Tag: ಪಬ್ಲಿಕ್ ಟಿವಿ Bangalore

  • ಸಾರಿಗೆ ಸಂಸ್ಥೆಗಳ ‘ನಮ್ಮ ಕಾರ್ಗೋ’ ಸೇವೆ ಶುಕ್ರವಾರ ಉದ್ಘಾಟನೆ

    ಸಾರಿಗೆ ಸಂಸ್ಥೆಗಳ ‘ನಮ್ಮ ಕಾರ್ಗೋ’ ಸೇವೆ ಶುಕ್ರವಾರ ಉದ್ಘಾಟನೆ

    ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ನೂತನವಾಗಿ ಅನುಷ್ಠಾನಕ್ಕೆ ತರುತ್ತಿರುವ ಪಾರ್ಸೆಲ್ ಮತ್ತು ಕಾರ್ಗೋ ಸೇವೆಯಾದ ‘ನಮ್ಮ ಕಾರ್ಗೋ’ ಸೇವೆ ಶುಕ್ರವಾರ ಉದ್ಘಾಟನೆಯಾಗಲಿದೆ.

    ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಇದೇ ಶುಕ್ರವಾರ ಈ ಸೇವೆಯನ್ನು ಉದ್ಧಾಟಿಸಲಿದ್ದಾರೆ.

    ರಾಜ್ಯಾದ್ಯಂತ ಹಾಗೂ ನೆರೆರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ವಿಶ್ವಾಸಾರ್ಹ ಮತ್ತು ಮಿತವ್ಯಯದ ನಮ್ಮ ಕಾರ್ಗೋ ಸೇವೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.

    ಜೊತೆಗೆ ಕೆಎಸ್‌ಆರ್‌ಟಿಸಿ ಇಂತಹ ಒಂದು ಮಹತ್ವದ ಯೋಜನೆಗೆ ಕೈ ಹಾಕಿರುವುದು ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

  • ಅಣ್ಣನ ಸಿನಿಮಾಕ್ಕೆ ವಾಯ್ಸ್ ಕೊಡಲಿದ್ದಾರೆ ಧ್ರುವ ಸರ್ಜಾ

    ಅಣ್ಣನ ಸಿನಿಮಾಕ್ಕೆ ವಾಯ್ಸ್ ಕೊಡಲಿದ್ದಾರೆ ಧ್ರುವ ಸರ್ಜಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಇತ್ತೀಚೆಗಷ್ಟೇ ಜ್ಯೂನಿಯರ್ ಚಿರು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ದಿವಂಗತ ಪತಿ ಚಿರು ಅಭಿನಯದ ರಾಜಮಾರ್ತಂಡ ಸಿನಿಮಾ ಕುರಿತಂತೆ ಆಪ್‍ಡೇಟ್ಸ್ ನೀಡುವ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.

    ಹೌದು, ನಟಿ ಮೇಘನಾ ರಾಜ್ ಪತಿಯ ಸಿನಿಮಾಕ್ಕೆ ಧ್ರುವ ಸರ್ಜಾ ವಾಯ್ಸ್ ಡಬ್ ನೀಡುತ್ತಿರುವ ವಿಚಾರವನ್ನು ತಿಳಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ರಾಜಮಾರ್ತಾಂಡ ಸಿನಿಮಾದ ಡಬ್ಬಿಂಗ್ ಮಾಡಲು ತಯಾರಿ ನಡೆದಿತ್ತು. ಆದರೆ ಚಿರು ಅಗಲಿದ ನಂತರ ಇದೀಗ ಧ್ರುವ ಸರ್ಜಾ ಅಣ್ಣನ ಸಿನಿಮಾಕ್ಕೆ ವಾಯ್ಸ್ ಡಬ್ ನೀಡಲು ಮುಂದಾಗಿದ್ದಾರೆ.

    ಧ್ರುವ ಅಭಿನಯದ ಪೊಗರು ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದ್ದು, ಚಿತ್ರದ ಇಂಟರ್‍ವೆಲ್ ಸಮಯದಲ್ಲಿ ಚಿರು ಅಭಿನಯದ ರಾಜಮಾರ್ತಾಂಡ ಸಿನಿಮಾದ ಟ್ರೈಲರ್ ಪ್ರಸಾರವಾಗಲಿದೆ.

    ರಾಜಮಾರ್ತಾಂಡ ಸಿನಿಮಾವನ್ನು ನಿರ್ದೇಶಕ ರಾಮ್ ನಾರಾಯಣ ನಿರ್ದೇಶಿಸುತ್ತಿದ್ದು, ಚಿತ್ರದ ಪ್ರಮುಖ ಪಾತ್ರಗಳಲ್ಲಿ ಓಂ ಪ್ರಕಾಶ್, ದೀಪ್ತಿ ಸತಿ ಮತ್ತು ತ್ರಿವೇಣಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತಾ ಸಂಯೋಜಿಸಿದ್ದು, ಗಣೇಶ್ ಅವರ ಛಾಯಾಗ್ರಹಣವಿದೆ.

  • ಹಲವು ದಿನಗಳ ಬಳಿಕ ಮೇಘನಾ ಔಟಿಂಗ್ – ಫೋಟೋ ವೈರಲ್

    ಹಲವು ದಿನಗಳ ಬಳಿಕ ಮೇಘನಾ ಔಟಿಂಗ್ – ಫೋಟೋ ವೈರಲ್

    ಬೆಂಗಳೂರು: ಹಲವು ದಿನಗಳ ಬಳಿಕ ನಟಿ ಮೇಘನಾ ರಾಜ್ ತನ್ನ ಸ್ನೇಹಿತರೊಂದಿಗೆ ಕಾಲ ಕಳೆದಿದ್ದಾರೆ. ಈ ಕುರಿತಂತೆ ಮೇಘನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆ ಸ್ಟೋರಿಯಾಗಿ ಒಂದೆರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಬಹುಶಃ ಜ್ಯೂನಿಯರ್ ಚಿರು ಜನಿಸಿದ ನಂತರ ಇದು ಮೇಘನಾ ರಾಜ್‍ರ ಮೊದಲ ಔಟಿಂಗ್ ಇರಬಹುದು.

    ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ 2020ರ ಜೂನ್ 7 ರಂದು ಕೊನೆಯುಸಿರೆಳೆದರು. ಬಳಿಕ ಗಂಡು ಮಗುವಿಗೆ ಜನನ ನೀಡಿದ ಮೇಘನಾ, ಆಗಾಗ ಪತಿ ಜೊತೆಗಿರುವ ಹಳೆಯ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವುದರ ಮೂಲಕ ಚಿರುವನ್ನು ನೆನಪಿಸಿಕೊಳ್ಳುತ್ತಿದ್ದರು.

    ಇದೀಗ ಮೇಘನಾ ಹಲವು ದಿನಗಳ ಬಳಿಕ ಕಳೆದ ವಾರಾಂತ್ಯದಲ್ಲಿ ಬೆಂಗಳೂರಿನ ಕೆಫೆಯೊಂದರಲ್ಲಿ ಸ್ನೇಹಿತರೊಂದಿಗೆ ಎಂಜಾಯ್ ಮಾಡುತ್ತಾ ಅದ್ಭುತ ಕ್ಷಣಗಳನ್ನು ಕಳೆದಿದ್ದಾರೆ. ಕೆಫೆಯಲ್ಲಿ ಮೇಘನಾ ಜೊತೆ ನಟ ಹಾಗೂ ನಿರ್ದೇಶಕ ಪನ್ನಗಭರಣ ಹಾಗೂ ಅವರ ಪತ್ನಿ ನಿಕಿತಾ ಭರಣ, ನಟ ಪ್ರಜ್ವಲ್ ದೇವರಾಜ್, ಪತ್ನಿ ರಾಗಿಣಿ ಚಂದ್ರನ್ ಸೇರಿದಂತೆ ಕೆಲವು ಸ್ನೇಹಿತರು ಮತ್ತು ಕುಟುಂಬಸ್ಥರು ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋವನ್ನು ಮೇಘನಾ ತಮ್ಮ ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ

    ಈ ಮುನ್ನ ಜನವರಿ 31 ಜೂನಿಯರ್ ಚಿರುಗೆ ಮೊದಲ ಬಾರಿಗೆ ಪೋಲಿಯೋ ಲಸಿಕೆ ಹಾಕಿಸಿರುವ ಕೈ ಉಗುರಿನ ಮೇಲೆ ಇಂಕ್ ಆಗಿದ್ದ ಫೋಟೋವನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಪೋಲಿಯೋ ವಿರುದ್ಧ ಹೋರಾಡಲು ಮಕ್ಕಳಿಗೆ ಲಸಿಕೆ ಹಾಕಿಸಿ ಎಂದು ಕರೆ ನೀಡಿದರು.

     

    View this post on Instagram

     

    A post shared by Meghana Raj Sarja (@megsraj)

    ‘ಬೇಬಿ ಸಿ’ ಮೊದಲ ಬಾರಿಗೆ ತನ್ನ ಕೈ ಬೆರಳಿನ ಉಗುರಿಗೆ ಶಾಯಿ ಹಾಕಿಕೊಂಡಿದ್ದಾನೆ. ಕೇವಲ ಕೆಲವು ಡ್ರಾಪ್ಸ್ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಮಕ್ಕಳನ್ನು ರಕ್ಷಿಸಿ ಹಾಗೂ ದೇಶವನ್ನು ಪೋಲಿಯೋ ಮುಕ್ತಗೊಳಿಸಿ. ಆರೋಗ್ಯಕರವಾಗಿರಿ, ಚೆನ್ನಾಗಿರಿ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದರು.

  • ಜಯಲಲಿತಾ ನಂತರ ತಮಿಳುನಾಡಿನ ಅಮ್ಮ ಶಶಿಕಲಾ: ಬೆಂಬಲಿಗರು

    ಜಯಲಲಿತಾ ನಂತರ ತಮಿಳುನಾಡಿನ ಅಮ್ಮ ಶಶಿಕಲಾ: ಬೆಂಬಲಿಗರು

    – ಬ್ಯಾನರ್ ಮಾತ್ರವಲ್ಲ ಹೃದಯದಲ್ಲೇ ಸ್ಥಾನ ನೀಡಿದ್ದೇವೆ

    ಬೆಂಗಳೂರು: ತಮಿಳುನಾಡಿನ ಮುಂದಿನ ಅಮ್ಮ ಶಶಿಕಲಾ, ಅವರು ಯಾವ ಪಕ್ಷದಲ್ಲಿ ನಿಲ್ಲುತ್ತಾರೋ ಆ ಪಕ್ಷ ಗೆದ್ದೆ ಗೆಲ್ಲುತ್ತದೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.

