Tag: ಪಬ್ಲಿಕ್ ಟಿವಿ DCM Ashwaththa Narayana

  • ಸಮಾಜದ ಬದಲಾವಣೆಗಾಗಿ ಗುಣಮಟ್ಟದ ಶಿಕ್ಷಣ ಅಗತ್ಯ: ಡಿಸಿಎಂ

    ಸಮಾಜದ ಬದಲಾವಣೆಗಾಗಿ ಗುಣಮಟ್ಟದ ಶಿಕ್ಷಣ ಅಗತ್ಯ: ಡಿಸಿಎಂ

    ಬೆಂಗಳೂರು: ಸಮಾಜದಲ್ಲಿ ಏನಾದರೂ ಪರಿಣಾಮಕಾರಿಯಾಗಿ ಬದಲಾವಣೆ ತರಬೇಕೆಂದರೆ ಅದು ಉತ್ತಮ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯ. ಇದನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಸಾಧ್ಯವಾಗಿಸಬಹುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣರವರು ತಿಳಿಸಿದರು.

    ಭಾನುವಾರ ಸರಗೂರು ತಾಲ್ಲೂಕಿನ ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಅತ್ಯಾಧುನಿಕ ಕೋವಿಡ್ ಕೇರ್ ಸೇಂಟರ್ ಅನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಶಿಕ್ಷಣ ಕಲಿತ ನಂತರ ಸಮಾಜಕ್ಕೆ ಏನು ಕೊಡಗೆ ನೀಡಬೇಕು ಎಂಬ ಅರಿವಿರಬೇಕು. ಎಲ್ಲವನ್ನು ಕಲಿತು ಸ್ವಾರ್ಥದಿಂದ ಬದುಕಬಾರದು. ಏನೇ ಸಮಸ್ಯೆಗಳು ಕಂಡು ಬಂದರೂ ಶಿಕ್ಷಣದ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

    ಹೆಚ್.ಡಿ.ಕೋಟೆಯು ಹಿಂದುಳಿದ ಭಾಗವಾಗಿದ್ದು, ಇಲ್ಲಿ ಇಂತಹ ಸಂಸ್ಥೆಯು ಕೋವಿಡ್ ಕಾಲದಂತಹ ಸಂಕಷ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವುದು ದೇಶಕ್ಕೆ ಹಾಗೂ ವಿಶ್ವಕ್ಕೆ ಮಾದರಿಯಾಗಿ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

    ಉಸ್ತುವಾರಿ ಸಚಿವ ಸೋಮಶೇಖರ್ ಬಗ್ಗೆ ಮೆಚ್ಚುಗೆ:
    ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಕೋವಿಡ್ ಕಾಲದಲ್ಲಿ ಸ್ವತಃ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಸವಾರ್ಂಗೀಣವಾಗಿ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

    ಈ ಭಾಗದ ಜನರ ಸಮಸ್ಯೆಗಳನ್ನು ಹಾಗೂ ಕಷ್ಟಗಳಿಗೆ ಈ ಸಂಸ್ಥೆಯು ಉತ್ತಮವಾಗಿ ಸ್ಪಂದಿಸುತ್ತಿದ್ದು, ಇಲ್ಲಿನ ಜನರ ಸೇವೆಗಾಗಿ ಈ ಸಂಸ್ಥೆಯು ಹಾಗೂ ಸಂಸ್ಥೆಯ ಸಂಸ್ಥಾಪಕ ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವುದು ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

    ಇಲ್ಲಿನ ಶಾಸಕರಾದ ಅನಿಲ್ ಚಿಕ್ಕಮಾದು ಅವರು ತಮ್ಮ ತಂದೆಯಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೇ ಸ್ವತಃ ಪ್ರವಾಸ ಕೈಗೊಂಡು ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರು ಸಹ ಕೋವಿಡ್ ಕಾಲದಲ್ಲಿ 150 ಬೆಡ್ ವ್ಯವಸ್ಥೆಯುಳ್ಳ ಆಸ್ಪತ್ರೆಯನ್ನು ತೆರೆದು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಪ್ರಶಂಸಿದರು.

    ಹೆಚ್.ಡಿ.ಕೋಟೆ ತಾಲೂಕಿನಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಶೇ.78ರಷ್ಟು ಲಸಿಕೆ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೂ ಶೀಘ್ರವಾಗಿ ಲಸಿಕೆ ನೀಡಲಾಗುವುದು ಎಂದು ಹೇಳಿದರು.

    ಸಭೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಶಾಸಕ ಅನಿಲ್ ಚಿಕ್ಕಮಾದು, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆ ಸಂಸ್ಥೆಯ ಸ್ಥಾಪಕ ಡಾ.ಆರ್.ಬಾಲಸುಬ್ರಮಣ್ಯಂ ಸೇರಿದಂತೆ ಇತರರು ಹಾಜರಿದ್ದರು. ಇದನ್ನೂ ಓದಿ: ಸೌದಿಯಲ್ಲಿ ಸಿಲುಕಿದ್ದ ದಾವಣಗೆರೆಯ ಮಹಿಳೆ ಸ್ವದೇಶಕ್ಕೆ ವಾಪಸ್

  • ರಾಜ್ಯ ಆರೋಗ್ಯ ವ್ಯವಸ್ಥೆಗೆ ಆಮೂಲಾಗ್ರ ಕಾಯಕಲ್ಪ 1,500 ಕೋಟಿ ರೂ ವೆಚ್ಚದಲ್ಲಿ ಕ್ರಿಯಾ ಯೋಜನೆ-ಡಿಸಿಎಂ ಅಶ್ವಥ್ ನಾರಾಯಣ

    ರಾಜ್ಯ ಆರೋಗ್ಯ ವ್ಯವಸ್ಥೆಗೆ ಆಮೂಲಾಗ್ರ ಕಾಯಕಲ್ಪ 1,500 ಕೋಟಿ ರೂ ವೆಚ್ಚದಲ್ಲಿ ಕ್ರಿಯಾ ಯೋಜನೆ-ಡಿಸಿಎಂ ಅಶ್ವಥ್ ನಾರಾಯಣ

    ಬೆಂಗಳೂರು: ಸಂಭವನೀಯ ಕೋವಿಡ್ ಮೂರನೇ ಅಲೆ ಸೇರಿ ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ರಾಜ್ಯವನ್ನು ಸರ್ವಸಜ್ಜುಗೊಳಿಸಲು ತಕ್ಷಣವೇ ಮುಂದಾಗಿರುವ ರಾಜ್ಯ ಸರ್ಕಾರವು 1,500 ಕೋಟಿ ರೂ. ವೆಚ್ಚದಲ್ಲಿ ಜಾಗತಿಕ ಆರೋಗ್ಯ ಮೂಲಸೌಲಭ್ಯ ಕಲ್ಪಿಸಲು ಮುಂದಾಗಿದೆ.

    ಬೆಂಗಳೂರಿನಲ್ಲಿ ಸೋಮವಾರ ನಡೆದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಧ್ಯಮಗೋಷ್ಟಿಯಲ್ಲಿ ಪ್ರಕಟಿಸಿದರಲ್ಲದೆ, 3 ತಿಂಗಳಲ್ಲಿ ಯೋಜನೆ ಸಂಪೂರ್ಣವಾಗಿ ಅನುಷ್ಠಾನವಾಗಲಿದೆ ಎಂದರು.

