Tag: ಪಬ್ಲಿಕ್ ಟಿವಿ Corona

  • ಕೊರೊನಾ ಸೋಂಕಿಗೆ ದಂಪತಿ ಬಲಿ – ಪತಿಯ ಅಂತ್ಯ ಸಂಸ್ಕಾರ ಮುಗಿಸಿ ಬರುವಷ್ಟರಲ್ಲಿ ಪತ್ನಿಯೂ ಸಾವು

    ಕೊರೊನಾ ಸೋಂಕಿಗೆ ದಂಪತಿ ಬಲಿ – ಪತಿಯ ಅಂತ್ಯ ಸಂಸ್ಕಾರ ಮುಗಿಸಿ ಬರುವಷ್ಟರಲ್ಲಿ ಪತ್ನಿಯೂ ಸಾವು

    ಚಾಮರಾಜನಗರ: ಕೊರೊನಾ ಸೋಂಕಿಗೆ ದಂಪತಿಗಳಿಬ್ಬರು ಬಲಿಯಾಗಿರುವ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ನಾಗರತ್ನಮ್ಮ ಬಡಾವಣೆಯ ಸುದರ್ಶನ್, ಹೇಮಲತಾ ಸೋಂಕಿಗೆ ಬಲಿಯಾದ ದಂಪತಿ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಪತಿ ಸುದರ್ಶನ್ ಕೊರೊನಾದಿಂದ ಮೃತಪಟ್ಟಿದ್ದು, ತದಾನಂತರ ಪತಿಯ ಅಂತ್ಯ ಸಂಸ್ಕಾರ ನಡೆಸಿ ವಾಪಾಸ್ ಬರುವ ವೇಳೆಗೆ ಪತ್ನಿ ಹೇಮಲತಾ ಕೂಡ ಮೃತಪಟ್ಟಿದ್ದಾರೆ.

    ಸುದರ್ಶನ್ ಗುಂಡ್ಲುಪೇಟೆ ಪಟ್ಟಣದಲ್ಲಿ ಚುರುಮುರಿ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದರು. ಪತಿಯು ಸಾವನ್ನಪ್ಪಿದ ದಿನವೇ ಪತ್ನಿಯ ಸಾವನ್ನಪ್ಪಿದ್ದಾರೆ.

  • ಕೊರೊನಾ ಸೋಂಕಿನ ಶಂಕೆ – ಮಹಿಳೆ ಆತ್ಮಹತ್ಯೆ

    ಕೊರೊನಾ ಸೋಂಕಿನ ಶಂಕೆ – ಮಹಿಳೆ ಆತ್ಮಹತ್ಯೆ

    ಗದಗ: ಕೊರೊನಾ ಸೋಂಕಿನ ಶಂಕೆಗೆ ಮಹಿಳೆ ಆತ್ಮಹತ್ಯೆ ಮಾಡಿರುವ ಘಟನೆ ತಾಲೂಕಿನ ಕದಡಿ ಗ್ರಾಮದಲ್ಲಿ ನಡೆದಿದೆ.

    ಮೃತಪಟ್ಟ ಮಹಿಳೆಯನ್ನು ಲಲಿತಾ ರೋಣ(45) ಎಂದು ಗುರುತಿಸಲಾಗಿದ್ದು, ಇವರು ನಿತ್ಯ ತರಕಾರಿ ಮಾರುತ್ತಿದ್ದರು. ಆದರೆ ಕಳೆದ ಹತ್ತಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಕುಟುಂಬಸ್ಥರು ಹಾಗೂ ಸ್ಥಳಿಯರು ಒತ್ತಾಯಿಸಿದ್ದಾರೆ.

