Tag: ಪಬ್ಲಿಕ್ ಟಿವಿ Corona

  • ಕೋವಿಡ್‍ಗೆ ಬಲಿಯಾದ ರಾಹುಲ್ ವೊಹ್ರಾ ಕೊನೆ ಕ್ಷಣದ ವೀಡಿಯೋ ವೈರಲ್

    ಕೋವಿಡ್‍ಗೆ ಬಲಿಯಾದ ರಾಹುಲ್ ವೊಹ್ರಾ ಕೊನೆ ಕ್ಷಣದ ವೀಡಿಯೋ ವೈರಲ್

    – ಕೋವಿಡ್ ಆಸ್ಪತ್ರೆಯ ಕರಾಳ ಸತ್ಯ ಬಿಚ್ಚಿಟ್ಟಿದ್ದ ವೊಹ್ರಾ

    ನವದೆಹಲಿ: ಕೊರೊನಾ ಸೋಂಕಿನಿಂದ ನಟ ರಾಹುಲ್ ವೊಹ್ರಾ ಭಾನುವಾರ ನಿಧನರಾಗಿದ್ದರು. ತಮಗೂ ಉತ್ತಮ ಚಿಕಿತ್ಸೆ ಸಿಕ್ಕಿದ್ದರೆ, ಬದುಕುಳಿಯುತ್ತಿದ್ದೆ ಎಂದು ರಾಹುಲ್ ಶನಿವಾರ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದರು.

    ಅವರ ನಿಧನದ ನಂತರ ರಾಹುಲ್ ಪತ್ನಿ ಜ್ಯೋತಿ ತಿವಾರಿ(35) ಹೃದಯ ವಿದ್ರಾವಕ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ರಾಹುಲ್ ಆಕ್ಸಿಜನ್ ಮಾಸ್ಕ್ ಧರಿಸಿರುವುದನ್ನು ಕಾಣಬಹುದುದಾಗಿದೆ.

    ‘ನನ್ನ ರಾಹುಲ್ ಹೊರಟು ಹೋದ ಇದು ಎಲ್ಲರಿಗೂ ತಿಳಿದಿರುವ ವಿಷಯವೇ ಆದರೆ ಹೇಗೆ ಹೋದ ಎಂಬುವುದು ಯಾರಿಗೂ ತಿಳಿದಿಲ್ಲ. ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಈ ರೀತಿ ಚಿಕಿತ್ಸೆ ನೀಡುತ್ತಾರೆ. ಪ್ರತಿ ರಾಹುಲ್‍ಗೆ ನ್ಯಾಯ ಸಿಗಬೇಕು ಎಂದು ಕ್ಯಾಪ್ಷನ್ ಹಾಕಿಕೊಳ್ಳುವ ಮೂಲಕ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Jyoti Tiwari (@ijyotitiwari)

    ವೀಡಿಯೋದಲ್ಲಿ ರಾಹುಲ್ ಆಸ್ಪತ್ರೆಯಲ್ಲಿನ ಚಿಕಿತ್ಸೆ ಹಾಗೂ ಸೇವೆಗಳ ಬಗ್ಗೆ ಹೇಳಿದ್ದಾರೆ. ಪ್ರಸ್ತುತ ಇದಕ್ಕೆ ಬಹಳಷ್ಟು ಬೆಲೆ ಇದೆ. ಇದು ಇಲ್ಲದೆ ರೋಗಿಗಳು ಬಳಲುತ್ತಿದ್ದಾರೆ. ಇದರಲ್ಲಿ ಏನು ಇಲ್ಲ. ಸಹಾಯಕ್ಕಾಗಿ ಯಾರಾದರನ್ನು ಕರೆದರೆ ಒಂದು ನಿಮಿಷ ಎಂದು ಹೇಳುತ್ತಾರೆ ಮತ್ತು ಗಂಟೆಗಳ ಕಾಲ ಹೋಗಿಬಿಡುತ್ತಾರೆ. ನಾನು ಅವರನ್ನು ಕರೆಯುತ್ತಲೇ ಇರುತ್ತೇನೆ ಆದರೆ ಯಾರು ಬರುವುದಿಲ್ಲ. 1-2 ಗಂಟೆಗಳ ಬಳಿಕ ಬರುತ್ತಾರೆ ಅಲ್ಲಿಯವರೆಗೂ ಆಕ್ಸಿಜನ್‍ನನ್ನು ನಾವೇ ನೋಡಿಕೊಳ್ಳಬೇಕಾಗುತ್ತದೆ. ಅವರಿಗೆ ಅರ್ಥ ಮಾಡಿಸಲು ಸಾಧ್ಯವಾಗುತ್ತಿಲ್ಲ. ನಾನು ಏನು ಮಾಡಲಿ ಎಂದು ಪ್ರಶ್ನಿಸಿದ್ದಾರೆ.

  • ಜಮ್ಮು-ಕಾಶ್ಮೀರದಲ್ಲಿ ಮೇ 17ರವರೆಗೆ ಕೊರೊನಾ ಕರ್ಫ್ಯೂ ವಿಸ್ತರಣೆ – ಮದುವೆಗೆ 25 ಮಂದಿಗೆ ಮಾತ್ರ ಅವಕಾಶ

    ಜಮ್ಮು-ಕಾಶ್ಮೀರದಲ್ಲಿ ಮೇ 17ರವರೆಗೆ ಕೊರೊನಾ ಕರ್ಫ್ಯೂ ವಿಸ್ತರಣೆ – ಮದುವೆಗೆ 25 ಮಂದಿಗೆ ಮಾತ್ರ ಅವಕಾಶ

    ಶ್ರೀನಗರ: ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಜಮ್ಮು-ಕಾಶ್ಮೀರದ ಆಡಳಿತವು ಯುಟಿಯ 20 ಜಿಲ್ಲೆಗಳಲ್ಲಿ ಒಂದು ವಾರ ಕೊರೊನಾ ಕರ್ಫ್ಯೂವನ್ನು ವಿಸ್ತರಿಸಿದೆ.

    ಮೇ 17ರ ಬೆಳಗ್ಗೆ 7 ಗಂಟೆಯವರೆಗೆ ಜಮ್ಮು-ಕಾಶ್ಮೀರದ 20 ಜಿಲ್ಲೆಗಳಲ್ಲಿ ಕಫ್ರ್ಯೂವನ್ನು ವಿಧಿಸಲಾಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಕರ್ಫ್ಯೂ ಕಟ್ಟುನಿಟ್ಟಾಗಿರುತ್ತದೆ ಎಂದು ಡಿಐಪಿಆರ್ ತನ್ನ ಟ್ವಿಟ್ಟರ್ ಖಾತೆ ಮೂಲಕ ತಿಳಿಸಿದೆ.

    ಅಷ್ಟೇ ಅಲ್ಲದೇ ಮದುವೆ ಸಮಾರಂಭಗಳಲ್ಲಿ 25 ಜನರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಮತ್ತು ತುರ್ತು ಸೇವೆಗಳಿದೆ ಷರತ್ತು ಬದ್ಧ ಅವಕಾಶ ನೀಡಲಾಗಿದೆ. ಜನರ ಅನಗತ್ಯ ಸಂಚಾರವನ್ನು ತಡೆಯಲು ಪೊಲೀಸರು ಮತ್ತು ಸೈನಿಕರ ಪಡೆಗಳನ್ನು ಯುಟಿಯ ಎಲ್ಲಾ ಜಿಲ್ಲೆಗಳ ರಸ್ತೆಯ ಚೆಕ್‍ಪೋಸ್ಟ್‍ಗಳಲ್ಲಿ ನಿಯೋಜಿಸಿದೆ.

    ಜಮ್ಮು ಹಾಗೂ ಕಾಶ್ಮೀರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುಮಾರು 5 ಸಾವಿರಕ್ಕೂ ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, 60 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

  • ಅಂಬ್ಯುಲೆನ್ಸ್ ದಾನ ನೀಡಿದ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ

    ಅಂಬ್ಯುಲೆನ್ಸ್ ದಾನ ನೀಡಿದ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ

    ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ರಾಣೆಬೆನ್ನೂರು ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಅಂಬ್ಯುಲೆನ್ಸ್ ಸೇವೆ ಒದಗಿಸಿದ್ದಾರೆ.

    ಏಳೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಿರುವ ವೆಂಟಿಲೇಟರ್ ಸಹಿತ ಅಂಬ್ಯುಲೆನ್ಸ್‌ನ್ನು ಕೊರೊನಾ ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸೋಕೆ ನೀಡಿದ್ದಾರೆ. ರಾಣೇಬೆನ್ನೂರು ಶಾಸಕ ಅರುಣ್‍ಕುಮಾರ್ ಪೂಜಾರ್ ಸಮ್ಮುಖದಲ್ಲಿ ಅಂಬ್ಯುಲೆನ್ಸ್‍ನ್ನ ಕೊರೊನಾ ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸುವದಕ್ಕೆ ನೀಡಿದ್ದಾರೆ.

    ರಾಣೇಬೆನ್ನೂರು ತಾಲೂಕು ಪಂಚಾಯತಿಯ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿ, ಅದಕ್ಕೆ ಡ್ರೈವರ್ ನೇಮಿಸಿ ಅಂಬ್ಯುಲೆನ್ಸ್ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಶಾಸಕ ಅರುಣ್‍ಕುಮಾರ್ ಪೂಜಾರ್‌ಗೆ ನೀಡಿದ್ದಾರೆ. ಅರ್ಚಕ ಸಂತೋಷ ಭಟ್‍ರು ಒದಗಿಸಿರುವ ಅಂಬ್ಯುಲೆನ್ಸ್‌ಗೆ ಚಾಲಕನನ್ನ ನೇಮಿಸಿ ಸೋಂಕಿತರನ್ನ ಆಸ್ಪತ್ರೆಗೆ ಶಿಫ್ಟ್ ಮಾಡುವ ಕೆಲಸಕ್ಕೆ ಶಾಸಕ ಪೂಜಾರ್ ಮುಂದಾಗಿದ್ದಾರೆ.

    ತಾಲೂಕಿನಲ್ಲಿ ಸೋಂಕಿತರಾಗೋ ಜನರು ಆಸ್ಪತ್ರೆಗೆ ದಾಖಲಾಗಲು ನೇರವಾಗಿ ತಾಲೂಕು ಪಂಚಾಯತಿ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿನ ಸಹಾಯವಾಣಿ ನಂಬರ್ 08373-261313 ಗೆ ಕರೆ ಮಾಡಿದರೆ ಸಾಕು ಅಂಬ್ಯುಲೆನ್ಸ್ ಸೋಂಕಿತರಿದ್ದಲ್ಲಿಗೆ ತೆರಳಿ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡುತ್ತದೆ.

  • ಕೋವಿಡ್ 19 – ಅನಾಥ ಮಕ್ಕಳನ್ನು ದತ್ತು ಪಡೆಯಲು ಮುಂದಾದ ಭಾಲ್ಕಿ ಹೀರೆಮಠ ಸಂಸ್ಥಾನ

    ಕೋವಿಡ್ 19 – ಅನಾಥ ಮಕ್ಕಳನ್ನು ದತ್ತು ಪಡೆಯಲು ಮುಂದಾದ ಭಾಲ್ಕಿ ಹೀರೆಮಠ ಸಂಸ್ಥಾನ

    ಬೀದರ್: ಕೊರೊನಾದಿಂದ ಪೋಷಕರ ಕಳೆದುಕೊಂಡು ಅನಾಥರಾದ ಮಕ್ಕಳನ್ನು ದತ್ತು ಪಡೆಯಲು ಭಾಲ್ಕಿ ಹೀರೆಮಠ ಸಂಸ್ಥಾನ ಮುಂದಾಗಿದೆ.

