Tag: ಪಬ್ಲಿಕ್ ಟಿವಿ chikodi

  • 2 ವರ್ಷದ ಗಂಡು ಮಗು ಕಿಡ್ನಾಪ್ ಮಾಡಿದ್ದ ಐವರು ಅರೆಸ್ಟ್

    2 ವರ್ಷದ ಗಂಡು ಮಗು ಕಿಡ್ನಾಪ್ ಮಾಡಿದ್ದ ಐವರು ಅರೆಸ್ಟ್

    ಚಿಕ್ಕೋಡಿ(ಬೆಳಗಾವಿ): ಎರಡು ವರ್ಷದ ಗಂಡು ಮಗುವನ್ನು ಕಿಡ್ನಾಪ್ ಮಾಡಿದ್ದ ಐವರನ್ನು ಬಂಧಿಸಲಾಗಿದೆ.

    ಬಂಧಿತರನ್ನು ಪ್ರಶಾಂತ್ ಬಡಕಂಬಿ, ಜ್ಯೋತಿಬಾ ಬಂಗಿ, ಅನಿಲ್ ಬಡಕಂಬಿ, ಜಂಬುಸಾಗರ ನಾಡಗೌಡ, ಕುಮಾರ್ ಹಿರೇಮನಿ ಎಂದು ಗುರುತಿಸಲಾಗಿದೆ. ಹುಸೇನವ್ವ ಬಹುರೂಪಿ ಎಂಬವರ ಎರಡು ವರ್ಷದ ಮಗ ಯಲ್ಲಪ್ಪ ಕಿಡ್ನಾಪ್ ಆಗಿದ್ದನು.

    ಈ ಐವರು ಫೆಬ್ರವರಿ 6 ರಂದು ಸಂಜೆ 4 ಗಂಟೆ ಸುಮಾರಿಗೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಜೋಪಡಿಪಟ್ಟಿಯಲ್ಲಿದ್ದ 2 ವರ್ಷದ ಮಗುವನ್ನು ಅಪಹರಿಸಿದ್ದರು. ಬೆಳಗಾವಿ ಎಸ್‍ಪಿ ಲಕ್ಷ್ಮಣ್ ನಿಂಬರಗಿ ಪ್ರಕರಣದ ತನಿಖೆಗಾಗಿ ಮೂರು ವಿಶೇಷ ತಂಡ ರಚಿಸಿದ್ದರು. ಇದೀಗ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದರು.

    ಗಂಡು ಮಗು ಇಲ್ಲದ್ದಕ್ಕೆ ಅನಾಥ ಆಶ್ರಮದಿಂದ ಮಗು ತಂದುಕೊಡುವಂತೆ ಆರೋಪಿಗಳ ಬಳಿ ಮಹಿಳೆಯೊಬ್ಬರು ಕೇಳಿದ್ದರು. ಮಹಿಳೆಯ ಬಳಿ ಆರೋಪಿಗಳು 4 ಲಕ್ಷಕ್ಕೆ ಬೇಡಿಕೆ ಇಟ್ಟು ಎರಡು ಲಕ್ಷಕ್ಕೆ ಡೀಲ್ ಫೈನಲ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎರಡು ವರ್ಷದ ಮಗು ಕಿಡ್ನಾಪ್ ಮಾಡಿ ಆರೋಪಿಗಳು ಮಹಿಳೆಗೆ ನೀಡಿದ್ದರು. ಇತ್ತ ಮಹಿಳೆಯ ಬಳಿ ಅನಾಥ ಆಶ್ರಮದಿಂದ ಕಾನೂನುಬದ್ಧವಾಗಿ ಮಗು ತಂದಿದ್ದಾಗಿ ಹೇಳಿ ನಂಬಿಸಿದ್ದಾರೆ. ಅಲ್ಲದೆ ಮಹಿಳೆಯಿಂದ ಎರಡು ಲಕ್ಷ ರೂ. ಹಣ ಪಡೆದು ಹಂಚಿಕೊಂಡಿದ್ದರು.

    ಸದ್ಯ ಆರೋಪಿಗಳ ಬಳಿಯಿಂದ 65 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಎರಡು ಕಾರು ಜಪ್ತಿ ಮಾಡಲಾಗಿದೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.