Tag: ಪಬ್ಲಿಕ್ ಟಿವಿ Corona

  • ಕತ್ತಲ ಕೋಣೆಯಲ್ಲಿ ಕೊರೊನಾ ಲಸಿಕೆ – ವೃದ್ಧರು, ಸಿಬ್ಬಂದಿ ಪರದಾಟ

    ಕತ್ತಲ ಕೋಣೆಯಲ್ಲಿ ಕೊರೊನಾ ಲಸಿಕೆ – ವೃದ್ಧರು, ಸಿಬ್ಬಂದಿ ಪರದಾಟ

    ಗದಗ: ಕೊರೊನಾ ಕರಾಳ ಕರಿ ಛಾಯೆಯ ಈ ಸಂದರ್ಭದಲ್ಲಿ ವ್ಯಾಕ್ಸಿನ್‍ಗಾಗಿ ನಗರದಲ್ಲಿ ಜನ ಪರದಾಡಿದರು. ಹಳೇ ಜಿಲ್ಲಾಸ್ಪತ್ರೆಯಲ್ಲಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಅವ್ಯವಸ್ಥೆ ಆಗರವಾಗಿತ್ತು.

    ವಿದ್ಯುತ್ ಇಲ್ಲದಕ್ಕೆ ಲಸಿಕೆ ನೀಡುವ ಕೊಠಡಿಗಳು ಕತ್ತಲು ಕೋಣೆಗಳಾಗಿದ್ದವು. ಸುಮಾರು 2 ಗಂಟೆಗಳ ಕಾಲ ಲಸಿಕಾ ಕೇಂದ್ರಗಳಲ್ಲಿ ವಿದ್ಯುತ್, ಗಾಳಿ, ಬೆಳಕು ಇಲ್ಲದೆ ಕತ್ತಲು ಮಯವಾಗಿದ್ದವು.

    ಲಸಿಕೆಗಾಗಿ ಸಾಕಷ್ಟು ಜನ ನೂರಾರು ಮೀಟರ್‍ವರೆಗೆ ಕ್ಯೂ ಸೇರಿದ್ದರು. ಆದರೂ 2 ಗಂಟೆ ಕಾಲ ಕತ್ತಲು ಕೋಣೆಯಲ್ಲಿ ಚುಚ್ಚುಮದ್ದು ನೀಡಲಾಯಿತು. ಬೇಸಿಗೆ ಈ ಸಂದರ್ಭದಲ್ಲಿ ತುಂಬಾನೇ ಸೆಕೆ ಆಗ್ತಿದ್ದರಿಂದ ಅಲ್ಲಿರುವ ವೃದ್ಧರು ಕೆಲಕಾಲ ಪರಿತಪಿಸಿದರು. ಕನಿಷ್ಠ ಜನರೇಟರ್ ವ್ಯವಸ್ಥೆ ಸಹ ಕಲ್ಪಿಸದ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದರು.

    ಆರೋಗ್ಯ ಸಿಬ್ಬಂದಿ ಮೊಬೈಲ್ ಟಾರ್ಚ್ ಮೂಲಕ ಹೆಸರು, ವಿಳಾಸ ದಾಖಲಾತಿ ಮಾಡಿಕೊಂಡರು. ಹೊರಭಾಗದಲ್ಲಿ ಲಸಿಕೆ ಪಡೆಯಲು ನಾ ಮುಂದೆ ತಾ ಮುಂದೆ ಅಂತ ಮುಗಿಬಿದ್ದಿದ್ದರು. ಲಸಿಕೆ ಪಡೆಯುವ ಸಂದರ್ಭದಲ್ಲೂ ಜನ ಸಾಮಾಜಿಕ ಅಂತರ ಮರೆತಿದ್ದರು.

  • ಕೊರೊನಾ ವಿರುದ್ಧ ಯುದ್ಧ ಮಾಡಲು ವಿಎಚ್‍ಪಿ ಕಾರ್ಯಕರ್ತರು ಪೂರ್ಣವಾಗಿ ಸಜ್ಜಾಗಬೇಕು: ಮಿಲಿಂದ್ ಪರಾಂಡೆ

    ಕೊರೊನಾ ವಿರುದ್ಧ ಯುದ್ಧ ಮಾಡಲು ವಿಎಚ್‍ಪಿ ಕಾರ್ಯಕರ್ತರು ಪೂರ್ಣವಾಗಿ ಸಜ್ಜಾಗಬೇಕು: ಮಿಲಿಂದ್ ಪರಾಂಡೆ

    ನವದೆಹಲಿ: ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ), ಶ್ರೀರಾಮ ದೇವರ ಸೇವೆ ಜೊತೆಯಲ್ಲಿ ರಾಷ್ಟ್ರ ಸೇವೆಯಲ್ಲೂ ತೊಡಗಿದೆ. ಕೋವಿಡ್-19ನ ಜಾಗತಿಕ ಸಾಂಕ್ರಾಮಿಕ ರೋಗದ ದಾಳಿಗೆ ಸಿಕ್ಕಿರುವ ಭಾರತೀಯರಿಗೆ ಸೇವೆ ಸಲ್ಲಿಸಲು ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಹಲವು ಕಾರ್ಯಗಳನ್ನು ಈಗಾಗಲೇ ವಿಎಚ್‍ಪಿ ಕಾರ್ಯಕರ್ತರು ಆಯಾ ರಾಜ್ಯಗಳ ಪ್ರಾದೇಶಿಕ ಮಟ್ಟದಲ್ಲಿ ಪ್ರಾರಂಭಿಸಿದ್ದಾರೆ. ಆದರೆ ಅದನ್ನು ಪೂರ್ಣ ಭಾರತ ಮಟ್ಟದಲ್ಲಿ ವೇಗಗೊಳಿಸಲು, ವಿಎಚ್‍ಪಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಕೊರೊನಾ ವಿರುದ್ಧ ಯುದ್ಧ ಘೋಷಿಸಿ ಕರೆ ನೀಡಿದರು.

