Tag: ಪಬ್ಲಿಕ್ ಟಿವಿ Cow

  • ಮನೆಯವರಿಂದ ಹಸುವಿಗೆ ಸೀಮಂತ ಕಾರ್ಯ

    ಮನೆಯವರಿಂದ ಹಸುವಿಗೆ ಸೀಮಂತ ಕಾರ್ಯ

    ಗದಗ: ಚೊಚ್ಚಲು ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುವುದು ಸಾಮಾನ್ಯ. ಆದರೆ ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಗೋವಿಗೆ ಸೀಮಂತ ಮಾಡಲಾಗಿದೆ.

    ಮೆಣಸಗಿ ಗ್ರಾಮದ ಶ್ರೀಕಾಂತ್ ಗೂರಮ್ಮಣ್ಣವರ್ ಎಂಬವರ ಮನೆಯಲ್ಲಿ ಸಾಕಿದ್ದ ಗೌರಿ ಎಂಬ ಹಸುವಿಗೆ ಅದ್ಧೂರಿಯಾಗಿ ಸೀಮಂತ ಮಾಡಿದ್ದಾರೆ. ಮನೆಯ ಮಗಳಿಗೆ ತವರು ಮನೆಯವರು ಉಡುಗೊರೆ(ಬಳುವಳಿ)ಯಾಗಿ ಕರು ನೀಡಿದ್ದರು. ಸದ್ಯ 7 ವರ್ಷದ ನಂತರ ಗೌರಿ ಗರ್ಭ ಧರಿಸಿರುವುದರಿಂದ ಮನೆ ಮಂದಿಗೆಲ್ಲಾ ಸಂತಸ ತಂದಿದೆ.

    8 ತಿಂಗಳು ಗರ್ಭಿಣಿಯಾದ ಗೌರಿಗೆ ದೂರದ ಬಾದಾಮಿಯಿಂದ ಬೀಗರನ್ನು ಕರೆಯಿಸಿ ಸೀಮಂತದ ವಿಧಿ ವಿಧಾನಗಳನ್ನ ನೆರವೇರಿಸಲಾಗಿದೆ. ಬಂದ ಸಂಬಂಧಿಕರೆಲ್ಲರೂ ಹೊಸ ಉಡುಪು ತೊಟ್ಟು, ಗರ್ಭಿಣಿಯರಿಗೆ ನಡೆಸುವ ಸೀಮಂತ ಕಾರ್ಯದಂತೆ ಗೋವಿಗೆ ರೇಷ್ಮೆ ಸೀರೆ ಉಡಿಸಿ, ಕೊಡಿಗೆ ಹಸಿರು ಬಳೆ ತೊಡಸಿ, ಕೊರಳಿಗೆ ಮಾಲೆಹಾಕಿ, ಕಾಲಿಗೆ ಕಾಲ್ಗೆಜ್ಜೆ ಹಾಕಿಸಿ, ಶೃಂಗಾರಗೊಳಿಸಿ ಕಾಮಧೇನುವನ್ನು ತಮ್ಮ ಮನೆಯ ಮಗಳಿಗೆ ಮಾಡುವಂತೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಮಾಡಿದ್ದಾರೆ. ತರತರನಾದ ಅಡುಗೆ ಮಾಡಿ ಎಲ್ಲರೂ ಊಟ ಮಾಡಿ, ಆಕಳಿಗೂ ಊಣಬಡಿಸಿದ್ದಾರೆ.

    ಗೂರಮ್ಮಣ್ಣವರ್ ಕುಟುಂಬ ಮೂಲತ: ಕೃಷಿಕರು. ಇವರು ಮನೆಯ ಮಗಳಿಗೆ ಕೊಟ್ಟಿರುವ ಗೋ ಮಾತೆಗೆ ಗೌರಿ ಅಂತ ಹೆಸರಿಟ್ಟು ಪ್ರೀತಿ, ಅಕ್ಕರೆಯಿಂದ ಸಾಕಿದ್ದರು. ಗೌರಿ 7 ವರ್ಷದ ನಂತರ ಈಗ ಗೌರಿ ಗರ್ಭವತಿಯಾಗಿದ್ದು, ರೈತಾಪಿ ವರ್ಗಕ್ಕೆ ಒಳ್ಳೆಯದಾಗಲಿ, ಗೋ ಸಂತತಿ ಉಳಿಯಲಿ, ಬೆಳೆಯಲಿ ಎಂಬ ಉದ್ದೇಶದಿಂದ ಈ ಕಾರ್ಯ ಕೈಗೊಂಡಿದ್ದಾರೆ. ಅನೇಕ ಮುತ್ತೈದೆಯರು ಆರತಿ ಬೆಳಗುವುದರ ಮೂಲಕ ಉಡಿ ತುಂಬುವ ಸಂಪ್ರದಾಯ ನೇರವೇರಿಸಿ, ಊರು ತುಂಬೆಲ್ಲಾ ಮೆರವಣಿಗೆ ಮಾಡಿದ್ದಾರೆ.

