Tag: ಪಬಿಕ್ ಟಿವಿ

  • ಸ್ನಾನಕ್ಕೆಂದು ನೀರಿಗಿಳಿದ ನಟ ಶವವಾಗಿ ಪತ್ತೆ!

    ಸ್ನಾನಕ್ಕೆಂದು ನೀರಿಗಿಳಿದ ನಟ ಶವವಾಗಿ ಪತ್ತೆ!

    ತಿರುವನಂತಪುರಂ: ಖ್ಯಾತ ನಟ ಮಾಲಂಕಾರ ಡ್ಯಾಮ್ ನಲ್ಲಿ ಸ್ನಾನಕ್ಕೆ ಎಂದು ಹೋದವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅನಿಲ್ ನೆಡುಮಂಗಾಡ್ (48) ಮೃತಪಟ್ಟ ಮಲಯಾಳಂ ನಟ. ಇವರು ಸ್ನಾನಕ್ಕೆ ಎಂದು ಡ್ಯಾಮ್‍ಗೆ ಇಳಿದು ಸಾವನ್ನಪ್ಪಿದ್ದಾರೆ.

    ಪ್ರಾಥಮಿಕ ವಿಚಾರಣೆಯ ಪ್ರಕಾರ, ಸಂಜೆ ಸುಮಾರಿಗೆ ನಟ ಅನಿಲ್ ನೆಡುಮಂಗಾಡ್ ಅವರ ಸ್ನೇಹಿತರೊಂದಿಗೆ ಶೂಟಿಂಗ್ ವಿರಾಮದ ಸಮಯದಲ್ಲಿ ಸ್ನಾನ ಮಾಡಲು ಡ್ಯಾಮ್‍ಗೆ ಹೋಗಿದ್ದಾರೆ. ಆಗ ಅಲ್ಲಿ ಅವರು ಆಳವಾದ ನೀರಿಗೆ ಇಳಿದಾಗ ನೀರಿನ ಸೆಳೆತ ಅವರನ್ನು ಎಳೆದೊಯ್ದಿದೆ. ತಕ್ಷಣ ಅನಿಲ್ ಅವರನ್ನು ನೀರಿನಿಂದ ರಕ್ಷಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ನಟನ ಶವವನ್ನು ತೋಡುಪುಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಎಂದು ಇಡುಕಿ ವಿಶೇಷ ಶಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಅನಿಲ್ ಟಿವಿ ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಕಮ್ಮಟ್ಟಿ ಪಾಡಮ್, ಎನ್ಜನ್ ಸ್ಟೀವ್ ಲೋಪೆಜ್ ಮತ್ತು ಪೊರಿಂಜು ಮರಿಯಮ್ ಜೋಸ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಇತ್ತೀಚೆಗೆ ತೆರೆಕಂಡ ಅಯ್ಯಪ್ಪನುಂಕೊಶಿಯಮ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದ ಅನಿಲ್, ಅಪಾರ ಜನಪ್ರಿಯತೆ ಗಳಿಸಿ ಮಲಯಾಳಂ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಮಾಡಿಕೊಂಡಿದ್ದರು.

    ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಅವರು ತೊಡುಪುಳದಲ್ಲಿದ್ದರೆಂದು ಮಾಹಿತಿ ತಿಳಿಸಿದೆ.

