Tag: ಪಬ್ಲಿಕ್ ಟಿವಿ Andhra Pradesh

  • ಮೇ 5ರಿಂದ 2 ವಾರ ನೈಟ್ ಕರ್ಫ್ಯೂ ವಿಸ್ತರಿಸಿದ ಆಂಧ್ರ ಸರ್ಕಾರ

    ಮೇ 5ರಿಂದ 2 ವಾರ ನೈಟ್ ಕರ್ಫ್ಯೂ ವಿಸ್ತರಿಸಿದ ಆಂಧ್ರ ಸರ್ಕಾರ

    ಹೈದರಾಬಾದ್: ಕೋವಿಡ್-19 ಪ್ರಕರಣಗಳ ಸಂಖ್ಯೆಯನ್ನು ತಡೆಗಟ್ಟಲು ಮೇ 5 ರಿಂದ ಎರಡು ವಾರಗಳವರೆಗೂ ರಾಜ್ಯಾದ್ಯಂತ ನೈಟ್ ಕರ್ಫ್ಯೂ ವಿಧಿಸಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ. ಮಧ್ಯಾಹ್ನ 12 ರಿಂದ 6 ರವರೆಗೆ ಲಾಕ್‍ಡೌನ್ ನಿರ್ಬಂಧಗಳು ಜಾರಿಯಲ್ಲಿರುತ್ತದೆ.

    144 ಸೆಕ್ಷನ್ ಸಿಆರ್​ಪಿಸಿ ಅಡಿಯಲ್ಲಿ ಜಾರಿಯಿರಲಿದ್ದು, ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗುತ್ತದೆ. ಮಧ್ಯಾಹ್ನ 12 ಗಂಟೆಯ ಬಳಿಕ ಕರ್ಫ್ಯೂ ಪ್ರಾರಂಭವಾಗುತ್ತದೆ ಮತ್ತು ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋಮವಾರ ಉನ್ನತ ಮಟ್ಟದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

    ಕೋವಿಡ್-19 ಇರುವುದರಿಂದ ಕಳೆದ ಕೆಲವು ದಿನಗಳಿಂದ ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಫ್ಯೂವನ್ನು ಜಾರಿಗೊಳಿಸಲಾಗಿತ್ತು. ಆದರೆ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೊರೊನಾವನ್ನು ಹೊಗಲಾಡಿಸಲು ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನಿರ್ಧರಿಸಿದ್ದಾರೆ.

  • ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿ – ಪ್ರಯಾಣಿಕನ ಪ್ರಾಣ ಉಳಿಸಿದ ಮಹಿಳಾ ಕಾನ್ಸ್‌ಟೇಬಲ್

    ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿ – ಪ್ರಯಾಣಿಕನ ಪ್ರಾಣ ಉಳಿಸಿದ ಮಹಿಳಾ ಕಾನ್ಸ್‌ಟೇಬಲ್

