Tag: ಪಬ್ಲಿಕ್ ಟಿವಿ BY Raghavendra

  • ಮಠಾಧೀಶರ ಲಾಬಿಯಿಂದ ಯಡಿಯೂರಪ್ಪ ಬೆಳೆದಿಲ್ಲ: ಬಿ.ವೈ ರಾಘವೇಂದ್ರ

    ಮಠಾಧೀಶರ ಲಾಬಿಯಿಂದ ಯಡಿಯೂರಪ್ಪ ಬೆಳೆದಿಲ್ಲ: ಬಿ.ವೈ ರಾಘವೇಂದ್ರ

    – ಬಿಜೆಪಿ ಯಡಿಯೂರಪ್ಪ ಕಟ್ಟಿದ ಕಲ್ಪವೃಕ್ಷ

    ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪನವರ ರಾಜೀನಾಮೆ ವಿಚಾರವಾಗಿ ಸಂಸದ ಬಿ.ವೈ ರಾಘವೆಂದ್ರರವರು ಕೂಡ ಸುಳಿವು ನೀಡಿದ್ದಾರೆ.

    ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಎಸ್‍ವೈ ಪುತ್ರ, ಬಿಜೆಪಿ ಸರ್ಕಾರ ಎರಡು ವರ್ಷ ಪೂರ್ಣಗೊಂಡಿದೆ. ಹೈಕಮಾಂಡ್ ಹೇಗೆ ಹೇಳುತ್ತಾರೋ ಅದನ್ನು ಕೇಳುತ್ತೀನಿ. ಯಾವತ್ತು ಹೈಕಮಾಂಡ್ ಹೇಳುತ್ತೊ ಆಗ ರಾಜೀನಾಮೆ ನೀಡಲು ತಯಾರಿದ್ದೇನೆ ಎಂದು ಯಡಿಯೂರಪ್ಪನವರು ಈ ಹಿಂದೆ ಮಾಧ್ಯಮಗಳಿಗೆ ನೇರವಾಗಿ ಹೇಳಿದ್ದರು. ಸದ್ಯ ಇಂತಹ ಸಂದರ್ಭದಲ್ಲಿ ಅವರಿಗೆ ನೈತಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಮಠಾಧೀಶರು ಜಾತ್ಯತೀತವಾಗಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಮಠಾಧೀಶರನ್ನು ಉಪಯೋಗಿಸಿಕೊಂಡು ಯಡಿಯೂರಪ್ಪನವರು ಲಾಬಿ ಮಾಡುತ್ತಿದ್ದಾರೆ ಎಂದು ಕೆಲವು ವ್ಯಕ್ತಿಗಳು ಹೇಳಿಕೆ ನೀಡುತ್ತಿದ್ದಾರೆ. ಆ ತಂತ್ರ ರಾಜಕಾರಣ ಯಡಿಯೂರಪ್ಪನವರು ತಮ್ಮ ಜೀವನದಲ್ಲಿ ಇಂದಿಗೂ, ಹಿಂದೆಯೂ, ಮುಂದೆಯೂ ಮಾಡುವುದಿಲ್ಲ. 40 ವರ್ಷಗಳ ಕಾಲ ರಾಜಕೀಯದಲ್ಲಿ ತಮ್ಮ ತಂದೆಯವರೊಟ್ಟಿಗೆ ಮಠಾಧೀಶರು ಇದ್ದರು. ಅವರ ಆಶೀರ್ವಾದದಿಂದ ನಾವು ಇಷ್ಟು ಬೆಳೆದಿದ್ದೇವೆ. ಹೀಗಾಗಿ ಹಗುರವಾಗಿ ಸ್ವಾಮೀಜಿಗಳ ಬಗ್ಗೆ ಮಾತನಾಡುವುದನ್ನು ಬಿಡಬೇಕು ಎಂದು ಸಿ.ಟಿರವಿಗೆ ಟಾಂಗ್ ಕೊಟ್ಟರು.

    ಯಡಿಯೂರಪ್ಪನವರಿಗೆ ಬಿಜೆಪಿ ಪಕ್ಷ ಎಲ್ಲ ನೀಡಿದೆ. ಅವರಿಗೆ ತೃಪ್ತಿ ಕೂಡ ಇದೆ. ಇಲ್ಲಿಯವರೆಗೂ ಪಕ್ಷದಲ್ಲಿ ಯಡಿಯೂರಪ್ಪರನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ಮುಂದೆ ಕೂಡ ಗೌರವದಿಂದ ನಡೆಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

    ಒಬ್ಬ ಮನುಷ್ಯನಿಗೆ ಸ್ವಾಭಿಮಾನ ಬಹಳ ಮುಖ್ಯ. ಈ ಹಿಂದೆ ಸ್ವಾಭಿಮಾನ ಪ್ರಶ್ನೆ ಬಂದಾಗ ಹೇಗೆ ನಡೆದುಕೊಂಡಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ. ನಮ್ಮ ತಂದೆ ಇಂದು ನೇರವಾಗಿಯೇ ಹೇಳಿದ್ದಾರೆ. 75 ವರ್ಷ ಮೇಲ್ಪಟ್ಟವರಿಗೆ ಸಂಘಟನೆ ರಾಷ್ಟ್ರಮಟ್ಟದಲ್ಲಿ ತುಂಬಾ ಜನ ಹಿಂದೆ ಸರಿದಿದ್ದಾರೆ. ಸಂಘಟನೆಗಳು ಯಾವತ್ತಿಗೂ ನಿಂತ ನೀರಲ್ಲ. ಬಿಜೆಪಿ ಎಂಬ ಕಲ್ಪವೃಕ್ಷವನ್ನು ನೆಟ್ಟಿದ್ದೇನೆ ಅದರ ಫಲವನ್ನು ಮುಂದೆ ಎಲ್ಲರೂ ಉಪಯೋಗಿಸಿಕೊಳ್ಳಿ ಎಂದು ಹೇಳಿದ್ದರು ಅಂತ ರಾಘವೇಂದ್ರ ತಿಳಿಸಿದ್ದಾರೆ.

    ಇಂದು ಸಿಎಂ ಬಿ.ಎಸ್ ಯಡಿಯೂರಪ್ಪನವರು ಜುಲೈ 25ರ ಬಳಿಕ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ತಮ್ಮ ರಾಜೀನಾಮೆ ವಿಚಾರ ಕುರಿತಂತೆ ಸುಳಿವು ನೀಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಹೊಸ ಕ್ರಾಂತಿಗೆ ಬಿಜೆಪಿ ಹೈಕಮಾಂಡ್ ಸಿದ್ಧತೆ..?