    ಸಾಮಾನ್ಯವಾಗಿ ಅನೇಕ ಕಡೆಗಳಲ್ಲಿ ಗೋ ಪೂಜೆ ಮಾಡುವ ಸಂಪ್ರದಾಯವಿದೆ. ಆದರೆ ಗೋವಿಗೆ ಸೀಮಂತ ಮಾಡೋದು ಅಪರೂಪ. ಇತ್ತೀಚಿನ ದಿನಗಳಲ್ಲಿ ಭಾರತೀಯ ಗೋ ಸಂತತಿ ಅಳಿವಿನಂಚಿನಲ್ಲಿವೆ. ಗೋ ಸಂತತಿ ಉಳಿಸಲು, ಕಾಮಧೇನುವಾದ ಗೋವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಇದರಿಂದ ಜನರಲ್ಲಿ ಗೋವುಗಳ ಬಗ್ಗೆ ಭಕ್ತಿ, ಪೂಜನೀಯ ಭಾವನೆ ಬೆಳೆಯುತ್ತದೆ. ಜೊತೆಗೆ ರೈತರ ಬದುಕು ಹಸನಾಗುತ್ತದೆ ಎಂಬುದು ಗ್ರಾಮಸ್ಥರ ಮನದಾಳದ ಮಾತಾಗಿದೆ. ಇದನ್ನೂ ಓದಿ : ದುಡ್ಡಿಲ್ಲ ಅಂದ್ರೆ ಫೈಲ್ ಮುಟ್ಟಲ್ಲ – ಬೆಸ್ಕಾಂ ಅಧಿಕಾರಿಯ ಲಂಚಾವತಾರ ವೀಡಿಯೋ ವೈರಲ್

  • ಕೋಲಾರದಲ್ಲಿ ಮಳೆ, ವಿದ್ಯುತ್ ತಂತಿ ತಗುಲಿ 14 ಕುರಿ ಸಾವು

    ಕೋಲಾರದಲ್ಲಿ ಮಳೆ, ವಿದ್ಯುತ್ ತಂತಿ ತಗುಲಿ 14 ಕುರಿ ಸಾವು

    – ವಿಷಪೂರಿತ ಮೇವು ತಿಂದು 2 ಹಸು ಸಾವು

    ಕೋಲಾರ: ಕೋಲಾರ ಜಿಲ್ಲೆಯಲ್ಲಿಂದು ಸಂಜೆ ಮಳೆರಾಯನ ಆರ್ಭಟ ಜೋರಾಗಿತ್ತು. ಅರ್ಧ ಗಂಟೆಗಳ ಕಾಲ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು 14 ಕುರಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

    ಜಿಲ್ಲೆಯ ಕೆಜಿಎಫ್ ತಾಲೂಕು ಚೆನ್ನಪಲ್ಲಿ ಗ್ರಾಮದ ಸುರೇಶ್ ಎಂಬವರಿಗೆ ಸೇರಿದ ಕುರಿಗಳು ಮೃತಪಟ್ಟಿದ್ದು, ಗಾಳಿ ಮಳೆಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕುರಿಗಳು ಸಾವನ್ನಪ್ಪಿವೆ. ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ವಿಷಪೂರಿತ ನೀರಿನಿಂದ ಬೆಳೆದ ಮೇವು ತಿಂದು 2 ಹಸು ಸಾವು
    ವಿಷಪೂರಿತ ಮೇವು ತಿಂದು ಹಸುಗಳು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲುಕಿನ ಸೀತನಾಯಕನಹಳ್ಳಿ ಸಮೀಪ ನಡೆದಿದೆ. ಕಾರ್ಖಾನೆಯ ವಿಷಪೂರಿತ ತ್ಯಾಜ್ಯ ಹೊರಕ್ಕೆ ಬಿಟ್ಟ ಪರಿಣಾಮ ವಿಷಪೂರಿತವಾಗಿ ಮೇವು ತಿಂದ ಎರಡು ಹಸುಗಳು ಮೃತಪಟ್ಟಿವೆ. ಇದೀಗ ಹಸುವಿನ ಮಾಲೀಕ ಕಾರ್ಖಾನೆಯ ಬಳಿ ಹಸುವಿನ ಶವ ಇಟ್ಟು ಪ್ರತಿಭಟನೆ ಮಾಡಿದ್ದಾರೆ.

