Tag: ಪಬ್ಲಿಕ್ ಟಿವಿ Corona

  • ಕಾಳಸಂತೆಯಲ್ಲಿ ರೆಮ್ ಡಿಸಿವರ್ ಮಾರಾಟ

    ಕಾಳಸಂತೆಯಲ್ಲಿ ರೆಮ್ ಡಿಸಿವರ್ ಮಾರಾಟ

    ಬೆಂಗಳೂರು: ಕೊರೊನಾ ಸೋಂಕಿತರಿಗೆ ನೀಡಲಾಗುತ್ತಿರುವ ರೆಮ್‍ಡಿಸಿವರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಪ್ರತಿಷ್ಟಿತ ಹರ್ಷ ರಾಮಯ್ಯ ಆಸ್ಪತ್ರೆ ಮಾಲೀಕ ಶಿವಕುಮಾರ್ ಆರೋಪ ಮಾಡಿದ್ದಾರೆ.

    ರಾಷ್ಟ್ರಾದ್ಯಂತ ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಜನರು ಬಳಲುತ್ತಿದ್ದಾರೆ ಮತ್ತು ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಸಹ ಪ್ರಮುಖ ಕ್ರಮಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ. ಪೊಲೀಸರು ಮತ್ತು ಇತರ ಅನೇಕ ಸಂಬಂಧಿತ ಅಧಿಕಾರಿಗಳು ಸರ್ಕಾರದೊಂದಿಗೆ ವೈರಸ್ ನಿಯಂತ್ರಣಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.

    ಈ ಮಧ್ಯೆ ಸಿ, ಎಫ್ ಮತ್ತು ಸಗಟು ವಿತರಕರು ಬ್ಯಾಚ್ ನಂ ಆರ್ ಎಂ121004ಎ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ರೆಮ್ ಡಿಸಿವರ್ ಅನ್ನು ಸರಬರಾಜು ಮಾಡುತ್ತಿಲ್ಲ ಎಂದು ನೆಲಮಂಗಲ ನಗರದ ಪ್ರತಿಷ್ಟಿತ ಹರ್ಷ ರಾಮಯ್ಯ ಆಸ್ಪತ್ರೆ ಮಾಲೀಕ ಶಿವಕುಮಾರ್ ಆರೋಪ ಮಾಡಿದ್ದಾರೆ.

    ಕಳೆದ 10 ದಿನಗಳಿಂದ ಚುಚ್ಚುಮದ್ದಿನ ಬಗ್ಗೆ ವಿಚಾರಿಸಿದಾಗ, ಅವರು ಯಾವುದೇ ಸ್ಟಾಕ್ ಇಲ್ಲದೆ ಉತ್ತರಿಸುತ್ತಿದ್ದಾರೆ. ಸಿ&ಎಫ್ ವಿತರಕರು ಸರಿಯಾಗಿ ವಿತರಣೆ ಮಾಡುತ್ತಿಲ್ಲ. 1500 ರಿಂದ 2000 ಸಾವಿರಕ್ಕೆ ಸಿಗುವ ಔಷಧಿಯನ್ನು ಕಾಳ ಸಂತೆಯಲ್ಲಿ 15 ರಿಂದ 25 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ. ಈ ಕುರಿತಂತೆ ಕೂಡಲೇ ಕ್ರಮ ವಹಿಸುವಂತೆ ಮಾನ್ಯ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಪೊಲೀಸ್ ಕಮಿಷನರ್ ಸೇರಿದಂತೆ ಅನೇಕರಿಗೆ ಶಿವಕುಮಾರ್‍ರವರು ಪತ್ರ ಬರೆದು ಕೂಡಲೇ ಈ ಪ್ರಕರಣವನ್ನು ಸಿಬಿಐ, ಸಿಸಿಬಿ, ಸಿಐಡಿಗೆ ಹಸ್ತಾಂತರ ಮಾಡಿ ಕರ್ನಾಟಕದಲ್ಲಿ ಸ್ಟಾಕ್ ಲಭ್ಯವಿರುವಂತೆ ಮನವಿ ಮಾಡಿಕೊಂಡಿದ್ದಾರೆ.

