Tag: ಪಬ್ಲಿಕ್ ಟಿವಿ covid

  • ಕೋವಿಡ್‍ಗೆ ಕವಲೇದುರ್ಗದ ಸ್ವಾಮೀಜಿ ಲಿಂಗೈಕ್ಯ

    ಕೋವಿಡ್‍ಗೆ ಕವಲೇದುರ್ಗದ ಸ್ವಾಮೀಜಿ ಲಿಂಗೈಕ್ಯ

    ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಮಠಗಳಲ್ಲಿ ಒಂದಾದ ಕವಲೇದುರ್ಗ ಮಠದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ.

    ತೀರ್ಥಹಳ್ಳಿ ತಾಲೂಕಿನ ಕವಲೇದುರ್ಗ ಮಠದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿಗಳಿಗೆ ವಾರದ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಸೋಂಕು ಪತ್ತೆಯಾದ ನಂತರ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ಸಮಸ್ಯೆ ತೀವ್ರವಾಗಿ ಉಲ್ಬಣಿಸಿದ ಕಾರಣ ಶಿವಮೊಗ್ಗದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಅಪಾರ ಸಂಖ್ಯೆಯ ಭಕ್ತಗಣ ಹೊಂದಿರುವ ಸ್ವಾಮೀಜಿಗಳ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಇದನ್ನು ಓದಿ:ಶತಾಯುಷಿ ಇಚ್ಚಂಗಿಯ ಶಿವಾನಂದ ಮಠದ ಶರಣಮ್ಮ ಲಿಂಗೈಕ್ಯ

    ಇತ್ತೀಚೆಗಷ್ಟೇ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗವಿಮಠದ ತೋಂಟದಾರ್ಯ ಸ್ವಾಮೀಜಿ(80) ಅವರಿಗೆ ಹೃದಯಾಘಾತವಾಗಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅಲ್ಲದೆ ಒಂದು ವಾರದ ಹಿಂದೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದ ಶ್ರೀ ಶಿವಾನಂದ ಮಠದ ಶರಣಮ್ಮನವರು(ಪಾರ್ವತೆಮ್ಮನವರು) ಲಿಂಗೈಕ್ಯರಾಗಿದ್ದರು. ಇದನ್ನು ಓದಿ: ಕಗ್ಗೆರೆ ಗವಿಮಠದ ತೋಂಟದಾರ್ಯ ಸ್ವಾಮೀಜಿ ಲಿಂಗೈಕ್ಯ

  • ಕೋವಿಡ್ ಸಂಕಷ್ಟ ಕಾಲದಲ್ಲಿ ಹಣ ಸುಲಿಗೆ ಮಾಡಿದರೆ ಜೈಲಿಗಟ್ಟುತ್ತೇವೆ: ಅಶ್ವಥ್ ನಾರಾಯಣ್ ಎಚ್ಚರಿಕೆ

    ಕೋವಿಡ್ ಸಂಕಷ್ಟ ಕಾಲದಲ್ಲಿ ಹಣ ಸುಲಿಗೆ ಮಾಡಿದರೆ ಜೈಲಿಗಟ್ಟುತ್ತೇವೆ: ಅಶ್ವಥ್ ನಾರಾಯಣ್ ಎಚ್ಚರಿಕೆ

    – ರಾಮನಗರ ಜಿಲ್ಲಾಸ್ಪತ್ರೆಯಲ್ಲಿ 10 ದಿನದಲ್ಲಿ ಆಕ್ಸಿಜನ್ ಟ್ಯಾಂಕ್ ಅಳವಡಿಕೆ

    ಬೆಂಗಳೂರು: ಯಾರಾದರೂ ಕೋವಿಡ್ ಪರಿಸ್ಥಿತಿಯ ದುರ್ಲಾಭವನ್ನು ಪಡೆದುಕೊಂಡು ಹಣ ಸುಲಿಗೆ ಮಾಡಲು ಪ್ರಯತ್ನಿಸಿದರೆ ಮುಲಾಜಿಲ್ಲದೆ ಕ್ರಮ ಕೈಕೊಳ್ಳಲಾಗುವುದು ಹಾಗೂ ಬಂಧಿಸಿ ಜೈಲಿಗಟ್ಟಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ, ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಎಚ್ಚರಿಕೆ ನೀಡಿದ್ದಾರೆ.

    ಬುಧವಾರ ಬೆಳಗ್ಗೆಯೇ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ಕೋವಿಡ್ ಪರಿಸ್ಥಿತಿಯನ್ನು ಅವಲೋಕನ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಬಗ್ಗೆ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಯಾರಾದರೂ ಆಮ್ಲಜನಕ, ಹಾಸಿಗೆಗಳು, ರೆಮಿಡಿಸ್ವಿರ್, ಅಂಬುಲೆನ್ಸ್, ಚಿತಾಗಾರ ಮತ್ತಿತರೆ ಯಾವುದೇ ಇರಲಿ, ಪರಿಸ್ಥಿತಿಯ ದುರ್ಲಾಭ ಮಾಡಿಕೊಳ್ಳಲು ಯತ್ನಸಿದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಅತ್ಯಂತ ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.

    ಯಾರಿಗೆ ಸಮಸ್ಯೆಯಾದರೂ ಹೆಲ್ಪ್‌ಲೈನ್‌ ಸಂಖ್ಯೆ 112ಕ್ಕೆ ಕರೆ ಮಾಡಿದರೆ ಸಾಕು. ತತ್‍ಕ್ಷಣವೇ ಸ್ಪಂದನೆ ಸಿಗುತ್ತದೆ. ಯಾರಾದರೂ ಹಣಕ್ಕೆ ಡಿಮಾಂಡ್ ಮಾಡಿದರೆ ದೂರು ನೀಡಬಹುದು. ಅಲ್ಲಿ ದೂರು ನೀಡಿದರೆ ಖಂಡಿತವಾಗಿಯೂ ಕ್ರಮ ಜರುಗಿಸಲಾಗುವುದು ಎಂದು ನಾನು ಖಾತರಿ ಕೊಡುತ್ತೇನೆ ಎಂದು ಹೇಳಿದ್ದಾರೆ.

