Tag: ಪಪ್ಪಾಯಿ

  • ರಾಯಚೂರಿನಲ್ಲಿ ಮಳೆ, ಬಿರುಗಾಳಿಗೆ ಧರೆಗುರುಳಿದ ಪಪ್ಪಾಯಿ ಗಿಡಗಳು – ಲಕ್ಷಾಂತರ ರೂಪಾಯಿ ಬೆಳೆ ಹಾನಿ

    ರಾಯಚೂರಿನಲ್ಲಿ ಮಳೆ, ಬಿರುಗಾಳಿಗೆ ಧರೆಗುರುಳಿದ ಪಪ್ಪಾಯಿ ಗಿಡಗಳು – ಲಕ್ಷಾಂತರ ರೂಪಾಯಿ ಬೆಳೆ ಹಾನಿ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪರಂಪುರ ಗ್ರಾಮದಲ್ಲಿ ಸುರಿದ ಆಲೆಕಲ್ಲು ಸಹಿತ ಮಳೆ, ಬಿರುಗಾಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದೆ.

    ಪರಂಪುರ ಗ್ರಾಮದ ರೈತರಾದ ನಿಂಗಪ್ಪ, ಗುರುನಾಥ್ ಗೌಡ ಅವರ ಜಮೀನಿನಲ್ಲಿದ್ದ ಬೆಳೆ ಹಾನಿಯಾಗಿದೆ. ಸುಮಾರು 10 ಎಕ್ರೆಯಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆ ಕೈಗೆ ಬರುವ ಹೊತ್ತಲ್ಲೇ ಕೆಡಕಿನ ಮಳೆ ಬೆಳೆ ಹಾನಿ ಮಾಡಿದೆ.

    ಒಂದೆಡೆ ಸುಡು ಬಿಸಿಲು, ನೀರಿನ ಸಮಸ್ಯೆ ಇದ್ರೆ ಜಿಲ್ಲೆಯಲ್ಲಿ ಕೆಡಕಿನ ಮಳೆಯ ಅಬ್ಬರ ಜೋರಾಗಿದೆ. ನಿತ್ಯ ಸಂಜೆಯಾಗುತ್ತಿದ್ದಂತೆ ವಾತಾವರಣವೇ ಬದಲಾಗುತ್ತಿದ್ದು, ಗಾಳಿ-ಮಳೆ ಜೋರಾಗುತ್ತಿದೆ. ಹೀಗಾಗಿ ಜಿಲ್ಲೆಯ ಸಾವಿರಾರು ಎಕ್ರೆ ಬೆಳೆಗಳು ಹಾನಿಯಾಗಿದೆ. ಭತ್ತ ಹಾಗೂ ಪಪ್ಪಾಯಿ ಬೆಳೆ ಅತೀ ಹೆಚ್ಚು ಪ್ರಮಾಣದಲ್ಲಿ ಹಾನಿಯಾಗಿದೆ. ಬೆಳೆಹಾನಿ ಸಮೀಕ್ಷೆಯೂ ನಿರಂತರವಾಗಿ ನಡೆದಿದ್ದು, ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

  • ಲಾಕ್‍ಡೌನ್‍ನಿಂದ ಜಮೀನಿನಲ್ಲಿಯೇ ಕೊಳೆಯುತ್ತಿದೆ ಪಪ್ಪಾಯಿ – ಮಾರುಕಟ್ಟೆ ಸೌಲಭ್ಯ ಕಲ್ಪಿಸಿಕೊಡಿ ಎಂದು ಕೈಮುಗಿದ ರೈತ

    ಲಾಕ್‍ಡೌನ್‍ನಿಂದ ಜಮೀನಿನಲ್ಲಿಯೇ ಕೊಳೆಯುತ್ತಿದೆ ಪಪ್ಪಾಯಿ – ಮಾರುಕಟ್ಟೆ ಸೌಲಭ್ಯ ಕಲ್ಪಿಸಿಕೊಡಿ ಎಂದು ಕೈಮುಗಿದ ರೈತ

    ಹಾವೇರಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಜಾರಿಮಾಡಿರುವ ಲಾಕ್‍ಡೌನ್‍ನಿಂದಾಗಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲಾಗದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಪಪ್ಪಾಯಿ ಜಮೀನಿನಲ್ಲಿಯೇ ಹಾಳಾಗುತ್ತಿರೋದನ್ನ ಕಂಡು ರೈತ ಕಂಗಾಲಾಗಿದ್ದಾರೆ.

    ದೇವರಗುಡ್ಡ ಗ್ರಾಮದ ರೈತ ಹನುಮಂತಪ್ಪ ನಾಯರ್ ತಮ್ಮ ಮೂರು ಎಕ್ರೆ ಜಮೀನಿನಲ್ಲಿ ಪಪ್ಪಾಯಿ ಬೆಳೆ ಬೆಳೆದಿದ್ದರು. ಪಪ್ಪಾಯಿ ರೈತರ ನಿರೀಕ್ಷೆಗೂ ಮೀರಿ ಉತ್ತಮ ಫಸಲು ಬಂದಿತ್ತು. ಆದ್ರೆ ಲಾಕ್‍ಡೌನ್‍ನಿಂದ ಖರೀದಿಗೆ ವ್ಯಾಪಾರಸ್ಥರು ಬರದೆ ಪಪ್ಪಾಯಿ ಜಮೀನಿನಲ್ಲಿ ಹಾಳಾಗುತ್ತಿದೆ. ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ಪಪ್ಪಾಯಿ ಹಾಳಾಗ್ತಿರೋದಕ್ಕೆ ರೈತ ಹನುಮಂತಪ್ಪ ಕಣ್ಣೀರಿಡುತ್ತಿದ್ದಾರೆ.

    ಜಿಲ್ಲಾಡಳಿತ ಜಮೀನಿನಲ್ಲಿ ಕೊಳೆಯುತ್ತಿರೋ ಪಪ್ಪಾಯಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಹೀಗೆ ರೈತರು ನಷ್ಟ ಅನುಭವಿಸುತ್ತಿದ್ದರೆ ಜೀವನ ಮಾಡೋದು ಹೇಗೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • ಲಾಕ್‍ಡೌನ್‍ನಿಂದ ಪಪ್ಪಾಯಿ ಬೆಳೆಗಾರ ಕಂಗಾಲು – ಗಿಡಗಳನ್ನೇ ಕಡಿದು ಹಾಕಿದ ರೈತ

    ಲಾಕ್‍ಡೌನ್‍ನಿಂದ ಪಪ್ಪಾಯಿ ಬೆಳೆಗಾರ ಕಂಗಾಲು – ಗಿಡಗಳನ್ನೇ ಕಡಿದು ಹಾಕಿದ ರೈತ

    ಹಾವೇರಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮಾಡಿರುವ ಲಾಕ್‍ಡೌನ್‍ನಿಂದಾಗಿ ರೈತರು ಕಂಗಾಲಾಗಿದ್ದಾರೆ. ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೇ ನಷ್ಟ ಅನುಭವಿಸುತ್ತಿದ್ದಾರೆ.

    ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವೈ.ಟಿ ಹೊನ್ನತ್ತಿ ಗ್ರಾಮದ ರೈತ ಗುಡ್ಡಪ್ಪ ಕುಲಕರ್ಣಿ ಮೂರು ಎಕ್ರೆ ಜಮೀನಿನಲ್ಲಿ ಪಪ್ಪಾಯಿ ಗಿಡಗಳನ್ನ ಬೆಳೆಸಿದ್ದರು. ಒಳ್ಳೆಯ ಪಪ್ಪಾಯಿ ಹಣ್ಣುಗಳು ಕೂಡ ಚೆನ್ನಾಗಿ ಬೆಳೆದಿದ್ದವು. ಆದರೆ ಲಾಕ್‍ಡೌನ್ ಹಿನ್ನೆಲೆ ಪಪ್ಪಾಯಿ ಹಣ್ಣುಗಳನ್ನು ಮಾರಾಟ ಮಾಡಲಾಗದೆ, ಅವುಗಳು ಗಿಡದಲ್ಲೇ ಕೊಳೆಯುತ್ತಿರುವುದನ್ನು ಕಂಡು ಗುಡ್ಡಪ್ಪ ಅವರು ಕಂಗಾಲಾಗಿದ್ದರು.

