Tag: ಪಬ್ಲಿಕ್ ಟಿವಿ Corona

  • ಸೊಂಕಿತರೊಂದಿಗೆ ವೈದ್ಯೆ ಡ್ಯಾನ್ಸ್ – ಐಡಿಯಾಗೆ ಜನರಿಂದ ಮೆಚ್ಚುಗೆ

    ಸೊಂಕಿತರೊಂದಿಗೆ ವೈದ್ಯೆ ಡ್ಯಾನ್ಸ್ – ಐಡಿಯಾಗೆ ಜನರಿಂದ ಮೆಚ್ಚುಗೆ

    ಚಿತ್ರದುರ್ಗ: ಆತ್ಮಸ್ಥೈರ್ಯ ತುಂಬಲು ಜಿಲ್ಲೆಯ ವೈದ್ಯರು ಸೋಂಕಿತರ ಜೊತೆ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಕೋವಿಡ್ ಕೇರ್ ಕೇಂದ್ರದಲ್ಲಿ ಕಳೆದ ಹತ್ತು ದಿನಗಳಿಂದ ಕೊರೊನಾ ಸೋಂಕಿತರಿಗೆ ವೈದ್ಯೆ ಶೃತಿ ನೃತ್ಯ ವ್ಯಾಯಾಮ ಮಾಡಿಸುತ್ತಿದ್ದಾರೆ.

    ಪ್ರತಿ ದಿನ ಹಿಂದಿ ಹಾಡೋಂದಕ್ಕೆ ನೃತ್ಯ ಮಾಡಿಸುವ ವೈದ್ಯೆ ಶೃತಿ, ನಾಗಿನಿ ನಾಗಿನಿ ಹಾಡಿಗೆ ಕೊರೊನಾ ಸೋಂಕಿತರೊಟ್ಟಿಗೆ ಹೆಜ್ಜೆ ಹಾಕಿಸುವ ಮೂಲಕ ಗಮನ ಸೆಳೆದಿದ್ದಾರೆ. ಕೊರೊನಾ ಪಾಸಿಟಿವ್ ಬಂದಿದೆ ಎಂದು ಬಾರಿ ಆತಂಕ ಹಾಗೂ ಭಯದಿಂದ ಬದುಕುವ ಸೋಂಕಿತರಿಗೆ ಮಾನಸಿಕವಾಗಿ ಆತ್ಮಸ್ಥೈರ್ಯ ತುಂಬಲು ಡ್ಯಾನ್ಸ್ ಪ್ರಯೋಗ ಮಾಡಿದ್ದಾರೆ.

    ವೈದ್ಯರು ಸಹ ಎಲ್ಲರೊಟ್ಟಿಗೆ ಒಂದಾಗಿ ನಯ, ನಾಜುಕಿಲ್ಲದೇ ಸ್ವಲ್ಪವೂ ಮುಜುಗರ ಪಡದೇ ಸ್ಟೆಪ್ ಹಾಕಿ ಸೋಂಕಿತರನ್ನು ಸಂಪೂರ್ಣ ಆಕ್ಟೀವ್ ಆಗಿರುವಂತೆ ಮಾಡಿದ್ದಾರೆ. ಸದ್ಯ ವೈದ್ಯರು ಮಾಡಿರುವ ಈ ಐಡಿಯಾ ಫುಲ್ ವರ್ಕೌಟ್ ಆಗಿದ್ದು, ಅತೀ ಬೇಗನೇ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳುವಂತಾಗಿದೆ. ಹೀಗಾಗಿ ಡಾಕ್ಟರ್ ಶೃತಿಯವರ ಕಾರ್ಯಕ್ಕೆ ಎಲ್ಲೆಡೆ ಸೋಂಕಿತರು ಹಾಗೂ ಅವರ ಕುಟುಂಬಸ್ಥರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಲಾಕ್‍ಡೌನ್‍ನಿಂದ ಶಾಸಕ ಕುಮಾರ್ ಬಂಗಾರಪ್ಪ ಪುತ್ರಿ ಮದುವೆ ಮುಂದೂಡಿಕೆ

    ಲಾಕ್‍ಡೌನ್‍ನಿಂದ ಶಾಸಕ ಕುಮಾರ್ ಬಂಗಾರಪ್ಪ ಪುತ್ರಿ ಮದುವೆ ಮುಂದೂಡಿಕೆ

    ಶಿವಮೊಗ್ಗ: ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಪುತ್ರಿ ವಿವಾಹವನ್ನು ಮುಂದೂಡಲಾಗಿದೆ.

    ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಪುತ್ರಿ ಲಾವಣ್ಯ ಅವರ ವಿವಾಹ ಹೈದರಾಬಾದ್ ಮೂಲದ ಡಾ. ವಿಕ್ರಮಾಧಿತ್ಯ ಅಥೆಲಿ ಅವರೊಂದಿಗೆ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿಗದಿಯಾಗಿತ್ತು. ಅಲ್ಲದೇ ಜೂನ್ 4 ರಂದು ಸೊರಬದ ಎಸ್.ಬಂಗಾರಪ್ಪ ಕ್ರೀಡಾಂಗಣದಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಸಹ ನಿಯೋಜಿಸಲಾಗಿತ್ತು.

    ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಗೂ ಸೋಂಕು ಹೆಚ್ಚುತ್ತಿರುವ ಕಾರಣ ಜೊತೆಗೆ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿರುವ ಜನರಿಗೆ ಮಿತಿ ಹೇರಿರುವುದರಿಂದ ಶಾಸಕ ಕುಮಾರ್ ಬಂಗಾರಪ್ಪ ತಮ್ಮ ಪುತ್ರಿಯ ವಿವಾಹವನ್ನು ಮುಂದೂಡಿದ್ದಾರೆ. ಅಲ್ಲದೇ ಲಾಕ್ ಡೌನ್ ಮುಗಿದ ನಂತರ ಹಾಗೂ ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ಮದುವೆ ದಿನಾಂಕ ನಿಗದಿಪಡಿಸುವ ಬಗ್ಗೆ ನಿರ್ಧರಿಸಿದ್ದಾರೆ.

    ರಾಜ್ಯ ಸರಕಾರ ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ಜಾರಿಗೊಳಿಸಿದೆ. ಮದುವೆ ಸಮಾರಂಭಗಳಲ್ಲಿ ಕೇವಲ 40 ಮಂದಿ ಮಾತ್ರ ಭಾಗವಹಿಸುವಂತೆ ಮಿತಿ ಹೇರಿದೆ.

  • ಮಂಡ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಮುಗಿ ಬಿದ್ದ ಜನ

    ಮಂಡ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಮುಗಿ ಬಿದ್ದ ಜನ

    ಮಂಡ್ಯ: ಕೊರೊನಾ ಕಂಟ್ರೋಲ್‍ಗೆ ಮಂಡ್ಯ ಜಿಲ್ಲಾಡಳಿತ ಸಂಪೂರ್ಣ ಲಾಕ್‍ಡೌನ್ ವಿಸ್ತರಣೆ ಮಾಡಿರುವ ಹಿನ್ನೆಲೆ ಮಂಡ್ಯದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ.

    ನಾಳೆಯಿಂದ ನಾಲ್ಕು ದಿನಗಳ ಕಾಲ ಮಂಡ್ಯ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್‍ಗೊಳಿಸುವುದಾಗಿ ಜಿಲ್ಲಾಡಳಿತ ಘೋಷಣೆ ಮಾಡಿದೆ. ಈ ಹಿನ್ನೆಲೆ ಬೆಳಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಜನರು ಸಾಮಾಜಿಕ ಅಂತರ ಮರೆತು ಜನ ತರಕಾರಿ, ಸೊಪ್ಪು, ಹೂ ಖರೀದಿಸಲು ಮುಂದಾಗಿದ್ದಾರೆ.

    ಜಿಲ್ಲಾಡಳಿತ ನಗರದಲ್ಲಿ ಒಂದೇ ಮಾರುಕಟ್ಟೆ ನಿರ್ಮಾಣ ಮಾಡಿರುವ ಕಾರಣ ಇಷ್ಟೊಂದು ಜನರು ಸಾಮಾಜಿಕ ಅಂತರ ಮರೆತು ಖರೀದಿ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಮಂಡ್ಯ ನಗರದ ನಾಲ್ಕೈದು ಕಡೆ ಮಾರುಕಟ್ಟೆ ನಿರ್ಮಾಣ ಮಾಡಿದ್ದರೆ ಇಷ್ಟೊಂದು ಪ್ರಮಾಣದಲ್ಲಿ ಜನರು ಸೇರುತ್ತಿರಲಿಲ್ಲ. ಜಿಲ್ಲಾಡಳಿತ ಮಾಡಿರುವ ಈ ಯಡವಟ್ಟಿನಿಂದ ಮಂಡ್ಯದಲ್ಲಿ ಕೊರೊನಾ ಮಹಾ ಸ್ಟೋಟವಾಗುವ ಸಾಧ್ಯತೆಯಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಬಂದಿದೆ.

  • ನಾನು ಸತ್ರೆ ಸಾಯ್ತೀನಿ ಬಿಡಿ ನಿಮಗೇನು? – ಅಧಿಕಾರಿಗಳ ಮೇಲೆ ಸೋಂಕಿತನ ದರ್ಪ

    ನಾನು ಸತ್ರೆ ಸಾಯ್ತೀನಿ ಬಿಡಿ ನಿಮಗೇನು? – ಅಧಿಕಾರಿಗಳ ಮೇಲೆ ಸೋಂಕಿತನ ದರ್ಪ

    ಚಿಕ್ಕಮಗಳೂರು: ನಾನು ಸತ್ತರೆ ಸಾಯುತ್ತೇನೆ ಬಿಡಿ. ನಿಮಗೇನು? ನಾನು ಮನೆಯಲ್ಲಿದ್ದರೆ ನಮ್ಮ ತೋಟಕ್ಕೆ ಗೊಬ್ಬರ ನೀವು ಹಾಕುತ್ತೀರಾ ಎಂದು ಕೊರೊನಾ ಸೋಂಕಿತ ವ್ಯಕ್ತಿ ಅಧಿಕಾರಿಗಳ ಮೇಲೆ ಪ್ರಶ್ನಿಸಿ ದರ್ಪ ತೋರಿದ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ನೇರಡಿ ಗ್ರಾಮದಲ್ಲಿ ನಡೆದಿದೆ.