    146 ತಾಲೂಕು ಹಾಗೂ 16 ಜಿಲ್ಲಾಸ್ಪತ್ರೆಗಳು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಸಮಾನವಾಗಿ ಇನ್ನು 3 ಆಸ್ಪತ್ರೆಗಳ ಸೌಲಭ್ಯಗಳನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸುವ ಕ್ರಿಯಾ ಯೋಜನೆ ಇದು. ಇಡೀ ವ್ಯವಸ್ಥೆಯನ್ನು ತಾಂತ್ರಿಕವಾಗಿ ಸಂಪೂರ್ಣ ಮೇಲ್ದರ್ಜೆಗೇರಿಸಲಾಗುವುದು. ಪ್ರಾಥಮಿಕ ಮಟ್ಟದಿಂದ ಜಿಲ್ಲಾ ಆಸ್ಪತ್ರೆವರೆಗೂ ಆರೋಗ್ಯ ಕ್ಷೇತ್ರದ ಮೂಲಸೌಕರ್ಯದಲ್ಲಿ ಆಮೂಲಾಗ್ರ ಸುಧಾರಣೆ ತರಲಾಗುವುದು. ಪ್ರತೀ ತಾಲೂಕು ಆಸ್ಪತ್ರೆಯಲ್ಲೂ ಒಟ್ಟು 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಇಷ್ಟೂ ಹಾಸಿಗೆಗಳ ಪೈಕಿ 25 ಐಸಿಯು, 25 ಎಚ್‍ಡಿಯು ಹಾಗೂ 50 ಆಕ್ಸಿಜನ್ ಹಾಸಿಗೆಗಳಿರುತ್ತವೆ. ಜೊತೆಯಲ್ಲಿಯೇ ವೆಂಟಿಲೇಟರ್, ಮಾನೀಟರ್‍ಗಳು & ಬೈಪ್ಯಾಪ್ ವ್ಯವಸ್ಥೆ ಇರುವ ಹಾಗೆ ಕ್ರಮ ವಹಿಸಲಾಗುವುದು. ರಿಮೋಟ್ ಐಸಿಯುಗಳ ಜೊತೆಗೆ ಎಲ್ಲ ರೀತಿಯ ಡಯಾಗ್ನಾಸ್ಟಿಕ್ ಸೌಲಭ್ಯವನ್ನೂ ಒದಗಿಸಲಾಗುವುದು. ಈ ಇಡೀ ವ್ಯವಸ್ಥೆಯನ್ನು ನಿರ್ವಹಿಸಲು ಬೇಕಾದ ಎಲ್ಲ ನುರಿತ ಸಿಬ್ಬಂದಿಯನ್ನು ಸಮರೋಪಾದಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಇದನ್ನು ಓದಿ: ಯಾರೂ ರಾಜಕೀಯ ಹೇಳಿಕೆಗಳನ್ನು ನೀಡಕೂಡದು: ಆಪ್ತರಿಗೆ ಸಿಎಂ ಸಂದೇಶ

    ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾಸ್ಪತ್ರೆ ತನಕ ಇಷ್ಟೆಲ್ಲ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಲು ಕೊನೆ ಪಕ್ಷ 4,000 ವೈದ್ಯರ ಅಗತ್ಯವಿದೆ. ಒಬ್ಬ ವೈದ್ಯರಿಗೆ ಮೂವರು ನರ್ಸ್‍ಗಳಂತೆ, ಒಬ್ಬ ವೈದ್ಯರಿಗೆ ಗ್ರೂಪ್ ‘ಡಿ’ ಮೂವರು ಸಿಬ್ಬಂದಿ ಅಗತ್ಯ. ಮೂಲಸೌಲಭ್ಯ ಮತ್ತು ಸಿಬ್ಬಂದಿ ವೇತನ ಸಲುವಾಗಿ 1,500 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ವಾರ್ಷಿಕ 600 ಕೋಟಿ ರೂ. ವೇತನ ಹೊರತುಪಡಿಸಿದರೆ ಮಿಕ್ಕ ಬಹುತೇಕ ವೆಚ್ಚ ಒಮ್ಮೆಯಷ್ಟೇ ಆಗುವಂಥದ್ದು. ಉಳಿದಂತೆ ಕಟ್ಟಡ, ಆಕ್ಸಿಜನ್ ಜನರೇಟರ್, ವೆಂಟಿಲೇಟರ್, ಯಂತ್ರೋಪಕರಣ ಇತ್ಯಾದಿ ಸೇರಿ 800 ಕೋಟಿ ರೂ. ವೆಚ್ಚ ಆಗಲಿದೆ. ಈ ಕುರಿತ ಅಂದಾಜು ವೆಚ್ಚದ ವಿವರಗಳನ್ನು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಭೆಯಲ್ಲಿ ಮಂಡಿಸಿದ್ದು, ಪ್ರಸ್ತಾವನೆಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

    ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ಯಾರೂ ತಮ್ಮ ತಾಲೂಕು ಬಿಟ್ಟು ಆಚೆ ಬರಬಾರದು. ಜಿಲ್ಲಾ ಮಟ್ಟದಲ್ಲೇ 97% ಆರೋಗ್ಯ ಸೇವೆ ಸಿಗಬೇಕು. ಸರಕಾರಿ ಆಸ್ಪತ್ರೆ ಎಂದರೆ, ನಿರ್ವಹಣೆ & ಗುಣಮಟ್ಟದಲ್ಲಿ ಕೊರತೆ ಆಗಬಾರದು. ಇದು ಸರಕಾರದ ಉದ್ದೇಶ. ಇದಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದ್ದು, ಬಿಸಿಜಿ (ಬಾಸ್ಟನ್ ಕನ್ಸಲ್‍ಟಿಂಗ್ ಗ್ರೂಪ್) ನಮಗೆ ಸಿಎಸ್‍ಆರ್ ಮೂಲಕ ಉಚಿತವಾಗಿ ತಾಂತ್ರಿಕ ನೆರವು ನೀಡುತ್ತಿದೆ.

    ಬೆಂಗಳೂರು ನಗರದಲ್ಲೂ ವಿಸ್ತರಣೆ: ಬೆಂಗಳೂರಿನಲ್ಲಿ ಆರೋಗ್ಯ ಮೂಲಸೌಕರ್ಯ ವಿಸ್ತರಿಸಲು ಸ್ಥಳದ ಅಭಾವ ಇದ್ದು, ಹೊಸ ಜಾಗಗಳನ್ನು ಅಥವಾ ಲಭ್ಯ ಸ್ಥಳಗಳನ್ನು ಗುರುತಿಸಲು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಗಿದೆ. ನಗರದ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಅಗಾಧವಾಗಿ ಹೆಚ್ಚಿಸಲಾಗುವುದು. ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಗಳಲ್ಲಿ ಒಳಗೊಳ್ಳದ ನಿತ್ಯದ ಕಾಯಿಲೆಗಳಿಗೂ ಪರಿಣಾಮಕಾರಿ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ 2ನೇ ಹಂತದ ಆಸ್ಪತ್ರೆಗಳನ್ನು ಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗುವುದು. ಈ ಉದ್ದೇಶಕ್ಕೆ ಸ್ಥಳದ ಅಗತ್ಯವಿದೆ. ಒಂದೆರಡು ವಾರದಲ್ಲಿ ಈ ಸಮಿತಿ ವರದಿ ನೀಡಲಿದೆ.

    ಬೆಂಗಳೂರಿನಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೊಂದು 100 ಹಾಸಿಗೆಗಳ ಉತ್ಕøಷ್ಟ ಆಸ್ಪತ್ರೆ ಸ್ಥಾಪನೆ ಮಾಡಲಾಗುತ್ತಿದೆ. ಇಲ್ಲಿಯೂ 25 ಐಸಿಯು, 25 ಎಚ್‍ಡಿಯು ಹಾಗೂ 50 ಆಕ್ಸಿಜನ್ ಹಾಸಿಗೆಗಳಿರುತ್ತವೆ. ಜೊತೆಗೆ, 4 ವಿಧಾನಸಭೆ ಕ್ಷೇತ್ರಗಳಿಗೊಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಸ್ಥಾಪನೆ ಮಾಡಲಾಗುವುದು.

    ವಾರ್ ರೂಂಗೆ ಅನುಸಂಧಾನ: ಕೋವಿಡ್ ನಿರ್ವಹಣೆಯಲ್ಲಿ ಆಪ್ತಮಿತ್ರ, ಟೆಲಿ ಟ್ರಯಾಜಿಂಗ್, ಸುವರ್ಣ ಆರೋಗ್ಯ ಟ್ರಸ್ಟ್ ಸೇರಿ ವಿವಿಧ ನೆಟ್‍ವರ್ಕ್ ಗಳು, ಆಪ್‍ಗಳು ಇತ್ಯಾದಿ ಇದ್ದು ಪ್ರತ್ಯೇಕವಾಗಿ ಕೆಲಸ ಮಾಡುತ್ತಿವೆ. ಇವೆಲ್ಲವನ್ನೂ ಕೋವಿಡ್ ವಾರ್‍ರೂಂಗೆ ಅನುಸಂಧಾನ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಹೊಸ ವ್ಯವಸ್ಥೆಗೆ ವಾರ್ ರೂಂ ಉಸ್ತುವಾರಿಯೇ ಅಧ್ಯಕ್ಷರಾಗುತ್ತಾರೆ. ವಿವಿಧ ಸಮಿತಿಗಳ ಉಸ್ತುವಾರಿ ಹೊಂದಿರುವವರೆಲ್ಲ ವಾರ್ ರೂಂ ಉಸ್ತುವಾರಿ ಸಮಿತಿ ಸದಸ್ಯರಾಗಿರುತ್ತಾರೆ. ಮೂರನೇ ಅಲೆ ಇದೊಂದು ಅತ್ಯುತ್ತಮ ಕ್ರಮವಾಗಿದೆ. ಎರಡು ತಿಂಗಳಲ್ಲಿ ಇದನ್ನು ಮಾಡಲಾಗುವುದು. ಇದನ್ನು ಓದಿ: ಸರ್ಕಾರ ರಚನೆಯಾಗೋದಕ್ಕೆ ನನ್ನದೂ ಅಳಿಲು ಸೇವೆ ಇದೆ : ಸಿ.ಪಿ.ಯೋಗೇಶ್ವರ್

    ಯುವಜನರಿಗೆ ಆರೋಗ್ಯ ಕುಶಲತೆ ತರಬೇತಿ: ಆರೋಗ್ಯ ವ್ಯವಸ್ಥೆ ಅರೆವೈದ್ಯ ಸಿಬ್ಬಂದಿ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಹಯೋಗದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆ ಎಸ್‍ಎಸ್‍ಎಲ್‍ಸಿ-ಪಿಯುಸಿ ವ್ಯಾಸಂಗ ಮಾಡಿರುವ 5,000 ಯುವ ಜನರಿಗೆ 3 ತಿಂಗಳ ಉಚಿತ ತರಬೇತಿಯನ್ನು ಆಯಾ ಜಿಲ್ಲಾ ಕೇಂದ್ರದಲ್ಲೇ ನೀಡಲಾಗುವುದು. ಈ ಸಂದರ್ಭದಲ್ಲಿ ಮಾಸಿಕ 5,000 ಗೌರವ ಧನ ನೀಡಲಾಗುವುದು.

    5 ಲಕ್ಷ ವಯಲ್ಸ್ ರೆಮಿಡಿಸಿವಿರ್ ಸಂಗ್ರಹ: 3ನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ 5 ಲಕ್ಷ ವಯಲ್ಸ್ ರೆಮಿಡಿಸಿವಿರ್ ಔಷಧಿಯನ್ನು ಸಂಗ್ರಹ ಮಾಡಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಸದ್ಯಕ್ಕೆ ನಮ್ಮಲ್ಲಿ 2 ಲಕ್ಷ ವಯಲ್ಸ್ ಸಂಗ್ರಹ ಇದೆ. ಇನ್ನು 2,156 ಕಪ್ಪು ಶಿಲೀಂದ್ರದ ಪ್ರಕರಣಗಳು ವರದಿಯಾಗಿದ್ದು, ಅದಕ್ಕೂ ಔಷಧಿ ಕೊರತೆಯಾಗದಂತೆ ಲೈಸೋಮಲ್ ಆಪ್ತೋಟೆರಿಸಿನ್-ಬಿ ಔಷಧಿಯನ್ನು 23,000 ವಯಲ್ಸ್ ಕೇಂದ್ರ ಒದಗಿಸಿದೆ. ಪ್ರತಿದಿನ 10,000 ವಯಲ್ಸ್ ಅಗತ್ಯವಿದ್ದು, ಇದಕ್ಕೆ ಪರ್ಯಾಯವಾಗಿ ‘ಎಮಲ್ಷನ್‌ ಆಪ್ತೋಮಲ್‌ ಟೆರಿಸನ್-ಬಿ’ ಔಷಧಿಯ 25,000 ವಯಲ್ಸ್ 10ನೇ ತಾರೀಖು ಪೂರೈಕೆಯಾಗಲಿದೆ. ಇದನ್ನು ಓದಿ: ಸಿಎಂ ವಿರುದ್ಧ ಹೇಳಿಕೆ ನೀಡಿದರೆ ಶಿಸ್ತು ಕ್ರಮ: ಆರ್ ಅಶೋಕ್ ಎಚ್ಚರಿಕೆ

    ಖಾಸಗಿ ಆಸ್ಪತ್ರೆ & ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ 7,500 ಸಾಮಾನ್ಯ ಬೆಡ್‍ಗಳನ್ನು ಆಕ್ಸಿಜನ್ ಬೆಡ್‍ಗಳನ್ನಾಗಿ ಪರಿವರ್ತನೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕೆ ಅಗತ್ಯ ಆರ್ಥಿಕಿ ನೆರವು ನೀಡಲಾಗುವುದು.

    ಜುಲೈ ಹೊತ್ತಿಗೆ ರಾಜ್ಯದಲ್ಲಿಯೇ 500 ಮೆಟನ್ ಆಕ್ಸಿಜನ್ ಉತ್ಪಾದನೆಗೆ ಕ್ರಮ ವಹಿಸಲಾಗುವುದು. ಅದಕ್ಕೆ ಬೇಕಾದ ಅಗತ್ಯ ಆಕ್ಸಿಜನ್ ಜನರೇಟರ್‍ಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಕಡೆಯಿಂದ ಒದಗಿಸಲಾಗುವುದು. ಜೊತೆಗೆ, ಜಿಲ್ಲಾಸ್ಪತ್ರೆಗಳಲ್ಲಿ 6 ಕೆಎಲ್ ಆಮ್ಲಜನಕ ಸಂಗ್ರಹ ಸಾಮಥ್ರ್ಯ ಇದ್ದು, ಅದನ್ನು 13 ಕೆಎಲ್‍ಗೆ ಹೆಚ್ಚಿಸಲಾಗುವುದು, ಮೆಡಿಕಲ್ ಕಾಲೇಜ್‍ಗಳಲ್ಲಿ 20 ಕೆಎಲ್ ಸಂಗ್ರಹ ಸಾಮಥ್ರ್ಯದ ಘಟಕಗಳನ್ನು ಸ್ಥಾಪಿಸಲಾಗುವುದು.