  • ಕೊರೊನಾ ನಿಯಮ ಬ್ರೇಕ್ ಮಾಡಿದ ತೆಲಂಗಾಣ ಮಂತ್ರಿಗಳು

    ಕೊರೊನಾ ನಿಯಮ ಬ್ರೇಕ್ ಮಾಡಿದ ತೆಲಂಗಾಣ ಮಂತ್ರಿಗಳು

    ಹೈದರಾಬಾದ್: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಭಾರತದ ಹಲವು ರಾಜ್ಯಗಳಲ್ಲಿ ತೆಲಂಗಾಣ ಕೂಡ ಒಂದು. ರಾಜ್ಯದ ಚಿಕ್ಕ ಜಿಲ್ಲೆಗಳಲ್ಲಿ ಕೋವಿಡ್-19 ಸೋಕು ಹೆಚ್ಚಳವಾಗುತ್ತಿದ್ದರೂ ತೆಲಂಗಾಣ ರಾಜಕೀಯ ನಾಯಕರು ತಲೆಕೆಡಿಸಿಕೊಂಡಿಲ್ಲ.

    ಸಾರ್ವಕನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದವರಿಗೆ 1,000 ರೂ. ದಂಡ ವಿಧಿಸುವಂತೆ ಭಾನುವಾರ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿತ್ತು. ಜೊತೆಗೆ ಕೊರೊನಾ ನಿಯಮ ಉಲ್ಲಂಘಿಸುವವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆದರೆ ಈ ಆದೇಶ ಹೊರಡಿಸಿದ 24 ಗಂಟೆಗಳ ನಂತರ ತೆಲಂಗಾಣ ಕ್ಯಾಬಿನೆಟ್‍ನ ಇಬ್ಬರು ಮಂತ್ರಿಗಳು ಕೊರೊನಾ ನಿಯವನ್ನು ಉಲ್ಲಂಘಿಸಿದ್ದಾರೆ.

    ತೆಲಂಗಾಣದ ಪಶುಸಂಗೋಪನಾ ಸಚಿವ ಟಿ. ಶ್ರೀನಿವಾಸ್ ಯಾದವ್ ಮತ್ತು ರಾಜ್ಯ ಪ್ರವಾಸೋದ್ಯಮ ಸಚಿವ ಶ್ರೀನಿವಾಸ್ ಗೌಡ್‍ರವರು ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‍ಎಸ್) ಅಭ್ಯರ್ಥಿ ನಾಗಾರ್ಜುನ್ ಸಾಗರ್ ಪರವಾಗಿ ಮತಪ್ರಚಾರ ನಡೆಸಿದರು. ಈ ವೇಳೆ ಇಬ್ಬರು ಮಂತ್ರಿಗಳು ರ್ಯಾಲಿ ವೇಳೆ ಮಾಸ್ಕ್ ಧರಿಸಿರಲಿಲ್ಲ. ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ.

    ಭಾನುವಾರ ತೆಲಂಗಾಣದಲ್ಲಿ 3,187 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ. ಇದು ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾದ ದಿನವಾಗಿದೆ.

  • ಕೊರೊನಾ ಲಸಿಕೆ ಪಡೆದ ಸಿಎಂ ಯೋಗಿ ಆದಿತ್ಯನಾಥ್

    ಕೊರೊನಾ ಲಸಿಕೆ ಪಡೆದ ಸಿಎಂ ಯೋಗಿ ಆದಿತ್ಯನಾಥ್

    ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.

