Tag: ಪಬ್ಲಿಕ್ ಟಿವಿ Davangere

  • ಲಸಿಕೆ ಹಾಕಿಸಿಕೊಳ್ಳದಿದ್ದರೆ ಸರ್ಕಾರಿ ಸೌಲಭ್ಯ ಕಡಿತ – ಡಿಸಿ ಖಡಕ್ ಎಚ್ಚರಿಕೆ

    ಲಸಿಕೆ ಹಾಕಿಸಿಕೊಳ್ಳದಿದ್ದರೆ ಸರ್ಕಾರಿ ಸೌಲಭ್ಯ ಕಡಿತ – ಡಿಸಿ ಖಡಕ್ ಎಚ್ಚರಿಕೆ

    ದಾವಣಗೆರೆ: ಇಡೀ ದೇಶದಲ್ಲಿ ಈಗಾಗಲೇ ಹೆಲ್ತ್ ಕೇರ್ ವರ್ಕರ್ಸ್ ಹಾಗೂ ಕೊರೊನಾ ವಾರಿಯರ್ಸ್ ಲಸಿಕೆಯನ್ನು ನೀಡುತ್ತಿದ್ದ ಆರೋಗ್ಯ ಸಿಬ್ಬಂದಿ ದಾವಣಗೆರೆಯಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅಂಥವರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಕೋವಿಡ್ ಲಸಿಕೆಯನ್ನು ಇದುವರೆಗೂ ಹಾಕಿಸಿಕೊಳ್ಳದ ಆರೋಗ್ಯ ಕ್ಷೇತ್ರ ಹಾಗೂ ಕೊರೊನಾ ವಾರಿಯರ್ಸ್ ಲಸಿಕಾ ಕೇಂದ್ರಕ್ಕೆ ತೆರಳಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ತಪ್ಪಿದಲ್ಲಿ ಅಂಥವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಚ್ಚರಿಕೆ ನೀಡಿದ್ದಾರೆ.


    ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದವರಿಗೆ ನೀಡಲಾದ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯ 18920 ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಬದಲಿಗೆ ಈವರೆಗೆ 9979 ಮಂದಿ ಲಸಿಕೆ ಹಾಕಿಸಿಕೊಂಡಿದ್ದು, ಶೇ.52.7 ಸಾಧನೆಯಾಗಿದೆ. ಎರಡನೇ ಹಂತದಲ್ಲಿ ಪೊಲೀಸ್, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ ಅಧಿಕಾರಿ, ಸಿಬ್ಬಂದಿ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಅವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ.

    ಪೊಲೀಸ್ ಇಲಾಖೆಯ 2076 ಮಂದಿಗೆ ಕೋವಿಡ್ ಲಸಿಕೆ ನೀಡಿಕೆಯ ಗುರಿಯ ಬದಲಿಗೆ, ಕೇವಲ 629 ಮಂದಿ ಮಾತ್ರ ಪಡೆದಿದ್ದಾರೆ. ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 3413 ಜನರ ಪೈಕಿ 408, ನಗರಾಭಿವೃದ್ಧಿ ಇಲಾಖೆಯ 1644 ಜನರ ಪೈಕಿ 350 ಜನ ಮಾತ್ರ ಪಡೆದಿದ್ದಾರೆ. ಹೀಗಾಗಿ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಧನೆ ತೃಪ್ತಿಕರವಾಗಿಲ್ಲ. ಜಿಲ್ಲೆಯ ಕಳಪೆ ಸಾಧನೆಯನ್ನು ರಾಜ್ಯ ಆರೋಗ್ಯ ಇಲಾಖೆ ಆಯುಕ್ತರು ಗಂಭೀರವಾಗಿ ಪರಿಗಣಿಸಿದ್ದಾರೆ.

    ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಅಲ್ಲದೆ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಖುದ್ದಾಗಿ ಈಗಾಗಲೇ ಕೋವಿಡ್ ಲಸಿಕೆ ಪಡೆದುಕೊಂಡಿದ್ದು, ಯಾರಿಗೂ ಯಾವುದೇ ಅಡ್ಡಪರಿಣಾಮ ಬೀರಿಲ್ಲ. ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಲಸಿಕೆಗಳು ಉತ್ತಮವಾಗಿದ್ದು, ಕೋವಿಡ್ ಲಸಿಕೆ ಕುರಿತಂತೆ ಯಾರೂ ತಪ್ಪು ಕಲ್ಪನೆ ಹೊಂದಬಾರದು. ಪೂರ್ವಾಗ್ರಹ ಪೀಡಿತರಂತೆ ವರ್ತಿಸಬಾರದು. ಅಲ್ಲದೆ ಕೋವಿಡ್ ಲಸಿಕೆ ಪಡೆಯದೇ ಇರುವ ಫಲಾನುಭವಿಗಳು ಒಂದು ವೇಳೆ ಕೋವಿಡ್ ಸೋಂಕಿಗೆ ಒಳಗಾದಲ್ಲಿ, ಅಂಥವರು ತಮ್ಮ ಸ್ವಂತ ಖರ್ಚಿನಿಂದಲೇ ಚಿಕಿತ್ಸಾ ವೆಚ್ಚ ಭರಿಸಬೇಕಾಗುತ್ತದೆ. ಸರ್ಕಾರದಿಂದ ಯಾವುದೇ ಸೌಲಭ್ಯ ನೀಡಲಾಗುವುದಿಲ್ಲ ಎಂಬುದಾಗಿ ಈಗಾಗಲೇ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

    ಹೀಗಾಗಿ ಇದುವರೆಗೂ ಕೋವಿಡ್ ಲಸಿಕೆ ಪಡೆಯದೇ ಇರುವವರು ಕೂಡಲೇ ತಂಡೋಪತಂಡವಾಗಿ ಆಯಾ ಲಸಿಕಾ ಕೇಂದ್ರಕ್ಕೆ ತೆರಳಿ, ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.