    ಇನ್ನು ಲಸಿಕೆ ಖರೀದಿ ಇಲ್ಲ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಎಲ್ಲ ರಾಜ್ಯಗಳಿಗೆ ಕೇಂದ್ರ ಸರಕಾರ ವ್ಯಾಕ್ಸಿನ್ ಪೂರೈಕೆ ಮಾಡಲಿದೆ ಎಂದು ಇಂದು ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಪ್ರಧಾನಿ ಅವರಿಗೆ ಅಭಿನಂದನೆಗಳು. ಇನ್ನು ಮುಂದೆ ರಾಜ್ಯವು ನೇರವಾಗಿ ಲಸಿಕೆ ಖರೀದಿ ಮಾಡಲ್ಲ. ಈಗಾಗಲೇ 3 ಕೋಟಿ ಲಸಿಕೆ ಖರೀದಿಗೆ ಆದೇಶ ನೀಡಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇನ್ನೂ 2 ಕೋಟಿ ಲಸಿಕೆ ಪಡೆಯುವ ಬಗ್ಗೆ ಪ್ರಯತ್ನ ನಡೆದಿತ್ತು. ಈಗ ಅದನ್ನು ಕೈಬಿಡಲಾಗಿದೆ.

    ಈ ತಿಂಗಳಲ್ಲಿಯೇ ಕೇಂದ್ರದ 58 ಲಕ್ಷ ಡೋಸ್ ಕೋವಿಡ್ ಲಸಿಕೆ ಬರಲಿದೆ. ಖಾಸಗಿ ಕ್ಷೇತ್ರದಿಂದಲೂ 20 ಲಕ್ಷ ಡೋಸ್ ಲಭ್ಯವಾಗುತ್ತಿದೆ. ಜೂನ್ ತಿಂಗಳೊಂದರಲ್ಲೇ ರಾಜ್ಯಕ್ಕೆ 80 ಲಕ್ಷ ಡೋಸ್ ಲಸಿಕೆ ಸಿಗಲಿದೆ. ಈ ಲೆಕ್ಕದ ಪ್ರಕಾರ ಪ್ರತೀ ದಿನ 6 ಲಕ್ಷ ಜನರಿಗೆ ಲಸಿಕೆ ನೀಡಲು ಸಾಧ್ಯವಿದೆ. ಅದಕ್ಕೆ ಅಗತ್ಯವಾದ ಕ್ರಮ ಸರಕಾರ ವಹಿಸಲಿದೆ. ಇದನ್ನು ಓದಿ: ಜೂನ್ 21ರಿಂದ ಕೇಂದ್ರದಿಂದ ಎಲ್ಲರಿಗೂ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ

    ಕಾರ್ಯಪಡೆ ಸದಸ್ಯರಾದ ಸಚಿವ ಸಿಸಿ ಪಾಟೀಲ್, ಡಾ.ಕೆ.ಸುಧಾಕರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

  • ರಾಮನಗರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‍ನ 6 ಪ್ರಕರಣ ಪತ್ತೆ: ಡಿಸಿಎಂ

    ರಾಮನಗರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‍ನ 6 ಪ್ರಕರಣ ಪತ್ತೆ: ಡಿಸಿಎಂ

    – ಒಂದು ವಾರದಲ್ಲಿ ಕಪ್ಪು ಶಿಲೀಂಧ್ರಕ್ಕೆ ಔಷಧಿ ಕೊರತೆ ನಿವಾರಣೆ

    ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‍ನ ಆರು ಪ್ರಕರಣಗಳು ಪತ್ತೆಯಾಗಿದ್ದು, ಐವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮತ್ತು ಇನ್ನೊಬ್ಬರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಕೋವಿಡ್ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಘಟಕ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಬುಧವಾರ ಹಮ್ಮಿಕೊಳ್ಳಲಾಗಿದ್ದ ಆನ್‍ಲೈನ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್‍ಗೆ ಔಷಧಿ ಕೊರತೆ ಇದೆ. ಇನ್ನೊಂದು ವಾರದಲ್ಲಿ ಈ ಎಲ್ಲ ಕೊರತೆಯನ್ನೂ ನೀಗಿಸಲಾಗುವುದು. ರಾಮನಗರವೂ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಔಷಧಿಯನ್ನು ಒದಗಿಸಲಾಗುವುದು ಎಂದರು.

    ಕೋವಿಡ್ ಕೇರ್‌ಗಳಲ್ಲಿ 1,891 ಸೋಂಕಿತರು: ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದ್ದು, ಪಾಸಿಟಿವಿಟಿ ದರವೂ ಕಡಿಮೆ ಇದೆ. ಅದಕ್ಕೆ ಪೂರಕವಾಗಿ ಜಿಲ್ಲಾ ಕೇಂದ್ರ ಮತ್ತು ತಾಲೂಕು ಮಟ್ಟದಲ್ಲಿಯೂ ಉತ್ತಮ ಚಿಕಿತ್ಸೆ ಲಭ್ಯವಾಗುತ್ತಿದೆ. ಒಂದು ವಾರದಿಂದ ಹೋಂ ಐಸೋಲೇಷನ್ ಮಾಡುವುದನ್ನು ನಿಲ್ಲಿಸಲಾಗಿದೆ. ಈಗ ಕನಿಷ್ಠ ಒಬ್ಬರೂ ಹೋಂ ಐಸೋಲೇಷನ್‍ನಲ್ಲಿ ಇಲ್ಲ. ಇಡೀ ಜಿಲ್ಲೆಯಲ್ಲಿ ಈಗ 1,891 ಸೋಂಕಿತರು ಕೋವಿಡ್  ಕೇರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಹೊಸದಾಗಿ 191 ಸೋಂಕಿತರನ್ನು ಕೋವಿಡ್ ಕೇರ್‌ಗಳಿಗೆ ಶಿಫ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಉಳಿದಂತೆ ಜಿಲ್ಲೆಯಲ್ಲಿ ಸರಾಸರಿ ದಿನಕ್ಕೆ 252 ಜನರಿಗೆ ಸೋಂಕು ತಗುಲುತ್ತಿದೆ. ಈ ಪ್ರಮಾಣಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಚಿಕಿತ್ಸೆ, ಔಷಧಿ, ಆಕ್ಸಿಜನ್, ಐಸಿಯು ಬೆಡ್, ವೆಂಟಿಲೇಟರ್‌ಗಳಿಗೆ ಕೊರತೆ ಇಲ್ಲ. ಅಲ್ಲದೆ, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿಯೇ ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಲ್ಯಾಬ್‍ಗಳಿಂದ 24 ಗಂಟೆಯೊಳಗೇ ವರದಿಗಳು ಬರುತ್ತಿವೆ. ಹೀಗಾಗಿ ಸಕಾಲದಲ್ಲಿ ಚಿಕಿತ್ಸೆ ಆರಂಭವಾಗಿ ಪ್ರಾಣ ನಷ್ಟ ತಪ್ಪುತ್ತಿದೆ. ಇಡೀ ರಾಜ್ಯದಲ್ಲಿಯೇ ರಾಮನಗರ ಜಿಲ್ಲೆಯಲ್ಲಿ ಕೋವಿಡ್ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದರು.