    ಈ ಕುರಿತಂತೆ ಸಿಎಂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಇಂದು ನಾನು ಲಕ್ನೋನ ಶ್ಯಾಮ್ ಪ್ರಸಾದ್ ಮುಖರ್ಜಿ ಸಿವಿಲ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ್ದೇನೆ. ಕೊರೊನಾ ಲಸಿಕೆ ಪಡೆಯಬೇಕಾದವರೆಲ್ಲರೂ ಲಸಿಕೆ ಸ್ವೀಕರಿಸಿ, ಉತ್ತರ ಪ್ರದೇಶವನ್ನು ಕೊರೊನಾ ಮುಕ್ತವನ್ನಾಗಿಸಿ. ಬನ್ನಿ ಎಲ್ಲರೂ ಕೊರೊನಾ ವಿರುದ್ಧ ಹೋರಾಟ ನಡೆಸೋಣ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

    ಯೋಗಿ ಆದಿತ್ಯನಾಥ್‍ರವರು ಕೊರೊನಾ ಲಸಿಕೆ ಸ್ವೀಕರಿಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಆರೋಗ್ಯ ಸಿಬ್ಬಂದಿ ರಶ್ಮಿ ಜೀತ್ ಸಿಂಗ್ ಎಂಬವರು ಮುಖ್ಯಮಂತ್ರಿಗೆ ಭಾರತ್ ಬಯೋಟಿಕ್‍ನ ಕೋವ್ಯಾಕ್ಸಿನ್ ನೀಡುತ್ತಿರುವುದನ್ನು ಕಾಣಬಹುದಾಗಿದೆ.

  • ಕೊನೆಗೂ ಎಚ್ಚೆತ್ತು 2ನೇ ಹಂತದ ಲಸಿಕೆಯನ್ನ ಆಸ್ಪತ್ರೆಯಲ್ಲಿ ಹಾಕಿಸಿಕೊಂಡ್ರು ಬಿ.ಸಿ ಪಾಟೀಲ್

    ಕೊನೆಗೂ ಎಚ್ಚೆತ್ತು 2ನೇ ಹಂತದ ಲಸಿಕೆಯನ್ನ ಆಸ್ಪತ್ರೆಯಲ್ಲಿ ಹಾಕಿಸಿಕೊಂಡ್ರು ಬಿ.ಸಿ ಪಾಟೀಲ್

    ಹಾವೇರಿ: ಕೃಷಿ ಸಚಿವ ಬಿ.ಸಿ.ಪಾಟೀಲ್ ಮೊದಲ ಹಂತದ ಕೊರೊನಾ ಲಸಿಕೆಯನ್ನು ಮನೆಯಲ್ಲಿಯೇ ಪಡೆದುಕೊಂಡಿದ್ದಾಗ ವಿವಾದ ಸೃಷ್ಟಿಯಾಗಿತ್ತು. ಇದೀಗ ಎಚ್ಚೆತ್ತು ಬಿ.ಸಿ.ಪಾಟೀಲ್ ಎರಡನೇ ಹಂತದ ಲಸಿಕೆಯನ್ನು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಪಡೆದುಕೊಂಡಿದ್ದಾರೆ.

    ಮಾರ್ಚ್ 2 ರಂದು ಮೊದಲನೇ ಹಂತದ ಲಸಿಕೆಯನ್ನು ಬಿ.ಸಿ.ಪಾಟೀಲ್ ಹಾಗೂ ಪತ್ನಿ ಮನೆಯಲ್ಲಿ ಲಸಿಕೆ ಹಾಕಿಸಿಕೊಂಡು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಮನೆಯಲ್ಲಿಯೇ ವ್ಯಾಕ್ಸಿನ್ ನೀಡಿದ ತಾಲೂಕು ಆರೋಗ್ಯಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ನೋಟೀಸ್ ನೀಡಿದ ಆರೋಗ್ಯ ಇಲಾಖೆ, ಈಗ ವೈದ್ಯಾಧಿಕಾರಿ ಡಾ.ಝಡ್. ಆರ್. ಮಕಾಂದಾರ್ ಅಮಾನತು ಮಾಡಿ ಆದೇಶ ನೀಡಿದೆ.

     

    ಇಂದು ಹಿರೇಕೆರೂರಿನ ಸರ್ಕಾರಿ ಆಸ್ಪತ್ರೆಯಲ್ಲಿ, ಎರಡನೇ ಹಂತದ ಕೋವಿಡ್ ಲಸಿಕೆಯನ್ನು ಪಡೆದೆನು.

