Tag: ಪಬ್ಲಿಕ್ ಟಿವಿ Chamarajanagar

  • ನಮ್ಮ ಹುಲಿ ಯಾವತ್ತು ಹುಲಿಯೇ: ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಧ್ರುವ ನಾರಾಯಣ್

    ನಮ್ಮ ಹುಲಿ ಯಾವತ್ತು ಹುಲಿಯೇ: ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಧ್ರುವ ನಾರಾಯಣ್

    ಚಾಮರಾಜನಗರ: ನಮ್ಮ ಹುಲಿ ಯಾವತ್ತು ಹುಲಿಯೇ, ಸಿದ್ದರಾಮಯ್ಯ ಎಂದಿಗೂ ಹುಲಿಯೇ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ತಿರುಗೇಟು ನೀಡಿದ್ದಾರೆ.

    ಇಂದು ಚಾಮರಾಜನಗರದಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೂ ಮೈಸೂರು ಇತಿಹಾಸದಲ್ಲಿಯೇ ಬಿಜೆಪಿಯವರು ಮೇಯರ್ ಆಗಿಲ್ಲ. ನಮ್ಮ ಹುಲಿ ಯಾವತ್ತು ಹುಲಿಯೇ. ಸಿದ್ದರಾಮಯ್ಯ ಎಂದಿಗೂ ಹುಲಿಯೇ. ಪ್ರತಾಪ್ ಸಿಂಹರವರದ್ದು ಹತಾಶೆ ಹೇಳಿಕೆ ಅಷ್ಟೇ ಎಂದು ಹೇಳಿದರು.

    ನನ್ನನ್ನು ಮೇಯರ್ ಚುನಾವಣಾ ವೀಕ್ಷಕರಾಗಿ ನೇಮಿಸಲು ಕಾರಣ ಸಿದ್ದರಾಮಯ್ಯನವರು, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿದ್ದರಾಮಯ್ಯ ಆದೇಶದಂತೆ ವೀಕ್ಷಕರಾಗಿ ಕೆಲಸ ಮಾಡಿದ್ದೇವೆ. ಘಟನಾವಳಿ ನಡೆದಿದ್ದು ಆಕಸ್ಮಿಕ. ಜೆಡಿಎಸ್ ಬೆಂಬಲಿಸಲು ಆ ಸಮಯ ಸಂದರ್ಭದಲ್ಲಿ ಕಾರ್ಪೊರೇಟರ್ ಕೈಗೊಂಡ ನಿರ್ಧಾರವಾಗಿದೆ. ಈಗಾಗಲೇ ಘಟನೆ ಕುರಿತಂತೆ ಸಿದ್ದರಾಮಯ್ಯನವರ ಜೊತೆ ಕೂಡ ನಾನು ಮಾತಾನಾಡಿದ್ದೇನೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ವರದಿ ಕೇಳಿದ್ದಾರೆ. ಸೋಮವಾರ ಮೇಯರ್ ಚುನಾವಣೆ ಘಟನಾವಳಿ ಕುರಿತು ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

    ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಒಡಕು ಮೂಡಿರುವ ವಿಚಾರವಾಗಿ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮದು ದೊಡ್ಡ ಕುಟುಂಬ, ಎಲ್ಲರೂ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ. ಹಾಗೇನಾದರೂ ಇದ್ದಲ್ಲಿ ಇಂದು ಸಂಜೆ ಎರಡು ಬಣಗಳನ್ನು ಸೇರಿಸಿ ಒಂದು ಮಾಡುತ್ತೇವೆ ಭಿನ್ನಾಭಿಪ್ರಾಯ ಇದ್ದರೆ ಬಗ್ಗೆಹರಿಸುತ್ತೇನೆ. ಅಲ್ಲದೆ ಮೇಯರ್ ಚುನಾವಣೆ ಸಂಬಂಧ ಯಾರಿಗೂ ಕೂಡ ನೋಟಿಸ್ ಕೊಟ್ಟಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಿದ್ದು ತಪ್ಪು. ಪಕ್ಷದ ಆಂತರಿಕ ಸಮಸ್ಯೆ, ಪಕ್ಷದ ವೇದಿಕೆಯಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದರು.