    ಮೇ 30ರಂದು ಸೇವಾ ಕಾರ್ಯಕ್ರಮ: ಇದೇ ಮೇ 30 ರಂದು ಕೇಂದ್ರದ ನರೇಂದ್ರ ಮೋದಿ ಅವರ 2ನೇ ಅವಧಿಯ ಸರಕಾರ ಎರಡು ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಕಾಲಿಡಲಿದೆ. ಜಿಲ್ಲೆಯಲ್ಲಿ ಅಂದು ಅದ್ಧೂರಿ ಕಾರ್ಯಕ್ರಮಗಳು ಬೇಡ. ಅದರ ಬದಲಿಗೆ ಕೋವಿಡ್ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಸೇವೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

    ಬೂತ್, ಪಂಚಾಯಿತಿ ಮಟ್ಟದಲ್ಲಿ ತಂಡಗಳನ್ನು ರಚನೆ ಮಾಡಿಕೊಂಡು ದಿನವಿಡೀ ಸೇವಾ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯವಾಗಿ ಕೋವಿಡ್‍ನಿಂದ ಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವು ಕೊಡುವುದೇ ಮೂಲೋದ್ದೇಶವಾಗಿದೆ. ಇದರಲ್ಲಿ ಎಲ್ಲ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು ಭಾಗಿಯಾಗಬೇಕು ಎಂಬ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

    ಬಿಜೆಪಿ ರಾಮನಗರ ಜಿಲ್ಲಾಧ್ಯಕ್ಷ ಹುಲವಾಡಿ ರಮೇಶ್, ಸಂಘಟನಾ ಕಾರ್ಯದರ್ಶಿ ಕಾಂತರಾಜ್, ಮಂಡಲಾಧ್ಯಕ್ಷ ಧನಂಜಯ್ ಸೇರಿದಂತೆ ಎಲ್ಲ ತಾಲ್ಲೂಕುಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.

  • ಟೆಲಿಕನ್ಸಲ್‍ಟೆನ್ಸಿಗೆ ಬಾರದ ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿಗಳ ಬಗ್ಗೆ ಡಿಸಿಎಂ ಗರಂ

    ಟೆಲಿಕನ್ಸಲ್‍ಟೆನ್ಸಿಗೆ ಬಾರದ ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿಗಳ ಬಗ್ಗೆ ಡಿಸಿಎಂ ಗರಂ

    -ಸ್ಟೆಪ್‍ಡೌನ್ ವ್ಯವಸ್ಥೆಯನ್ನು ಅವಲೋಕನ ಮಾಡಿದ ಡಾ.ಅಶ್ವತ್ಥನಾರಾಯಣ

    ಬೆಂಗಳೂರು: ಕೋವಿಡ್ ಹೋಮ್ ಐಸೋಲೇಷನ್ ವ್ಯವಸ್ಥೆಯಲ್ಲಿ ಟೆಲಿಕನ್ಸಲ್‍ಟೆನ್ಸಿ ಮೂಲಕ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಸ್ಟೆಪ್‍ಡೌನ್ ವ್ಯವಸ್ಥೆಯನ್ನು ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರೂ ಆದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವಲೋಕನ ಮಾಡಿದರು.

    ಇದೇ ವೇಳೆ ಟೆಲಿಕನ್ಸಲ್‍ಟೆನ್ಸಿ ಮೂಲಕ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದೆ ಬಾರದ, ಸೇವಾ ಮನೋಭಾವ ಮರೆತ ವೈದ್ಯಕೀಯ ವಿದ್ಯಾರ್ಥಿಗಳ ವರ್ತನೆಗೆ ಡಿಸಿಎಂ ಅತೀವ ಬೇಸರ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲಿ ಮಂಗಳವಾರ ವರ್ಚುಯಲ್ ವೇದಿಕೆ ಮೂಲಕ ಸ್ಟೆಪ್‍ಡೌನ್ ವ್ಯವಸ್ಥೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮೊದಲ ಅಲೆ ಬಂದಾಗ ತೀವ್ರ ಆಕ್ಷೇಪಕ್ಕೆ ಗುರಿಯಾಗಿದ್ದ  ಆತಂಕಕ್ಕೂ ಕಾರಣವಾಗಿದ್ದ ಹೋಮ್ ಐಸೋಲೇಷನ್ ವ್ಯವಸ್ಥೆ ಎರಡನೇ ಅಲೆಯ ಹೊತ್ತಿಗೆ ಆಪ್ತರಕ್ಷಕನಂತೆ ಬದಲಾಗಿದೆ. ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 10,000ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ಹಾಗೂ 800ಕ್ಕೂ ಹೆಚ್ಚು ತಜ್ಞ ವೈದ್ಯರನ್ನು ಮನಸಾರೆ ಅಭಿನಂದಿಸುವೆ ಎಂದರು.

    ವೈದ್ಯ ಸೇವೆ ಎಂದರೆ ಸಂಕಷ್ಟ ಕಾಲದಲ್ಲಿ ಜನರ ಸೇವೆಗೆ ಧಾವಿಸುವುದೇ ಹೊರತು ಪಲಾಯನ ಮಾಡುವುದಲ್ಲ. ಕೋವಿಡ್ ಸೋಂಕಿತರಿಗೆ ಟೆಲಿಕನ್ಸಲ್‍ಟೆನ್ಸಿ ಮೂಲಕ ಸ್ಟೆಪ್‍ಡೌನ್ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಅಂತಿಮ ವರ್ಷದ ಎಲ್ಲ ವೈದ್ಯ ವಿದ್ಯಾರ್ಥಿಗಳನ್ನು ನಿಯೋಜನೆ ಮಾಡುವಂತೆ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರನ್ನು ಕೋರಲಾಗಿತ್ತು. ಆದರೆ, ಕಡಿಮೆ ಪ್ರಮಾಣದ ವಿದ್ಯಾರ್ಥಿಗಳು ಬಂದು ಕೆಲಸ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದ ವಿದ್ಯಾರ್ಥಿಗಳು ಹೊರಗೆ ಉಳಿದಿದ್ದಾರೆ. ಇದು ಬೇಸರದ ಸಂಗತಿ ಎಂದು ಹೇಳಿದರು.

    ಕೇವಲ ಸೋಂಕಿತರಿಗೆ ಕರೆ ಮಾಡಿ ವೈದ್ಯಕೀಯ ಸಲಹೆ ನೀಡಲು ಹಿಂದೆ-ಮುಂದೆ ನೋಡುತ್ತಿರುವ ವಿದ್ಯಾರ್ಥಿಗಳು ಸಮಾಜಕ್ಕೆ ಯಾವ ಸಂದೇಶ ನೀಡಲಿದ್ದಾರೆ. ನಮ್ಮ ಭವಿಷ್ಯದ ಕಥೆ ಏನು? ಎಂದು ಬೇಸರ ವ್ಯಕ್ತಪಡಿಸಿದರು.

    ಹೋಮ್ ಐಸೋಲೇಷನ್ ಅತಿದೊಡ್ಡ ಪರಿಹಾರ: ಕೋವಿಡ್ ಸಂದರ್ಭದಲ್ಲಿ ಹೋಮ್ ಐಸೋಲೇಷನ್ ಎನ್ನುವುದು ಅತಿದೊಡ್ಡ ಪರಿಹಾರವಾಗಿದೆ. ಬೆಂಗಳೂರಿನಂಥ ನಗರದಲ್ಲಿ ಎಲ್ಲರನ್ನೂ ಆಸ್ಪತ್ರೆಗೆ ಕರೆತಂದು ನಿರ್ವಹಣೆ ಮಾಡೋದು ಬಹಳ ಕಷ್ಟ ಎಂದ ಡಿಸಿಎಂ, ಈ ವ್ಯವಸ್ಥೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದರು.