  • ಭದ್ರಾ ಹುಲಿ ಯೋಜನೆ: ಬಫರ್ ಝೋನ್ ವಿರುದ್ಧ ಸಿಡಿದೆದ್ದ ಅನ್ನದಾತ

    ಭದ್ರಾ ಹುಲಿ ಯೋಜನೆ: ಬಫರ್ ಝೋನ್ ವಿರುದ್ಧ ಸಿಡಿದೆದ್ದ ಅನ್ನದಾತ

    – ಚುನಾವಣೆ ಬಹಿಷ್ಕಾರ ಎಚ್ಚರಿಕೆ, ಎನ್‍ಆರ್ ಪುರ ಬಂದ್ ಯಶಸ್ವಿ

    ಚಿಕ್ಕಮಗಳೂರು: ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಹಾಗೂ ಪರಿಸರ ಸೂಕ್ಷ್ಮ ವಲಯದ ವಿರುದ್ಧ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸರ್ವ ಪಕ್ಷ, ವಿವಿಧ ಸಂಘಟನೆಗಳು ಹಾಗೂ ಮಲೆನಾಡು ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಎನ್.ಆರ್.ಪುರ ತಾಲೂಕು ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಬೆಳಗ್ಗೆ 7 ಗಂಟೆಯಿಂದಲೇ ತಾಲೂಕಿನ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ತಾಲೂಕಿನ ಜನರು ಬಂದ್‍ಗೆ ಬೆಂಬಲ ಸೂಚಿಸಿದ್ದರು. ಸುಮಾರು ಐದು ಸಾವಿರಕ್ಕೂ ಅಧಿಕ ಜನ ಸುರಿಯೋ ಮಳೆಯಲ್ಲೇ ನಗರದ ಸರ್ಕಾರಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಿ ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

    ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯ 30ಕ್ಕೂ ಅಧಿಕ ಹಳ್ಳಿಗಳು ಸೇರಿದಂತೆ ದೇವಸ್ಥಾನ, ಮಠ, ಚರ್ಚ್, ಮಸೀದಿಗಳ ಜೊತೆ ಸಾವಿರಾರು ಅನ್ನದಾತರ ಬದುಕು ಕೂಡ ಇತಿಹಾಸದ ಪುಟ ಸೇರಲಿವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಬದುಕಿನ ಉಳಿವಿಗಾಗಿ ಎನ್.ಆರ್ ಪುರ ತಾಲೂಕು ಬಂದ್ ಗೆ ಕೊಟ್ಟಿದ್ದ ಕರೆಗೆ ನಿರೀಕ್ಷೆಗೂ ಮೀರಿ ರೈತರು ಪಾಲ್ಗೊಂಡಿದ್ದು ಬಂದ್ ಯಶಸ್ವಿಯಾಗಿದೆ. ಇದೇ ಮೊದಲ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಹಳ್ಳಿ-ಹಳ್ಳಿಯಿಂದ ರೈತರು ಬಂದು ಜನವಿರೋಧಿ ನೀತಿ ವಿರುದ್ಧ ಕಿಡಿ ಕಾರಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ನೆರೆದ ರೈತರು, ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಹಾಗೂ ಪರಿಸರ ಸೂಕ್ಷ್ಮ ವಲಯ ಯೋಜನೆಯ ವಿರುದ್ಧ ಅಸಮಾಧಾನ ಹೊರಹಾಕಿದರು.

    ಪಕ್ಷಾತೀತವಾಗಿ ನಡೆದ ಈ ಬಂದ್‍ಗೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘಟನೆ ಹಾಗೂ ರೈತರು ಭಾಗವಹಿಸಿದ್ದರು. ಮೆರವಣಿಗೆಯ ಬಳಿಕ ತಾಲೂಕು ಕಚೇರಿಯಲ್ಲಿ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಯಾವುದೇ ಕಾರಣಕ್ಕೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನವಿರೋಧಿ ಯೋಜನೆಯನ್ನು ಜಾರಿಗೆ ತಂದು ಜನರ ಬದುಕಿಗೆ ಕಲ್ಲು ಹಾಕೋ ಕೆಲಸ ಮಾಡಬಾರದು. ಒಂದು ವೇಳೆ ಆ ಪ್ರಯತ್ನಕ್ಕೆ ಮುಂದಾದರೆ ತಾಲೂಕಿನ ಜನ ಮುಂದಿನ ಎಲ್ಲಾ ಚುನಾವಣೆಗಳನ್ನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. ಸಾವಿರಾರು ಜನರು ಭಾಗಿಯಾಗಿದ್ದ ಪ್ರತಿಭಟನಾ ಸಮಾವೇಶದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಡಿ.ಎನ್.ಜೀವರಾಜ್, ಶಾಸಕ ಟಿ.ಡಿ.ರಾಜೇಗೌಡ ಸೇರಿದಂತೆ ಮೂರು ಪಕ್ಷಗಳ ಮುಖಂಡರು ಭಾಗಿಯಾಗಿದ್ದರು.