    ಮೊದಲಿನಿಂದಲೂ ವಚನಭ್ರಷ್ಟತೆಗೆ ಹೆಸರಾದವರು, ಕೊಟ್ಟ ಮಾತಿಗೆ ಎಂದು ನಡೆದಿಲ್ಲ. ಪಾಲಿಕೆ ಚುನಾವಣೆ ಒಡಂಬಡಿಕೆಯಂತೆ ನಡೆದುಕೊಂಡಿಲ್ಲ. ಈ ಬಾರಿ ಕಾಂಗ್ರೆಸ್ ಗೆ ಮೇಯರ್ ಸ್ಥಾನ ಸಿಗಬೇಕಿತ್ತು. ಜೆಡಿಎಸ್ ಗೆ ಮೇಯರ್ ಸ್ಥಾನ ಬಿಟ್ಟುಕೊಡದಂತೆ ಸಿದ್ದರಾಮಯ್ಯನವರು ಎರಡು ಬಾರಿ ದೂರವಾಣಿ ಕರೆ ಮಾಡಿ ಕೂಡ ಹೇಳಿದ್ದರು. ಡಿಕೆಶಿ ಸಹ ಮೇಯರ್ ಸ್ಥಾನ ಉಳಿಸಿಕೊಳ್ಳುವಂತೆ ತಿಳಿಸಿದ್ದರು. ಹೀಗಾಗಿ ಚುನಾವಣೆ ವೇಳೆ 12 ಗಂಟೆಯವರೆಗೂ ಮಾಜಿ ಶಾಸಕ ವಾಸು, ಸೋಮಶೇಖರ್ ಹೀಗೆ ಎಲ್ಲರೂ ಒಟ್ಟಿಗೆ ಕುಳಿತಿದ್ದೇವು. ಆದರೆ ಚುನಾವಣೆ ಪ್ರಕ್ರಿಯೆಗೆ ಕಾರ್ಪೊರೇಟರ್ ಹೋದ ಬಳಿಕ ಅವರ ನಿರ್ಧಾರ ಬದಲಾಗಿದೆ. ಪಾಲಿಕೆಯಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಸವಿವರ ಪಡೆದು ಸೋಮವಾರ ಅಧ್ಯಕ್ಷರ ಕೈಗೆ ವರದಿ ಸಲ್ಲಿಸುತ್ತೇನೆ ಎಂದು ಹೇಳಿದರು.

  • ಪತಿ ಜಗಳ ಬಿಡಿಸಲು ಹೋದ ಮಹಿಳೆಗೆ ಗರ್ಭಪಾತ

    ಪತಿ ಜಗಳ ಬಿಡಿಸಲು ಹೋದ ಮಹಿಳೆಗೆ ಗರ್ಭಪಾತ

    ಚಾಮರಾಜನಗರ: ಪತಿಯ ಮೇಲೆ ನಡೆಸುತ್ತಿದ್ದ ಜಗಳ ಬಿಡಿಸಲು ಹೋದ ಮಹಿಳೆ ಹಲ್ಲೆಗೊಳಗಾಗಿ ಮಹಿಳೆಯೆ ಗರ್ಭಪಾತ ಆಗಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೋಕು ಉತ್ತಂಬಳ್ಳಿಯಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಮಹಿಳೆಯನ್ನು ಮಾದೇವಿ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಮಹಿಳೆ ಗಂಡ ಸೋಮು ಎಂಬಾತನ ಮೇಲೆ ಮಾದೇಶ್ ಹಾಗೂ ಇತರ ಸ್ನೇಹಿತರು ಜಗಳ ಮಾಡಿದ್ದಾರೆ. ಈ ವೇಳೆ ಪತಿಯನ್ನು ಜಗಳದಿಂದ ಬಿಡಿಸಲು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಾದೇವಿ ಮುಂದಾಗಿದ್ದಾರೆ.

    ಜಗಳ ನಡೆಯುತ್ತಿದ್ದ ಸಮಯದಲ್ಲಿ ಮಾದೇವಿ ಅಡ್ಡ ಬಂದಿದ್ದಕ್ಕೆ ಕೋಪಗೊಂಡ ಮಾದೇಶ್ ಮಹಿಳೆ ಹೊಟ್ಟೆಗೆ ಕಾಲಿನಿಂದ ಜೋರಾಗಿ ಒದ್ದಿದ್ದಾನೆ. ಒದೆತದಿಂದ ಮಾದೇವಿ ಗಂಭೀರವಾಗಿ ಗಾಯಗೊಂಡಿದ್ದು, ಇದೀಗ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಘಟನೆ ಕುರಿತಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿ ಮಾದೇಶ ಹಾಗು ಸ್ನೇಹಿತರಾದ ಶಿವಣ್ಣ, ಗೋವಿಂದ ಎಂಬಾವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಗಂಡ ವಾಪಸ್ ಬರಲೆಂದು ಮಹಿಳೆಯರಿಂದ ದೇವರಿಗೆ ಪತ್ರ

    ಗಂಡ ವಾಪಸ್ ಬರಲೆಂದು ಮಹಿಳೆಯರಿಂದ ದೇವರಿಗೆ ಪತ್ರ

    ಚಾಮರಾಜನಗರ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯರಿಬ್ಬರು ದೇವರಿಗೆ ಪತ್ರ ಬರೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ.

    ಈ ಪತ್ರಗಳು ನಾರಾಯಣಸ್ವಾಮಿ ದೇವಾಲಯದ ಹುಂಡಿ ಎಣಿಕೆ ವೇಳೆ ಪತ್ತೆಯಾಗಿದೆ. ಪತ್ರದಲ್ಲಿ ಮಹಿಳೆಯರು ತಮ್ಮನ್ನು ಬಿಟ್ಟು ಹೋಗಿರುವ ಗಂಡಂದಿರು ಮನೆಗೆ ವಾಪಸ್ ಬರಬೇಕು. ನಾವು ಹೇಳಿದಂತೆ ಕೇಳಬೇಕು ಎಂಬ ಒಕ್ಕಣೆಯುಳ್ಳ ಎರಡು ಪತ್ರಗಳನ್ನು ಹುಂಡಿಗೆ ಹಾಕಿದ್ದಾರೆ.