    ಮಹಿಳೆ ನನಗೂ ಕೊರೊನಾ ಇರಬಹುದೆಂದು ಭಯಗೊಂಡು ಯಾರು ಇಲ್ಲದ ವೇಳೆ ಹೊರವಲಯದಲ್ಲಿ ತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊರೊನಾ ಗೆದ್ದ ಒಂದೇ ಕುಟುಂಬದ 16 ಮಂದಿ

    ಕೊರೊನಾ ಗೆದ್ದ ಒಂದೇ ಕುಟುಂಬದ 16 ಮಂದಿ

    ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೆಮ್ಮಾರಿ ವೈರಸ್‍ಗೆ ಸಾಕಷ್ಟು ಜನರು ಬಲಿಯಾಗುತ್ತಿದ್ದಾರೆ. ಇದರ ನಡುವೆಯೇ ಅದೃಷ್ಟಶಾಲಿಗಳೆಂಬಂತೆ ವೈರಸ್ ವಿರುದ್ಧ ಹೋರಾಡಿ ಒಂದೇ ಕುಟುಂಬದ 16 ಜನರು ಗುಣಮುಖರಾಗುವ ಮೂಲಕ ಇತರಿಗೂ ಮಾದರಿಯಾಗಿದ್ದಾರೆ.

    ಸುಳ್ಳ ಗ್ರಾಮದ ಶಿವಳ್ಳಿ ಮಠ ಕುಟುಂಬದ 16 ಜನಕ್ಕೆ ಕೊರೊನಾ ಸೋಂಕು ತಗುಲಿತ್ತು. ಮೇ 3 ರಿಂದ ಎಲ್ಲರೂ ಹೋಮ್ ಐಸೋಲೇಷನ್‍ನಲ್ಲಿ ಇದ್ದುಕೊಂಡು ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದರಲ್ಲಿ ಮೂರು ವರ್ಷದ ಒಳಗಿನ ನಾಲ್ಕು ಮಕ್ಕಳು ಸಹ ಗುಣಮುಖರಾಗಿದ್ದಾರೆ. 45 ವರ್ಷ ಮೇಲ್ಪಟ್ಟ 4 ಜನರು ಈ ಮೊದಲೇ ಎರಡನೇ ಡೋಸ್ ವ್ಯಾಕ್ಸಿನೇಷನ್ ಮಾಡಿಸಿಕೊಂಡಿದ್ದರು ಹಾಗೂ ಇತರ 3 ಜನರಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ.

    ಕಳೆದ ತಿಂಗಳು 29 ರಂದು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಮನೆಯಲ್ಲಿಯೇ ಹೋಮ್ ಐಸೋಲೇಷನ್ ಆಗಿದ್ದೆವು ಹಾಗೂ ಪಾಸಿಟಿವ್ ರಿಪೋರ್ಟ್ ಬಂದಾಗ ಯಾವುದೇ ರೀತಿಯಲ್ಲೂ ಭಯಪಡದೇ ಆತ್ಮಸ್ಥೈರ್ಯದಿಂದ ಹಾಗೂ ಮನೆಯಲ್ಲಿನ ಸದಸ್ಯರಿಗೂ ಧೈರ್ಯ ತುಂಬಿ ವೈದ್ಯರ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಿದೆವು ಎಂದು ಮನೆಯ ಮುಖ್ಯಸ್ಥ ಮಲ್ಲಯ್ಯ ಶಿವಳ್ಳಿಮಠ ತಿಳಿಸಿದ್ದಾರೆ.

    ರಾಜು(34), ಶ್ರೇಯಾ (10ತಿಂಗಳು), ಲಕ್ಷ್ಮಿ(25), ವೈಭವಿ(1), ಶಶಿಕಲಾ(24), ಸಮರ್ಥ (2), ಸಹನಾ(16),ವೈಷ್ಣವಿ(2),ಗಿರಿಜಮ್ಮ(60),ಶರಣಯ್ಯಾ(9), ಮಲ್ಲಯ್ಯ (63),ಮಹಾಂತಯ್ಯ(60), ಸಿದ್ದರಾಮಯ್ಯ(59) ಮಲ್ಲಿಕಾರ್ಜುನ (25), ಮಲ್ಲಿಕಾರ್ಜುನಯ್ಯಾ(28), ಮೃತ್ಯುಂಜಯ(27) ಕೊರೊನಾವನ್ನು ಗೆದ್ದಿದ್ದಾರೆ.

