Tag: ಪಬ್ಲಿಕ್ ಟಿವಿ Haveri

  • 35 ಮಂದಿ ರೈತರ ಮೇಲೆ ಎಫ್‍ಐಆರ್ ದಾಖಲು

    35 ಮಂದಿ ರೈತರ ಮೇಲೆ ಎಫ್‍ಐಆರ್ ದಾಖಲು

    ಹಾವೇರಿ: ಕೊರೊನಾ ನಿಯಮ ಉಲ್ಲಂಘಿಸಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಇಂಡಿಯನ್ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ್ದ 30 ರಿಂದ 35 ರೈತರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

    2019ರಲ್ಲಿ ಸಾಲಮನ್ನಾ ಯೋಜನೆಯಡಿ ಹಣ ಬಿಡುಗಡೆಯಾದ್ರೂ ರೈತರ ಖಾತೆಗೆ ಹಣ ಜಮಾ ಆಗಿಲ್ಲವೆಂದು ರೈತರು ಪ್ರತಿಭಟನೆ ಮಾಡಿದ್ದರು. ಕೊರೊನಾ ಎರಡನೇ ಅಲೆಯ ಅಬ್ಬರವಿದ್ದರೂ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪ್ರತಿಭಟನೆ ನಡೆಸಿದ್ದಕ್ಕೆ, ವಿಪತ್ತು ನಿರ್ವಹಣಾ ಕಾಯ್ದೆಯಡಿ ರಾಣೆಬೆನ್ನೂರು ನಗರಠಾಣೆ ಪಿಎಸ್‍ಐ ಪ್ರಭು ಕೆಳಗಿನಮನಿ ಪ್ರಕರಣ ದಾಖಲು ಮಾಡಿದ್ದಾರೆ.

    ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮ ಕೂಟ ಕಟ್ಟಿಕೊಂಡು ನಿನ್ನೆ ಪ್ರತಿಭಟನೆ ಮಾಡಿದ್ದಕ್ಕೆ ದೂರು ದಾಖಲು ಮಾಡಲಾಗಿದೆ. ರಾಣೇಬೆನ್ನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಪ್ರೇಮಿಗಳಿಬ್ಬರು ಶವವಾಗಿ ಪತ್ತೆ

    ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಪ್ರೇಮಿಗಳಿಬ್ಬರು ಶವವಾಗಿ ಪತ್ತೆ

    ಹಾವೇರಿ: ಅನುಮಾನಾಸ್ಪದ ರೀತಿಯಲ್ಲಿ ಪ್ರೇಮಿಗಳಿಬ್ಬರ ಮೃತದೇಹ ಹಾವೇರಿ ತಾಲೂಕಿನ ಬಸಾಪುರ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.

    ಮೃತಪಟ್ಟವರನ್ನು ಪ್ರವೀಣ ಬಾಗಿಲದ(24) ಮತ್ತು ನೇತ್ರಾ ಬಾಳಿಕಾಯಿ(18) ಎಂದು ಗುರುತಿಸಲಾಗಿದೆ. ನೇತ್ರಾ ಮೂಲತಃ ಹಾವೇರಿ ತಾಲ್ಲೂಕು ಗೌರಾಪುರ ಗ್ರಾಮದ ನಿವಾಸಿಯಾಗಿದ್ದು, ಹಳೇರಿತ್ತಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಎಸ್.ಎಸ್‍ಎಲ್.ಸಿ ವಿದ್ಯಾಭ್ಯಾಸ ಮಾಡಿದ್ದಳು. ಪ್ರವೀಣ ಹಾವೇರಿ ತಾಲ್ಲೂಕು ಹಳೇರಿತ್ತಿ ಗ್ರಾಮದ ಯುವಕನಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಪ್ರೇಮಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಮೃತದೇಹಗಳ ಬಳಿ ಬೀಯರ್ ಬಾಟಲಿ, ವಿಷದ ಬಾಟಲಿ ಮತ್ತು ಚಾಕು ಪತ್ತೆಯಾಗಿದೆ. ಅಲ್ಲದೆ ಮೃತದೇಹಗಳಿಂದ ಇನ್ನೂರು ಮೀಟರ್ ಸಮೀಪದಲ್ಲಿ ಪ್ರವೀಣ ತಂದಿದ್ದ ಬೈಕ್ ನಿಂತಿತ್ತು.