    ಈ ನಷ್ಟದಿಂದ ಬೇಸತ್ತ ರೈತ ಗುಡ್ಡಪ್ಪ ಅವರು ಐದಾರು ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆಸಿದ್ದ ಪಪ್ಪಾಯಿ ಗಿಡಗಳನ್ನ ತಾವೇ ನಾಶ ಮಾಡಿದ್ದಾರೆ. ಕೊಡಲಿಯಿಂದ ಪಪ್ಪಾಯಿ ಗಿಡಗಳನ್ನು ಕಡಿದು ಹಾಕ್ತಿದ್ದಾರೆ.

  • ಸಮಗ್ರ ಸಾವಯವ ಕೃಷಿಯ ಕಮಾಲ್- ಬರದಲ್ಲೂ ಬಂಗಾರದ ಬೆಳೆ ಬೆಳೆದ ರೈತ

    ಸಮಗ್ರ ಸಾವಯವ ಕೃಷಿಯ ಕಮಾಲ್- ಬರದಲ್ಲೂ ಬಂಗಾರದ ಬೆಳೆ ಬೆಳೆದ ರೈತ

    ಗದಗ: ಸತತ ಭೀಕರ ಬರ ರೈತರನ್ನು ಹೈರಾಣ ಮಾಡಿದೆ. ಆದರೆ ಈ ಭೀಕರ ಬರವನ್ನು ಮೆಟ್ಟಿನಿಂತ ರೈತರೊಬ್ಬರು ಬಂಗಾರದಂತ ಪಪ್ಪಾಯಿ ಬೆಳೆದು ಕೈತುಂಬಾ ಝಣ ಝಣ ಕಾಂಚಾಣ ಎಣಿಸುತ್ತಿದ್ದಾರೆ. ಸಮಗ್ರ ಸಾವಯವ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡು ಇತರೆ ರೈತರಿಗೆ ಮಾದರಿಯಾಗಿದ್ದಾರೆ.

    ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಮಾತು ಈ ಅಕ್ಷರಶಃ ಈ ರೈತ ಸತ್ಯ ಮಾಡಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಜೀಗೇರಿ ಗ್ರಾಮದ ಪರಶುರಾಮ್ ಸಮಗ್ರ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆ ಬೆಳೆದು ಮಾದರಿ ರೈತರಾಗಿದ್ದಾರೆ. ಇವರ ಜಮೀನಲ್ಲಿ 5 ಎಕ್ರೆ ಪಪ್ಪಾಯಿ, 10 ಎಕ್ರೆ ನಿಂಬೆಹಣ್ಣು, 3 ಎಕ್ರೆ ವಿಳ್ಳೆದೆಲೆ ತೋಟ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದರ ಜೊತೆ ಮೆಕ್ಕೆಜೋಳ, ಹತ್ತಿ, ತೊಗರಿ, ಶೇಂಗಾ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಕೂಡ ಬೆಳೆಯುತ್ತಿದ್ದಾರೆ. ಕಳೆದ 10 ವರ್ಷಗಳಿಂದ ರೈತ ಪರಶುರಾಮ ಕೃಷಿನಲ್ಲಿ ಸಾಧನೆ ಮಾಡಲು ಪಣತೊಟ್ಟು ಹಗಲಿರುಳು ದುಡಿಯುತ್ತಿದ್ದಾರೆ.

