Tag: ಪಬ್ಲಿಕ್ ಟಿವಿ ವರದಿ

  • ‘ಆಯುಧಪೂಜೆ ನರಕಾಸುರರು’ ವರದಿ ಇಂಪ್ಯಾಕ್ಟ್ – ‘ಬಡವರ ರಕ್ತ ಹೀರುವ ಲಂಚ ಪಿಪಾಸು’ಗಳ ವಿರುದ್ಧ ಕ್ರಮ

    ‘ಆಯುಧಪೂಜೆ ನರಕಾಸುರರು’ ವರದಿ ಇಂಪ್ಯಾಕ್ಟ್ – ‘ಬಡವರ ರಕ್ತ ಹೀರುವ ಲಂಚ ಪಿಪಾಸು’ಗಳ ವಿರುದ್ಧ ಕ್ರಮ

    ಬೆಂಗಳೂರು: ವರ್ಷವಿಡೀ ವ್ಯಾಪಾರವಿಲ್ಲದೆ ಹಬ್ಬದ ಸಮಯದಲ್ಲಿಯಾದ್ರು ಸ್ವಲ್ಪ ವ್ಯಾಪಾರ ಮಾಡೋಣ ಎಂದು ಚಿಂತಿಸುವ ಕೆ.ಆರ್.ಮಾರ್ಕೆಟ್ ವ್ಯಾಪಾರಗಳಿಗೆ ಸಮಸ್ಯೆಯಾಗಿದ್ದ ಅಧಿಕಾರಿಗಳು, ಪುಡಿ ರೌಡಿಗಳ ಕಾಟದ ಸಮಸ್ಯೆಯನ್ನು ಪಬ್ಲಿಕ್ ಟಿವಿ ‘ಆಯುಧಪೂಜೆ ನರಕಾಸುರರು’ ಶೀರ್ಷಿಕೆಯಡಿ ಮೂಲಕ ವರದಿ ಬಿತ್ತರ ಮಾಡಿತ್ತು. ಸದ್ಯ ಈ ವರದಿಯನ್ನು ಗಮನಿಸಿರುವ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.

    ಪಬ್ಲಿಕ್ ಟಿವಿ ವರದಿಯನ್ನು ವೀಕ್ಷಿಸಿದ ಬಳಿಕ ಮೇಯರ್ ಅವರು, ಬಿಬಿಎಂಪಿ ಆಯುಕ್ತರಿಗೆ ನೇರ ಕರೆ ಮಾಡಿ ಇಂತಹ ಅಧಿಕಾರಿಗಳು ಹಾಗೂ ಹಣ ವಸೂಲಿ ಮಾಡುತ್ತಿದ್ದವರ ವಿರುದ್ಧ ಕ್ರಮಕೈಗೊಳ್ಳಲು ತಿಳಿಸಿದರು. ಅಲ್ಲದೇ ಈ ಸಂಬಂಧ ಪಬ್ಲಿಕ್ ಟಿವಿ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ವರದಿ ಮಾಡಿದ ಹಿನ್ನೆಲೆಯಲ್ಲಿ ನೇರ ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳುವುದಾಗಿ ಹೇಳಿದ ಅವರು, ನಾನು ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಅಲ್ಲದೇ ಬಿಬಿಎಂಪಿ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದ ಹಾಗೂ ಬಾಲಕನೊಂದಿಗೆ ಕೆಟ್ಟದಾಗಿ ಮಾತನಾಡಿದ ವ್ಯಕ್ತಿಯ ವಿರುದ್ಧವೂ ಕ್ರಮಕ್ಕೆ ಸೂಚಿಸಿದ್ದೇನೆ. ಮುಂದಿನ 2 ದಿನಗಳಲ್ಲಿ ಸ್ಥಳಕ್ಕೆ ತೆರಳಿ ವ್ಯಾಪಾರಿಗಳ ಬಳಿ ಸಮಸ್ಯೆಗಳನ್ನು ಅಲಿಸುತ್ತೇನೆ. ಅಲ್ಲಿ ನಡೆಯುತ್ತಿರುವ ಬೇರೆ ಬೇರೆ ದಂಧೆಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳುತ್ತೇನೆ ಎಂದರು.