    ಈ ಸಾಂಕ್ರಾಮಿಕ ರೋಗದ ವಿರುದ್ಧ ಯುದ್ಧ ಮಾಡಲು ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ಸಜ್ಜಾಗಬೇಕು ಮತ್ತು ಎಲ್ಲಾ ಮಠಗಳು ಮತ್ತು ದೇವಾಲಯಗಳು, ಗುರುದ್ವಾರಗಳು, ಸಂತರು, ಧರ್ಮಚಾರ್ಯರು ಮತ್ತು ಸ್ವಯಂಸೇವಾ ಸಂಸ್ಥೆಗಳನ್ನು ಸೇವೆಗೆ ಸಿದ್ಧಪಡಿಸಬೇಕು. ಅದೇನೇ ಇದ್ದರೂ, 2020ರಲ್ಲಿ ಕೊರೊನಾದ ಮೊದಲ ಅಲೆಯ ಸಮಯದಲ್ಲಿ ವಿಎಚ್‍ಪಿ ಕಾರ್ಯಕರ್ತರು ಇಡೀ ದೇಶದಲ್ಲಿ ಕೊರೊನಾ ಪೀಡಿತರಿಗೆ ಸೇವೆಯನ್ನು ಅರ್ಪಿಸಿದರು, ಆದರೆ ಈ ಬಾರಿ ಪರಿಸ್ಥಿತಿಯು ಹೆಚ್ಚು ಅಪಾಯಕಾರಿ ಪ್ರಮಾಣವನ್ನು ತಲುಪಿರುವುದನ್ನು ಗಮನದಲ್ಲಿಟ್ಟುಕೊಂಡು, ಅವರ ಸೇವಾ ಚಟುವಟಿಕೆಗಳನ್ನು ಏರಿಸಿದ್ದಾರೆ.

    ವಿಎಚ್‍ಪಿ ತನ್ನ ಸೇವಾ ತಂತ್ರಗಳನ್ನು ನಾಲ್ಕು ಭಾಗಗಳಾಗಿ ಮಾಡಿದೆ. ಮೊದಲನೆಯದು ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ. ಎರಡನೇಯದು ಸೋಂಕಿತರಿಗೆ ಸೇವೆ ನೀಡುವುದು ಮತ್ತು ಅವರ ಜೀವ ಉಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವುದು. ಮೂರನೇಯದು ಪೀಡಿತ ಕುಟುಂಬಗಳಿಗೆ ಬೆಂಬಲ ಮತ್ತು ನೆರವು ನೀಡುವುದು. ಮತ್ತು ನಾಲ್ಕನೆಯದು ಕೊರೊನಾ ಸಂತ್ರಸ್ತರ ಕೊನೆಯ ಪ್ರಯಾಣ ಮತ್ತು ಅವರ ವಿಮೋಚನೆಗಾಗಿ ಅಗತ್ಯ ಕ್ರಮಗಳನ್ನು ಏರ್ಪಡಿಸುವುದು. ಎಲ್ಲಾ ನಾಲ್ಕು ರಂಗಗಳನ್ನು ನಿಭಾಯಿಸುವ ಸಲುವಾಗಿ, ವಿಎಚ್‍ಪಿ ತನ್ನ ಕಾರ್ಯಕರ್ತರು ಮತ್ತು ಸಾಂಸ್ಥಿಕ ಬಲವನ್ನು ನಿಯೋಜಿಸಲು ಸಿದ್ಧಪಡಿಸಿದೆ.

    ರೋಗ ತಡೆಗಟ್ಟುವ ಕ್ರಮಗಳ ಬ್ಯಾನರ್ ಅಡಿಯಲ್ಲಿ ವಿಎಚ್‍ಪಿ ಕಾರ್ಯಕರ್ತರು, ಎಲ್ಲಾ ಅರ್ಹ ಜನರು, ಸರ್ಕಾರದ ವ್ಯಾಕ್ಸಿನೇಷನ್ ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಕಾರ್ಯಕರ್ತರು, ಸಾಮಾಜಿಕ ಮಾಧ್ಯಮಗಳು, ಫೋನ್ ಕರೆಗಳು ಮತ್ತು ವೈಯಕ್ತಿಕ ಸಂಪರ್ಕಗಳ ಮೂಲಕ, ಲಸಿಕೆ ವಿರೋಧಿ ಪ್ರಚಾರ ಮತ್ತು ಗೊಂದಲಗಳನ್ನು ತೆಗೆದುಹಾಕಿ ಜನರನ್ನು ಪ್ರೇರೇಪಿಸುತ್ತಿದ್ದಾರೆ ಮತ್ತು ಅವರ ವ್ಯಾಕ್ಸಿನೇಷನ್‍ನನ್ನು ಸುಗಮಗೊಳಿಸುತ್ತಿದ್ದಾರೆ. 6 ಅಡಿ ವೈಯಕ್ತಿಕ ದೂರ, ಮುಖಗವಸು ಬಳಕೆ, ಕೈ ಮತ್ತು ಮುಖದ ನೈರ್ಮಲ್ಯೀಕರಣ ಮತ್ತು ನೈರ್ಮಲ್ಯದ ಇತರ ಪ್ರೋಟೋಕಾಲ್‍ಗಳ ಪ್ರಸ್ತುತ ಮಾನದಂಡಗಳ ಅನಿವಾರ್ಯತೆಯ ಬಗ್ಗೆ ಅವರು ಜನರನ್ನು ಸಂವೇದನಾಶೀಲಗೊಳಿಸುತ್ತಿದ್ದಾರೆ. ಅಲ್ಲದೇ ಅವರು ಆಯುರ್ವೇದ, ಹೋಮಿಯೋಪತಿ ಮತ್ತು ಅಗತ್ಯವಿರುವಂತ ಸಿದ್ಧ ಔಷಧಿಗಳನ್ನು ವಿತರಿಸುತ್ತಾ ಇದ್ದಾರೆ. ಸಾಮಾಜಿಕ ಶಿಸ್ತು, ತಾಳ್ಮೆ ಮತ್ತು ಸ್ಥೈರ್ಯವನ್ನು ಹೆಚ್ಚಿಸಲು ಯೋಗ ತರಗತಿಗಳನ್ನು ಆನ್‍ಲೈನ್ ಮೂಲಕ ನಡೆಸುತ್ತಿದ್ದಾರೆ ಮತ್ತು ಸಹಾಯವಾಣಿ ಸಂಖ್ಯೆಗಳ ಮೂಲಕ ಆಯಾ ಕ್ಷೇತ್ರಗಳ ತಜ್ಞರೊಂದಿಗೆ ಸಮಾಲೋಚನೆ ಮತ್ತು ಸಹಾಯವನ್ನು ಮಾಡುತ್ತಿದ್ದಾರೆ.

