Tag: ಪಬ್ಲಿಕ್ ಟಿ

  • ವಿಷ್ಣು ವಿಶಾಲ್ ಜೊತೆ ಜ್ವಾಲಾಗುಟ್ಟಾ ಮದ್ವೆಗೆ ಮುಹೂರ್ತ ನಿಗದಿ

    ವಿಷ್ಣು ವಿಶಾಲ್ ಜೊತೆ ಜ್ವಾಲಾಗುಟ್ಟಾ ಮದ್ವೆಗೆ ಮುಹೂರ್ತ ನಿಗದಿ

    – ಯಾರು ಈ ವಿಷ್ಣು ವಿಶಾಲ್?

    ಚೆನ್ನೈ: ಇದೇ ಏಪ್ರಿಲ್ 22ರಂದು ಭಾರತೀಯ ಬ್ಯಾಡ್ಮಿಂಟನ್ ಡಬಲ್ ವಿಭಾಗದ ತಾರೆ ಜ್ವಾಲಾಗುಟ್ಟಾ ಗೆಳೆಯ, ನಟ ವಿಷ್ಣು ವಿಶಾಲ್ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಸೆಪ್ಟೆಂಬರ್ ನಲ್ಲಿ ಜ್ವಾಲಾಗುಟ್ಟಾ ಜನ್ಮದಿನದಂದೇ ನಟ ವಿಶಾಲ್ ಪ್ರಪೋಸ್ ಮಾಡಿದ್ದರು. ಅದೇ ದಿನ ವಿಷ್ಣು ವಿಶಾಲ್ ಪ್ರಪೋಸಲ್ ಸ್ವೀಕರಿಸಿದ್ದ ಜ್ವಾಲಾಗುಟ್ಟಾ, ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಎರಡೂ ಕುಟುಂಬಗಳ ಆಶೀರ್ವಾದದೊಂದಿಗೆ ಆಪ್ತರ ಸಮ್ಮುಖದಲ್ಲಿ ಇದೇ 22ರಂದು ನಾವು ಹೊಸ ಜೀವನಕ್ಕೆ ಕಾಲಿಡುತ್ತಿದ್ದೇವೆ. ನಮಗೆ ನೀವು ತೋರಿಸಿದ ಪ್ರೀತಿಗೆ ಚಿರಋಣಿ. ನಿಮ್ಮ ಆಶೀರ್ವಾದ ಮತ್ತು ಹಾರೈಕೆ ನಮ್ಮ ಮೇಲಿರಲಿ. ಪ್ರೀತಿ, ನಿಷ್ಠೆ, ಸ್ನೇಹದೊಂದಿಗೆ ಒಂದಾಗಿ ನಮ್ಮ ಜೀವನದ ಹೊಸ ಪ್ರಯಾಣ ಆರಂಭಿಸುತ್ತಿದ್ದೇವೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆಸಿದ್ದಾರೆ. 37 ವರ್ಷದ ಜ್ವಾಲಾ ಗುಟ್ಟಾ 2010 ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದು, ಅರ್ಜುನ ಪ್ರಶಸ್ತಿ ಸಹ ಪಡೆದುಕೊಂಡಿದ್ದಾರೆ.

    36 ವರ್ಷದ ನಟ ವಿಷ್ಣು ವಿಶಾಲ್ ಮೂಲತಃ ತಮಿಳುನಾಡಿನ ವೆಲ್ಲೊರು ಮೂಲದವರು. ಇವರ ಮೂಲ ಹೆಸರು ವಿಶಾಲ್ ಕುಡವಾಲ. ಹೆಚ್ಚಾಗಿ ತಮಿಳಿನ ಕ್ರೀಡಾ ಆಧಾರಿತ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ವಿಶಾಲ್, 2009 ರಲ್ಲಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ. 17ಕ್ಕೂ ಹೆಚ್ಚು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

    ವೆನ್ನಿಲಾ ಕಬ್ಬಡಿ ಕುಝೂ, ಬಲೆ ಪಾಂಡೀಯನ್, ಕಾದನ್, ಸಿಲ್ಲುಕುವರಿಪಟ್ಟಿ ಸಿಂಗಮ ಇವರ ಪ್ರಮುಖ ಚಿತ್ರಗಳು. ಜೊತೆಗೆ ತಮಿಳಿನ ಹಲವು ಚಿತ್ರಗಳನ್ನ ನಿರ್ಮಾಣ ಸಹ ಮಾಡಿದ್ದಾರೆ. ಈ ಹಿಂದೆ 2010ರಲ್ಲಿ ತಮಿಳು ಖ್ಯಾತ ನಟ ಕೆ ನಟರಾಜ್ ರ ಪುತ್ರಿ ರಜನಿ ನಟರಾಜ್ ರನ್ನ ಮದುವೆಯಾಗಿದ್ದರು. ಕಾರಣಾಂತರಗಳಿಂದ 2018ರಲ್ಲಿ ಜೋಡಿ ಕಾನೂನತ್ಮಾಕವಾಗಿ ಬೇರ್ಪಟ್ಟಿತ್ತು. ಇದೇ 22ಕ್ಕೆ ಬ್ಯಾಡ್ಮಿಂಟನ್ ತಾರೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

