Tag: ಪಬ್ಲಿಕ್ ಟಿವಿ belgaum

  • ರಾಮ ಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ ದೇಣಿಗೆ ನೀಡಿದ ಅಮರಸಿಂಹ ಪಾಟೀಲ

    ರಾಮ ಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ ದೇಣಿಗೆ ನೀಡಿದ ಅಮರಸಿಂಹ ಪಾಟೀಲ

    ಚಿಕ್ಕೋಡಿ: ಐತಿಹಾಸಿಕ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಮಾಜಿ ಸಂಸದ ಅಮರಸಿಂಹ ಪಾಟೀಲ ಅವರು 10 ಲಕ್ಷ ರೂ ದೇಣಿಗೆ ನೀಡಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೋಗೇರಿ ಪಟ್ಟಣದಲ್ಲಿ ಆಯೋಜಿಸಿದ್ದ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಂಸದ ಅಮರಸಿಂಹ ಪಾಟೀಲ ಹಾಗೂ ಅವರ ಕುಟುಂಬ 10 ಲಕ್ಷ ರೂ. ಗಳ ದೇಣಿಗೆಯನ್ನು ಆರ್‍ಎಸ್‍ಎಸ್ ಪ್ರಮುಖರಿಗೆ ಹಸ್ತಾಂತರಿಸಿದರು. ಅಲ್ಲದೆ ರಾಯಬಾಗ ತಾಲೂಕಿನ ಶಿಕ್ಷಣ ಪ್ರಸಾರಕ ಮಂಡಳ ಸಂಸ್ಥೆ ವತಿಯಿಂದ ಸಂಗ್ರಹಿಸಿದ್ದ ದೇಣಿಗೆಯನ್ನೂ ಈ ಸಂದರ್ಭದಲ್ಲಿ ಸಮರ್ಪಿಸಲಾಯಿತು.

    ಈ ವೇಳೆ ಮಾತನಾಡಿದ ವಿಶ್ಚ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಮಹಾಮಂತ್ರಿ ಕೇಶವ ಹೆಗಡೆಯವರು, ಶ್ರೀ ರಾಮ ಮಂದಿರ ನಿರ್ಮಾಣ ವಿಶ್ವಕ್ಕೆ ಮಾದರಿಯಾಗಲಿದೆ. ಭವ್ಯವಾಗಿ ಮಂದಿರ ನಿರ್ಮಾಣವಾಗಲಿದ್ದು ರಾಮ ಕಥಾ ಪಾರ್ಕ್, ರಾಮಾಯಣ ಕಥೆಯ ಪ್ರದರ್ಶನಕ್ಕಾಗಿ ಥೇಟರ್‍ಗಳ ನಿರ್ಮಾಣವಾಗಲಿದೆ. 2023 ರಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆ ಆಗುವುದು ನಿಶ್ಚಿತ ಎಂದರು.

    ಆರ್ ಎಸ್ ಎಸ್ ಪ್ರಮುಖ ಅರವಿಂದ ದೇಶಪಾಂಡೆ ಅವರು, ಅದಾನಿ, ಅಂಬಾನಿ ಮಂದಿರ ಆಗಬಾರದು ಎನ್ನುವ ಕಾರಣಕ್ಕೆ ಮನೆ ಮನೆಯಿಂದ ದುಡ್ಡು ಸಂಗ್ರಹಿಸಿ ರಾಮಮಂದಿರವನ್ನು ರಾಷ್ಟ್ರ ಮಂದಿರವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಆರ್‍ಎಸ್‍ಎಸ್ ಪ್ರಮುಖ ಸಂಜೀವ ಅಡಿಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಬೆಳಗಾವಿಯಲ್ಲಿ ಧಾರಾಕಾರ ಮಳೆ – ಸಿಡಿಲು ಬಡಿದು ಯುವಕ ಸಾವು

    ಬೆಳಗಾವಿಯಲ್ಲಿ ಧಾರಾಕಾರ ಮಳೆ – ಸಿಡಿಲು ಬಡಿದು ಯುವಕ ಸಾವು

    ಬೆಳಗಾವಿ: ಸಿಡಿಲು ಬಡಿದು ಯುವಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ಇಟ್ಟಂಗಿ ಭಟ್ಟಿಯಲ್ಲಿ ನಡೆದಿದೆ.