    45 ವರ್ಷ ಮೇಲ್ಪಟ್ಟ ಎಲ್ಲ ನಾಗರೀಕರಿಗೂ ಕೊರೊನಾ…

    Posted by B.C.Patil on Friday, April 2, 2021

    ವಿವಾದದ ನಂತರ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಎರಡನೇ ಹಂತದ ಲಸಿಕೆಯನ್ನು ಸಚಿವ ಬಿ.ಸಿ. ಪಾಟೀಲ್ ಹಾಕಿಸಿಕೊಂಡಿದ್ದಾರೆ. ಎರಡನೇ ಹಂತದ ಲಸಿಕೆ ಹಾಕಿಸಿಕೊಂಡದ್ದನ್ನು ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಸ್ವಯಂ ಪ್ರೇರಿತವಾಗಿ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಿ, ಲಸಿಕೆ ಪಡೆದುಕೊಂಡು ಕೊರೊನಾ ಸೋಂಕಿನಿಂದ ದೂರವಿರಿ ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

  • ಕೊರೊನಾ ಸ್ಫೋಟ – ಮದುವೆ, ಅಂತ್ಯಕ್ರಿಯೆಗಳಿಗೆ ಹೊಸ ನಿಯಮ ಜಾರಿ

    ಕೊರೊನಾ ಸ್ಫೋಟ – ಮದುವೆ, ಅಂತ್ಯಕ್ರಿಯೆಗಳಿಗೆ ಹೊಸ ನಿಯಮ ಜಾರಿ

    – ಏಪ್ರಿಲ್ 30ರವರೆಗೆ ಜಾರಿ

    ನವದೆಹಲಿ: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ದೆಹಲಿ ಸರ್ಕಾರ ಮದುವೆ ಸಮಾರಂಭ ಹಾಗೂ ಅಂತ್ಯಕ್ರಿಯೆಗಳಲ್ಲಿ ಸಾರ್ವಜನಿಕರು ಒಟ್ಟಾಗಿ ಸೇರುವುದರಿಂದ ಕೆಲವು ನಿರ್ಬಂಧಗಳನ್ನು ಹಾಕಿದೆ.

    ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ) ಶನಿವಾರ ಹೊಸ ಆದೇಶಗಳನ್ನು ಹೊರಡಿಸಿದ್ದು, ಮದುವೆ ಹಾಗೂ ಇತರ ಸಮಾರಂಭಗಳಲ್ಲಿ 200 ಪಾಲ್ಗೊಳ್ಳಬಹುದೆಂದು ಸೂಚಿಸಿದೆ. ನಗರದ ತೆರೆದ ಸ್ಥಳಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ 100 ಮಂದಿ ಹಾಗೂ ಅಂತ್ಯಕ್ರಿಯೆಯಲ್ಲಿ ಕನಿಷ್ಠ 50 ಮಂದಿ ಭಾಗವಹಿಸಬೇಕೆಂದು ತಿಳಿಸಿದೆ.

    ಈ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರಗಳನ್ನು ಕಾಯ್ದುಕೊಳ್ಳುವುದು ಮುಂತಾದ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಆದೇಶಿಸಲಾಗಿದೆ. ಈ ಹೊಸ ಆದೇಶ ಏಪ್ರಿಲ್ 30ರವರೆಗೂ ಜಾರಿಯಲ್ಲಿರಲಿದ್ದು, ಅಲ್ಲಿಯವರೆಗೂ 200ಕ್ಕೂ ಹೆಚ್ಚು ಮಂದಿ ಸಮಾರಂಭಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಸೂಚಿಸಿದೆ.

    ದೆಹಲಿಯಲ್ಲಿ ಶನಿವಾರ 1,558 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಇಲ್ಲಿಯವರೆಗೂ 6,55,834 ಕೊರೊನಾ ಪ್ರಕರಣ ದಾಖಲಾಗಿದೆ. ಶನಿವಾರ 974 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

    ಒಟ್ಟಾರೆ ಇಲ್ಲಿಯವರೆಗೂ ದೆಹಲಿಯಲ್ಲಿ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 6,38,212 ಮಂದಿಯಾಗಿದ್ದು, ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 6,625 ಆಗಿದೆ.