    ಹೈದರಾಬಾದ್: ಚಲಿಸುತ್ತಿದ್ದ ರೈಲಿನಿಂದ ಕಾಲುಜಾರಿ ಕೆಳಗೆ ಬಿದ್ದ ವ್ಯಕ್ತಿ ಪ್ರಾಣವನ್ನು ರೈಲ್ವೆ ರಕ್ಷಣಾ ಪಡೆಯ ಮಹಿಳಾ ಕಾನ್ಸ್‌ಟೇಬಲ್ ಉಳಿಸಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಘಟನೆ ಕುರಿತ ಸಣ್ಣ ವೀಡಿಯೋವನ್ನು ರೈಲ್ವೆ ಸಚಿವಾಲಯವು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮಹಿಳಾ ಕಾನ್ಸ್‌ಟೇಬಲ್ ಕಾರ್ಯವನ್ನು ಶ್ಲಾಘಿಸಿದೆ. ಇದೀಗ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    ವೀಡಿಯೋನಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲನ್ನು ಏರಲು ಮುಂದಾಗಿ ಕಾಲು ಜಾರಿ ಕೆಳಗೆ ಬೀಳುತ್ತಾನೆ. ಇದನ್ನು ಗಮನಿಸಿದ ಅಲ್ಲೇ ಇದ್ದ ಮಹಿಳಾ ಕಾನ್ಸ್‌ಟೇಬಲ್ ಒಬ್ಬರು ಕೂಡಲೇ ಓಡಿ ಹೋಗಿ ಕೆಳಗೆ ಬಿದ್ದ ಪ್ರಯಾಣಿಕನನ್ನು ಹಿಂದಕ್ಕೆ ಎಳೆದುಕೊಳ್ಳುತ್ತಾರೆ. ಸದ್ಯ ಮಹಿಳಾ ಕಾನ್ಸ್‌ಟೇಬಲ್ ನನ್ನು ಮೇರಿ ಸಾಹೇಲಿ ಎಂದು ಗುರುತಿಸಲಾಗಿದ್ದು, ಈಕೆ ಆರ್‍ಪಿಎಫ್ ಮಹಿಳಾ ಕಾನ್ಸ್‌ಟೇಬಲ್ ಆಗಿದ್ದಾರೆ.

    ಒಟ್ಟಾರೆ ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯ ಪ್ರಾಣ ಉಳಿಸಿ ಮಾನವೀಯತೆ ಮೆರೆದಿರುವ ಮಹಿಳಾ ಕಾನ್ಸ್‌ಟೇಬಲ್ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ವ್ಯಕ್ತಿಯ ಪ್ರಾಣವನ್ನು ಉಳಿಸಿದಕ್ಕಾಗಿ ಕಾನ್ಸ್‌ಟೇಬಲ್ ಗೆ ಧನ್ಯವಾದ ತಿಳಿಸುವುದರ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಗಾಂಜಾಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ಹತ್ಯೆಗೈದ ತಾಯಿ

    ಗಾಂಜಾಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ಹತ್ಯೆಗೈದ ತಾಯಿ

    ಹೈದರಾಬಾದ್: ಗಾಂಜಾ ಚಟಕ್ಕೆ ದಾಸನಾಗಿದ್ದ 17 ವರ್ಷದ ಮಗನನ್ನು ತಾಯಿಯೇ ಕೊಂದಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಪಟ್ಟಣದಲ್ಲಿ ನಡೆದಿದೆ. ಗಾಂಜಾಕ್ಕಾಗಿ ಹಣ ನೀಡುವಂತೆ ಯುವಕ ತಾಯಿಯನ್ನು ಪೀಡಿಸಿದ್ದಾಗ ಇಬ್ಬರ ಮಧ್ಯೆ ಜಗಳವಾಗಿದೆ. ಈ ವೇಳೆ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೌರ ಕಾರ್ಮಿಕಳಾಗಿ ಕೆಲಸ ಮಾಡಿಕೊಂಡಿದ್ದ ಆರೋಪಿ ಸುಮಲತಾ, ತನ್ನ ಮಗನೊಂದಿಗೆ ಗುಂಟೂರಿನ ಎಟಿ ಅಗ್ರಹಾರಂ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು. ಪತಿ ಮರಣದ ನಂತರ ಮನೆ ನಡೆಸಲು ಒಬ್ಬಳೇ ದುಡಿಯುತ್ತಿದ್ದ ತಾಯಿ ಬಳಿ ಗಾಂಜಾ ಖರೀದಿಸಲು ಹಣ ನೀಡು ಎಂದು ಸಿದ್ಧಾರ್ಥ್ ಆಗಾಗ ಪೀಡಿಸುತ್ತಿದ್ದನು. ಇದರಿಂದ ಕೋಪಗೊಂಡ ತಾಯಿ ಮಗನನ್ನು ಕೊಲೆ ಮಾಡಿದ್ದಾಳೆ.