    ಎರಡನೇ ಭಾಗಕ್ಕೆ ಸಂಬಂಧಿಸಿದ ಸೇವೆಗಳಲ್ಲಿ ವೈದ್ಯಾಧಿಕಾರಿ ಮತ್ತು ವೈದ್ಯರೊಂದಿಗೆ ಸಮಾಲೋಚನೆ, ಆಂಬುಲೆನ್ಸ್‍ಗಳ ವ್ಯವಸ್ಥೆ, ಆಮ್ಲಜನಕ ಸಿಲಿಂಡರ್‍ಗಳು, ಪ್ಲಾಸ್ಮಾ, ರಕ್ತ, ಆಮ್ಲಜನಕ ಸಾಂದ್ರಕ ಘಟಕಗಳು, ಔಷಧಿಗಳು ಮತ್ತು ಆಕ್ಸಿಮೀಟರ್‍ಗಳು ಇತ್ಯಾದಿಗಳ ವ್ಯವಸ್ಥೆ ಸೇರಿವೆ. ಇದರಲ್ಲಿ ಪ್ರತ್ಯೇಕತೆ (ಐಸೋಲೇಷನ್) ಕ್ವಾರಂಟೈನ್ ಕೇಂದ್ರಗಳು, ರೋಗಿಗಳಿಗೆ ಊಟದ ವ್ಯವಸ್ಥೆ ಮತ್ತು ಅವರ ಕುಟುಂಬ ಸದಸ್ಯರಿಗೆ ವ್ಯವಸ್ಥೆ, ಮನೆಗಳು ಮತ್ತು ಆಸ್ಪತ್ರೆಗಳಲ್ಲಿ ಒಂಟಿ ಕುಟುಂಬ ಸದಸ್ಯರಿಗೆ ಸಹಾಯ ಮತ್ತು ವೈದ್ಯಕೀಯ ಸಿಬ್ಬಂದಿಗೆ ಬೆಂಬಲ ಮತ್ತು ಸಹಕಾರ ಇತ್ಯಾದಿ.

    ಮೂರನೇ ಭಾಗಕ್ಕೆ ಸಂಬಂಧಿಸಿದ ಸೇವೆಗಳಲ್ಲಿ ಆಹಾರ ಮತ್ತು ನೀರು, ಔಷಧಿಗಳು ಮತ್ತು ಪಡಿತರವನ್ನು ರೋಗ ಪೀಡಿತ ಕುಟುಂಬಗಳಿಗೆ ಮತ್ತು ಕಾರ್ಮಿಕರಿಗೆ, ಇತರ ಬಡ ಜನರಿಗೆ ವಿತರಿಸುವುದು. ಒಂಟಿ ಮನೆಯ ವೃದ್ಧರು, ವಿದ್ಯಾರ್ಥಿಗಳು ಮತ್ತು ಮಕ್ಕಳ ಆರೈಕೆ. ಹಸುವಿನ ಸಂತತಿ ಮತ್ತು ಇತರ ಪ್ರಾಣಿಗಳಿಗೆ ಮೇವು/ಆಹಾರ ಮತ್ತು ನೀರು, ಪ್ರಯಾಣಿಸುವ ಜನರಿಗೆ ಆಹಾರ, ನೀರು ಮತ್ತು ಔಷಧಿಗಳನ್ನು ಒದಗಿಸಲಾಗುತ್ತಿದೆ.

    ನಾಲ್ಕನೇ ಭಾಗಕ್ಕೆ ಸಂಬಂಧಿಸಿದ ಸೇವೆ ಅತ್ಯಂತ ಕಷ್ಟಕರ ಮತ್ತು ಸವಾಲಿನದು. ಕೊರೊನಾದಿಂದ ಪ್ರಾಣ ಬಿಟ್ಟವರನ್ನು ಆಸ್ಪತ್ರೆಗಳು/ ಮನೆಗಳಿಂದ ವಿಮೋಚನೆಯ ಬಾಗಿಲುಗಳಿಗೆ ಸಾಗಿಸಲು ಮೋರ್ಚುರಿ ವ್ಯಾನ್‍ಗಳನ್ನು ವ್ಯವಸ್ಥೆ ಮಾಡುವುದು, ಅವರ ಅಂತ್ಯಕ್ರಿಯೆಯ ಸೇವೆಗಳು ಮತ್ತು ಶವಸಂಸ್ಕಾರದ ವ್ಯವಸ್ಥೆ, ಸಂಬಂಧಿತ ಸಾಮಾಗ್ರಿಗಳ ವ್ಯವಸ್ಥೆ ಮುಂತಾದ ಕಾರ್ಯಗಳನ್ನು ಮಾಡುವುದು ಮತ್ತು ಕೊರೊನಾ ಸಂತ್ರಸ್ತರ ಕುಟುಂಬ ಸದಸ್ಯರನ್ನು ಮನವೊಲಿಸುವುದು ಕಷ್ಟಕರವಾದ ಕೆಲಸ. ಯಾವಾಗಲೂ ಕೊರೊನಾ ಪೀಡಿತರ ಸೇವೆಗಳಲ್ಲಿ ತೊಡಗಿರುವ ಕಾರ್ಯಕರ್ತರ ಸ್ವರಕ್ಷಣೆ ಒಂದು ನಿರ್ಣಾಯಕ ಸವಾಲಾಗಿದೆ.

    ವಿಎಚ್‍ಪಿಯ ಯುವ ವಿಭಾಗಗಳಾದ ಭಜರಂಗದಳ ಮತ್ತು ದುರ್ಗಾವಾಹಿನಿ – ಎಲ್ಲಾ ಅಪಾಯಗಳನ್ನು ತೆಗೆದುಕೊಳ್ಳುತ್ತಾ, ಈ ಸೇವಾ ಚಟುವಟಿಕೆಗಳಲ್ಲಿ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಂಪನ್ಮೂಲವಾರು ಬುದ್ಧಿವಂತಿಕೆಯಿಂದ ತೊಡಗಿಸಿಕೊಂಡಿದ್ದಾರೆ. ಮಿಲಿಂದ್ ಪರಾಂಡೆ ಅವರು ಸೇವಾಕಾರ್ಯದಲ್ಲಿ ಸಂಪನ್ಮೂಲದೊಂದಿಗೆ ಭಾಗವಹಿಸಲು ಕಾರ್ಪೊರೇಟ್ ಜಗತ್ತಿಗೆ ಕರೆ ನೀಡಿದರು. ಸಮಾಜದ ಸ್ಥೈರ್ಯವನ್ನು ದುರ್ಬಲಗೊಳಿಸುವ ಮೂಲಕ ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಮಾಧ್ಯಮಗಳ ಒಂದು ಭಾಗವು ಉದ್ದೇಶಪೂರ್ವಕವಾಗಿ ಅಥವಾ ಅಜಾಗರೂಕತೆಯಿಂದ ಪ್ರಯತ್ನಿಸಲಾಗುತ್ತಿದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿದರು. ವಿಎಚ್‍ಪಿ ಕಾರ್ಯಕರ್ತರು ತಮ್ಮನ್ನು ತಾವು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಸಹಕರಿಸುತ್ತಿದ್ದಾರೆ ಮತ್ತು ಉತ್ತಮ ಕಾರ್ಯಗಳು ಮತ್ತು ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

  • ಕೋವಿಡ್ ಭಯ – ಅಶಕ್ತ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸಲು ಹಿಂದೇಟು

    ಕೋವಿಡ್ ಭಯ – ಅಶಕ್ತ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸಲು ಹಿಂದೇಟು

    ಹಾವೇರಿ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ ಏನಾದರೂ ಆಗಿ ಬಿದ್ದು- ಓದ್ದಾಡುತ್ತಿದ್ದರೂ ಮುಟ್ಟಿ ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.

    ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಅರೇ ಪ್ರಜ್ಞಾವ್ಯಸ್ಥೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ಪರದಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.

    50 ವರ್ಷದ ಅಪರಿಚಿತ ವ್ಯಕ್ತಿ ಹೊಸಮನಿ ಸಿದ್ದಪ್ಪ ವೃತ್ತದ ರಸ್ತೆಯ ಪಕ್ಕದಲ್ಲೇ ಬಿದ್ದು ನರಳಾಡಿದರೂ ಜನರು ನೋಡಿಕೊಂಡು ಓಡಾಡಿದ್ದಾರೆ. ಆದರೆ ಯಾರು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಲಿಲ್ಲ. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್, ಒಂದು ಗಂಟೆಗಳ ಕಾಲ ಅಂಬುಲೆನ್ಸ್‍ಗೆ ಕರೆ ಮಾಡಿದರೂ, ಯಾವ 108 ವಾಹನ ಸಿಗಲಿಲ್ಲ.

    ಸ್ಥಳದಲ್ಲಿಯೇ ಇದ್ದ ಪೊಲೀಸರು ಹಾಗೂ ಟಂಟಂ ವಾಹನದ ಸಿಬ್ಬಂದಿ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಆ ವ್ಯಕ್ತಿ ನಿನ್ನೆಯಿಂದ ಸರಿಯಾಗಿ ಊಟ ಮಾಡಿರಲಿಲ್ಲ. ಹಾಗಾಗಿ ಅಶಕ್ತನಾಗಿ ರಸ್ತೆಯ ಪಕ್ಕದಲ್ಲೇ ಬಿದ್ದು ಒದ್ದಾಡಿದ್ದಾನೆ. ಸದ್ಯ ಇದೀಗ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ಧಾರವಾಡ ಹಾಗೂ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ನೂರು ಸೋಂಕಿತರಿಗೆ ಒಬ್ಬರೇ ನರ್ಸ್ – ಕಣ್ಣೀರಿಟ್ಟ ಕೊರೊನಾ ವಾರಿಯರ್ಸ್

    ನೂರು ಸೋಂಕಿತರಿಗೆ ಒಬ್ಬರೇ ನರ್ಸ್ – ಕಣ್ಣೀರಿಟ್ಟ ಕೊರೊನಾ ವಾರಿಯರ್ಸ್

    ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾ ಕ್ರೂರಿತನವನ್ನು ಹತ್ತಿರದಿಂದ ನೋಡಿದ ಹೆಲ್ತ್ ವಾರಿಯರ್ಸ್ ತಮ್ಮ ಆಸ್ಪತ್ರೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.

    ಈ ಕುರಿತಂತೆ ಮಾತನಾಡಿದ ಶ್ರೀ ಲಕ್ಷ್ಮಿ ಹಾಸ್ಪಿಟಲ್  ವೈದ್ಯರು, ಆಸ್ಪತ್ರೆ ಒಳಗಡೇ ಮುಖ್ಯವಾಗಿ ಆಕ್ಸಿಜನ್ ಸಿಗುತ್ತಿಲ್ಲ. ಮ್ಯಾನ್ ಪವರ್ ಮೊದಲಿಗಿಂತ ಶೇ.30 ರಿಂದ 60 ಕಡಿಮೆಯಾಗಿದೆ. ಒಬ್ಬ ನರ್ಸ್ ಇಟ್ಟುಕೊಂಡು ನಾವು ನೂರು ಜನರನ್ನು ನಿಭಾಯಿಸಬೇಕಾಗಿದೆ. ಒಬ್ಬ ಶಿಫ್ಟ್ ಮ್ಯಾನ್‍ನನ್ನು ಇಟ್ಟುಕೊಂಡು 10 ಜನರನ್ನು ಶಿಫ್ಟ್ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಸರ್ಕಾರ ನೀವು ಬಿಯು ನಂಬರ್ ಇರುವ ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಿ ಅಂತ ಹೇಳುತ್ತಿದೆ. ಆದರೆ ಮೊದಲಿಗೆ ªಚಿಕಿತ್ಸೆಗೆ ಬೇಕಾದ ಸಿಬ್ಬಂದಿ ಸಹಾಯವಿಲ್ಲದೇ ನಾವು ಹೇಗೆ ತೆಗೆದುಕೊಳ್ಳುವುದು ಎಂದು ಪ್ರಶ್ನಿಸಿದರು.