    ಸದ್ಯ ವಿಡಿಯೋದಲ್ಲಿರುವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಹಾಗೂ ಕೂಡಲೇ ಆತನನ್ನು ಬಂಧನ ಕೂಡ ಮಾಡಲು ತಿಳಿಸಿದ್ದೇನೆ. ನಮ್ಮದೇ ಅಧಿಕಾರಿ ಪುಟ್ಟ ಬಾಲಕನ ಕೆಟ್ಟದಾಗಿ ಮಾತನಾಡಿದ್ದು, ಸಂಸ್ಥೆಯ ಗುರುತಿನ ಚೀಟಿ ಹಾಗೂ ವಾಕಿಟಾಕಿ ಕೂಡ ಆತನ ಕೈಯಲ್ಲಿದೆ. ಇವತ್ತಿನ ಘಟನೆಯಿಂದ ನನಗೆ ಮುಜುಕರವಾಗುತ್ತಿದೆ ಎಂದರು.

    https://www.youtube.com/watch?v=NhjMSwy23vg

  • ನನ್ನ ಸುದ್ದಿಗೆ ಬರಬೇಡಿ ಹುಷಾರ್ – ಪಬ್ಲಿಕ್ ಟಿವಿ ಮೇಲೆ ಧಮ್ಕಿ, ಕೇಸ್ ಹಾಕ್ತಾರಂತೆ ಸಿಎಂ!

    ನನ್ನ ಸುದ್ದಿಗೆ ಬರಬೇಡಿ ಹುಷಾರ್ – ಪಬ್ಲಿಕ್ ಟಿವಿ ಮೇಲೆ ಧಮ್ಕಿ, ಕೇಸ್ ಹಾಕ್ತಾರಂತೆ ಸಿಎಂ!

    ಬೆಂಗಳೂರು: ಬಳ್ಳಾರಿಯ ಪಬ್ಲಿಕ್ ಟಿವಿ ವರದಿಗಾರನ ಮೇಲೆ ಸುಳ್ಳು ಕೇಸ್ ಹಾಕಿರುವ ಸಮ್ಮಿಶ್ರ ಸರ್ಕಾರ ಈಗ ವಾಹಿನಿಯ ಮೇಲೆ ಧಮ್ಕಿ ಹಾಕಿದೆ. ಸಿಎಂ ಕುಮಾರಸ್ವಾಮಿ ಅವರು ನನ್ನ ಸುದ್ದಿಗೆ ಬರಬೇಡಿ ಹುಷಾರ್ ಎಂದು ಪಬ್ಲಿಕ್ ಟಿವಿಗೆ ಧಮ್ಕಿ ಹಾಕಿದ್ದಾರೆ.

    ಬಳ್ಳಾರಿ ಕೃಷ್ಣದೇವರಾಯ ವಿವಿ ಬೋಧಕೇತರ ಸಿಬ್ಬಂದಿಯ ನೇಮಕ ಸಂಬಂಧ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇದೆ ಎಂದು ಸುದ್ದಿ ಪ್ರಸಾರ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಪಬ್ಲಿಕ್ ಟಿವಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಅರಮನೆ ಮೈದಾನದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಪಬ್ಲಿಕ್ ಟಿವಿಯ ಮುಖ್ಯಸ್ಥ ರಂಗನಾಥ್ ಅವರು ತಾನು ಬಿಟ್ಟು ಒಳ್ಳೆಯವರು ರಾಜ್ಯದಲ್ಲಿ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ನಿನ್ನೆಯಿಂದ ಅವರು ವಾರ್ ಶುರು ಮಾಡಿದ್ದಾರೆ. ಆದರೆ ಅವರ ಮಾತಿನ ಮೇಲೆ ನಿಗಾ ಇರಲಿ, ನಾವು ಅನ್ನ ತಿನ್ನೋದು, ಮಣ್ಣು ತಿನ್ನುವುದಿಲ್ಲ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.

    ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಕರಣದ ವಿವಿಯ ವಿಸಿಗಳು ರಾಜ್ಯಪಾಲರ ಅಡಿಯಲ್ಲಿ ಬರುತ್ತಾರೆ. ವಿವಿ ನಿಯಮಗಳಂತೆ ಪರೀಕ್ಷೆ ಕರೆದಿದ್ದು, ಅದರಂತೆ ಪರೀಕ್ಷೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿದ್ದು, ಪರೀಕ್ಷೆ ತೆಗೆದುಕೊಂಡಿದ್ದ ಅಭ್ಯರ್ಥಿ ಪರೀಕ್ಷೆಯನ್ನೇ ಬರೆದಿಲ್ಲ. ಈ ಬಗ್ಗೆ ವರದಿಯನ್ನು ಮಾಡಿದವರ ವಿರುದ್ಧ ದೂರು ದಾಖಲಾಗಿದೆ. ಆದರೆ ರಾಜ್ಯದಲ್ಲಿ ಪತ್ರಿಕಾ ಧರ್ಮದ ಮೇಲೆ ಬಲ ಪ್ರಯೋಗ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವವರ ಮೇಲೆ ಇಂತಹ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

    ನನ್ನ ಮೇಲೆ ಗದಾಪ್ರಹಾರ ಮಾಡುತ್ತೀರಾ? ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲಿಗೆ ಹೋಗಿ ಬಂದವರ ಕುಟುಂಬದಲ್ಲಿ ಹುಟ್ಟಿದವನು ನಾನು. ಇದಕ್ಕೆ ನಾನು ಹೆದರುವುದಿಲ್ಲ. ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ರೌಡಿಶೀಟರ್ ಇಟ್ಟುಕೊಂಡು ಪಬ್ಲಿಕ್ ಟಿವಿ ನಡೆಸುತ್ತಿದ್ದೀರಾ? ನಾನು ನಿಮ್ಮ ವಿರುದ್ಧ ಚಾಲೆಂಜ್ ತಗೊಂಡಿದ್ದೇನೆ. ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನಿಮ್ಮ ಕೆಲಸವನ್ನು ಕಾನೂನು ವ್ಯಾಪ್ತಿಯಲ್ಲಿ ಈಡೇರಿಸಬೇಕು. ಇಲ್ಲ ಅಂದ್ರೆ ನಿಮ್ಮ ವಿರುದ್ಧವೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಚ್ಚರಿಕೆ ನೀಡಿದರು.

    ಕ್ಯಾಮೆರಾ ಮುಂದೆ ಕುಳಿತು ಮಾತನಾಡುವುದು ಬೇರೆ, ಸಾರ್ವಜನಿಕವಾಗಿ ಜನರ ಮುಂದೇ ನಿಂತು ಮಾತನಾಡುವುದು ಬೇರೆ. ಒಂದು ಕಾಲದಲ್ಲಿ ನೀವು ನಮ್ಮ ಆತ್ಮೀಯ ಸ್ನೇಹಿತರೇ ಆಗಿದ್ದೀರಿ. ನಿಮ್ಮ ಜೊತೆ ಕುಳಿತು ಊಟ ಮಾಡಿದ್ದೇನೆ. ಆದರೆ ಜೀವನದಲ್ಲಿ ನಿಮಗಿಂತ ಹೆಚ್ಚು ವಿಶ್ವಾಸ ನಾನು ಜನರಲ್ಲಿ ಉಳಿಸಿಕೊಂಡಿದ್ದೇನೆ. ಸಂಪತ್ತನ್ನು ಲೂಟಿ ಮಾಡಿ ಜೀವನ ನಡೆಸಲು ಬಂದಿಲ್ಲ. ನಿನ್ನೆ 20 ನಿಮಿಷ ಮಾತನಾಡಿದ್ದೀರಿ. ಆದರೆ ನಾನು ಹೆದರೊಲ್ಲ, ಜನರ ವಿಶ್ವಾಸದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ನಾನು ಇಷ್ಟು ದಿನ ಸುಮ್ಮನಿದ್ದೆ, ಈಗ ಸುಮ್ಮನೆ ಇರುವುದಿಲ್ಲ. ನಾನು ಯುದ್ಧ ಸಾರುತ್ತೇನೆ. ನಾನು ಹೋರಾಟಕ್ಕೆ ಸಿದ್ಧ ಎಂದರು.