    ಕೋಲಾರ ಜಿಲ್ಲೆ ಮಾಲೂರಿನ ಕೈಗಾರಿಕಾ ಪ್ರದೇಶದ ಸೀತನಾಯಕನಹಳ್ಳಿ ಬಳಿ ಇರುವ ಕ್ಲೋರೈಡ್ ಮೆಟಲ್ ಲಿಮಿಟೆಡ್ ಎಂಬ ಕಂಪನಿಯ ಹೊಗೆ ವಿಷಪೂರಿತ ನೀರು ಬಿಡುಗಡೆ ಮಾಡಿದರ ಪರಿಣಾಮ ಈ ಘಟನೆ ನಡೆದಿದೆ. ನರಸಿಂಹ ರೆಡ್ಡಿ ಎಂಬವರಿಗೆ ಸೇರಿದ ಎರಡು ಹಸುಗಳು, ಅಂದಾಜು 1.5 ಲಕ್ಷ ಬೆಲೆಯುಳ್ಳದಾಗಿದೆ. ಹಾಗಾಗಿ ಪರಿಹಾರ ಭರಿಸಿಕೊಡುವಂತೆ ಕಾರ್ಖಾನೆ ಮುಂದೆ ಹಸುವಿನ ಮಾಲೀಕ ಪ್ರತಿಭಟನೆ ನಡೆಸು ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ವಿಜಯಪುರ ಜಿಲ್ಲೆಯಾದ್ಯಂತ ಮಳೆಯ ಆರ್ಭಟ – ಬಾಳೆ ನಾಶಗೊಳಿಸಿದ ರೈತ ಮಹಿಳೆ

  • ರಾತ್ರೋರಾತ್ರಿ ಕಾರಿನಲ್ಲಿ ಗೋವು ಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ರಾತ್ರೋರಾತ್ರಿ ಕಾರಿನಲ್ಲಿ ಗೋವು ಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಧಾರವಾಡ: ರಾತ್ರೋರಾತ್ರಿ ಮನೆ ಎದುರಿಗೆ ನಿಂತಿದ್ದ ಗೋವುಗಳನ್ನು ಗ್ಯಾಂಗ್‍ವೊಂದು ಕಳ್ಳತನ ಮಾಡಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

    ಕಳೆದ ಎರಡು ವರ್ಷಗಳಿಂದ ಈ ರೀತಿ ಹಲವು ಗೋವು ನಾಪತ್ತೆಯಾಗುತ್ತಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಆದರೂ ಈ ಕೃತ್ಯವನ್ನು ಯಾರು ಮಾಡುತ್ತಿರುವ ಎಂಬ ವಿಚಾರ ತಿಳಿದು ಬಂದಿರಲಿಲ್ಲ. ಆದರೆ ನಗರದ ಕೆಲಗೇರಿ ರಸ್ತೆಯ ವೈದ್ಯಮಠ ಕಾಂಪ್ಲೆಕ್ಸ್ ಬಳಿ ಕಾರಿನಲ್ಲಿ ಬಂದಿದ್ದ ಕಳ್ಳರು ಗೋವುಗಳು ಕಳ್ಳತನ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಕಾರಿನಲ್ಲಿ ಬಂದಿದ್ದ ಇಬ್ಬರು, ಗೋವುಗಳನ್ನ ಅದೇ ಕಾರಿನಲ್ಲಿ ಏಳೆದು ಹಾಕಿಕೊಂಡು ಹೋಗಿದ್ದಾರೆ. ಮೊದಲಿಗೆ ಒಂದು ಗೋವನ್ನು ಬೇರೆ ಕಡೆಯಿಂದ ಕಾರಿನಲ್ಲಿ ಹಾಕಿಕೊಂಡು ಬಂದಿದ್ದ ಕಳ್ಳರ ಗ್ಯಾಂಗ್, ವೈದ್ಯಮಠ ಕಾಂಪ್ಲೆಕ್ಸ್ ಬಳಿ ಬಂದಾಗ ಮತ್ತೊಂದು ಗೋವನ್ನು ಹಾಕಿಕೊಂಡಿದ್ದಾರೆ.