    ಇಂದು ಶಶಿಕಲಾ ಅವರು ತಮಿಳುನಾಡಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ಗಡಿ ಪ್ರದೇಶದಲ್ಲಿ ಅವರ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಮೆರೆದಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಶಿಕಲಾ ಬೆಂಬಲಿಗರಾದ ಗಿರಿಜಾ, 4 ವರ್ಷ ಶಿಕ್ಷೆ ಅನುಭವಿಸಿ ಇದೀಗ ಶಶಿಕಲಾ ತಮಿಳು ನಾಡಿಗೆ ಆಗಮಿಸುತ್ತಿದ್ದಾರೆ. ಶಶಿಕಲಾ ಅವರಿಗೆ ಪೂರ್ಣಕುಂಭದೊಂದಿಗೆ ಅವರನ್ನು ಬರಮಾಡಿಕೊಳ್ಳಲು ಕರ್ನಾಟಕ ಗಡಿಯಿಂದ ತಮಿಳುನಾಡಿವರೆಗೂ ಜನರು ಕಾಯುತ್ತಿದ್ದಾರೆ. ಜಯಲಲಿತಾ ಅಮ್ಮ ನಂತರ ತಮಿಳುನಾಡಿನ ಅಮ್ಮ ಶಶಿಕಲಾ ಎಂದು ಅವರು ಹೇಳಿದರು.

    ಅಲ್ಲದೆ ಅವರೋರ್ವ ತ್ಯಾಗ ತಲೈವಿ, ಶಶಿಕಲಾರವರು ತಾಯಿಯಾಗಿ, ಸಹೋದರಿಯಾಗಿ, ಫ್ರೆಂಡ್ ಆಗಿ 30 ವರ್ಷಗಳ ಕಾಲ ಜಯಲಲಿತಾ ಅವರಿಗೆ ಸಾಥ್ ನೀಡಿದವರು. ಅವರೇ ನಮ್ಮ ಮುಂದಿನ ವಾರಸುದಾರೆ ಎಂದು ನಾವು ಈಗಾಗಲೇ ಒಪ್ಪಿಕೊಂಡಿದ್ದೇವೆ. ಮುಂದಿನ ತಮಿಳುನಾಡು ಚುನಾವಣೆಯಲ್ಲಿ ಶಶಿಕಲಾ ಅವರು ಖಂಡಿತಾ ಗೆದ್ದೆ ಗೆಲ್ಲುತ್ತಾರೆ. ಅಮ್ಮ ತಮಿಳುನಾಡಿನಲ್ಲಿ ಯಾವ ಪಕ್ಷದಲ್ಲಿ ನಿಲ್ಲುತ್ತಾರೋ ಅದೇ ಪಕ್ಷ ಗೆಲ್ಲುತ್ತದೆ ಎಂದು ತಿಳಿಸಿದರು.

    ಕೊರೊನಾ ಸಮಯದಲ್ಲಿಯೇ ಇಷ್ಟು ಮಂದಿ ಸೇರಿದ್ದಾರೆ ಎಂದರೆ ಬೇರೆ ದಿಗಳಲ್ಲಿ ಅವರ ಅಭಿಮಾನಿಗಳ ಆರ್ಭಟವನ್ನು ತಡೆಯುವುದಕ್ಕೆ ಆಗುತ್ತಿರಲಿಲ್ಲ. ಇಂದು ಅವರನ್ನು ಬರಮಾಡಿಕೊಳ್ಳುತ್ತಿರುವುದು ನಮಗೆ ಬಹಳ ಖುಷಿತಂದಿದೆ. ಇದು ಒಂದು ರೀತಿ ತಮಿಳುನಾಡಿಗೆ ಹಬ್ಬ ಎಂದೇ ಹೇಳಬಹುದು. ಅಮ್ಮನಿಗೆ ಬ್ಯಾನರ್‍ನಲ್ಲಿ ಮಾತ್ರವಲ್ಲ, ನಮ್ಮ ಹೃದಯದಲ್ಲಿ ಸ್ಥಾನ ನೀಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    4 ವರ್ಷಗಳ ಜೈಲು ಶಿಕ್ಷೆ ಪೂರೈಸಿ ಇಂದು ಶಶಿಕಲಾ ನಟರಾಜನ್ ತಮಿಳುನಾಡಿಗೆ ತಮಿಳುನಾಡಿಗೆ ವಾಪಸ್ಸಾಗುತ್ತಿದ್ದಾರೆ. ಈಗಾಗಲೇ ರಸ್ತೆಯುದ್ದಕ್ಕೂ ಬಲೂನ್, ಬ್ಯಾನರ್, ಪಾರ್ಟಿ ಸಿಂಬಲ್, ಬಾಳೆ ದಿಂಡುಗಳನ್ನು ಕಟ್ಟುವುದರ ಮೂಲಕ ಸಿಂಗಾರಗೊಳಿಸಿದ್ದಾರೆ. ಪರಿಸ್ಥಿಯನ್ನು ನಿಭಾಯಿಸಲು ತಮಿಳುನಾಡು 1500ಕ್ಕೂ ಹೆಚ್ಚು ಪೊಲೀಸರು ನಿಯೋಜಿಸಿದ್ದಾರೆ.

  • ಬೇಳೆಕಾಳುಗಳ ದರ ಏರಿಕೆ – ಯಾವುದಕ್ಕೆ ಎಷ್ಟು ರೂ.?

    ಬೇಳೆಕಾಳುಗಳ ದರ ಏರಿಕೆ – ಯಾವುದಕ್ಕೆ ಎಷ್ಟು ರೂ.?

    ಬೆಂಗಳೂರು: ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿದ್ದು, ಇದರ ನೇರ ಪರಿಣಾಮ ಬೇಳೆಕಾಳುಗಳ ಮೇಲೆ ಬಿದ್ದಿದ್ದು ದರ ಏರಿಕೆ ಆಗತೊಡಗಿದೆ.