     

  • ಶೀಘ್ರದಲ್ಲಿಯೇ ಕೆಜಿಎಫ್ ಗರ್ಲ್ ಮದುವೆ

    ಶೀಘ್ರದಲ್ಲಿಯೇ ಕೆಜಿಎಫ್ ಗರ್ಲ್ ಮದುವೆ

    ಮುಂಬೈ: ಕೆಜಿಎಫ್ ಗರ್ಲ್ ಮೌನಿ ರಾಯ್ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ ಅನ್ನೋ ಸುದ್ದಿಯೊಂದು ಬಾಲಿವುಡ ಅಂಗಳದಲ್ಲಿ ಹರಿದಾಡುತ್ತಿದೆ. ಗೆಳೆಯ ಸೂರಜ್ ನಂಬಿಯಾರ್ ಜೊತೆ ಮೌನಿ ಮದುವೆ ನಡೆಯಲಿದೆ ಎನ್ನಲಾಗುತ್ತಿದ್ದು, ಕೆಲ ದಿನಗಳ ಹಿಂದೆ ಗೆಳೆಯನ ಪೋಷಕರನ್ನ ನಟಿ ಭೇಟಿಯಾಗಿದ್ದರು. ಸೂರಜ್ ಕುಟುಂಬದ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನ ಮೌನಿ ರಾಯ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಇಷ್ಟು ದಿನ ರಿಲೇಶನ್‍ಶಿಪ್ ನಲ್ಲಿದ್ದ ಮೌನಿ ಮತ್ತು ಸೂರಜ್ ಮದುವೆಯಾಗಲು ನಿರ್ಧರಿಸಿದ್ದಾರೆ. ಹಾಗಾಗಿ ಇಬ್ಬರು ಎರಡೂ ಕುಟುಂಬಗಳ ಸದಸ್ಯರನ್ನ ಭೇಟಿಯಾಗುತ್ತಿದ್ದಾರೆ. ಮದುವೆ ಸಂಬಂಧ ಎರಡು ಕುಟುಂಬಸ್ಥರು ನಟಿ ಮಂದಿರಾ ಬೇಡಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕುಟುಂಬಗಳಲ್ಲಿ ಮಾತುಕತೆ ನಡೆದಿದ್ದು, ಆದ್ರೆ ಇಬ್ಬರು ಎಲ್ಲಿಯೂ ಮದುವೆ ಆಗುತ್ತಿರುವ ವಿಷಯವನ್ನ ಹೇಳಿಕೊಂಡಿಲ್ಲ. ಇದಕ್ಕೂ ಮೊದಲು ಮೋಹಿತ್ ರೈನಾ ಜೊತೆ ಮೌನಿ ರಾಯ್ ಹೆಸರು ಕೇಳಿ ಬಂದಿತ್ತು. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಬ್ರೇಕಪ್ ಮಾಡಿಕೊಂಡು ಪ್ರತ್ಯೇಕವಾಗಿದ್ದಾರೆ.

     

    View this post on Instagram

     

    A post shared by mon (@imouniroy)

    2006ರಲ್ಲಿ ಏಕ್ತಾ ಕಪೂರ್ ನಿರ್ಮಾಣದ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಮೌನಿ ರಾಯ್ ಗೆ ‘ದೇವೋಂ ಕಾ ದೇವ್ ಮಹದೇವ್’ ಮತ್ತು ‘ನಾಗಿಣಿ’ ಸೀರಿಯಲ್ ಹೆಸರು ತಂದು ಕೊಟ್ಟಿತ್ತು. ಅಕ್ಷಯ್ ಕುಮಾರ್ ಅಭಿನಯದ ಗೋಲ್ಡ್ ಮೌನಿ ರಾಯ್ ಅಭಿನಯದ ಮೊದಲ ಸಿನಿಮಾ. ಇನ್ನು ಕೆಜಿಎಫ್ ಚಾಪ್ಟರ್-1ರ ಹಿಂದಿ ಅವತರಣಿಕೆಯಲ್ಲಿ ಗಲಿ ಗಲಿ ಮೇ ಹಾಡಿಗೆ ರಾಕಿ ಬಾಯ್ ಯಶ್ ಜೊತೆ ಮೌನಿ ರಾಯ್ ಹೆಜ್ಜೆ ಹಾಕಿದ್ದರು.

  • ಸಚಿವ, ಸಂಸದರ ಹೊಸ ಕಾರು ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟ ಸರ್ಕಾರ

    ಸಚಿವ, ಸಂಸದರ ಹೊಸ ಕಾರು ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟ ಸರ್ಕಾರ

    ಬೆಂಗಳೂರು: ಕೊರೊನಾ ಆರ್ಥಿಕ ಸಂಕಷ್ಟ ಕಾಸಿಲ್ಲ ಎಂದು ಹೇಳುವ ಸರ್ಕಾರ ಸಚಿವರು ಮತ್ತು ಸಂಸದರಿಗೆ ಹೊಸ ಕಾರು ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಟೀಕೆಗೆ ಗುರಿಯಾಗಿದೆ.

