Tag: ಪಬ್ಲಿಕ್ ಟಿವಿ Bangalore

  • ಬೆಂಗಳೂರಿನಲ್ಲಿ ಕೊರೊನಾ ಕರಿನೆರಳು – ಈ ಬಾರಿ ಇಲ್ಲ ಫ್ಲವರ್ ಶೋ

    ಬೆಂಗಳೂರಿನಲ್ಲಿ ಕೊರೊನಾ ಕರಿನೆರಳು – ಈ ಬಾರಿ ಇಲ್ಲ ಫ್ಲವರ್ ಶೋ

    ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಇನ್ನೂ ಮೂರು ದಿನ ಬಾಕಿಯಿದೆ. ಆದರೆ ಪ್ರತಿ ವರ್ಷ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್‍ಬಾಗ್‍ನಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನ ಈ ಬಾರಿ ರದ್ದಾಗಿದೆ.

    ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾದ ಫಲಪುಷ್ಪ ರದ್ದತಿ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಕುಸುಮಾ, ಕೊರೊನಾ ಭೀತಿ ಹಿನ್ನೆಲೆ ಫ್ಲವರ್ ಶೋವನ್ನು ಕೈ ಬಿಟ್ಟಿದ್ದೇವೆ. ಪ್ರತಿವರ್ಷ ಐದು ಲಕ್ಷಕ್ಕೂ ಹೆಚ್ಚು ಮಂದಿ ಫ್ಲವರ್ ಶೋ ವೀಕ್ಷಣೆ ಮಾಡುತ್ತಿದ್ದರು ಎಂದು ಹೇಳಿದರು.

    ಒಂದು ಪ್ರದರ್ಶನಕ್ಕೆ ಎರಡು ಕೋಟಿಗೂ ಅಧಿಕ ವೆಚ್ಚ ತಗುಲುತ್ತಿತ್ತು. ಫ್ಲವರ್ ಶೋ ವೇಳೆ ಹೆಚ್ಚು ಜನ ಉದ್ಯಾನವನಕ್ಕೆ ಬರುತ್ತಾರೆ. ಈ ವೇಳೆ ಕ್ರೌಡ್ ಕಂಟ್ರೋಲ್ ಮಾಡುವುದು ಅಸಾಧ್ಯ. 1912 ರಿಂದ ಆರಂಭವಾದ ಪ್ಲವರ್ ಶೋ ಸುಮಾರು 109 ವರ್ಷಗಳ ಕಾಲ ಸತತವಾಗಿ ಆಚರಿಸಿಕೊಂಡು ಬಂದಿದೆ ಎಂದು ತಿಳಿಸಿದರು.

    ತೋಟಗಾರಿಕೆ ಇಲಾಖೆ ಈ ವರ್ಷ ಆಯೋಜನೆ ಮಾಡುವ ಲೆಕ್ಕಾಚಾರ ಇಟ್ಟುಕೊಂಡಿತ್ತು. ಈ ಬಗ್ಗೆ ಬಿಬಿಎಂಪಿಗೆ ತೋಟಗಾರಿಕೆ ಇಲಾಖೆ ಅಭಿಪ್ರಾಯ ಕೇಳಿತ್ತು. ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಫಲಪುಷ್ಪ ಪ್ರದರ್ಶನ ಆಯೋಜಿಸುವುದಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಈ ವರ್ಷದ ಫ್ಲವರ್ ಶೋವನ್ನು ತೋಟಗಾರಿಕೆ ಇಲಾಖೆ ಕೈ ಬಿಟ್ಟಿದೆ ಎಂದರು.

    ಕೋವಿಡ್ 19 ನಿಂದಾಗಿ ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಬೇಕಿದ್ದ ಫ್ಲವರ್ ಶೋ ರದ್ದಾಗಿತ್ತು. ಈಗ ಮತ್ತೊಮ್ಮೆ ಕೊರೊನಾ ಕಾರಣದಿಂದಾಗಿ ಫ್ಲವರ್ ಶೋ ರದ್ದಾಗಿದೆ.