    ವ್ಯಕ್ತಿಯೊಬ್ಬನಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದರಿಂದ ಅಧಿಕಾರಿಗಳು ವರದಿ ಬರುವ ತನಕ ಆತನಿಗೆ ಮನೆಯಲ್ಲೇ ಇರುವಂತೆ ಸೂಚಿಸಿದ್ದರು. ಅಲ್ಲದೆ ಆ ವ್ಯಕ್ತಿಗೆ ಪಾಸಿಟಿವ್ ಬಂದಿರುವ ಬಗ್ಗೆ ಮೊಬೈಲ್‍ಗೆ ಮೆಸೇಜ್ ಕೂಡ ಕಳುಹಿಸಲಾಗಿತ್ತು. ಹೀಗಿದ್ದರೂ ಆತನಿಗೆ ಪಾಸಿಟಿವ್ ಬಂದಿದ್ದರೂ ಗ್ರಾಮದಲ್ಲಿ ಓಡಾಡಿಕೊಂಡು ಹೊಲಗದ್ದೆ ತೋಟಗಳಿಗೆ ಹೋಗಿ ಬರುತ್ತಿದ್ದನು.

    ಮರುದಿನ ಅಧಿಕಾರಿಗಳು ಆತನ ಯೋಗ-ಕ್ಷೇಮ ವಿಚಾರಿಸಲು ಮನೆಗೆ ಹೋದಾಗ ಆತ ಇರಲಿಲ್ಲ. ಅದೇ ವೇಳೆಗೆ ತೋಟದಿಂದ ಬಂದ ಆ ವ್ಯಕ್ತಿಗೆ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಆ ವ್ಯಕ್ತಿ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ನಡೆಸಿದ್ದಾನೆ. ನಮ್ಮ ತೋಟಕ್ಕೆ ಗೊಬ್ಬರ ಹಾಕಲು ನೀವು ಬರ್ತೀರಾ. ನಾನು ಸತ್ತರೆ ಸಾಯುತ್ತೇನೆ ಬಿಡಿ. ನಾನು ಹೊರಗಡೆ ಓಡಾಡ್ತೀನಿ ನೀವ್ಯಾರು ಕೇಳಬೇಡಿ ಎಂದು ಅಧಿಕಾರಿಗಳ ಮೇಲೆ ದರ್ಪ ಮೆರೆದಿದ್ದಾನೆ. ಇದನ್ನು ಓದಿ: ಲಾಕ್‍ಡೌನ್ ಮಧ್ಯೆ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಮಾರಿ ಹಬ್ಬ

    ವ್ಯಕ್ತಿಯ ಮನೆಯಲ್ಲಿ ಆತ ಸೇರಿದಂತೆ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ವ್ಯಕ್ತಿಯ ದಬ್ಬಾಳಿಕೆ ಕಂಡ ಅಧಿಕಾರಿಗಳು ಆತನ ವಿರುದ್ಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈಗ ಆ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವುದರಿಂದ 14 ದಿನಗಳ ಬಳಿಕ ಆತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

  • ಸೋಂಕು ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿಯೇ ಕೊರೊನಾಗೆ ಬಲಿ

    ಸೋಂಕು ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿಯೇ ಕೊರೊನಾಗೆ ಬಲಿ

    ಶಿವಮೊಗ್ಗ: ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿಯೇ ಕೊರೊನಾಗೆ ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

    ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೊಪ್ಪ ನಿವಾಸಿಯಾದ ಶರಣ್ (36) ಮೃತ ದುರ್ದೈವಿ. ಶಿವಮೊಗ್ಗದಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಶರಣ್ ಕೊರೊನಾ ಬಂದ ದಿನದಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಪೊಲೀಸರು, ಪತ್ರಕರ್ತರು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಎನ್ 95 ಮಾಸ್ಕ್, ಸ್ಯಾನಿಟೈಸರ್ ಉಚಿತವಾಗಿ ಹಂಚುವ ಮೂಲಕ ತನ್ನ ಕೈಲಾದ ಸಹಾಯ ಮಾಡುತ್ತಿದ್ದರು.

    ಕೊರೊನಾದಿಂದ ಪ್ರತಿಯೊಬ್ಬರು ದೂರ ಇರಿ. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಎಂದು ಮನವಿ ಮಾಡುತ್ತಿದ್ದರು. ಆದರೆ ಕಳೆದ 4 ದಿನದ ಹಿಂದೆ ಮೃತ ಶರಣ್‍ಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕು ಕಾಣಿಸಿಕೊಂಡ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಶರಣ್ ಸೋಂಕಿಗೆ ಬಲಿಯಾಗಿದ್ದಾರೆ. ಇದನ್ನು ಓದಿ: ಕೋವಿಡ್ ಬಂದ್ರೂ ಜಯಿಸುತ್ತೇನೆಂದು, ವ್ಯಾಕ್ಸಿನ್ ತೆಗೆದುಕೊಳ್ಳಲು ಅಸಡ್ಡೆ- ಸರ್ಕಾರಿ ವೈದ್ಯ ಕೊರೊನಾಗೆ ಬಲಿ