  • ಶಿವಮೊಗ್ಗದಲ್ಲಿ ರೂಪಾಂತರಿ ವೈರಸ್ ಕಂಡು ಬಂದಿಲ್ಲ: ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗದಲ್ಲಿ ರೂಪಾಂತರಿ ವೈರಸ್ ಕಂಡು ಬಂದಿಲ್ಲ: ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ದುಬೈಯಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ವ್ಯಕ್ತಿಗೆ ಕೊರೊನಾ ನೆಗಟಿವ್ ವರದಿ ಬಂದಿದ್ದು, ಜಿಲ್ಲೆಯಲ್ಲಿ ದಕ್ಷಿಣ ಆಫ್ರಿಕಾ ಮೂಲಕ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.

    ಮೆಗ್ಗಾನ್ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುಬೈಯಿಂದ ಆಗಮಿಸಿದ್ದ ವ್ಯಕ್ತಿಯ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಪ್ರಾಥಮಿಕ ಸಂಪರ್ಕ ಹೊಂದಿರುವ ಎಲ್ಲರಿಗೂ ಸಹ ನೆಗೆಟಿವ್ ಬಂದಿದೆ. ಈ ವ್ಯಕ್ತಿಯೊಂದಿಗೆ ಎರಡನೇ ಹಂತದ ಸಂಪರ್ಕ ಹೊಂದಿದ್ದ 39 ಮಂದಿಯ ತಪಾಸಣೆ ನಡೆಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಇದೆ. ಈ ಹಿನ್ನೆಲೆಯಲ್ಲಿ ಯಾರೂ ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

    ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಕಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆ, ಆಯುರ್ವೇದಿಕ್ ಕಾಲೇಜು ಆಸ್ಪತ್ರೆ, 41 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 7 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಇದಲ್ಲದೆ ಶಿವಮೊಗ್ಗ ನಗರದ 8 ಖಾಸಗಿ ಆಸ್ಪತ್ರೆಗಳಲ್ಲಿ 250 ರೂ. ದರ ನಿಗದಿಪಡಿಸಿ ಲಸಿಕೆ ನೀಡಲಾಗುತ್ತಿದೆ. ಸ್ಥಳದಲ್ಲಿಯೇ ನೋಂದಣಿ ಮಾಡಲು ಅವಕಾಶವಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

    ನೆರೆಯ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ನಮ್ಮ ರಾಜ್ಯದಲ್ಲಿ ಸಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರ 1 ರಿಂದ 5ನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸಲು ಅನುಮತಿ ನೀಡಿಲ್ಲ. 6ನೇ ತರಗತಿಯಿಂದ ಮೇಲಿನವರಿಗೆ ಮಾತ್ರ ಶಾಲೆ ನಡೆಸಲು ಅನುಮತಿ ನೀಡಿದೆ ಎಂದು ನುಡಿದರು.

    ಈ ವೇಳೆ ಮೇಯರ್ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉಪಸ್ಥಿತರಿದ್ದರು.

  • ದೇಶದ ಹಿರಿಯ ಮಹಿಳೆಗೆ ಲಸಿಕೆ – ಬೆಂಗಳೂರಿನ 103 ವರ್ಷದ ವೃದ್ಧೆಗೆ ಡೋಸ್

    ದೇಶದ ಹಿರಿಯ ಮಹಿಳೆಗೆ ಲಸಿಕೆ – ಬೆಂಗಳೂರಿನ 103 ವರ್ಷದ ವೃದ್ಧೆಗೆ ಡೋಸ್

    ಬೆಂಗಳೂರು: 103 ವರ್ಷದ ವೃದ್ಧೆಯೊಬ್ಬರು  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್‌  ಪಡೆದಿದ್ದಾರೆ.

