Tag: ಪಬ್ಲಿಕ್ ಟಿವಿ Bus

  • ರಷ್ಯಾದಲ್ಲಿ ಬಸ್ ಸ್ಫೋಟ – ಮಹಿಳೆ ಸಾವು, 17 ಮಂದಿಗೆ ಗಾಯ

    ರಷ್ಯಾದಲ್ಲಿ ಬಸ್ ಸ್ಫೋಟ – ಮಹಿಳೆ ಸಾವು, 17 ಮಂದಿಗೆ ಗಾಯ

    ಮಾಸ್ಕೋ: ಮಧ್ಯ ರಷ್ಯಾದ ವೊರೊನೆಜ್ ನಗರದಲ್ಲಿ ಗುರುವಾರ ಸಂಜೆ ಸಂಭವಿಸಿದ ಬಸ್ಸಿನ ಸ್ಫೋಟದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಸುಮಾರು 17 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

    ಇದು ಭಯೋತ್ಪಾದಕರು ನಡೆಸಿರುವ ಕೃತ್ಯವೋ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಸ್ಸಿನಲ್ಲಿ 35 ಜನ ಪ್ರಯಾಣಿಕರಿದ್ದರು ಎಂದು ಬಸ್ ಚಾಲಕ ತಿಳಿಸಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡವರ ಸಂಖ್ಯೆ 18ಕ್ಕೇರಿದ್ದು, ಅವರಲ್ಲಿ ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವೊರೊನೆಜ್ ಗವರ್ನರ್ ಅಲೆಕ್ಸಾಂಡರ್ ಗುಸೆವ್ ಹೇಳಿದ್ದಾರೆ.

    ಬಸ್ ಶಾಪಿಂಗ್ ಸೆಂಟರ್ ಬಳಿ ಇರುವ ನಿಲ್ದಾಣದಲ್ಲಿ ಸ್ಫೋಟಗೊಂಡಿದ್ದು, ದಾರಿಹೋಕರೊಬ್ಬರು ತಮ್ಮ ಮೊಬೈಲ್‍ನಲ್ಲಿ ವೀಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಬಸ್ ಸ್ಫೋಟಗೊಂಡು ಮೇಲ್ಛಾವಣಿ ಹಾಗೂ ಕಿಟಕಿಗಳು ಕಿತ್ತುಹೋಗುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ:BJP ಜೊತೆಗೆ ಟ್ವಿಟ್ಟರ್ ಕೈಜೋಡಿಸಿ ಪ್ರಜಾತಂತ್ರ ಹತ್ತಿಕ್ಕುವ ಕೃತ್ಯದಲ್ಲಿ ತೊಡಗಿದೆ: ಪ್ರಿಯಾಂಕಾ ಗಾಂಧಿ

  • ವ್ಯಾಪಾರಕ್ಕೆಂದು ಬಂದ ವೃದ್ಧರು ಬಸ್ ಇಲ್ಲದೆ ಪರದಾಟ

    ವ್ಯಾಪಾರಕ್ಕೆಂದು ಬಂದ ವೃದ್ಧರು ಬಸ್ ಇಲ್ಲದೆ ಪರದಾಟ

    ಗದಗ: ಸಾರಿಗೆ ನೌಕರರ ಮುಷ್ಕರದ ಬಿಸಿ ವೃದ್ಧ ವ್ಯಾಪಾರಸ್ಥ ದಂಪತಿಗೂ ತಟ್ಟಿದೆ. ನಗರದ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ವ್ಯಾಪಾರಕ್ಕೆಂದು ಬಂದ ವೃದ್ಧ ದಂಪತಿ ವಾಹನ ಸಿಗದೆ ಪರದಾಡುತ್ತಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ವೃದ್ಧರು ಮರಳಿ ತಮ್ಮೂರಿಗೆ ಹೋಗಲಾಗದೇ 2 ದಿನಗಳಿಂದ ಪರದಾಡುತ್ತಿರುವ ಸ್ಥಿತಿ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸೋಮವಾರದಂದು ಕಸಬಾರಿಗೆ, ಸಣ್ಣಪುಟ್ಟ ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರಕ್ಕೆಂದು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಬಂದಿದ್ದರು. ನಿನ್ನೆಯೇ ಇಳಕಲ್ ಗೆ ಹೋಗಬೇಕಿತ್ತು. ಆದರೆ 2 ದಿನಗಳಿಂದ ಬಸ್ ಇಲ್ಲದಕ್ಕೆ ಇಳಕಲ್ ಹೋಗಲಾಗದೇ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ.