    ನಮಗೆ ಆಕ್ಸಿಜನ್, ರೆಮ್‍ಡಿಸಿವರ್ ಇಂಜೆಕ್ಷನ್ ನೀಡಲು ತೊಂದರೆ ಆಗುತ್ತಿದೆ. ದಿನಕ್ಕೆ 2 ಬಾರಿ ಲಿಕ್ವಿಡ್ ಆಕ್ಸಿಜನ್ ಬೇಕು. ಆದರೆ 2 ದಿನಕ್ಕೊಮ್ಮೆ ಅದು ಸಿಗುತ್ತಿದೆ. ಆಕ್ಸಿಜನ್ ಅವಶ್ಯಕತೆ ಇರುವವರಿಗೆ ನೀಡಲಾಗದೇ ಕಷ್ಟವಾಗುತ್ತಿದೆ. ಇನ್ನೂ ಕಳಪೆ ಮಾದರಿ ಆಕ್ಸಿಜನ್ ನೀಡಿ ಎಷ್ಟೋ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

    ಆರೋಗ್ಯ ಸಿಬ್ಬಂದಿಯೊಬ್ಬರು, ಆಸ್ಪತ್ರೆಯಲ್ಲಿ ಆಕ್ಸಿಜನ್ ಕಡಿಮೆಯಾಗುತ್ತಿದೆ. ಎಲ್ಲ ಪೇಷೆಂಟ್‍ಗಳಿಗೂ ಬೆಡ್ ಹಾಗೂ ಬೆಡ್ ಶೀಟ್ ನೀಡುವುದಕ್ಕೆ ಆಗುತ್ತಿಲ್ಲ. ಏಮರ್ಜೆನ್ಸಿ ವಾರ್ಡ್‍ನಲ್ಲಿ 4 ಬೆಡ್ ಮಾತ್ರ ಇರುತ್ತದೆ. ಆಸ್ಪತ್ರೆಗೆ ಬಂದ ಏಮರ್ಜೆನ್ಸಿ ಪೇಷಂಟ್‍ಗಳನ್ನು ಕೂರಿಸಿ ಬಿಡುವುದಕ್ಕೂ ಆಗುವುದಿಲ್ಲ. ಏಮರ್ಜೆನ್ಸಿ ಇದ್ದಾಗ ಆಕ್ಸಿಜನ್, ಇಂಜೆಕ್ಷನ್ ಹಾಕಲೇ ಬೇಕಾಗುತ್ತದೆ. ಅಲ್ಲದೇ ಆಕ್ಸಿಜನ್ ಸಿಗದೇ 18 ವರ್ಷ, 20, 22 ವರ್ಷದವರು ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಸೋಕಿಂತರ ಸಾವು ನಮ್ಮ ಕರಳನ್ನು ಹಿಡುವಂತಾಗುತ್ತಿದೆ ನೋವು ತೋಡಿಕೊಂಡಿದ್ದಾರೆ.

  • ಲಸಿಕೆ ಪಡೆದವರಿಗೆ ಟೊಮೆಟೊ ಫ್ರೀ

    ಲಸಿಕೆ ಪಡೆದವರಿಗೆ ಟೊಮೆಟೊ ಫ್ರೀ

    ರಾಯಪುರ: ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರ ಘೋಷಿಸಿದೆ. ಈ ಮಧ್ಯೆ ಛತ್ತಿಸ್ ಗಢ್ ನ ಬಿಜಾಪುರದ ಒಂದು ಸಣ್ಣ ಪಟ್ಟಣದಲ್ಲಿ ಲಸಿಕೆ ಪಡೆಯುವಂತೆ ಜನರನ್ನು ಉತ್ತೇಜಿಸಲು ಹೊಸ ರೀತಿಯ ವಿಭಿನ್ನ ತಂತ್ರವನ್ನು ಅನುಸರಿಸಿದ್ದಾರೆ.

    ಹೌದು. ಲಸಿಕೆ ಕೇಂದ್ರಗಳಿಗೆ ವ್ಯಾಕ್ಸಿನ್ ಪಡೆಯಲು ಬರುವವರಿಗೆ ಟೊಮೆಟೋ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಫೋಟೋದಲ್ಲಿ ಅನೇಕ ಮಹಿಳೆಯರು ವ್ಯಾಕ್ಸಿನ್ ಪಡೆದು ಲಸಿಕೆ ಕೇಂದ್ರದಿಂದ ಹೊರಬರುತ್ತಿರುವ ವೇಳೆ ಕವರ್‍ನಲ್ಲಿ ಟೊಮೆಟೋ ಹಿಡಿದುಕೊಂಡು ಬರುತ್ತಿರುವುದನ್ನು ಕಾಣಬಹುದಾಗಿದೆ.

    ಈ ಕುರಿತಂತೆ ಪುರುಷೋತ್ತಮ್ ಎಂಬ ಅಧಿಕಾರಿಯೊಬ್ಬರು, ಇಂಜೆಕ್ಷನ್ ಪಡೆಯಲು ಸ್ಥಳೀಯರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ತಂತ್ರವನ್ನು ಉಪಯೋಗಿಸಲಾಗಿದೆ. ನಾವು ತರಕಾರಿ ಮಾರಾಟಗಾರರಿಗೆ ಮನವಿ ಮಾಡಿದ್ದೆವು, ಬಳಿಕ ಅವರು ಪುರಸಭೆಗರೆ ಸರಬರಾಜು ಮಾಡಿದರು ಎಂದು ತಿಳಿಸಿದ್ದಾರೆ.