    ಕಳೆದ ಗುರುವಾರ ಮಗಳು ಮನೆ ಬಿಟ್ಟು ಹೋಗಿದ್ದಾಳೆ. ನಾವು ಊರು ಹಾಗೂ ಸಂಬಂಧಿಕರ ಮನೆಂiÀಲ್ಲೆಲ್ಲ ಹುಡುಕಾಟ ನಡೆಸಿ ಕೊನೆಗೆ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಆದರೆ ಈಗ ಮೃತದೇಹ ಪತ್ತೆಯಾಗಿದೆ. ಎರಡು ಕುಟುಂಬ ಸದಸ್ಯರು ಮಕ್ಕಳನ್ನ ನೆನೆದು ಕಣ್ಣೀರು ಹಾಕುತ್ತಿದ್ದಾರೆ.

    ಈ ಘಟನೆಯು ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗುತ್ತಲ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಯುವಕನ ಸಂಬಂಧಿಕರು ಸಾವಿನ ವಿಚಾರವಾಗಿ ಅನುಮಾನ ವ್ಯಕ್ತಪಡಿಸುತ್ತಿದ್ದು, ತನಿಖೆಯಾಗಬೇಕು ಆಗ್ರಹಿಸಿದ್ದಾರೆ.

  • ಹೃದಯಾಘಾತದಿಂದ ಚಾಲಕ ಮಲಗಿದ್ದ ಸ್ಥಳದಲ್ಲೇ ಸಾವು

    ಹೃದಯಾಘಾತದಿಂದ ಚಾಲಕ ಮಲಗಿದ್ದ ಸ್ಥಳದಲ್ಲೇ ಸಾವು

    ಹಾವೇರಿ: ಸಾರಿಗೆ ನಿಗಮದ ಚಾಲಕರೊಬ್ಬರು ಮನೆಯಲ್ಲಿ ಮಲಗಿದ್ದ ವೇಳೆಯೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ಚಿದಂಬರ್ ನಗರದ ಒಂದನೇ ಕ್ರಾಸ್ ನಲ್ಲಿ ನಡೆದಿದೆ.

    ಸಂಗಮೇಶ ದೇಸಾಯಿ(40) ಮೃತಪಟ್ಟ ಚಾಲಕ. ಮೃತ ಚಾಲಕ ಮೂಲತಃ ರೋಣ ತಾಲ್ಲೂಕಿನ ಅರುಂಸಿ ಗ್ರಾಮದ ನಿವಾಸಿಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಹಾನಗಲ್ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು.

    15 ದಿನಗಳ ಹಿಂದೆ ಪತ್ನಿ, ಮಕ್ಕಳೊಂದಿಗೆ ಬಾಗಲಕೋಟೆ ಜಿಲ್ಲೆಯ ತವರು ಮನೆಗೆ ಹೋಗಿದ್ದರು. ಈ ಘಟನೆ ಕುರಿತಂತೆ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಹಾನಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ ಮಲಗಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

  • ವಿಜಯೇಂದ್ರ ಮುಂದಿನ ರಾಜಾಹುಲಿ ಅಂತಲ್ಲ – ಸಚಿವ ಎಸ್.ಟಿ ಸೋಮಶೇಖರ್

    ವಿಜಯೇಂದ್ರ ಮುಂದಿನ ರಾಜಾಹುಲಿ ಅಂತಲ್ಲ – ಸಚಿವ ಎಸ್.ಟಿ ಸೋಮಶೇಖರ್

    ಹಾವೇರಿ: ಬಿಜೆಪಿ ಮುಂದಿನ ರಾಜಾಹುಲಿ ವಿಜಯೇಂದ್ರ ಅಂತಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

    ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಬಸರಿಹಳ್ಳಿ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಮುಂದಿನ ರಾಜಾಹುಲಿ ಅಂತಲ್ಲ. ಯಡಿಯೂರಪ್ಪ ನಾಲ್ವತ್ತು ವರ್ಷಗಳ ರಾಜಕಾರಣದಲ್ಲಿ ಅನೇಕ ಏಳು ಬೀಳುಗಳನ್ನ ನೋಡಿದ್ದಾರೆ. ಸಾವಿರಾರು ಉಳಿ ಪೆಟ್ಟುಗಳನ್ನ ನೋಡಿದ್ದಾರೆ. ಈಗ ನಾಲ್ಕನೇ ಬಾರಿ ಸಿಎಂ ಆಗಿ ರಾಜಾಹುಲಿ ಅನಿಸಿಕೊಂಡಿದ್ದಾರೆ ಎಂದರು.

    ಈಗಾಗಲೇ ಐವತ್ತರಿಂದ ಅರವತ್ತು ಪರ್ಸೆಂಟ್ ಉಳಿ ಪೆಟ್ಟು ಬೀಳುತ್ತದೆ. ಅದೆಲ್ಲ ಬಿದ್ದ ಮೇಲೆ ಒಂದು ಸುಂದರ ಮೂರ್ತಿ ಆಗುತ್ತದೆ. ತಂದೆ ಹೇಗೆ ರಾಜಾಹುಲಿ ಅನಿಸಿಕೊಂಡಿದ್ದಾರೋ ಹಾಗೇ ನೀವು ರಾಜಾಹುಲಿಯಂತೆ ಸೇವೆ ಮಾಡಿ ಎಂದು ಹೇಳಿರುವುದಾಗಿ ತಿಳಿಸಿದರು.

    ಟಿವಿ, ಬೈಕ್ ಇದ್ದವರ ಬಿಪಿಎಲ್ ಕಾರ್ಡ್ ರದ್ದು ಎಂಬ ಸಚಿವ ಉಮೇಶ ಕತ್ತಿ ಹೇಳಿಕೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಹೊಸ ಮಂತ್ರಿಗಳು ಬಂದಿದ್ದಾರೆ. ಹೊಸ ಮಂತ್ರಿಗಳು ಹೇಳಿದ್ದರೂ ಹೇಳಿರಬಹುದು. ಆದರೆ ಆ ರೀತಿ ಮಾಡಲು ಆಗುವುದಿಲ್ಲ. ಕೆಲವರು ಮೂರು, ನಾಲ್ಕು ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ಇದೆ. ನಿಯಮ ಉಲ್ಲಂಘನೆ ಮಾಡಿದವರ ಕಾರ್ಡ್ ಕ್ಯಾನ್ಸಲ್ ಮಾಡುವುದಾಗಿ ಹೇಳಿರಬೇಕಷ್ಟೆ ಎಂದು ಹೇಳಿದರು.

    ಕೋವಿಡ್ 19 ಇರುವುದರಿಂದ ಹೆಚ್ಚುವರಿ ಸೆಸ್ ಹಾಕಿದ್ದಾರೆ. ಅದು ಬಿಟ್ಟರೆ ಬೇರೆ ಏನಿಲ್ಲ. ಏರಿಳಿತ ಆಗುತ್ತಿರುತ್ತೆ. ಒಂದು ಸಲ ಕಡಿಮೆ ಆಗುತ್ತಿರುತ್ತದೆ. ಎಲ್ಲವನ್ನು ಸ್ವಲ್ಪ ಅಡ್ಜಸ್ಟ್‍ಮೆಂಟ್ ಮಾಡಿಕೊಂಡು ಹೋಗಬೇಕು ಎಂದರು.