    ಹೊಲಸೇಲ್ ಗಿಂತ ರಿಟೇಲ್ ಅಂಗಡಿಗಳಲ್ಲಿ ದರ ಏರಿಕೆಯಾಗಿದೆ. ಅದ್ರಲ್ಲೂ ಬಟಾಣಿ ಬೆಲೆ ಕೆ.ಜಿಗೆ 150 ರೂಪಾಯಿ ಏರಿಕೆಯಾಗಿದೆ. ದೋಸೆ, ಪಡ್ಡು ಹಾಗೂ ಇಡ್ಲಿಗೆ ಅವಶ್ಯವಾದ ಉದ್ದಿನ ಬೇಳೆ ಕೆಜಿಗೆ 130 ರೂಪಾಯಿ ಆಗಿದೆ. ತೋಗರಿಬೇಳೆ ಕೆ.ಜಿಗೆ 150 ರೂಪಾಯಿ ಆಗಿದೆ.

    ಬಹುತೇಕ ಎಲ್ಲಾ ಅಡುಗೆ ಸಾಮಗ್ರಿಗಳಲ್ಲೂ ಕಳೆದ ಒಂದು ತಿಂಗಳಿನಲ್ಲಿ 5-10 ರೂ. ಹೆಚ್ಚಳವಾಗಿದೆ. ಈ ಬೆಲೆ ಹೆಚ್ಚಳ, ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

    ಎಷ್ಟು ದರ ಇದೆ?
    ಪದಾರ್ಥಗಳ ಹೆಸರು – ಹೋಲ್ ಸೇಲ್ ರೇಟ್(ಕೆ.ಜಿಗೆ) ರಿಟೈಲ್ ರೇಟ್(ಕೆ.ಜಿಗೆ)
    ತೊಗರಿಬೇಳೆ – 100 ರೂ. – 120 ರೂ.
    ಉದ್ದಿನಬೇಳೆ – 115 ರೂ. – 130 ರೂ.
    ಹೆಸರಬೇಳೆ – 95 ರೂ. – 110 ರೂ.
    ಕಡಲೆಬೇಳೆ – 60 ರೂ. – 75 ರೂ.
    ಹೆಸರಕಾಳು – 105 ರೂ. -120 ರೂ.
    ಕಡಲೆಕಾಳು – 50 ರೂ. -70 ರೂ.
    ಅಳಸಂದಿ – 60 ರೂ. – 80 ರೂ.
    ಬಟಾಣಿ – 120 ರೂ. – 150 ರೂ.
    ಸೋನಾಮಸೂರಿ ಅಕ್ಕಿ – 50 ರೂ. – 56 ರೂ.
    ರಾ ರೈಸ್ – 50 ರೂ. – 56 ರೂ.

  • ದೇಶದ ಕೈಗಾರಿಕಾ, ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ನೀಡುವಂತಹ ಬಜೆಟ್: ಶೆಟ್ಟರ್

    ದೇಶದ ಕೈಗಾರಿಕಾ, ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ನೀಡುವಂತಹ ಬಜೆಟ್: ಶೆಟ್ಟರ್

    ಬೆಂಗಳೂರು: ಹೊಸ ದಶಕದಲ್ಲಿ ಹೊಸ ಯುಗ ಸೃಷ್ಟಿಸುವ ಬಜೆಟ್ ಇದಾಗಿದ್ದು, ಕೇಂದ್ರ ಸರಕಾರ ಕೋವಿಡ್ ನಂತರದ ಆರ್ಥಿಕತೆಗೆ ಉತ್ತೇಜನ ನೀಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿರುವುದು ಇಂದಿನ ಕೇಂದ್ರ ಬಜೆಟ್‍ನಲ್ಲಿ ಕಾಣಬಹುದಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.

    ಕೇಂದ್ರ ಆಯವ್ಯಯದ ಬಗ್ಗೆ ಮಾತಾನಾಡಿರುವ ಅವರು, ಆರೋಗ್ಯ, ಎಂಎಸ್‍ಎಂಇ, ಸ್ಟಾರ್ಟ್ ಅಪ್ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ದಿಗೆ ಕೇಂದ್ರ ಆಯವ್ಯಯ ಮುನ್ನುಡಿ ಬರೆದಿದೆ. ಎಂಎಸ್‍ಎಂಇ ಗಳಿಗೆ 15,700 ಕೋಟಿಗಳ ಅನುದಾದ ನೀಡಲಾಗಿದ್ದು, 2 ಪಟ್ಟು ಹೆಚ್ಚು ನೀಡಲಾಗಿದೆ. ಈ ಕ್ಷೇತ್ರದ ಅಭಿವೃದ್ದಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಸಣ್ಣ ಕಂಪನಿಗಳ ವ್ಯಾಖ್ಯಾನ ಬದಲು ಮಾಡುವ ಮೂಲಕ ಸುಮಾರು 2 ಲಕ್ಷ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಏಕವ್ಯಕ್ತಿ ಕಂಪನಿಗಳ ಸ್ಥಾಪನೆಗೂ ಪ್ರೋತ್ಸಾಹ ನೀಡಲಾಗಿದೆ. ಕನಿಷ್ಟ ಕೂಲಿಯನ್ನು ಎಲ್ಲಾ ವಿಭಾಗದ ಕೂಲಿ ಕಾರ್ಮಿಕರಿಗೂ ಅನ್ವಯ ಮಾಡಿರುವುದು ಹಾಗೂ ಮಹಿಳೆಯರು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.