    ಪತ್ರದಲ್ಲಿ, ನನ್ನ ಗಂಡ ಜಗಳವಾಡಿಕೊಂಡು ನನ್ನನ್ನು ಬಿಟ್ಟು ಹೋಗಿದ್ದಾನೆ. ಅವನಿಗೆ ಒಳ್ಳೆ ಬುದ್ಧಿ ಕೊಟ್ಟು ನನ್ನ ಜೊತೆ ಸಂಸಾರ ಮಾಡಲು ಕಳುಹಿಸು. ನಾನು ಹೇಳಿದಂತೆ ನನ್ನ ಗಂಡ ಕೇಳಬೇಕು. ಇಲ್ಲದಿದ್ದರೆ ಅದಕ್ಕೆ ನೀನೆ ಹೊಣೆ ಎಂದು ಸಹ ಪತ್ರಗಳಲ್ಲಿ ಬರೆಯಲಾಗಿದೆ.

    ಸಂಸಾರದ ಕಲಹ ನಿವಾರಿಸುವಂತೆ ಪತ್ರದ ಮೂಲಕ ದೇವರ ಮೊರೆ ಹೋಗಿರುವ ಮಹಿಳೆಯರು ಪತ್ರದಲ್ಲಿ ತಮ್ಮ ಹೆಸರು ಮತ್ತು ವಿಳಾಸ ನಮೂದಿಸಿಲ್ಲ. ಸದ್ಯ ಈ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

  • ಮೋದಿ, ಶಾ ಹೃದಯ ಕಲ್ಲಾಗಿದೆ : ಸಾಹಿತಿ ದೇವನೂರ ಮಹಾದೇವ

    ಮೋದಿ, ಶಾ ಹೃದಯ ಕಲ್ಲಾಗಿದೆ : ಸಾಹಿತಿ ದೇವನೂರ ಮಹಾದೇವ

    ಚಾಮರಾಜನಗರ: ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೃದಯ ಕಲ್ಲಾಗಿದೆ ಎಂದು ಹಿರಿಯ ಸಾಹಿತಿ ದೇವನೂರು ಮಹದೇವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಚಾಮರಾಜನಗರದಲ್ಲಿ ರೈತ ನೇತಾರ ಪ್ರೊ. ಎಂ.ಡಿ ನಂಜುಂಡಸ್ವಾಮಿ 85 ನೇ ಜನ್ಮದಿನಾಚರಣೆ ಹಾಗೂ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಜಾಗೃತಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜನರಿಂದ ಆಯ್ಕೆಯಾದವರು ಇಂದು ಸರ್ಕಾರ ನಡೆಸುತ್ತಿಲ್ಲ. ಬಂಡವಾಳಶಾಹಿಗಳಿಂದ ನೇಮಕಗೊಂಡ ವಂಚಕ ರಾಜಕಾರಣಿಗಳು ಸರ್ಕಾರ ನಡೆಸುತ್ತಿದ್ದಾರೆ. ಕೃಷಿ ಕಾಯ್ದೆ ವಿರೋಧಿ ಹೋರಾಟದಲ್ಲಿ ನೂರಾರು ರೈತರು ಮೃತ ಪಟ್ಟಿದ್ದರೂ ಸಹ ಪ್ರಧಾನಿ ಮೋದಿ ಹಾಗು ಅಮಿತ್ ಶಾ ಅವರ ಹೃದಯ ಕಲ್ಲಾಗಿದೆ ಎಂದು ಕಿಡಿಕಾರಿದರು.

    ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ವಿಚಾರಧಾರೆಗಳು ಇಂದು ನಿಜವಾಗುತ್ತಿವೆ. ಅವರು ಬದುಕಿದ್ದರೆ ಇಂದು ಕಾನೂನು ಬಾಹಿರ ತಡೆ ಕಾಯ್ದೆಯನ್ವಯ ಜೈಲಿನಲ್ಲಿರುತ್ತಿದ್ದರು. ದೇಶ ದ್ರೋಹಿ ಎನಿಸಿಕೊಂಡು ಜೈಲಿಗೆ ತಳ್ಳಲ್ಪಡುತ್ತಿದ್ದರು.

    ದೆಹಲಿಯಲ್ಲಿ ಹೋರಾಟನಿರತ ರೈತರು ತಮಗೆ ಪೊಲೀಸರು ಹಾಗೂ ಬಿಜೆಪಿಯವರು ಕೊಡುತ್ತಿರುವ ಕಿರುಕುಳ ಸಹಿಸಿಕೊಂಡು ಹೋರಾಟ ಮುಂದುವರಿಸಿದ್ದಾರೆ. ರೈತರೇನು ಮೂಢಾತ್ಮರಲ್ಲ. ಹಿಂದೆ ನರೇಂದ್ರ ಮೋದಿ ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿಗೆ ನೇಮಕಗೊಂಡಿದ್ದಾಗ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಬೇಕು ಎಂದು ವರದಿ ನೀಡಿದ್ದರು. ಆದರೆ ಇಂದು ಅವರ ಮಾತು ಅವರೇ ಕೇಳುತ್ತಿಲ್ಲ ಎಂದು ಟೀಕಿಸಿದರು.