    ಗುರುನಾಥ ನಾರ್ವೇಕರ್(20) ಮೃತ ದುರ್ದೈವಿ. ಕೆಲ ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಅಸು ಗ್ರಾಮದಿಂದ ಗುರುನಾಥ ಕೆಲಸಕ್ಕಾಗಿ ಆಗಮಿಸಿದ್ದರು. ಆದರೆ ನಿನ್ನೆ ಬೆಳಗಾವಿಯ ಸುತ್ತಮುತ್ತ ಸಂಜೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.

    ಇಟ್ಟಂಗಿ ಭಟ್ಟಿಗೆ ಪ್ಲಾಸ್ಟಿಕ್ ಹೊದಿಕೆ ಹಾಕುತ್ತಿದ್ದಾಗ ಸಿಡಿಲು ಬಡಿದು ಗುರುನಾಥ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೆ ಈ ಘಟನೆ ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಬೆಳಗಾವಿ ಉಪಚುನಾವಣೆಗೆ ಮದ್ಯ ಸಂಗ್ರಹ – 13 ಲಕ್ಷ ಮೌಲ್ಯದ ಮದ್ಯ ಜಪ್ತಿ

    ಬೆಳಗಾವಿ ಉಪಚುನಾವಣೆಗೆ ಮದ್ಯ ಸಂಗ್ರಹ – 13 ಲಕ್ಷ ಮೌಲ್ಯದ ಮದ್ಯ ಜಪ್ತಿ

    ಬೆಳಗಾವಿ: ಲಕ್ಷಾಂತರ ರೂಪಾಯಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಇಬ್ಬರು ವ್ಯಕ್ತಿಗಳು ಆರ್ಮಿ ಮತ್ತು ಅಂತಾರಾಜ್ಯ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಸಿಬಿಐ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ಡಿಸಿಪಿ ವಿಕ್ರಮ್ ಆಮ್ಟೆ ನೇತೃತ್ವದ ಸಿಸಿಐಬಿ ಎಸಿಪಿ ನಾರಾಯಣ ಭರಮನಿ, ಪಿಐ ಸಂಜೀವ ಕಾಂಬಳೆ ತಂಡ ಕಾರ್ಯಾಚರಣೆ ನಡೆಸಿದೆ.

    ಈ ವೇಳೆ ರಾಜೇಶ್ ನಾಯಿಕ, ಶಂಕರ್ ದೇಸನೂರ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ಬಳಿ ಇದ್ದ ವಿವಿಧ ಬ್ರ್ಯಾಂಡ್‍ನ 13 ಲಕ್ಷ ಮೌಲ್ಯದ 547 ಮದ್ಯದ ಬಾಟಲಿಗಳನ್ನು ಹಾಗೂ 1 ಕಾರನ್ನು ವಶಪಡಿಸಿಕೊಂಡಿದ್ದಾರೆ.

    ಪ್ರಾಥಮಿಕ ತನಿಖೆಯಲ್ಲಿ ಮುಂಬರುವ ಲೋಕಸಭೆ ಉಪ ಚುನಾವಣೆ ಸಮಯದಲ್ಲಿ ಮಾರಾಟ ಮಾಡಲು ಮದ್ಯ ಬಾಟಲಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

  • ಕೆಪಿಎಸ್‍ಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ – ಮತ್ತೋರ್ವ ಆರೋಪಿ ಅರೆಸ್ಟ್

    ಕೆಪಿಎಸ್‍ಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ – ಮತ್ತೋರ್ವ ಆರೋಪಿ ಅರೆಸ್ಟ್

    ಬೆಳಗಾವಿ: ಕೆಪಿಎಸ್‍ಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಮತ್ತೋರ್ವ ಆರೋಪಿಯನ್ನು ಗೋಕಾಕ್‍ನಲ್ಲಿ ಬಂಧಿಸಲಾಗಿದೆ.

    ಬಂಧಿತ ಆರೋಪಿ ಸಂಗನಕೇರಿ ಗ್ರಾಮದ ಶಿವಲಿಂಗ ಪಾಟೀಲ್ ಆಗಿದ್ದು, ಈತ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ಜ್ಞಾನದೀಪ ಕೋಚಿಂಗ್ ಸೆಂಟರ್ ನಡೆಸುತ್ತಿದ್ದನು. ಆದರೆ ಎರಡು ವರ್ಷದ ಹಿಂದೆ ಕೋಚಿಂಗ್ ಸೆಂಟರ್ ಕ್ಲೋಸ್ ಮಾಡಿದ್ದನು. ಈ ಮುನ್ನ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಿವಲಿಂಗ ಪಾಟೀಲ್, ಎರಡು ವರ್ಷಗಳಿಂದ ತಲೆಮರೆಸಿಕೊಂಡು ಅಡ್ಡಾಡುತ್ತಿದ್ದನು.

    ಕೆಪಿಎಸ್‍ಸಿ ಪ್ರಶ್ನೆಪತ್ರಿಕೆ ಕೀ ಆನ್ಸರ್ ಸೋರಿಕೆ ಪ್ರಕರಣದಲ್ಲಿ ಶಿವಲಿಂಗ ಪಾಟೀಲ್ ಕೂಡ ಭಾಗಿಯಾಗಿರುವುದಾಗಿ ಬೆಂಗಳೂರು ಸಿಸಿಬಿ ಪೊಲೀಸರು, ಬೆಳಗಾವಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಎರಡು ದಿನಗಳ ಹಿಂದೆ ಶಿವಲಿಂಗ ಪಾಟೀಲ್ ಬಂಧಿಸಿದ್ದಾರೆ. ಇದೀಗ ಆರೋಪಿ ಶಿವಲಿಂಗ ಪಾಟೀಲ್‍ನನ್ನು ಬೆಂಗಳೂರು ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

  • ಸುಂದರಿಗಾಗಿ ಸ್ಪಾಗೆ ಹೋದವರು ಹನಿಟ್ರ್ಯಾಪ್ ಖೆಡ್ಡಾಕ್ಕೆ

    ಸುಂದರಿಗಾಗಿ ಸ್ಪಾಗೆ ಹೋದವರು ಹನಿಟ್ರ್ಯಾಪ್ ಖೆಡ್ಡಾಕ್ಕೆ

    – ಶ್ರೀಮಂತರ ಮಕ್ಕಳೇ ಇವರ ಟಾರ್ಗೆಟ್

    ಬೆಳಗಾವಿ: ಹನಿಟ್ರ್ಯಾಪ್ ಗ್ಯಾಂಗ್ ಮೇಲೆ ಸಿಇಎನ್ ಪೊಲೀಸರು ದಾಳಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕುಂದಾನಗರಿಯಲ್ಲಿ ನಡೆದಿದೆ.

    ಗ್ಯಾಂಗ್‍ವೊಂದು ಮಸಾಜ್ ಮತ್ತು ಸ್ಪಾ ಸೆಂಟರ್ ನಡೆಸುವುದಾಗಿ ಅನುಮತಿ ಪಡೆದು ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿದ್ದ ನ್ಯೂ ಗೆಟ್ ವೇ ಯುನಿಸೆಕ್ಸ್ ಸ್ಪಾ ಹೆಸರಿನಲ್ಲಿರುವ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕೇದಾರಿ ಶಿಂಧೆ, ಪ್ರಕಾಶ್ ಯಳ್ಳೂರ್ಕರ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಬಳಿಕ ತನಿಖೆ ವೇಳೆ ಈ ಗ್ಯಾಂಗ್‍ನ ಪ್ರಮುಖ ಟಾರ್ಗೆಟ್ ಶ್ರೀಮಂತ ಯುವಕರು ಎಂದು ತಿಳಿದು ಬಂದಿದೆ. ಆನ್‍ಲೈನ್ ಮೂಲಕ ಬಣ್ಣ ಬಣ್ಣದ ಹುಡುಗಿಯರ ಫೋಟೋ ತೋರಿಸುವ ಮೂಲಕ ಶ್ರೀಮಂತ ಯುವಕರನ್ನು ಬಲೆಗೆ ಹಾಕಿಕೊಂಡು ಹನಿಟ್ರ್ಯಾಪ್ ನಡೆಸುತ್ತಿದ್ದರು ಎಂಬ ಅಸಲಿ ಸತ್ಯ ಬಯಲಾಗಿದೆ.

    ಇನ್ನೂ ಘಟನೆಯಲ್ಲಿ ಪೊಲೀಸರು ಮೂವರು ಯುವತಿಯರನ್ನು ರಕ್ಷಣೆ ಮಾಡಿ ಅವರನ್ನು ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ. ಇದೀಗ ಪ್ರಕರಣ ಕುರಿತಂತೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

  • ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಪ್ರತ್ಯಕ್ಷ – ಪವಾಡ ವೀಕ್ಷಿಸಲು ದೇವಾಲಯದತ್ತ ಸೇರಿದ ಜನರ ದಂಡು

    ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಪ್ರತ್ಯಕ್ಷ – ಪವಾಡ ವೀಕ್ಷಿಸಲು ದೇವಾಲಯದತ್ತ ಸೇರಿದ ಜನರ ದಂಡು

    ಬೆಳಗಾವಿ: ಕಲ್ಲಿನ ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂಬ ವದಂತಿ ಬೆಳಗಾವಿ ಜಿಲ್ಲೆಯ ಗೋಕಾಕ್‍ನಲ್ಲಿ ಹರಿದಾಡುತ್ತಿದೆ. ಶಿವಲಿಂಗ ಮೂರ್ತಿಯನ್ನು ನೋಡಲು ದೇವಾಲಯದತ್ತ ಭಕ್ತಸಾಗರವೇ ಹರಿದುಬರುತ್ತಿದೆ.

    ಬೆಳಗಾವಿ ಜಿಲ್ಲೆ ಗೋಕಾಕ್‍ನ ಬಣಗಾರ ಗಲ್ಲಿಯಲ್ಲಿನ ಶಂಕರಲಿಂಗ ದೇವಸ್ಥಾನದಲ್ಲಿ ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎಂದು ದೇವಾಲಯದ ಅರ್ಚಕರು ಹೇಳುತ್ತಿದ್ದಾರೆ. ಅದನ್ನು ನೋಡಲು ಭಕ್ತರು ತಂಡೋಪತಂಡವಾಗಿ ಶಂಕರಲಿಂಗ ದೇವಾಲಯಕ್ಕೆ ಬರುತ್ತಿದ್ದಾರೆ.

    ಶಿವಲಿಂಗ ವೀಕ್ಷಿಸಿದ ಜನರು ಇಂದು ರಾತ್ರಿ ಸಂಕಷ್ಠಿ ಚಂದ್ರೋದಯ ಸಮಯದಲ್ಲಿ ಕಲ್ಲಿನ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ದೇವಾಲಯದ ಆರ್ಚಕರು ಈ ಹಿಂದೆ 2004 ರಲ್ಲಿಯೂ ಇದೇ ರೀತಿ ಶಿವಲಿಂಗದಲ್ಲಿ ಕಣ್ಣುಗಳು ಪ್ರತ್ಯಕ್ಷವಾಗಿದ್ದವು. ಇದೀಗ ಪುನಃ ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಪ್ರತ್ಯಕ್ಷವಾಗಿದೆ. ಇದು ಶುಭ ಸಂದೇಶವಾಗಿದ್ದು ಜಗತ್ತಿನಲ್ಲಿರುವ ರೋಗರುಜಿನ ಹೋಗುತ್ತದೆ ಎಂದು ಹೇಳುತ್ತಿದ್ದಾರೆ.