    ಪ್ರಾಥಮಿಕ ಹಂತದಲ್ಲಿ ರೆಮಿಡಿಸ್ವಿರ್ ಬೇಡ: ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಪಾಸಿಟಿವ್ ಬಂದರೆ ಅವರಿಗೆ ಕೂಡಲೇ ರೆಮಿಡಿಸ್ವಿರ್ ಕೊಡುವ ಅಗತ್ಯವಿಲ್ಲ. ಅನಗತ್ಯ ಗಾಬರಿ ಬೇಡ. ಆರಂಭದಿಂದಲೇ ಚಿಕಿತ್ಸೆ ಪಡೆದರೆ ಯಾವ ಸಮಸ್ಯೆಯೂ ಆಗುವುದಿಲ್ಲ ಎಂದು ಜನರಿಗೆ ಧೈರ್ಯ ತುಂಬಿದರು.

    ಸದ್ಯದ ಸ್ಥಿತಿಯಲ್ಲಿ ಪ್ರತಿದಿನ 24,000 ವೈಲ್ ರೆಮಿಡಿಸ್ವಿರ್ ಕೊಡಲು ಸಾಧ್ಯವಾಗುತ್ತದೆ. ಅದು ಸದ್ಬಳಕೆ ಆಗುವ ಹಾಗೂ ಅಗತ್ಯವಿರುವವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಔಷಧಿ ಕೊರತೆ ಆಗದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ರಾಮನಗರ ಜಿಲ್ಲಾಸ್ಪತ್ರೆಗೆ 10 ದಿನದಲ್ಲಿ ಆಕ್ಸಿಜನ್ ಸಂಗ್ರಹ ಘಟಕ: ರಾಮನಗರ ಜಿಲ್ಲೆಯಲ್ಲಿ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದ್ದು, ಆಮ್ಲಜನಕದ ಕೊರತೆ ಆಗುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಹೇಳಿರುವ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣರವರು, ನಿನ್ನೆ ಒಂದೇ ದಿನ 550 ಸೋಂಕಿತರು ಪತ್ತೆಯಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ 3,000 ಸೋಂಕಿತರು ಇದ್ದಾರೆ. ಈ ಪ್ರಮಾಣದಲ್ಲಿ ಕೇವಲ ಶೇ.10ರಷ್ಟು ಸೋಂಕಿತರಿಗೆ ಆಕ್ಸಿಜನ್ ಬೆಡ್‍ಗಳ ಅಗತ್ಯವಿದೆ. ಆದರೆ, ಸರಕಾರ ಶೇ.20-30ರಷ್ಟು ಸೋಂಕಿತರಿಗೂ ಆಕ್ಸಿಜನ್ ಬೆಡ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದರು.

    ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕೋವಿಡ್ ಕಾಲ್ ಸೆಂಟರ್ ಮಾಡುತ್ತಿದ್ದೇವೆ. ಇನ್ನು ಹತ್ತೇ ದಿನದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಂಗ್ರಹಕ್ಕೆ ಟ್ಯಾಂಕ್‍ನ್ನು ಅಳವಡಿಸಲಾಗುತ್ತಿದೆ ಹಾಗೂ ಪ್ರತಿ ನಿಮಿಷಕ್ಕೆ 1000 ಕೆಎಲ್ ಆಮ್ಲಜನಕ ಪೂರೈಕೆ ಮಾಡುವ ಆಕ್ಸಿಜನ್ ಜನರೇಟರ್ ಹಾಕಲಿಕ್ಕೂ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಕೆಲ ದಿನಗಳಲ್ಲೇ ಇವೆಲ್ಲ ಸೌಲಭ್ಯಗಳು ಕಾರ್ಯಾಚರಣೆಗೆ ಬರಲಿವೆ.

  • ಕೋವಿಡ್ ಸಂಕಷ್ಟದಿಂದ ಹೊರಬರಲು ರಾಜ್ಯದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ: ಡಿಸಿಎಂ ಅಶ್ವತ್ಥನಾರಾಯಣ

    ಕೋವಿಡ್ ಸಂಕಷ್ಟದಿಂದ ಹೊರಬರಲು ರಾಜ್ಯದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ: ಡಿಸಿಎಂ ಅಶ್ವತ್ಥನಾರಾಯಣ

    -ಸಾಗರೋತ್ತರ ಕನ್ನಡಿಗರೊಂದಿಗೆ ಸಂವಾದದಲ್ಲಿ ಡಿಸಿಎಂ ಹೇಳಿಕೆ

    ಬೆಂಗಳೂರು: ಕೋವಿಡ್ ಸೇರಿದಂತೆ ಇತರ ಸಮಸ್ಯೆಗಳಿಂದ ನಿಂದ ಉಂಟಾಗಿರುವ ಉದ್ಯೋಗ ಮತ್ತು ಆರ್ಥಿಕ ನಷ್ಟವನ್ನು ಭರ್ತಿ ಮಾಡಲು ಇನ್ನು ಕೆಲ ವರ್ಷಗಳಲ್ಲಿ ಹಂತ ಹಂತವಾಗಿ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಕೌಶಲ್ಯಾಭಿವೃದ್ಧಿ & ಉದ್ಯಮಶೀಲತಾ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಸ್ವ ಉದ್ಯೋಗಕ್ಕೆ ಶಕ್ತಿ ನೀಡುವ ಹಿನ್ನೆಲೆಯಲ್ಲಿ ಶನಿವಾರ ಸಾಗರೋತ್ತರ ಕನ್ನಡಿಗರೊಂದಿಗೆ ಕರಕುಶಲ ಕಾಯಕ, ಕನ್ನಡ ಮತ್ತು ನಾವು ಎಂಬ ವಿಷಯದ ಕುರಿತು ಸಂವಾದ ನಡೆಸಿದ ಅವರು, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಇಲಾಖೆಗಳ ಮೂಲಕ ಇಷ್ಟು ಪ್ರಮಾಣದ ಉದ್ಯೋಗಾವಕಾಶಗಳನ್ನು ನಗರ, ಗ್ರಾಮೀಣ ಪ್ರದೇಶದಲ್ಲಿ ಸೃಷ್ಟಿ ಮಾಡುವ ಗುರಿ ಹೊಂದಲಾಗಿದೆ ಎಂದರು.