    ಶರಣ್ ಪತ್ನಿ ಸಹ ಕಳೆದ ಎರಡು ವರ್ಷದ ಹಿಂದೆ ಮೃತಪಟ್ಟಿದ್ದರು. ಪತ್ನಿ ಮೃತಪಟ್ಟ ಬಳಿಕ ತನ್ನ ಪುಟ್ಟ ಮಗಳೊಂದಿಗೆ ನೋವನ್ನು ಮರೆತು ಜೀವನ ಸಾಗಿಸುತ್ತಿದ್ದರು. ಆದರೆ ಇದೀಗ ಕೊರೊನಾ ಶರಣ್‍ನನ್ನು ಬಲಿ ತೆಗೆದುಕೊಂಡಿದೆ. ಇದೀಗ ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡು ಮೂರು ವರ್ಷದ ಹೆಣ್ಣು ಮಗು ಅನಾಥವಾಗಿದೆ.

  • ಕೊರೊನಾ ಬರಬಾರದೆಂದು ಮಂಡ್ಯದಲ್ಲಿ ಕುರಿ, ಕೋಳಿ ಬಲಿ

    ಕೊರೊನಾ ಬರಬಾರದೆಂದು ಮಂಡ್ಯದಲ್ಲಿ ಕುರಿ, ಕೋಳಿ ಬಲಿ

    ಮಂಡ್ಯ: ನಮ್ಮೂರಿಗೆ ಕೊರೊನಾ ಮಹಾಮಾರಿ ಬರಬಾರದು ಎಂದು ಊರಿನ ಗ್ರಾಮಸ್ಥರು ಗ್ರಾಮದಲ್ಲಿ ಕೋಳಿ ಹಾಗೂ ಕುರಿಯನ್ನು ಬಲಿ ಕೊಟ್ಟು ಪೂಜೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ರಾಮಂದೂರು ಗ್ರಾಮದಲ್ಲಿ ಜರುಗಿದೆ.

    ಸದ್ಯ ರಾಮಂದೂರು ಗ್ರಾಮದಲ್ಲಿ ಮೂರು ಕೊರೊನಾ ಕೇಸ್‍ಗಳಿದ್ದು, ಮುಂದಿನ ದಿನಗಳಲ್ಲಿ ನಮ್ಮೂರಿನಲ್ಲಿ ಕೊರೊನಾ ಹೆಚ್ಚಬಾರದು ಎಂದು, ಊರಿನ ಗ್ರಾಮಸ್ಥರು ಬಲಿ ಹಾಗೂ ಪೂಜೆಯನ್ನು ಮಾಡಿದ್ದಾರೆ.

    ಊರಿನ ಹೊರ ವಲಯದ ನಾಲ್ಕು ಕಡೆ ಬೇವಿನ ಸೊಪ್ಪು ಹಾಗೂ ಹೊಂಗೆ ಸೊಪ್ಪಿನಲ್ಲಿ ಚಪ್ಪರ ಹಾಕಿ ಅದರ ಒಳಗೆ ಕಲ್ಲನ್ನು ಇಟ್ಟು ಕೊರೊನಾ ಮಾರಿಯಮ್ಮ ಎಂದು ಪೂಜೆ ಮಾಡಿದ್ದಾರೆ. ನಂತರ ಕೋಳಿ ಹಾಗೂ ಕುರಿಯನ್ನು ಬಲಿ ಕೊಟ್ಟಿದ್ದಾರೆ. ಈ ಮೂಲಕ ನಮ್ಮೂರಿಗೆ ಕೊರೊನಾ ಮಾರಿ ಹೆಚ್ಚಾಗಬಾರದು ಎಂದು ಪ್ರಾರ್ಥನೆ ಮಾಡಿದ್ದಾರೆ.

  • ಕೊರೊನಾ ಬಾರದಂತೆ ಸ್ವಾಮೀಜಿಯಿಂದ ಬೆತ್ತ ಪೂಜೆ – ಮಧ್ಯರಾತ್ರಿ ಗ್ರಾಮದಲ್ಲಿ ನಡೆಯುತ್ತೆ ದಿಗ್ಬಂಧನ ಪೂಜೆ

    ಕೊರೊನಾ ಬಾರದಂತೆ ಸ್ವಾಮೀಜಿಯಿಂದ ಬೆತ್ತ ಪೂಜೆ – ಮಧ್ಯರಾತ್ರಿ ಗ್ರಾಮದಲ್ಲಿ ನಡೆಯುತ್ತೆ ದಿಗ್ಬಂಧನ ಪೂಜೆ

    ಹುಬ್ಬಳ್ಳಿ: ಕೊರೊನಾ ಬಾರದಂತೆ ಇಲ್ಲೊಂದು ಗ್ರಾಮದಲ್ಲಿ ಸ್ವಾಮೀಜಿಯಿಂದ ದಿಗ್ಬಂದನ ಪೂಜೆ ನಡೆಯುತ್ತಿದೆ. ರಾತ್ರಿ 10 ರಿಂದ 11 ರವರೆಗೆ ಪೂಜೆ ನಡೆಯುತ್ತಿದ್ದು, ಬಳಿಕ ಸ್ವಾಮೀಜಿ ಬೆತ್ತ ಹಿಡಿದು ಗ್ರಾಮದ ಸುತ್ತಲೂ ಓಂ ನಮಃ ಶಿವಾಯ ನಾಮ ಸ್ಮರಣೆಯೊಂದಿಗೆ ಸುತ್ತಾಡಿ ದಿಗ್ಬಂಧನ ಮಾಡುತ್ತಿದ್ದಾರೆ.

    ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪುರದಲ್ಲಿ ಕಳೆದ ಮೂರು ದಿನಗಳಿಂದ ದಿಗ್ಬಂಧನ ಪೂಜೆ ನಡೆಯುತ್ತಿದೆ. ಇಬ್ರಾಹಿಂಪುರದಲ್ಲಿ ಬೂದಿಸ್ವಾಮಿ ಹಾಗೂ ರುದ್ರಮುನಿ ಸ್ವಾಮಿ ಎಂಬ ಎರಡು ಮಠಗಳಿವೆ. ಇವುಗಳಲ್ಲಿ ಶಿವಯೋಗಿ ಹಿರೇಮಠ ಸ್ವಾಮೀಜಿ ಪೂಜೆ ಸಲ್ಲಿಸುತ್ತಿದ್ದಾರೆ. ಮಠದ ಗರ್ಭಗುಡಿಯಲ್ಲಿ ರಾತ್ರಿ ವೇಳೆ ಬೆತ್ತಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಅದನ್ನು ಹಿಡಿದು ಶಿವಯೋಗಿ ಸ್ವಾಮೀಜಿ, `ಓಂ ನಮಃ ಶಿವಾಯ’ ಎಂದು ನಾಮ ಸ್ಮರಣೆ ಮಾಡುತ್ತಾ ಊರೆಲ್ಲ ಸುತ್ತು ಹಾಕುತ್ತಾರೆ.

    ಹೀಗೆ ಸುತ್ತು ಹಾಕುವುದರಿಂದ ಊರಲ್ಲಿ ಕೊರೊನಾ ಬಾರದಂತೆ ದಿಗ್ಬಂಧನ ಹಾಕಿದಂತೆ. ಇದರಿಂದ ಕೊರೊನಾ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳು ನಮ್ಮೂರಿನತ್ತ ಹಾಯುವುದಿಲ್ಲ ಎಂಬ ನಂಬಿಕೆ ಗ್ರಾಮಸ್ಥರು ಮತ್ತು ಶ್ರೀಗಳದ್ದಾಗಿದೆ. 5 ದಿನಗಳ ದಿಗ್ಬಂಧನ ಪೂಜೆಯಿದಾಗಿದ್ದು, ಈಗಾಗಲೇ ಮೂರು ದಿನಗಳ ಪೂಜೆ ಮುಗಿದಿದೆ. ಇನ್ನೆರಡು ದಿನ ಪೂಜೆ ಮಾಡುವುದು ಬಾಕಿಯಿದ್ದು, ಗುರುವಾರ ಮುಕ್ತಾಯವಾಗುತ್ತದೆ. ಕಳೆದ ವರ್ಷ ಕೊರೊನಾ ಮೊದಲ ಅಲೆಯ ವೇಳೆಯಲ್ಲೂ ಈ ರೀತಿ ಪೂಜೆ ಮಾಡಿ ದಿಗ್ಬಂಧನ ಹಾಕಲಾಗಿತ್ತು. ಆಗ ಹಾವಳಿ ಕಡಿಮೆಯಾಗಿತ್ತು ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮೊದಲು ಇತ್ತು: ದಶಕಗಳ ಹಿಂದೆ ಬೂದಿಸ್ವಾಮಿ ಹಾಗೂ ರುದ್ರಮುನಿ ಸ್ವಾಮಿ ಎಂಬ ಇಬ್ಬರು ಈ ಊರಲ್ಲಿ ತಪಸ್ಸು ಮಾಡಿ ನೆಲೆ ನಿಂತಿದ್ದರಂತೆ. ಆಗ ಊರೆಲ್ಲೆಲ್ಲ ಪ್ಲೇಗ್ ಹಾವಳಿ ಇತ್ತು ಎನ್ನಲಾಗುತ್ತಿದ್ದು, ಇಬ್ರಾಹಿಂಪುರದಲ್ಲಿ ಈ ಮಹಾಮಾರಿ ಕಾಲಿಡಬಾರದೆಂದು ಈ ರೀತಿ ದಿಗ್ಬಂಧನ ಪೂಜೆ ಪ್ರತಿವರ್ಷ ಮಾಡುತ್ತಿದ್ದರಂತೆ. ಇದೀಗ ಕೊರೊನಾ ಹಾವಳಿ ಮಿತಿಮೀರಿದೆ. ಜೊತೆಗೆ ಕಳೆದ ವಾರ ಈ ಗ್ರಾಮದಲ್ಲಿ ಒಂದೇ ದಿನ ಏಳು ಜನರು ಸಾವಿಗೀಡಾಗಿದ್ದಾರೆ. (ಇಬ್ಬರು ಕೊರೊನಾದಿಂದ ಮೃತಪಟ್ಟರೆ, ಇನ್ನುಳಿದ ಐವರು ಅನ್ಯ ಕಾರಣಗಳಿಂದ ಮೃತಪಟ್ಟಿದ್ದಾರೆ) ಈ ಕಾರಣದಿಂದ ಗ್ರಾಮಸ್ಥರೆಲ್ಲರೂ ಚರ್ಚಿಸಿ, ಹಿಂದೆ ಹಿರಿಯ ಸ್ವಾಮೀಜಿಗಳು ಮಾಡಿದಂತೆ ದಿಗ್ಬಂಧನ ಪೂಜೆ ಮಾಡಲು ನಿರ್ಧರಿಸಿ, ಈಗಿನ ಸ್ವಾಮೀಜಿ ಶಿವಯೋಗಿ ಹಿರೇಮಠರವರಿಗೆ ಹೇಳಿ ಅವರಿಂದ ಪೂಜೆ ಮಾಡಿಸುತ್ತಿದ್ದಾರೆ.

    ಒಟ್ಟಿನಲ್ಲಿ ಇಬ್ರಾಹಿಂಪುರದಲ್ಲಿ ದಿಗ್ಬಂಧನ ಪೂಜೆ ಮಾಡುತ್ತಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ. ಈ ಪೂಜೆಯಲ್ಲಿ ಗ್ರಾಮದ ಶಿವಾನಂದ ಮಠದ ಶ್ರೀ ದಯಾನಂದ ಸ್ವಾಮಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಚಿಪ್ಪಾಡಿ, ಹೇಮಣ್ಣ ಬಡಿಗೇರ ಸೇರಿದಂತೆ ಮತ್ತಿತರ ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಗ್ರಾಮಸ್ಥರು ಹೇಳುವುತ್ತಿರುವುದೇನು?
    ಗ್ರಾಮದಲ್ಲಿ ಒಂದೇ ದಿನಕ್ಕೆ 7 ಜನ ಮೃತಪಟ್ಟಿದ್ದಾರೆ. ಇದರಿಂದ ದೊಡ್ಡ ಆಘಾತವೇ ಉಂಟಾಗಿತ್ತು. ಈ ಹಿಂದೆ ಪ್ಲೇಗ್ ಬಂದಾಗ ಮಾಡುತ್ತಿದ್ದ ದಿಗ್ಬಂಧನ ಪೂಜೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ಮಾಡಲು ನಿರ್ಧರಿಸಿ ಶ್ರೀಗಳ ಸನ್ನಿಧಾನದಲ್ಲಿ ಕೋರಿದೆವು. ಕೊರೊನಾ ಸೇರಿ ಯಾವುದೇ ರೋಗ ಗ್ರಾಮಕ್ಕೆ ಬರಬಾರದೆಂಬ ಉದ್ದೇಶದಿಂದ ನಿರ್ಣಯ ತೆಗೆದುಕೊಂಡಿದ್ದೇವೆ. ಇದರಿಂದ ಗ್ರಾಮಕ್ಕೆ ಒಳ್ಳೆಯದೇ ಆಗುತ್ತದೆ ಎಂದು ಗ್ರಾಮದ ಹಿರಿಯರು ಅಂತಿದ್ದಾರೆ.

  • ಒಂದೇ ದಿನ ಕೆಲವೇ ಗಂಟೆಗಳ ಅಂತರದಲ್ಲಿ ತಾಯಿ, ಮಗ ಸಾವು

    ಒಂದೇ ದಿನ ಕೆಲವೇ ಗಂಟೆಗಳ ಅಂತರದಲ್ಲಿ ತಾಯಿ, ಮಗ ಸಾವು

    – ಮತ್ತೊಂದು ಪ್ರಕರಣದಲ್ಲಿ ಮಗಳ ಹುಟ್ಟು ಹಬ್ಬ ಸಂಭ್ರಮದ ದಿನವೇ ತಂದೆ ಸಾವು

    ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾದ ಕರಾಳತೆ ಮುಂದುವರಿದಿದೆ. ಶಿವಮೊಗ್ಗ ನಗರದ ಬಸವನಗುಡಿ ಬಡಾವಣೆಯಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ಮಗ ಕೊರೊನಾ ಮಹಾಮಾರಿಗೆ ಬಲಿಯಾದರೆ, ತಾಯಿ ಮಗ ಸೋಂಕಿಗೆ ಒಳಪಟ್ಟ ಕೊರಗಿನಲ್ಲಿಯೇ ಅಸುನೀಗಿದ್ದಾರೆ.

    ಬಸವನಗುಡಿ ಬಡಾವಣೆ ನಿವಾಸಿ, ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ, ಸುರೇಶ್ ಕಳೆದ 8 ದಿನಗಳಿಂದ ಕೊರೊನಾ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡಿತಾದರೂ, ಸೋಮವಾರ ಮಧ್ಯಾಹ್ನದ ಹೊತ್ತಿಗೆ ಸ್ಥಿತಿ ಗಂಭೀರವಾಗತೊಡಗಿತು. ವೈದ್ಯರು ಈ ವಿಚಾರವನ್ನು ಸುರೇಶ್ ಅವರ ಮನೆಯವರಿಗೆ ತಿಳಿಸಿದ್ದಾರೆ.