    ಈ ಹಿಂದೆ ಸಾಯಿಬಾಬಾ ಫೋಟೋದಲ್ಲಿ ವಿಭೂತಿ ಉದುರಿತ್ತು, ಗಣೇಶ ಹಾಲು ಕುಡಿದಿತ್ತು, ಹೀಗೆ ಹಲವಾರು ರೀತಿಯ ವದಂತಿಗಳು ಹಬ್ಬಿದ್ದವು. ಇದೀಗ ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂದು ಜನ ದಂಡೇ ದೇವಾಲಯದತ್ತಾ ಹರಿದುಬರುತ್ತಿದೆ.

  • ಆಸ್ತಿ ವಿವಾದದಿಂದ 4 ವರ್ಷದ ಕಂದಮ್ಮನನ್ನು ಕೊಂದು ಆರೋಪಿ ಎಸ್ಕೇಪ್

    ಆಸ್ತಿ ವಿವಾದದಿಂದ 4 ವರ್ಷದ ಕಂದಮ್ಮನನ್ನು ಕೊಂದು ಆರೋಪಿ ಎಸ್ಕೇಪ್

    ಬೆಳಗಾವಿ: ಆಸ್ತಿಗಾಗಿ ಅಣ್ಣ- ತಮ್ಮಂದಿರು ಕಿತ್ತಾಡಿಕೊಂಡಿರುವುದು, ಬಡಿದಾಡಿಕೊಂಡಿರುವುದನ್ನು ನೋಡಿದ್ದೇವೆ. ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿ ವಿವಾದವನ್ನು ಬಗೆಹರಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಆಸ್ತಿ ವಿವಾದದ ವಿಚಾರದಲ್ಲಿ ಇಲ್ಲೋರ್ವ ಪಾಪಿ ಮುಗ್ಧ ಕಂದಮ್ಮನನ್ನು ಬಲಿ ಪಡೆದುಕೊಂಡಿದ್ದಾನೆ.

    ಆಸ್ತಿ ವಿವಾದದ ಹಿನ್ನೆಲೆ ನಾಲ್ಕು ವರ್ಷದ ಬಾಲಕನನ್ನು ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸಮೀಪದ ಹಾರೂಗೊಪ್ಪ ಗ್ರಾಮದಲ್ಲಿ ಜರಗಿದೆ. ಕೊಲೆಯಾದ ಮಗುವನ್ನು ವಿರೇಶ ಸಂಕಣ್ಣ(4) ಎಂದು ಗುರುತಿಸಲಾಗಿದೆ. ಈ ಮುಗ್ಧ ಕಂದಮ್ಮನನ್ನು ಈರಪ್ಪ ಬಸಪ್ಪ ಸಂಕಣ್ಣ ಎಂಬವನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

    ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುರಗೋಡ ಠಾಣೆಯ ಪೊಲೀಸರು, ಆಸ್ತಿ ವಿವಾದದಿಂದಲೇ ಆರೋಪಿ ಈರಪ್ಪ ಬಸಣ್ಣ ಮಗುವನ್ನು ಹತ್ಯೆಗೈದಿದ್ದಾನೆ ಎಂದು ತಿಳಿಸಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಲು ಆರಂಭಿಸಿದ್ದಾರೆ.

  • ಕರುನಾಡಿನಲ್ಲಿಯೇ ಕನ್ನಡಕ್ಕೆ ಅಪಮಾನ – ರಾಜ್ಯ ಸರ್ಕಾರ ಕಾರ್ಯಕ್ರಮದಲ್ಲಿ ಮರಾಠಿ ಪ್ರೇಮ

    ಕರುನಾಡಿನಲ್ಲಿಯೇ ಕನ್ನಡಕ್ಕೆ ಅಪಮಾನ – ರಾಜ್ಯ ಸರ್ಕಾರ ಕಾರ್ಯಕ್ರಮದಲ್ಲಿ ಮರಾಠಿ ಪ್ರೇಮ

    ಬೆಳಗಾವಿ: ರಾಜ್ಯ ಸರ್ಕಾರ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಗೆ ಅಪಮಾನ ಮಾಡಿ ಮರಾಠಿಗೆ ಮಣೆ ಹಾಕಲಾಗಿದೆ.

    ಒಂದೆಡೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬೆಳಗಾವಿ ಗಡಿ ವಿಚಾರವಾಗಿ ಕ್ಯಾತೆ ತೆಗೆದಿದ್ದಾರೆ. ಮತ್ತೊಂದೆಡೆ ಇದೀಗ ಕರ್ನಾಟಕದ ಸಚಿವರು ಮರಾಠಿ ಪ್ರೇಮ ಮೆರೆದಿದ್ದಾರೆ. ಇಂದು ಬೆಳಗಾವಿಯ ನಿಪ್ಪಾಣಿ ನಗರದಲ್ಲಿನ ತಾಯಿ-ಮಗು ಆಸ್ಪತ್ರೆ ಉದ್ಘಾಟನಾ ಸಮಾರಂಭಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಆರೋಗ್ಯ ಸಚಿವ ಸುಧಾಕರ್ ಆಗಮಿಸಿದ್ದರು.

    ಬೆಳಗಾವಿ ಸಚಿವೆ ಶಶಿಕಲಾ ಜೊಲ್ಲೆ ಕ್ಷೇತ್ರದಲ್ಲಿಯೇ ಈ ಕಾರ್ಯಕ್ರಮ ನಡೆಸಲಾಗಿದ್ದು, ಸ್ವಾಗತ ಕೋರುವುದರಿಂದ ಹಿಡಿದು ಬಹುತೇಕ ಭಾಷಣ ಮರಾಠಿ ಭಾಷೆಯಲ್ಲಿಯೇ ನಡೆಸಿದರು. ಜೊತೆಗೆ ಅಲ್ಲಿನ ಆಯೋಜಕರು ಸ್ವಾಗತ ಗೀತೆಯನ್ನು ಕೂಡ ಮರಾಠಿ ಭಾಷೆಯಲ್ಲಿಯೇ ಹಾಡಿಸಿದ್ದಾರೆ. ರಾಜ್ಯ ಸರ್ಕಾರ ಕಾರ್ಯಕ್ರಮದಲ್ಲಿಯೇ ಕನ್ನಡ ಭಾಷೆಯನ್ನು ಬಳಸದೇ ಮರಾಠಿ ಭಾಷೆಗೆ ಆದ್ಯತೆ ನೀಡಿದ್ದರಿಂದ ಸರ್ಕಾರದ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಭಾನುವಾರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕರ್ನಾಟಕ ಆಕ್ರಮಿತ ಕೆಲ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಿದ್ದೇವೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಕುರಿತಂತೆ ರಾಜ್ಯಾದ್ಯಂತ ಕನ್ನಡಿಗರು ಕಿಡಿಕಾರುತ್ತಿದ್ದಾರೆ. ಈ ನಡುವೆ ಇಂದು ನಡೆದ ಬೆಳಗಾವಿ ಸರ್ಕಾರಿ ಕಾರ್ಯಕ್ರದಲ್ಲಿ ಮರಾಠಿ ಭಾಷೆ ಬಳಸಿರುವುದು ಕನ್ನಡಿಗರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.

  • ಅಮಿತ್ ಶಾ ಸ್ವಾಗತಿಸಲು ಬಿಜೆಪಿ ನಾಯಕಿಯರ ಜಟಾಪಟಿ

    ಅಮಿತ್ ಶಾ ಸ್ವಾಗತಿಸಲು ಬಿಜೆಪಿ ನಾಯಕಿಯರ ಜಟಾಪಟಿ

    – ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕಿತ್ತಾಟ

    ಬೆಳಗಾವಿ: ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿರುವ ಹಿನ್ನೆಲೆ ಅವರನ್ನು ಸ್ವಾಗತಿಸಲು ಬಿಜೆಪಿ ಮಹಿಳಾ ನಾಯಕಿಯರಿಬ್ಬರ ನಡುವೆ ಮುಸುಕಿನ ಗುದ್ದಾಟ ನಡೆದಿದೆ.