    ಮಾಧ್ಯಮದವರನ್ನ ತೃಪ್ತಿಪಡಿಸಲು ನಾನು ಕೆಲಸ ಮಾಡುತ್ತಿಲ್ಲ. ನಾಡಿನ ಜನರ ತೃಪ್ತಿಗಾಗಿ ಕೆಲಸ ಮಾಡುತ್ತಿದ್ದೇನೆ. ಮಾಧ್ಯಮಗಳಿಂದ ಎಷ್ಟು ಚಿತ್ರಹಿಂಸೆ ಅನುಭವಿಸಿದ್ದೇನೆ ಗೊತ್ತಿದೆ. ಈಗ ನಾನು ಎಲ್ಲದಕ್ಕೂ ಸಿದ್ಧವಾಗಿದ್ದು, ನಿಮ್ಮ ವಿರುದ್ಧ ನಾನು ಕಾನೂನು ಕ್ರಮ ಜರುಗಿಸುತ್ತೇನೆ. ನಿಮ್ಮ ಒಬ್ಬರಿಗೆ ಮಾತನಾಡಲು ಬರುವುದಿಲ್ಲ. ನನಗೂ ಮಾತನಾಡಲು ಬರುತ್ತದೆ. ಸುಮ್ಮನೆ ಆರೋಪ ಮಾಡುತ್ತೀರಾ? ಒಂದಾದರೂ ಒಳ್ಳೆ ಕೆಲಸ ಮಾಡಿದರ ಬಗ್ಗೆ ಮಾತಾಡಿಲ್ಲ ಎಂದು ಹೇಳಿ ಕಿಡಿಕಾರಿದರು.

    ಅಧಿಕಾರ ಶಾಶ್ವತ ಅಲ್ಲ ಎಂದು ಪಬ್ಲಿಕ್ ಟಿವಿ ಮುಖ್ಯಸ್ಥರು ಹೇಳಿದ್ದು, 1999 ನಾವು ಮೂರು ಜನ ಸೋತ್ತಿದ್ದು, ಮತ್ತೆ 5 ವರ್ಷದಲ್ಲಿ ಮತ್ತೆ ಅದೇ ಜನ ಗೆಲ್ಲಿಸಿದ್ದರು. ನಿಮ್ಮಿಂದ ನಾನು ಪಾಠ ಕಲಿಯಬೇಕಾಗಿಲ್ಲ. ಹುಷಾರ್……. ನನ್ನ ಸುದ್ದಿಗೆ ಬರಬೇಡಿ. ನಿಮ್ಮ ಪಂಥಾಹ್ವಾನ ಸ್ವೀಕಾರ ಮಾಡಿದ್ದೇನೆ. ಹೆದರಿಕೊಂಡು ನಾನು ಹೋಗೊಲ್ಲ ಎಂದರು.

    ಜೆಡಿಎಸ್ ಚುನಾಯಿತ ಪ್ರತಿನಿಧಿಗಳ ಅಭಿನಂದನಾ ಕಾರ್ಯಕ್ರಮದ ವೇದಿಕೆಯನ್ನು ಸಿಎಂ ಕುಮಾರಸ್ವಾಮಿ ಅವರು ಸಂಪೂರ್ಣವಾಗಿ ಮಾಧ್ಯಮಗಳಿಗೆ ಧಮ್ಕಿ ಹಾಕುವ ಕಾರ್ಯಕ್ಕೆ ಸೀಮಿತ ಮಾಡಿದ್ದು ಇಂದಿನ ಜೆಡಿಎಸ್ ಕಾರ್ಯಕ್ರಮದ ವಿಶೇಷತೆಯಾಗಿತ್ತು.