    ಸ್ಟಾರ್ಟ್ ಅಪ್ ಉದ್ದಿಮೆಗಳೀಗೆ ಇನ್ನು 1 ವರ್ಷ ರಿಲೀಫ್ ನೀಡಲಾಗಿದ್ದು, ಬಂಡವಾಳದ ಮೇಲಿನ ಲಾಭಕ್ಕೆ ತೆರಿಗೆ ವಿಧಿಸುವುದಿಲ್ಲ ಎಂದು ಕೇಂದ್ರ ಬಜೆಟ್ ನಲ್ಲಿ ತಿಳಿಸಲಾಗಿದೆ. ಇದು ದೇಶದಲ್ಲಿ ಸ್ಟಾರ್ಟ್ ಅಪ್ ಕಂಪನಿಗಳ ಬೆಳವಣಿಗೆ ಬಹಳ ಸಹಾಯಕವಾಗಲಿದೆ. ಒಟ್ಟಾರೆಯಾಗಿ ಪ್ರಗತಿಪರ ಹಾಗೂ ಕೋವಿಡ್ ಸಂಕಷ್ಟದಿಂದ ದೇಶವನ್ನು ಪ್ರಗತಿಯತ್ತ ಮುನ್ನಡೆಸಲು ಉತ್ತಮ ಹಾದಿಯನ್ನು ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ವಿತ್ತೀಯ ಸಚಿವರು ತೋರಿಸಿದ್ದಾರೆ ಎಂದರು.

  • 1 ಲಕ್ಷ ಬಿಲ್ ಮಾಡಿ ಹೋಟೆಲ್‍ನಿಂದ ವ್ಯಕ್ತಿ ಪಾರಾರಿ

    1 ಲಕ್ಷ ಬಿಲ್ ಮಾಡಿ ಹೋಟೆಲ್‍ನಿಂದ ವ್ಯಕ್ತಿ ಪಾರಾರಿ

    ಬೆಂಗಳೂರು: ಗೋವಾ ಮೂಲಕ ವ್ಯಕ್ತಿಯೊಬ್ಬ ಹೋಟೆಲ್ ಬಿಲ್ ಪಾವತಿಸದೇ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಲ್ಲದೆ ತಾನು ದೊಡ್ಡ ವಿಐಪಿ ಎಂಬಂತೆ ಬಾಡಿಗಾರ್ಡ್ ಗಳನ್ನು ಮುಂದಿಟ್ಟುಕೊಂಡು ನಟಿಸಿ ಹೋಟೆಲ್‍ನವರ ಕಣ್ಣಿಗೆ ಮಣ್ಣೆರಚಿದ್ದಾನೆ.

    ಆರೋಪಿಯನ್ನು ಸ್ವಪ್ನಿಲ್ ನಾಯ್ಕ್ ಎಂದು ಗುರುತಿಸಲಾಗಿದೆ. 1,43,243 ಬಿಲ್ ಪಾವತಿಸುವ ಸಮಯ ಬಂದಾಗ ಆರೋಪಿಗಳು ಹೋಟೆಲ್‍ನಿಂದ ಪರಾರಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ಬಾಡಿಗಾರ್ಡ್ ಗಳಿಗೂ ಹಣ ನೀಡದೆ ಮೋಸ ಮಾಡಿರುವ ಸತ್ಯ ಬೆಳಕಿಗೆ ಬಂದಿದೆ.

    ತನಿಖೆ ವೇಳೆ ಆರೋಪಿ ನಾಯ್ಕ್, ಜನವರಿ 2 ರಂದು ಬೆಂಗಳೂರಿನ ಗಾಂಧಿನಗರದ ಜಿಯಾನ್ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿದ್ದಾನೆ. 6 ದಿನಗಳ ನಂತರ ನಾಯ್ಕ್ ಪತ್ನಿ ಕೂಡ ಆತನ ಜೊತೆಗೂಡಿ ಹೋಟೆಲ್‍ನಲ್ಲಿ ತಂಗಿದ್ದಳು. ಅಲ್ಲದೆ ಬಾಡಿಗಾರ್ಡ್‍ಗಳಿಗೂ ಇನ್ನೂ ಎರಡು ರೂಮ್‍ಗಳನ್ನು ಬುಕ್ ಮಾಡಿದ್ದರು.

    ಬಿಲ್ ಪಾವತಿಸುವ ದಿನ ಬರುತ್ತಿದ್ದಂತೆಯೇ ಆರೋಪಿ ಮತ್ತು ಆತನ ಹೆಂಡತಿ ರಾಮನಗರಕ್ಕೆ ಹೋಗುವ ಮಿನಿ ಬಸ್ ಹತ್ತಿ ಪರಾರಿಯಾಗಿದ್ದಾರೆ. ಇದೇ ವೇಳೆ ಆರೋಪಿಗಳನ್ನು ಹೋಟೆಲ್ ಸಿಬ್ಬಂದಿ ಕಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಅಲ್ಲದೆ ಆರೋಪಿಗಳು ಮಿನಿ ಬಸ್ ಕಂಪನಿ ಮತ್ತು ಆತನ ಬಾಡಿಗಾರ್ಡ್ ಗೆ ಸಹ ಹಣ ನೀಡದೇ ದ್ರೋಹ ಬಗೆದಿದ್ದಾರೆ ಎಂದು ತಿಳಿದುಬಂದಿದೆ.