    ಲಂಗು ಲಗಾಮು ಇಲ್ಲದೆ ಕಾನೂನುಗಳು ಜಾರಿಯಾದರೆ, ರೈತ ಬೆಳೆದ ಬೆಳೆಗಳ ಕೃತಕ ಅಭಾವ ಸೃಷ್ಠಿಯಾಗುತ್ತದೆ. ಎಲ್ಲಾ ಪದಾರ್ಥಗಳ ಬೆಲೆ ಗಗನಕ್ಕೇರುತ್ತವೆ. ಮಧ್ಯಮವರ್ಗದವರು ಬಡತನದತ್ತ ದೂಡಲ್ಪಡುತ್ತಾರೆ. ಬಡವರು ಹಸಿವಿನ ದವಡೆಗೆ ಸಿಲುಕುತ್ತಾರೆ ಎಂದು ದೇವನೂರು ಮಹದೇವ ಎಚ್ಚರಿಸಿದರು.

    ಕೃಷಿ ಕಾನೂನು ಕೇವಲ ರೈತರಿಗೆ ಸಂಬಂಧಪಟ್ಟಿದ್ದಲ್ಲ. ಇದು ಎಲ್ಲಾ ವರ್ಗದ ಜನರಿಗೆ ಅನ್ವಯಿಸುತ್ತದೆ ಈ ನೆಲದ ಮೇಲೆ ಬದುಕುತ್ತಿರುವ ಪ್ರತಿಯೊಬ್ಬರೂ ಇದನ್ನು ಮನಗಾಣಬೇಕು ಎಂದು ಅವರು ಹೇಳಿದರು.

  • ಮಾದಪ್ಪನ ಭಕ್ತರ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಪ್ರವೇಶ ಶುಲ್ಕದ ಹೊರೆ

    ಮಾದಪ್ಪನ ಭಕ್ತರ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಪ್ರವೇಶ ಶುಲ್ಕದ ಹೊರೆ

    ಚಾಮರಾಜನಗರ: ಪ್ರಸಿದ್ದ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ಬಸ್‍ಗಳಿಗೂ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಆದರೆ ಕೆಎಸ್‌ಆರ್‌ಟಿಸಿ ಈ ಪ್ರವೇಶ ಶುಲ್ಕದ ಹೊರೆಯನ್ನು ಪ್ರಯಾಣಿಕರ ಮೇಲೆ ಹೊರಿಸಿದೆ.

    ಈ ಹಿಂದೆ ಕೆಎಸ್‌ಆರ್‌ಟಿಸಿ ಬಸ್‍ಗಳಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಯಾವುದೇ ರೀತಿಯ ಪ್ರವೇಶ ಶುಲ್ಕ ಇರಲಿಲ್ಲ. ಆದರೆ, ಎಲ್ಲಾ ರೀತಿಯ ಸೇವಾದರಗಳನ್ನು ಹೆಚ್ಚಳ ಮಾಡಿದ್ದ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಕೆಎಸ್‌ಆರ್‌ಟಿಸಿ ಬಸ್‍ಗಳಿಗೆ ಮೊದಲ ಬಾರಿಗೆ ಪ್ರವೇಶ ಶುಲ್ಕ ನಿಗದಿಪಡಿಸಿತ್ತು. ಕೊಳ್ಳೇಗಾಲ ಗೇಟ್ ಹಾಗೂ ಪಾಲಾರ್ ಗೇಟ್‍ಗಳ ಮೂಲಕ ಮಹದೇಶ್ವರ ಬೆಟ್ಟಕ್ಕೆ ಬರುವ ಬಸ್‍ಗಳ ಪ್ರತಿ ಟ್ರಿಪ್‍ಗೂ 50 ರೂ.ಗಳಂತೆ ಪ್ರವೇಶ ದರ ನಿಗದಿಪಡಿಸಲಾಗಿದೆ.

    ನಿಗಮಕ್ಕೆ ಆರ್ಥಿಕ ನಷ್ಟದಲ್ಲಿರುವ ಕಾರಣ ಈ ಹೊರೆಯನ್ನು ಸರಿದೂಗಿಸುವ ಸಲುವಾಗಿ ಪ್ರವೇಶ ಶುಲ್ಕವನ್ನು ಪ್ರಯಾಣಿಕರಿಂದಲೇ ವಸೂಲಿ ಮಾಡಲು ಸಾರಿಗೆ ನಿಗಮ ಸುತ್ತೋಲೆ ಹೊರಡಿಸಿದೆ.

    ಪ್ರತಿ ಪ್ರಯಾಣಿಕರಿಂದ ತಲಾ ಒಂದು ರೂಪಾಯಿಯಂತೆ ಹೆಚ್ಚುವರಿ ದರ ವಸೂಲಿ ಮಾಡುವಂತೆ ಸೂಚಿಸಲಾಗಿದೆ. ಹಾಗಾಗಿ ಪ್ರವೇಶ ಶುಲ್ಕದ ಹೊರೆಯು ಭಕ್ತರ ಮೇಲೆ ಬಿದ್ದಂತಾಗಿದೆ.