  • ರಾಜ್ಯದಲ್ಲಿ ಇಂದು 52,581 ಡಿಸ್ಚಾರ್ಜ್- 32,218 ಹೊಸ ಪ್ರಕರಣ, 353 ಸಾವು

    ರಾಜ್ಯದಲ್ಲಿ ಇಂದು 52,581 ಡಿಸ್ಚಾರ್ಜ್- 32,218 ಹೊಸ ಪ್ರಕರಣ, 353 ಸಾವು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನ ಕಡಿಮೆಯಾಗುತ್ತಿದ್ದು, ಕರ್ನಾಟಕದಲ್ಲಿ ಇಂದು 52,581 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 32,218 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 353 ಜನರನ್ನು ಮಹಾಮಾರಿ ಬಲಿ ಪಡೆದಿದೆ.

    ಇಂದು 32,218 ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 5,14,238ಕ್ಕೆ ಏರಿಕೆಯಾಗಿದ್ದು, ಇಂದು 353 ಜನ ಕೊರೊನಾಗೆ ಬಲಿಯಾಗಿದ್ದು, ಈ ವರೆಗೆ ಒಟ್ಟು 24,207 ಜನ ಸಾವನ್ನಪ್ಪಿದ್ದಾರೆ. ಈ ವರೆಗೆ ಒಟ್ಟು 23,67,742 ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ.

    ಇಂದು 52,581 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ವರೆಗೆ ಒಟ್ಟು 18,79,276 ಜನ ಈ ವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.24.22ರಷ್ಟಿದ್ದು, ಮೃತರ ಪ್ರಮಾಣ ಶೇ.1.09ರಷ್ಟಿದೆ. ಇಂದು 15,586 ಆಂಟಿಜನ್ ಟೆಸ್ಟ್, 1,17,427 ಆರ್‌ಟಿ-ಪಿಸಿಆರ್ ಸೇರಿದಂತೆ ಒಟ್ಟು 1,33,013 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 81,268 ಮಂದಿಗೆ ಲಸಿಕೆ ನೀಡಲಾಗಿದೆ.

    ಬೆಂಗಳೂರಿನಲ್ಲಿ 9,591 ಮಂದಿಗೆ ಕೊರೊನಾ ದೃಢಪಟ್ಟಿದ್ದು, 129 ಜನ ಸಾವನ್ನಪ್ಪಿದ್ದಾರೆ. ಇನ್ನೂ 2,89,131 ಸಕ್ರಿಯ ಪ್ರಕರಣಗಳಿವೆ. ಮೈಸೂರು 2,355, ಹಾಸನ 2071, ಬಳ್ಳಾರಿ 1,650, ಬೆಳಗಾವಿ 1,138 ಹಾಗೂ ತುಮಕೂರಿನಲ್ಲಿ 1,773 ಪ್ರಕರಣಗಳು ವರದಿಯಾಗಿವೆ.

  • ಲಸಿಕೆಗಾಗಿ ಆವಾಜ್ – ಆರೋಗ್ಯ ಸಿಬ್ಬಂದಿ ಜೊತೆ ಕಾಂಗ್ರೆಸ್ ಮುಖಂಡನ ವಾಗ್ವಾದ

    ಲಸಿಕೆಗಾಗಿ ಆವಾಜ್ – ಆರೋಗ್ಯ ಸಿಬ್ಬಂದಿ ಜೊತೆ ಕಾಂಗ್ರೆಸ್ ಮುಖಂಡನ ವಾಗ್ವಾದ

    ಬೆಂಗಳೂರು: ಲಸಿಕೆ ಪಡೆಯಲು ಕಾಂಗ್ರೆಸ್ ಮುಖಂಡ ಮಾಜಿ ಪುರಸಭಾ ಸದಸ್ಯ ಲಸಿಕಾ ಕೇಂದ್ರಕ್ಕೆ ಬಂದು ಆರೋಗ್ಯ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.