  • ಗಂಭೀರವಾಗಿ ಪರಿಶೀಲಿಸುವೆ – ಪಬ್ಲಿಕ್ ಟಿವಿ ಗ್ರಾಮ ‘ವಾಸ್ತವ’ ವರದಿಗೆ ಸಿಎಂ ಸ್ಪಂದನೆ

    ಗಂಭೀರವಾಗಿ ಪರಿಶೀಲಿಸುವೆ – ಪಬ್ಲಿಕ್ ಟಿವಿ ಗ್ರಾಮ ‘ವಾಸ್ತವ’ ವರದಿಗೆ ಸಿಎಂ ಸ್ಪಂದನೆ

    ಬೆಂಗಳೂರು: ಎಚ್‍ಡಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ನಡೆಸಿದ್ದ ವೇಳೆ ಕೈಗೊಂಡಿದ್ದ ಗ್ರಾಮ ವಾಸ್ತವ್ಯದ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಗ್ರಾಮ ವಾಸ್ತವ್ಯದ ಲೋಪ ದೋಷಗಳು ಏನು? ಯಾವೆಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿ ಆಗಿದೆ. ಇಂದಿಗೂ ಗ್ರಾಮದಲ್ಲಿ ಯಾವೆಲ್ಲಾ ಸಮಸ್ಯೆಗಳು ಇದೆ ಎಂಬುವುದರ ವಾಸ್ತವತೆಯನ್ನು ತೆರೆದಿಟ್ಟಿತ್ತು.

    ಪಬ್ಲಿಕ್ ಟಿವಿಯ ವರದಿಯ ನೋಡಿರುವ ಸಿಎಂ ಕುಮಾರಸ್ವಾಮಿ ಅವರು ವರದಿಯ ಸಕರಾತ್ಮಕ ಅಂಶಗಳನ್ನು ಸ್ವೀಕರಿಸಿ, ಗ್ರಾಮಗಳ ಕುಂದು ಕೊರತೆಗಳ ನಿವಾರಣೆಗೆ ಕಾರ್ಯ ನಿರ್ವಹಿಸುತ್ತೇನೆ. ಅಲ್ಲದೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ವರದಿಯಲ್ಲಿ ಸಿಎಂ ಕುಮಾರಸ್ವಾಮಿ ಅವರು ವಾಸ್ತವ್ಯ ಮಾಡಿದ್ದ ಗ್ರಾಮದಗಳಲ್ಲಿ ಇಂದಿಗೂ ಯಾವ ಸಮಸ್ಯೆಗಳಿವೆ ಎಂಬುವುದನ್ನು ವಿಸ್ತಾವರವಾಗಿ ವಿವರಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ಅಧಿಕಾರಿಗಳು, ಸ್ಥಳೀಯ ನಾಯಕರ ಗಮನಕ್ಕೆ ತಂದು ಕಾರ್ಯಗಳನ್ನು ಮಾಡುತ್ತೇನೆ. ಮುಂದಿನ ಕಾರ್ಯಕ್ರಮಗಳಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗುವುದನ್ನು ಅನುಸರಿಸಲು ಖಂಡಿತ ಪ್ರಯತ್ನಿಸುವೆ ಎಂದಿದ್ದಾರೆ. ಇದನ್ನು ಓದಿ: ಸಿಎಂ ವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿ ಈಗ ಹೇಗಿದೆ? ಎಷ್ಟು ಭರವಸೆ ಪೂರ್ಣವಾಗಿದೆ? – ಕಂಪ್ಲೀಟ್ ವರದಿ ಓದಿ

    ಸಿಎಂ ಹೇಳಿಕೆಯಲ್ಲಿ ಏನಿದೆ?
    ನಾನು ಗ್ರಾಮ ವಾಸ್ತವ್ಯ ಮಾಡುವೆನೆಂದು ಘೋಷಿಸಿದ ದಿನದಿಂದ ಮಾಧ್ಯಮಗಳಲ್ಲಿ ನಾನು 2006-07 ರ ಅವಧಿಯಲ್ಲಿ ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ-ಗತಿ, ಕುಟುಂಬಗಳ ಕುರಿತು ವರದಿಗಳನ್ನು ಪ್ರಕಟಿಸುತ್ತಿರುವುದನ್ನು ಗಮನಿಸುತ್ತಿರುವೆ. ಈ ಹಿನ್ನೆಲೆಯಲ್ಲಿ ಎರಡು ಮಾತು:

    ಗ್ರಾಮ ವಾಸ್ತವ್ಯ ಎನ್ನುವುದು ಯಾವುದೇ ಜನಪ್ರಿಯತೆ ಗಿಟ್ಟಿಸುವ ಗಿಮಿಕ್ ಅಲ್ಲ. ಈ ಪರಿಕಲ್ಪನೆಯ ಮೂಲ ಪುರುಷನೂ ನಾನಲ್ಲ. ನನ್ನ ಗ್ರಾಮ ವಾಸ್ತವ್ಯ ಪ್ರಾರಂಭವಾಗಿದ್ದು ಆಕಸ್ಮಿಕವಾಗಿ, ಪ್ರವಾಹ ಪೀಡಿತ ಕೃಷ್ಣಾ ನದಿ ದಂಡೆಯ ಪಿ.ಕೆ. ನಾಗನೂರಿನಿಂದ ಎನ್ನುವುದು ನಿಮಗೆಲ್ಲಾ ತಿಳಿದ ವಿಚಾರ. ಗ್ರಾಮ ವಾಸ್ತವ್ಯ ಎಂಬ ಪದವನ್ನು ಚಾಲ್ತಿಗೆ ತಂದವರೂ ನಮ್ಮ ಮಾಧ್ಯಮ ಮಿತ್ರರೇ. ಆದರೆ ಈ ಸಂದರ್ಭದಲ್ಲಿ ಜನರು ತೋರಿದ ಪ್ರೀತಿ, ವಿಶ್ವಾಸ ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ. ಜನರ ಸಮಸ್ಯೆಗಳು, ಬದುಕಿನ ಕಟು ವಾಸ್ತವಗಳನ್ನು ಅರಿಯಲು ನೆರವಾಗಿದೆ. ಸರ್ಕಾರದಿಂದ ಆಗಬೇಕಾದ್ದು ಏನು ಎಂಬ ಬಗ್ಗೆ ನೇರ, ಸರಳವಾದ ಅತ್ಯುತ್ತಮ ಸಲಹೆಗಳೂ ಬಂದಿವೆ.

    ಸಾರಾಯಿ ನಿಷೇಧ, ಲಾಟರಿ ನಿಷೇಧ, ಸಾಲ ಮನ್ನಾ, ಸಾವಿರಕ್ಕೂ ಹೆಚ್ಚು ಪ್ರೌಢಶಾಲೆಗಳು, 500ಕ್ಕೂ ಹೆಚ್ಚು ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆ, ಗ್ರಾಮಗಳ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯ ಸುವರ್ಣ ಗ್ರಾಮ ಯೋಜನೆ – ಇವೆಲ್ಲಾ ಗ್ರಾಮವಾಸ್ತವ್ಯದ ಫಲಶ್ರುತಿಗಳು. ನನ್ನ ಅಧಿಕಾರಾವಧಿಯ ನಂತರ ಸುವರ್ಣ ಗ್ರಾಮ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬಾರದೇ ಇರುವುದು ವಿಷಾದನೀಯ.

    ಗ್ರಾಮ ವಾಸ್ತವ್ಯದ ಮುಖ್ಯ ಗುರಿ, ಆಡಳಿತ ಯಂತ್ರದ ಕಾರ್ಯವೈಖರಿ ಅರಿಯುವುದು. ಸರ್ಕಾರ ರೂಪಿಸಿದ ಯೋಜನೆ ಫಲಕಾರಿಯೇ? ಜನರ ಅಭಿಪ್ರಾಯವೇನು ಎಂಬುದನ್ನು ಅರಿಯುವುದು, ಸುತ್ತಲಿನ ಗ್ರಾಮಗಳ ಜನರೂ ಸೇರುತ್ತಾರೆ. ಅವರಿಂದ ಅಹವಾಲು ಸ್ವೀಕರಿಸಿ ಪರಿಹರಿಸುವುದು. ಕಾನೂನು ವ್ಯಾಪ್ತಿಯಲ್ಲಿ ಇವುಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಕೆಲವು ಮನವಿಗಳನ್ನು ಪರಿಗಣಿಸಲು ಸಾಧ್ಯವಾಗದೆ ಇರಬಹುದು. ಇಂಥವುಗಳನ್ನು ನೀವು ಮತ್ತೆ ಗಮನಕ್ಕೆ ತರುತ್ತಿದ್ದೀರಿ. ಖಂಡಿತವಾಗಿಯೂ ಅವುಗಳನ್ನು ಗಂಭೀರವಾಗಿ ಪರಿಶೀಲಿಸುವೆ. ಆ ಗ್ರಾಮದ ಅಭಿವೃದ್ಧಿ ಗ್ರಾಮ ವಾಸ್ತವ್ಯದ ಫಲಶ್ರುತಿಯ ಒಂದು ಭಾಗವಷ್ಟೆ. ಅದೇ ಕೇಂದ್ರ ಗುರಿಯಲ್ಲ.