    ಈ ನಿಟ್ಟಿನಲ್ಲಿ ಯುವಜನರಿಗೆ ಕೌಶಲ್ಯ ತರಬೇತಿ ಕೊಡುವುದರ ಜತೆಗೆ, ಈಗಾಗಲೇ ಈ ವಲಯದಲ್ಲಿ ತೊಡಗಿಸಿಕೊಂಡಿರುವವರ ಕೌಶಲತೆಯನ್ನು ಉತ್ತಮಪಡಿಸುವ ಕೆಲಸವನ್ನೂ ಸರಕಾರ ಕೈಗೆತ್ತಿಕೊಂಡಿದೆ. ಅಲ್ಲದೆ, ಕರಕುಶಲ ವಲಯವೂ ಸೇರಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ದಾರಿಯಲ್ಲಿ ಸಾಗುತ್ತಿರುವವರಿಗೆ ತಾಂತ್ರಿಕವಾಗಿ ಬಲ ತುಂಬುವುದು ಹಾಗೂ ಆರ್ಥಿಕ, ಮಾರುಕಟ್ಟೆ ವಿಸ್ತಾರಕ್ಕೆ ಸಾಥ್ ಕೊಡುವುದು ಮಾಡಲಾಗುತ್ತಿದೆ. ಕ್ರಮೇಣವಾಗಿ ಅವರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗುವಂತೆ ಕ್ರಮ ವಹಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

    ಮಾರುಕಟ್ಟೆ ಮುಖ್ಯವಾಹಿನಿಗೆ: ರಾಜ್ಯದ ಉದ್ದಗಲಕ್ಕೂ ಕಾರ್ಯ ನಿರತವಾಗಿರುವ ಪ್ರತಿ ಸಣ್ಣ ವ್ಯಾಪಾರಿಯನ್ನೂ ಇ-ಕಾಮರ್ಸ್ ಮೂಲಕ ಮಾರುಕಟ್ಟೆಯ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರಕಾರ ಮಾಡುತ್ತಿದೆ. ಪ್ಲಿಪ್ಕಾರ್ಟ್, ಅಮೆಜಾನ್ನಂಥ ಇ-ಕಾಮರ್ಸ್ ಪೋರ್ಟಲ್ ಗಳ ಮೂಲಕ ಅವರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವ ರೀತಿಯಲ್ಲಿ ಅನುಕೂಲ ಮಾಡಿಕೊಡಲಾಗಿದೆ. ಈಗಾಗಲೇ ಇಂಥ ಅನೇಕ ದೈತ್ಯ ಕಂಪನಿಗಳ ಸರಕಾರ ಒಡಂಬಡಿಕೆ ಮಾಡಿಕೊಂಡಿದೆ ಎಂದು ಅವರು ಹೇಳಿದರು.

    ಕರಕುಶಲ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತಯಾರಾಗುವ ಅಥವಾ ಬೆಳೆಯುವ ಕೃಷಿ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡುವುದಕ್ಕೆ ಪೂರಕವಾಗುವಂತೆ ಕೇಂದ್ರ ಸರಕಾರವು ಒಂದು ಜಿಲ್ಲೆ-ಒಂದು ಉತ್ಪನ್ನ ಎಂಬ ಯೋಜನೆಯನ್ನು ಪರಿಚಯಿಸಿದೆ. ಆ ಯೋಜನೆಯ ಮೂಲಕ ನಮ್ಮ ರಾಜ್ಯದಲ್ಲಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಲಾಗುತ್ತಿದೆ. ಇದರ ವ್ಯಾಪ್ತಿಗೆ ಚನ್ನಪಟ್ಟಣದ ಗೊಂಬೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ತಯಾರಾಗುತ್ತಿರುವ ಉತ್ಪನ್ನಗಳು ಸೇರಲಿವೆ. ಗ್ರಾಮೀಣ ಆರ್ಥಿಕತೆಗೆ ಬಲ ತುಂಬಲು ಈ ಯೋಜನೆ ಸಹಕಾರಿಯಾಗುತ್ತದೆ ಎಂದು ಡಿಸಿಎಂ ನುಡಿದರು.

    ಮುಖ್ಯಮಂತ್ರಿ ಜತೆ ಚರ್ಚೆ: ಅನಿವಾಸಿ ಕರಕುಶಲ ವೇದಿಕೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಚರ್ಚೆ ನಡೆಸಲಾಗುವುದು. ಆದಷ್ಟು ಬೇಗ ಈ ನೇಮಕಾತಿಯನ್ನು ಮಾಡಲಾಗುವುದು. ಈ ಕ್ಷೇತ್ರಕ್ಕೆ ಅಗತ್ಯವಾದ ಎಲ್ಲ ಸಹಕಾರವನ್ನೂ ಕೊಡಲು ಸರಕಾರ ಸಿದ್ಧವಿದೆ ಎಂದು ಡಾ.ಅಶ್ವತ್ಥನಾರಾಯಣ ಭರವಸೆ ನೀಡಿದರು.