    ಸದ್ಯ ಈ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ವೈರಲ್ ಆಯ್ತು ಹಸುವಿನ ಕ್ಯೂಟ್ ಕ್ಯಾಟ್ ವಾಕ್ ವೀಡಿಯೋ

    ವೈರಲ್ ಆಯ್ತು ಹಸುವಿನ ಕ್ಯೂಟ್ ಕ್ಯಾಟ್ ವಾಕ್ ವೀಡಿಯೋ

    ನೂರಾರು ಮಾಡೆಲ್‍ಗಳು ವೇದಿಕೆ ಮೇಲೆ ಕ್ಯಾಟ್ ವಾಕ್ ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ ಹಸು ಕ್ಯಾಟ್ ವಾಕ್ ಮಾಡಿರುವುದನ್ನು ಎಲ್ಲೂ ಕೂಡ ನೋಡಿರಲು ಸಾಧ್ಯವಿಲ್ಲ. ಆದರೆ ಇತ್ತೀಚೆಗೆ ಹಸುವೊಂದು ರಸ್ತೆ ಮಧ್ಯೆ ಮಾಡೆಲ್‍ಗಳಂತೆ ಸ್ಟೈಲ್ ಆಗಿ ಕ್ಯಾಟ್‍ವಾಕ್ ಮಾಡಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಕಂದು ಮತ್ತು ಬಿಳಿ ಮೈ ಬಣ್ಣ ಹೊಂದಿರುವ ಹಸುವೊಂದು ರಸ್ತೆ ಮಧ್ಯೆ ತಲೆ ಅಲ್ಲಡಿಸುತ್ತಾ, ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಕ್ಯಾಟ್ ವಾಕ್ ಮಾಡಿದೆ. ಈ ಹಸುವಿನ ಹಿಂದೆ ಹಲವಾರು ಹಸುಗಳು ನಡೆದುಕೊಂಡು ಬರುತ್ತಿರುತ್ತದೆ. ಹಸು ಮುಂದೆ ಕ್ಯಾಟ್‍ವಾಕ್ ಮಾಡಿ ನಡೆಯುತ್ತಿದ್ದರೆ, ಉಳಿದ ಹಸುಗಳು ಹಿಂದೆ ಬರುತ್ತಿರುವುದು, ಸೆಲೆಬ್ರೆಟಿಗಳ ಹಿಂದೆ ಬಾಡಿಗಾರ್ಡ್‍ಗಳು ಬರುವಂತೆ ಕಾಣಿಸುತ್ತದೆ. ಸದ್ಯ ಈ ಅಪರೂಪದ ಹಸುವಿನ ಬೆಕ್ಕಿನ ನಡುಗೆ ವೀಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಕರುವಿನ ಮೇಲೆ ಕುಳಿತು ಕಿಕಿ ಡ್ಯಾನ್ಸ್ ಮಾಡಿದ ಹಳ್ಳಿ ಪೋರರು!

    ಈವರೆಗೂ ನಾಯಿ, ಬೆಕ್ಕು, ಪುಟ್ಟ ಆನೆಮರಿ ಹೀಗೆ ಹಲವು ಮುದ್ದಾದ ಪ್ರಾಣಿಗಳ ವೀಡಿಯೋ ನೋಡಿ ತಮ್ಮ ಒತ್ತಡವನ್ನು ಜನ ಕಡಿಮೆ ಮಾಡಿಕೊಳ್ಳುತ್ತಿದ್ದರು. ಆದರೆ ಹಸುವಿನ ಕ್ಯಾಟ್ ವಾಕ್ ವೀಡಿಯೋ ನೋಡಿ ಎಲ್ಲರ ಮುಖದಲ್ಲಿಯೂ ನಗು ಬೀರಿದೆ ಹಾಗೂ ಎಲ್ಲರ ಮನ ಗೆಲ್ಲುತ್ತಿದೆ. ಇದನ್ನೂ ಓದಿ: ಮನೆಯೊಡತಿ ಜೊತೆ ಜೋಶ್‍ನಲ್ಲಿ ಕುಣಿದ ಎಮ್ಮೆಯ ವೀಡಿಯೋ ವೈರಲ್