    ಸುರೇಶ್ ಸ್ಥಿತಿ ಗಂಭೀರವಾಗಿರುವ ವಿಚಾರ ತಿಳಿದು ತಾಯಿ ಗೌರಮ್ಮ ಆಘಾತಕ್ಕೆ ಒಳಗಾಗಿದ್ದರು. ಸಂಜೆ ಆರು ಗಂಟೆ ಹೊತ್ತಿಗೆ ಗೌರಮ್ಮ ತಮ್ಮ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ಈ ವಿಷಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುತ್ರ ಸುರೇಶ್‍ಗೆ ಗೊತ್ತೆ ಇರಲಿಲ್ಲ. ಆದರೆ ತಾಯಿ ಮೃತಪಟ್ಟ ಐದು ಗಂಟೆ ಕಳೆಯುವುದರಲ್ಲಿ ಸುರೇಶ್‍ರವರು ಕೊರೊನಾಗೆ ಬಲಿಯಾಗಿದ್ದಾರೆ.

    ಸುರೇಶ್ ಅವರಿಗೆ ಪತ್ನಿ ಹಾಗೂ ಏಳನೇ ತರಗತಿ ಮತ್ತು ನಾಲ್ಕನೇ ತರಗತಿ ಓದುತ್ತಿರುವ ಇಬ್ಬರು ಪುತ್ರಿಯರಿದ್ದಾರೆ.

    ಮಗಳ ಹುಟ್ಟುಹಬ್ಬದಂದೆ ಅಪ್ಪ ಸಾವು: ಮತ್ತೊಂದು ಪ್ರಕರಣದಲ್ಲಿ ಮಗಳ ಹುಟ್ಟುಹಬ್ಬದ ದಿನವೇ ತಂದೆ ಕೊರೊನಾಗೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದಲ್ಲಿ ಯುವರಾಜ್ (43) ಕೊರೊನಾಗೆ ತುತ್ತಾಗಿದ್ದರು. ವಾರದ ಹಿಂದೆ ಯುವರಾಜ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಸೋಮವಾರ ಮೃತರಾಗಿದ್ದಾರೆ. ಅವರ ಮಗಳು ಶಾಂಭವಿ ಹುಟ್ಟುಹಬ್ಬದ ದಿನವೇ ಕೊನೆಯುಸಿರೆಳೆದಿದ್ದಾರೆ. ಒಂದು ವಾರದ ಹಿಂದೆಯಷ್ಟೇ ಯುವರಾಜ್ ಅವರ ತಾಯಿ ಸಹ ಮೃತಪಟ್ಟಿದ್ದರು.

  • ಕೊರೊನಾ ಸೋಂಕಿಗೆ ಯುವಕ ಬಲಿ

    ಕೊರೊನಾ ಸೋಂಕಿಗೆ ಯುವಕ ಬಲಿ

    ಕೊಪ್ಪಳ: ಕೊರೊನಾದ ಎರಡನೇ ಅಲೆಯಲ್ಲಿ ಹೆಚ್ಚಾಗಿ ಯುವಕ ಯುವತಿಯರು ಸಾವನ್ನಪ್ಪುತ್ತಿದ್ದು, ಸದ್ಯ ಕೊಪ್ಪಳ ಜಿಲ್ಲೆಯಲ್ಲಿ ಯುವಕನೋರ್ವ ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಅರಳಹಳ್ಳಿ ರಾಜರಾಜೇಶ್ವರಿ ಬ್ರಹನ್ಮಠದ ಸ್ವಾಮೀಜಿಯಾದ ಶ್ರೀ ಗವಿಸಿದ್ದೇಶ್ವರ ತಾತನವರ ದ್ವಿತೀಯ ಸುಪುತ್ರ ಪ್ರಸಾದ್ (19)  ಮೃತ ಯುವಕ.

    ಕಳೆದ 10 ದಿನಗಳ ಹಿಂದೆ ಯುವಕನಿಗೆ ಸೊಂಕು ಕಾಣಿಸಿಕೊಂಡಿದ್ದು, ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದನು, ಚಿಕಿತ್ಸೆ ಫಲಕಾರಿಯಾಗದೆ ತೀವ್ರ ಉಸಿರಾಟದ ತೊಂದರೆಯಿಂದ ಪ್ರಸಾದ್ ಇಂದು ಕೊನೆಯುಸಿರೆಳೆದಿದ್ದಾನೆ. ಬಾಳಿ-ಬದುಕಬೇಕಾದ ಯುವಕ ಕೊರೊನಾಗೆ ಬಲಿಯಾಗಿದ್ದು, ಕುಟುಂಬದ ಅಕ್ರಂದನ ಮುಗಿಲು ಮುಟ್ಟಿದೆ. ನಂತರ ಮಠದ ಜಮೀನಿನಲ್ಲಿ ಯುವಕನ ಅಂತ್ಯ ಸಂಸ್ಕಾರ ನಡೆಸಲಾಯಿತು.