    ಎರಡನೇ ಅಲೆ ಬಂದ ಮೇಲೆ ಈವರೆಗೆ 3.6 ಲಕ್ಷ ಜನ ಸೋಂಕಿತರಿಗೆ ಸೇವೆ ಒದಗಿಸಲಾಗಿದೆ. ಇದುವರೆಗೆ 6 ಲಕ್ಷ ಮ್ಯಾನುಯಲ್ ಕಾಲ್‍ಗಳನ್ನು ಮಾಡಲಾಗಿದೆ. 5 ಲಕ್ಷಕ್ಕೂ ಹೆಚ್ಚು ಎಸ್ ಎಂಎಸ್ ಸಂದೇಶಗಳ ಮೂಲಕ ವೈದ್ಯಕೀಯ ಸಲಹೆ ನೀಡಲಾಗಿದೆ. 8,000 ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ  ರೆಫರ್ ಮಾಡಲಾಗಿದ್ದು, 4,700 ಸೋಂಕಿತರನ್ನು ಆಸ್ಪತ್ರೆಗಳಿಗೆ ಕಳಿಸಲಾಗಿದೆ. ಇನ್ನು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ 1,000ಕ್ಕೂ ಹೆಚ್ಚು ಸೋಂಕಿತರನ್ನು ತಕ್ಷಣವೇ ಆಂಬುಲೆನ್ಸ್ ವ್ಯವಸ್ಥೆ ಮಾಡಿ ತುರ್ತಾಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

    ಈ ನೆಟ್‍ವರ್ಕ್‍ನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳ ಜತೆಗೆ 800ಕ್ಕೂ ಹೆಚ್ಚು ವೈದ್ಯರು ಕೆಲಸ ಮಾಡುತ್ತಿದ್ದಾರೆ. ವೈದ್ಯಕೀಯ ಮಾನವ ಸಂಪನ್ಮೂಲ ಹಾಗೂ ತಂತ್ರಜ್ಞಾನವನ್ನು ಒಟ್ಟಾಗಿಸಿಕೊಂಡು ಈ ಕೆಲಸ ಮಾಡಲಾಗುತ್ತಿದೆ. ಅನೇಕ ಜೀವಗಳನ್ನು ಉಳಿಸಿದ ತೃಪ್ತಿ ಸರಕಾರಕ್ಕಿದೆ. ಇದರ ಶ್ರೇಯಸ್ಸು ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳೂ ಉಳಿದೆಲ್ಲರಿಗೂ ಸಲ್ಲುತ್ತದೆ ಎಂದರು.

    ಮೊದಲ ಅಲೆ ಬಂದಾಗ ಹೋಮ್ ಐಸೋಲೇಷನ್‍ಗೆ ಅವಕಾಶ ಕೊಡಬೇಕೋ ಬೇಡವೋ ಎಂಬ ಗೊಂದಲವಿತ್ತು. ಅದಕ್ಕೆ ಆಕ್ಷೇಪವೂ ಇತ್ತು. ಎರಡನೇ ಅಲೆಯಲ್ಲಿ ಈ ವ್ಯವಸ್ಥೆ ಅತ್ಯುತ್ತವಾಗಿ ಕೆಲಸ ಮಾಡಿದೆ. ಸ್ಟೆಪ್ ಒನ್ ಅನ್ನುವ ಸಂಸ್ಥೆ ಮುಂದೆ ಬಂದು ಇಡೀ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ರೂಪಿಸಿದೆ ಎಂದು ನುಡಿದರು.

    ಹಳ್ಳಿ ಕಡೆ ಹೋಮ್ ಐಸೋಲೇಷನ್ ಇಲ್ಲ: ಗ್ರಾಮೀಣ ಭಾಗದಲ್ಲಿ ಈಗ ಹೋಮ್ ಐಸೋಲೇಷನ್ ವ್ಯವಸ್ಥೆಯನ್ನೂ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಎಲ್ಲರನ್ನೂ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಬೇಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ಕೋವಿಡ್ ಕೇರ್ ಸೆಂಟರ್‍ಗಳನ್ನು ಮಾಡಲಾಗಿದೆ. ಕೋವಿಡ್ ನಿರ್ವಹಣೆ ವ್ಯವಸ್ಥೆಯನ್ನು ವಿಕೇಂದ್ರೀಕರಣ ಮಾಡಿ ತಾಲೂಕು ಮಟ್ಟದಲ್ಲಿಯೇ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯ ಸನಿಹದಲ್ಲಿ ಅಥವಾ ಅವರ ತಾಲೂಕಿನಲ್ಲಿಯೇ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

    ವರ್ಚುಯಲ್ ಸಭೆಯಲ್ಲಿ ಹೋಮ್ ಹೈಸೋಲೇಷನ್ ಉಸ್ತುವಾರಿ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರು ಸ್ಟೆಪ್‍ಡೌನ್ ವ್ಯವಸ್ಥೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿರುವ 10 ವೈದ್ಯರು ಮತ್ತು 10 ವೈದ್ಯ ವಿದ್ಯಾರ್ಥಿಗಳ ಹೆಸರುಗಳನ್ನು ಓದಿದರು. ಅವರ ಸೇವೆಯನ್ನು ಡಿಸಿಎಂ ಶ್ಲಾಘಿಸಿದರು.

  • ಡಿಸಿಎಂ ಹೇಳಿದ ಮರುದಿನವೇ ಹಾಸನಕ್ಕೆ 30 ವೆಂಟಿಲೇಟರ್, 25 ಆಮ್ಲಜನಕ ಸಾಂದ್ರಕ

    ಡಿಸಿಎಂ ಹೇಳಿದ ಮರುದಿನವೇ ಹಾಸನಕ್ಕೆ 30 ವೆಂಟಿಲೇಟರ್, 25 ಆಮ್ಲಜನಕ ಸಾಂದ್ರಕ

    -ವೆಂಟಿಲೇಟರ್ ಗಳು ಹಾಸನ ತಲುಪುವವರೆಗೂ ಫಾಲೋಅಪ್ ಮಾಡಿದ ಡಾ.ಅಶ್ವತ್ಥನಾರಾಯಣ

    ಹಾಸನ: ಹಾಸನ ಜಿಲ್ಲೆಯ ಪ್ರವಾಸದ ವೇಳೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣರವರು ಶನಿವಾರ ಹೇಳಿದ್ದಂತೆ ಕೋವಿಡ್ ಸೋಂಕಿತರಿಗೆ ಬಳಕೆ ಮಾಡಲು 30 ವೆಂಟಿಲೇಟರ್‍ಗಳನ್ನು ಕಳಿಸಿಕೊಡಲಾಯಿತು. ಇದರ ಜತೆಗೆ 25 ಆಮ್ಲಜನಕ ಸಾಂದ್ರಕಗಳನ್ನೂ ಕಳುಹಿಸಿಕೊಟ್ಟರು.

    ಇವೆಲ್ಲವೂ ಭಾನುವಾರ ಮಧ್ಯಾಹ್ನದ ಹೊತ್ತಿಗೆ ಹಾಸನ ಜಿಲ್ಲಾಡಳಿತವನ್ನು ತಲುಪಿವೆ. ಶನಿವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಜಿಲ್ಲಾಧಿಕಾರಿಗಳೂ ಸೇರಿದಂತೆ ಜನ ಪ್ರತಿನಿಧಿಗಳು ಕೂಡ ವೆಂಟಿಲೇಟರ್ ಹಾಗೂ ಆಮ್ಲಜನಕ ಸಾಂದ್ರಕಗಳ ಕೊರತೆಯಾಗಿರುವ ಅಂಶವನ್ನು ಡಿಸಿಎಂ ಗಮನಕ್ಕೆ ತಂದಿದ್ದರು. ಕಾರಣಾಂತರಗಳಿಂದ ಜಿಲ್ಲೆಗೆ ವೆಂಟಿಲೇಟರ್‌ಗಳನ್ನು ಒದಗಿಸುವುದು ವಿಳಂಬವಾಗಿತ್ತು.

