ಬೆಂಗಳೂರು: ರಾಜ್ಯ ಸರ್ಕಾರ ಬಿ.ಎಸ್ ಯಡಿಯೂರಪ್ಪ ಅವರನ್ನು ಹಣಿಯಲು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಇಂದು ಬಿಜೆಪಿ ನಾಯಕರು ಕೆ.ಜಿ.ರಸ್ತೆಯ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಶಿವರಾಮ ಕಾರಂತ ಬಡಾವಣೆಯ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆ. ಎಸಿಬಿ ಅಧಿಕಾರಿಗಳು ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಮೇಲೆ ಬಿಎಸ್‍ವೈ ವಿರುದ್ಧ ಸುಳ್ಳು ಸಾಕ್ಷಿ ಹೇಳುವಂತೆ ಒತ್ತಡ ಹೇರಿರುವ ವಿಚಾರ ಬೆಳಕಿಗೆ ಬಂದಿದೆ.
ಯಡಿಯೂರಪ್ಪ ವಿರುದ್ಧ ದೂರು ಸಲ್ಲಿಕೆಯಾದ ಅರ್ಧ ಗಂಟೆಗೆ ಎಫ್‍ಐಆರ್ ದಾಖಲು ಮಾಡಿದ್ದಾರೆ. 80 ಲಕ್ಷದ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಮುಂದೆ ಕೇಸ್ ಆಗಿ ಒಂದು ವರ್ಷ ಆಯ್ತು. ಸಿದ್ದರಾಮಯ್ಯ ನಿದ್ದೆ ಮಾಡ್ತಿದ್ದಾರೆ ತೊಂದರೆ ಕೊಡಬಾರದು ಅಂತಾ ಎಸಿಬಿ ಇನ್ನೂ ಎಫ್‍ಐಆರ್ ಹಾಕಿಲ್ಲ. ಎಸಿಬಿಗೆ ಸಿದ್ದರಾಮಯ್ಯನವರೇ ಹೆಡ್ ಆಗಿದ್ದಾರೆ ಎಂದು ಮಾಜಿ ಡಿಸಿಎಂ ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ ಟೀಕಿಸಿದರು.
ಜನ ಗೇಟ್ ಪಾಸ್ ಕೊಡ್ತಾರೆ: ಬಸವರಾಜೇಂದ್ರ ದೂರು ಕೊಟ್ಟಿದ್ದಕ್ಕೆ ಅವರನ್ನ ಸರ್ಕಾರ ಕೊಡಗಿಗೆ ತಕ್ಷಣ ಟ್ರಾನ್ಸ್ ಫರ್ ಮಾಡಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಡಿ.ರೂಪಾ ಅವರನ್ನೂ ಟ್ರಾನ್ಸ್ ಫರ್ ಮಾಡಿದ್ರು. ಅಧಿಕಾರಿಗಳು ರಕ್ಷಣೆ ಇಲ್ಲದೆ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡರು. ನಿದ್ದೆ ಮಾಡೋ ಈ ಸರ್ಕಾರಕ್ಕೆ ಇನ್ನೂ ನಾಲ್ಕು ತಿಂಗಳು ಮಾತ್ರ ಇರೋದು. ಸರ್ಕಾರಕ್ಕೆ ಜನ ಗೇಟ್ ಪಾಸ್ ಕೊಡಲು ನಿರ್ಧರಿಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ 900 ಎಕರೆ ಡಿನೋಟಿಫೈ ಮಾಡಿದ್ರೆ ಅದು ರೀಡು ಅಂತೆ. ಅದೇ ಯಡಿಯೂರಪ್ಪ, ಕುಮಾರಸ್ವಾಮಿ, ಎಸ್‍ಎಂ ಕೃಷ್ಣ ಅವರು ಮಾಡಿದ್ರೆ ಡಿನೋಟಿಫಿಕೇಶನ್ ಅಂದ್ರ ಹೆಂಗೆ ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರ ಮೇಲೆ ಎಷ್ಟೇ ಕೇಸ್ ಹಾಕಿದ್ರೂ ನಾವು ಹೆದರಲ್ಲ. ಯಡಿಯೂರಪ್ಪ ಜೊತೆ ನಾವಿದ್ದೇವೆ ಎಂದು ಹೇಳಿದರು.