  • ಮಹದೇಶ್ವರನ ಹುಂಡಿಯಲ್ಲಿ 2 ಕೋಟಿ 21 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ

    ಮಹದೇಶ್ವರನ ಹುಂಡಿಯಲ್ಲಿ 2 ಕೋಟಿ 21 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ

    ಚಾಮರಾಜನಗರ: ಮಹಾಮಾರಿ ಕೊರೊನಾ ವೈರಸ್ ನಡುವೆಯೂ ಮಾದಪ್ಪನ ಸನ್ನಿಧಿಗೆ ಕೋಟಿ ಕೋಟಿ ಹಣ ಹರಿದುಬಂದಿದೆ.

    ಹೌದು. ಕೊರೊನಾ ಸಾಂಕ್ರಮಿಕ ರೋಗದಿಂದ ದೇಶದ ಆರ್ಥಿಕತೆ ಕುಸಿದಿದೆ. ಜನ ಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿದೆ. ವ್ಯಾಪಾರ ವಾಹಿವಾಟುಗಳ ಹೊಡೆತಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಜೊತೆಗೆ ಕೊರೊನಾ ರಾಜ್ಯದ ದೇವಾಲಯಗಳ ಆದಾಯ ಗಳಿಕೆ ಮೇಲೂ ಪ್ರಭಾವ ಬೀರಿದೆ. ಆದರೆ ಕೊರೊನಾ ಸಂಕಷ್ಟದ ನಡುವೆ ಕೂಡ ಮಲೆಮಹದೇಶ್ವರ ಬೆಟ್ಟದ ದೇವಾಲಯದ ಹುಂಡಿಗೆ ಭಕ್ತರಿಂದ ಕೋಟಿ ಕೋಟಿ ಹಣ ಸಂಗ್ರಹವಾಗಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೈ ಮಹದೇಶ್ವರ ಬೆಟ್ಟ ದೇವಾಲಯದಲ್ಲಿ ತಡ ರಾತ್ರಿವರೆಗೂ ನಡೆದ ಹುಂಡಿ ಏಣಿಕೆಯಲ್ಲಿ 2 ಕೋಟಿ 21 ಲಕ್ಷ ರೂಪಾಯಿ ನಗದು ರೂಪದಲ್ಲಿ ಸಂಗ್ರಹವಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 2, 21,59, 820 ರೂ. ನಗದು ಜೊತೆಗೆ 80 ಗ್ರಾಂ ಚಿನ್ನ, 2 ಕೆ.ಜಿ.ಬೆಳ್ಳಿ ಮತ್ತು ನಾಣ್ಯದ ರೂಪದಲ್ಲಿ 11.23 ಲಕ್ಷ ರೂಪಾಯಿ ಭಕ್ತರಿಂದ ಸಂಗ್ರಹವಾಗಿದೆ. ಕೋವಿಡ್ ಪರಿಣಾಮದ ಆರ್ಥಿಕ ಕಷ್ಟದ ನಡುವೆಯು ಮಲೆಮಹದೇಶ್ವರನಿಗೆ ಭಕ್ತರು ಉದಾರವಾಗಿ ಕಾಣಿಕೆ ಅರ್ಪಿಸಿದ್ದಾರೆ.

  • ಗ್ರಾಮ ಪಂಚಾಯತ್ ಗಾದಿಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ – ವೀಡಿಯೋ ವೈರಲ್

    ಗ್ರಾಮ ಪಂಚಾಯತ್ ಗಾದಿಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ – ವೀಡಿಯೋ ವೈರಲ್

    ಚಾಮರಾಜನಗರ: ಗ್ರಾಮ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ ವೇಳೆ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರು ಮೈತ್ರಿ ಧರ್ಮ ಪಾಲನೆ ಮಾಡಿ ಮಾತುಕತೆಯಂತೆ ಆಣೆ ಪ್ರಮಾಣ ಮಾಡಿರುವ ವೀಡಿಯೋವೊಂದು ಇದೀಗ ವೈರಲ್ ಆಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಣ್ಣೂರು ಗ್ರಾಮ ಪಂಚಾಯಿತಿಯಲ್ಲಿ 15 ಸದಸ್ಯ ಬಲವಿದ್ದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ 3 ಪಕ್ಷಗಳ ತಲಾ 5 ಬೆಂಬಲಿತರು ಗೆದ್ದಿದ್ದರು. ಆದರೆ ಇಲ್ಲಿ ಅಧಿಕಾರ ಹಿಡಿಯಲು ಯಾವುದಾದರೂ 2 ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಅವಶ್ಯಕವಾಗಿತ್ತು. ಈ ಹಿನ್ನೆಲೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಸಿದ್ಧವಾಗಿ 2 ಪಕ್ಷಗಳ ಸದಸ್ಯರು ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಹೊರಟಿದ್ದರು. ಈ ವೇಳೆ ಕೆಲ ಸದಸ್ಯರು ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯದ ಮುಂಭಾಗ ಕರ್ಪೂರ ಹಚ್ಚಿ ನಾವೆಲ್ಲ ಆಡಿದ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ.