    ಜೆ.ಕಾಮೇಶ್ವರಿ ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವ ಮೂಲಕ ಕೋವಿಡ್ 19 ಲಸಿಕೆ ಪಡೆದ ಭಾರತದ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ರಾಷ್ಟ್ರಾದ್ಯಂತ ಕೋವಿಡ್-19 ಲಸಿಕೆಯನ್ನು 2.40 ಕೋಟಿ ಮಂದಿಗೆ ನೀಡಲಾಗಿದೆ ಎಂದು ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಅಲ್ಲದೆ ಮಾರ್ಚ್ 1 ರಿಂದ ಸಾರ್ವಜನಿಕರಿಗೆ ಲಸಿಕೆ ವಿತರಣೆ ಆರಂಭಿಸುತ್ತಿದ್ದಂತೆ ಕೇಂದ್ರ ಸರ್ಕಾರ ರಾಜ್ಯಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್‍ಗಳ ಸಂಖ್ಯೆಯನ್ನು ಇದೀಗ ಹೆಚ್ಚಿಸುತ್ತಿದೆ.

    ಮೂರನೇ ಹಂತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟು ರೋಗದಿಂದ ಬಳಲುತ್ತಿರುವ ಮಂದಿ ಲಸಿಕೆ ಪಡೆಯಬಹುದಾಗಿದೆ.

  • ಕೊರೊನಾ ಪ್ರಕರಣ ಹೆಚ್ಚಳ – ಜಲಂಧರ್‌‌ನಲ್ಲಿ ನೈಟ್ ಕರ್ಫ್ಯೂ

    ಕೊರೊನಾ ಪ್ರಕರಣ ಹೆಚ್ಚಳ – ಜಲಂಧರ್‌‌ನಲ್ಲಿ ನೈಟ್ ಕರ್ಫ್ಯೂ

    ಚಂಡೀಗಢ: ಪಂಜಾಬ್‍ನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದಿನಿಂದ ಜಲಂಧರ್ ಜಿಲ್ಲೆಯಲ್ಲಿ ರಾತ್ರಿ 11 ರಿಂದ ಮುಂಜಾನೆ 5ರವರೆಗೂ ನೈಟ್ ಕರ್ಫ್ಯೂ ಮಾಡಲು ನಿರ್ಧರಿಸಿರುವುದಾಗಿ ಜಿಲ್ಲಾಧಿಕಾರಿ ಘನಾಶ್ಯಾಮ್ ಥೋರಿ ತಿಳಿಸಿದ್ದಾರೆ.

    ಶುಕ್ರವಾರ ಜಿಲ್ಲೆಯಲ್ಲಿ ಸುಮಾರು 134 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಪ್ರಸ್ತುತ 856 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಕಳೆದ ತಿಂಗಳು ಪಂಜಾಬ್ ಸರ್ಕಾರ ಕೊರೊನಾ ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ನೈಟ್ ಕರ್ಫ್ಯೂ ನಡೆಸಲು ಆದೇಶಿಸಿತ್ತು. ಪಂಜಾಬ್‍ನಲ್ಲಿ ಶುಕ್ರವಾರ 818ಕ್ಕೂ ಹೊಸ ಪ್ರಕರಣಗಳು ದಾಖಲಾಗಿದ್ದು, 1,86,189ಕ್ಕೆ ಕೊರೊನಾ ಸಂಖ್ಯೆ ಏರಿಕೆಯಾಗಿದೆ. ಅಲ್ಲದೆ 11 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 5,898ಕ್ಕೆ ಏರಿಕೆಯಾಗಿದೆ.

    ಮಹಾರಾಷ್ಟ್ರದ ನಂತರ ನಾಲ್ಕು ವಾರಗಳಲ್ಲಿ ಪಂಜಾಬ್‍ನಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗಿದ್ದು, 6,264 ಇದ್ದ ಕೊರೊನಾ ಸಕ್ರಿಯ ಪ್ರಕರಣಗಳು ಇದೀಗ 6661ಕ್ಕೆ ಏರಿಕೆಯಾಗಿದೆ. ಜಲಂಧರ್ ಬಳಿಕ ಲುಧಿನಾದಲ್ಲಿ 105 ಪ್ರಕರಣಗಳು, ಪಟಿಯಾಲದಲ್ಲಿ 104 ಪ್ರಕರಣಗಳು ವರದಿಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡು 400 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ ಒಟ್ಟಾರೆ ಈವರೆಗೂ 1,73,630 ಸೋಂಕಿನಿಂದ ಗುಣಮುಕ್ತರಾಗಿದ್ದಾರೆ.