    ಒಂದೆಡೆ ಅಮಿತ್ ಶಾ ಬೆಳಗಾವಿ ಭೇಟಿಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಅಮಿತ್ ಶಾ ಅವರನ್ನು ಬರಮಾಡಿಕೊಳ್ಳಲು ಬಿಜೆಪಿ ನಾಯಕಿಯರಾದ ಡಾ.ಸೋನಾಲಿ ಸೋರ್ನಾಬತ್, ದೀಪಾ ಕುಡಚಿ ನಾ ಮುಂದು ತಾ ಮುಂದು ಎಂದು ಜಟಾಪಟಿ ನಡೆಸಿದ್ದರು.

    ಸಾಂಬ್ರಾ ಏರ್‍ಪೋರ್ಟ್ ಗೆ ಬಂದ ಅಮಿತ್ ಶಾರನ್ನು ಸ್ವಾಗತ ಕೋರಲು ಡಾ.ಸೋನಾಲಿ ಸೋರ್ನಾಬತ್ ಏರ್‍ಪೋರ್ಟ್ ಒಳಗೆ ಹೋಗಿದ್ದಾರೆ. ಇದಕ್ಕೆ ಮಹಿಳಾ ನಾಯಕಿ ದೀಪಾ ಕುಡಚಿ ಪಾಸ್ ಇಲ್ಲದೇ ಒಳಗೆ ಹೇಗೆ ಬಿಟ್ರಿ, ಸ್ವಾಗತ ಸಮಿತಿ ಲಿಸ್ಟ್‍ನಲ್ಲಿ ಅವರ ಹೆಸರಿಲ್ಲ ಎಂದು ತಗಾದೆ ತೆಗೆದಿದ್ದರು.

    ಈ ಕುರಿತಂತೆ ಬಿಜೆಪಿ ನಾಯಕರ ಬಳಿ ದೀಪಾ ಕುಡಚಿ ಪಾಸ್ ಅಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಬಿಜೆಪಿಯ ಅಲ್ಲಿನ ಸ್ಥಳೀಯ ನಾಯಕರಾದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ ಬೆನಕೆ, ಮಹೇಶ್ ಕುಮಟ್ಟಳ್ಳಿ ಹೂಗುಚ್ಛ ನೀಡಿ ಸ್ವಾಗತಿಸಿದರು.

  • ಅಮಿತ್ ಶಾ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ರೈತರು ಪೊಲೀಸರ ವಶಕ್ಕೆ

    ಅಮಿತ್ ಶಾ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ರೈತರು ಪೊಲೀಸರ ವಶಕ್ಕೆ

    ಬೆಳಗಾವಿ: ಬೆಳಗಾವಿ ಜಿಲ್ಲೆಗೆ ಕೆಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡುತ್ತಿರುವ ಹಿನ್ನೆಲೆ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯಿದೆ ವಿರೋಧಿಸಿ ದೇಶಾದ್ಯಂತ ಕಳೆದ 4 ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಶನಿವಾರ ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ನೂತನ ಕೃಷಿ ಕಾಯಿದೆಯನ್ನು ರದ್ದುಗೊಳಿಸುವಂತೆ ಅಮೀತ್ ಶಾ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಲು ರೈತರು ಮುಂದಾಗಿದ್ದಾರೆ.

    ಬೆಳಗ್ಗೆಯಿಂದಲೂ ಸಹ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ರೈತರು ಬೆಳಗಾವಿಯ ಡಿಸಿ ಕಚೇರಿ ಮುಂಭಾಗ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಪ್ರಾರಂಭಿಸಿದ್ದರು. ಇದೇ ವೇಳೆ ಪೊಲೀಸರು ರೈತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರೈತ ಮಹಿಳೆ ಜಯಶ್ರೀ ಗೂರನ್ನವರ ಚೂನಪ್ಪ ಪೂಜೇರಿ ಸೇರಿದಂತೆ ಹಲವು ಪ್ರತಿಭಟನಾ ನಿರತ ರೈತರನ್ನು ಬಲವಂತವಾಗಿ ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ. ಹೀಗಾಗಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಬಾಯಿ ಬಡೆದುಕೊಂಡು ರೈತರು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೂ ಸುಮಾರು 20 ಕ್ಕೂ ಹೆಚ್ಚು ಜನ ರೈತರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.