    ವಿದೇಶಗಳಿಂದ ರಾಜ್ಯಕ್ಕೆ ವಾಪಸ್ಸಾಗಿ ಇಲ್ಲಿಯೇ ಕೌಶಲ್ಯ ಕ್ಷೇತ್ರದ ಉದ್ಯಮದಲ್ಲಿ ತೊಡಗಿಸಿಕೊಳ್ಳುವವರಿಗೆ ಎಲ್ಲ ಸಹಕಾರ ನೀಡಲಾಗುತ್ತಿದೆ. ಅದಕ್ಕೆ ಪ್ರತ್ಯೇಕವಾದ ಪೋರ್ಟಲ್ ಇದ್ದು, ಕಳೆದ ವರ್ಷ 10,000 ಜನ ನೋಂದಣಿ ಮಾಡಿಕೊಂಡಿದ್ದಾರೆ. ಇವರೆಲ್ಲರಿಗೂ ಸರಕಾರ ವಿವಿಧ ರೀತಿಯಲ್ಲಿ ನೆರವು ಕೊಡುತ್ತಿದೆಯಲ್ಲದೆ, ವಿವಿಧ ಕಂಪನಿಗಳ ಜತೆ ಸಂಪರ್ಕ ವ್ಯವಸ್ಥೆ ಮಾಡಿದೆ. ಮುಂದೆ ಕೂಡ ಯಾರಾದರೂ ಬಂದರೆ ನಮ್ಮ ನೆರವು ಇದ್ದೇ ಇರುತ್ತದೆ ಎಂದು ಅವರು ತಿಳಿಸಿದರು.

    ಕೋವಿಡ್ ನಿಯಂತ್ರಣಕ್ಕೆ ಕ್ರಮ: ರಾಜ್ಯದ ಕೋವಿಡ್ ಪರಿಸ್ಥಿತಿಯ ಬಗ್ಗೆ ಕಳವಳ ಬೇಡ. ಈಗಾಗಲೇ ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ 55,000 ಬೆಡ್ ಗಳಿವೆ. 30,000 ಆಕ್ಸಿಜನ್ ಬೆಡ್‍ಗಳಿವೆ. ರಾಜ್ಯದಲ್ಲಿ ಶೇ.92ಕ್ಕೂ ಹೆಚ್ಚು ಸೋಂಕಿತರು ಮನೆಗಳಲ್ಲೇ ಕ್ವಾರಂಟೈನ್ ಆಗಿದ್ದಾರೆ. ಉಳಿದವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಲ ದಿನಗಳಲ್ಲೇ 10,000 ಆಕ್ಸಿಜನ್ ಬೆಡ್‍ಗಳನ್ನು ಹೊಸದಾಗಿ ಮಾಡಲಾಗುವುದು ಎಂದು ಡಿಸಿಎಂ ಹೇಳಿದರು.

    ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಬೇಲೂರು ರಾಘವೇಂದ್ರ ಶೆಟ್ಟಿ, ಅನಿವಾಸಿ ಕನ್ನಡಿಗರಾದ ಚಂದ್ರಶೇಖರ ಲಿಂಗದಳ್ಳಿ (ಅಮೆರಿಕ), ಗೋಪಾಲ್ ಕುಲಕರ್ಣಿ (ಇಂಗ್ಲೆಂಡ್), ಹೇಮಗೌಡ ಮಧು (ಇಟಲಿ), ರವಿ ಮಹಾದೇವ (ಸೌದಿ ಅರೆಬಿಯಾ), ಬಸವ ಪಾಟೀಲ್ (ಇಂಗ್ಲೆಂಡ್) ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

  • ಆಸ್ಪತ್ರೆಯಲ್ಲಿಯೇ ಸಿಎ ಪರೀಕ್ಷೆಗೆ ತಯಾರಿ – ಕೋವಿಡ್ ಸೋಂಕಿತನ ಫೋಟೋ ವೈರಲ್

    ಆಸ್ಪತ್ರೆಯಲ್ಲಿಯೇ ಸಿಎ ಪರೀಕ್ಷೆಗೆ ತಯಾರಿ – ಕೋವಿಡ್ ಸೋಂಕಿತನ ಫೋಟೋ ವೈರಲ್

    ಭುವನೇಶ್ವರ: ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸು ಹೊಂದಿದ್ದ ವ್ಯಕ್ತಿಯೋರ್ವ ಕೋವಿಡ್-19 ವಾರ್ಡ್‍ನ ಆಸ್ಪತ್ರೆಯ ಬೆಡ್ ಮೇಲೆ ಸಿಎ ಪರೀಕ್ಷೆಗೆ ಓದುಕೊಳ್ಳುತ್ತಿದ್ದ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕೋವಿಡ್ ಸೋಂಕಿದ್ದರೂ, ಅನಾರೋಗ್ಯವು ವ್ಯಕ್ತಿಯ ಓದಿಗೆ ಯಾವುದೇ ಅಡ್ಡಿಯನ್ನುಂಟು ಮಾಡಿಲ್ಲ. ಪರೀಕ್ಷೆಯಲ್ಲಿ ಹೇಗಾದರೂ ಉತ್ತೀರ್ಣರಾಗಬೇಕೆಂದು ಓದಿನ ಬಗ್ಗೆ ವ್ಯಕ್ತಿ ತೋರಿಸುತ್ತಿರುವ ಶ್ರದ್ಧೆಗೆ ಇದೀಗ ಪ್ರಶಂಸೆಗಳು ಸುರುಮಳೆ ಹರಿದು ಬರುತ್ತಿದೆ. ಅಲ್ಲದೇ ನೆಟ್ಟಿಗರು ಕೂಡ ವ್ಯಕ್ತಿಯ ವೃತ್ತಿ ಜೀವನಕ್ಕೆ ಯಶಸ್ಸು ಸಿಗಲಿ ಎಂದು ವಿಶ್ ಮಾಡುತ್ತಿದ್ದಾರೆ.