    ಕೊರೊನಾ ವ್ಯಾಕ್ಸಿನ್ ಗಾಗಿ ಜನ ಪರದಾಡುತ್ತಿದ್ದು, ಕೊರೊನಾ ಲಸಿಕೆ ಪಡೆಯಲು ಆನೇಕಲ್ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಲಸಿಕಾ ಕೇಂದ್ರದಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಲ್ಲಿ ನಿಂತು ವಯ್ಯೋವೃದ್ದರು ಕಾಯುತ್ತಿದ್ದರು. ಈ ವೇಳೆ ಲಸಿಕೆ ಪಡೆಯಲು ಕಾಂಗ್ರೆಸ್ ಮುಖಂಡ ಮಾಜಿ ಪುರಸಭಾ ಸದಸ್ಯ ಮಲ್ಲಿಕಾರ್ಜುನ್ ಲಸಿಕಾ ಕೇಂದ್ರಕ್ಕೆ ಬಂದು ಆರೋಗ್ಯ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.

    ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ್ ಸರತಿ ಸಾಲಲ್ಲಿ ನಿಂತಿದ್ದವರನ್ನು ಬಿಟ್ಟು ತಮಗೆ ವ್ಯಾಕ್ಸಿನ್ ನೀಡುವಂತೆ ಲಸಿಕಾ ಕೇಂದ್ರದ ಸಿಬ್ಬಂದಿಯನ್ನು ಕೇಳಿದ್ದು, ಸಿಬ್ಬಂದಿ ಸಾಲಿನಲ್ಲಿ ಬರುವಂತೆ ತಿಳಿಸಿದ್ದಾರೆ. ಈ ವೇಳೆ ತಾನು ಹಿರಿಯ ವೈದ್ಯರಿಗೆ ಹೇಳಿದ್ದೇನೆ ಎಂದು ತಿಳಿಸಿದ್ದೇನೆ ಲಸಿಕೆ ಕೊಡಿ ಅಂದು ವಾಗ್ವಾದ ತೆಗೆದಿದ್ದಾರೆ. ಈ ನಡುವೆ ಪೊಲೀಸರು ಆರೋಗ್ಯ ಸಿಬ್ಬಂದಿ ಹಾಗೂ ಮಲ್ಲಿಕಾರ್ಜುನ್ ನಡುವೆ ಮಾತಿನ ಚಕಮಕಿ ನಡೆದಿದೆ.

    ಜೊತೆಗೆ ಕಳೆದ ಒಂದು ವಾರದಿಂದ ಇದೇ ರೀತಿ ಗಲಾಟೆ ಮಾಡುತ್ತಿದ್ದಾರೆ. ಇನ್ನು ಆನೇಕಲ್ ಲಸಿಕಾ ಕೇಂದ್ರದಲ್ಲಿ ಲಸಿಕಾ ಅಭಿಯಾನ ನಡೆಸುತ್ತಿದ್ದು, ಆರೋಗ್ಯ ಪೊಟರ್ಲ್ ನಲ್ಲಿ ನೊಂದಣಿ ಮಾಡಿಕೊಂಡವರು ಬರುತ್ತಿರುವಸರಿಂದ ಸ್ಥಳೀಯರಿಗೆ ಲಸಿಕೆ ಕೊರತೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಇನ್ನೂ ಸಂಬಂಧಪಟ್ಟ ಸಚಿವರು ವ್ಯಾಕ್ಸಿನ್ ಹೆಚ್ಚು ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

  • ರೋಣದಲ್ಲಿ ಸೋಂಕಿತನ ಶವ ಸಂಸ್ಕಾರಕ್ಕೆ ಗ್ರಾಮಸ್ಥರ ಅಡ್ಡಿ

    ರೋಣದಲ್ಲಿ ಸೋಂಕಿತನ ಶವ ಸಂಸ್ಕಾರಕ್ಕೆ ಗ್ರಾಮಸ್ಥರ ಅಡ್ಡಿ

    ಗದಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತನ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಅಮಾನವೀಯ ಘಟನೆ ಜಿಲ್ಲೆಯ ರೋಣ ತಾಲೂಕಿನ ಅಮರಗೋಳದಲ್ಲಿ ಬೆಳಕಿಗೆ ಬಂದಿದೆ.

