ ಜನಪ್ರತಿನಿಧಿಗಳ ಕ್ಷೇತ್ರಾಭಿವೃದ್ಧಿ ನಿಧಿಯಲ್ಲವೇ? ಕ್ಷೇತ್ರಾಭಿವೃದ್ಧಿ ನಿಧಿಯನ್ನು ಸರ್ಕಾರಕ್ಕೇ ನೀಡಿರುವುದಾಗಿ ಹೇಳಬೇಕಿದ್ದ ಕಾಂಗ್ರೆಸ್, ಲಸಿಕೆಗಾಗಿ ಕೈಯಿಂದ 100 ಕೋಟಿ ಕೊಟ್ಟಂತೆ ಹೇಳಿದೆ. ಎಂಥ ವಂಚಕ ನಡೆ? ಎಂದು ಪ್ರಶ್ನಿಸಿದ್ದಾರೆ.

    ನಾನು ದೇವೇಗೌಡರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ನೀವು ಹೇಳಿದ್ದೀರಿ. ದೇವೇಗೌಡರ ಸಲಹೆಯಂತೇ ನಾನು ಸೇರಿದಂತೆ ಪಕ್ಷ ನಡೆಯುತ್ತೇವೆ. ಅದನ್ನು ಹೇಳುತ್ತಿರುವ ತಾವು ಗೌಡರ ಸಲಹೆಯಂತೆ ನಡೆದುಕೊಂಡಿದ್ದೀರೇ ಸಿದ್ದರಾಮಯ್ಯನವರೇ ಹೇಳಲು ಬಹಳಷ್ಟಿದೆ. ನಾನು ಸುಳ್ಳಾಡಲಾರೆ. ಅದು ನಿಮಗೆ ಹೇಗೆ ಕಾಣುತ್ತದೆ ಎಂಬುದು ನನಗೆ ಅಪ್ರಸ್ತುತ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

  • ರೈತರ ಆದಾಯ ದ್ವಿಗುಣ ಮಾಡ್ತೇವೆ ಎಂದಿದ್ದ ಪ್ರಧಾನಿ ವಿರುದ್ಧ ಹೆಚ್‍ಡಿಕೆ ಕಿಡಿ

    ರೈತರ ಆದಾಯ ದ್ವಿಗುಣ ಮಾಡ್ತೇವೆ ಎಂದಿದ್ದ ಪ್ರಧಾನಿ ವಿರುದ್ಧ ಹೆಚ್‍ಡಿಕೆ ಕಿಡಿ

    ಬೆಂಗಳೂರು: ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಹೇಳಿದ್ದ ಪ್ರಧಾನಿ ನರೆಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

    2022ರ ಹೊತ್ತಿಗೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಮೋದಿ ಹೇಳಿದ್ದರು. ಆದರೆ, 2021ರ ವೇಳೆಗೆ ರೈತರ ಕೃಷಿ ಖರ್ಚು-ವೆಚ್ಚ ದುಪ್ಪಟ್ಟಾಗಿದೆ. ರಸಗೊಬ್ಬರ ಬೆಲೆ ಏರಿದೆ. ರೈತರು ಬೋರ್‍ವೆಲ್ ಕೊರೆಸಲಾಗದಂತಹ ಪರಿಸ್ಥಿತಿ ಉದ್ಭವವಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯು ಪರಿಸ್ಥಿತಿಯನ್ನು ವಿಷಮಗೊಳಿಸಿದೆ. ಆದಾಯ ದ್ವಿಗುಣ ಎಲ್ಲಿ? ಎಂದು ಪ್ರಶ್ನಿಸಿದರು.