  • ಸ್ಫೋಟದಲ್ಲಿ ಡೈನಾಮೈಟ್ ಬಳಕೆ ಬಯಲು: ಬಸವರಾಜ್ ಬೊಮ್ಮಾಯಿ

    ಸ್ಫೋಟದಲ್ಲಿ ಡೈನಾಮೈಟ್ ಬಳಕೆ ಬಯಲು: ಬಸವರಾಜ್ ಬೊಮ್ಮಾಯಿ

    ಬೆಂಗಳೂರು: ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ದೊಡ್ಡ ಪ್ರಮಾಣದ ಡೈನಾಮೈಟ್ ಬಳಕೆ ಆಗಿರುವ ವಿಚಾರ ತಿಳಿದು ಬಂದಿದೆ. ಹೀಗಾಗಿ ಈ ಕುರಿತಂತೆ ತನಿಖೆ ನಡೆಸಿ ಗಂಭೀರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ದೊಡ್ಡ ಪ್ರಮಾಣದ ಡೈನಾಮೈಟ್ ಬಳಕೆ ಆಗಿರುವುದು ತಿಳಿದುಬಂದಿದೆ. ನಾಲ್ಕು ಜಿಲ್ಲೆಗೆ ಅದರ ಪರಿಣಾಮ ಆಗಿದೆ. ಹಿಂದೆ ಎಂದೂ ಇಂತಹ ಸ್ಫೋಟ ಸಂಭವಿಸಿರಲಿಲ್ಲ. ಎಂಪಿ, ಎಂಎಲ್‍ಎಗಳು ಘಟನಾ ಸ್ಥಳದಲ್ಲಿಯೇ ಇದ್ದಾರೆ. ಅವರೆಲ್ಲರಿಂದ ಮಾಹಿತಿಗಳನ್ನು ಪಡೆಯುತ್ತಿದ್ದೇನೆ. ಪ್ರಕರಣ ಕುರಿತಂತೆ ಸಮಗ್ರ ತನಿಖೆ ಮಾಡಿಸಿ, ಯಾರೇ ತಪ್ಪಿತಸ್ಥರಾಗಿದ್ದರು ಕೂಡ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

    ಲಾರಿಗಳಲ್ಲಿ ಇಂತಹ ಸ್ಫೋಟಕಗಳ ಸಾಗಣೆ ಇರುವ ನಿಯಮಗಳ ಬಗ್ಗೆ ಮರು ಚರ್ಚೆ ಆಗಬೇಕು. ಈ ಕುರಿತು ಗಣಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ, ನಿಯಮ ಸಡಿಲಿಕೆ ಇರುವ ಬಗೆಗೆ ಮರು ಚಿಂತನೆ ನಡೆಸುತ್ತೇನೆ. ಘಟನೆ ವಿಚಾರವಾಗಿ ಉನ್ನತ ಮಟ್ಟದ ತನಿಖೆಗೆ ಈಗಾಗಲೇ ಸಿಎಂ ಸೂಚನೆ ನೀಡಿದ್ದಾರೆ. ಪ್ರಾಥಮಿಕ ತನಿಖಾ ವರದಿ ಇಂದು ಸಂಜೆ ಬರಲಿದ್ದು, ಯಾರ ಕೈನಿಂದ ತನಿಖೆ ಮಾಡಿಸಬೇಕು ಎಂದು ಪ್ರಾಥಮಿಕ ವರದಿ ಬಂದ ನಂತರ ತಿಳಿಸುವುದಾಗಿ ಹೇಳಿದರು.