    ಸಚಿವರು, ಸಂಸದರಿಗೆ ಹೊಸ ಕಾರು ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಶೋರೂಂ ದರ 22 ಲಕ್ಷಕ್ಕೆ ಖರೀದಿ ಮಿತಿ ನಿಗದಿ ಮಾಡಲಾಗಿತ್ತು. ಈಗ ಶೋರೂಮ್ ದರ 23 ಲಕ್ಷಕ್ಕೆ ಖರೀದಿ ಮಿತಿ ಏರಿಕೆ ನಿಗದಿ ಪರಿಷ್ಕರಿಸಿ ಆದೇಶಿಸಲಾಗಿದೆ. 60 ಕಾರುಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ.

    ಕೊರೊನಾ ಕಾಲದಲ್ಲೇ ಇದು ಎರಡನೇ ಬಾರಿ ಖರೀದಿ ದರ ಮಿತಿ ಪರಿಷ್ಕರಣೆ ಮಾಡಲಾಗುತ್ತಿದೆ. ಬರೋಬ್ಬರಿ 32ಸಚಿವರು, 28 ಸಂಸದರು ಹೊಸ ಕಾರು ಖರೀದಿ ಮಾಡ್ತಾರಾ ಎನ್ನಲಾಗುತ್ತಿದೆ. 60 ಕಾರು ಖರೀದಿ ಮಾಡಿದ್ರೆ ರಾಜ್ಯದಕ್ಕೆ ಬೊಕ್ಕಸಕ್ಕೆ ಬರೋಬ್ಬರಿ 13.80 ಕೋಟಿ ರೂ. ಹೊರೆ ಬೀಳಲಿದೆ.

    ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಿ ಎಂದರೆ ಕೊರೊನಾ ಕಾರಣವನ್ನು ಹೇಳುತ್ತಾರೆ. ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಲು ದುಡ್ಡಿಲ್ಲ ಎಂದು ಹೇಳುತ್ತಾರೆ. ಸಾರಿಗೆ ನೌಕರರ ಸಂಬಳ ಸರಿಯಾಗಿ ಪಾವತಿಯಾಗತ್ತಿಲ್ಲ. ತೆರಿಗೆ ಕಡಿಮೆ ಮಾಡಿ ತೈಲ ಬೆಲೆ ಇಳಿಸಿ ಎಂದರೂ ಕೇಳದ ಸರ್ಕಾರ ಈಗ ನಮ್ಮ ತೆರಿಗೆ ಹಣದಿಂದಲೇ ಕಾರು ಖರೀದಿಗೆ ಮುಂದಾಗುತ್ತಿರುವುದು ಎಷ್ಟು ಸರಿ ಎಂದು ಜನ ಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.


    ಸಚಿವರಿಗೆ ವಾಹನ ಬೇಕು ನಿಜ. ಆದರೆ ಸುಸಜ್ಜಿತವಾಗಿರಬೇಕು. ಆದರೆ ಐಶಾರಾಮಿಯಾಗಿರಬೇಕು ಎಂಬ ನಿಯಮವಿಲ್ಲ. ಕೋವಿಡ್ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕಾದ ಸರ್ಕಾರವೇ ಖರ್ಚು ಮಾಡಲು ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

  • ರಜನಿ ಫ್ಯಾನ್ಸ್ ಪ್ರತಿಭಟನೆ – ನೋವುಂಟು ಮಾಡ್ಬೇಡಿ ಅಂದ್ರು ತಲೈವಾ

    ರಜನಿ ಫ್ಯಾನ್ಸ್ ಪ್ರತಿಭಟನೆ – ನೋವುಂಟು ಮಾಡ್ಬೇಡಿ ಅಂದ್ರು ತಲೈವಾ

    ಚೆನ್ನೈ: ನಟ ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡಿನ ರಾಜಕೀಯಕ್ಕೆ ಪ್ರವೇಶಿಸದಿರುವ ನಿರ್ಧಾರ ವಿಚಾರವಾಗಿ ಸೋಮವಾರ ಚೆನ್ನೈನಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆ ಮಾಡಿ ನೋವುಂಟು ಮಾಡಬೇಡಿ ಎಂದು ತಲೈವಾ ಮನವಿ ಮಾಡಿಕೊಂಡಿದ್ದಾರೆ.