    ವೈರಲ್ ಆಗುತ್ತಿರುವ ಈ ಫೋಟೋವನ್ನು ಐಎಎಸ್ ಅಧಿಕಾರಿ ವಿಜಯ್ ಕುಲಾಂಗೆ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಜಯ್ ಕುಲಾಂಗೆಯವರು ಪ್ರಸ್ತುತ ಒಡಿಶಾದ ಗಂಜಾಂನ ಸಂಗ್ರಾಹಕ ಮತ್ತು ಜಿಲ್ಲಾಧಿಕಾರಿಯಾಗಿದ್ದಾರೆ. ಕುಲಾಂರವರು ಕೋವಿಡ್-19 ಆಸ್ಪತ್ರೆಗೆ ಭೇಟಿ ನೀಡಿದಾಗ ವ್ಯಕ್ತಿ ಓದುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಇಂತಹ ಸಮಯದಲ್ಲಿಯೂ ವ್ಯಕ್ತಿ ಓದಿನ ಬಗ್ಗೆ ಶ್ರದ್ಧೆ ಹೊಂದಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಯಶಸ್ಸು ಕಾಕತಾಳೀಯವಲ್ಲ. ನಿಮಗೆ ಶ್ರದ್ಧೆ ಇರಬೇಕು. ನಾನು ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ್ದೆ ಮತ್ತು ಈ ವ್ಯಕ್ತಿ ಸಿಎ ಪರೀಕ್ಷೆಗೆ ಓದುತ್ತಿರುವುದನ್ನು ನೋಡಿದೆ. ನಿಮ್ಮ ಶ್ರದ್ಧೆ ನಿಮ್ಮ ಎಲ್ಲ ನೋವನ್ನು ಮರೆಸುತ್ತದೆ. ಯಶಸ್ಸಿನ ನಂತರ ಉಪಚಾರಿಕತೆ ಮಾತ್ರ ಇರುತ್ತದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

    ಶೇರ್ ಮಾಡಿರುವ ಫೋಟೋದಲ್ಲಿ ವ್ಯಕ್ತಿ ಬಾಕ್ಸರ್‍ಗಳ ಚಿತ್ರವಿರುವ ಟಿ-ಶರ್ಟ್‍ನನ್ನು ಧರಿಸಿದ್ದು, ಪುಸ್ತಕಗಳು, ಕ್ಯಾಲ್ಕುಲೇಟರ್‍ನನ್ನು ಬೆಡ್ ಮೇಲೆ ಹರಡಿಕೊಂಡು ಕುಳಿತುಕೊಂಡಿರುತ್ತಾನೆ. ಜೊತೆಗೆ ಪಿಪಿಇ ಕಿಟ್ ಧರಿಸಿರುವ ಮೂರು ವ್ಯಕ್ತಿಗಳೊಂದಿಗೆ ಮಾತನಾಡುತ್ತಿರುದನ್ನು ಕಾಣಬಹುದಾಗಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ 6.5 ಸಾವಿರ ರೀ ಟ್ವೀಟ್ ಹಾಗೂ 46 ಸಾವಿರ ಲೈಕ್ಸ್, ಅನೇಕ ಕಾಮೆಂಟ್‍ಗಳು ಹರಿದುಬಂದಿದೆ.

  • ಕುರಿಗಳ ಸಂತೆ ಸಾವಿರಾರು ಜನ ಭಾಗಿ – ಕಾಟಾಚಾರಕ್ಕೆ ಅಧಿಕಾರಿಗಳ ಭೇಟಿ

    ಕುರಿಗಳ ಸಂತೆ ಸಾವಿರಾರು ಜನ ಭಾಗಿ – ಕಾಟಾಚಾರಕ್ಕೆ ಅಧಿಕಾರಿಗಳ ಭೇಟಿ

    – ಮಾಸ್ಕ್, ಸಾಮಾಜಿಕ ಅಂತರ ಇಲ್ಲ

    ಯಾದಗಿರಿ: ಜಿಲ್ಲೆಯಲ್ಲಿ ನಿತ್ಯವೂ ಕೋವಿಡ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದ್ದು, ಸರಕಾರ ಈಗಾಗಲೇ ಕೋವಿಡ್ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಆದರೆ ಯಾದಗಿರಿಯಲ್ಲಿ ಮಾತ್ರ ಜನರು ಡೋಂಟ್ ಕೇರ್ ಎನ್ನುತ್ತಿದ್ದಾರೆ.

    ಯಾದಗಿರಿ ನಗರದ ಹೊರಭಾಗದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ಮಂಗಳವಾರ ಕುರಿಗಳ ಸಂತೆ ಹಾಗೂ ಜಾನುವಾರು ಸಂತೆ ನಡೆಸಲಾಗುತ್ತಿದೆ. ಆದರೆ ಯಾವುದೇ ಕೋವಿಡ್ ನಿಯಮ ಪಾಲನೆ ಜನ ಮಾಡುತ್ತಿಲ್ಲ.

    ಕುರಿ ಹಾಗೂ ಜಾನುವಾರು ಮಾರಾಟ ಹಾಗೂ ಖರೀದಿ ಮಾಡಲು ತೆಲಂಗಾಣ, ಕಲಬುರಗಿ, ವಿಜಯಪುರ ಮೊದಲಾದ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಕುರಿಗಳ ಸಮೇತ ಜನ ಮಾರುಕಟ್ಟೆಗೆ ಬರುತ್ತಿದ್ದಾರೆ. ಆದರೆ ಕೋವಿಡ್ ನಿಯಮ ಮಾತ್ರ ಪಾಲನೆ ಮಾಡದೇ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ.

    ಸಾವಿರಾರು ಸಂಖ್ಯೆಯಲ್ಲಿ ಗುಂಪು ಗುಂಪಾಗಿ ಸೇರಿ ಸಂತೆಯಲ್ಲಿ ಭಾಗವಹಿಸುತ್ತಿದ್ದಾರೆ. ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡದೇ ನಿಯಮ ಉಲ್ಲಂಘನೆ ಮಾಡಲಾಗಿದೆ. ಹೆಚ್ಚಿನ ಜನಸಂದಣಿ ಸೇರುವುದಕ್ಕೆ ನಿಷೇಧವಿದ್ದರೂ ಜನರು ಮಾತ್ರ ಜಿಲ್ಲಾಡಳಿತದ ಆದೇಶ ಪಾಲನೆ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ.