    ಸದ್ಯ ಕ್ವಾರಿ ಓನರ್ ಮತ್ತು ಸ್ಫೋಟಕ ಸಪ್ಲೈ ಮಾಡಿದವರ ವಿಚಾರವಾಗಿ ತನಿಖೆ ನಡೆಸಲಾಗುತ್ತಿದ್ದು, ಕ್ವಾರಿಗೆ ಅನುಮತಿ ಇತ್ತಾ? ಅಥವಾ ಅದರ ಅವಧಿ ಮುಕ್ತಾಯ ಆಗಿದೆಯಾ? ಸ್ಫೋಟಕ ಸಪ್ಲೈಯನ್ನು ನಿಯಮಾನುಸಾರ ಮಾಡಿದ್ದಾರಾ? ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಸಂಪೂರ್ಣ ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಬೊಮ್ಮಾಯಿ ಹೇಳಿದರು.

  • 15 ದಿನಗಳಲ್ಲಿ ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ

    15 ದಿನಗಳಲ್ಲಿ ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ

    ಬೆಂಗಳೂರು: ಕೋವಿಡ್ ನಿಂದಾಗಿ ರಾಜ್ಯ ಸರಕಾರವು ಗುತ್ತಿಗೆದಾರರ ವಹಿವಾಟುಗಳಿಗೆ ತಾತ್ಕಾಲಿಕವಾಗಿ ಕೆಲವು ತಿಂಗಳುಗಳಿಂದ ಹಲವು ನಿರ್ಬಂಧಗಳನ್ನು ಹೇರಿದೆ. ಇದರ ಪರಿಣಾಮ ರಾಜ್ಯದ ಒಂದು ಲಕ್ಷಕ್ಕೂ ಅಧಿಕ ನೋಂದಾಯಿತ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಈಡಾಗಲಿದ್ದು, ಗುತ್ತಿಗೆದಾರರ ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ಎಚ್ಚರಿಕೆ ನೀಡಿದ್ದಾರೆ.

    ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಾಕಿ ಉಳಿದಿರುವ ಬಿಲ್ ಗಳಿಗೆ ಹಣ ಬಿಡುಗಡೆ ಮಾಡುವುದು ಹಾಗೂ ಪ್ಯಾಕೇಜ್ ಪದ್ದತಿಯ ಅಡಿಯಲ್ಲಿ ಟೆಂಡರ್ ಕರೆಯುವುದನ್ನು ರದ್ದುಪಡಿಸುವಂತೆ ಹಲವಾರು ಬಾರಿ ಮಾನ್ಯ ಮುಖ್ಯಮಂತ್ರಿಗಳಲ್ಲಿ, ಮಾನ್ಯ ಸಚಿವರುಗಳಲ್ಲಿ ಹಾಗೂ ಉನ್ನತ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದರೂ ಉಪಯೋಗವಾಗಿಲ್ಲ ಎಂದು ಹೇಳಿದ್ದಾರೆ.

    ಗುತ್ತಿಗೆದಾರರ ಬೇಡಿಕೆಗಳು ಏನು?
    * ಟೆಂಡರ್‍ನಲ್ಲಿ ಭಾಗವಹಿಸದಂತೆ ನಿರ್ಬಂಧಿಸುತ್ತಿರುವ ಕುರಿತು : ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕೆಲವು ಅಧಿಕಾರಿಗಳು ಗುತ್ತಿಗೆದಾರರಿಗೆ ಸರಕಾರಿ ಟೆಂಡರ್‍ಗಳಲ್ಲಿ ಭಾಗವಹಿಸದಂತೆ ನಿರ್ಬಂಧವನ್ನು ಹೇರುತ್ತಿದ್ದಾರೆ. ಇದರ ಹೊರತಾಗಿ ಗುತ್ತಿಗೆದಾರರು ಟೆಂಡರ್‍ನಲ್ಲಿ ಭಾಗವಹಿಸಿ ಬಿಡ್ ಸಲ್ಲಿಸಿದ ನಂತರವೂ ಟೆಂಡರನ್ನು ಹಿಂಪಡೆಯುವಂತೆ ಒತ್ತಡ ತಂತ್ರವನ್ನು ಅನುಸರಿಸುತ್ತಿದ್ದಾರೆ. ಇದರಿಂದ ಟೆಂಡರ್‍ನಲ್ಲಿ ಸ್ಪರ್ಧಾತ್ಮಕ ದರಗಳಿಂದ ವಂಚಿತವಾಗಿ ಹೆಚ್ಚಿನ ಪಾರದರ್ಶಕತೆಗೆ ಅವಕಾಶವಿಲ್ಲದೆ ರಾಜ್ಯದ ತೆರಿಗೆದಾರರ ಹಣ ವ್ಯರ್ಥವಾಗುತ್ತಿದ್ದು ಗುತ್ತಿಗೆದಾರರ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತಿದೆ ಎಂದರು.