    ಇವತ್ತಿನ ಲೆಕ್ಕಾಚಾರದ ಪ್ರಕಾರ ರೈತರು ಬೋರ್‍ವೆಲ್ ಕೊರೆಸಬೇಕಿದ್ದರೆ, 1-2ಲಕ್ಷ ಖರ್ಚು ಮಾಡಬೇಕು. ಪಿವಿಸಿ ಪೈಪ್‍ಗಳ ದರ ದುಪ್ಪಟ್ಟಾಗಿದೆ, ಮೋಟರ್ ಬೆಲೆಯಲ್ಲಿ ಜಿಗಿತವಾಗಿದೆ. ಕೃಷಿ ಪಂಪ್ ಸೆಟ್‍ಗಳಿಗೆ ರೈತರಾದವರೇ ಶೇ.18ರಷ್ಟು ಜಿಎಸ್‍ಟಿ ಪಾವತಿಸಬೇಕಿರುವುದು ವಿಷಾದಕರ. ಇದು ಕೃಷಿಗೆ ಪೂರಕ ಸ್ಥಿತಿಯೇ ಎಂಬುದರ ಅವಲೋಕನೆಯಾಗಬೇಕಿದೆ ಎಂದು ತಿಳಿಸಿದರು.

    ಕೃಷಿ ಪರಿಕರಗಳ ಬೆಲೆ ಏರಿಕೆ ಬಗ್ಗೆ ರಾಜ್ಯದ ಕೃಷಿ ಸಚಿವರು ನೀಡಿರುವ ಹೇಳಿಕೆ ಇಂತಿದೆ. ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳದಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಹೆಚ್ಚಳಕ್ಕೆ ರೈತರು ಹೊಂದಿಕೊಳ್ಳಬೇಕು ಎಂದಿದ್ದಾರೆ. ರೈತರ ಕಷ್ಟ ನೀಗಿಸಬೇಕಾದವರು ಬೇಜವಾಬ್ದಾರಿತನ ತೋರುವುದು ಬೇಸರದ ವಿಚಾರ ಎಂದು ವಿಷಾದ ವ್ಯಕ್ತಪಡಿಸಿದರು.

    ಕೃಷಿಯಲ್ಲಿ ಆದಾಯ ಗಳಿಸುವುದು ಇರಲಿ, ಕೃಷಿ ಮಾಡಲೇ ರೈತ ಸಂಕಷ್ಟ ಅನುಭವಿಸಬೇಕಾಗಿರುವುದು ಇವತ್ತಿನ ದುರಂತ. ಇದನ್ನು ನಿವಾರಿಸಲಾಗದೇ ಇರುವುದು ರೈತರ ಆದಾಯ ದ್ವಿಗುಣ ಮಾಡುವ ಕ್ರಮವೇ ಎಂಬುದರ ಬಗ್ಗೆ ಮೋದಿ ಅವರು ಉತ್ತರಿಸಬೇಕು. ಪರಿಸ್ಥಿತಿ ಹೀಗಿದ್ದು, ಸಮಾವೇಶದಲ್ಲಿ ರೈತರ ಕಲ್ಯಾಣದ ಬಗ್ಗೆ ಮೋದಿ ಅವರು ಆಡುವ ಮಾತುಗಳು ಪ್ರಾಮಾಣಿಕವೇ? ಎಂದು ಕಿಡಿ ಕಾರಿದರು.

    ಪ್ರಧಾನಿ ಮೋದಿ ಅವರು ಬಂಗಾಳದ ಏಕಗವಾಕ್ಷಿ ವ್ಯವಸ್ಥೆ ಬಗ್ಗೆ ಮಾತಾಡಿದ್ದಾರೆ. ದೇಶದಲ್ಲಿ ಅಭಿವೃದ್ಧಿಗೆ ಏಕಗವಾಕ್ಷಿ ವ್ಯವಸ್ಥೆ ಇದೆ ಎಂದೂ, ಬಂಗಾಳದಲ್ಲಿ ಮಮತ ಅಳಿಯ ಕೇಂದ್ರಿತ ಏಕಗವಾಕ್ಷಿ ವ್ಯವಸ್ಥೆ ಇದೆ ಎಂದು ಹೇಳಿದ್ದಾರೆ. ಆದರೆ ಕರ್ನಾಟಕದಲ್ಲಿ ಯಾವ ಏಕಗವಾಕ್ಷಿ ವ್ಯವಸ್ಥೆ ಇದೆ? ಮೋದಿ ಉತ್ತರಿಸುವರೇ? ಎಂದು ಹರಿಹಾಯ್ದರು.

    ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಕುರ್ಚಿ ಹಿಂದೆ ಅಡಗಿ ಕುಳಿತಿರುವ, ರಾಜ್ಯದ ಬಿಜೆಪಿ ಸರ್ಕಾರದ ‘ಏಕಗವಾಕ್ಷಿ’ ಬಗ್ಗೆ ಬಿಜೆಪಿಯ ಹಿರಿಯ ಶಾಸಕರೇ ಹಾದಿ ಬೀದಿಯಲ್ಲಿ ಗೋಳಾಡುತ್ತಿದ್ದಾರೆ. ಯಡಿಯೂರಪ್ಪ ಕುಟುಂಬದ ಅಕ್ರಮದ ಬಗ್ಗೆ ಬಿಜೆಪಿಗರೇ ಆರೋಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಸ್ವಘೋಷಿತ ಮಹಾನಾಯಕ-ಏಕಗವಾಕ್ಷಿ ಬಗ್ಗೆ ಮೋದಿ ಮಾತಾಡುವರೇ? ಎಂದು ವಾಗ್ದಾಳಿ ನಡೆಸಿದ್ದಾರೆ.

    ಕರ್ನಾಟಕದ ಸರ್ಕಾರದಲ್ಲೇ ಏಕಗವಾಕ್ಷಿ ಯೊಂದು ಇರುವಾಗ, ಅದನ್ನು ಉದ್ದೇಶಪೂರ್ವಕವಾಗಿ ಪೋಷಿಸುತ್ತಿರುವಾಗ ಮೋದಿ ಅವರು ಮಮತ ಬಗ್ಗೆ ಟೀಕಿಸುವುದು ಆತ್ಮವಂಚನೆ. ರಾಜ್ಯದ ಜನರ ತೆರಿಗೆ ಹಣ, ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ನುಂಗಿಹಾಕುತ್ತಿರುವ, ಬಿಜೆಪಿ ಸರ್ಕಾರದ ‘ಏಕಗವಾಕ್ಷಿ’ ವ್ಯವಸ್ಥೆಯನ್ನು ಮೋದಿ ಮೊದಲು ಕೊನೆಗಾಣಿಸಲಿ ಎಂದು ಹೆಚ್‍ಡಿ ಕುಮಾರಸ್ವಾಮಿಯವರು ಟ್ವೀಟ್ ಮಾಡಿದ್ದಾರೆ.

  • ‘ಆ’ ಹೆಣ್ಣುಮಗಳಿಗೆ ಯಾರಿಂದ ರಕ್ಷಣೆ ಸಿಗಬೇಕೋ ಸಿಕ್ಕಿದೆ: ಹೆಚ್‍ಡಿಕೆ

    ‘ಆ’ ಹೆಣ್ಣುಮಗಳಿಗೆ ಯಾರಿಂದ ರಕ್ಷಣೆ ಸಿಗಬೇಕೋ ಸಿಕ್ಕಿದೆ: ಹೆಚ್‍ಡಿಕೆ

    ಮೈಸೂರು: ಸಿಡಿ ಪ್ರಕರಣದ ಹೆಣ್ಣು ಮಗಳಿಗೆ ಯಾರಿಂದ ರಕ್ಷಣೆ ಸಿಗಬೇಕಾಗಿದೆಯೋ ಅವರಿಂದ ರಕ್ಷಣೆ ಸಿಕ್ಕಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    ಹಾಲು ಒಕ್ಕೂಟ ಚುನಾವಣೆ ಹಿನ್ನೆಲೆ ಮೈಸೂರಿನಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಹೆಣ್ಣು ಮಗಳಿಗೆ ಯಾರಿಂದ ರಕ್ಷಣೆ ಸಿಗಬೇಕಿತ್ತೋ ಅವರಿಂದ ಸಿಕ್ಕಿದೆ. ಸರ್ಕಾರಕ್ಕೆ ಆ ಯುವತಿ ಟ್ರೇಸ್ ಆಗದಿದ್ದರೂ ಸಿಗಬೇಕಾದ ರಕ್ಷಣೆ ಕೆಲವರಿಂದ ಸಿಕ್ಕಿದೆ. ನನ್ನ ಅಭಿಪ್ರಾಯದಂತೆ ಆ ಹೆಣ್ಣು ಮಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ ಎಂದರು.