    ಮೂಲತಃ ಅಮರಗೋಳ ಗ್ರಾಮದ 72 ವರ್ಷದ ವ್ಯಕ್ತಿಯೊಬ್ಬರು ಮಹಾಮಾರಿಗೆ ಬಲಿಯಾಗಿದ್ದರು. ಈ ವ್ಯಕ್ತಿ ಬಾಗಲಕೋಟೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾದಿಂದ ಬಾಗಲಕೋಟೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿದ್ದರು. ನಂತರ ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರು ಹುಟ್ಟೂರಿಗೆ ಶವ ತಂದಿದ್ದರು.

    ಈ ನಿರ್ಧಾರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹೆಚ್ಚು ಮಳೆ ಸುರಿದಿದ್ದರಿಂದಾಗಿ ಅಂಬುಲೆನ್ಸ್ ವಾಹನ ಹೊಲಕ್ಕೆ ತೆರಳಲು ಪರದಾಟ ನಡೆಸಿತು. ಕೊನೆಗೆ ತಮ್ಮದೇ ಆದ ಜೆಸಿಬಿ ವಾಹನದಲ್ಲಿ ಶವವನ್ನು ಹಾಕಿಕೊಂಡು ಬಂದು ತಮ್ಮ ಸ್ವಂತ ಜಮೀನಿನಲ್ಲಿಯೇ ಸಂಬಂಧಿಕರು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಈ ಘಟನೆ ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಗೋವಾದಲ್ಲಿ ಮೇ 31 ರವರೆಗೂ ಲಾಕ್‍ಡೌನ್ ವಿಸ್ತರಣೆ

    ಗೋವಾದಲ್ಲಿ ಮೇ 31 ರವರೆಗೂ ಲಾಕ್‍ಡೌನ್ ವಿಸ್ತರಣೆ

    ಪನಾಜಿ: ಕೋವಿಡ್-19 ಎರಡನೇ ಅಲೆಯಿಂದಾಗಿ ರ್ಯಾಜ್ಯವ್ಯಾಪ್ತಿ ಲಾಕ್‍ಡೌನ್‍ನನ್ನು ಮೇ 31 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶುಕ್ರವಾರ ತಿಳಿಸಿದ್ದಾರೆ.

    ಗೋವಾದಲ್ಲಿ ಲಾಕ್‍ಡೌನ್ ವಿಸ್ತರಣೆಯ ಕುರಿತಾಗಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಾವು ರಾಜ್ಯದಲ್ಲಿ ಕಫ್ರ್ಯೂವನ್ನು ಮೇ 31 ರವರೆಗೂ ವಿಸ್ತರಿಸುತ್ತಿದ್ದೇವೆ ಹಾಗೂ ಈ ಮುನ್ನ ಇದ್ದ ನಿಯಮಗಳು ಇದ್ದಂತೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

    ಕಫ್ರ್ಯೂ ವೇಳೆ ಅಗತ್ಯ ವಸ್ತುಗಳು, ದಿನಸಿ ಅಂಗಡಿ, ಮದ್ಯದಂಗಡಿಗಳನ್ನು ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ತೆರೆಯಲಾಗುತ್ತದೆ ಮತ್ತು ಮೆಡಿಕಲ್ ಶಾಪ್ ಮತ್ತು ರೆಸ್ಟೋರೆಂಟ್‍ಗಳು ಬೆಳಗ್ಗೆ 7 ರಿಂದ ಸಂಜೆ 7ರವರೆಗೂ ಕಾರ್ಯನಿರ್ವಹಿಸಲಿದೆ.

  • ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ?

    ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ?