  • ಮೆಕ್ಕೆಜೋಳ ರಾಶಿಗೆ ಆಕಸ್ಮಿಕ ಬೆಂಕಿ – ಸುಟ್ಟು ಕರಕಲಾದ ತೆನೆಗಳು

    ಮೆಕ್ಕೆಜೋಳ ರಾಶಿಗೆ ಆಕಸ್ಮಿಕ ಬೆಂಕಿ – ಸುಟ್ಟು ಕರಕಲಾದ ತೆನೆಗಳು

    ಹಾವೇರಿ: ಮೆಕ್ಕೆಜೋಳ ತೆನೆಗಳ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ಧಗಧಗ ಹೊತ್ತಿ ಉರಿದಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದಲ್ಲಿ ನಡೆದಿದೆ.

    ಗಣೇಶಪ್ಪ ಹಳೇಮನಿ, ವಿಜಯಕುಮಾರ ಹಳೇಮನಿ ಮತ್ತು ಪರಶುರಾಮ ಹಳೇಮನಿ ಎಂಬ ರೈತರು ಹದಿನೆಂಟು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಈ ರೈತರು ಒಕ್ಕಣೆ ಮಾಡಲು ಕಣದಲ್ಲಿ ಹಾಕಿದ್ದ ಮೆಕ್ಕೆಜೋಳದ ತೆನೆಗಳಿಗೆ ಅದು ಹೇಗೋ ಆಕಸ್ಮಿಕ ಬೆಂಕಿ ತಗುಲಿ ಮೆಕ್ಕೆಜೋಳದ ತೆನೆಗಳು ಧಗಧಗ ಹೊತ್ತಿ ಉರಿದು ಸುಟ್ಟು ಕರಕಲಾಗಿದೆ.

    ವಿಷಯ ತಿಳಿದು ಬೆಂಕಿ ನಾಂದಿಸಲು ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಕುರಿತಂತೆ ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಸ್ವಚ್ಛತಾ ಕಾರ್ಯ ಮಾಡಿ ಜಾಗೃತಿ ಮೂಡಿಸಿದ ಶ್ರೀಗಳು

    ಸ್ವಚ್ಛತಾ ಕಾರ್ಯ ಮಾಡಿ ಜಾಗೃತಿ ಮೂಡಿಸಿದ ಶ್ರೀಗಳು

    ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರಿನಲ್ಲಿ ಗ್ರಾಮಪಂಚಾಯ್ತಿ ವತಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸ್ವಚ್ಛತಾ ಕಾರ್ಯದಲ್ಲಿ ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀ, ಮಾಸೂರಿನ ಮಹಾಂತ ಶ್ರೀ ಹಾಗೂ ಕೂಡಲಮಠದ ಶ್ರೀಗಳು ಪೂರಕೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

    ಮಾಸೂರಿನ ವರಕವಿ ಸರ್ವಜ್ಞನ ಪ್ರತಿಮೆ ಸುತ್ತಮುತ್ತವಿರುವ ಕಸ ತೆಗೆದು ಸ್ವಚ್ಛಗೊಳಿಸಲಾಯಿತು. ಹುಕ್ಕೇರಿ ಮಠದ ಶ್ರೀಗಳಿಗೆ ತಿಪ್ಪಾಯಿಕೊಪ್ಪದ ಮಹಂತದೇವರು, ಹಾವೇರಿ ಕೂಡಲದ ಗುರುನಂಜೇಶ್ವರ ಮಠದ ಮಹೇಶ್ವರ ಸ್ವಾಮೀಜಿಗಳು ಸ್ವಚ್ಛತಾ ಕಾರ್ಯಕ್ಕೆ ಸಾಥ್ ನೀಡಿದರು. ಅಲ್ಲದೆ ಈ ಕಾರ್ಯದಲ್ಲಿ ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ಕೆಲ ಜನರು ಭಾಗವಹಿಸಿದ್ದು ವಿಶೇಷವಾಗಿತ್ತು.