    *ಗುತ್ತಿಗೆದಾರರ ಬಾಕಿ ಉಳಿದಿರುವ ಬಿಲ್ಲುಗಳಿಗೆ ಹಣ ಪಾವತಿ: ಕಳೆದ ಹಲವಾರು ತಿಂಗಳುಗಳಿಂದ ಸರಕಾರದ ಹಲವಾರು ಇಲಾಖೆಗಳಿಂದ ಗುತ್ತಿಗೆದಾರರಿಗೆ ಬಿಲ್ಲುಗಳನ್ನು ನೀಡಲಾಗಿರುವುದಿಲ್ಲ. ಬಾಕಿ ಬಿಲ್ ಗಳಿಗೆ ಹಣಪಾವತಿಸುವ ಸಮಯದಲ್ಲಿ ಸರಕಾರದ ಆದೇಶ ಸಂಖ್ಯೆ: ನಂ.ಪಿಡಬ್ಲೂಡಿ/260/ಎಸ್‍ಓಎಫ್‍ಸಿ/2001(ಪಿ) 2000 ಸೆಪ್ಟೆಂಬರ್ 25 ರಲ್ಲಿ ಸೂಚಿಸಿರುವಂತೆ ಗುತ್ತಿಗೆದಾರರ ಬಾಕಿ ಉಳಿದಿರುವ ಬಿಲ್ಲುಗಳಿಗೆ ಶೇ.80 ರಷ್ಟು ಹಣ ಬಿಡುಗಡೆ ಮಾಡುವುದನ್ನು ಜೇಷ್ಠತೆ ಆಧಾರದ ಮೇಲೆ ಕಡ್ಡಾಯ ಮಾಡಿದೆ. ಈ ಆಧಾರದಲ್ಲಿ ಅಂದರೆ ಡಿ.ಬಿ.ಆರ್ ಸಂಖ್ಯೆ ಅನುಗುಣವಾಗಿ ಜೇಷ್ಠತೆ ಮೇಲೆ ಹಣ ಬಿಡುಗಡೆ ಮಾಡಬೇಕು. ಅಲ್ಲದೆ, ಸ್ಟಾಂಡರ್ಡ್ ಬಿಡ್ ಗೆ ಸೇರಿಸಿ ನೀಡಬೇಕು ಎಂದರು.

    * ಪ್ಯಾಕೇಜ್ ಪದ್ದತಿಯನ್ನು ರದ್ದಗೊಳಿಸಿ: ಪ್ಯಾಕೇಜ್ ಪದ್ದತಿಯಲ್ಲಿ ಟೆಂಡರ್ ಗಳನ್ನು ಕರೆಯುತ್ತಿರುವುದರಿಂದ ನಮ್ಮ ರಾಜ್ಯದ ಸ್ಥಳೀಯ ಗುತ್ತಿಗೆದಾರರಿಗೆ ಟೆಂಡರ್‍ನಲ್ಲಿ ಭಾಗವಹಿಸದಂತಹ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿ ದೊರೆಯದಂತಹ ಪರಿಸ್ಥಿತಿ ಎದುರಾಗಿದೆ. ಅಲ್ಲದೆ, ಇದು ಹೊರ ರಾಜ್ಯದ ಗುತ್ತಿಗೆದಾರರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಆದ್ದರಿಂದ ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್ ಪದ್ದತಿಯಲ್ಲಿ ಟೆಂಡರ್ ಕರೆಯುವುದನ್ನು ನಿಲ್ಲಿಸಿ ಒಂದೊಂದು ಕಾಮಗಾರಿಗಳಿಗೂ ಪ್ರತ್ಯೇಕವಾಗಿ ಟೆಂಡರ್ ಕರೆಯುವಂತೆ ಅವರು ಮನವಿ ಮಾಡಿದರು.