    ಒಟ್ಟಾರೆ 1,43,243 ರೂಪಾಯಿ ಬಿಲ್ ಪಾವತಿಸದೇ ಆರೋಪಿಗಳು ಹೋಟೆಲ್ ನಿಂದ ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಮಂದಿಗೆ ಲಸಿಕೆ : ಸುಧಾಕರ್

    ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಮಂದಿಗೆ ಲಸಿಕೆ : ಸುಧಾಕರ್

    ಬೆಂಗಳೂರು: ರಾಜ್ಯದಲ್ಲಿ ಒಟ್ಟು 1,38,656 ಮಂದಿಗೆ ಕೊರೊನಾ ಲಸಿಕೆ ನೀಡಿದ್ದು, ಕೆಲವರಿಗೆ ಮಾತ್ರ ಅಡ್ಡ ಪರಿಣಾಮವಾಗಿದೆ. ಯಾರೂ ಮರಣ ಹೊಂದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1,36,882 ಮಂದಿಗೆ ಕೋವಿಶೀಲ್ಡ್, 1,774 ಮಂದಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಈ ಪೈಕಿ ಶೇ.2 ರಿಂದ 3.5 ಜನರಿಗೆ ಸ್ವಲ್ಪ ಅಡ್ಡಪರಿಣಾಮ ಉಂಟಾಗಿದೆ. 8,47,908 ಮಂದಿ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 3,27,201 ಸರ್ಕಾರಿ ಆರೋಗ್ಯ ಸಿಬ್ಬಂದಿ, 4,45,389 ಖಾಸಗಿ ಆರೋಗ್ಯ ಸಿಬ್ಬಂದಿ ಇದ್ದಾರೆ. ಒಟ್ಟು 7,72,591 ಆರೋಗ್ಯ ಸಿಬ್ಬಂದಿಗಳಿದ್ದಾರೆ. ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದವರು 75,318 ಮಂದಿ ಇದ್ದಾರೆ. ಕೋವ್ಯಾಕ್ಸಿನ್ 1,46,240 ಡೋಸ್ ಇಂದು ಬರಲಿದೆ ಎಂದರು.

    ಲಸಿಕೆ ಪಡೆದರೆ ಕೋವಿಡ್‍ನಿಂದ ದೂರವಿರಬಹುದು. ಕೆಲ ತಪ್ಪು ಮಾಹಿತಿಗಳಿಂದ ಅಂಜಿಕೆ ಉಂಟಾಗಿದೆ. 2 ನೇ ಹಂತದಲ್ಲಿ ರಾಜ್ಯದ ಒಂದೂವರೆಯಿಂದ ಎರಡು ಕೋಟಿ ಜನರಿಗೆ ಲಸಿಕೆ ನೀಡಬೇಕಾಗುತ್ತದೆ. ಇದು ಬಹುದೊಡ್ಡ ಸವಾಲಾಗಿದೆ ಎಂದು ತಿಳಿಸಿದರು.

    ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರವನ್ನು ನೇರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಮೊದಲು ಇಲಾಖೆಗಳು ಬೇರೆಯಾಗಿದ್ದರಿಂದ ಕೋವಿಡ್ ನಿರ್ವಹಣೆ ಸಮಸ್ಯೆಯಾಗಿತ್ತು. ನಂತರ ಒಂದೇ ಇಲಾಖೆ ಆಗಿದ್ದರಿಂದ ಕೋವಿಡ್ ನಿಯಂತ್ರಣಕ್ಕೆ ಬಂತು. ಲಸಿಕೆ ಬಂದ ಬಳಿಕ ಎರಡೂ ಇಲಾಖೆಗಳ ಸಂಯೋಜನೆ ಮೂಲಕ ಹೆಚ್ಚಿನ ಜನರಿಗೆ ತಲುಪಿಸಬೇಕಿದೆ. ಆಡಳಿತ ವೈಫಲ್ಯದಿಂದ ಸಮಸ್ಯೆಯಾಗಬಾರದು. ಜನರ ಹಿತದೃಷ್ಟಿಯಿಂದ ಎರಡೂ ಇಲಾಖೆಗಳನ್ನು ಒಬ್ಬರಿಗೇ ನೀಡಬೇಕು ಎಂದು ಸಿಎಂಗೆ ಮನವಿ ಮಾಡುತ್ತೇನೆ. ಕೋವಿಡ್ 2ನೇ ಅಲೆ ಬಂದರೆ ಇಂತಹ ಸಿದ್ಧತೆ ಅಗತ್ಯ ಎಂದು ಹೇಳಿದರು.

    ನಾವೆಲ್ಲರೂ ಆತ್ಮೀಯರು. ಮುಖ್ಯಮಂತ್ರಿಗಳ ಕೈ ಬಲಪಡಿಸಲು ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಸಿಎಂ ಕೈ ಬಲಪಡಿಸಲು ಒಂದು ರೀತಿಯಲ್ಲಿ ರಾಜಕೀಯ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಂಡು, ಶೇಕಡಾ ಮೂರರಷ್ಟು ಮತ ಇರದಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮುವತ್ತೈದು ಸಾವಿರ ಬಹುಮತಗಳಿಂದ ಗೆದ್ದು ಬಂದಿದ್ದೇನೆ. ಹಾಗೆಯೇ ಎಂಟಿಬಿ ನಾಗರಾಜ್ ಅವರು ವಸತಿ ಸಚಿವರಾಗಿದ್ದವರು ನನ್ನ ಮಾತು ಕೇಳಿ ರಾಜೀನಾಮೆ ನೀಡಿ ಬಂದರು. ಹೀಗೆ ಎಲ್ಲ ಸಚಿವರ ರಕ್ಷಣೆ ಕೂಡ ನನಗೆ ಮುಖ್ಯವಾಗಿದೆ. ಅಲ್ಲದೆ ಖಾತೆ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಅವರೇನು ಮಾಡಬೇಕಿತ್ತು ಎಂದು ಹೇಳಲು ಸಾಧ್ಯವಿಲ್ಲ. ಅವರ ತಂಡ ಸದಸ್ಯನಾಗಿ ಅವರಿಗೆ, ಸರ್ಕಾರಕ್ಕೆ, ಪಕ್ಷಕ್ಕೆ ಒಳ್ಳೆಯ ಹೆಸರು ತರಲು ಆತ್ಮವಂಚನೆ ಮಾಡಿಕೊಳ್ಳದೆ ಕೆಲಸ ಮಾಡುತ್ತಿದ್ದೇನೆ ಎಂದರು.