  • ಕೊರೊನಾ ಶವ ಸಾಗಿಸಲು 12 ಸಾವಿರ ಬೇಡಿಕೆ – ಇನ್ನೂ ನಿಂತಿಲ್ಲ ಅಂಬುಲೆನ್ಸ್ ಮಾಫಿಯಾ

    ಕೊರೊನಾ ಶವ ಸಾಗಿಸಲು 12 ಸಾವಿರ ಬೇಡಿಕೆ – ಇನ್ನೂ ನಿಂತಿಲ್ಲ ಅಂಬುಲೆನ್ಸ್ ಮಾಫಿಯಾ

    ಕೋಲಾರ : ಕೊರೊನಾ ಸೊಂಕಿತರ ಸಾವಿಗಾಗಿಯೇ ಕಾಯುತ್ತಿರುವ ಖಾಸಗಿ ಅಂಬುಲೆನ್ಸ್ ಮಾಫಿಯಾ ದಂಧೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ.

    ಹಣ ಮಾಡುವ ದುರುದ್ದೇಶದಿಂದ ಮೃತಪಟ್ಟ ಸೊಂಕಿತರ ಶವ ಸಾಗಿಸಲು ಖಾಸಗಿ ಅಂಬುಲೆನ್ಸ್ ಮಾಲೀಕರು ಪೈಪೋಟಿ ನಡೆಸುತ್ತಿದ್ದಾರೆ. ಸರ್ಕಾರದ ನಿಯಮಗಳನ್ನು ಉಲ್ಲುಂಘಿಸಿ ಕೋವಿಡ್‍ನಿಂದ ಮೃತ್ತಪಟ್ಟ ವ್ಯಕ್ತಿ ಶವ ಸಾಗಿಸಲು ಕುಟುಂಬಸ್ಥರಿಂದ ಖಾಸಗಿ ಅಂಬುಲೆನ್ಸ್ ಮಾಲೀಕರು ದುಪ್ಪಟ್ಟು ಹಣ ಕೇಳುತ್ತಿದ್ದಾರೆ. ಕೋಲಾರದಿಂದ 25 ಕಿ.ಮೀಟರ್ ಇರುವ ಬಂಗಾರಪೇಟೆ ತಾಲೂಕಿನ ಬೂದಿಕೋಟೆಗೆ ಸೊಂಕಿತನ ಶವ ಸಾಗಿಸಲು ಅಂಬುಲೆನ್ಸ್ ಮಾಲೀಕ ಅಂಬರೀಶ್ ಎಂಬವನು 12 ಸಾವಿರಕ್ಕೆ ಬೇಡಿಕೆ ಇಟ್ಟಿರೆ, ಇದೇ ವೇಳೆ ಮತ್ತೊಬ್ಬ ಅಂಬುಲೆನ್ಸ್ ಮಾಲೀಕ ಮಹೇಶ್ 4 ಸಾವಿರಕ್ಕೆ ಶವ ಸಾಗಿಸಲು ಮುಂದಾಗಿದ್ದಾನೆ.

    ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಅಂಬರೀಶ್ ಶವ ಸಾಗಾಟವನ್ನೇ ಬಂಡವಾಳ ಮಾಡಿಕೊಂಡು ಹಗಲು ದರೋಡೆಗೆ ಇಳಿದಿದ್ದಾನೆಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಖಾಸಗಿ ಅಂಬುಲೆನ್ಸ್ ದರ ನಿಗದಿ ಮಾಡಿ ಆದೇಶ ಹೊರಡಿಸಿದರು ಕೂಡ ಆದೇಶಕ್ಕೆ ಕ್ಯಾರೆ ಎನ್ನುತ್ತಿಲ್ಲ. ಸ್ಥಳದಲ್ಲಿಯೇ ಪೊಲೀಸರು ಇದ್ದರು ಅಂಬರೀಷ್ ರಾಜಾರೋಷವಾಗಿ ಬಡ ಜನರ ಬಳಿ ಹಣ ವಸೂಲಿ ಮಾಡಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಿದ್ದಾನೆ.

    ಮೃತ ಕುಟುಂಬಸ್ಥರ ಮೇಲೆಯೂ ರೌಡಿಗಳಂತೆ ವರ್ತಿಸುತ್ತಿರುವ ಅಂಬರೀಷ್ ಹಾಗೂ ಸಹಚರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರೋಗಿಗಳು ಒತ್ತಾಯ ಮಾಡುತ್ತಿದ್ದಾರೆ. ಈ ಅಂಬರೀಶ್ ಕೇವಲ ಅಂಬುಲೆನ್ಸ್ ಸೇವೆ ಮಾತ್ರ ಅಲ್ಲ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯೊಂದಿಗೆ ಶಾಮಿಲಾಗಿ ಸಾವಿರಾರು ರೂಪಾಯಿ ಹಣ ಪಡೆದು ಬೆಡ್ ಕೊಡಿಸುವುದು, ರೆಮೆಡಿಸಿವರ್ ಇಂಜೆಕ್ಷನ್, ರಕ್ತ ಮಾರಾಟದ ದಂಧೆಯಲ್ಲೂ ಭಾಗಿಯಾಗಿದ್ದಾನೆಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಈತನ ವಿರುದ್ಧ ಜಿಲ್ಲಾಸ್ಪತ್ರೆ ವೈದ್ಯಧಿಕಾರಿಗಳು, ಪೊಲೀಸರು ಕಾನೂನು ಕ್ರಮ ಜರುಗಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.