Tag: ಪಬ್ಲಿಕ್ ಟಿವಿ Cheetah

  • ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆ

    ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆ

    ಮಂಡ್ಯ: ಗ್ರಾಮದಲ್ಲಿ ನಿರಂತರವಾಗಿ ಹಸು, ಕರು ಹಾಗೂ ನಾಯಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ದಬ್ಬೇಘಟ್ಟ ಗ್ರಾಮದಲ್ಲಿ ಜರುಗಿದೆ.

    ದಬ್ಬೇಘಟ್ಟ ಗ್ರಾಮದ ಜಮೀನಿನಲ್ಲಿ ಹಲವು ತಿಂಗಳಿನಿಂದ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಇದಲ್ಲದೇ ಹಲವು ಹಸುವಿನ ಕರುಗಳು ಹಾಗೂ ನಾಯಿಗಳ ಮೇಲೆಯೂ ದಾಳಿ ನಡೆಸುತ್ತಿತ್ತು. ಒಮ್ಮೊಮ್ಮೆ ಚಿರತೆ ಗ್ರಾಮ ಸಮೀಪಕ್ಕೂ ಸಹ ಬರುತ್ತಿತ್ತು. ಹೀಗಾಗಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.

    ಗ್ರಾಮಸ್ಥರು ಅರಣ್ಯ ಇಲಾಖೆಗೆ ಚಿರತೆ ಸೆರೆ ಹಿಡಿಯುವಂತೆ ಪತ್ರಗಳನ್ನು ಬರೆದಿದ್ದರು. ಈ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಮೊದಲ ಹಂತದಲ್ಲಿ ಬೋನ್‍ನನ್ನು ಇಟ್ಟು ಕಾರ್ಯಾಚರಣೆಗೆ ಮುಂದಾಗಿದ್ದರು. ದಬ್ಬೇಘಟ್ಟದ ಜಮೀನು ಒಂದರಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೋನ್ ಇರಿಸಿದ್ದರು. ಇದೀಗ ಇಂದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಬೋನ್‍ಗೆ ಬಿದ್ದಿದ್ದು, ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಸೆರೆ ಸಿಕ್ಕ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ:ಮೇಕೆದಾಟು ಯೋಜನೆಯಲ್ಲಿ ರಾಜಿ ಇಲ್ಲ, ನಮ್ಮ ಪಾಲಿನ ನೆಲ, ಜಲ ಕಬಳಿಸಲು ಪ್ರಯತ್ನ ಮಾಡಿದ್ರೆ ಸರ್ಕಾರ ಬಗ್ಗಲ್ಲ: ಗೋವಿಂದ್ ಕಾರಜೋಳ

  • ಕಾಪು ಜನರಿಗೆ ಆತಂಕ ಹುಟ್ಟಿಸಿದ್ದ ಚಿರತೆ ಸೆರೆ

    ಕಾಪು ಜನರಿಗೆ ಆತಂಕ ಹುಟ್ಟಿಸಿದ್ದ ಚಿರತೆ ಸೆರೆ

    ಉಡುಪಿ: ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ಸಂದರ್ಭದಲ್ಲಿ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿರುವುದು ಜಾಸ್ತಿಯಾಗುತ್ತಿದೆ.

    ಜಿಲ್ಲೆಯ ಕಾಪು ತಾಲೂಕಿನಲ್ಲಿ ಹಲವಾರು ದಿನಗಳಿಂದ ಆತಂಕ ಹುಟ್ಟಿಸಿದ ಚಿರತೆಯೊಂದು ಬೋನಿಗೆ ಬಿದ್ದಿದೆ. ಕಾಪು ತಾಲೂಕಿನಲ್ಲಿ ಜನವಸತಿ ಪ್ರದೇಶದಲ್ಲಿ ಜನರಿಗೆ ಭಯ ಹುಟ್ಟಿಸುತ್ತಿದ್ದ ಚಿರತೆಯೊಂದು ಭಾನುವಾರ ತಡರಾತ್ರಿ ಬೋನಿಗೆ ಬಿದ್ದಿದೆ.

    ಕಾಪು ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಕುರಾಲು ಬಳಿ ಚಿರತೆ ಜನರಿಗೆ ಕಾಟ ನೀಡುತ್ತಿತ್ತು. ಕುರಾಲ್ ರೆನ್ನಿ ಕುಂದರ್ ಎಂಬವರ ಮನೆ ಬಳಿ ಚಿರತೆಯ ಓಡಾಟದ ಬಗ್ಗೆ ಮಾಹಿತಿ ಪಡೆದು ಅರಣ್ಯ ಇಲಾಖೆ ಬೋನನ್ನು ಇರಿಸಿತ್ತು.

    ಕಳೆದ ರಾತ್ರಿ ನಾಲ್ಕು ವರ್ಷದ ಗಂಡು ಚಿರತೆ ಬೋನಿಗೆ ಬೀಳುವ ಮೂಲಕ ಜನರು ನಿಟ್ಟುಸಿರುವ ಬಿಡುವಂತಾಗಿದೆ. ಕಾರ್ಯಾಚರಣೆಯಲ್ಲಿ ಆರ್.ಎಫ್.ಒ ಜೀವನ್ ದಾಸ್ ಶೆಟ್ಟಿ, ಆರ್.ಎಫ್.ಒ ಗುರುಪ್ರಸಾದ್, ಫಾರೆಸ್ಟ್ ಗಾರ್ಡ್ ಎಚ್ ಜಯರಾಮ್ ಶೆಟ್ಟಿ ಮತ್ತಿತರು ಭಾಗಿಯಾಗಿದ್ದರು. ಹಲವಾರು ಭಾಗಗಳಲ್ಲಿ ಬೋನ್ ಗಳನ್ನು ಇಡಲಾಗಿತ್ತು.