    ಈ ಕುರಿತಂತೆ ಟ್ವೀಟ್ ಮಾಡಿರುವ ರಜನಿಕಾಂತ್, ನಾನು ರಾಜಕೀಯಕ್ಕೆ ಏಕೆ ಪ್ರವೇಶಿಸುತ್ತಿಲ್ಲ ಎಂಬುವುದಕ್ಕೆ ಕಾರಣವನ್ನು ಈಗಾಗಲೇ ತಿಳಿಸಿದ್ದೇನೆ. ಆದರೂ ರಜನಿ ಮಕ್ಕಳ್ ಮಂದ್ರಂ ಅನುಮತಿ ಪಡೆಯದೇ ಚೆನ್ನೈನಲ್ಲಿ ನಡೆಸಿದೆ. ಪ್ರತಿಭಟನೆಯಲ್ಲಿ ಭಾಗವಹಿಸದ ಕೆಲವು ಅಭಿಮಾನಿಗಳನ್ನು ನಾನು ಪ್ರಶಂಸಿಸುತ್ತೇನೆ. ನನ್ನ ನಿರ್ಧಾರದ ಬಗ್ಗೆ ದಯವಿಟ್ಟು ನನಗೆ ನೋವುಂಟು ಮಾಡುವಂತಹ ವಿಷಯ(ಪ್ರತಿಭಟನೆ)ಗಳಲ್ಲಿ ಪಾಲ್ಗೊಳ್ಳದಂತೆ ಪ್ರತಿಯೊಬ್ಬರಿಗೂ ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ಜನವರಿ 5ರಂದು ಮಕ್ಕಳ್ ಮಂದ್ರಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹಾಗೂ ಕಾರ್ಯಕರ್ತರು ರಾಜಕೀಯದಿಂದ ನಿರ್ಗಮಿಸುತ್ತಿರುವ ರಜನಿಕಾಂತ್ ಅವರ ನಿರ್ಧಾರವನ್ನು ವಿರೋಧಿಸಿ ಜನವರಿ 10ರಂದು ಚೆನ್ನೈನಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿಕೆ ನೀಡಿದ್ದರು. ರಜನಿಕಾಂತ್ ನಿರ್ಧಾರ ವಿಚಾರ ಕೆಲವು ಅಭಿಮಾನಿಗಳಿಗೆ ನಿರಾಶೆ ಉಂಟಾಗಿ ರಜನಿಕಾಂತ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.

    ಈ ಕುರಿತಂತೆ ಉತ್ತರ ಚೆನ್ನೈ ಜಿಲ್ಲಾಕಾರ್ಯದರ್ಶಿ ನಿಜವಾದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ. ಹಾಗೇನಾದರೂ ಭಾಗವಹಿಸದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು. ದಕ್ಷಿಣ ಚೆನ್ನೈ ಜಿಲ್ಲಾಕಾರ್ಯದರ್ಶಿ ರವಿಚಂದ್ರನ್ ರಜನಿಯವರು ಅನಾರೋಗ್ಯದ ಕಾರಣದಿಂದ ರಾಜಕೀಯದಿಂದ ದೂರಸರಿದಿದ್ದಾರೆ ಎಂದು ತಿಳಿಸಿದರು.

    ಕಳೆದ ತಿಂಗಳು ರಜನಿಕಾಂತ್ ತಮ್ಮ ಆರೋಗ್ಯದ ದೃಷ್ಟಿಯಿಂದ ರಾಜಕೀಯಕ್ಕೆ ಪ್ರವೇಶಿಸುತ್ತಿಲ್ಲ ಎಂದು ತಿಳಿಸಿದ್ದರು. ಅಲ್ಲದೆ ಇತ್ತೀಚೆಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಿದ್ದು ದೇವರು ನನಗೆ ನೀಡಿದ ಎಚ್ಚರಿಕೆ ಗಂಟೆ ಎಂದು ಹೇಳಿದರು.

  • ಕೋಲ್ಕತ್ತಾ ಶೈಲಿಯ ರೇಜಲಾ ಚಿಕನ್ ಗ್ರೇವಿ ಮಾಡುವ ವಿಧಾನ

    ಕೋಲ್ಕತ್ತಾ ಶೈಲಿಯ ರೇಜಲಾ ಚಿಕನ್ ಗ್ರೇವಿ ಮಾಡುವ ವಿಧಾನ

    ಳೆದ ವಾರ ದೀಪಾವಳಿ ಸಂಭ್ರಮದಲ್ಲಿ ಸಿಹಿಯೂಟ ಮಾಡಿರುತ್ತೀರಿ. ನಾಳೆ ಭಾನುವಾರ ರಜೆ ಬಾಡೂಟ ಇರಲೇಬೇಕು. ಚಿಕನ್ ನಲ್ಲಿಯೇ ಏನಾದ್ರೂ ವೆರೈಟಿ ಟ್ರೈ ಮಾಡಬೇಕು ಅಂತಾ ಪ್ಲಾನ್ ಮಾಡಿದ್ದೀರಾ ? ಹಾಗಾದ್ರೆ ಕೋಲ್ಕತ್ತಾ ಶೈಲಿಯ ರೇಜನಾ ಚಿಕನ್ ಗ್ರೇವಿ ಮಾಡಿ.

    ಬೇಕಾಗುವ ಸಾಮಾಗ್ರಿಗಳು
    ಚಿಕನ್ – 1 ಕೆಜಿ
    ಮೊಸರು – 1 ಕಪ್
    ಬೆಳ್ಳುಳ್ಳಿ, ಶುಂಠಿ ಪೇಸ್ಟ್- 3 ಟೀ ಸ್ಪೂನ್
    ಗ್ರೀನ್ ಚಿಲ್ಲಿ ಪೇಸ್ಟ್ – 2 ಟೀ ಸ್ಪೂನ್ (ಮೂರು)
    ಪೆಪ್ಪರ್ ಪೌಡರ್- 1/2 ಟೀ ಸ್ಪೂನ್
    ಉಪ್ಪು – 2 ಟೀ ಸ್ಪೂನ್
    ತುಪ್ಪ- 2 ಟೀ ಸ್ಪೂನ್
    ಗಸಗಸೆ- 2 ಟೀ ಸ್ಪೂನ್
    ಗೋಡಂಬಿ- 10 ರಿಂದ 12
    ಎಣ್ಣೆ- 5 ರಿಂದ 6 ಟೀ ಸ್ಪೂನ್
    ಏಲಕ್ಕಿ – 5
    ಲವಂಗ – 2
    ಕಾಳು ಮೆಣಸು – 5
    ಒಣ ಮೆಣಸಿನಕಾಯಿ – 5
    ಎರಡು ಈರುಳ್ಳಿ ಪೇಸ್ಟ್
    ಕೇವರಾ ವಾಟರ್ – 1 ಟೀ ಸ್ಪೂನ್ (ಬೇಕಿದ್ದಲ್ಲಿ ಮಾತ್ರ ಬಳಸಬಹುದು)