    ಭಾಲ್ಕಿ ಹೀರೆಮಠ ಸಂಸ್ಥಾನದ ಪೀಠಾಧಿಪತಿ ಡಾ. ಬಸವಲಿಂಗ ಪಟ್ಟದ್ದೆವರು ಈ ಮಹತ್ವದ ನಿರ್ಧಾರ ಮಾಡಿದ್ದಾರೆ. ಇದರಿಂದಾಗಿ ನಿರ್ಗತಿಕ ಹಾಗೂ ಅನಾಥ ಮಕ್ಕಳಲ್ಲಿ ಆಶಾಕಿರಣ ಮೂಡಿದೆ. ಈ ಕ್ರೂರಿ ಕೊರೊನಾ ಅಬ್ಬರಿಸುತ್ತಿರುವ ಸಮಯದಲ್ಲಿ ಅನಾಥ ಮಕ್ಕಳ ರಕ್ಷಣೆಗೆ ಮುಂದಾದ ಭಾಲ್ಕಿ ಹೀರೆಮಠ ಸಂಸ್ಥಾನದ ಕಾರ್ಯ ಮಾನವೀಯ ಮೌಲ್ಯಗಳನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.

    2010ರಿಂದಲೂ ಅನಾಥ ಮಕ್ಕಳಿಗೆ ದಾರಿ ದೀಪವಾಗಿರುವ ಭಾಲ್ಕಿ ಹೀರೆಮಠ ಸಂಸ್ಥಾನ ಇಲ್ಲಿಯವರೆಗೆ 85 ಅನಾಥ ಮಕ್ಕಳಿಗೆ ದಾರಿ ದೀಪವಾಗಿದೆ. 85 ಮಕ್ಕಳಲ್ಲಿ 30 ಮಕ್ಕಳು ಮಾತ್ರ ಮಠದಲ್ಲಿ ಆಶ್ರಯ ಪಡೆಯುತ್ತಿದ್ದು, ಉಳಿದ 55 ಮಕ್ಕಳನ್ನು ಹಲವು ದಂಪತಿ ದತ್ತು ಪಡೆದಿದ್ದಾರೆ.

    ರಾಜ್ಯದ ಯಾವುದೇ ಜಿಲ್ಲೆಯಲ್ಲಿರುವ ಅನಾಥ ಹಾಗೂ ನಿರ್ಗತಿಕ ಮಕ್ಕಳನ್ನು ದತ್ತು ಪಡೆಯಲು ನಿರ್ಧಾರ ಮಾಡಲಾಗಿದೆ. ಈ ರೀತಿಯ ಅನಾಥ ಮಕ್ಕಳು ರಾಜ್ಯದಲ್ಲಿ ಎಲ್ಲೆ ಕಂಡು ಬಂದರೂ, ನಮ್ಮ ಸಂಸ್ಥಾನವನ್ನು ಸಂಪರ್ಕಿಸಿ ಎಂದು ಹೀರೆಮಠ ಸಂಸ್ಥಾನದ ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ.

    ಮೊದಲಿನಿಂದಲೂ ಅನಾಥ ಮಕ್ಕಳಿಗೆ ದಾರಿ ದೀಪವಾಗಿರುವ ಭಾಲ್ಕಿ ಹೀರೆಮಠ ಸಂಸ್ಥಾನ ಈ ಕೋವಿಡ್ ಸಮಯದಲ್ಲಿ ಅನಾಥ ಮಕ್ಕಳನ್ನು ದತ್ತು ಪಡೆಯಲು ಮುಂದಾಗಿ ಮಾನವೀಯತೆಯ ಸಂದೇಶವನ್ನು ಸಾರಿದೆ.

  • ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಟೂತ್ ಬ್ರಷ್ ಬದಲಾಯಿಸೊದ್ರಿಂದ ಉಪಯೋಗವೇನು ಗೊತ್ತಾ?

    ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಟೂತ್ ಬ್ರಷ್ ಬದಲಾಯಿಸೊದ್ರಿಂದ ಉಪಯೋಗವೇನು ಗೊತ್ತಾ?

    ನವದೆಹಲಿ: ಕೊರೊನಾ ಮಹಾಮಾರಿ ದೇಶದಲ್ಲಿ ಅತಿ ವೇಗವಾಗಿ ಹರಡುತ್ತಿದೆ ಮತ್ತು ಒಬ್ಬ ವ್ಯಕ್ತಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಮತ್ತೊಮ್ಮೆ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿದೆ. ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾವನ್ನು ತಡೆಗಟ್ಟಬಹುದು. ಆದರೆ ಎಲ್ಲಾ ಸಂದರ್ಭದಲ್ಲಿಯೂ ಶೇ.100ರಷ್ಟು ಸುರಕ್ಷಿತವಾಗಿರುತ್ತೇವೆ ಎಂದು ಖಾತರಿಪಡಿಸಲಾಗುವುದಿಲ್ಲ ಎಂದು ತಜ್ಞರೆ ತಿಳಿಸಿದ್ದಾರೆ.