    ನಿನ್ನೆ ಆ ಹೆಣ್ಣು ಮಗಳು ವಾಟ್ಸಪ್ ಮುಖಾಂತರ ವೀಡಿಯೋವನ್ನು ಕಳುಹಿಸಿದ್ದಾಳೋ ಅಥವಾ ಆ ಮುನಷ್ಯನ ಸ್ಪೀಡ್‍ಗೆ ಬ್ರೇಕ್ ಹಾಕಲು ಯಾರಾದರೂ ಸರ್ಕಾರದ ಒಳಗೆ ಇದ್ದವರೆ ಆ ಯುವತಿಗೆ ರಕ್ಷಣೆ ಕೊಟ್ಟು ರೆಕಾರ್ಡ್ ಮಾಡಿ ಕಳುಹಿಸಿದ್ದಾರೋ ಗೊತ್ತಿಲ್ಲ. ಆದರೆ ಒಟ್ಟಾರೆ ಆ ಯುವತಿಗೆ ಯಾರೋ ಕೆಲವರಿಂದ ರಕ್ಷಣೆಯಂತೂ ಇದೆ ಎಂದರು.

    ಈ ಪ್ರಕರಣದಲ್ಲಿ ಡಿಕೆ ಶಿವಕುಮಾರ್‍ರವರ ಹೆಸರು ಕೇಳಿ ಬರುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದೆ ಅವರು, ಡಿಕೆಶಿ ಹೆಸರು ಈ ಪ್ರಕರಣದಲ್ಲಿ ಯಾರಾದರೂ ಹೇಳಿದ್ರಾ? ಅವರ ಹೆಸರನ್ನು ಅವರೇ ಯಾಕೆ ಮುಂದೆ ಬಿಟ್ಟುಕೊಂಡಿದ್ದಾರೆ. ಅವರೇ ಮಾಡಿದ್ದಾರೆ ಅಂತಾ ಯಾರಾದರೂ ಹೇಳಿದ್ರಾ? ಈ ರಾಜ್ಯದಲ್ಲಿ ಮಹಾ ನಾಯಕರು ಬಹಳ ಜನ ಇದ್ದಾರೆ. ಬಿಜೆಪಿ ಒಳಗೆ ಒಬ್ಬ ಮಹಾನಾಯಕರು ಬೆಳೆಯುತ್ತಿದ್ದಾರೆ. ಅವರು ಪ್ರಬುದ್ಧ ಪೊಲಿಟಿಶಿಯನ್, ನನಗಿಂತಾ ಪ್ರಬುದ್ಧ ರಾಜಕಾರಣಿ ಇಂತಹದರಲ್ಲಿ ಡಿಕೆ ಶಿವಕುಮಾರ್ ಯಾಕೆ ತಮ್ಮ ಹೆಸರನ್ನು ತಾವೇ ಈ ಪ್ರಕರಣದಲ್ಲಿ ಸಿಲುಕಿಸಿಕೊಂಡರೋ ಗೊತ್ತಿಲ್ಲ ಎಂದು ಹೇಳಿದರು.

    ಜಿಟಿ ದೇವೇಗೌಡ ವಿಚಾರವಾಗಿ, ಜಿಟಿ ದೇವೇಗೌಡರವರು ದುರಹಂಕಾರದಲ್ಲಿ ಮಾತಾಡುತ್ತಿದ್ದಾರೆ, ನಮ್ಮ ಪಕ್ಷದಿಂದ ಬೆಳೆದವರು ನಮ್ಮ ಪಕ್ಷ ಮುಗಿಸಲು ಹೊರಟಿದ್ದಾರೆ. ನನಗೆ ಸಹಕಾರ ಕ್ಷೇತ್ರದ ಎಬಿಸಿಡಿಯೂ ಗೊತ್ತಿಲ್ಲ. ಆದರೂ, ಕಾರ್ಯಕರ್ತರಿಗೆ ಶಕ್ತಿ ತುಂಬಲು ಸ್ಪರ್ಧೆಗೆ ಇಳಿದಿದ್ದೇವೆ ಎಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಜಿಟಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.