    ಮಾಡುವ ವಿಧಾನ
    * ಮೊದಲಿಗೆ ಮಿಕ್ಸಿಂಗ್ ಬೌಲ್ ನಲ್ಲಿ ಚೆನ್ನಾಗಿ ತೊಳೆದುಕೊಂಡಿರುವ ದೊಡ್ಡ ದೊಡ್ಡ ಪೀಸ್ ಗಳ ಚಿಕನ್ ಹಾಕಿಕೊಳ್ಳಿ
    * ಚಿಕನ್ ಹಾಕಿರೋ ಮಿಕ್ಸಿಂಗ್ ಬೌಲ್ ಗೆ ಮೊಸರು, ಬೆಳ್ಳುಳ್ಳಿ-ಪೇಸ್ಟ್, ಗ್ರೀನ್ ಚಿಲ್ಲಿ ಪೇಸ್ಟ್, ಪೆಪ್ಪರ್ ಪೌಡರ್, ಉಪ್ಪು ಮತ್ತು ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತಟ್ಟೆ ಮುಚ್ಚಿ ಎರಡು ಗಂಟೆ ಎತ್ತಿಡಿ. ಮಿಶ್ರಣವೆಲ್ಲ ಚಿಕನ್ ಗೆ ಚೆನ್ನಾಗಿ ಮೆತ್ತಿಕೊಳ್ಳುತ್ತದೆ.

    * ಮಿಕ್ಸಿ ಜಾರಿಗೆ ಎರಡು ಟೇಬಲ್ ಸ್ಪೂನ್ ಗಸಗಸೆ ಮತ್ತು 10 ರಿಂದ 12 ಗೋಡಂಬಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬುವಾಗ ಮೂರರಿಂದ ನಾಲ್ಕು ಟೀ ಸ್ಪೂನ್ ನೀರು ಸೇರಿಸಿದ್ರೆ ಪೇಸ್ಟ್ ಚೆನ್ನಾಗಿ ಆಗುತ್ತದೆ.
    * ಈಗ ಸ್ಟೌವ್ ಮೇಲೆ ಪ್ಯಾನ್ ಇರಿಸಿ 5 ರಿಂದ 6 ಟೀ ಸ್ಪೂನ್ ಎಣ್ಣೆ ಹಾಕಿ. (ಎಣ್ಣೆ ಬದಲಾಗಿ ತುಪ್ಪ ಬಳಸಬಹುದು)
    * ಎಣ್ಣೆ ಬಿಸಿ ಆಗುತ್ತಿದ್ದಂತೆ ಏಲಕ್ಕಿ, ಲವಂಗ, ಒಣ ಮೆಣಸಿನಕಾಯಿ ಮತ್ತು ಕಾಳು ಮೆಣಸು ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.

    * ಇದೇ ಪ್ಯಾನ್ ಗೆ ಈರುಳ್ಳಿ ಪೇಸ್ಟ್ ಮಿಕ್ಸ್ ಮಾಡಿ, ಹಸಿ ವಾಸನೆ ಹೋಗುವರೆಗೂ 8 ರಿಂದ 10 ನಿಮಿಷ ಫ್ರೈ ಮಾಡಿಕೊಳ್ಳಬೇಕು.
    * ಮಸಾಲೆ ಘಮ ಘಮ ಎಂದು ಬರುತ್ತಿದ್ದಂತೆ ಮಿಶ್ರಣದಲ್ಲಿರುವ ಚಿಕನ್ ಪೀಸ್ ಗಳನ್ನು ಒಂದೊಂದಾಗಿ ಹಾಕಿ ಪ್ಲಿಪ್ ಮಾಡುತ್ತಿರಬೇಕು.
    * ಚಿಕನ್ ಹಾಕಿದ ನಂತರ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿದ ನಂತರ ಈ ಮೊದಲು ರುಬ್ಬಿಟ್ಟಿಕೊಂಡಿರುವ ಗೋಡಂಬಿ ಮತ್ತು ಗಸಗಸೆ ಪೇಸ್ಟ್ ಹಾಕಿ ಕಲಕಿ.
    * ನಂತರ 1 ಕಪ್ ನಷ್ಟು ನೀರು ಹಾಕಿ 10 ರಿಂದ 12 ನಿಮಿಷ ಕುದಿಸಿದ್ರೆ ಕೇವರಾ ವಾಟರ್ ಬೆರಸಿದ್ರೆ ಕೋಲ್ಕತ್ತಾ ಶೈಲಿಯ ರೇಜಲಾ ಚಿಕನ್ ಗ್ರೇವಿ ಸವಿಯಲು ಸಿದ್ಧ.