    ಮತ್ತೊಂದು ವೀಡಿಯೋದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹನೂರು ತಾಲೂಕು ಘಟಕದ ಅಧ್ಯಕ್ಷ ಕಣ್ಣೂರು ಬಸವರಾಜಪ್ಪ ಮಾತನಾಡಿ ಮೊದಲ 10 ತಿಂಗಳ ಅವಧಿಗೆ ಬಸವರಾಜು, ಮುಂದಿನ 12 ತಿಂಗಳು ಮಮತಾರಾಣಿ ಮತ್ತು ಉಳಿದ 8 ತಿಂಗಳಿಗೆ ಶಬಾನ ಖಾನಮ್ ಅವರು ಅಧ್ಯಕ್ಷರಾಗಲಿದ್ದಾರೆ. ಏನೇ ಆದರೂ ನಾವೆಲ್ಲಾ 50:50 ಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.

    ಇದೇ ವೇಳೆ ಮತ್ತೊರ್ವ ಮುಖಂಡ ಫೈರೋಜ್ ಮಾತನಾಡಿದ್ದು 5 ವರ್ಷ ಈಗ ಹೇಗಿದ್ದೇವೆ ಹಾಗೆಯೇ ಇರಬೇಕು, ಯಾರಾದರು ಒಬ್ಬರು ಹೆಚ್ಚು ಕಡಿಮೆ ಮಾಡಿದರೆ ಅವರ ಮನೆ ಮುರಿದು ಹೋಗುತ್ತದೆ ಎಂದು ಹೇಳಿದ್ದಾರೆ. ಈ ಎರಡು ವಿಡಿಯೋಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಅಥವಾ ಚುನಾವಣಾ ಆಯೋಗ ಮಧ್ಯೆ ಪ್ರವೇಶಿಸಿ ಏನಾದರೂ ಕ್ರಮ ಕೈಗೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

  • ಬಿಜೆಪಿಯಲ್ಲಿ ಬಾಂಬೆ ಟೀಂ ಅಲ್ಲ, ಬಿಎಸ್ ವೈ, ಬಿಜೆಪಿ ಟೀಂ ಇದೆ: ಬಿ.ಸಿ ಪಾಟೀಲ್

    ಬಿಜೆಪಿಯಲ್ಲಿ ಬಾಂಬೆ ಟೀಂ ಅಲ್ಲ, ಬಿಎಸ್ ವೈ, ಬಿಜೆಪಿ ಟೀಂ ಇದೆ: ಬಿ.ಸಿ ಪಾಟೀಲ್

    ಚಾಮರಾಜನಗರ: ನಮ್ಮದು ಈಗ ಬಾಂಬೆ ಟೀಂ ಅಲ್ಲ. ಬಿಎಸ್ ವೈ ಟೀಂ, ಬಿಜೆಪಿ ಟೀಂ. ನಮ್ಮಲ್ಲಿ ಯಾವುದೇ ರೀತಿಯ ಬಿರುಕಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ಇಂದು ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆಯ ಅಸಮಾಧಾನ ವಿಚಾರವಾಗಿ, ನಮ್ಮ ಐದು ಬೆರಳುಗಳೇ ಸಮವಿಲ್ಲ. ಅಂತೆಯೇ ಕೆಲವರಿಗೆ ಅತೃಪ್ತಿ ಆಗಿರುವುದು ಸಹಜ. ಶಾಸಕರು ಕೆಲ ಇಲಾಖೆಯನ್ನು ನಿರ್ವಹಿಸುವ ಇಚ್ಛೆ ಇರುವುದರಿಂದ ಅಸಮಾಧಾನ ಇರಲಿದ್ದು, ಬಳಿಕ ಶಮನ ಆಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

    ಮೂರು ಕೃಷಿ ಕಾನೂನು ವಿರುದ್ಧ ದೆಹಲಿಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ 10 ಬಾರಿ ಸಭೆ ನಡೆಸಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ರೈತರೊಂದಿಗೆ ಹೊಂದಾಣಿಕೆ ಏರ್ಪಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಶಿವಮೊಗ್ಗದಲ್ಲಿ ನಡೆದ ಗಣಿ ದುರಂತದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ. ಚಾಮರಾಜನಗರದಲ್ಲಿ ಗಣಿಗಾರಿಕೆಯಿಂದ ಎಲ್ಲೆಲ್ಲಿ ರೈತರಿಗೆ ತೊಂದರೆ ಉಂಟಾಗುತ್ತಿದೆ ಎಂಬ ಬಗ್ಗೆ ತಿಳಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಗಣಿ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.

    ನಾನು ಇಚ್ಛೆಪಟ್ಟು ಕೃಷಿ ಖಾತೆಯನ್ನು ತೆಗೆದುಕೊಂಡಿದ್ದು, ರೈತರ ಬಾಳು ಹಸನಾದಾಗ ಮಾತ್ರ ನನಗೆ ತೃಪ್ತಿ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗಬೇಕು, ಉತ್ತಮ ಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದೇನೆ ಎಂದು ಹೇಳಿದರು.

