Tag: ಪಬ್ಲಿಕ್ ಟಿವಿ covid Hospital

  • ಕೋವಿಡ್ ಆಸ್ಪತ್ರೆಗೆ 50 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಲಕರಣೆ ನೀಡಿದ ಡಾ.ಎಂ.ಸಿ.ಸುಧಾಕರ್

    ಕೋವಿಡ್ ಆಸ್ಪತ್ರೆಗೆ 50 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಲಕರಣೆ ನೀಡಿದ ಡಾ.ಎಂ.ಸಿ.ಸುಧಾಕರ್

    – ಐವತ್ತು ಆಕ್ಸಿಜನ್ ಬೆಡ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಕೋವಿಡ್ ಕೇರ್ ಸೆಂಟರ್‍ಗೆ ಮಾಜಿ ಶಾಸಕ ಡಾ ಎಂ.ಸಿ ಸುಧಾಕರ್ 50 ಲಕ್ಷ ಮೌಲ್ಯದ ವೈದ್ಯಕೀಯ ಸಲಕರಣೆಗಳ ನೆರವು ಕೊಡಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

    ಕೊರೊನಾ ಸಂಕಷ್ಟದಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಸಿಗದೇ ಅದೆಷ್ಟೋ ಜನ ಸೋಂಕಿತರು ತಮ್ಮ ಜೀವವನ್ನು ಕಳೆದುಕೊಂಡಿದ್ದು, ಇನ್ನೂ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಮನಗಂಡ ಮಾಜಿ ಶಾಸಕ ಡಾ. ಎಂ.ಸಿ ಸುಧಾಕರ್ ತಮ್ಮ ವಿದ್ಯಾಗಣಪತಿ ಸೇವಾ ಟ್ರಸ್ಟ್ ಮೂಲಕ ಕೋವಿಡ್ ಸೆಂಟರ್‍ಗೆ ಸುಮಾರು ಐವತ್ತು ಲಕ್ಷ ರೂಪಾಯಿ ಬೆಲೆ ಬಾಳುವ ಸಲಕರಣೆಗಳನ್ನ ಒದಗಿಸಿದ್ದಾರೆ.