    ಈ ಸಂದರ್ಭದಲ್ಲಿ ಹುಕ್ಕೇರಿಮಠದ ಸದಾಶಿವಶ್ರೀಗಳು ಮಾತನಾಡಿ, ಪ್ರತಿಯೊಬ್ಬರು ಸ್ವಚ್ಛತಾ ಕಾರ್ಯಕ್ರಮ ನಡೆಸುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಿಸಿಕೊಳ್ಳುವಂತೆ ತಿಳಿಸಿದರು.

  • ದೆಹಲಿ ಗಲಭೆ ಖಂಡಿಸಿ ಹಾವೇರಿಯಲ್ಲಿ ರೈತರ ಉಪವಾಸ ಸತ್ಯಾಗ್ರಹ

    ದೆಹಲಿ ಗಲಭೆ ಖಂಡಿಸಿ ಹಾವೇರಿಯಲ್ಲಿ ರೈತರ ಉಪವಾಸ ಸತ್ಯಾಗ್ರಹ

    ಹಾವೇರಿ: ಗಣರಾಜ್ಯೋತ್ಸವ ದಿನದಂದು ರೈತರ ಹೆಸರಿನಲ್ಲಿ ದೆಹಲಿಯಲ್ಲಿ ನಡೆದ ಕಿಡಿಗೇಡಿಗಳ ಕೃತ್ಯ ಖಂಡಿಸಿ ಹಾವೇರಿಯಲ್ಲಿ ರೈತಸಂಘದ ಕಾರ್ಯಕರ್ತರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

    ರೈತರು ನ್ಯಾಯಯುತ ಬೇಡಿಕೆಗಾಗಿ ಸತ್ಯಾಗ್ರಹ ನಡೆಸುವಾಗ ರೈತರ ಸತ್ಯಾಗ್ರಹಕ್ಕೆ ಮಸಿ ಬಳಿಯಲು ಕೆಲವು ಕಿಡಿಗೇಡಿಗಳು ಕೃತ್ಯ ನಡೆಸಿದ್ದಾರೆ. ಹೀಗಾಗಿ ಕಿಡಿಗೇಡಿಗಳ ಕೃತ್ಯವನ್ನ ಖಂಡಿಸಿ ಸತ್ಯಕ್ಕೆ ಸಾವಿಲ್ಲ ಎಂಬ ಘೋಷಣೆಯಡಿ ರೈತರು ನಗರದ ಜಿಲ್ಲಾಡಳಿತ ಭವನದ ಮುಂದೆ ಸತ್ಯಾಗ್ರಹ ನಡೆಸಿದರು.

    ದೆಹಲಿಯಲ್ಲಿನ ರೈತರ ಸತ್ಯಾಗ್ರಹ ಹತ್ತಿಕ್ಕಲು ಕಾಣದ ಕೈಗಳು ಕಿಡಿಗೇಡಿಗಳ ಮೂಲಕ ಕೃತ್ಯ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ವಿರೋಧಿ ನೀತಿ ವಿರುದ್ಧ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಕೂಡಲೇ ಸರಕಾರಗಳು ರೈತರ ಸತ್ಯಾಗ್ರಹಕ್ಕೆ ಮಸಿ ಬಳಿಯುವ ಕೃತ್ಯಗಳನ್ನು ಮಾಡುವ ಕಿಡಿಗೇಡಿಗಳನ್ನು ಬಿಡದೇ ರೈತರ ನ್ಯಾಯಯುತ ಬೇಡಿಕೆ ಈಡೇರಿಸಲು ಮುಂದಾಗಬೇಕಿದೆ ಎಂದು ಆಗ್ರಹಿಸಿದರು.