    ಖಾಸಗಿ ವಾಹನಗಳ ದುಪ್ಪಟ್ಟು ಹಣಕ್ಕೆ ಬೇಸತ್ತಿದ್ದಾರೆ. ಗದಗದಿಂದ ಗಜೇಂದ್ರಗಡಕ್ಕೆ 300 ರೂಪಾಯಿ ಹಣ ಕೇಳುತ್ತಿದ್ದಾರೆ. ಗಜೇಂದ್ರಗಡದಿಂದ ಮುಂದೆ ಇಳಕಲ್ ಗೆ ಹೋಗಬೇಕು. ಅಲ್ಲಿ ಎಷ್ಟು ಹಣ ಕೇಳುತ್ತಾರೋ ಗೊತ್ತಿಲ್ಲ. ಹೀಗಾದರೆ ಏನು ಮಾಡೋದು ಎಂದು ಸರ್ಕಾರ ಹಾಗೂ ಸಾರಿಗೆ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಲಾಕ್‍ಡೌನ್, ಬೆಲೆ ಏರಿಕೆ ಮಧ್ಯೆ ದುಡಿದ ಹಣ ಖಾಸಗಿ ವಾಹನಕ್ಕೆ ಕೊಡುವ ಸ್ಥಿತಿ ಬಂತಲ್ಲಾ ಅಂತ ಗೋಳಾಡಿದರು.

  • ಬಸ್‍ಗಾಗಿ ಸಿನಿಮಾ ಶೈಲಿಯಲ್ಲಿ ಬಡಿದಾಡಿದ ವಿದ್ಯಾರ್ಥಿಗಳು

    ಬಸ್‍ಗಾಗಿ ಸಿನಿಮಾ ಶೈಲಿಯಲ್ಲಿ ಬಡಿದಾಡಿದ ವಿದ್ಯಾರ್ಥಿಗಳು

    ಯಾದಗಿರಿ: ಬಸ್‍ಗಾಗಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಗುಂಡ್ಲಾಪುರದಲ್ಲಿ ನಡೆದಿದೆ.

    ಬಸ್‍ಗಾಗಿ ನಗನೂರು ಮತ್ತು ಗುಂಡ್ಲಾಪುರ ಗ್ರಾಮದ ಕಾಲೇಜು ವಿದ್ಯಾರ್ಥಿಗಳು ಸಿನಿಮಾ ಶೈಲಿಯಲ್ಲಿ ಪರಸ್ಪರ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ.

    ನಗನೂರ ಮತ್ತು ಗುಂಡ್ಲಾಪುರ ಮಾರ್ಗದಲ್ಲಿ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆಯಿದೆ. ಹೀಗಾಗಿ ಗುಂಡ್ಲಾಪುರ ಗ್ರಾಮದ ವಿದ್ಯಾರ್ಥಿಗಳಿಗೆ ಬೆಳಗ್ಗೆ 7:30ಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಹೀಗಿದ್ದರೂ ವಿಶೇಷ ಬಸ್‍ನಲ್ಲಿ ತೆರಳದ ಗುಂಡ್ಲಾಪುರ ವಿದ್ಯಾರ್ಥಿಗಳು 8 ಗಂಟೆಗೆ ನಗನೂರಿಂದ ಬರುವ ಬಸ್‍ನಲ್ಲಿ ಬರಲು ಮುಂದಾಗುತ್ತಿದ್ದಾರೆ.

    ಇದರಿಂದಾಗಿ ಬಸ್ ಸಂಪೂರ್ಣ ಭರ್ತಿಯಾಗಿ ನಗನೂರಿನ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಈ ವಿಚಾರಕ್ಕೆ ಇಂದು ಗುಂಡ್ಲಾಪುರ ಬಳಿ ಎರಡು ಗ್ರಾಮದ ವಿದ್ಯಾರ್ಥಿಗಳು ಸಿನಿಮಾ ಶೈಲಿಯಲ್ಲಿ ಬಡಿದಾಡಿಕೊಂಡಿದ್ದಾರೆ. ಈ ಘಟನೆಯು ಗೂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಬಸ್, ಲಾರಿ ನಡುವೆ ಭೀಕರ ಅಫಘಾತ – ಚಾಲಕ ಸಜೀವ ದಹನ

    ಬಸ್, ಲಾರಿ ನಡುವೆ ಭೀಕರ ಅಫಘಾತ – ಚಾಲಕ ಸಜೀವ ದಹನ

    ಮಂಗಳೂರು: ಬಸ್ ಹಾಗೂ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಸಜೀವ ದಹನವಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ನಡೆದಿದೆ.

    ನಿನ್ನೆ ತಡರಾತ್ರಿ ಮಂಗಳೂರಿನಿಂದ- ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‍ಗೆ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಗೂಡ್ಸ್ ಲಾರಿಗೆ ಡಿಕ್ಕಿ ಹೊಡೆದಿದೆ. ಘಟನೆ ವೇಳೆ ಎರಡು ಗಾಡಿಗಳ ಮಧ್ಯೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ತೀವ್ರತೆಗೆ ಲಾರಿ ಚಾಲಕ ಸಜೀವ ದಹನವಾಗಿದ್ದಾರೆ.

    ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತಕ್ಷಣ ಬಸ್‍ನಿಂದ ಕೆಳಗಿಳಿದು ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಈ ಅಪಘಾತ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಸ್ ಹಾಗೂ ಲಾರಿ ಎರಡು ಸುಟ್ಟು ಭಸ್ಮವಾಗಿದೆ.