    ವ್ಯಾಕ್ಸಿನೇಷನ್ ನಡೆಯುತ್ತಿರುವ ಈ ಸಂದರ್ಭದಲ್ಲಿ ಮತ್ತು ತಜ್ಞರ ಪ್ರಕಾರ ಫೆಬ್ರವರಿ ಯಲ್ಲಿ ಎರಡನೇ ಅಲೆ ಸಾಧ್ಯತೆಗಳ ಹಿನ್ನೆಲೆಯಲ್ಲಿ ವೈಜ್ಞಾನಿಕ ನಿರ್ಧಾರ ಕೈಗೊಳ್ಳಬೇಕಿತ್ತು ಎಂಬುದು ನನ್ನ ಅಭಿಪ್ರಾಯ. ಇದನ್ನು ಮುಖ್ಯಮಂತ್ರಿಯವರಿಗೆ ತಿಳಿಸುತ್ತೇನೆ. ತುಮಕೂರಿನಲ್ಲಿ ವೈದ್ಯಾಧಿಕಾರಿಗಳು ಮೊದಲೇ ಲಸಿಕೆ ಪಡೆದಿದ್ದಾರೆ. ನಂತರ ಛಾಯಾಚಿತ್ರಕ್ಕಾಗಿ ಕೇಳಿದಾಗ ಲಸಿಕೆ ಪಡೆದಂತೆ ಮಾಡಲಾಗಿದೆ. ಇದರಲ್ಲಿ ಲೋಪವಿಲ್ಲ ಎಂದು ಸ್ಪಷ್ಟಪಡಿಸಿದರು.

    ಗಣಿಗಾರಿಕೆಯಲ್ಲಿ ಜಿಲೆಟಿನ್ ಅಗತ್ಯಕ್ಕಿಂತ ಹೆಚ್ಚು ಬಳಸುವುದು, ಆಳವಾಗಿ ಇಟ್ಟು ಸಿಡಿಸುವುದು ಮೊದಲಾದ ದುರಾಲೋಚನೆಯ ಕೆಲಸ ಮಾಡಲಾಗುತ್ತದೆ. ಇದರಿಂದಾಗಿ ಸಮೀಪದ ಜನರ ಮನೆಗಳಲ್ಲಿ ಬಿರುಕು ಬಿಡುವ ಘಟನೆ ಸಂಭವಿಸುತ್ತಿದೆ. ಗಣಿಗಾರಿಕೆ ಇಲಾಖೆಯ ಅಧಿಕಾರಿಗಳ ಮೂಗಿನ ಕೆಳಗೆಯೇ ಇದು ನಡೆಯುತ್ತಿದೆ. ಪೊಲೀಸರು ಬಹಳ ಎಚ್ಚರದಿಂದ ಇದ್ದು, ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

  • ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದ ಶಾಸಕಿ ಸೌಮ್ಯರೆಡ್ಡಿ 

    ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದ ಶಾಸಕಿ ಸೌಮ್ಯರೆಡ್ಡಿ 

    ಬೆಂಗಳೂರು: ಜಯನಗರದ ಕಾಂಗ್ರೆಸ್ ಶಾಸಕಿ ಸೌಮ್ಯ ರ್‍ಯಾಂಪ್  ಮೇಲೆ ಹೆಜ್ಜೆ ಹಾಕಿದ್ದಾರೆ.

    ಇಂದಿನಿಂದ ಮೂರು ದಿನಗಳ ಕಾಲ [ಶುಕ್ರವಾರದಿಂದ ಭಾನುವಾರದವರೆಗೆ] ಬೆಂಗಳೂರಿನ ಅಶೋಕ್ ಲಲಿತ್ ನಲ್ಲಿ ಪುರಾತನ, ಪಾರಂಪರಿಕ ಆಭರಣಗಳ ಮಾರಾಟ, ಪ್ರದರ್ಶನವನ್ನು ಆಯೋಜಿಸಲಾಗಿದೆ.

    ಕೋವಿಡ್ 19 ಸಾಂಕ್ರಮಿಕ ರೋಗ ನಗರದಲ್ಲಿ ಕಾಣಿಸಿಕೊಂಡ ಹಿನ್ನೆಲೆ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ಇದೀಗ ಸೋಂಕು ಕಡಿಮೆಯಾಗಿರುವುದರಿಂದ ಮತ್ತೆ ಬೆಂಗಳೂರಲ್ಲಿ ಏರ್ಪಡಿಸಿತ್ತಿರುವ ಅತೀ ದೊಡ್ಡ ಆಭರಣ ಮೇಳ ಕಾರ್ಯಕ್ರಮವಾಗಿದೆ. ದೇಶದ ನೂರಕ್ಕೂ ಹೆಚ್ಚು ಪ್ರಮುಖ ಆಭರಣ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ವಿಶಿಷ್ಟ ಆಭರಣಗಳನ್ನು ಪ್ರದರ್ಶಿಸುತ್ತಿದ್ದಾರೆ.