  • ಬಿಎಸ್‍ವೈ, ಸಿದ್ದರಾಮಯ್ಯ, ಜಮೀರ್ ಎಲ್ಲರೂ ಆಪ್ತರು – ಯತ್ನಾಳ್

    ಬಿಎಸ್‍ವೈ, ಸಿದ್ದರಾಮಯ್ಯ, ಜಮೀರ್ ಎಲ್ಲರೂ ಆಪ್ತರು – ಯತ್ನಾಳ್

    ಹಾವೇರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಎರಡು ವರ್ಷ ಬಿಜೆಪಿ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೋ ಹೊರತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೇ ಸಿಎಂ ಸ್ಥಾನದಲ್ಲಿ ಇರುತ್ತಾರೆ ಎಂದು ಘೋಷಿಸಿಲ್ಲ ಎಂದು ಬಿಜೆಪಿ ಶಾಸಕ ಬಸನ ಗೌಡ ಪಾಟೀಲ ಯತ್ನಾಳ್  ಹೇಳಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯನವರ ಜೊತೆ ಬಹಳ ಆಪ್ತರಾಗಿದ್ದಾರೆ. ಹಾಗಾಗಿ ಯಡಿಯೂರಪ್ಪ ಯಾವಾಗ ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎಂಬುದು ಅವರಿಗೆ ಮಾತ್ರ ಗೊತ್ತಿದೆ. ಯಡಿಯೂರಪ್ಪ, ಜಾರ್ಜ್, ಜಮೀರ್ ಅಹಮ್ಮದ್ ಖಾನ್ ಎಲ್ಲರೂ ಬಹಳ ಆಪ್ತರು. ಅಮಿತ್ ಶಾ ಎರಡೂವರೆ ವರ್ಷ ಬಿಜೆಪಿ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೆ. ಆದರೆ ಯಡಿಯೂರಪ್ಪನವರೆ ಎರಡೂವರೆ ವರ್ಷ ಸಿಎಂ ಆಗಿರುತ್ತಾರೆ ಎಂದು ಎಲ್ಲೂ ಹೇಳಿಲ್ಲ ಎಂದು ಹೇಳಿದರು.

    ರಾಜ್ಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ನಾನು ಸಚಿವ ಸ್ಥಾನ ಕೇಳಿಲ್ಲ. ಯಾವ್ಯಾವ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ, ಅಂತಹ ಕಡೆಗಳಲ್ಲಿ ಸಚಿವ ಸ್ಥಾನ ನೀಡುವಂತೆ ಹೇಳಿದ್ದೇನೆ. ಸಚಿವ ಸ್ಥಾನ ಕೊಟ್ಟರೂ ತೆಗೆದುಕೊಳ್ಳುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದರು.

    ಇದೇ ವೇಳೆ ಸಿಡಿ ವಿಚಾರವಾಗಿ ನಾನು ಏನು ಹೇಳಿಲ್ಲ. ನಾನು ಶರಣರ ವಚನಗಳ ಸಿಡಿ ನೋಡುತ್ತೇನೆ ಹೊರತು ಅಂತಹ ಸಿಡಿಗಳನ್ನು ನೋಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದನ್ನು ನಾನು ಹೇಳಿದ್ದೇನೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.

    ಸದ್ಯ ಈಗ ಮೋದಿಯವರ ಗಾಳಿ ಇರುವುದರಿಂದ ವಲಸಿಗ ಶಾಸಕರು ಮೋದಿಯವರಿಗೆ ಜೈ ಅಂತಿದ್ದಾರೆ. ನಾಳೆ ಗಾಳಿ ಬೇರೆಯಾದರೆ ಸೋನಿಯಾಕಿ ಜೈಕಾರ ಹಾಕುತ್ತಾರೆ. ದೇವೇಗೌಡ ಅಪ್ಪಾಜಿ ಎಂದು ಕೂಡ ಕರೆಯುತ್ತಾರೆ. ವಲಸಿಗ ಶಾಸಕರು ಈಗ ಮೂಲ ಬಿಜೆಪಿ ಶಾಸಕರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಾ ಇದೇ ವೇಳೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅಲ್ಲ, ಅವರು ಉಪಾದ್ಯಾಪಿ ಠಾಕ್ರಿ. ಚುನಾವಣಾ ಸ್ಟಂಟ್ ಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದರು.