    ನಗರಸಭೆ ಅಧಿಕಾರಿ ಬಿ.ಟಿ.ನಾಯಕ ಹಾಗೂ ಪೊಲೀಸರು ಕೂಡ ಕೇವಲ ರಸ್ತೆ ಬದಿ ನಿಂತು ಕ್ಯಾಮೆರಾಗಳ ಮುಂದೆ ಪೋಸ್ ಕೊಟ್ಟು ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡದೇ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕುವ ಕೆಲಸ ಮಾಡುತ್ತಿದ್ದಾರೆ. ಆದರೆ ಸಾವಿರಾರು ಸಂಖ್ಯೆಯಲ್ಲಿ ಸೇರಿ ಕುರಿಗಳ ಸಂತೆ ನಡೆಯುತ್ತಿದ್ದರೂ ಮೌನ ವಹಿಸಿದಕ್ಕೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ.

    ಸಂತೆಯಲ್ಲಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕುವ ಕೆಲಸ ಕೂಡ ಮಾಡಿಲ್ಲ. ಕೇವಲ ಕಾಟಾಚಾರಕ್ಕೆ ಎಂಬಂತೆ ಕುರಿಗಳ ಸಂತೆ ನಡೆಯುವ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಬಿ.ಟಿ.ನಾಯಕ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

  • ಬಿಹಾರದ ಮಾಜಿ ಶಿಕ್ಷಣ ಸಚಿವ ಮೇವಲಾಲ್ ಚೌಧರಿ ಕೋವಿಡ್‍ಗೆ ಬಲಿ

    ಬಿಹಾರದ ಮಾಜಿ ಶಿಕ್ಷಣ ಸಚಿವ ಮೇವಲಾಲ್ ಚೌಧರಿ ಕೋವಿಡ್‍ಗೆ ಬಲಿ

    ಪಾಟ್ನಾ: ಬಿಹಾರದ ಮಾಜಿ ಶಿಕ್ಷಣ ಸಚಿವ ಹಾಗೂ ಜನತಾ ದಳದ ಶಾಸಕ ಮೇವಲಾಲ್ ಚೌಧರಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

    ಕಳೆದ ಕೋವಿಡ್-19ಗೆ ಒಳಗಾಗಿದ್ದ ಸಚಿವರು ಪ್ಯಾರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ ನಾಲ್ಕು ಗಂಟೆಗೆ ಕೋವಿಡ್ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.

    ಮೇವಲಾಲ್ ಚೌಧರಿ, ಬಿಹಾರದ ತಾರಾಪುರ ಕ್ಷೇತ್ರದ ವಿಧಾನಸಭೆಯ ಸದಸ್ಯರಾಗಿದ್ದರು. ಆದರೆ ಭ್ರಷ್ಟಾಚಾರದ ಆರೋಪದಡಿ ರಾಜ್ಯ ಶಿಕ್ಷಣ ಸಚಿವ ಹುದ್ದೆಯಿಂದ ಅವರನ್ನು ತೆಗೆದುಹಾಕಲಾಯಿತು.

    ಭಾನುವಾರ ರಾತ್ರಿಯಿಂದ ಬಿಹಾರದ ಸರ್ಕಾರ ರಾಜ್ಯದಲ್ಲಿ ನೈಟ್ ಕಫ್ರ್ಯೂ ಜಾರಿಗೊಳಿಸಿದ್ದು, ಮೇ 15ರವರೆಗೂ ಬಿಹಾರದ ಶಾಲಾ-ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಿದೆ. ಇತ್ತೀಚೆಗೆ ಆರೋಗ್ಯ ಸಿಬ್ಬಂದಿಗೆ ಸಂಬಳದ ಜೊತೆಗೆ ಒಂದು ತಿಂಗಳು ಬೋನಸ್ ನೀಡಲು ಬಿಹಾರ ಸರ್ಕಾರ ಘೋಷಿಸಿದೆ.

  • ದಕ್ಷಿಣ ಕನ್ನಡದಲ್ಲಿ ಕೋವಿಡ್ ಪರಿಸ್ಥಿತಿ ಎದುರಿಸಲು ಡಾ.ಕೆ.ವಿ.ರಾಜೇಂದ್ರ ಸೂಚನೆ

    ದಕ್ಷಿಣ ಕನ್ನಡದಲ್ಲಿ ಕೋವಿಡ್ ಪರಿಸ್ಥಿತಿ ಎದುರಿಸಲು ಡಾ.ಕೆ.ವಿ.ರಾಜೇಂದ್ರ ಸೂಚನೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಮುಂಬರುವ ದಿನಗಳಲ್ಲಿ ಕೋವಿಡ್ ಸೋಂಕಿತರು ಹೆಚ್ಚು ಚಿಕಿತ್ಸೆಗೆ ಬರುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಅವರುಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಮೂಲಭೂತ ಸೌಕರ್ಯ ನೀಡಬೇಕು. ಉತ್ತಮ ಚಿಕಿತ್ಸೆ ನೀಡಲು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ವೆನ್ ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರದ ವೆನ್‍ಲಾಕ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಚಿಕಿತ್ಸೆಗೆ ಹೆಚ್ಚುವರಿ ಬೆಡ್‍ಗಳ ವ್ಯವಸ್ಥೆ ಮಾಡುವ ಕುರಿತು ಪರಿಶೀಲಿಸಿ ನಂತರ ಆರೋಗ್ಯ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಂತವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ವೈದ್ಯರುಗಳು, ತಜ್ಞ ವೈದ್ಯರುಗಳು ಹಾಗೂ ಶುಶ್ರೂಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡಲು ಕೊರತೆ ಉಂಟಾಗಬಾರದು. ಕೆ.ಎಂ.ಸಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಸೇವೆಗೆ ನಿಯೋಜಿಸುವುದರಿಂದ ಅಗತ್ಯ ಚಿಕಿತ್ಸೆಗಳನ್ನು ನೀಡಲು ಸಹಕಾರಿಯಾಗುತ್ತದೆ ಎಂದರು.