    ಕೋವಿಡ್-19 ಸಾಂಕ್ರಮಿಕ ರೋಗ ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಅಗತ್ಯ. ಆದ್ರೆ ವ್ಯಕ್ತಿಯೋರ್ವ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ವೇಳೆ ಪ್ರಯಾಣಿಕರೊಂದಿಗೆ ಸಾಮಾಜಿಕ ಅಂತರವನ್ನು ಕಾಪಾಡಲು ಜುಗಾಡ(ಡಬ್ಬ)ವನ್ನು ಧರಿಸಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ವ್ಯಕ್ತಿಯು ತನ್ನನ್ನು ಸಂಪೂರ್ಣವಾಗಿ ನಾಲ್ಕು ಕಡೆಗಳಿಂದ ಬಾಕ್ಸ್ ಮಾದರಿ ಪ್ಲಾಸ್ಟಿಕ್ ಪರದೆಯಲ್ಲಿ ಕವರ್ ಮಾಡಿಕೊಂಡಿದ್ದಾನೆ. ಅಲ್ಲದೆ ಪ್ಲಾಸ್ಟಿಕ್ ಬಾಕ್ಸ್ ಒಳಗೆ ಆರಾಮವಾಗಿ ಕುಳಿತುಕೊಂಡು ತನ್ನ ಮೊಬೈಲ್‍ನನ್ನು ಸ್ಕ್ರೋಲ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

    ಈ ವೀಡಿಯೋವನ್ನು ಉದ್ಯಮಿ ಹರ್ಷ್ ಗೋಯೆಂಕಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಕೊರೊನಾ ಇನೋವೇಶನ್’ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈವರೆಗೂ 19 ಸಾವಿರಕ್ಕೂ ಹೆಚ್ಚು ವ್ಯೂವ್ಸ್ ಬಂದಿದ್ದು, ಅನೇಕ ಮಂದಿ ಕಮೆಂಟ್ ಮಾಡಿದ್ದಾರೆ.

  • ಕೊರೊನಾ ಎರಡನೇ ಅಲೆಗೆ ದೇಶಾದ್ಯಂತ 270 ವೈದ್ಯರು ಬಲಿ

    ಕೊರೊನಾ ಎರಡನೇ ಅಲೆಗೆ ದೇಶಾದ್ಯಂತ 270 ವೈದ್ಯರು ಬಲಿ

    ನವದೆಹಲಿ: ಕೊರೊನಾ ಎರಡನೇ ಅಲೆಯಲ್ಲಿ ದೇಶಾದ್ಯಂತ ಈವರೆಗೂ 270 ವೈದ್ಯರು ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮಂಗಳವಾರ ತಿಳಿಸಿದೆ.

    ಇಲ್ಲಿಯವರೆಗೂ ಕೊರೊನಾದಿಂದ ಮೃತಪಟ್ಟ ವೈದ್ಯರ ಪಟ್ಟಿಯಲ್ಲಿ ಐಎಂಎ ಮಾಜಿ ಅಧ್ಯಕ್ಷ ಡಾ.ಕೆ.ಕೆ. ಅಗರ್‍ವಾಲ್ ಕೂಡ ಒಬ್ಬರಾಗಿದ್ದಾರೆ. ಬಿಹಾರದಲ್ಲಿ ಗರಿಷ್ಟ 78 ವೈದ್ಯರು, ದೆಹಲಿಯಲ್ಲಿ 29, ಉತ್ತರ ಪ್ರದೇಶದಲ್ಲಿ 37, ಆಂಧ್ರ ಪ್ರದೇಶದಲ್ಲಿ 22 ವೈದ್ಯರು ಸಾವನ್ನಪ್ಪಿದ್ದಾರೆ.

    ಭಾರತೀಯ ವೈದ್ಯಕೀಯ ಸಂಘದ ಕೋವಿಡ್-19 ನೊಂದಾವಣೆಯ ಪ್ರಕಾರ, ಕಳೆದ ವರ್ಷ ಕೊರೊನಾ ಮೊದಲನೇ ಅಲೆಯಲ್ಲಿ ಭಾರತದಾದ್ಯಂತ 748 ವೈದ್ಯರು ಸೋಂಕಿಗೆ ಬಲಿಯಾಗಿದ್ದರು. ಇದೀಗ ಎರಡನೇ ಅಲೆಯ ಅಲ್ಪಾವಧಿಯಲ್ಲಿ 270 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಐಎಂಎ ತಿಳಿಸಿದೆ.