  • ಒಂದು ಎಕ್ರೆ ಗಾತ್ರದ ಬೃಹತ್ ಬಲೂನ್ ಪತ್ತೆ

    ಒಂದು ಎಕ್ರೆ ಗಾತ್ರದ ಬೃಹತ್ ಬಲೂನ್ ಪತ್ತೆ

    ಕಲಬುರಗಿ: ಜಿಲ್ಲೆಯ ಚಿಂಚೋಳಿಯ ಹೊಸಳ್ಳಿ (ಎಚ್) ಗ್ರಾಮದ ರೈತರ ಜಮೀನಿನಲ್ಲಿ ಬೃಹತ್ ಆಕಾರದ ನಿಗೂಢ ಬಲೂನ್ ಪತ್ತೆಯಾಗಿದೆ.

    ಎಲ್ಲಿಂದಲ್ಲೋ ಆಗಸದಿಂದ ಹಾರಿ ಬಂದು ರೈತರ ಜಮೀನಿನಲ್ಲಿ ಆವರಿಸಿರುವ ಬೃಹತ್ ಬಲೂನ್ ಸುಮಾರು ಒಂದು ಎಕರೆ ಪ್ರದೇಶದಷ್ಟು ವಿಶಾಲವಾಗಿದೆ. ಈ ಅನಾಮಧೇಯ ಪ್ಲಾಸ್ಟಿಕ್ ಬಲೂನ್ ಕಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ವಿಚಾರ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ಈ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.

    ಇದರ ಮಾಹಿತಿ ಪಡೆದ ಚಿಂಚೋಳಿ ತಹಶೀಲ್ದಾರ್ ಮತ್ತು ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಲೂನ್ ಬಗ್ಗೆ ಯಾವ ಅಧಿಕಾರಿಗಳಿಗೂ ಸಹ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಈ ಬಲೂನ್‍ನಲ್ಲಿ ಯಾವುದೇ ಅಕ್ಷರಗಳು ಸಹ ಮುದ್ರಣವಾಗಿಲ್ಲ. ಹೀಗಾಗಿ ಈ ಬಲೂನ್ ಯಾರಿಗೆ ಸೇರಿದ್ದು? ಇಲ್ಲಿಗೆ ಬಂದಿದ್ದು ಹೇಗೆ? ಯಾರಾದರೂ ಬಲೂನ್ ಬಳಸಿ ಸಂಶೋಧನೆ ನಡೆಸುತ್ತಿದ್ದಾರಾ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

    ಬಲೂನ್ ಮೂಲಕ ಕೆಲವೊಂದು ಕಂಪೆನಿಗಳು ಸಂಶೋಧನೆ ನಡೆಸುತ್ತಿವೆ. ವಿಶೇಷವಾಗಿ ಇಂಟರ್‍ನೆಟ್ ದಿಗ್ಗಜ ಗೂಗಲ್ ‘ಪ್ರೊಜೆಕ್ಟ್ ಲೂನ್’ ಹೆಸರಿನಲ್ಲಿ ಬಲೂನ್ ಮೂಲಕ ಇಂಟರ್‍ನೆಟ್ ನೀಡಲು ಮುಂದಾಗುತ್ತಿದೆ. ನ್ಯೂಜಿಲೆಂಡ್ ನಲ್ಲಿ ಮೊದಲ ಪ್ರಯೋಗ ನಡೆದಿದ್ದು, ಹಲವು ದೇಶಗಳ ಜೊತೆ ಗೂಗಲ್ ಇಂಟರ್‍ನೆಟ್ ಒದಗಿಸಲು ಒಪ್ಪಂದ ಮಾಡಿಕೊಂಡಿದೆ.

    https://youtu.be/HOndhtfIXSY