    * ಮಾದರಿ ಟೆಂಡರ್ ದಾಖಲೆ ರಚನಾ ಸಮಿತಿಗೆ ಮನವಿ: ದ್ವಿ ಲಕೋಟೆ ಪ್ಯಾಕೇಜ್ ಪದ್ದತಿಯ ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯುಮೆಂಟ್ ಅಡಿಯಲ್ಲಿ ಸರಿಯಾದ ಮಾನದಂಡಗಳಿಲ್ಲದೆ ಎಲ್ಲಾ ಷರತ್ತುಗಳನ್ನು ತಮ್ಮ ಇಚ್ಛೆಗೆ ಬಂದಂತೆ ಪ್ರತ್ಯೇಕ ನಿಯಮಗಳನ್ನು ರೂಪಿಸುತ್ತಿರುವುದು ವಿವಿಧ ಸರಕಾರಿ ಇಲಾಖೆಗಳಲ್ಲಿ ಕಂಡುಬಂದಿದೆ. ಕರ್ನಾಟಕ ರಾಜ್ಯ ಟೆಂಡರ್‍ನಲ್ಲಿ ಭಾಗವಹಿಸುವ ಗುತ್ತಿಗೆದಾರರಿಗೆ ಪದ್ದತಿಯ ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯುಮೆಂಟ್ ನ ಏಕರೂಪ ನಿಯಮವನ್ನು ಇಡಿ ರಾಜ್ಯಕ್ಕೆ ಅನ್ವಯವಾಗುವಂತಹ ನಿಯಮಾವಳಿಗಳನ್ನು ರೂಪಿಸಬೇಕು.

    ಇದೇ ವೇಳೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಿಎಂ ರವೀಂದ್ರ ಮಾತನಾಡಿ, ನೆರೆರಾಜ್ಯವಾದ ಕೇರಳದಲ್ಲಿ ರೂ.5.00 ಕೋಟಿವರೆಗಿನ ಕಾಮಗಾರಿಯನ್ನು ಒಂದು ಲಕೋಟೆ ಪದ್ದತಿಯಲ್ಲಿ ಯಾವುದೇ ಪೂರ್ವಭಾಗಿ ಷರತ್ತುಗಳಿಲ್ಲದೆ ಗುತ್ತಿಗೆದಾರರು ನೊಂದಾವಣಿಯಾಗಿರುವ ಆಯಾ ದರ್ಜೆಗೆ ಅನುಗುಣವಾಗಿ ಟೆಂಡರ್‍ನಲ್ಲಿ ಭಾಗವಹಿಸುವ ನಿಯಮ ಜಾರಿಯಲ್ಲಿರುತ್ತದೆ. ಇದೇ ಮಾದರಿಯ ನಿಯಮವನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿದರೆ ಸ್ಥಳೀಯ ನಿವಾಸಿಗಳಾದ ರಾಜ್ಯದ ಗುತ್ತಿಗೆದಾರರು ಟೆಂಡರ್‍ನಲ್ಲಿ ಭಾಗವಹಿಸಿ ಕಾಮಗಾರಿ ಪಡೆಯುವಂತಹ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.