    ಕೊರೊನಾ ವೈರಸ್ ಎರಡನೇ ಅಲೆಯಲ್ಲಿ ವೇಗವಾಗಿ ಎಲ್ಲರಿಗೂ ಹರಡುತ್ತಿದ್ದು, ಆರೋಗ್ಯ ಕಾರ್ಯಕರ್ತರಿಗೆ ಹೆಚ್ಚು ಮಾರಕವಾಗಿದೆ ಎಂದು ಐಎಂಎ ಅಧ್ಯಕ್ಷ ಡಾ. ಜೆ.ಎ. ಜಯಲಾಲ್ ಹೇಳಿದ್ದಾರೆ.

  • ಕೋವಿಡ್ ಕರ್ಫ್ಯೂ ವಿಸ್ತರಿಸಿದ ಉತ್ತರಾಖಂಡ್ – ಮದ್ವೆಯಲ್ಲಿ ಭಾಗಿಯಾಗಲು ರಿಪೋರ್ಟ್ ಕಡ್ಡಾಯ

    ಕೋವಿಡ್ ಕರ್ಫ್ಯೂ ವಿಸ್ತರಿಸಿದ ಉತ್ತರಾಖಂಡ್ – ಮದ್ವೆಯಲ್ಲಿ ಭಾಗಿಯಾಗಲು ರಿಪೋರ್ಟ್ ಕಡ್ಡಾಯ

    ದೆಹ್ರಾಡೂನ್: ಉತ್ತರಾಖಂಡ್ ಸರ್ಕಾರ ರಾಜ್ಯದಲ್ಲಿ ಕೊರೊನಾ ಕರ್ಫ್ಯೂವನ್ನು ಸೋಮವಾರದಿಂದ ವಿಸ್ತರಿಸಿದ್ದು, ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳವವರಿಗೆ ಕೋವಿಡ್-19 ನೆಗೆಟಿವ್ ವರದಿಯನ್ನು ತರಲು ಕಡ್ಡಾಯಗೊಳಿಸಿದೆ.

    ಮೇ 18ರ ಬೆಳಗ್ಗೆ 6 ಗಂಟೆಗೆ ಮುಕ್ತಾಯವಾಗಬೇಕಿದ್ದ ಕೋವಿಡ್-19 ಕರ್ಫ್ಯೂ ಮೇ 25ರ ಬೆಳಗ್ಗೆ 6 ಗಂಟೆಯವರೆಗೂ ವಿಸ್ತರಿಸಲಾಗಿದೆ ಎಂದು ಕ್ಯಾಬಿನೆಟ್ ಸಚಿವರು ಮತ್ತು ರಾಜ್ಯ ಸರ್ಕಾರದ ಅಧಿಕೃತ ವಕ್ತಾರ ಸುಬೋಧ್ ಯುನಿಯಲ್ ತಿಳಿಸಿದ್ದಾರೆ.

    ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಜನರು ತಮ್ಮ ಕೋವಿಡ್-19 ನೆಗೆಟಿವ್ ಪರೀಕ್ಷಾ ವರದಿಯನ್ನು ತೆಗೆದುಕೊಂಡು ಬರಬೇಕು. ಅದು 72 ಗಂಟೆಗಳಿಗಿಂತ ಒಳಗಿನದ್ದಾಗಿರಬೇಕು ಹಾಗೂ ಮದುವೆ ಸಮಾರಂಭಗಳಿಗೆ 20 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 20 ಮಂದಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಅಲ್ಲದೇ ಶವಸಂಸ್ಕಾರಕ್ಕೆ ಹೋಗುವವರಿಗೆ ಆಡಳಿತವು ಕರ್ಫ್ಯೂ ಪಾಸ್ ನೀಡುವುದು ಅಗತ್ಯವಾಗಿದೆ. ಒಟ್ಟಾರೆ ಕೊರೊನಾ ಸೋಂಕನ್ನು ತಡೆಗಟ್ಟಲು ಕರ್ಫ್ಯೂ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.