    ಐವತ್ತು ಹಾಸಿಗೆ ದಿಂಬು, ಐವತ್ತು ಜಂಬೋ ಆಕ್ಸಿಜನ್ ಸಿಲಿಂಡರ್, ಐವತ್ತು ಮಂಚ, ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಸೇರಿದಂತೆ ಆಸ್ಪತ್ರೆಗೆ ಸಿಲಿಂಡರ್ ಪೈಪ್ ಲೈನ್ ಸಮೇತ ನಿರ್ಮಿಸಿ ಕೊಡುವುದಾಗಿ ತಿಳಿಸಿದ್ದು, ತಮ್ಮ ಸಾಮಾಜಿಕ ಕಳಕಳಿ ತೋರಿದ್ದಾರೆ. ಈ ಆಸ್ಪತ್ರೆಯಲ್ಲಿ ಇದ್ದಿದ್ದು ಐವತ್ತು ಆಕ್ಸಿಜನ್ ಬೆಡ್‍ಗಳು, ಇಲ್ಲಿನ ಕೋವಿಡ್ ಸೋಂಕಿತರಿಗೆ ಬೆಡ್ ಸಿಗದೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಹೋಗುವಷ್ಟರಲ್ಲಿ ತಮ್ಮ ಪ್ರಾಣ ಕಳೆದುಕೊಂಡ ಉದಾಹರಣೆಗಳು ಇವೆ. ಆದ್ದರಿಂದ ಕೊರೊನಾ ಸಂಕಷ್ಟದ ಸಮಯದಲ್ಲಿ ಧನಿಕರೆಲ್ಲ ಮುಂದೆ ಬಂದು ಈ ರೀತಿ ಸಹಾಯ ಮಾಡಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನ ಹೆಚ್ಚಿಸಿದರೆ ಕೊರೊನಾ ವಿರುದ್ಧ ಹೋರಾಡಲು ಸಹಕಾರಿಯಾಗಲಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಮಾಜಿ ಶಾಸಕರಾದ ಡಾ ಎಂ.ಸಿ ಸುಧಾಕರ್, ಕೊರೊನಾ ಎಂಬ ಮಹಾಮಾರಿ ಇಂದು ನಮ್ಮನ್ನು ಬೆಂಬಿಡದೆ ಕಾಡುತ್ತಿದ್ದು, ಮಾನವನ ಜೀವಕ್ಕೆ ಬೆಲೆ ಇಲ್ಲದಂತಾಗಿ, ಸಾಮಾಜಿಕ, ಆರ್ಥಿಕ ವ್ಯವಸ್ಥೆ ತೀರ ದುಸ್ತರವಾದ ಪರಿಸ್ಥಿತಿಗೆ ತಲುಪಿದೆ. ನಮ್ಮ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿಯೂ ಸಹ ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಹಾಸಿಗೆಗಳ ಹಾಗು ವೈದ್ಯಕೀಯ ಸಲಕರಣೆಗಳ ಅತಿಯಾದ ಅಭಾವ ತಲೆದೋರಿದೆ. ಈ ಕೊರತೆಯನ್ನು ಮನಗಂಡು ನಮ್ಮ ತಂದೆಯವರಾದ ಮಾಜಿ ಗೃಹ ಸಚಿವ ಎಂ.ಎ.ಚೌಡರೆಡ್ಡಿಯವರೊಂದಿಗೆ ಚರ್ಚಿಸಿ, ಶ್ರೀ ವಿದ್ಯಾ ಗಣಪತಿ ದೇವಸ್ಥಾನ ಟ್ರಸ್ಟ್ ಚಿಂತಾಮಣಿರವರ ಸಹಕಾರದೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಈಗಿರುವ 50 ಹಾಸಿಗೆಗಳ ಜೊತೆಗೆ ಸುಮಾರು 50 ಲಕ್ಷ ರೂಗಳ ವೆಚ್ಚದಲ್ಲಿ ಆಕ್ಸಿಜನ್ ಸಹಿತ ಎಲ್ಲಾ ಆಧುನಿಕ ವ್ಯವಸ್ಥೆಯಿಂದ ಕೂಡಿದ 50 ಹಾಸಿಗೆಗಳ ನೂತನ ಕೊವಿಡ್ ವಿಭಾಗವನ್ನು ತೆರೆದಿದ್ದೇವೆ. ಪ್ರತಿ ಹಾಸಿಗೆಗೆ ಒಂದರಂತೆ 50 ಹೊಸ ಆಕ್ಸಿಜನ್ ಸಿಲಿಂಡರ್‍ಗಳನ್ನು ನೀಡಿ, ಅವು ಎಷ್ಟು ಬಾರಿ ಖಾಲಿಯಾದರು ಪುನಃ ಭರ್ತಿಮಾಡಿಸುವ ವ್ಯವಸ್ಥೆಯನ್ನು ಸ್ವತಃ ನಾವೇ ಮಾಡಿರುತ್ತೇವೆ. ಆಸ್ಪತ್ರೆಗೆ ಅವಶ್ಯಕವಿರುವ ಪಿ.ಪಿ.ಇ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್, ಆಕ್ಸಿ ಮೀಟರ್ ಗಳು, ಕೈಗವಸುಗಳು ಇನ್ನಿತರ ವೈದ್ಯಕೀಯ ಸಲಕರಣೆಗಳನ್ನು ಕೊಟ್ಟಿದ್ದೇವೆ ಎಂದು ಹೇಳಿದರು.

    ಇದಲ್ಲದೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯನ್ನು “ಸಂಪೂರ್ಣ ಸೆಂಟ್ರಲೈಸ್ಡ್ ಆಕ್ಸಿಜನ್ ಸಿಸ್ಟಮ್” ಇರುವ ಆಸ್ಪತ್ರೆಯಾಗಿ ಮಾರ್ಪಡಿಸಲು ತೀರ್ಮಾನಿಸಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಸದರಿ ಕಂಪನಿಯೊಂದಿಗೆ ಚರ್ಚಿಸಿದ್ದು, ಆದಷ್ಟು ಬೇಗನೆ ಕಾರ್ಯರೂಪಕ್ಕೆ ತರುತ್ತೇವೆ. ಚಿಂತಾಮಣಿ ನಗರಾಡಳಿತ ಹಾಗು ಸರ್ಕಾರಿ ವೈದ್ಯಾಧಿಕಾರಿಗಳು ಇಚ್ಛಿಸಿದಲ್ಲಿ ಬೇಡಿಕೆಯ ಅನುಗುಣವಾಗಿ “ತಾಯಿ ಮಗು ಆಸ್ಪತ್ರೆಯನ್ನು” ಕೂಡ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಬೇಕಾದ ಎಲ್ಲಾ ಅನುಕೂಲಗಳನ್ನು ಮಾಡಲು ಯಾವುದೇ ಕ್ಷಣದಲ್ಲಿ ಸಿದ್ಧವಿದ್ದೇವೆ.

    ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿರುವ ಮೂರು ವೆಂಟಿಲೇಟರ್‍ಗಳು ಕಾರ್ಯನಿರ್ವಹಿಸದೆ. ಜಿಲ್ಲಾಡಳಿತ ಹಾಗು ಜಿಲ್ಲಾ ವೈದ್ಯಾಧಿಕಾರಿಗಳು ಸದರಿ ವೆಂಟಿಲೇಟರ್‍ಗಳನ್ನು ಆಪರೇಟ್ ಮಾಡುವ ವೈದ್ಯರು ಹಾಗೂ ತಂತ್ರಜ್ಞರನ್ನು ನೀಡಿದಲ್ಲಿ, ವೆಂಟಿಲೇಟರ್‍ಗಳು ಕಾರ್ಯನಿರ್ವಹಿಸುವಂತೆ ಮಾಡುವ ಪೂರಕ ಸಲಕರಣೆಗಳನ್ನು ಅಳವಡಿಸಿ ಸಾರ್ವಜನಿಕರ ಅನುಕೂಲಕ್ಕೆ ನೀಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಈ ಕೊರೊನಾ ಕಾಯಿಲೆಯನ್ನು ಅಂತ್ಯಗೊಳಿಸಲು ನಾವೆಲ್ಲಾ ಪಕ್ಷಾತೀತವಾಗಿ ಒಗ್ಗೂಡಿ ಹೋರಾಡುವ ಅವಶ್ಯಕತೆ ಇದ್ದು, ಜನರ ಜೀವ ಉಳಿಸುವ ಮಹತ್ಕಾರ್ಯದಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಿ ತಮ್ಮ ಕೈಲಾದ ಸಹಾಯವನ್ನು ಮಾಡಿ ಮನುಕುಲದ ಹಿತ ಕಾಪಾಡೋಣ ಎಂದಿದ್ದಾರೆ.

    ಕೊನೆಯದಾಗಿ ಸಾರ್ವಜನಿಕರಿಗೆ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ ನಾವು ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದ್ದು, ಎಲ್ಲರೂ ಅತ್ಯಂತ ಜಾಗರೂಕರಾಗಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸ್ಯಾನಿಟೈಸರ್ ಉಪಯೋಗಿಸಿ. ಸ್ವಚ್ಛತೆಯನ್ನು ಕಾಪಾಡಿ. ಮನೆ ಬಿಟ್ಟು ಹೊರಹೋಗದೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

  • ಕೋವಿಡ್ ಆಸ್ಪತ್ರೆಯ ಊಟ ತಿಂದೇ ಆರೋಗ್ಯ ಸಮಸ್ಯೆಯಾಗ್ತಿದೆ – ಅಳಲು ತೋಡಿಕೊಂಡ ಸೋಂಕಿತ

    ಕೋವಿಡ್ ಆಸ್ಪತ್ರೆಯ ಊಟ ತಿಂದೇ ಆರೋಗ್ಯ ಸಮಸ್ಯೆಯಾಗ್ತಿದೆ – ಅಳಲು ತೋಡಿಕೊಂಡ ಸೋಂಕಿತ

    ಚಿಕ್ಕಮಗಳೂರು: ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲವೂ ಸರಿ ಇದೆ. ಆದರೆ ಊಟ ಮಾತ್ರ ತಿನ್ನೋಕೆ ಆಗಲ್ಲ, ಈ ಊಟ ತಿಂದು ನಮಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಕೊರೊನಾ ಸೋಂಕಿತ ವ್ಯಕ್ತಿಯೋರ್ವ ಕೋವಿಡ್ ಆಸ್ಪತ್ರೆಯಿಂದ ಸೆಲ್ಫಿ ವಿಡಿಯೋ ಮಾಡಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಗ್ರಾಮೀಣ ಭಾಗದ ವ್ಯಕ್ತಿ ಕೊರೊನಾ ಸೋಂಕಿನಿಂದಾಗಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಕೊಡುವ ಊಟ ತಿಂದು ನಮಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಿನ್ನೆ ಬೆಳಗ್ಗೆ ಟೊಮೊಟೋ ಬಾತ್ ತಿಂಡಿ ಕೊಟ್ಟಿದ್ದರು ತಿನ್ನುವಂತಿರಲಿಲ್ಲ. ಮಧ್ಯಾಹ್ನ ಕೋಸು-ಬೇಳೆ ಸಾರು ಕೊಟ್ಟಿದ್ದರು. ಈಗಲೂ ಅದನ್ನೇ ಕೊಟ್ಟಿದ್ದಾರೆ. ಸಾಂಬರ್ ಯಾವುದೇ ರುಚಿ ಇಲ್ಲ. ಇಲ್ಲಿ ಊಟವನ್ನೇ ಮಾಡಲು ಆಗುತ್ತಿಲ್ಲ. ವೈದ್ಯರು, ವೈದ್ಯಕೀಯ ಸಲಕರಣೆ ಯಾವುದೇ ತೊಂದರೆ ಇಲ್ಲ. ಊಟದ್ದು ಮಾತ್ರ ತುಂಬಾ ಸಮಸ್ಯೆ ಇದೆ. ಔಷಧಿಯನ್ನ ಸಮಯಕ್ಕೆ ಸರಿಯಾಗಿ ಕೊಡುತ್ತಿದ್ದಾರೆ. ಆಗಾಗ ಚೆಕ್ ಅಪ್ ಎಲ್ಲಾ ಮಾಡುತ್ತಾರೆ. ನರ್ಸ್‍ಗಳು ಆಗಾಗ ಬಂದು ಯೋಗಕ್ಷೇಮ ವಿಚಾರಿಸುತ್ತಾರೆ. ಕುಡಿಯೋಕೆ ಬಿಸಿ ನೀರು ಸೇರಿದಂತೆ ನೀರಿನ ವ್ಯವಸ್ಥೆ ಎಲ್ಲಾ ಚೆನ್ನಾಗಿದೆ. ಆದರೆ, ಊಟದ ವ್ಯವಸ್ಥೆ ಮಾತ್ರ ಸರಿ ಇಲ್ಲ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