    ಈ ವೇಳೆ ಸಮಾರಂಭಕ್ಕೆ ಆಗಮಿಸಿದ ಬಿಜೆಪಿ ಶಾಸಕಿ ಸೌಮ್ಯ ರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪುರಾತನ ಆಭರಣಗಳನ್ನು ತೊಟ್ಟು ರ್‍ಯಾಂಪ್  ಮೇಲೆ ಹೆಜ್ಜೆ ಹಾಕಿದರು. ಜೊತೆಗೆ ಟ್ರೆಂಡಿ ಜುವೆಲರ್ಸ್‍ಗಳನ್ನು ಜವ್ವನೆಯರು ಧರಿಸಿ ರ್‍ಯಾಂಪ್ ವಾಕ್‌ ಮಾಡುವ ಮೂಲಕ ಪ್ರದರ್ಶಿಸಿದರು. ಅಂದಹಾಗೇ ಈ ಪಾರಂಪರಿಕ, ವೈಶಿಷ್ಟ್ಯಪೂರ್ಣ, ವಿನೂತನ ಆಭರಣ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

  • ನಾಳೆ ಮಹಾರಾಷ್ಟ್ರ ಗಡಿಯನ್ನು ದಾಟ್ತೇವೆ : ವಾಟಾಳ್ ನಾಗರಾಜ್

    ನಾಳೆ ಮಹಾರಾಷ್ಟ್ರ ಗಡಿಯನ್ನು ದಾಟ್ತೇವೆ : ವಾಟಾಳ್ ನಾಗರಾಜ್

    ಬೆಂಗಳೂರು: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ವಿರುದ್ಧ ಕನ್ನಡ ಹೋರಾಟಗಾರರು ಸಿಡಿದ್ದೇದಿದ್ದಾರೆ. ಉದ್ದವ್ ಠಾಕ್ರೆ ಉದ್ದಟತನ ಹಾಗೂ ಯಡಿಯೂರಪ್ಪನವರ ನಿಷ್ಕ್ರಿಯತೆ ವಿರೋಧಿಸಿ ಇಂದು ಕರಾಳ ದಿನಾಚರಣೆ ಆಚರಿಸಲಾಯಿತು.

    ನಗರದ ಮೈಸೂರು ಬ್ಯಾಂಕ್ ಸರ್ಕಲ್ ಗೆ ಕಪ್ಪು ಬಟ್ಟೆ ಧರಿಸಿ ಆಗಮಿಸಿದ ಕನ್ನಡ ಒಕ್ಕೂಟದ ಹೋರಾಟಗಾರರು ಕ್ಯಾತೆ ತೆಗೆದ ಮಹಾರಾಷ್ಟ್ರ ಸರ್ಕಾರದ ವಿರುದ್ದ ತೊಡೆ ತಟ್ಟಿನಿಂತರು. ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮೈಸೂರು ಬ್ಯಾಂಕ್ ಸರ್ಕಲ್ ನ ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು. ವಾಹನಗಳನ್ನು ತಡೆದರು. ಪ್ರತಿಭಟನೆಯಲ್ಲಿ ಕನ್ನಡ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾರಾ ಗೋವಿಂದ್, ಶಿವರಾಮೇಗೌಡ ಭಾಗಿಯಾಗಿದ್ದರು.

    ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಶಿವಸೇನೆ ವಿರುದ್ದ ಯುದ್ದ ಇವತ್ತಿಗೆ ಮುಗಿಯುವುದಿಲ್ಲ. ಎಲ್ಲಾ ಕನ್ನಡ ಪರ ಸಂಘಟನೆಗಳು ಯುದ್ದ ಘೋಷಿಸಿವೆ. ನಾಳೆ 11.30ಕ್ಕೆ ಬೆಳಗಾವಿಯ ಸುವರ್ಣ ಸೌಧದ ಮೂಲಕ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಮುಂದೆ ಹೋರಾಡುತ್ತೇವೆ. ನಾಳೆ ಮಹಾರಾಷ್ಟ್ರ ಗಡಿಯನ್ನು ದಾಟುತ್ತೇವೆ. ಜೈಲಿಗೆ ಹಾಕುತ್ತಿರಾ ಹಾಕಿ, ಹೆದರುವುದಿಲ್ಲ ಎಂದರು.

    ಇದೇ 29ರಂದು ಚಾಮರಾಜನಗರ ಗಡಿ ಬಂದ್ ಮಾಡುತ್ತೇವೆ. 30ನೇ ತಾರೀಖು ರಾಜ್ಯ ರೈಲು ಬಂದ್ ಹಾಗೂ ಫೆಬ್ರವರಿ 13 ಇಡೀ ಕರ್ನಾಟಕದಾದ್ಯಂತ ಕರಾಳ ದಿನಾಚರಣೆ ಆಚರಿಸತ್ತೇವೆ. ಆ ದಿನ ರಾಜ್ಯಾದ್ಯಂತ ಎಲ್ಲಾ ಕಾರು, ಬಸ್ ತಡೆಯಿರಿ ಎಂದು ಕನ್ನಡ ಹೋರಾಟಗಾರರಿಗೆ ಕರೆ ನೀಡಿದರು. ಜೊತೆಗೆ ಶಿವಮೊಗ್ಗದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೊಂದು ಸರ್ಕಾರದ ದುರಂತ, ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರದು ಬರೀ ನಾಟಕ. ಇಬ್ಬರೂ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

    ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ಮಾತನಾಡಿ, ನಾಳೆಯ ಬೆಳಗಾವಿ ಹೋರಾಟಕ್ಕೆ ಸರ್ಕಾರ ಬೆಂಬಲಕೊಡಲಿ ಎಂದು ಹೇಳಿದರು. ಕೆಲ ಹೊತ್ತಿನ ನಂತರ ಎಲ್ಲಾ ಕನ್ನಡ ಪರ ಹೋರಾಟಗಾರರನ್ನು ಪೋಲಿಸರು ವಶಕ್ಕೆ ಪಡೆದರು.