  • ಕರಾವಳಿ ಯುವಕರ ಬಹುನಿರೀಕ್ಷಿತ ‘ಸತ್ತಕೊನೆ’ ಕಿರುಚಿತ್ರ ಬಿಡುಗಡೆ

    ಕರಾವಳಿ ಯುವಕರ ಬಹುನಿರೀಕ್ಷಿತ ‘ಸತ್ತಕೊನೆ’ ಕಿರುಚಿತ್ರ ಬಿಡುಗಡೆ

    ಮಂಗಳೂರು: ಗ್ಲಾಮರ್ ವ್ಯೂವ್ ಪ್ರೊಡಕ್ಷನ್ಸ್ ಮತ್ತು ಐನ್ ಕ್ರಿಯೇಷನ್ಸ್ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಬಹು ನಿರೀಕ್ಷಿತ ‘ಸತ್ತಕೊನೆ’ ಕಿರುಚಿತ್ರ ಮಂಗಳೂರು ಮಿರರ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ.

    ಫಾರ್ಚೂನ್ ಸೇಫ್ಟೀ ಗ್ಲಾಸ್ ಸಂಸ್ಥೆಯ ಸುರೇಶ್ ನಾಯ್ಕ್ ಚಿತ್ರವನ್ನು ಬಿಡುಗಡೆಗೊಳಿಸಿದರು. ಪಡುಬಿದ್ರೆಯಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ‘ಸತ್ತಕೊನೆ’ ಕಿರುಚಿತ್ರದ ತಂಡವೂ ಉಪಸ್ಥಿತಿಯಿತ್ತು.

    ಚಿತ್ರದ ಕುರಿತು ಅನಿಸಿಕೆ ವ್ಯಕ್ತಪಡಿಸಿದ ಸುರೇಶ್ ನಾಯ್ಕ್ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಈ ಕಿರುಚಿತ್ರದ ಮೂಲಕ ನಡೆದಿದೆ. ಹಲವು ಚಿತ್ರ ದಿಗ್ಗಜರ ಹಾಗೂ ನಿರ್ಮಾಪಕರ ಮೆಚ್ಚುಗೆಗೆ ಪಾತ್ರವಾಗಿರುವ ಈ ಕಿರುಚಿತ್ರ ಕ್ಲಬ್ಬಿ ಆನ್ ಲೈನ್ ಮಿನಿ ಮೂವಿ ಫೆಸ್ಟಿವಲ್, ಕೋಲ್ಹಾಪುರ್ ಫಿಲ್ಮ್ ಫೆಸ್ಟಿವಲ್ ಹಾಗೂ ಡಿ.ಡಿ. ಚಂದನದಲ್ಲಿ ಪ್ರದರ್ಶನ ಕಂಡಿದೆ. ಕರ್ನಾಟಕ ರಾಜ್ಯ ಸರ್ಕಾರದ ಕಿರುಚಿತ್ರ ಪ್ರಶಸ್ತಿಯಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಸಂತಸದ ವಿಚಾರ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

    ಸಮಾರಂಭದಲ್ಲಿ ಕಿರುಚಿತ್ರದ ನಾಯಕಿ, ಒಂದು ಮೊಟ್ಟೆ ಕಥೆ ಖ್ಯಾತಿಯ ಶೈಲಶ್ರೀ ಮುಲ್ಕಿ, ಚಿತ್ರ ನಿರ್ದೇಶಕ ಯಶ್ ರಾಜ್, ಡಿ.ಒ.ಪಿ ಹಾಗೂ ಸಂಕಲನಕಾರ ಹರ್ಷಿತ್ ಬಲ್ಲಾಳ್, ಕಥೆ, ಸಂಭಾಷಣೆ, ಸಾಹಿತ್ಯ ಬರೆದಿರುವ ಸಂದೇಶ್ ಬಿಜೈ, ಸಮನಾ ಸುರೇಶ್, ಧನುಷ, ದಿಶಾ, ಉಡುಪಿ ಅಮಿನ್ ಬೇರಿಂಗ್ ಕಂಪನಿಯ ಲಕ್ಷ್ಮಣ್. ಬಿ. ಅಮಿನ್, ಗಣೇಶ್ ರೇಡಿಯೇಟರ್ಸ್ ಮಾಲಕ ಕರುಣಾಕರ್, ಪ್ರಿನ್ಸ್ ಹೇರ್ ಆರ್ಟ್ ನ ರಮೇಶ್ ಸುವರ್ಣ, ಅಶೋಕ್ ಬೈಲೂರು ಮೊದಲಾದವರು ಉಪಸ್ಥಿತರಿದ್ದರು.

