Tag: ಪಬ್ಲಿಕ್ ಟಿವಿ BJP leader

  • ಬಿಜೆಪಿ ನಾಯಕನ ಮನೆ ಮೇಲೆ ಭಯೋತ್ಪಾದಕರ ದಾಳಿ – ಓರ್ವ ಪೊಲೀಸ್ ಹುತಾತ್ಮ

    ಬಿಜೆಪಿ ನಾಯಕನ ಮನೆ ಮೇಲೆ ಭಯೋತ್ಪಾದಕರ ದಾಳಿ – ಓರ್ವ ಪೊಲೀಸ್ ಹುತಾತ್ಮ

    ಶ್ರೀನಗರ: ಬಿಜೆಪಿ ನಾಯಕ ಅನ್ವರ್ ಖಾನ್ ನಿವಾಸದ ಮೇಲೆ ಗುರುವಾರ ಭಯೋತ್ಪಾದಕರು ನಡೆಸಿದ್ದ ದಾಳಿಯಲ್ಲಿ ಓರ್ವ ಪೊಲೀಸ್ ಹುತಾತ್ಮರಾಗಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ.

    ನಗರದ ಹೊರವಲಯದಲ್ಲಿರುವ ನೌಗಮ್‍ನ ಅರಿಗಮ್ ಪ್ರದೇಶದಲ್ಲಿರುವ ಖಾನ್ ನಿವಾಸದ ಗಾರ್ಡ್ ಪೋಸ್ಟ್ ಮೇಲೆ ಭಯೋತ್ಪಾದಕರು ಬೆಳಗ್ಗೆ ಗುಂಡು ಹಾರಿಸಿದ್ದರು.

    ಭಯೋತ್ಪಾದಕರು ಸ್ಥಳದಿಂದ ಎಸ್‍ಎಲ್‍ಆರ್ ರೈಫಲ್ ಕೊಂಡೊಯ್ದಿದ್ದು, ಈ ಕುರಿತಂತೆ ಪೊಲೀಸರು ಯಾವುದೇ ಮಾಹಿತಿಯನ್ನು ದೃಢೀಕರಿಸಿಲ್ಲ. ಘಟನೆ ವೇಳೆ ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ಚಿಕಿತ್ಸೆ ಫಲಾಕಾರಿಯಾಗದೇ ಮೃತಪಟ್ಟಿರುವುದಾಗಿ ಎಸ್‍ಎಂಎಚ್‍ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಜೀರ್ ಚೌಧರಿ ತಿಳಿಸಿದ್ದಾರೆ.

    ಘಟನೆ ಕುರಿತಂತೆ ಬಿಜೆಪಿ ಮಾಧ್ಯಮದ ಉಸ್ತುವಾರಿ ಮಝೂರ್ ಭಟ್ ಕ್ರೂರವಾದ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

    ಇದು ಬಿಜೆಪಿ ನಾಯಕರ ಮೇಲೆ ಮಾಡುತ್ತಿರುವ ಮೊದಲನೇ ದಾಳಿಯಲ್ಲ. ಈ ಮುನ್ನ 2018 ರಲ್ಲಿ ಪುಲ್ವಾಮಾ ಜಿಲ್ಲೆಯಲ್ಲಿರುವ ಅನ್ವರ್ ಖಾನ್‍ರವರ ಮೇಲೆ ಭಯೋತ್ಪಾದಕರು ಬಹಿರಂಗವಾಗಿ ಗುಂಡು ಹಾರಿಸಿದ್ದರು. ಈ ವೇಳೆ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಗಾಯಗೊಂಡಿದ್ದರು. ಆದರೆ ಖಾನ್‍ಗೆ ಯಾವುದೇ ಹಾನಿಯಾಗಲಿಲ್ಲ ಹಾಗೂ ಅಪಾಯದಿಂದ ಪಾರಾಗಿದ್ದರು.