Tag: ಪಬ್ಲಿಕ್ ಟಿವಿ Gadag

  • ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗದಗ್‍ನಲ್ಲಿ ಸ್ಮರಣೋತ್ಸವ

    ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗದಗ್‍ನಲ್ಲಿ ಸ್ಮರಣೋತ್ಸವ

    ಗದಗ: ಪುಲ್ವಾಮಾ ದಾಳಿ ವೇಳೆ ಹುತಾತ್ಮರಾದ ಯೋಧರಿಗಾಗಿ ವಿಭಿನ್ನ ಹಾಗೂ ವಿಶಿಷ್ಟವಾಗಿ ಸ್ಮರಣೋತ್ಸವ ಕಾರ್ಯಕ್ರಮವನ್ನು ಗದಗ ಜಿಲ್ಲೆಯಲ್ಲಿ ನಡೆಸಲಾಯಿತು.

    ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿಂದ ಹುತಾತ್ಮ ಯೋಧರ ಭಾವಚಿತ್ರಗಳನ್ನು ಆಟೋದಲ್ಲಿ ಮೆರವಣಿಗೆ ಮಾಡುವ ಮೂಲಕ ಸ್ಮರಣೋತ್ಸವ ಆಚರಿಸಿದರು. ಈ ಆಟೋ ರ‍್ಯಾಲಿಗೆ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಸಿ.ಸಿ ಪಾಟೀಲ್ ವೀರಯೋಧರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಈ ಸಂದರ್ಭದ್ಲಿ ಇತ್ತೀಚಿಗೆ ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿದ ಯೋಧರಿಗೆ ಸನ್ಮಾನಿಸಲಾಯಿತು. ಅವರು ಸಹ ಇಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

    ನಗರದ ತೋಂಟದಾರ್ಯ ಮಠದಿಂದ ಆರಂಭವಾದ ರ್ಯಾಲಿ, ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಾತ್ಮ ಗಾಂಧಿ ವೃತ್ತದ ವರೆಗೆ ಈ ಆಟೋ ರ್ಯಾಲಿ ನಡೆಯಿತು. ಈ ವೇಳೆ ಸಚಿವ ಸಿ.ಸಿ.ಪಾಟೀಲ್, ಶಾಸಕ ಕಳಕಪ್ಪ ಬಂಡಿ, ಎಸ್.ವಿ ಸಂಕನೂರ ಸೇರಿದಂತೆ ಅನೇಕರು ಸ್ಮರಣೋತ್ಸವದಲ್ಲಿ ಭಾಗಿಯಾಗಿದ್ದರು.

    ಗದಗ ಆಟೋ ಚಾಲಕ ಸಂಘದಿಂದ ಭಾರತೀಯ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು. ದಾರಿಯುದ್ದಕ್ಕೂ ಪುಷ್ಪಗಳನ್ನು ಎರಚುವ ಮೂಲಕ ಭಾರತ ಮಾತೆಗೆ ಜೈಘೋಷ ಕೂಗಿದರು.

  • ಎಸಿಬಿ ದಾಳಿ – ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಕಂಪ್ಯೂಟರ್‌ ಆಪರೇಟರ್‌

    ಎಸಿಬಿ ದಾಳಿ – ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಕಂಪ್ಯೂಟರ್‌ ಆಪರೇಟರ್‌

    ಗದಗ: ಜಿಲ್ಲೆಯ ಶಿರಹಟ್ಟಿ ಪಟ್ಟಣ ಪಂಚಾಯತ್ ಕಂಪ್ಯೂಟರ್ ಆಪರೇಟರ್ ಶರಣಪ್ಪ ಗೌಳಿ ಎಂಬಾತ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ.

    ಶರಣಪ್ಪ ಗೌಳಿ ಆಸ್ತಿ ಖಾತಾ ಬದಲಾವಣೆ ಹಾಗೂ ಕಂಪ್ಯೂಟರ್ ಉತಾರ ನೀಡಲು ಫಲಾನುಭವಿಗೆ ಲಂಚದ ಬೇಡಿಕೆ ಇಟ್ಟಿದ್ದ. ಸ್ಥಳೀಯ ಮಹೇಶ್ ಎಂಬುವರು ತಮ್ಮ ಆಸ್ತಿಯ ಖಾತಾ ಬದಲಾವಣೆ ಮಾಡಿ ಕಂಪ್ಯೂಟರ್ ಉತಾರ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದರೂ, ಉತಾರ ಒದಗಿಸಿರಲಿಲ್ಲ. ಉತಾರ ನೀಡಲು 3,500 ರೂಪಾಯಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ.