    ಹೀಗಿರುವಾಗ ರೋಗದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ರೋಗದಿಂದ ಚೇತರಿಸಿಕೊಂಡವರಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇತ್ತೀಚೆಗೆ ಕೋವಿಡ್-19ನಿಂದ ಚೇತರಿಸಿಕೊಂಡ ವ್ಯಕ್ತಿಗಳು ತಕ್ಷಣ ತಮ್ಮ ಹಲ್ಲನ್ನು ಉಜ್ಜುವ ಬ್ರಷ್‍ನನ್ನು ಬದಲಾಯಿಸಿಬೇಕು ಎಂದು ದಂತ ವೈದ್ಯರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದರಿಂದ ಮತ್ತೆ ಸೋಂಕಿಗೆ ಒಳಗಾಗುವುದನ್ನು ಮತ್ತು ಮನೆಯಲ್ಲಿ ಒಂದೇ ವಾಶ್ ರೂಂ ಬಳಸುವ ಇತರರನ್ನು ರಕ್ಷಿಸಬಹುದು ಎಂದು ಹೇಳಿದ್ದಾರೆ.

    ನೀವು ಅಥವಾ ನಿಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರು ಯಾರಾದರೂ ಕೋವಿಡ್‍ಗೆ ಒಳಗಾಗಿ ಅದರಿಂದ ಚೇತರಿಸಿಕೊಂಡ ನಂತರ, ದಯವಿಟ್ಟು ನಿಮ್ಮ ಟೂತ್ ಬ್ರಷ್, ಟಂಗ್ ಕ್ಲೀನರ್ ಇತ್ಯಾದಿಗಳನ್ನು ಬದಲಾಯಿಸುವುದು ಉತ್ತಮ. ಇವುಗಳಲ್ಲಿ ವೈರಸ್ ಇರಬಹುದು. ಹೀಗಾಗಿ ಇವುಗಳನ್ನು ತ್ಯಜಿಸುವುದು ಉತ್ತಮ ಎಂದು ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಡೆಂಟಲ್ ಸರ್ಜರಿ ಎಚ್‍ಒಡಿ ಆಗಿರುವ ಡಾ. ಪ್ರವೀಶ್ ಮೆಹ್ರಾ ತಿಳಿದ್ದಾರೆ.

  • ಕೊಡಗಿನಲ್ಲಿ 16 ಮಂದಿ ಕೊರೊನಾಗೆ ಬಲಿ- ಕುತೂಹಲ ಹುಟ್ಟಿಸಿದ ತುರ್ತು ಸಭೆ

    ಕೊಡಗಿನಲ್ಲಿ 16 ಮಂದಿ ಕೊರೊನಾಗೆ ಬಲಿ- ಕುತೂಹಲ ಹುಟ್ಟಿಸಿದ ತುರ್ತು ಸಭೆ

    ಮಡಿಕೇರಿ: ಕೊಡಗು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 16 ಸೋಂಕಿತರು ಮೃತಪಟ್ಟಿದ್ದಾರೆ.

    16 ಸೋಂಕಿತರು ಮೃತಟ್ಟಿರುವುದನ್ನು ಸ್ವತಃ ಜಿಲ್ಲಾಡಳಿತವೇ ಸ್ಪಷ್ಟಪಡಿಸುತ್ತಿದೆ. ಆದರೂ 16 ಸೋಂಕಿತರು ಮೃತಪಟ್ಟಿದ್ದಾದಾದರೂ ಯಾಕೆ ಎನ್ನುವುದನ್ನು ಮಾತ್ರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಡೀನ್ ಆಗಲಿ, ಸರ್ಜನ್ ಆಗಲಿ ಅಥವಾ ಜಿಲ್ಲಾಡಳಿತವಾಗಲಿ ಸ್ಪಷ್ಟಪಡಿಸುತ್ತಿಲ್ಲ.

    ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮೃತ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ನಾಲ್ವರು ವೈದ್ಯರನ್ನು ತುರ್ತು ಸಭೆ ಕರೆದಿದ್ದಾರೆ. ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ತುರ್ತು ಸಭೆ ಕರೆದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ, ಮೃತರೆಲ್ಲರೂ ತಡವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಕಳೆದ 24 ಗಂಟೆಯಲ್ಲಿ 16 ಸೋಂಕಿತರು ಮೃತಪಟ್ಟಿದ್ದಾರೆ ಎನ್ನುತ್ತಿದ್ದಾರೆ.

    ಕೊಡಗಿನಲ್ಲಿ ಕಳೆದ ಎರಡು ವಾರಗಳಿಂದ ಸೋಂಕಿತರು ಸಂಖ್ಯೆ ಜಾಸ್ತಿಯಾಗುತ್ತಿದೆ. ಜೊತೆಗೆ ಸೋಂಕಿನಿಂದ ಸಾವಿನ ಸಂಖ್ಯೆ ಕೂಡ ಹೆಚ್ಚಿದೆಯಾದರೂ, ಐದರಿಂದ ಆರು ಸೋಂಕಿತರು ಸಾವನ್ನಪ್ಪುತ್ತಿದ್ದರು. ಈಗ ಕಳೆದ 24 ಗಂಟೆಯಲ್ಲಿ 16 ಜನರು ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

  • ಕೊಡಗಿನಲ್ಲಿ ಮಂಗಳವಾರ, ಶುಕ್ರವಾರ ಅರ್ಧ ದಿನ ಮಾತ್ರ ಅಂಗಡಿ ಓಪನ್

    ಕೊಡಗಿನಲ್ಲಿ ಮಂಗಳವಾರ, ಶುಕ್ರವಾರ ಅರ್ಧ ದಿನ ಮಾತ್ರ ಅಂಗಡಿ ಓಪನ್

    – ಉಳಿದ ದಿನ ಪೂರ್ತಿ ಬಂದ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳಿಗೆ ಜಿಲ್ಲಾಡಳಿತ ಮುಂದಾಗಿದೆ.

    ಇನ್ನೂ ಮುಂದೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಜಿಲ್ಲೆಯಾದ್ಯಂತ ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ದಿನಸಿ, ಹಣ್ಣು-ತರಕಾರಿ, ಮಾಂಸದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಹಾಗೂ ಉಳಿದ ದಿನ ಅಂಗಡಿಗಳನ್ನು ತೆರೆದು ವಹಿವಾಟು ನಡೆಸಲು ಅವಕಾಶ ಇರುವುದಿಲ್ಲ ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಔಷಧಿ ಅಂಗಡಿಗಳು, ಪೆಟ್ರೋಲ್ ಬಂಕ್‍ಗಳಿಗೆ ಬಂದ್ ಅನ್ವಯಿಸುವುದಿಲ್ಲ. ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಪತ್ರಿಕೆ ವಿತರಣೆಗೆ ಪ್ರತಿನಿತ್ಯ ಬೆಳಗ್ಗೆ 6 ರಿಂದ 10 ಗಂಟೆವರೆಗೆ ವಹಿವಾಟಿಗೆ ಅವಕಾಶ ನೀಡಲಾಗಿದೆ. ಬೆಂಗಳೂರು-ಮೈಸೂರು ಕೇರಳದಿಂದ ಬಂದವರಿಂದ ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಜಿಲ್ಲಾಧಿಕಾರಿ, ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ಪಡೆಗಳು ಹೊರ ಊರುಗಳಿಂದ ಬಂದವರು ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. ಸೋಂಕು ತಡೆಯಲು ಪ್ರತಿಯೊಬ್ಬರೂ ಜಿಲ್ಲಾ ಆಡಳಿತದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

  • 18-45 ವಯಸ್ಸಿನವರಿಗೆ ದೆಹಲಿಯಲ್ಲಿಂದು ಕೋವಿಡ್ ಲಸಿಕೆ

    18-45 ವಯಸ್ಸಿನವರಿಗೆ ದೆಹಲಿಯಲ್ಲಿಂದು ಕೋವಿಡ್ ಲಸಿಕೆ

    ನವದೆಹಲಿ: 18-45 ವಯಸ್ಸಿನ ಮಂದಿಗೆ ಇಂದು ದೆಹಲಿಯಲ್ಲಿ ಮೂರನೇ ಹಂತದ ಕೋವಿಡ್-19 ಲಸಿಕೆಯನ್ನು ಬೆಳಗ್ಗೆಯಿಂದ ನೀಡಲು ಆರಂಭಿಸಲಾಗಿದೆ.