  • ‘ಆಪರೇಷನ್ ನಕ್ಷತ್ರ’ಕ್ಕೆ ಹಿನ್ನೆಲೆ ಸಂಗೀತ

    ‘ಆಪರೇಷನ್ ನಕ್ಷತ್ರ’ಕ್ಕೆ ಹಿನ್ನೆಲೆ ಸಂಗೀತ

    ಬೆಂಗಳೂರು: ಫೈವ್ ಸ್ಟಾರ್ ಸಂಸ್ಥೆಯ ಲಾಂಛನದಲ್ಲಿ ನಂದಕುಮಾರ್.ಎನ್, ಅರವಿಂದ ಮೂರ್ತಿ. ಟಿ.ಎಸ್, ರಾಧಕೃಷ್ಣ ಹಾಗೂ ಕಿಶೋರ್ ಮೇಗಳಮನೆ ನಿರ್ಮಿಸುತ್ತಿರುವ ಆಪರೇಷನ್ ನಕ್ಷತ್ರ ಚಿತ್ರಕ್ಕೆ ವೀರ್ ಸಮರ್ಥ್ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ ಕಾರ್ಯ ನಡೆಯುತ್ತಿದೆ. ನಾಲ್ವರು ಸ್ನೇಹಿತರು ಹಣದ ಹಿಂದೆ ಹೋದಾಗ ಆಗುವ ಯಡವಟ್ಟುಗಳ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಯುವ ಪೀಳಿಗೆಯ ಬದುಕನ್ನೇ ಆಧಾರವಾಗಿಟ್ಟುಕೊಂಡು ರಚಿಸಿರುವ ಈ ಚಿತ್ರ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ.

    ಮಧುಸೂದನ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಶಿವಸೀನ ಛಾಯಗ್ರಾಹಣ, ವೀರ್ ಸಮರ್ಥ್ ಸಂಗೀತ, ವಿಜಯಭರಮಸಾಗರ ಸಾಹಿತ್ಯ, ಕಿಶೋರ್ ಮೇಗಳಮನೆ- ಮಧುಸೂದನ್ ಸಂಭಾಷಣೆ, ಕಿಟ್ಟು ಅರ್ಜುನ್ ಸಂಕಲನ, ಕಂಬಿರಾಜು ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಸಾಹಸ, ಶರಣ್ ಸಹ ನಿರ್ದೇಶನವಿದೆ.

    ನಿರಂಜನ್ ಒಡೆಯರ್, ಅದಿತಿ ಪ್ರಭುದೇವ್, ಯಜ್ಞಾಶೆಟ್ಟಿ, ಲಿಖಿತ್‍ಸೂರ್ಯ, ದೀಪಕ್‍ರಾಜ್ ಶೆಟ್ಟಿ, ಶ್ರೀನಿವಾಸ್ ಪ್ರಭು, ಗೋವಿಂದೇಗೌಡ, ವಿಜಯಲಕ್ಷ್ಮೀ, ಅರವಿಂದೇಗೌಡ, ಶ್ರೀಜಾ, ಅರವಿಂದ್‍ಮೂರ್ತಿ, ಟಿ.ಎಸ್.ಭರತ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

  • ಎಸ್ಟೇಟ್‍ ನಲ್ಲಿ ತಿರುಗಾಡಿ ಆತಂಕ ಸೃಷ್ಟಿಸಿದ್ದ ಒಂಟಿ ಸಲಗ ಸೆರೆ!

    ಎಸ್ಟೇಟ್‍ ನಲ್ಲಿ ತಿರುಗಾಡಿ ಆತಂಕ ಸೃಷ್ಟಿಸಿದ್ದ ಒಂಟಿ ಸಲಗ ಸೆರೆ!

    ಮಡಿಕೇರಿ: ಹಲವರ ಮೇಲೆ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿಸಿದ ಒಂಟಿ ಸಲಗವನ್ನು ಸಾಕಾನೆಗಳ ನೆರವಿನಿಂದ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮೋದೂರು ಎಸ್ಟೇಟ್‍ ನಲ್ಲಿ ತಿರುಗಾಡುತ್ತಿದ್ದ ಒಂಟಿ ಸಲಗನನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಸೋಮವಾರ ಆರಂಭವಾಗಿತ್ತು. ಆದರೆ ಮೊದಲ ದಿನ ಕಾರ್ಯಾಚರಣೆ ಪಡೆಯ ಕಣ್ಣಿಗೆ ಕಾಣಿಸಿಕೊಳ್ಳದೆ ಈ ಸಲಗ ಅಡಗಿಕೊಂಡಿತ್ತು.

    ಕಾರ್ಯಾಚರಣೆಗೆ ದುಬಾರೆ ಆನೆ ಶಿಬಿರದಿಂದ ಸಾಕಾನೆಗಳಾದ ಹರ್ಷ, ವಿಕ್ರಂ ಮತ್ತು ಜ್ಯೋತಿ. ಜೊತೆಗೆ ಮತ್ತಿಗೋಡು ಶಿಬಿರದಿಂದ ಅಭಿಮನ್ಯು ಹಾಗು ಕೃಷ್ಣರನ್ನು ಸೋಮವಾರ ಬೆಳಗ್ಗೆಯೇ ಮೋದೂರು ಎಸ್ಟೇಟ್‍ ಗೆ ತರಲಾಗಿತ್ತು. ಇದಕ್ಕಾಗಿ ಅರಣ್ಯ ಇಲಾಖೆಯ ನುರಿತ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿತ್ತು. ಆದರೆ ಆನೆಯನ್ನು ಸೋಮವಾರ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ನಾಲ್ಕು ದಿನಗಳ ನಂತರ ಕಾಫಿ ತೋಟದ ಒಳಗೆ ಒಂಟಿ ಸಲಗನನ್ನು ಪತ್ತೆ ಹಚ್ಚಲಾಯಿತು.