    ಈ ಕುರಿತು ಅರ್ಜಿದಾರ ಮಹೇಶ್ ನೀಡಿರುವ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಇಂದು ಮಧ್ಯಾಹ್ನ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ದಾಳಿ ಮಾಡಿದ್ದಾರೆ. ಎಸಿಬಿ ಡಿ.ಎಸ್ಪಿ ವಾಸುದೇವರಾಮ್ ಎನ್ ಅವರ ನೇತೃತ್ವದ ತಂಡ ದಾಳಿಮಾಡಿ ಆರೋಪಿ ಶರಣಪ್ಪ ಗೌಳಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

  • ಗ್ರಾನೈಟ್ ಉದ್ಯಮಿಗೆ ಟೋಪಿ – ಹಣ ದುಪ್ಪಟ್ಟು ಮಾಡಿ ಕೊಡುವುದಾಗಿ 35 ಲಕ್ಷ ರೂ. ವಂಚನೆ

    ಗ್ರಾನೈಟ್ ಉದ್ಯಮಿಗೆ ಟೋಪಿ – ಹಣ ದುಪ್ಪಟ್ಟು ಮಾಡಿ ಕೊಡುವುದಾಗಿ 35 ಲಕ್ಷ ರೂ. ವಂಚನೆ

    ಗದಗ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟು ಮಾಡಿ ಕೊಡುವುದಾಗಿ ಹೇಳಿ ಗ್ರಾನೈಟ್ ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಗದಗದಲ್ಲಿ ನಡೆದಿದೆ.

    ಬಾಗಲಕೋಟೆ ಜಿಲ್ಲೆ ಇಳಕಲ್ ಪಟ್ಟಣದ ಪ್ರಕಾಶ್ ಮಲ್ಲನಗೌಡ ಪಾಟೀಲ್ ವಂಚನೆಗೊಳಗಾದ ಉದ್ಯಮಿ. ದಾವಣಗೆರೆ ಮೂಲದ ವಿನಯ್ ಯಲಿಗಾರ ಮತ್ತು ಶಂಕರ್ ಯಲಿಗಾರ ಎಂಬವರು ಉದ್ಯಮಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ.

    ಎಲಿಗಾರ ಸಹೋದರರು ತಮ್ಮ ವಿ.ವೈ ಕ್ಯಾಪಿಟಲ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ತಾವು ಕಟ್ಟಿದ ಹಣಕ್ಕೆ ನಾಲ್ಕು ತಿಂಗಳಿಗೊಮ್ಮೆ ಶೇ.30 ರಷ್ಟು ಹಣ ಲಾಭ ಪಡೆಯಬಹುದು ಎಂದು ಉದ್ಯಮಿಗೆ ಇಲ್ಲ-ಸಲ್ಲದ ಮಾಹಿತಿ ನೀಡಿ ನಂಬಿಸಿ ಬಲೆಗೆ ಹಾಕಿಕೊಂಡಿದ್ದಾರೆ.

    ಬಣ್ಣದ ಮಾತುಗಳನ್ನು ನಂಬಿದ ಉದ್ಯಮಿ ಪ್ರಕಾಶ್ ಪಾಟೀಲ್, ಕಳೆದ 2020 ಜೂನ್ 28 ರಂದು ಗದಗನ ಪಂಚಾಕ್ಷರಿ ನಗರದಲ್ಲಿ ಇರುವ ಉದ್ಯಮಿಯ ಸಹೋದರ ನಾಗರಾಜ್ ಪಾಟೀಲ್ ಮನೆಯಲ್ಲಿ ವ್ಯವಹಾರ ಕುದುರಿಸಿದ್ದಾರೆ. ಈ ವೇಳೆ 35 ಲಕ್ಷ ರೂಪಾಯಿ ಹಣವನ್ನು ಆರೋಪಿತರ ಕೈಗೆ ಕೊಟ್ಟಿದ್ದಾರೆ. ಹಣ ಪಡೆದು ಕಳೆದ ಏಳೆಂಟು ತಿಂಗಳಿಂದ ಒಂದು ನಯಾ ಪೈಸೆನೂ ಸಹ ಉದ್ಯಮಿಗೆ ಕೊಡದೆ ವಂಚಿಸಿದ್ದಾರೆ.

    ಸದ್ಯ ಉದ್ಯಮಿ ಪ್ರಕಾಶ್ ಗದಗ ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಗದಗ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಇದೇ ರೀತಿ ಹಲವರಿಗೆ ವಂಚನೆ ಮಾಡಿರುವ ಮಾಹಿತಿ ಮೇರೆಗೆ ಆ ಇಬ್ಬರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

  • ಯುಜಿಡಿ ಕಾಮಗಾರಿ ಗುಂಡಿಯಲ್ಲಿ ಬಿದ್ದು ನರಳಾಡಿದ ಮೂಕ ಪ್ರಾಣಿ

    ಯುಜಿಡಿ ಕಾಮಗಾರಿ ಗುಂಡಿಯಲ್ಲಿ ಬಿದ್ದು ನರಳಾಡಿದ ಮೂಕ ಪ್ರಾಣಿ

    ಗದಗ: ಯುಜಿಡಿ ಕಾಮಗಾರಿಯ ಗುಂಡಿಯಲ್ಲಿ ಬಿದ್ದು ಗೂಳಿಯೊಂದು ನರಳಾಡಿದ ಘಟನೆ ಗದಗ ಜಿಲ್ಲೆಯ ಪುಟ್ಟರಾಜ ಗವಾಯಿಗಳ ವೃತ್ತದ ಬಳಿ ಕಂಡು ಬಂದಿದೆ. ಜಂಗಳಿ ಗೂಳಿಯೊಂದು ತಡರಾತ್ರಿನೇ ಈ ಗುಂಡಿನಲ್ಲಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.

    ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಮೃತ ಸಿಟಿ ಯೋಜನೆಯಡಿ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಆದರೆ ಈ ಕಾಮಗಾರಿ ಆಮೆಗತಿನಲ್ಲಿ ಸಾಗುತ್ತಿದೆ. ಜೊತೆಗೆ ಹತ್ತಾರು ಅಡಿ ಆಳದ ಗುಂಡಿಯ ಪಕ್ಕ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳಲ್ಲದ ಕಾರಣ ನಗರಸಭೆ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರು ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇಕ್ಕಟ್ಟಾದ ಗುಂಡಿಯೊಳಗೆ ಹರಿವಿನಲ್ಲಿ ಬಿದ್ದ ಗೂಳಿಯೊಂದು ಮಲಗಲೂ ಆಗದೇ, ತಿರುಗಲೂ ಆಗದೇ, ಮೇಲೆ ಬರಲೂ ಆಗದೆ ನರಳಾಡಿದೆ. ಬೆಳಗ್ಗೆ ಕೆಲಸಕ್ಕೆ ಹೋಗುವ ದಾರಿ ಹೋಕರು ಈ ಮೂಕ ಪ್ರಾಣಿಯ ರೋಧನೆ ಕೇಳಿ, ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ಸ್ಥಳಕ್ಕೆ ಬಂದ 112 ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ನಗರಸಭೆ ಸಿಬ್ಬಂದಿ ಕಾರ್ಯಾಚರಣೆಯಿಂದ ಗೂಳಿಯ ರಕ್ಷಣೆ ಮಾಡಲಾಯಿತು.

    ಅವಳಿ ನಗರದ ಅನೇಕ ಕಡೆಗಳಲ್ಲಿ ಹೀಗೆ ಸಾಕಷ್ಟು ಗುಂಡಿಗಳಿದ್ದು, ಸಾಕಷ್ಟು ಅವಾಂತರಗಳು ಸಂಭವಿಸಿವೆ. ಅಧಿಕಾರಿಗಳು ಮಾತ್ರ ನಮಗೆ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಎಂಬ ಆಕ್ರೋಶ ಜನರದ್ದಾಗಿದೆ. ಈ ವಿಚಾರವಾಗಿ ಜನ ರೊಚ್ಚಿಗೇಳುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

  • ಕಿರಿದಾದ ರಾಜಕಾಲುವೆ ನಿರ್ಮಾಣ – ಕಾಮಗಾರಿ ಹೆಸರಲ್ಲಿ ಭಾರೀ ಅಕ್ರಮ?

    ಕಿರಿದಾದ ರಾಜಕಾಲುವೆ ನಿರ್ಮಾಣ – ಕಾಮಗಾರಿ ಹೆಸರಲ್ಲಿ ಭಾರೀ ಅಕ್ರಮ?

    – ಅಮೃತ್‍ಸಿಟಿ ಯೋಜನೆಯಡಿ ಕಾಮಗಾರಿ
    – ಒಂದೇ ಕಾಮಗಾರಿಗೆ ಎರಡು ಬಿಲ್?

    ಗದಗ: ಅವಳಿ ನಗರವಾದ ಗದಗ – ಬೆಟಗೇರಿಯಲ್ಲಿ ಅಮೃತ್ ಸಿಟಿ ಯೋಜನೆ ಹೆಸರಿನಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಂಡು ವರ್ಷಗಳೇ ಉರುಳಿದರೂ, ಬಹುತೇಕ ಕಾಮಗಾರಿಕೆಗಳು ಆಮೆ ವೇಗದಲ್ಲಿ ಸಾಗುತ್ತಿದೆ. ಕ್ರಿಯಾ ಯೋಜನೆಯಲ್ಲಿದ್ದಂತೆ ಕಾಮಗಾರಿ ನಡೆಯದೇ ಅಕ್ರಮಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಆಸ್ಪದ ನೀಡುತ್ತಿದ್ದಾರೆ ಎಂದು ಅವಳಿ ನಗರದ ಜನರು ಆರೋಪಿಸುತ್ತಿದ್ದಾರೆ.

    ಗದಗ ನಗರದ ಹಾತಲಗೇರಿ ನಾಕಾದಲ್ಲಿರುವ ರಾಘವೇಂದ್ರ ಸ್ವಾಮಿ ಮಠದಿಂದ ಕಣಗಿನಹಾಳ ರಸ್ತೆಯವರೆಗೆ 1.3 ಕಿಲೋಮೀಟರ್‍ವರೆಗೆ ರಾಜಕಾಲುವೆ ಅಭಿವೃದ್ಧಿ ಮಾಡಲಾಗುತ್ತಿದೆ. ಒಟ್ಟು 40 ಅಡಿ ಅಗಲವಾಗಿರುವ ರಾಜ ಕಾಲುವೆಯಲ್ಲಿ ಕೇವಲ 10 ಅಡಿ ಕಾಲುವೆ ನಿರ್ಮಾಣ ಮಾಡುತ್ತಿದ್ದಾರೆ. ಉಳಿದ 30 ಅಡಿ ಜಾಗವನ್ನ ಖಾಲಿ ಬಿಡುತ್ತಿರುವುದು ಏಕೆ ಎಂಬುವ ಪ್ರಶ್ನೆ ಇದೀಗ ಸ್ಥಳೀಯರನ್ನು ಕಾಡುತ್ತಿದೆ. ಅತಿ ದೊಡ್ಡದಾದ ಈ ರಾಜಕಾಲುವೆಗೆ ಸುತ್ತಮುತ್ತಲಿನ 5 ರಿಂದ 6 ಕಿಲೋಮೀಟರ್ ವರೆಗಿನ ನೀರು ಹರಿದು ಬರುತ್ತದೆ. ಇಂತಹ ನಾಲೆಯನ್ನು ಸಂಕುಚಿತಗೊಳಿಸಿ ಮತ್ತಷ್ಟು ಅನಾಹುತವಾದರೆ ಯಾರು ಹೊಣೆ ಎಂಬ ಪ್ರಶ್ನೆ ಎದ್ದಿದೆ.

    ಕಳೆದ 2 ವರ್ಷದ ಹಿಂದೆ ನಗರೋತ್ಥಾನ ಯೋಜನೆಯಲ್ಲಿ ಸುಮಾರು 1.3 ಕೋಟಿ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿ ಪಡಿಸಲಾಗಿದೆ. ಈಗ ಅಮೃತ್ ಸಿಟಿ ಯೋಜನೆಯಲ್ಲಿ ಮತ್ತೆ ಅದೇ ಕಾಲುವೆಗೆ 1.5 ಕೋಟಿ ರೂಪಾಯಿ ವೆಚ್ಚದಲ್ಲಿ 1.3 ಕಿಲೋಮೀಟರ್ ವರೆಗೆ ಕಾಮಗಾರಿ ಕೈಗೆತ್ತಿಕೊಂಡಿದೆ. ಒಂದೇ ಕಾಲುವೆ ಎರಡು ಯೋಜನೆಯಲ್ಲಿ ಬಿಲ್ ತೆಗೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಕೋಟಿ ಕೋಟಿ ಹಣ ಖರ್ಚು ಮಾಡಿ ಚಿಕ್ಕ ಕಾಲುವೆ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಇಡೀ ರಾಜಕಾಲುವೆ ಪ್ರವಾಹ ಬಂದು ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡುತ್ತಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ರಾಜಕಾಲುವೆ ಅವಾಂತರದಿಂದ ಒಂದಿಲ್ಲ ಒಂದು ಸಮಸ್ಯೆಗಳಾಗುತ್ತಿದೆ. ರಸ್ತೆಗೆ ಅಡ್ಡಲಾಗಿ ಪ್ರವಾಹ ಬಂದು ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ. ಈ ಹಿಂದೆ ಅಂಚೆ ಇಲಾಖೆ ಓರ್ವ ವ್ಯಕ್ತಿ ಕಾಲುವೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಸಾಕಷ್ಟು ಬೈಕ್‍ಗಳು, ವಾಹನಗಳು ಕೊಚ್ಚಿ ಹೋಗಿವೆ. ಅಂತಹದರಲ್ಲಿ ಕಾಲುವೆ ಒತ್ತುವರಿ ಮಾಡಿಕೊಳ್ಳುವ ಭೂಗಳ್ಳರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗಿದೆ. ಹೀಗಾಗಿ ಇದರಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನ ಮೂಡಿದೆ. ಈ ವಿಚಾರವಾಗಿ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.

    ಅವೈಜ್ಞಾನಿಕವಾಗಿರುವ ಕಾಮಗಾರಿಯನ್ನು ಕೂಡಲೇ ಕೈ ಬಿಡಬೇಕು. ಇಲ್ಲವಾದರೆ ಮುಂದಾಗುವ ಅನಾಹುತಗಳಿಗೆ ನಗರ ಸಭೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾರಣರಾಗುತ್ತಾರೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಆದರೆ ಗದಗದ ಈ ರಾಜಕಾಲುವೆ ಬಗ್ಗೆ ಅಧಿಕಾರಿಗಳು ಹೇಳುವುದೇ ಬೇರೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ಕೈಗೆ ಸಿಗದೇ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಾಲೆ ದೊಡ್ಡದಾಗಿರುವುದರಿಂದ ಮುಳ್ಳು-ಕಂಠಿಗಳು ಬೆಳೆದು ಪ್ರವಾಹಕ್ಕಿಡಾಗುತ್ತಿದೆ. ಅದನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹೋಗಲು ಚರಂಡಿ ನಿರ್ಮಿಸುತ್ತಿದ್ದೇವೆ ಅಂತಿದ್ದಾರೆ.

    ನಾಲೆ, ಚರಂಡಿ, ರಾಜಕಾಲುವೆ, ಬಾವಿ, ಕೆರೆ-ಕಟ್ಟೆಗಳನ್ನು ಮುಚ್ಚುವುದು, ಒತ್ತುವರಿ ಮಾಡಬಾರದು ಎಂದು ಕೋರ್ಟ್ ಹೇಳುತ್ತದೆ. ಆದರೆ ಗದಗದಲ್ಲಿ ಭೂಗಳ್ಳರು ಕೋರ್ಟ್ ನಿಯಮ ಉಲ್ಲಂಘಿಸಿ ರಾಜಕಾಲುವೆ ನೀರಿಗೆ ಬಾಯಿ ಹಾಕಿರುವುದು ಎಷ್ಟು ಸರಿ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.