  • ಸಾಲ ಕೊಡಿಸೋದಾಗಿ ಲಕ್ಷಾಂತರ ದೋಖಾ – ಎಸ್‍ಎಂಎಸ್ ಅಸೋಸಿಯೆಟ್ಸ್ ವಿರುದ್ಧ ದೂರು

    ಸಾಲ ಕೊಡಿಸೋದಾಗಿ ಲಕ್ಷಾಂತರ ದೋಖಾ – ಎಸ್‍ಎಂಎಸ್ ಅಸೋಸಿಯೆಟ್ಸ್ ವಿರುದ್ಧ ದೂರು

    ಚಾಮರಾಜನಗರ: ಸುಲಭವಾಗಿ ಸಾಲ ಸಿಗುತ್ತದೆ ಎಂಬ ಆಸೆಗೆ ಬಿದ್ದ ಜನರಿಗೆ ಅನಧಿಕೃತ ಖಾಸಗಿ ಸಂಸ್ಥೆಯೊಂದು ಲಕ್ಷಾಂತರ ರೂಪಾಯಿ ಟೋಪಿ ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

    ಸಾಲ ಕೊಡಿಸುವುದಾಗಿ ಆಮಿಷ ಒಡ್ಡಿದ ಅನಧಿಕೃತ ಖಾಸಗಿ ಸಂಸ್ಥೆಯ ಮಾಲೀಕ ನೂರಾರು ಜನರಿಂದ ಕಮಿಷನ್ ಹಾಗೂ ನೊಂದಣಿ ಶುಲ್ಕದ ರೂಪದಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದು ಮೋಸ ಹೋದ ಜನ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ವಂಚನೆ ಹೇಗೆ?
    ಎಸ್.ಎಂ.ಎಸ್. ಅಸೋಸಿಯೆಟ್ಸ್ ಹೆಸರಿನ ಸಂಸ್ಥೆ, ಉದ್ಯೋಗಿ ಶಶಿಕಲಾ ಎಂಬವರ ಹೆಸರಿನಲ್ಲಿ ಜಿ.ಎಸ್.ಟಿ. ನಂಬರ್ ಪಡೆದಿರುವುದನ್ನು ಬಿಟ್ಟರೆ ಇನ್ನೂ ಯಾವುದೇ ರೀತಿಯ ಸರ್ಕಾರಿ ಸಂಸ್ಥೆಗಳಿಂದ ಪರವಾನಗಿ ಪಡೆದಿಲ್ಲ. ಅಲ್ಲದೆ ನೊಂದವಣಿಯು ಆಗಿಲ್ಲ. ಆದರೂ ಚಾಮರಾಜನಗರ ಕೊಳ್ಳೇಗಾಲ, ಮಳವಳ್ಳಿ, ಟಿ.ನರಸೀಪುರ, ಮೈಸೂರು ಸೇರಿದಂತೆ 15 ಕಡೆ ಬ್ರ್ಯಾಂಚ್ ತೆರೆದು ಖಾಸಗಿ ಬ್ಯಾಂಕುಗಳಿಂದ ವ್ಯಾಪಾರ, ಕೈಗಾರಿಕೆ, ಮನೆ, ವಾಹನ, ಕೃಷಿ ಮತ್ತಿತರ ಸಾಲ ಸೌಲಭ್ಯ ಕೊಡಿಸುವುದಾಗಿ ಜನರನ್ನು ನಂಬಿಸಿದೆ. ಸಂಸ್ಥೆಯ ಬಿಸಿನೆಸ್ ಹೆಡ್ ಎಂದು ಹೇಳಿಕೊಂಡ ಮೋಹನಸುಂದರಂ ಎಂಬಾತ ನೂರಾರು ಮಂದಿಯಿಂದ ತಲಾ 2000 ರೂಪಾಯಿಯಂತೆ ನೊಂದಣಿ ಶುಲ್ಕ ವಸೂಲಿ ಮಾಡಿದ್ದಾನೆ. ಅಲ್ಲದೆ ಕೋಟಿಗಟ್ಟಲೆ ಸಾಲ ಕೊಡಿಸುವುದಾಗಿ ಮುಂಗಡವಾಗಿ ಶೇಕಡಾ ಮೂರರಂತೆ ಲಕ್ಷಾಂತರ ರೂಪಾಯಿ ಕಮಿಷನ್ ವಸೂಲಿ ಮಾಡಿದ್ದಾನೆ.

    ಚಾಮರಾಜನಗರ ಹಾಗು ಕೊಳ್ಳೇಗಾಲ ಪೊಲೀಸ್ ಠಾಣೆಗಳಲ್ಲಿ ಈ ಅನಧಿಕೃತ ಖಾಸಗಿ ಸಂಸ್ಥೆಯ ವಿರುದ್ದ ದೂರು ದಾಖಲಿಸಿದ್ದಾರೆ. ಇದೀಗ ಕೊಳ್ಳೇಗಾಲ ಪೊಲೀಸರು ಈ ಸಂಸ್ಥೆಯ ಬಿಸಿನೆಸ್ ಹೆಡ್ ಮೋಹನ ಸುಂದರಂ ಹಾಗು ಉದ್ಯೋಗಿ ಶಶಿಕಲಾ ಎಂಬುವರನ್ನು ಬಂಧಿಸಿದ್ದಾರೆ.

