ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಕಳ್ಳಾಟ ಬಯಲಾದ ಬಳಿಕ ನಾಯಕ ಸ್ಮಿತ್ ಹಾಗೂ ಉಪನಾಯಕ ವಾರ್ನರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣ ಏಪ್ರಿಲ್ 6 ರಂದು ಆರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕೆಲ ಬದಲಾವಣೆಗೆ ಕಾರಣವಾಗಲಿದೆ ಎನ್ನಲಾಗಿದೆ.

ರಾಜಸ್ಥಾನ ರಾಯಲ್ಸ್ ತಂಡ ನಾಯಕತ್ವ ವಹಿಸುವ ಸ್ಮಿತ್ ಹಾಗೂ ಸನ್‍ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ವಹಿಸುವ ಡೇವಿಡ್ ವಾರ್ನರ್ ಸ್ಥಾನಗಳು ಬದಲಾಗುವ ಸಾಧ್ಯತೆಗಳಿವೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ, ಈ ಘಟನೆ ಬಹಳ ಗಂಭೀರವಾಗಿದ್ದು, ಐಸಿಸಿ ಸಮಿತಿ ತೆಗೆದುಕೊಳ್ಳುವ ನಿರ್ಧಾರಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.
2018ರ ಐಪಿಎಲ್ ಪಂದ್ಯಗಳು ಏಪ್ರಿಲ್ 7 ರಿಂದ ಆರಂಭವಾಗುತ್ತಿರುವುದರಿಂದ ಈ ಅವಧಿಗೂ ಮುನ್ನವೇ ನಿರ್ಧಾರ ಕೈಗೊಳ್ಳಲಾಗುತ್ತದೆ. ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈ ವೇಳೆಯಲ್ಲಿ ನಿರ್ಧಾರ ಪ್ರಕಟಿಸುವುದು ಸೂಕ್ತ ಕ್ರಮವಲ್ಲ, ತನಿಖೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದು, ಬಿಸಿಸಿಐ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಸಮಿತಿ ಕೈಗೊಳ್ಳುವ ತೀರ್ಮಾನ ನಿರೀಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಕರಣದ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ರಾಜಸ್ತಾನ ರಾಯಲ್ಸ್ ತಂಡದ ಮುಖ್ಯಸ್ಥ ರಂಜಿತ್ ಬಾರ್ತಕುರ್, ಸ್ಮಿತ್ ಅವರ ಬಗ್ಗೆ ನಿರ್ಧಾರ ಕೈಗೊಳ್ಳುವ ಮುನ್ನ ಬಿಸಿಸಿಐ ನಿರ್ದೇಶನಗಳನ್ನು ಪಡೆಯುವುದಾಗಿ ತಿಳಿಸಿದ್ದಾರೆ. ಅಲ್ಲದೇ ಕ್ರಿಕೆಟ್ ಆಟಕ್ಕೆ ಕಳಂಕ ತರುವ ಘಟನೆಗಳನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಕುರಿತು ಇದುವರೆಗೆ ಹೈದರಾಬಾದ್ ತಂಡ ಮಾಲೀಕರು ಯಾವುದೇ ಪ್ರತಿಕ್ರಿಯೇ ನೀಡಿಲ್ಲ.
ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಕ್ಯಾಮರಾನ್ ಬ್ಯಾನ್ ಕ್ರಾಫ್ಟ್ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಕ ಸ್ಟಿವ್ ಸ್ಮಿತ್ ಹಾಗೂ ಉಪ ನಾಯಕ ಡೇವಿಡ್ ವಾರ್ನರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್‍ನ ಇನ್ನು 2 ದಿನದ ಆಟ ಬಾಕಿಯಿರುವಾಗಲೆ ರಾಜೀನಾಮೆ ನೀಡಿದ್ದು, ವಿಕೇಟ್ ಕೀಪರ್ ಟೈಮ್ ಪೈನ್ ತಂಡದ ಉಸ್ತುವಾರಿ ನಾಯಕರಾಗಲಿದ್ದಾರೆ. ಇಬ್ಬರು ತಮ್ಮ ಸ್ಥಾನದಿಂದ ಕೆಳಗಿಳಿದಿರುವ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಸಿಇಒ ಜೇಮ್ಸ್ ಸುಟರ್‍ಲ್ಯಾಂಡ್ ಸ್ಪಷ್ಟಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಸದ್ಯ ಐಸಿಸಿ ಸ್ಮಿತ್ ಗೆ ಪಂದ್ಯದ 100% ದಂಡ, ಒಂದು ಪಂದ್ಯ ನಿಷೇಧ ಹಾಗೂ ಕ್ಯಾಮರಾನ್ ಬ್ಯಾನ್‍ಕ್ರಾಪ್ಟ್ ಗೆ ಪಂದ್ಯದ 75% ದಂಡ, 3 ಡಿಮೆರಿಟ್ ಅಂಕಗಳನ್ನು ನೀಡಿದೆ.
ರಾಜಸ್ಥಾನ ರಾಯಲ್ಸ್ ತಂಡ 2 ವರ್ಷದ ನಿಷೇಧದ ಬಳಿಕ ಐಪಿಎಲ್ ಗೆ ಆಗಮಿಸುತ್ತಿದೆ. ಈ ಹಿಂದಿನ 2014 ಮತ್ತು 15 ಸರಣಿಗಳಲ್ಲಿ ಸ್ಮಿತ್ ಆರ್ ಆರ್ ತಂಡವನ್ನು ಮುನ್ನಡೆಸಿದ್ದರು. ಈ ಬಾರಿಯ ಹರಾಜು ವೇಳೆಯು ತಂಡದ ಮಾಲೀಕರು ಸ್ಮಿತ್ ರನ್ನು ಉಳಿಸಿಕೊಂಡಿದ್ದರು. 2017 ರಲ್ಲಿ ಪುಣೆ ತಂಡದ ನಾಯಕತ್ವ ವಹಿಸಿದ್ದ ಸ್ಮಿತ್, ತಂಡ ಫೈನಲ್ ಪ್ರವೇಶ ಪಡೆಯುವುದರಲ್ಲಿ ಪ್ರಮುಖ ಸ್ಥಾನ ವಹಿಸಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿ ಪಡೆದಿತ್ತು.
ನಡೆದಿದ್ದು ಏನು?
ಆಸೀಸ್ ಆರಂಭಿಕ ಆಟಗಾರ ಕ್ಯಾಮರಾನ್ ಬ್ಯಾನ್‍ಕ್ರಾಪ್ಟ್ ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ 3ನೇ ದಿನದ ವೇಳೆ ಚೆಂಡನ್ನ ವಿರೂಪಗೊಳಿಸಿದ್ದರು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದಿನದಾಟದ ಬಳಿಕ ಮಾತನಾಡಿದ ಆಸೀಸ್ ನಾಯಕ ಸ್ಮಿತ್ ಹಾಗೂ ಬ್ಯಾನ್‍ಕ್ರಾಫ್ಟ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ
