Tag: ಪಬ್ಲಿಕ್ ಟಿವಿ DCM Ashwaththanarayana

  • ರಾಮನಗರ ಜಿಲ್ಲೆಗೆ 20 ಆಮ್ಲಜನಕ ಸಾಂದ್ರಕ – 3.5 ಕೋಟಿ ಮೌಲ್ಯದ ವೈದ್ಯಕೀಯ ಯಂತ್ರೋಪಕರಣ

    ರಾಮನಗರ ಜಿಲ್ಲೆಗೆ 20 ಆಮ್ಲಜನಕ ಸಾಂದ್ರಕ – 3.5 ಕೋಟಿ ಮೌಲ್ಯದ ವೈದ್ಯಕೀಯ ಯಂತ್ರೋಪಕರಣ

    -ಟೊಯೊಟಾ ಕಿರ್ಲೋಸ್ಕರ್ ಕಂಪನಿಯಿಂದ ಡಾ.ಸಿಎನ್.ಅಶ್ವತ್ಥನಾರಾಯಣರಿಗೆ ಹಸ್ತಾಂತರ

    ಬೆಂಗಳೂರು: ಈಗಾಗಲೇ ರಾಮನಗರ ಜಿಲ್ಲೆಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿರುವ ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಂಪನಿ ಮತ್ತಷ್ಟು ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥನಾರಾಯಣರವರಿಗೆ ಸೋಮವಾರ ಹಸ್ತಾಂತರ ಮಾಡಿದೆ.

    ಬೆಂಗಳೂರಿನಲ್ಲಿ ಡಿಸಿಎಂ ಅವರನ್ನು ಭೇಟಿಯಾದ ಕಂಪನಿಯ ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಹೆಗ್ಡೆ ಹಾಗೂ ಹಿರಿಯ ವ್ಯವಸ್ಥಾಪಕ ಕಿರಣ್ ರವರು 3.5 ಕೋಟಿ ರೂ. ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಕೊಡುಗೆಯಾಗಿ ನೀಡಿದರು.

    ರಾಮನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನರವರು ಜಿಲ್ಲಾಡಳಿತದ ಪರವಾಗಿ ವೈದ್ಯಕೀಯ ಸಲಕರಣೆಗಳನ್ನು ಸ್ವೀಕರಿಸಿದರು. 8 ನೆಬಲೈಸರ್‍ಗಳು, 20 ಗ್ಲೂಕೋ ಮೀಟರ್‌ಗಳು, 5 ಆಂಬೂ ಬ್ಯಾಗ್, 48 ಪಲ್ಸ್ ಆಕ್ಸಿ ಮೀಟರ್, 200 ನೋಸಲ್ ಪ್ರಾಂಗ್ಸ್, 250 ಆಕ್ಸಿಜನ್ ಮಾಸ್ಕ್, 20 ಆಮ್ಲಜನಕ ಸಾಂದ್ರಕ ಹಾಗೂ 5 ಮಲ್ಟಿ ಪ್ಯಾರಾ ಬೆಡ್ ಸೈಡ್ ಮಾನೀಟರ್‌ಗಳನ್ನು ಹಸ್ತಾಂತರ ಮಾಡಲಾಯಿತು. ಇನ್ನೊಂದು ವಾರದಲ್ಲಿ 30 ಆಮ್ಲಜನಕ ಸಾಂದ್ರಕ ಸರಬರಾಜು ಮಾಡಲಿದ್ದಾರೆ.

    ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು, “ಈಗಾಗಲೇ ಜಿಲ್ಲೆಗೆ ಹಲವಾರು ರೀತಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಕಂಪನಿ ನೆರವಾಗಿದೆ. ಈಗ ಕೋವಿಡ್ ಸಂಕಷ್ಟದಲ್ಲಿ ಅಗತ್ಯವಾದ ವಿವಿಧ ವೈದ್ಯಕೀಯ ಸಲಕರಣೆಗಳನ್ನು ನೀಡಿದೆ. ಇದಕ್ಕಾಗಿ ಕಂಪನಿಗೆ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದರು.

    ಟೊಯೊಟಾ ಕಂಪನಿ ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಹೆಗಡೆ, ಹಿರಿಯ ವ್ಯವಸ್ಥಾಪಕ ಕಿರಣರವರು ಈ ವೇಳೆ ಉಪಸ್ಥಿತಿಯಿದ್ದರು.

  • 5 ಲಕ್ಷ ರೆಮಿಡಿಸಿವರ್ ಆಮದು, ಔಷಧ ಕೊರತೆ ಆಗದಂತೆ ಕಟ್ಟೆಚ್ಚರ: ಡಿಸಿಎಂ ಅಶ್ವತ್ಥನಾರಾಯಣ

    5 ಲಕ್ಷ ರೆಮಿಡಿಸಿವರ್ ಆಮದು, ಔಷಧ ಕೊರತೆ ಆಗದಂತೆ ಕಟ್ಟೆಚ್ಚರ: ಡಿಸಿಎಂ ಅಶ್ವತ್ಥನಾರಾಯಣ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ 5 ಲಕ್ಷ ರೆಮಿಡಿಸಿವಿರ್ ಇಂಜೆಕ್ಷನ್ ಆಮದು ಮಾಡಿಕೊಳ್ಳುತ್ತಿದ್ದು, ಈ ಸಲುವಾಗಿ ಜಾಗತಿಕ ಟೆಂಡರ್ ಕರೆಯಲಾಗಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಎರಡನೇ ಅಲೆಯನ್ನು ಎದುರಿಸಲು ರಾಜ್ಯ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಡೀ ರಾಜ್ಯದಲ್ಲಿ ಎಲ್ಲಿಯೂ ರೆಮಿಡಿಸಿವರ್ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಜೊತೆಗೆ, ಅಗತ್ಯವಾದ ಎಲ್ಲ ಔಷಧಿಗಳು, ಸಾಮಗ್ರಿಗಳು ಮತ್ತು ವೈದ್ಯಕೀಯ ಬಳಕೆಯ ವಸ್ತುಗಳ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ” ಎಂದರು.

    15,000 ಆಮ್ಲಜನಕ ಸಾಂದ್ರಕಗಳ (ಆಕ್ಸಿಜನ್ ಕನ್ಸೆಂಟ್ರೇಟರ್) ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಈಗಾಗಲೇ 3,000 ಆಮ್ಲಜನಕ ಸಾಂದ್ರಕಗಳ ಖರೀದಿಗೆ ಆದೇಶ ನೀಡಲಾಗಿದ್ದು, ಉಳಿದ 12,000 ಸಾಂದ್ರಕಗಳ ಖರೀದಿಗೆ ಜಾಗತಿಕ ಟೆಂಡರ್ ಕರೆಯಲಾಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ರಾಜ್ಯದಲ್ಲಿ ಈಗ ಕೋವಿಡ್ ಬೆಡ್‍ಗಳನ್ನು 4,000ದಿಂದ 24,000ಕ್ಕೆ ಹೆಚ್ಚಿಸಲಾಗಿದೆ. ಒಟ್ಟು 60,000 ಆಕ್ಸಿಜನ್ ಬೆಡ್‍ಗಳಿವೆ. ಆಕ್ಸಿಜನ್ ಅಗತ್ಯ ಇಲ್ಲದವರು ಕೂಡ ಆಸ್ಪತ್ರೆ ಸೇರಿದ್ದರಿಂದ ಬೆಡ್‍ಗಳ ಕೊರತೆ ಉಂಟಾಗಿತ್ತು. ಇದನ್ನು ತಡೆಯಲು ದಾಖಲಾತಿಗೆ ಮುನ್ನ ಭೌತಿಕ ಪರೀಕ್ಷೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು.

    ಎಲ್ಲಾ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿ ಜಿಲ್ಲೆಯ ವೈದ್ಯಕೀಯ ಅಗತ್ಯ ವಸ್ತುಗಳ ಹೆಚ್ಚುವರಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಮಾರ್ಚ್ ತಿಂಗಳಲ್ಲಿ ದಿನಕ್ಕೆ 100 ರಿಂದ 150 ಮೆಟ್ರಿಕ್ ಟನ್ ಆಗಿದ್ದ ಆಮ್ಲಜನಕದ ಬೇಡಿಕೆ ಇದ್ದಕ್ಕಿದ್ದಂತೆ ದಿನಕ್ಕೆ 1,200 ಟನ್‍ಗಳಿಗೆ ಏರಿದೆ. ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    ಕೋವಿಡ್ ಕರ್ತವ್ಯಕ್ಕೆ ಹಾಜರಾಗುವ ವೈದ್ಯ ವಿದ್ಯಾರ್ಥಿಗಳು ಮತ್ತು ಇಂಟರ್ನಿಗಳಿಗೆ ಎಲ್ಲ ಸೌಲಭ್ಯ ಕಲ್ಪಸಲಾಗುತ್ತಿದೆ. ಅವರಿಗೆ ಸಂಬಳ ಮತ್ತು ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಜತೆಗೆ ಅವರ ಆರೋಗ್ಯ ಮತ್ತು ವಿಶ್ರಾಂತಿಯ ಮೇಲೂ ನಿಗಾ ಇಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

  • ಆಕ್ಸಿಜನ್ ಬೆಡ್ ಹೆಚ್ಚು ಪಡೆಯಲು ಎಲ್ಲ ಕ್ರಮ – ಎಂಎಸ್ ರಾಮಯ್ಯ ಆಸ್ಪತ್ರೆ ಜತೆ ಡಿಸಿಎಂ ಮಾತುಕತೆ

    ಆಕ್ಸಿಜನ್ ಬೆಡ್ ಹೆಚ್ಚು ಪಡೆಯಲು ಎಲ್ಲ ಕ್ರಮ – ಎಂಎಸ್ ರಾಮಯ್ಯ ಆಸ್ಪತ್ರೆ ಜತೆ ಡಿಸಿಎಂ ಮಾತುಕತೆ

    ಬೆಂಗಳೂರು: ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಅಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.

    ವೆಂಟಿಲೇಟರ್‌ಗಳು, ಆಕ್ಸಿಜನ್ ಬೆಡ್‍ಗಳು, ರೆಮಿಡಿಸ್ವಿರ್, ಆಮ್ಲಜನಕ ಮತ್ತಿತರೆ ಅಂಶಗಳ ಬಗ್ಗೆ ಅವರು ಆಸ್ಪತ್ರೆಯ ಹಿರಿಯ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ, ಆಸ್ಪತ್ರೆಯ ಅಧ್ಯಕ್ಷ ಎಂ.ಆರ್.ಜಯರಾಂ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅವರ ಜೊತೆ ಮಾತುಕತೆ ನಡೆಸಿದ ಡಿಸಿಎಂ, ಆಕ್ಸಿಜನ್ ಬೆಡ್‍ಗಳ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವಂತೆ ಮನವಿ ಮಾಡಿದರು. ಇದಕ್ಕೆ ಅವರಿಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸಿದರು.

    ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ಮಾತ್ರವಲ್ಲ. ಮುಂದೆ ಎದುರಾಗಬಹುದಾದ ಯಾವುದೇ ವೈದ್ಯಕೀಯ ಸವಾಲನ್ನು ಎದುರಿಸಲು ಸನ್ನದ್ಧರಾಗಿರಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಬೆಡ್‍ಗಳನ್ನು ಇಟ್ಟುಕೊಂಡಿರಬೇಕು. ಇಡೀ ವೈದ್ಯಕೀಯ ವ್ಯವಸ್ಥೆ 24/7 ಅಲರ್ಟ್ ಆಗಿರಬೇಕು. ಸರಕಾರ ಕೋರಿಕೆಗೆ ಎಂಎಸ್ ರಾಮಯ್ಯ ಆಸ್ಪತ್ರೆ ಆಡಳಿತ ವರ್ಗ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.

    ಕೆಲ ಮೆಡಿಕಲ್ ಕಾಲೇಜುಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿವೆ. ಆದರೆ, ಆಕ್ಸಿಜನ್ ಜೋಡಿತ ಬೆಡ್‍ಗಳಿಲ್ಲ. ನಮಗೆ ಬೇಕಿರುವುದು ಆಕ್ಸಿಜನ್ ಇರುವ ಹಾಸಿಗೆಗಳು ಮಾತ್ರ. ಎಮರ್ಜೆನ್ಸಿ ಪ್ರಕರಣಗಳಲ್ಲಿ ಆಮ್ಲಜನಕ ಇಲ್ಲದಿದ್ದರೆ ಅದು ಎಷ್ಟು ದೊಡ್ಡ ಆಸ್ಪತ್ರೆಯಾದರೂ ಪ್ರಯೋಜನ ಇಲ್ಲ. ಆದಷ್ಟು ಅಂಥ ಆಸ್ಪತ್ರೆಗಳಿಗೆ ನಾವೇ ಸೌಲಭ್ಯಗಳನ್ನು ಕೊಟ್ಟು ಅಂಥ ಹಾಸಿಗೆಗಳನ್ನು ಸರಕಾರದ ವಶಕ್ಕೆ ಪಡೆಯಬೇಕು. ಈ ನಿಟ್ಟಿನಲ್ಲಿ ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

    ಸಿಬ್ಬಂದಿ ಕೊರತೆ ಆಗಬಾರದು: ಸರಕಾರ ಆಗರಲಿ ಅಥವಾ ಖಾಸಗಿ ಆಗಿರಲಿ, ಯಾವುದೇ ಆಸ್ಪತ್ರೆ ಅಥವಾ ಮೆಡಿಕಲ್ ಕಾಲೇಜ್ ಆಗಿರಬಹುದು, ಸಿಬ್ಬಂದಿ ಕೊರತೆ ಆಗಬಾರದು. ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸೇವೆಯನ್ನು ಪಡೆದುಕೊಳ್ಳಿ. ಅವರಿಗೆ ತಜ್ಞ ವೈದ್ಯರು ಮಾರ್ಗದರ್ಶನ ಮಾಡಿದರೆ ಸಾಕು. ಅದಕ್ಕೆ ಕಾನೂನಿನಲ್ಲಿ ಅವಕಾಶ ಕೊಡಲು ಸರಕಾರ ಸಿದ್ಧವಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಖ್ಯಾತ ಹೃದ್ರೋಗ ತಜ್ಞ ಡಾ.ದೇವಿಶೆಟ್ಟಿ ಅವರು ಕೋವಿಡ್ ತಡೆಗೆ ಅನೇಕ ಪರಿಣಾಮಕಾರಿ ಸಲಹೆಗಳನ್ನು ನೀಡಿದ್ದಾರೆ. ಕ್ಷಿಪ್ರವಾಗಿ ಆ ಸಲಹೆಗಳನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ವೈದ್ಯರ ಜತೆ ಸಮಾಲೋಚನೆ: ಇದಾದ ಮೇಲೆ ಮಲ್ಲೇಶ್ವರದ ವೈದ್ಯರು, ಮತ್ತಿತರೆ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಸೋಂಕಿತರ ಆರೋಗ್ಯ ಉಲ್ಬಣವಾಗುವ ಸ್ಥಿತಿಗೆ ಬಿಡದೇ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ನೀಡಿ ಗುಣಪಡಿಸಬೇಕು ಎಂದು ತಾಕೀತು ಮಾಡಿದರು.

    ಸೋಂಕಿತರಿಗೆ ವೈದ್ಯ ಸೌಲಭ್ಯದಲ್ಲ ಯಾವುದೇ ಲೋಪವಾಗಬಾರದು. ಪರೀಕ್ಷೆ, ರಿಸಲ್ಟ್ ಹಾಗೂ ಚಿಕಿತ್ಸೆ ಕೊಡುವ ವಿಚಾರದಲ್ಲಿ ಎಲ್ಲವೂ ವ್ಯವಸ್ಥಿತವಾಗಿರಬೇಕು ಎಂದು ಡಿಸಿಎಂ ಸೂಚನೆ ಕೊಟ್ಟರು.