    ಸಾಮಾನ್ಯ ರೋಗ ಲಕ್ಷಣಗಳಿರುವ ವ್ಯಕ್ತಿಗಳನ್ನು ನಗರದ ಕದ್ರಿಯಲ್ಲಿರುವ ಇ.ಎಸ್.ಐ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ವೈರಾಲಜಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣಕಯಂತ್ರದ ಸಿಬ್ಬಂದಿಯನ್ನ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿ ಕೋವಿಡ್ ಪರೀಕ್ಷೆಯ ವರದಿಗಳನ್ನು ವಿಳಂಬವಿಲ್ಲದೇ ನೀಡಬೇಕು ಎಂದು ಕೂಡ ತಿಳಿಸಿದರು.

    ಆಸ್ಪತ್ರೆಯಲ್ಲಿ ಕೋವಿಡ್ ಪ್ರಕರಣಗಳಿಗೆ ಕಾಯ್ದಿರಿಸಿದ ಹಾಸಿಗೆಗಳು, ಐಸಿಯು, ವೆಂಟಿಲೇಟರ್ ಹಾಗೂ ಔಷಧಿಗಳನ್ನು ವ್ಯವಸ್ಥಿತವಾಗಿ ಇರುವಂತೆ ನೋಡಿಕೊಳ್ಳಬೇಕು. ಕೋವಿಡ್ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಪೂರಕವಾಗುವ ಔಷಧಿಗಳ ದಾಸ್ತಾನುಗಳು ಸೇರಿದಂತೆ ಮತ್ತಿತರ ಸುರಕ್ಷಾ ಸಾಧನಗಳು ಹಾಗೂ ಪರಿಕರಗಳನ್ನು ಮುಂದಿನ 15 ರಿಂದ 20 ದಿನಗಳಿಗೆ ಆಗುವಂತೆ ದಾಸ್ತಾನು ಇಟ್ಟಕೊಳ್ಳಬೇಕು ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್, ಸರ್ವೇಕ್ಷಣಾಧೀಕಾರಿ ಡಾ. ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸದಾಶಿವ ಶಾನುಭೋಗ್, ಕೆಎಂಸಿ ಹಾಗೂ ವೆನ್‍ಲಾಕ್ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

  • ಹಲವು ತಿಂಗಳ ಬಳಿಕ ಮತ್ತೆ ಒಂದಾದ ವೃದ್ಧ ದಂಪತಿ- ವೀಡಿಯೋ ವೈರಲ್

    ಹಲವು ತಿಂಗಳ ಬಳಿಕ ಮತ್ತೆ ಒಂದಾದ ವೃದ್ಧ ದಂಪತಿ- ವೀಡಿಯೋ ವೈರಲ್

    ಲಂಡನ್: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ದೂರವಾಗಿದ್ದ ದಂಪತಿ ಹಲವು ದಿನಗಳ ಬಳಿಕ ಮತ್ತೆ ಒಂದಾಗುವ ಒಂದು ಸುಂದರವಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ವಯಸ್ಸಾದ ದಂಪತಿಯ ಪ್ರೀತಿಗೆ ಮರುಳಾಗಿದ್ದಾರೆ. ಅಲ್ಲದೇ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸುಮಾರು 4 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

    ಮೇರಿ ಡೇವಿಸ್(89) ತನ್ನ ಪತಿ ಗೋರ್ಡನ್‍ರನ್ನು ಎಂಟು ತಿಂಗಳ ಹಿಂದೆ ಕೇರ್ ಹೋಂಗೆ ತೆರಳುವಾಗ ನೋಡಿದ್ದರು. ಲಾಕ್‍ಡೌನ್ ನಿರ್ಬಂಧಗಳಿಂದಾಗಿ ಗೋರ್ಡಾನ್‍ಗೆ ಮೇರಿಯನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಫೆಬ್ರವರಿಯಲ್ಲಿ ಮೇರಿ ಡೇವಿಸ್ ಇಂಗ್ಲೆಂಡ್‍ನ ನಾಟಿಂಗ್ಹ್ಯಾಮ್ ಶೈರ್‍ನಲ್ಲಿರುವ ಮತ್ತೊಂದು ಕೇರ್ ಹೋಂಗೆ ತೆರಳಿದ ವೇಳೆ ಪತಿಯನ್ನು ನೋಡಿದ್ದಾರೆ.

    ಪತ್ನಿ ಬರುತ್ತಿರುವುದನ್ನು ಮೊದಲೇ ತಿಳಿದಿದ್ದ ಗೋರ್ಡಾನ್ ಮೇರಿ ಹೋಂ ಕೇರ್ ಬಂದ ತಕ್ಷಣ ಸರ್‍ಪ್ರೈಸ್ ನೀಡಿದ್ದಾರೆ. ಸದ್ಯ ಈ ದಂಪತಿ ಇದೀಗ ಮತ್ತೆ ಒಟ್ಟಿಗೆ ವಾಸಿಸುತ್ತಿದ್ದಾರೆ.

    ಈ ವೀಡಿಯೋವನ್ನು ಅಲ್ಲೆ ಇದ್ದ ಸಿಬ್ಬಂದಿ ಸೆರೆಹಿಡಿದಿದ್ದು, ಪತ್ನಿಯನ್ನು ನೋಡಿದ ಕೂಡಲೇ ಗೋರ್ಡಾನ್ ಕೈನಲ್ಲಿ ಹಿಡಿದುಕೊಂಡಿದ್ದ ಕೋಲನ್ನು ಬಿಟ್ಟು ಮೇರಿಯನ್ನು ತಬ್ಬಿಕೊಳ್ಳುತ್ತಾರೆ. ಈ ವೇಳೆ ಬಹಳ ದಿನಗಳ ನಂತರ ಪತಿ ಗೋರ್ಡಾನ್‍ನನ್ನು ನೋಡಿದ ಮೇರಿ ಕೂಡ ಆನಂದಭಾಷ್ಪ ಸುರಿಸುತ್ತಾರೆ. ಜೊತೆಗೆ ಇಬ್ಬರು ಐ ಲವ್ ಯೂ ಎಂದು ಪ್ರೀತಿಯನ್ನು ವ್ಯಕ್ತಪಡಿಸುತ್ತಾ ಚುಂಬಿಸುವುದನ್ನು ಕಾಣಬಹುದಾಗಿದೆ.

  • ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಕಡ್ಡಾಯ: ಗೌರವ್ ಗುಪ್ತಾ

    ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಕಡ್ಡಾಯ: ಗೌರವ್ ಗುಪ್ತಾ

    – ಕೋವಿಡ್ ನಿಯಂತ್ರಣ, ಲಸಿಕೆ ನೀಡುವ ಸಂಬಂಧ ವಚ್ರ್ಯುಯಲ್ ಸಭೆ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಿಸಬೇಕಾದರೆ ಪ್ರತಿಯೊಬ್ಬರೂ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹಾಗೂ ಆಗಿಂದ್ದಾಗ್ಗೆ ಕೈತೊಳೆಯುತ್ತಿರಬೇಕು. ಇದಲ್ಲದೆ ಧಾರ್ಮಿಕ ಕೇಂದ್ರಗಳು, ಮಾಲ್‍ಗಳು, ಪಬ್ಸ್, ರೆಸ್ಟೋರೆಂಟ್‍ಗಳು, ಚಿತ್ರಮಂದಿಗಳಿಗೆ ಹೋಗುವುದನ್ನು ಆದಷ್ಟು ನಿಯಂತ್ರಣ ಮಾಡಿಕೊಳ್ಳಿ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

    ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಇಂದು ಜೂಮ್ ಮೂಲಕ ವಚ್ರ್ಯುಯಲ್ ಮೂಲಕ ಸಭೆ ನಡೆಸಿದ ಮುಖ್ಯ ಆಯುಕ್ತರು, ಅಪಾಟ್ರ್ಮೆಂಟ್ಸ್/ ಕಾಂಪ್ಲೆಕ್ಸ್ ಗಳಲ್ಲಿ ವಾಸಿಸುತ್ತಿರುವವರು ಐ.ಎಲ್.ಐ/ಸಾರಿ, ಸೋಂಕು ಲಕ್ಷಣಗಳು ಕಂಡು ಬಂದರೆ ಕೂಡಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಿ. ಜೊತೆಗೆ ಯಾರಿಗಾದರು ಸೋಂಕು ಪತ್ತೆಯಾಗಿದ್ದರೆ ಅವರ ಜೊತೆ ಸಂಪರ್ಕದಲ್ಲಿದ್ದವರು ಮುಂಜಾಗ್ರತೆಯಿಂದ ಸ್ವಯಂಪ್ರೇರಿತವಾಗಿ ಪರೀಕ್ಷೆ ಮಾಡಿಸಿಕೊಂಡು, ಐಸೋಲೇಟ್ ಆದಾಗ ಕೋವಿಡ್ ಸೊಂಕು ಹರಡುವುದು ಕಡಿಮೆಯಾಗಲಿದೆ. ಈ ಸಂಬಂಧ ಎಲ್ಲರೂ ಪಾಲಿಕೆಯ ಜೊತೆ ಕೈಜೋಡಿಸಿ ಕೋವಿಡ್ ಸೋಂಕು ನಿಯಂತ್ರಿಸಲು ಸಹಕರಿಸುವಂತೆ ತಿಳಿಸಿದರು.

    ನಗರದ ಅಪಾಟ್ರ್ಮೆಂಟ್ಸ್/ ಕಾಂಪ್ಲೆಕ್ಸ್ ಗಳಲ್ಲಿ ಲಸಿಕೆ ನೀಡಲು ಕಾಯುವ ಕೊಠಡಿ, ಲಸಿಕೆ ನೀಡುವ ಕೊಠಡಿ, ಪರಿವೀಕ್ಷಣಾ ಕೊಠಡಿಗಳಿಗೆ ಸ್ಥಳಾವಕಾಶವಿದ್ದಲ್ಲಿ ಸ್ಥಳೀಯ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದೊಂದಿಗೆ ತಾತ್ಕಾಲಿಕ ಲಸಿಕೆ ಕೇಂದ್ರಗಳನ್ನು ಸ್ಥಾಪಿಸುವ ಸಂಬಂಧ ಸರ್ಕಾರದ ಮಾರ್ಗಸೂಚಿ ಹೊರಡಿಸಿದ ನಂತರ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಸದ್ಯ ಹತ್ತಿರವಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ಲಸಿಕೆ ಪಡೆಯಬಹುದು ಎಂದರು.

    ನಗರದಲ್ಲಿ 20 ರಿಂದ 40 ವರ್ಷದ ವ್ಯಕ್ತಿಗಳಿಗೆ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ. ಈ ಸಂಬಂಧ ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ನಡೆಯುವ ಸಭೆ/ಸಮಾರಂಭ/ಕಾರ್ಯಕ್ರಮಗಳಿಗೆ ಹೋಗುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ ಎಂದು ತಿಳಿಸಿದ್ದಾರೆ.

    ಸಭೆಯಲ್ಲಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಮಾತನಾಡಿ, ನಗರದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ದಿನಕ್ಕೆ 3,000 ಪ್ರಕರಣಗಳು ಪತ್ತೆಯಾಗುತ್ತಿವೆ. ಪಾಸಿಟಿವ್ ರೇಟ್ ಜೊತೆ ಸಾವಿನ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಮುಂಜಾಗ್ರತೆಯಿಂದ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಕೋವಿಡ್ ಸೋಂಕು ಹರಡುವುದನ್ನು ತಡೆಯಬೇಕು. ಅದಕ್ಕೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

    ಸಭೆಯಲ್ಲಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಆರೋಗ್ಯಾಧಿಕಾರಿ, ಆರೋಗ್ಯ ವೈದ್ಯಾಧಿಕಾರಿ ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ನಿವಾಸಿಗಳು ಭಾಗವಹಿಸಿದ್ದರು.