  • ಎಸ್ ಟಿ ಮೀಸಲಾತಿಗೆ ಆಗ್ರಹ –  ನಾಳೆ ಕಾಗಿನೆಲೆಯ ಕನಕ ಗುರುಪೀಠದ ಪೀಠಾಧ್ಯಕ್ಷರ ನೇತೃತ್ವದಲ್ಲಿ ಪಾದಯಾತ್ರೆ

    ಎಸ್ ಟಿ ಮೀಸಲಾತಿಗೆ ಆಗ್ರಹ – ನಾಳೆ ಕಾಗಿನೆಲೆಯ ಕನಕ ಗುರುಪೀಠದ ಪೀಠಾಧ್ಯಕ್ಷರ ನೇತೃತ್ವದಲ್ಲಿ ಪಾದಯಾತ್ರೆ

    ಹಾವೇರಿ: ಎಸ್‍ಟಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಪ್ರಾರಂಭಗೊಂಡಿದೆ. ಇನ್ನೊಂದು ಕಡೆ ನಾಳೆಯಿಂದ ಎಸ್ ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು ಕಾಗಿನೆಲೆಯ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ.

    ಕನಕಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಾಳೆ ಕಾಗಿನೆಲೆ ಮೂಲಕ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಯಲಿದೆ. ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪಾದಯಾತ್ರೆ ನಡೆಯಲಿದೆ.

    ನಾಳೆಯಿಂದ ಆರಂಭವಾಗುತ್ತಿರುವ ಈ ಪಾದಯಾತ್ರೆ ಫೆಬ್ರುವರಿ 7ರವರೆಗೆ ನಡೆಯಲಿದೆ. ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಕುರುಬರ ಜಾಗೃತಿ ಸಮಾವೇಶ ನಡೆಯಲಿದೆ. ಸ್ವಾಮೀಜಿ ನೇತೃತ್ವದಲ್ಲಿ ಪ್ರತಿದಿನ ಇಪ್ಪತ್ತು ಕಿ.ಮೀ ಪಾದಯಾತ್ರೆ ನಡೆಯಲಿದ್ದು, ಬೆಳಿಗ್ಗೆ ಹತ್ತು ಕಿ.ಮೀ ಮತ್ತು ಸಂಜೆ ವೇಳೆಯಲ್ಲಿ ಹತ್ತು ಕಿ.ಮೀ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆ ಉದ್ದಕ್ಕೂ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಜಾಗೃತಿ ಸಭೆ ನಡೆಯಲಿವೆ. ಈಗಾಗಲೇ ಪಾದಯಾತ್ರೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

    ಈ ಪಾದಯಾತ್ರೆಯಲ್ಲಿ ಪ್ರತಿದಿನ ಸುಮಾರು ಒಂದು ಸಾವಿರಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. ಪಾದಯಾತ್ರೆಗೂ ಮುನ್ನ ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಕನಕಗುರುಪೀಠದ ಆವರಣದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಅಧಿಕ ಕುರುಬ ಸಮುದಾಯದ ಜನರು ಭಾಗವಹಿಸಲಿದ್ದಾರೆ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವ ಆರ್.ಶಂಕರ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಎಚ್.ವಿಶ್ವನಾಥ, ಬಂಡೆಪ್ಪ ಕಾಶೆಂಪೂರ ಸೇರಿದಂತೆ ಸಮುದಾಯದ ಸಚಿವರು ಮತ್ತು ಶಾಸಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಂತರ ಪ್ರಸಾದ ಸೇವನೆ ಮಾಡಿ ಸಂಜೆ ನಾಲ್ಕು ಗಂಟೆ ವೇಳೆಗೆ ಮತ್ತೆ ಪಾದಯಾತ್ರೆ ಆರಂಭವಾಗಲಿದೆ.