    ವಿಷಯ ತಿಳಿದು ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಠಾಣೆಗೆ ಧಾವಿಸಿ, ಈ ಬಗ್ಗೆ ಪ್ರಕರಣ ದಾಖಲಿಸಿ ನೊಂದ ಜನರಿಗೆ ನ್ಯಾಯ ಒದಗಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಕೊಳ್ಳೇಗಾಲ ಪೊಲೀಸರು, ಬಿಸಿನೆಸ್ ಹೆಡ್ ಮೋಹನಸುಂದರಂ ಹಾಗು ಸಂಸ್ಥೆಯ ಉದ್ಯೋಗಿ ಶಶಿಕಲಾ ಎಂಬುವರನ್ನು ಬಂಧಿಸಿ ಇವರ ವಿರುದ್ದ ಮೋಸ ಹಾಗು ನಂಬಿಕೆ ದ್ರೋಹ ಪ್ರಕರಣ ದಾಖಲಿಸಿದ್ದಾರೆ.

  • ತಮಿಳು ನಾಮಫಲಕ ಧ್ವಂಸ – ವಾಟಾಳ್ ನಾಗರಾಜ್ ವಿರುದ್ಧ ಕೇಸ್

    ತಮಿಳು ನಾಮಫಲಕ ಧ್ವಂಸ – ವಾಟಾಳ್ ನಾಗರಾಜ್ ವಿರುದ್ಧ ಕೇಸ್

    ಚಾಮರಾಜನಗರ: ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತೆ ನಿನ್ನೆ ಚಾಮರಾಜನಗರ ಗಡಿಭಾಗದಲ್ಲಿ ತಮಿಳು ನಾಮಫಲಕವನ್ನು ಕೆಡವಿ ಹಾಕುವುದರ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ.

    ತಮಿಳುನಾಡಿನ ಕೊಂಗಳ್ಳಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಚಾಮರಾಜನಗರ ತಾಲೋಕು ಅರಕಲವಾಡಿ ಸಮೀಪ ಎತ್ತಗಟ್ಟಿ ಬೆಟ್ಟದ ರಸ್ತೆಯಲ್ಲಿ ಹಾಕಿದ್ದ ತಮಿಳು ನಾಮಫಲಕವನ್ನು ಭಾನುವಾರ ವಾಟಾಳ್ ನಾಗರಾಜ್ ಕಿತ್ತು ಹಾಕಿದ್ದಾರೆ. ಕರ್ನಾಟಕ ತಮಿಳುನಾಡು ಗಡಿ ಸಂಧಿಸುವ ಜಾಗದಲ್ಲಿ ಘಟನೆ ನಡೆದಿದ್ದು, ತಮಿಳುನಾಡಿಗೆ ಸೇರಿದ ಜಾಗದಲ್ಲಿ ನಾಮಫಲಕ ಕೆಡವಿರುವುದಾಗಿ ಅಲ್ಲಿನ ಸ್ಥಳೀಯರು ವಾಟಾಳ್ ನಾಗರಾಜ್ ಹಾಗೂ ಬೆಂಬಲಿಗರ ವಿರುದ್ಧ ತಾಳವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ವಿಚಾರವಾಗಿ ಐಪಿಸಿ ಸೆಕ್ಷನ್ 143(ಕಾನೂನುಬಾಹಿರ), 147 (ಗಲಭೆಗೆ ಪ್ರಚೋದನೆ), 270/3(1) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    5 ದಿನಗಳ ಹಿಂದೆಯಷ್ಟೇ ತಾಳವಾಡಿ ಕರ್ನಾಟಕಕ್ಕೆ ಸೇರಬೇಕು ಎಂದು ಆಗ್ರಹಿಸಿ ಚಾಮರಾಜನಗರದ ನಡುರಸ್ತೆಯಲ್ಲಿ ವಾಟಾಳ್ ನಾಗರಾಜ್ ಮಲಗಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿ ಕರ್ನಾಟಕಕ್ಕೆ ಸೇರಿದ ಸ್ಥಳದಲ್ಲಿ ಹಾಕಿದ್ದ ತಮಿಳು ನಾಮಫಲಕಗಳನ್ನು ಕಿತ್ತು ಹಾಕಿದ್ದರು. ಈ ವಿಚಾರವಾಗಿ ತನಗೆ ಕೆನಡಾ, ಅಮೆರಿಕ, ಮಲೇಶಿಯ, ತಮಿಳುನಾಡು ಸೇರಿದಂತೆ ದೇಶ ವಿದೇಶಗಳಿಂದ ಬೆದರಿಕೆ ಕರೆಗಳು ಬರುತ್ತಿದೆ ಎಂದು ಆರೋಪಿಸಿದ್ದರು.

    ನಾನು ಯಾವ ಬೆದರಿಕೆಗೂ ಮಣಿಯುವುದಿಲ್ಲ, ನನ್ನ ಪ್ರಾಣ ಹೋದರೂ ಚಿಂತೆ ಇಲ್ಲ, ನನ್ನ ಹೋರಾಟ ಮುಂದುವರಿಸುತ್ತೇನೆ. ಅವರೆಲ್ಲರ ಬೆದರಿಕೆ ಕರೆಗಳಿಗೆ ಸಂಬಂಧಿಸಿದಂತೆ ದಾಖಲೆ ಸಮೇತ ಸರ್ಕಾರಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದ್ದರು.