ಕುರ್ಚಿ ಬಿಟ್ಟು ತೊಲಗಿ: ಸಿಎಂ ಅಧಿಕಾರಿಗಳಿಗೆ ಧಮ್ಕಿ ಹಾಕಿ ಯಡಿಯೂರಪ್ಪ ವಿರುದ್ಧ ಸುಳ್ಳು ಕೇಸ್ ಹಾಕಿಸಿದ್ದಾರೆ. ಸಿಎಂ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ, ಮಹದೇವಪ್ಪ ಅವರಿಗೆ ನೋಟಿಸ್ ನೀಡಿ. ಅಕ್ರಮ ಗಣಿಗಾರಿಕೆ ವಿರುದ್ಧ ದೂರಿನ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಎಸಿಬಿ ಮುಖ್ಯಸ್ಥ ಎಂ.ಎನ್ ರೆಡ್ಡಿಗೆ ಶೋಭಾ ಕರಂದ್ಲಾಜೆ ಸವಾಲ್ ಹಾಕಿದ್ದಾರೆ.
ಬಸವರಾಜೇಂದ್ರ ಅವರು ಹೇಳಿದ್ದು ಸರಿಯಾಗಿದೆ. ಸಿಎಂ ಪ್ರತಿ ದಿನ ಅಧಿಕಾರಿಗಳಿಗೆ ಧಮ್ಕಿ ಹಾಕಿ ಬಿಜೆಪಿ ನಾಯಕರ ವಿರುದ್ಧ ಕೇಸ್ ಹಾಕಿಸಲು ಒತ್ತಡ ಹೇರುತ್ತಿದ್ದಾರೆ. ಸಿದ್ದರಾಮಯ್ಯ ಕುರ್ಚಿ ಬಿಟ್ಟು ತೊಲಗಿ ನಿಮ್ಮ ಪಾಪದ ಕೊಡ ತುಂಬಿದೆ ಎಂದು ಕಿಡಿಕಾರಿದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತಾ ಸಿಎಂ ಸಿದ್ದರಾಮಯ್ಯ ಎಸಿಬಿಯನ್ನು ದುರುಪಯೋಗ ಮಾಡಿಕೊಂಡು, ಇಲ್ಲದ್ದನ್ನ ಹುಡುಕಿ ಯಡಿಯೂರಪ್ಪ ವಿರುದ್ಧ ಎಸಿಬಿ ಮೂಲಕ ಕೇಸ್ ದಾಖಲಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿ. ಸೋಮಣ್ಣ ಟೀಕಿಸಿದರು.
ಸಿಎಂ 550 ಎಕರೆ ಡಿನೋಟಿಫೈ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನ ಜೈಲಿಗೆ ಕಳಿಸಲು ಸಾಕಷ್ಟು ಪುರಾವೆಗಳಿದ್ದಾರೆ. ಅದಕ್ಕಿಂತ ಮೊದಲು ಬಿಜೆಪಿ ನಾಯಕರನ್ನ ಜೈಲಿಗೆ ಕಳಿಸಬೇಕು ಅಂತಾ ಸಿಎಂ ಎಸಿಬಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅರವಿಂದ ಲಿಂಬಾವಳಿ ಹೇಳಿದರು.
ಪ್ರತಿಭಟನೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಅಶೋಕ್, ಮಾಜಿ ಸಚಿವ ವಿ ಸೋಮಣ್ಣ, ಸಂಸದೆ ಶೋಭಾ ಕರಂದ್ಲಾಜೆ, ಕಟ್ಟಾ ಸುಬ್ರಮಣ್ಯ ನಾಯ್ಡು, ಅರವಿಂದ್ ಲಿಂಬಾವಳಿ, ಬಿಜೆಪಿಯ ಶಾಸಕರು, ಪರಿಷತ್ ಸದಸ್ಯರು, ಬಿಬಿಎಂಪಿ ಸದಸ್ಯರು, ಬೆಂಗಳೂರು ಬಿಜೆಪಿಯ ಜಿಲ್ಲಾಧ್ಯಕ್ಷ ಸುಬ್ಬಣ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
https://twitter.com/ShobhaBJP/status/898871570424143872