    ಈ ವಿಷಯ ಹಾಸನದ ಕೋವಿಡ್ ಪರಿಶೀಲನೆ ಸಭೆಯಲ್ಲಿ ಪ್ರಸ್ತಾಪ ಆದ ಕ್ಷಣವೇ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ಕರೆ ಮಾಡಿದ ಡಿಸಿಎಂ ತಕ್ಷಣವೇ ಜಿಲ್ಲೆಗೆ ಅಗತ್ಯ ಇರುವಷ್ಟು ವೆಂಟಿಲೇಟರ್‌ಗಳನ್ನು ಒದಗಿಸುವಂತೆ ಸೂಚಿಸಿದ್ದರು.

    ಅಲ್ಲದೆ, ಸಭೆ ಮುಗಿಸಿಕೊಂಡು ಬೆಂಗಳೂರಿಗೆ ಹೊರಟ ಡಿಸಿಎಂ, ಮಾರ್ಗ ಮಧ್ಯೆಯೇ ಮತ್ತೊಮ್ಮೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ಕೊಟ್ಟರು. ವೆಂಟಿಲೇಟರ್‌ಗಳು ಅವು ಬೆಂಗಳೂರಿನಿಂದ ಹಾಸನ ತಲುಪುವ ತನಕ ನಿರಂತರ ಫಾಲೋಅಪ್ ಮಾಡಿದರು.

    ವೆಂಟಿಲೇಟರ್‌ಗಳು ಬಹಳ ಮುಖ್ಯ: ಈ ಬಗ್ಗೆ ಪ್ರತಿಕ್ರಿಯಿಸಿದ ಡಾ.ಅಶ್ವತ್ಥನಾರಾಯಣ ಅವರು, “ಕೋವಿಡ್ ನಂಥ ಸೋಂಕಿಗೆ ತುತ್ತಾದವರಿಗೆ ವೆಂಟಿಲೇಟರ್‍ಗಳ ಅಗತ್ಯ ಹೆಚ್ಚಾಗಿರುತ್ತದೆ. ಸ್ಥಳೀಯ ಮಟ್ಟದಲ್ಲೇ ಜೀವ ಉಳಿಸಬಹುದು. ಶನಿವಾರ ಹಾಸನ ಜಿಲ್ಲೆಯ ಪರಿಸ್ಥಿತಿ ಪರಿಶೀಲನೆ ಮಾಡಿದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ಪರಿಸ್ಥಿತಿಯ ತೀವ್ರತೆ ಗೊತ್ತಾಯಿತು. ಇಪ್ಪತ್ತನಾಲ್ಕು ಗಂಟೆಗಳಲ್ಲಿಯೇ 30 ವೆಂಟಿಲೇಟರ್‌ಗಳನ್ನು ಹಾಸನಕ್ಕೆ ಕಳಿಸಿಕೊಟ್ಟಿದ್ದೇವೆ. ಇಂಥ ಸಂಕಷ್ಟ ಸಮಯದಲ್ಲಿ ಕ್ಷಿಪ್ರವಾಗಿ ಕೆಲಸ ಮಾಡಬೇಕಾದುದು ನಮ್ಮೆಲ್ಲರ ಜವಾಬ್ದಾರಿ” ಎಂದರು.

  • ರಾಮನಗರ ಜಿಲ್ಲೆ ಕೋವಿಡ್ ಸ್ಥಿತಿಗತಿ ಅವಲೋಕಿಸಿದ ಅಶ್ವತ್ಥನಾರಾಯಣ

    ರಾಮನಗರ ಜಿಲ್ಲೆ ಕೋವಿಡ್ ಸ್ಥಿತಿಗತಿ ಅವಲೋಕಿಸಿದ ಅಶ್ವತ್ಥನಾರಾಯಣ

    – ಸೋಂಕು ತಡೆಗಟ್ಟಲು ಜಿಲ್ಲಾಡಳಿತಕ್ಕೆ 3 ಅಂಶಗಳ ಸೂತ್ರ ಸೂಚಿಸಿದ ಡಿಸಿಎಂ

    ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಮೂರು ಅಂಶಗಳ ಸೂತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣರವರು ಸೂಚಿಸಿದ್ದು, ಅದರ ಪ್ರಕಾರ ಅತ್ಯಂತ ಕ್ರಮಬದ್ಧವಾಗಿ ಕೋವಿಡ್ ಸ್ಥಿತಿಯನ್ನು ನಿರ್ವಹಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

    ಜಿಲ್ಲೆಯ ಸಂಸದರು, ಶಾಸಕರು, ಎಲ್ಲ ಚುನಾಯಿತ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳನ್ನು ಒಳಗೊಂಡ ವರ್ಚುಯಲ್ ಸಭೆಯ ಮೂಲಕ ಶುಕ್ರವಾರ ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಅವಲೋಕನ ಮಾಡಿದ ಡಿಸಿಎಂ, ಕ್ಷಿಪ್ರವಾಗಿ ಸೋಂಕಿತರನ್ನು ಪತ್ತೆ ಹಚ್ಚಿ ಕೋವಿಡ್ ಪರೀಕ್ಷೆ ಮಾಡುವುದು, ಕ್ಷಿಪ್ರವಾಗಿ ಫಲಿತಾಂಶ ನೀಡುವುದು ಹಾಗೂ ಪಾಸಿಟಿವ್ ಬಂದರೆ ಅಷ್ಟೇ ಕ್ಷಿಪ್ರವಾಗಿ ಚಿಕಿತ್ಸೆ ಆರಂಭಿಸುವ ಮೂರು ಅಂಶಗಳ ಸೂತ್ರವನ್ನು ತಿಳಿಸಿದರು.

    ಇದರ ಜೊತೆಗೆ ಲಸಿಕೆ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸುವಂತೆ ಡಿಸಿಎಂ ಸೂಚಿಸಿದರು. ಸರಕಾರದ ಮಾರ್ಗಸೂಚಿಯಂತೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ತಪ್ಪದೇ ಲಸಿಕೆ ಕೊಡಬೇಕು. ಅದಕ್ಕೆ ಬೇಕಾದ ಎಲ್ಲ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಜ್ವರ, ಶೀತ ಇದ್ದರೆ ಕೋವಿಡ್ ಪರೀಕ್ಷೆ ಮಾಡಿ: ಯಾರಿಗೆ ಆಗಲಿ ಜ್ವರ, ಶೀತ, ಕೆಮ್ಮು ಇತ್ಯಾದಿ ರೋಗ ಲಕ್ಷಣಗಳಿದ್ದರೆ ಕೂಡಲೇ ಅಂಥವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಅಥವಾ ಅಂಥವರು ಯಾರಾದರೂ ಇದ್ದರೆ ನಿರ್ಲಕ್ಷ್ಯ ಮಾಡದೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಲ ಗಂಟೆಗಳಲ್ಲೇ ವರದಿ ಕೊಡುವುದರ ಜೊತೆಗೆ, ಯಾವುದೇ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಅಂತ ಗೊತ್ತಾದ ತಕ್ಷಣವೇ ಚಿಕಿತ್ಸೆ ಶುರು ಮಾಡಬೇಕು. ಸಿಮ್‍ಟ್ಯಾಮಿಕ್ ಅಥವಾ ಎ ಸಿಮ್‍ಟ್ಯಾಮಿಕ್ ಅಂತ ವಿಂಗಡಣೆ ಮಾಡುವುದು ಬೇಡ. ಸೋಂಕು ಬಂದ ತಕ್ಷಣ ಚಿಕಿತ್ಸೆ ನೀಡಿದರೆ ರೋಗವು ಉಲ್ಬಣ ಸ್ಥಿತಿಗೆ ಹೋಗುವುದಿಲ್ಲ. ಆಗ ಆಸ್ಪತ್ರೆ, ಐಸಿಯು, ಆಕ್ಸಿಜನ್ ಮುಂತಾದವು ಬೇಕಾಗುವುದಿಲ್ಲ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಈ ಸೂತ್ರದಂತೆ ಕೆಲಸ ಮಾಡಿದರೆ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಆಗ ಮಾತ್ರ ಯಾವುದೇ ಸಾವು-ನೋವು ಉಂಟಾಗುವುದಿಲ್ಲ. ಇದನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿದರು.