  • ಖಾತೆಗಾಗಿ ಅಲೆದಾಟ – ಏಕಾಂಗಿಯಾಗಿ ಹೋರಾಟಕ್ಕೆ ಇಳಿದ ವ್ಯಕ್ತಿ

    ಖಾತೆಗಾಗಿ ಅಲೆದಾಟ – ಏಕಾಂಗಿಯಾಗಿ ಹೋರಾಟಕ್ಕೆ ಇಳಿದ ವ್ಯಕ್ತಿ

    ಬೆಂಗಳೂರು: ಸರ್ಕಾರಿ ಕಚೇರಿಗೆ ತಮ್ಮ ಮನೆಯ ಖಾತೆ ಮಾಡಿಸಿಕೊಳ್ಳಲು ಅಲೆದು ಅಲೆದು ಸುಸ್ತಾಗಿ ಬೇರೆ ದಾರಿಯಿಲ್ಲದೆ, 68 ವರ್ಷದ ವ್ಯಕ್ತಿಯೊಬ್ಬರು ಒಬ್ಬಂಟಿಯಾಗಿ ಪ್ರತಿಭಟನೆ ಮಾಡಿರುವ ಘಟನೆ ಬೆಂಗಳೂರು ಪೂರ್ವ ತಾಲೂಕಿನ ಕೆಆರ್ ಪುರಂ ತಾಲೂಕು ಕಚೇರಿ ಮುಂದೆ ನಡೆದಿದೆ.

    ಮಾರತಳ್ಳಿ ಸಮೀಪದ ಪಣತೂರ್ ಗ್ರಾಮದ ನಿವಾಸಿ ಶ್ರೀಲೋಕ ಮೂರ್ತಿ ಕಳೆದ ನಾಲ್ಕು ತಿಂಗಳಿಂದ ತಮ್ಮ ಮನೆ ಖಾತೆ ಮಾಡಿಕೊಡಲು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕರೋನಾ ಸಮಯದಲ್ಲಿ ಪ್ರತಿದಿನ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

    ಇವತ್ತು ಒಬ್ಬಂಟಿಯಾಗಿ ಬೋರ್ಡ್ ಹಿಡಿದು ಪ್ರತಿಭಟನೆ ಮಾಡುತ್ತಿದ್ದಂತೆ ಸ್ಥಳಕ್ಕೆ ಬಂದ ತಹಸೀಲ್ದಾರ್ ಅವರ ದಾಖಲಾತಿ ಪರಿಶೀಲನೆ ತರಾತುರಿಯಲ್ಲಿ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಅವರು ನೀಡಿದ ದಾಖಲಾತಿಗಳು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಲೋಕ ಮೂರ್ತಿ ಆಗ್ರಹಪಡಿಸಿದ್ದಾರೆ.

  • ಉದ್ಧವ್ ಠಾಕ್ರೆಯಂತವರು ನೂರು ಮಂದಿ ಬಂದ್ರೂ ಬೆಳಗಾವಿ ನಮ್ಮದೇ: ನಾರಾಯಣ ಗೌಡ

    ಉದ್ಧವ್ ಠಾಕ್ರೆಯಂತವರು ನೂರು ಮಂದಿ ಬಂದ್ರೂ ಬೆಳಗಾವಿ ನಮ್ಮದೇ: ನಾರಾಯಣ ಗೌಡ

    ಬೆಂಗಳೂರು: ಉದ್ಧವ್ ಠಾಕ್ರೆ ಅಂತವರು ನೂರು ಮಂದಿ ಬಂದರೂ ಕರ್ನಾಟಕದಲ್ಲಿರೋ ಪ್ರದೇಶ ನಮ್ಮಲ್ಲೇ ಇರುತ್ತವೆ ಎಂದು ಕರವೇ ನಾರಾಯಣ ಗೌಡ ಹೇಳಿದ್ದಾರೆ. ಬಾಳ್ ಠಾಕ್ರೆ ನಂತರ ಈ ಅಧ್ಯಾಯ ಮುಗಿದಿದೆ ಎಂದುಕೊಂಡಿದ್ದೆ ಆದರೀಗ ಅವರ ಮಗ ಉದ್ಧವ್ ಠಾಕ್ರೆ ಗಡಿ ವಿವಾದವನ್ನು ಪ್ರಾರಂಭಿಸಿದ್ದಾರೆ.