  • ಮಾಜಿ ಸಚಿವ ಶಾಮನೂರು ಮೆಡಿಕಲ್ ಕಾಲೇಜ್ ಮೇಲೆ ಐಟಿ ದಾಳಿ

    ಮಾಜಿ ಸಚಿವ ಶಾಮನೂರು ಮೆಡಿಕಲ್ ಕಾಲೇಜ್ ಮೇಲೆ ಐಟಿ ದಾಳಿ

    ದಾವಣಗೆರೆ: ಕಾಂಗ್ರೆಸ್ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಒಡೆತನದ ಮೆಡಿಕಲ್ ಕಾಲೇಜುಗಳ ಮೇಲೆ ಇಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಗೋವಾ ಹಾಗೂ ಬೆಳಗಾವಿಯಿಂದ ಬಂದ ಆರು ಜನ ಐಟಿ ಅಧಿಕಾರಿಗಳ ತಂಡ ಶಾಮನೂರು ಶಿವಶಂಕರಪ್ಪ ಒಡೆತನದಲ್ಲಿರುವ ದಾವಣಗೆರೆಯ ಜೆಜೆಎಂ, ಎಸ್‍ಎಸ್ ಮೆಡಿಕಲ್ ಕಾಲೇಜ್ ಹಾಗೂ ಬಾಪೂಜಿ ಡೆಂಟಲ್ ಕಾಲೇಜ್‍ಗಳಲ್ಲಿ ಕಡತ ಪರಿಶೀಲನೆ ನಡೆಸುತ್ತಿದ್ದಾರೆ.

    ಈ ವೇಳೆ ವಿದ್ಯಾರ್ಥಿಗಳ ಕಾಲೇಜ್ ಆಡಳಿತ ಮಂಡಳಿ ಸಂಗ್ರಹಿಸಿದ ಶುಲ್ಕ ಮತ್ತು ಸರ್ಕಾರ ನಿಗದಿ ಮಾಡಿದ ಶುಲ್ಕದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕೆಲ ವಿದ್ಯಾರ್ಥಿನ್ನು ಅನಿರೀಕ್ಷಿತವಾಗಿ ಭೇಟಿ ಮಾಡಿ ಶುಲ್ಕ ತುಂಬದ ವಿವರ ಪಡೆದಿದ್ದಾರೆ.

  • ಕೊರೊನಾ ಲಸಿಕೆ ಪಡೆಯಲು ಆರೋಗ್ಯ ಸಿಬ್ಬಂದಿ ಹಿಂದೇಟು

    ಕೊರೊನಾ ಲಸಿಕೆ ಪಡೆಯಲು ಆರೋಗ್ಯ ಸಿಬ್ಬಂದಿ ಹಿಂದೇಟು

    ದಾವಣಗೆರೆ: ಎಲ್ಲರೂ ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ಆದರೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹೆದರಿ ಆರೋಗ್ಯ ಸಿಬ್ಬಂದಿಗಳೇ ಹಿಂದೇಟು ಹಾಕಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಕೋವಿಡ್ ಲಸಿಕೆಯ ಹಾಕುವಲ್ಲಿ ಆರೋಗ್ಯ ಇಲಾಖೆ ತನ್ನ ಗುರಿ ಸಾಧಿಸಿದೆ. ಹೀಗಿದ್ದರೂ ದಾವಣಗೆರೆಯಲ್ಲಿ ಮಾತ್ರ ಈವರೆಗೂ ಕೇವಲ ಶೇ.39.19 ರಷ್ಟು ಆರೋಗ್ಯ ಸಿಬ್ಬಂದಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಲಸಿಕೆಗಾಗಿ ಆನ್ ಲೈನ್ ಮೂಲಕ 21,369ರಷ್ಟು ಆರೋಗ್ಯ ಸಿಬ್ಬಂದಿ ನೋಂದಣಿ ಮಾಡಿಕೊಂಡಿದ್ದರು. ಆದರೆ ಪ್ರಾರಂಭದಿಂದ ಇದುವರೆಗೂ ಕೇವಲ 8,376 ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ.

    ಈಗಾಗಲೇ ಸರ್ಕಾರ ಎರಡನೇ ಹಂತದ ಲಸಿಕೆ ವಿತರಣೆಗೆ ಸಿದ್ಧತೆ ನಡೆಸಿದೆ. ಆದರೆ ಇದುವರೆಗೂ ಮೊದಲ ಹಂತದ ಲಸಿಕೆ ವಿತರಣೆಯೇ ಇನ್ನೂ ಯಶಸ್ವಿಯಾಗಿಲ್ಲ. ಲಸಿಕೆ ಹಾಕಿಸಿಕೊಳ್ಳಲು ಆರೋಗ್ಯ ಸಿಬ್ಬಂದಿಗಳೇ ಹಿಂದೇಟು ಹಾಕುತ್ತಿದ್ದಾರೆ.