    ಸಿಬ್ಬಂದಿ ಕೊರತೆ ಆಗಬಾರದು: ಶಾಸಕ ರವಿ ಸಿಬ್ಬಂದಿ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಉತ್ತರ ನೀಡಿದ ಡಿಸಿಎಂ ಅವರು, ಕೂಡಲೇ ಅಗತ್ಯ ಇರುವ ಕಡೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಸಂಪನ್ಮೂಲ ಕೊರತೆ ಕಂಡು ಬಂದರೆ ವಿಪತ್ತು ನಿರ್ವಹಣಾ ನಿಧಿಯಿಂದ ಖರ್ಚು ಮಾಡಿ ಎಂದು ಸಲಹೆ ನೀಡಿದರು. ಸಾಧ್ಯವಾದಷ್ಟು ಜನಪ್ರತಿನಿಧಿಗಳು ಸಲಹೆ ಸಹಕಾರ ಪಡೆದುಕೊಳ್ಳಿ. ಅವರು ಎತ್ತುವ ಆಕ್ಷೇಪಗಳಿಗೆ ಕಿವಿಗೊಡಿ. ಸಮಸ್ಯೆಗಳ ಬಗ್ಗೆ ತಿಳಿಸಿದರೆ ಕೂಡಲೇ ಅದನ್ನು ಬಗೆಹರಿಸಿ ಎಂದು ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

    ಕೋವಿಡ್ ನಿರ್ವಹಣೆಯಲ್ಲಿ ಮೊದಲಿನಿಂದಲೂ ರಾಮನಗರ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ. ಈಗಲೂ ಉತ್ತಮ ನಿರ್ವಹಣೆ ಇದೆ. ದಿನಕ್ಕೆ 1050 ರಿಂದ 1100 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಸಂಖ್ಯೆಯನ್ನು ಹೆಚ್ಚಿಸಲು ಸೂಚಿಸಿದ್ದೇನೆ. ಹಾಗೆಯೇ, ಜಿಲ್ಲೆಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇಲ್ಲ. ದಯಾನಂದ ಸಾಗರ್ ಮೆಡಿಕಲ್ ಕಾಲೇಜ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್‍ನಲ್ಲಿ ಬೆಡ್‍ಗಳು ಸಾಕಷ್ಟು ಲಭ್ಯ ಇವೆ. ಸರಕಾರವು ಕೂಡ ಜಿಲ್ಲಾ ಕೇಂದ್ರದಲ್ಲಿ ಕೋವಿಡ್ ಆಸ್ಪತ್ರೆ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

    ಜಿಲ್ಲೆಯಲ್ಲಿ ಯಾವುದೇ ಸಾವು ಆದರೂ ತಪ್ಪದೇ ಶವ ಪರೀಕ್ಷೆ ಮಾಡಿ. ಅವರು ಯಾವ ಕಾರಣಕ್ಕೆ ಸತ್ತರು ಎಂಬ ಮಾಹಿತಿ ನಮ್ಮಲ್ಲಿರುತ್ತದೆ. ಜೊತೆಗೆ, ಕೋವಿಡ್ ಕೇರ್ ಸೆಂಟರ್‍ಗಳಿಗೆ ಎಲ್ಲರೂ ತಪ್ಪದೇ ಭೇಟಿ ನೀಡಿ ಎಂದರು.

    ಲಸಿಕೆ ಪಡೆಯಲು ಮನವೊಲಿಸಿ: ಅಲ್ಪಸಂಖ್ಯಾತ ಸಮುದಾಯದವರೂ ಸೇರಿ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ದೂರುಗಳು ಬಂದಿವೆ. ಅವರನ್ನು ಮನವೊಲಿಸಿ ಲಸಿಕೆ ಪಡೆಯುವಂತೆ ಮಾಡಿ. ಅದಕ್ಕೆ ಚುನಾಯಿತ ಪ್ರತಿನಿಧಿಗಳ ಸಹಕಾರ ಪಡೆಯಿರಿ. ಯಾವ ಕಾರಣಕ್ಕೂ ಲಸಿಕೆ ಅಭಿಯಾನ ವ್ಯತ್ಯಾಸ ಆಗಬಾರದು ಎಂದು ಡಿಸಿಎಂ ನಿರ್ದೇಶನ ನೀಡಿದರು.

    ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಕೆಲ ಉತ್ತಮ ಸಲಹೆಗಳನ್ನು ನೀಡಿದ್ದು, ಅವುಗಳನ್ನು ಕೂಡ ಜಾರಿಗೆ ತರಲಾಗುವುದು ಎಂದು ಡಿಸಿಎಂ ಹೇಳಿದರು. ಸದ್ಯಕ್ಕೆ ರಾಮನಗರ ಜಿಲ್ಲಾ ಕೇಂದ್ರದಲ್ಲಿಯೇ ಕೋವಿಡ್ ಟೆಸ್ಟ್‍ಗಳನ್ನು ಮಾಡಲಾಗುತ್ತಿದೆ. ಅಲ್ಲಿ ಯಾವುದೇ ಕೊರತೆ ಇಲ್ಲ. ತಮ್ಮಲ್ಲಿ ರೋಗ ಲಕ್ಷಣಗಳಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ತಡ ಮಾಡಬಾರದು. ಎಲ್ಲೆಲ್ಲಿ ಪರೀಕ್ಷೆ ಮಾಡಲಾಗುತ್ತದೆ ಎಂಬ ವಿವರಗಳನ್ನು ಜನರಿಗೆ ವ್ಯಾಪಕವಾಗಿ ತಿಳಿಸುವಂತೆ ಸೂಚಿಸಿದ್ದೇನೆ ಎಂದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಜಿಲ್ಲೆಯ ಕೋವಿಡ್ ನಿರ್ವಹಣೆ ಬಗ್ಗೆ ಪವರ್ ಪಾಯಿಂಟ್ ಪ್ರಸೆಂಟೇಶನ್ ನೀಡಿದರು.

    ಸಂಸದ ಡಿ.ಕೆ.ಸುರೇಶ್, ಶಾಸಕಿ ಅನಿತಾ ಕುಮಾರಸ್ವಾಮಿ, ಮಂಜುನಾಥ, ರವಿ, ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್, ಡಿಎಚ್‍ಒ ಡಾ.ನಿರಂಜನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.