Tag: ಪಬ್ಲಿಕ್ ಟಿವಿ Bidar

  • ಬಸ್ ನಿಲುಗಡೆಗಾಗಿ ಪ್ರತಿಭಟನೆ – ವಿದ್ಯಾರ್ಥಿ ಮೇಲೆ ಪಿಎಸ್‍ಐ ಹಲ್ಲೆ

    ಬಸ್ ನಿಲುಗಡೆಗಾಗಿ ಪ್ರತಿಭಟನೆ – ವಿದ್ಯಾರ್ಥಿ ಮೇಲೆ ಪಿಎಸ್‍ಐ ಹಲ್ಲೆ

    ಬೀದರ್: ಬಸ್ ನಿಲುಗಡೆಗಾಗಿ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ಪಿಎಸ್‍ಐ ಹಲ್ಲೆ ಮಾಡಿರುವ ಘಟನೆ ಬೀದರ್‍ನಲ್ಲಿ ನಡೆದಿದೆ.

    ಹಲವು ದಿನಗಳಿಂದ ಅಣದೂರು ಗ್ರಾಮದಲ್ಲಿ ಸಾರಿಗೆ ಬಸ್ಸುಗಳು ನಿಲ್ಲಿಸದೇ ಸಂಚಾರ ಮಾಡುತ್ತಿದ್ದವು. ಸಾರಿಗೆ ಸಿಬ್ಬಂದಿಯ ಈ ನಡೆಗೆ ರೋಸಿ ಹೋದ ವಿದ್ಯಾರ್ಥಿಗಳು ಇಂದು ಬೆಳಗ್ಗೆಯಿಂದ ಬೀದರ್ ತಾಲೂಕಿನ ಅಣದೂರು ಬಳಿ ಬೀದರ್ – ಕಲಬುರಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

    ಈ ವೇಳೆ ಸ್ಥಳಕ್ಕೆ ಬಂದ ಜನವಾಡ ಪಿಎಸ್‍ಐ ಶಿವರಾಜ್ ಪಾಟೀಲ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಪ್ರತಿಭಟನೆ ಕೈ ಬಿಡುವಂತೆ ಹೇಳಿದ್ದಾರೆ. ಪಟ್ಟು ಬಿಡದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ ಇದರಿಂದಾಗಿ ಸಚಿನ್ ಮಾಲೆ ಎಂಬ ಕಾಲೇಜು ವಿದ್ಯಾರ್ಥಿಯ ಮೇಲೆ ಪಿಎಸ್‍ಐ ಹಲ್ಲೆ ಮಾಡಿದ್ದಾರೆ.

    ಪ್ರತಿಭಟನಾ ನಿರತ ಶಾಲಾ – ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಪಿಎಸ್‍ಐ ವಿರುದ್ಧ ಇದೀಗ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ವಸತಿ ಯೋಜನೆಯಲ್ಲಿ ಅಕ್ರಮ ಸಾಬೀತು – 7 ಜನ ಪಿಡಿಓಗಳು ಅಮಾನತು

    ವಸತಿ ಯೋಜನೆಯಲ್ಲಿ ಅಕ್ರಮ ಸಾಬೀತು – 7 ಜನ ಪಿಡಿಓಗಳು ಅಮಾನತು

    ಬೀದರ್ : ಭಾಲ್ಕಿ ತಾಲೂಕಿನ ವಿವಿಧ ವಸತಿ ಯೋಜನೆಯಲ್ಲಿ ಅಕ್ರಮ ಸಾಬೀತಾದ ಹಿನ್ನಲೆಯಲ್ಲಿ 7 ಜನ ಪಿಡಿಓಗಳನ್ನು ಅಮಾನತು ಮಾಡಲಾಗಿದೆ.

    ಬೀದರ್‍ನ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ 2015 ರಿಂದ 2019ರವರೆಗೆ ಅನುಷ್ಠಾನಗೊಂಡ ವಿವಿಧ ವಸತಿ ಯೋಜನೆಯಲ್ಲಿ ಅಕ್ರಮ ಸಾಬೀತಾಗಿದೆ. ಈ ಹಿನ್ನಲೆ ಜಿಲ್ಲಾ ಪಂಚಾಯತ್ ಸಿಇಓ ಗ್ಯಾನೇಂದ್ರಕುಮಾರ್ ಈ ಆದೇಶ ಹೊರಡಿಸಿದ್ದಾರೆ.

    ಬಾಳೂರು ಗ್ರಾಮ ಪಂಚಾಯತಿ ಪಿಡಿಓ ಸಂಗಮೇಶ ಸಾವಳೆ, ಬೀರಿ ಗ್ರಾಮಪಂಚಾಯತಿ ಪಿಡಿಓ ಮಲ್ಲೇಶ್ ಮಾರುತಿ, ಜ್ಯಾಂತಿ ಗ್ರಾಮಪಂಚಾಯತಿ ಪಿಡಿಓ ರೇವಪ್ಪ, ಮೊರಂಬಿ ಗ್ರಾಮಪಂಚಾಯತಿ ಪಿಡಿಓ ರೇಖಾ, ತಳವಾಡ ಕೆ ಗ್ರಾಮಪಂಚಾಯತಿ ಪಿಡಿಓ ಚಂದ್ರಶೇಖರ, ವರವಟ್ಟಿ ಗ್ರಾಮಪಂಚಾಯತಿ ಪಿಡಿಓ ಸಂತೋಷ್, ಎಣಕೂರು ಗ್ರಾಮಪಂಚಾಯತಿ ಪಿಡಿಓ ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.

    ವಸತಿ ಯೋಜನೆಯ ಮನೆಗಳನ್ನು ನಿಜವಾದ ಫಲಾನುಭವಿಗಳಿಗೆ ಹಂಚಿಕೆ ಮಾಡದೇ, ತಮ್ಮ ಬೆಂಬಲಿಗರಿಗೆ ಖಂಡ್ರೆ ಹಂಚಿಕೆ ಮಾಡಿದ್ದಾರೆ. ಈ ಮೂಲಕ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ವಸತಿ ಯೋಜನೆಯ ಮನೆಗಳ ಹಂಚಿಕೆಯಲ್ಲಿ ಅಕ್ರಮ ಮಾಡಿದ್ದಾರೆ ಎಂದು ಸಂಸದ ಭಗವಂತ್ ಖೂಬಾ ಆರೋಪ ಮಾಡಿದ್ದರು.

    ಸಂಸದರ ಆರೋಪ ಹಿನ್ನೆಲೆ ರಾಜ್ಯ ಮಟ್ಟದ ಅಧಿಕಾರಿಗಳ ತಂಡ ಭಾಲ್ಕಿಗೆ ಬಂದು ತನಿಖೆ ಮಾಡಿತ್ತು. ಒಟ್ಟು 26 ಸಾವಿರ ವಸತಿಗಳಲ್ಲಿ 9 ಸಾವಿರ ವಸತಿಗಳಲ್ಲಿ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಲಾಗಿತ್ತು. ರಾಜ್ಯ ತಂಡ ತನಿಖೆ ಮಾಡಿ 8 ತಿಂಗಳ ಬಳಿಕ ಜಿಲ್ಲಾ ಪಂಚಾಯತ್ ಅಧಿಕಾರಿಗಳ ವಿರುದ್ಧ ಈ ಕ್ರಮ ತೆಗೆದುಕೊಂಡಿದೆ.