    ಇನ್ನೂ ಚಂಡೀಗಢದಲ್ಲಿ 76 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇದೀಗ 22,116ಕ್ಕೆ ಕೊರೊನಾ ಸಂಖ್ಯೆ ಏರಿಕೆಯಾಗಿದೆ.

  • ಕೊರೊನಾ ಲಸಿಕೆಯ 2ನೇ ಡೋಸ್ ಪಡೆದು ವ್ಯಕ್ತಿ ಸಾವು!

    ಕೊರೊನಾ ಲಸಿಕೆಯ 2ನೇ ಡೋಸ್ ಪಡೆದು ವ್ಯಕ್ತಿ ಸಾವು!

    ಮುಂಬೈ: ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದ ಬಳಿಕ 45 ವರ್ಷದ ವ್ಯಕ್ತಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಭಿವಾಂಡಿಯದ ಸುಖದೇವ್ ಕಿರ್ದತ್ ಮೃತ ವ್ಯಕ್ತಿ. ಇವರು ಕಣ್ಣಿನ ತಜ್ಞರ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುಖದೇವ್ ಕಿರ್ದತ್ ಇತ್ತೀಚೆಗಷ್ಟೇ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದಿದ್ದಾರೆ. ಲಸಿಕೆ ಪಡೆದ 15 ನಿಮಿಷಗಳ ಬಳಿಕ ವೀಕ್ಷಣಾ ಕೊಠಡಿಗೆ ತೆರಳಿ ಮೃತಪಟ್ಟಿದ್ದಾರೆ.

    ಈ ಮುನ್ನ ಜನವರಿ 28ರಂದು ಸುಖದೇವ್ ಕಿರ್ದತ್ ಕೊರೊನಾ ಲಸಿಕೆಯ ಮೊದಲ ಡೋಸ್ ಅನ್ನು ಪಡೆದುಕೊಂಡಿದ್ದು, ಲಸಿಕೆ ನೀಡುವುದಕ್ಕೂ ಮುನ್ನ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಸುಖದೇವ್ ಕಿರ್ದತ್ ಅನೇಕ ವರ್ಷಗಳಿಂದ ರಕ್ತದೊತ್ತಡ ಹೊಂದಿದ್ದಾರೆ ಎಂಬ ವಿಚಾರ ತಿಳಿದುಬಂದಿತ್ತು. ಆದರೂ ಲಸಿಕೆ ನೀಡಿದ ಬಳಿಕ ಯಾವುದೇ ಅಡ್ಡಪರಿಣಾಮಗಳಾಗಿರಲಿಲ್ಲ.

    ಆದರೆ ಈ ಬಾರಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಸುಖದೇವ್ ಕಿರ್ದತ್ ರಕ್ತದೊತ್ತಡ ಹಾಗೂ ಉಸಿರಾಟ ಕ್ರಿಯೆ ಎಲ್ಲವೂ ಸಹಜ ಸ್ಥಿತಿಯಲ್ಲಿದ್ದರಿಂದ ಲಸಿಕೆ ನೀಡಲಾಗಿತ್ತು. ಹಾಗಾಗಿ ವ್ಯಕ್ತಿ ಸಾವಿಗೆ ಕಾರಣವೆನೆಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲದಿರುವುದರಿಂದ ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಕಾರಣ ಸ್ಪಷ್ಟಗೊಳ್ಳಲಿದೆ ಎಂದು ಡಾ. ಖರತ್ ಎಂಬ ವೈದ್ಯರು ತಿಳಿಸಿದ್ದಾರೆ.