    ಜನರಿಗೆ ಅಗತ್ಯವಿರುವ ಯೋಜನೆಗಳನ್ನು ಜಾರಿಗೊಳಿಸಿದಾಗ ಅವು ಸಹಜವಾಗಿಯೇ ಯಶಸ್ವಿಯಾಗುತ್ತವೆ. ಅದೇ ರೀತಿ ಯೋಜನೆಗಳನ್ನು ರೂಪಿಸಿ, ಸರ್ಕಾರ ಜನರ ಮೇಲೆ ಹೇರಿದರೆ ಯಶಸ್ವಿಯಾಗದು. ಈ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ನನ್ನ ಅನುಭವ.

    ಅಂತೆಯೇ ಎಚ್‍ಐವಿ ಪೀಡಿತ ಕುಟುಂಬವೊಂದರ ಮನೆಯಲ್ಲಿ ನಾನು ವಾಸ್ತವ್ಯ ಹೂಡಿದ್ದರಿಂದ ಆ ಕುಟುಂಬ ಊರನ್ನೇ ತೊರೆದಿದೆ ಎಂದು ವರದಿಯಾಗಿದೆ. ಇದು ನಿಜಕ್ಕೂ ದುರದೃಷ್ಣಕರ. ಎಚ್‍ಐವಿ/ ಏಯ್ಡ್ಸ್ ಬಗ್ಗೆ ಜನರಿಗಿರುವ ಅಂಧ ವಿಶ್ವಾಸವನ್ನು ದೂರ ಮಾಡುವ ಉದ್ದೇಶದಿಂದ ಏಯ್ಡ್ಸ್ ನಿಯಂತ್ರಣ ಮಂಡಳಿ ಅಧಿಕಾರಿಗಳ ಮನವಿಯ ಮೇರೆಗೆ ಅಲ್ಲಿ ವಾಸ್ತವ್ಯ ಮಾಡಿದ್ದೆ. ಆದರೆ ಸಮಾಜ ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಆದರೆ ವೈಯಕ್ತಿಕವಾಗಿಯೂ ನಾನು ಆ ಕುಟುಂಬಕ್ಕೆ ನೆರವಾಗಿದ್ದು, ಅದನ್ನು ಇಲ್ಲಿ ಚರ್ಚಿಸಲು ಹೋಗುವುದಿಲ್ಲ. ಮತ್ತೊಮ್ಮೆ ಆ ಕುಟುಂಬ ವನ್ನು ಸಂಪರ್ಕಿಸಿ ಹೇಗೆ ನೆರವಾಗಬಹುದು ಎಂದು ಪರಿಶೀಲಿಸುವೆ.

    https://www.youtube.com/watch?v=YgZ7K9ZSD2E

    ಮಾಧ್ಯಮಗಳು ಪ್ರಕಟಿಸುತ್ತಿರುವ ವರದಿಗಳಲ್ಲಿರುವ ಸಕಾರಾತ್ಮಕ ಸಲಹೆಗಳನ್ನು ಮುಕ್ತ, ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸುವೆ. ಮುಂದಿನ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗುವುದನ್ನು ಅನುಸರಿಸಲು ಖಂಡಿತ ಪ್ರಯತ್ನಿಸುವೆ ಎಂದಿದ್ದಾರೆ.