    ಇಂದು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮಹಾಜನ್ ವರದಿಯನ್ನು ಸರಿಯಾಗಿ ಓದಿ ತಿಳಿಯದುಕೊಳ್ಳದೇ ಇಂತಹ ಉದ್ಧಾಟತನದ ಹೇಳಿಕೆ ನೀಡುವುದು ಸಿಎಂ ಸ್ಥಾನಕ್ಕೆ ಯೋಗ್ಯತೆ ತರುವಂತಹದಲ್ಲ. ಅವರ ಉದ್ದೇಶ ಏನು ಅಂತ ಗೊತ್ತಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧಾವ್ ಠಾಕ್ರೆ ಪದೇ ಪದೇ ಗಡಿ ವಿಚಾರದ ಬಗ್ಗೆ ಮಾತನಾಡುತ್ತಾರೆ. ಮರಾಠಿಗರನ್ನು ಓಲೈಸಿಕೊಳ್ಳುವ ಸಲುವಾಗಿ ಕನ್ನಡಿಗರನ್ನು ಕೆರಳಿಸುವಂತಹ ಹೇಳಿಕೆಗಳನ್ನು ಏಕೆ ನೀಡುತ್ತಾರೆ ಎಂದು ತಿಳಿದಿಲ್ಲ. ಬೆಳಗಾವಿಯಲ್ಲಿ ಒಂದೆಡೆ ಎಂಇಎಸ್ ಗಳಾದರೆ ಇನ್ನೊಂದೆಡೆ ಮಹಾರಾಷ್ಟ್ರದ ರಾಜಕಾರಣಿಗಳು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬೆಳಗಾವಿ, ನಿಪ್ಪಾಣಿ, ಕಾರವಾರ ಇವು ಕರ್ನಾಟಕದ ಅವಿಭಾಜ್ಯ ಅಂಗಗಳು ಎಂದು ಮಹಾಜನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಮಹಾಜನ್ ಕೂಡ ಮಹಾರಾಷ್ಟ್ರದವರೇ ಆಗಿದ್ದವರು. ಮಹಾಜನ್ ವರದಿಯನ್ನು ನೀಡಬೇಕೆಂದು ಒತ್ತಾಯಿಸಿದವರು ಕೂಡ ಮಹಾರಾಷ್ಟ್ರದವರೆ. ಮಹಾರಾಷ್ಟ್ರದ ಒತ್ತಾಯದ ಮೇರೆಗೆ ಅಂದು ಮಹಾಜನ್ ವರದಿಯನ್ನು ನೇಮಕ ಮಾಡಲಾಯಿತು. ಅದೇ ಮಹಾಜನ್ ನೀಡಿದ ವರದಿಯನ್ನು ಕರ್ನಾಟಕ ಸ್ವೀಕಾರ ಮಾಡಿದೆ. ಆದ್ರೆ ಮಹಾರಾಷ್ಟ್ರ ಸ್ವೀಕರಿಸಿಲ್ಲ ಎಂದರು.

    ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ನಮ್ಮ ರಾಜ್ಯದ ರಾಜಕಾರಣಿಗಳು ಸರಿಯಾದ ರೀತಿಯಲ್ಲಿ ಉತ್ತರ ಕೊಡದ ಕಾರಣ ಅವರು ಪದೇ ಪದೇ ಕಾಲು ಕೆರೆದುಕೊಂಡು ಗಡಿ ವಿಚಾರಕ್ಕೆ ಬರುತ್ತಿದ್ದಾರೆ. ಬೆಳಗಾವಿಯಂತಹ ಪ್ರದೇಶಗಳಲ್ಲಿ ಜನರು ಗೂಂಡಾಗಿರಿ ಮಾಡುವಂತದ್ದು, ಪುಂಡಾಟಿಕೆ ನಡೆಸುವಂತಹದ್ದು, ಇದು ಕರ್ನಾಟಕದ ಗಡಿಭಾಗದಲ್ಲಿ ಇರುವಂತಹ ರಾಜಕಾರಣಿಗಳ ದೌರ್ಬಲ್ಯಗಳಾಗಿವೆ. ಇಂದು ಅವರನ್ನು ಇಷ್ಟರ ಮಟ್ಟಿಗೆ ಮಾತನಾಡಲು ಕಾರಣವಾಗಿದೆ. ಗಡಿ ಭಾಗದ ರಾಜಕಾರಣಿಗಳಿಗೆ ಒಂದು ಚೂರು ಕೂಡ ನನ್ನ ನಾಡು, ನನ್ನ ಭಾಷೆ, ನನ್ನ ಸಂಸ್ಕøತಿ ಎಂಬ ಸ್ವಾಭಿಮಾನವಿಲ್ಲ. ನಾಡು, ನುಡಿ, ಗಡಿ ವಿಚಾರ ಬಂದಾಗ ನಮ್ಮ ರಾಜ್ಯ ರಾಜಕಾರಣಿಗಳು ಉಗ್ರವಾಗಿ ಖಂಡಿಸುವ ಕೆಲಸ ಮಾಡಬೇಕು ಎಂದರು.

    ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಅಷ್ಟೆಲ್ಲಾ ಮಾತನಾಡುವಾಗ ಕರ್ನಾಟಕದ ಮುಖ್ಯಮಂತ್ರಿಗಳು ಏಕೆ ಮಾತನಾಡಬಾರದು, ಏಕೆ ಸರಿಯಾದ ರೀತಿಯಲ್ಲಿ ಉತ್ತರ ನೀಡಬಾರದು ಎಂದು ಪ್ರಶ್ನಿಸಿದರು. ನಮ್ಮ ರಾಜಕಾರಣಿಗಳು ಉತ್ತರ ನೀಡದ ಪರಿಣಾಮ ಇಂದು ಅವರು ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಮಾತನಾಡಿ ಮಹಾಜನ್ ವರದಿಯನ್ನು ಓದಿ ಅದನ್ನು ಒಪ್ಪಿಕೊಂಡಿದ್ದೇವೆ. ಮಹಾಜನ್ ವರದಿ ಪ್ರಕಾರ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು, ಅದನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ಅದು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಬೇಕು. ಇಲ್ಲದೇ ಹೋದರೆ ಮತ್ತೆ ಮತ್ತೆ ಕ್ಯಾತೆ ತೆಗೆಯುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.

    ಉದ್ಧವ್ ಠಾಕ್ರೆ ಅಂತವರು ನೂರು ಮಂದಿ ಬಂದರೂ ಕರ್ನಾಟಕದಲ್ಲಿರುವ ಬೆಳಗಾವಿ ಪ್ರದೇಶ ನಮ್ಮಲ್ಲೆ ಇರುತ್ತವೇ. ಇದೇ ರೀತಿ ಮಹಾರಾಷ್ಟ್ರ ಸರ್ಕಾರದವರು ಖ್ಯಾತೆ ತಗೆಯುತ್ತಿದ್ದರೆ ನಾವು ಹೋರಾಟ ಮಾಡುತ್ತೆವೇ ಎಂಬ ಎಚ್ಚರಿಕೆ ಸಂದೇಶವನ್ನ ಕರವೇ ನಾರಾಯಣ ಗೌಡ ರವಾನಿಸಿದ್ದಾರೆ.