  • ಕೋವಿಡ್ ಆಸ್ಪತ್ರೆ ನುಗ್ಗಿ ಗಲಾಟೆ ಮಾಡಿದ್ದ ಯುವಕ ಅರೆಸ್ಟ್

    ಕೋವಿಡ್ ಆಸ್ಪತ್ರೆ ನುಗ್ಗಿ ಗಲಾಟೆ ಮಾಡಿದ್ದ ಯುವಕ ಅರೆಸ್ಟ್

    ಚಿಕ್ಕಬಳ್ಳಾಪುರ: ಕೋವಿಡ್ ಆಸ್ಪತ್ರೆಗೆ ನುಗ್ಗಿ ಗಲಾಟೆ ಮಾಡಿ ವೈದ್ಯರು-ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವಕ ಜೈಲುಪಾಲಾಗಿದ್ದಾನೆ. ಬುಧವಾರ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ತಪ್ಪು ಗ್ರಹಿಕೆ ಮಾಡಿಕೊಂಡ ಕೆಲ ಕೊರೊನಾ ಸೋಂಕಿತರು ಆಕ್ಸಿಜನ್ ಖಾಲಿ ಆಗಿದೆ. ನಮಗೆ ಆಕ್ಸಿಜನ್ ಸಿಗ್ತಿಲ್ಲ ನಾವ್ ಸತ್ತೋಗಬಹುದು ಅಂತ ಕೆಲ ಕೊರೊನಾ ಸೋಂಕಿತರು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದರು.

    ಇದರಿಂದ ಆತಂಕದಿಂದ ಕೋವಿಡ್ ಆಸ್ಪತ್ರೆ ಬಳಿ ಬಂದಿದ್ದ ಜಾತವಾರದ ಜಗದೀಶ್ ಹಾಗೂ ಪವನ್ ಸೇರಿ ಇನ್ನಿತರರು ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಹರಿಹಾಯ್ದಿದ್ದರು. ಈ ವೇಳೆ ಇಬ್ಬರು ಯುವಕರಯ ಆಟೋದಲ್ಲಿ ತಾವೇ ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಬಂದು ಆಸ್ಪತ್ರೆಯ ಗೇಟ್ ಒಡೆದು ಒಳನುಗ್ಗಿ ತಗೊಳ್ಳಿ ಆಕ್ಸಿಜನ್ ನಾವ್ ಕೊಡ್ತೀವಿ ಅಂತ ಬಹಳ ಜೋರಾಗಿ ಏರು ಧ್ವನಿಯಲ್ಲಿ ವೈದ್ಯರ ವಿರುದ್ಧ ಅವಾಚ್ಯ ಶಬ್ದಗಳನ್ನ ಬಳಸಿ ಹರಿಹಾಯ್ದಿದ್ದರು.

    ಈ ವೇಳೆ ಜಿಲ್ಲಾಸ್ಪತ್ರೆಯ ಡಿ.ಎಸ್ ರಮೇಶ್ ಹಾಗೂ ಡಿ.ಎಚ್.ಓ ಗಲಾಟೆ ಮಾಡ್ತಿದ್ದವರಿಗೆ ಪಿಪಿಇ ಕಿಟ್ ಹಾಕಿ ಆಕ್ಸಿಜನ್ ಇದೆ ಅಂತ ತೋರಿಸಿದ ಮೇಲೆ ಆಕ್ರೋಶಿತರು ಸುಮ್ಮನಾಗಿದ್ದರು. ಈ ಸಂಬಂಧ ಡಿ.ಎಸ್ ರಮೇಶ್ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪವನ್ ಎಂಬಾತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.