    ಶನಿವಾರ ಮನೆಯಿಂದ ಹೊರಡುವಾಗ ಸುಮಲತಾ ಕೊನೆಗೂ ಅವನನ್ನು ಮುಗಿಸಿ ಬಿಟ್ಟೆ ಎಂದು ಹೇಳಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡ ನೆರೆಹೊರೆಯವರು ಅನುಮಾನಗೊಂಡು ಮನೆ ಒಳಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿದ್ಧಾರ್ಥ್ ಮೃತದೇಹ ಪತ್ತೆಯಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆ ಕುರಿತಂತೆ ಆರೋಪಿ ಸುಮಲತಾ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ (302)ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ರೈಲು ಬರ್ತಿದ್ದಾಗಲೇ ದಾಟಲು ಮುಂದಾದ – ಟ್ರ್ಯಾಕ್‍ನಲ್ಲಿ ಸಿಲುಕಿ ಬೈಕ್ ಜಖಂ

    ರೈಲು ಬರ್ತಿದ್ದಾಗಲೇ ದಾಟಲು ಮುಂದಾದ – ಟ್ರ್ಯಾಕ್‍ನಲ್ಲಿ ಸಿಲುಕಿ ಬೈಕ್ ಜಖಂ

    – ಭಯಾನಕ ವೀಡಿಯೋ ವೈರಲ್

    ಹೈದರಾಬಾದ್: ರೈಲ್ವೆ ಕ್ರಾಸಿಂಗ್ ವೇಳೆ ಅಸಡ್ಡೆ ತೋರಿಸುವ ಮಂದಿಗೆ ಭಾರತೀಯ ರೈಲ್ವೆ ಇಲಾಖೆ ಹಲವಾರು ಎಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದೆ. ಆದರೂ ವ್ಯಕ್ತಿಯೊಬ್ಬ ರೈಲ್ವೆ ಗೇಟ್ ಹಾಕಿದ್ದರೂ ಹಳಿ ದಾಟಲು ಮುಂದಾಗಿ ಬೈಕರ್ ಅಪಘಾತದಿಂದ ಅಚಾನಕ್ ಆಗಿ ತಪ್ಪಿಸಿಕೊಂಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬೈಕರ್ ಒಬ್ಬ ರೈಲ್ವೆ ಗೇಟ್ ಹಾಕಿದ್ದರೂ ಕೂಡ ಹಳಿದಾಟಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ವೇಗವಾಗಿ ಬರುತ್ತಿದ್ದ ರೈಲನ್ನು ನೋಡಿ ಬ್ರೇಕ್ ಹಾಕಿದ್ದಾನೆ. ಆದರೆ ನಿಯಂತ್ರಣ ಕಳೆದುಕೊಂಡ ಬೈಕ್ ಟ್ರ್ಯಾಕ್ ನಲ್ಲಿ ಸಿಲುಕಿ ಛಿದ್ರ ಛಿದ್ರವಾಗಿದೆ. ಅದೃಷ್ಟವಶಾತ್ ಬೈಕಿನಿಂದ ವ್ಯಕ್ತಿ ಹಾರಿದ ಪರಿಣಾಮ ಆತನಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಟ್ರ್ಯಾಕ್ ನಲ್ಲಿ ಸಿಲುಕಿಕೊಂಡ ಬೈಕ್ ಜಖಂ ಆಗಿದೆ.

    ಇದೀಗ ಈ ಭಯಾನಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲ ನೆಟ್ಟಿಗರು ಬೈಕ್ ಸವಾರ ತನ್ನ ಜೀವಕ್ಕೆ ಅಪಾಯ ತಂದಿಟ್ಟುಕೊಂಡಿದ್ದಲ್ಲದೆ ಅಲ್ಲಿದ್ದ ಸ್ಥಳೀಯರ ಜೀವ ಕೂಡ ಬಾಯಿಗೆ ಬರುವಂತೆ ಮಾಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಸದ್ಯ ಅಪಾಯದಿಂದ ಪಾರಾಗಿದ್ದಾನೆ ಎಂದು ಕಮೆಂಟ್ ಮಾಡುತ್ತಿದ್ದಾರೆ.