    ಈ ವಿಚಾರವಾಗಿ ನೆಟ್ಟಿಗರು ಬಿಜಾಪುರ ಪಟ್ಟಣದಲ್ಲಿ ನಡೆಸುತ್ತಿರುವ ಈ ಕಾರ್ಯಕ್ಕೆ ಮೆಚ್ಚುಗೆ ಜೊತೆಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿಯ ಕಾರ್ಯವನ್ನು ಸರ್ಕಾರ ಕೂಡ ಅನುಸರಿಸಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ಕೋವಿಡ್ ನಿಯಂತ್ರಣಕ್ಕೆ ಸುರಕ್ಷಾ ಟೀಂ ಜೊತೆಗೆ ಫೀಲ್ಡ್‌ಗಿಳಿದ ಚಾಮರಾಜನಗರ ಡಿಸಿ

    ಕೋವಿಡ್ ನಿಯಂತ್ರಣಕ್ಕೆ ಸುರಕ್ಷಾ ಟೀಂ ಜೊತೆಗೆ ಫೀಲ್ಡ್‌ಗಿಳಿದ ಚಾಮರಾಜನಗರ ಡಿಸಿ

    – ಸಾಮಾಜಿಕ ಅಂತರ ಕಾಪಾಡದೇ ಮಾರಾಟ
    – ಅಂಗಡಿಯನ್ನು ಮುಚ್ಚಿಸಿದ ಅಧಿಕಾರಿಗಳು

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೊರೊನಾ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿರುವ ಜಿಲ್ಲಾಡಳಿತ ಸುರಕ್ಷಾ ಕೋವಿಡ್ ರಕ್ಷಣಾ ಪಡೆಗಳನ್ನು ರಚಿಸಿದೆ. ಈ ಪಡೆಗಳನ್ನು ಕೋವಿಡ್ ತಡೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ವಿಶೇಷವಾಗಿ ಸಜ್ಜುಗೊಳಿಸಲಾಗಿದೆ.

    ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆ ಭರ್ಜರಿಯಾಗಿಯೇ ಅಪ್ಪಳಿಸುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಕೊರೊನಾ ಬಹಳ ವೇಗವಾಗಿ ಹರಡುತ್ತಿವೆ. ಈಗಾಗಲೇ ಕಳೆದ 2 ವಾರಗಳಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದ್ದರೂ ಜನರಲ್ಲಿ ನಿರ್ಲಕ್ಷ್ಯ ಹಾಗು ಉದಾಸೀನ ಭಾವನೆ ಕಾಣುತ್ತಿದೆ. ಹಾಗಾಗಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸುರಕ್ಷಾ ಕೋವಿಡ್ ರಕ್ಷಣಾ ಪಡೆಗಳನ್ನು ರಚಿಸಲಾಗಿದೆ.

    ಕೋವಿಡ್ ಶಿಷ್ಟಾಚಾರ ಉಲ್ಲಂಘಿಸುವವರ ವಿರುದ್ದ ದಂಡ ವಿಧಿಸುವಿಕೆ, ಮಾಸ್ಕ್ ಧರಿಸದೇ ಓಡಾಟ ನಡೆಸುವವರಿಗೆ ದಂಡ ಹಾಕುವುದು, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ವ್ಯಾಪಾರ ವಹಿವಾಟು ನಡೆಸುವ ಅಂಗಡಿಮುಂಗಟ್ಟುಗಳನ್ನು ಲೈಸೆನ್ಸ್ ರದ್ದುಗೊಳಿಸುವುದು, ಸಭೆ ಸಮಾರಂಭಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಜನ ಸೇರಿದ್ದರೆ ಆಯೋಜಕರ ಮೇಲೆ ಎಫ್.ಐ.ಆರ್. ದಾಖಲಿಸುವುದು. ಸಾರ್ವಜನಿಕರಲ್ಲಿ ಕೋವಿಡ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳನ್ನು ಈ ಪಡೆಗಳು ಮಾಡಲಿವೆ.

    ಜಿಲ್ಲೆಯಾದ್ಯಂತ 13 ಸುರಕ್ಷಾ ಕೋವಿಡ್ ರಕ್ಷಣಾ ಪಡೆಗಳನ್ನು ರಚಿಸಲಾಗಿದ್ದು, ಒಂದೊಂದು ಈ ಪಡೆಯಲ್ಲಿ ಸ್ಥಳೀಯವಾಗಿ ವಿಪತ್ತು ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳು ಈಗಾಗಲೇ ರಚಿಸಿರುವ ತರಬೇತಿ ಪಡೆದ ಕ್ಷಿಪ್ರ ಕಾರ್ಯಾಚರಣೆ ತಂಡದ ಪಡೆಯ ಮೂವರು ಸದಸ್ಯರು, ಒಬ್ಬ ನಗರಸಭೆ ಅಥವಾ ಪುರಸಭೆ ಅಧಿಕಾರಿ ಮತ್ತು ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ 5 ಮಂದಿ ಇರುತ್ತಾರೆ. ಈ ಪಡೆಗಳು ಜನನಿಬಿಡ ಪ್ರದೇಶ, ಹೋಟೆಲ್, ಅಂಗಡಿ ಮುಂಗಟ್ಟು, ಕಲ್ಯಾಣ ಮಂಟಪಗಳು, ಬಸ್ ನಿಲ್ದಾಣ ಮೊದಲಾದ ಕಡೆ ಕಾರ್ಯಚಾರಣೆ ನಡೆಸಲಿವೆ.

    ಚಾಮರಾಜನಗರದಲ್ಲಿಂದು ಸುರಕ್ಷಾ ಕೋವಿಡ್ ರಕ್ಷಣಾ ಪಡೆಯ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸ್ವತಃ ಕೋವಿಡ್ ಸುರಕ್ಷಾ ಪಡೆಯೊಂದಿಗೆ ನಗರದ ವಿವಿಧೆಡೆ ಭೇಟಿ ನೀಡಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಸೂಚಿಸಿದರು. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಅಂಗಡಿ ಮುಚ್ಚಲು ಆದೇಶಿಸಿದರು. ಕೋವಿಡ್ ಶಿಷ್ಠಾಚಾರ ಉಲ್ಲಂಘಿಸಿದ ಕೆಲವು ಅಂಗಡಿಗಳನ್ನು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮುಚ್ಚಿಸುವ ಮೂಲಕ ಖಡಕ್ ಎಚ್ಚರಿಕೆ ನೀಡಲಾಯಿತು.

    ಸಾರ್ವಜನಿಕರ ಸಹಕಾರ ಇಲ್ಲದಿದ್ದರೆ ಕೊರೊನಾ ಹರಡುವುದನ್ನು ತಡೆಗಟ್ಟುವುದು ಕಷ್ಟವಾಗಲಿದ್ದು, ಜನರು ಅರ್ಥ ಮಾಡಿಕೊಂಡು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು, ಇಲ್ಲದಿದ್ದರೆ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಎಫ್.ಐ.ಆರ್ ದಾಖಲಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ. ಸುರಕ್ಷಾ ಪಡೆಗಳ ಕಾರ್ಯಾಚರಣೆಯಿಂದ ಸಾರ್ವಜನಿಕರು ಇನ್ನಾದರು ಎಚ್ಚೆತ್ತುಕೊಳ್ತಾರಾ. ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

  • ಕಲ್ಯಾಣ ಮಂಟಪಗಳಿಗೆ ದಿಢೀರ್ ಭೇಟಿ – ಮಾಸ್ಕ್ ಧರಿಸದವರಿಗೆ ದಂಡ

    ಕಲ್ಯಾಣ ಮಂಟಪಗಳಿಗೆ ದಿಢೀರ್ ಭೇಟಿ – ಮಾಸ್ಕ್ ಧರಿಸದವರಿಗೆ ದಂಡ

    ಹಾಸನ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕಂದಾಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಇಂದು ಕಲ್ಯಾಣ ಮಂಟಪಗಳಿಗೆ ತೆರಳಿ ಎಚ್ಚರಿಕೆ ನೀಡಿದರು.

    ಹಾಸನ ನಗರದ ಕಲ್ಯಾಣ ಮಂಟಪಗಳಿಗೆ ಕಂದಾಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಭೇಟಿ ನೀಡಿದರು. ಈ ವೇಳೆ ಸಾರ್ವಜನಿಕರಿಗೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿ ಹೇಳಿದರು.

    ಗುಂಪು ಗುಂಪಾಗಿ ಕುಳಿತಿದ್ದ ಜನರಿಗೆ ಅಂತರ ಕಾಯ್ದುಕೊಳ್ಳುವಂತೆ ಅರಿವು ಮೂಡಿಸಿ ಸೂಚನೆಗಳನ್ನು ನೀಡಲಾಯಿತು. ನಗರಸಭೆ ಪೌರಾಯುಕ್ತರಾದ ಕೃಷ್ಣಮೂರ್ತಿ, ಮುನಿಸಿಪಲ್ ತಹಶೀಲ್ದಾರ್ ರಮೇಶ್‍ರವರ ನೇತೃತ್ವದ ತಂಡದಿಂದ ಮಾಸ್ಕ್ ಧರಿಸದೇ ಇರುವವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು. ಊಟದ ಹಾಲ್‍ನಲ್ಲೂ ಸಹಾ ಒಂದು ಟೇಬಲ್‍ಗೆ ಎರಡು ಕುರ್ಚಿಗಳಿರುವಂತೆ ಹಾಕಿಸಲಾಯಿತು.

  • ಕೋವಿಡ್ ನಿಯಮ ಉಲ್ಲಂಘಿಸಿ ಬಸವೇಶ್ವರ ಜಾತ್ರೆ- ಕೂಬಿಹಾಳದ 18 ಮಂದಿ ವಿರುದ್ಧ ಪ್ರಕರಣ ದಾಖಲು

    ಕೋವಿಡ್ ನಿಯಮ ಉಲ್ಲಂಘಿಸಿ ಬಸವೇಶ್ವರ ಜಾತ್ರೆ- ಕೂಬಿಹಾಳದ 18 ಮಂದಿ ವಿರುದ್ಧ ಪ್ರಕರಣ ದಾಖಲು

    ಹುಬ್ಬಳ್ಳಿ: ಕೊರೊನಾ ನಿಯಮ ಉಲ್ಲಂಘಿಸಿ ಕುಂದಗೋಳ ತಾಲೂಕಿನ ಕೂಬಿಹಾಳ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಆಚರಿಸಿದ ಆರೋಪದ ಮೇರೆಗೆ 18 ಮಂದಿ ಮೇಲೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಇಂದು ಪ್ರಕರಣ ದಾಖಲಾಗಿದೆ.

    ರಾಮಪ್ಪ ಸಂಶಿ, ಸಿದ್ದಪ್ಪ ರಡ್ಡೇರ, ಹನಮಂತಪ್ಪ ವಡಕಣ್ಣವರ, ಮಂಜುನಾಥ ಪೂಜಾರ, ಯಲ್ಲಪ್ಪ ಹೆಬಸೂರ, ಚಂದ್ರಶೇಖರ ಪಾಲಕರ್, ಬಸಪ್ಪ ಹೊರಗಿನಮನಿ, ಬಸವರಾಜ ದೇಶಪಾಂಡೆ, ಯಲ್ಲಪ್ಪ ಬಿಳೆಬಲ್, ನಿಂಗಪ್ಪ ಬಾಚಣಕಿ, ಬಾಬುಖಾನ್ ನೂರಾಲಿಖಾನವರ, ಚೆನ್ನಬಸಪ್ಪ ರಡ್ಡೇರ, ಸುರೇಶ್ ಗೌಡ ಪಾಟೀಲ್, ವೀರಪಾಕ್ಷಯ್ಯ ಕುಮಾರಗೊಪ್ಪ, ಬಸನಗೌಡ ಶಿರಕೋಳ, ಶಿವಪ್ಪ ತಳವಾರ, ಜಗದೀಶ್ ಬಾಗಲ, ಬಸಪ್ಪ ಕುಂಬಾರ ಮೇಲೆ ಪ್ರಕರಣ ದಾಖಲಿಸಲಾಗಿದೆ.

    ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 3 ರಿಂದ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಚರಿಸಬಾರದು ಎಂದು ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದರು.

    ಆದರೆ ಏಪ್ರಿಲ್ 13 ರಂದು ಈ ನಿಯಮ ಉಲ್ಲಂಘಿಸಿ, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಕುಬಿಹಾಳ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಆಚರಿಸಲಾಗಿದೆ ಎಂದು ಕೂಬಿಹಾಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ್ ಬಾಗಲ ಪ್ರಕರಣ ಕುರಿತು ದೂರು ದಾಖಲಿಸಿದ್ದಾರೆ. ಕುಂದಗೋಳ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

  • ಉತ್ತರ ಪ್ರದೇಶದಲ್ಲಿ ಭಾನುವಾರ ಲಾಕ್‍ಡೌನ್ – ಮಾಸ್ಕ್ ಧರಿಸದಿದ್ದರೆ 10,000 ದಂಡ

    ಉತ್ತರ ಪ್ರದೇಶದಲ್ಲಿ ಭಾನುವಾರ ಲಾಕ್‍ಡೌನ್ – ಮಾಸ್ಕ್ ಧರಿಸದಿದ್ದರೆ 10,000 ದಂಡ

    ಲಕ್ನೋ: ಕೋವಿಡ್-19 ಸೋಂಕಿನ ವಿರುದ್ಧ ಹೋರಾಡಲು ಉತ್ತರಪ್ರದೇಶದಲ್ಲಿ ಹಲವಾರು ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ಮಧ್ಯೆ ಇಂದಿನಿಂದ ಮಾಸ್ಕ್ ಧರಿಸದೇ ಇರುವವರಿಗೆ 10,000 ರೂ. ದಂಡ ವಿಧಿಸಬಹುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

    ಸಾರ್ವಜನಿಕರು ಮೊದಲ ಬಾರಿಗೆ ಮಾಸ್ಕ್ ಧರಿಸದೇ ಸಿಕ್ಕಿಬಿದ್ದರೆ 1,000ರೂ ದಂಡ ಹಾಗೂ ಎರಡನೇ ಬಾರಿಗೆ ಮಾಸ್ಕ್ ಧರಿಸಿದಿದ್ದರೆ 10,000 ರೂ ದಂಡ ವಿಧಿಸಲಾಗುತ್ತದೆ. ಜೊತೆಗೆ ರಾಜ್ಯದಲ್ಲಿ ಭಾನುವಾರ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಸೇವೆಗಳು ಬಂದ್ ಆಗಿರಲಿದೆ.

    ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಮೇ 15 ರವರೆಗೂ ಶಾಲೆಗಳನ್ನು ಮುಚ್ಚುವುದಾಗಿ ನಿನ್ನೆ ಘೋಷಿಸಲಾಗಿದೆ.

    ಗುರುವಾರ ಉತ್ತರ ಪ್ರದೇಶದಲ್ಲಿ 22,439 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 104 ಮಂದಿ ಮೃತಪಟ್ಟಿದ್ದಾರೆ.

  • ದೆಹಲಿಯ 300ಕ್ಕೂ ಅಧಿಕ ಮಂದಿ ಪೊಲೀಸರಿಗೆ ಕೊರೊನಾ

    ದೆಹಲಿಯ 300ಕ್ಕೂ ಅಧಿಕ ಮಂದಿ ಪೊಲೀಸರಿಗೆ ಕೊರೊನಾ

    ನವದೆಹಲಿ: ಸಾರ್ವಜನಿಕರು ಕೋವಿಡ್-19 ನಿರ್ಬಂಧಗಳನ್ನು ಪಾಲಿಸುವಂತೆ ನೋಡಿಕೊಳ್ಳುವ ಮುಂಚೆಯೇ ದೆಹಲಿಯ 300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗೆ ಕೆಲವೇ ದಿನಗಳಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿದೆ.

    ಟೆಸ್ಟ್ ನಲ್ಲಿ ಸುಮಾರು 300ಕ್ಕೂ ಅಧಿಕ ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಅವರಲ್ಲಿ 15 ಮಂದಿಯನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಉಳಿದವರು ಮನೆಯಲ್ಲಿಯೇ ಕ್ವಾರಂಟೈನಲ್ಲಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ಈ ಕುರಿತಂತೆ ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್ ಶ್ರೀವಾಸ್ತವ, ಈ ಮುನ್ನ ನಮ್ಮ ಕೆಲವು ಪೊಲೀಸ್ ಸಿಬ್ಬಂದಿ ಕೋವಿಡ್-19ಗೆ ಒಳಗಾದ ನಂತರ ಇದೀಗ ನಗರದಲ್ಲಿ ಹಠಾತ್ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅಲ್ಲದೇ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವ ವೇಳೆ 3-ಪೈ ಅಥವಾ ಎನ್-95 ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್ ಬಳಸುವುದು ಸೇರಿದಂತೆ ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗಿದೆ ಎಂದು ಹೇಳಿದ್ದಾರೆ.

    ರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್-19ಗೆ 112 ಮಂದಿ ಮೃತಪಟ್ಟಿದ್ದು, 16,699 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ ಹಾಗೂ 54,309 ಸಕ್ರಿಯ ಪ್ರಕರಣಗಳಿವೆ ಎಂದು ದೆಹಲಿಯ ಆರೋಗ್ಯ ಇಲಾಖೆ ತಿಳಿಸಿದೆ.