    ಹುಣಸೂರು ವನ್ಯಜೀವಿ ವಿಭಾಗದ ಪಶುವೈದ್ಯ ಡಾ.ಮುಜೀಬ್ ಅರವಳಿಕೆ ಮದ್ದು ನೀಡಿದರು. ಬಳಿಕ ಸಾಕಾನೆಗಳು ಸುತ್ತುವರಿದಾಗ ಅವುಗಳ ನೆರವಿನಿಂದ ಸಿಬ್ಬಂದಿ ಸಲಗನನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ನಂತರ ಅದನ್ನು ದುಬಾರೆ ಶಿಬಿರಕ್ಕೆ ಸಾಗಿಸಲಾಯಿತು. ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಮಂಜುನಾಥ್ ಮತ್ತು ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಪಾಲ್ಗೊಂಡಿದ್ದರು.

    ಸಲಗನ ಸೆರೆಯಿಂದಾಗಿ ಮೋದೂರು ವಿಭಾಗದ ನಿವಾಸಿಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಲವರ ಮೇಲೆ ದಾಳಿ ನಡೆಸಿ ಸಲಗ ಗಾಯಗೊಳಿಸಿತ್ತು. ಈ ಭಾಗದಲ್ಲಿ ವಾಹನಗಳ ಮೇಲೂ ದಾಳಿ ನಡೆಸಿತ್ತು. ಇದರಿಂದ ಜನರು ಆತಂಕದಿಂದ ಹೊರಗೆ ಹೋಗುತ್ತಿರಲಿಲ್ಲ. ಕಾಫಿ ತೋಟಗಳಿಗೆ ಬರಲು ಕಾರ್ಮಿಕರು ಹಿಂಜರಿಯುತ್ತಿದ್ದರು. ಇದೀಗ ಒಂಟಿ ಸಲಾಗವನ್ನು ದುಬಾರೆ ಸಾಕಾನೆ ಶಿಬಿರಕ್ಕೆ ರವಾನೆ ಮಾಡಲಾಗಿದೆ.

  • 22 ವರ್ಷಗಳನ್ನು ಆಳಿದ ಬಿಜೆಪಿ ಸರ್ಕಾರ ಸಾಧನೆ ಏನು: ರಾಹುಲ್ ಗಾಂಧಿ ಪ್ರಶ್ನೆ

    ಅಹಮದಾಬಾದ್: ಕಳೆದ 22 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಜನತೆಗೆ ನೀಡಿರುವ ಭರವಸೆಗಳ ಬಗ್ಗೆ ಉತ್ತರ ನೀಡಬೇಕಿದೆ ಎಂದು ರಾಹುಲ್ ಗಾಂಧಿ ಆಗ್ರಹಿಸುವ ಮೂಲಕ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಅಂಗವಾಗಿ ನಡೆಯುತ್ತಿರುವ ಪ್ರಚಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ನಂತರ ವಿಸಾವದರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಬಿಜೆಪಿ ಸರ್ಕಾರದ ಸಾಧನೆಯನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಈ ಬಾರಿ ಗುಜರಾತ್ ಚುನಾವಣಾ ಪ್ರಚಾರ ನಡೆಸುತ್ತಿರುವ ರಾಹುಲ್ ಗಾಂಧಿ ದಿನಕ್ಕೆ ಒಂದು ಪ್ರಶ್ನೆ ಕೇಳುವುದಾಗಿ ಹೇಳಿದ್ದು, ಇಂದು ಜನತೆಗೆ ಸರ್ಕಾರ ನೀಡಿದ ಮನೆ ನಿರ್ಮಿಸಿಕೊಡುವ ಯೋಜನೆ ಕುರಿತು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ ಅವರು ಗುಜರಾತಿನ ಜನತೆಗೆ 2012 ರಲ್ಲಿ 50 ಲಕ್ಷ ಮನೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಕಳೆದ 5 ವರ್ಷಗಳ ಆಡಳಿತ ಅವಧಿಯಲ್ಲಿ ಕೇವಲ 4.72 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಂತೆ ಪ್ರಧಾನಿಗಳ ಭರವಸೆ ಈಡೇರಿಸಲು 45 ವರ್ಷಗಳು ಬೇಕಾಗುತ್ತದೆ ಎಂದು ಹೇಳಿ ವ್ಯಂಗ್ಯವಾಡಿದರು.

    ರಾಹುಲ್ ಗಾಂಧಿ ಅವರು 2 ದಿನಗಳ ಕಾಲ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದು, ಎರಡು ದಿನಗಳ ಪ್ರಚಾರ ಅವಧಿಯಲ್ಲಿ ರಾಹುಲ್ ಗಾಂಧಿ ಗುಜರಾತ್‍ನ ಪ್ರಮುಖ ಮೂರು ಜಿಲ್ಲೆಗಳ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.