    ದೆಹಲಿಯಲ್ಲಿ ಸುಮಾರು 90 ಲಕ್ಷ ಮಂದಿ ಲಸಿಕೆಯನ್ನು ಪಡೆಯಲಿದ್ದಾರೆ. 77 ಶಾಲೆಗಳಲ್ಲಿ ತಲಾ 5 ವ್ಯಾಕ್ಸಿನೇಷನ್ ಬೂತ್‍ಗಳನ್ನು ಸ್ಥಾಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆಯನ್ನು ಪಡೆಯಲು ಸರ್ಕಾರ ಶಾಲೆಗಳಲ್ಲಿ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಸ್ಥಾಪಿಸಿದೆ. ಈವರೆಗೂ ರಾಜಧಾನಿ ದೆಹಲಿಯಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸುಮಾರು 500 ಕೇಂದ್ರಗಳಲ್ಲಿ ಲಸಿಕೆಗಳನ್ನು ನೀಡಲಾಗುತ್ತಿತ್ತು. ಆದರೆ 18-45 ವಯೋಮಾನದವರಿಗೆ ವ್ಯಾಕ್ಸಿನ್ ನೀಡಲು ಪೂರ್ವ- ನೋಂದಣಿ ಕಡ್ಡಾಯವಾಗಿದೆ. ನೇರವಾಗಿ ವ್ಯಾಕ್ಸಿನ್ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಅಪೋಲೊ, ಫೋರ್ಟಿಸ್ ಮತ್ತು ಮ್ಯಾಕ್ಸ್ ಎಂಬ 3 ದೊಡ್ಡ ಆಸ್ಪತ್ರೆಗಳಲ್ಲಿ ಈಗಾಗಲೇ 18-45 ವರ್ಷದ ಮಂದಿಗೆ ಶನಿವಾರದಿಂದ ಸೀಮಿತ ಕೇಂದ್ರಗಳಲ್ಲಿ ಲಸಿಕೆ ನೀಡಲು ಆರಂಭಿಸಲಾಗಿದೆ. 1.34 ಕೋಟಿ ಲಸಿಕೆ ನೀಡಲು ದೆಹಲಿ ಸರ್ಕಾರ ಆದೇಶಿಸಿದ್ದು, ಮುಂದಿನ ಮೂರು ತಿಂಗಳಿನಲ್ಲಿ ಲಸಿಕೆಯನ್ನು ತಲುಪಿಸಲಾಗುವುದು. ಈ ಪೈಕಿ 67 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಪುಣೆ ಮೂಲಕ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಸಂಗ್ರಹಿಸಲಾಗುತ್ತಿದೆ ಎಂದು ತಿಳಿದ್ದಾರೆ.

  • ತೆಲಂಗಾಣದಲ್ಲಿ ಮೇ 8ರವರೆಗೂ ನೈಟ್‌ ಕರ್ಫ್ಯೂ ವಿಸ್ತರಣೆ

    ತೆಲಂಗಾಣದಲ್ಲಿ ಮೇ 8ರವರೆಗೂ ನೈಟ್‌ ಕರ್ಫ್ಯೂ ವಿಸ್ತರಣೆ

    ಹೈದರಾಬಾದ್: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ತೆಲಂಗಾಣ ಸರ್ಕಾರವು ನೈಟ್‌ ಕರ್ಫ್ಯೂವನ್ನು ಶುಕ್ರವಾರದಿಂದ ಮೇ 8 ವರೆಗೆ, 7 ದಿನಗಳ ಕಾಲ ವಿಸ್ತರಿಸಿದೆ. ಇಂದು ರಾತ್ರಿ 9 ಗಂಟೆಯಿಂದ ರಾಜ್ಯವ್ಯಾಪ್ತಿ ನೈಟ್‌ ಕರ್ಫ್ಯೂ ಜಾರಿಗೆ ಬರಲಿದ್ದು, ಮೇ 8ರ ಬೆಳಗ್ಗೆ 5 ಗಂಟೆವರೆಗೂ ಮುಂದುವರೆಯಲಿದೆ ಎಂದು ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.

    ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಬಿ.ವಿಜಯ್ಸೆನ್ ರೆಡ್ಡಿಯನ್ನೊಳಗೊಂಡಂತೆ ತೆಲಂಗಾಣ ಹೈಕೋರ್ಟ್‍ನ ವಿಭಾಗೀಯ ಪೀಠವು ಶುಕ್ರವಾರ ನೈಟ್‌ ಕರ್ಫ್ಯೂ ಮುಕ್ತಾಯಗೊಂಡ ನಂತರ ರಾಜ್ಯ ಸರ್ಕಾರ ಏನು ಮಾಡುತ್ತದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ತೆಲಂಗಾಣ ಸರ್ಕಾರ ನೈಟ್‌ ಕರ್ಫ್ಯೂ ವಿಸ್ತರಿಸಿರುವ ಬಗ್ಗೆ ಅಡ್ವೊಕೇಟ್ ಜನರಲ್ ಬಿ. ಎಸ್ ಪ್ರಸಾದ್ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

    ತೆಲಂಗಾಣದಲ್ಲಿ ಶುಕ್ರವಾರ 7,646 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟು 4.35 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿದೆ ಮತ್ತು 53 ಮಂದಿ ಮೃತ ಪಟ್ಟಿದ್ದು, ಸಾವಿನ ಸಂಖ್ಯೆ 2,261ಕ್ಕೆ ಏರಿಕೆಯಾಗಿದೆ.

  • ಕೊರೊನಾಗೆ ಅಂಬ್ಯುಲೆನ್ಸ್ ಡ್ರೈವರ್ ಬಲಿ

    ಕೊರೊನಾಗೆ ಅಂಬ್ಯುಲೆನ್ಸ್ ಡ್ರೈವರ್ ಬಲಿ

    ಮೈಸೂರು: ಕೊರೊನಾಗೆ ಅಂಬ್ಯುಲೆನ್ಸ್ ಡ್ರೈವರ್ ಸಾವನ್ನಪ್ಪಿರುವ ಘಟನೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ರುದ್ರೇಶ್ (44) ಸಾವನ್ನಪ್ಪಿರುವ ಅಂಬುಲೆನ್ಸ್ ಡ್ರೈವರ್. ಕಳೆದ 12 ವರ್ಷಗಳಿಂದ ರುದ್ರೇಶ್ ಅಂಬ್ಯುಲೆನ್ಸ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಮಳವಳ್ಳಿ ವಿಭಾಗದಲ್ಲಿ 108 ಅಂಬ್ಯುಲೆನ್ಸ್ ಡ್ರೈವರ್ ಆಗಿ ರುದ್ರೇಶ್ ಕೆಲಸ ಮಾಡುತ್ತಿದ್ದರು.

    10 ದಿನಗಳ ಹಿಂದೆ ಇವರಿಗೆ ಕೊರೊನಾ ಸೋಂಕು ತಗುಲಿತ್ತು. ಆರಂಭದಲ್ಲಿ ಕೆ.ಎಂ.ದೊಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ರುದ್ರೇಶ್‍ಗೆ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ಆರೋಗ್ಯದಲ್ಲಿ ಏರುಪೇರಾದ ಕಾರಣ ರುದ್ರೇಶ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದ ಕಾರಣ ರುದ್ರೇಶ್ ಸಾವನ್ನಪ್ಪಿದ್ದಾರೆ. ರುದ್ರೇಶ್ ಅಂಬ್ಯುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುವ ಮೂಲಕ ಕುಟುಂಬಕ್ಕೆ ಆಧಾರ ಸ್ತಂಭ ಆಗಿದ್ದರು. ಇದೀಗ ಇವರನ್ನು ಕಳೆದುಕೊಂಡ ಕುಟುಂಬ ಕಣ್ಣೀರಿಡುತ್ತಿದೆ.