    ಸದ್ಯ ಸಾವಯವ ಕೃಷಿಯ ಪದ್ಧತಿ ಮೂಲಕ “ತೈವಾನ್ ರೆಡ್ ಲೇಡಿ” ಎಂಬ ಮಹಾರಾಷ್ಟ್ರ ಮೂಲದ ಪಪ್ಪಾಯಿ ತಳಿ ಬೆಳೆಯುತ್ತಿದ್ದಾರೆ. ಪರಶುರಾಮ್ ಬೆಳೆದ ಪಪ್ಪಾಯಿ ಬೆಳೆ ಕೇವಲ ಕರ್ನಾಟಕ ಮಾತ್ರವಲ್ಲ ನೆರೆಯ ಗೋವಾ, ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ, ಕೇರಳ ಸೇರಿದಂತೆ ಅನೇಕ ರಾಜ್ಯಗಳಿಗೂ ಸರಬರಾಜು ಆಗುತ್ತವೆ. ಬರಗಾಲದಲ್ಲೂ ಅದ್ಭುತ ಬೆಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.

    ಈ ಬಗ್ಗೆ ಮಾತಿನಾಡಿದ ಪರಶುರಾಮ್ ಅವರು, ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ಬೆಳೆ ಬೆಳೆಯುತ್ತಿದ್ದೇನೆ. 5 ಎಕ್ರೆ ಜಮೀನಿನಲ್ಲಿ ಬೆಳೆದ ಪಪ್ಪಾಯಿಯಲ್ಲಿ ಸದ್ಯ 5 ರಿಂದ 10 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ತಿಳಿಸಿದ್ದಾರೆ. ಪರಶುರಾಮ ಅವರು ಕೆಲವು ವರ್ಷಗಳ ಹಿಂದೆ ವಾಣಿಜ್ಯ ಬೆಳೆಯಾದ ಮೆಕ್ಕೆಜೋಳ, ತೊಗರಿ, ಹತ್ತಿ, ಕಡಲೆ, ಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆದು ಲಾಭವಿಲ್ಲದೆ ಕೈ ಸುಟ್ಟುಕೊಂಡಿದ್ದರು. ಹನಿ ನೀರಾವರಿ ಪದ್ಧತಿಯ ಮೂಲಕ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ.

    ತೋಟದಲ್ಲಿ ಪಪ್ಪಾಯಿ, ನಿಂಬೆಹಣ್ಣು, ವಿಳ್ಳೆದೆಲೆ ತೋಟ, ಜೇನು ಸಾಗಾಣಿಕೆ ಮಾಡಿಕೊಂಡಿರುವುದಲ್ಲದೆ, ಹೈನುಗಾರಿಕೆಗೆ ಅತ್ತ ಕೂಡ ಮುಖ ಮಾಡಿದ್ದಾರೆ. ಈ ಎಲ್ಲಾ ಸಮಗ್ರ ಕೃಷಿಯಿಂದ ಸುಮಾರು ಒಂದು ವರ್ಷಕ್ಕೆ 8 ರಿಂದ 10 ಲಕ್ಷ ರೂಪಾಯಿವರಿಗೆ ಆದಾಯಗಳಿಸುವ ಕಾಯಕ ಯೋಗಿ ಆಗಿದ್ದಾರೆ. ಪರಶುರಾಮ ಅವರ ಸಮಗ್ರ ಕೃಷಿ ನೋಡಿದರೆ ನಮಗೂ ಖುಷಿ ತಂದಿದೆ. ನಾವು ಹೀಗೆ ಕೃಷಿಮಾಡಲು ಸ್ಪೂರ್ತಿಯಾಗಿದೆ ಎಂದು ಸ್ಥಳೀಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಸೊಂಟಕ್ಕೆ ಏಟು ತಗುಲಿ ನರಳುತ್ತಿದ್ದ ಮುಸುವದ ರಕ್ಷಣೆ

    ಸೊಂಟಕ್ಕೆ ಏಟು ತಗುಲಿ ನರಳುತ್ತಿದ್ದ ಮುಸುವದ ರಕ್ಷಣೆ

    ಮಂಗಳೂರು: ಸೊಂಟಕ್ಕೆ ಏಟು ತಗುಲಿ ಮುಸುವ(ಲಂಗೂರ್ ಕೋತಿ)ವೊಂದು ಪರದಾಡಿದ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

    ಬೆಳ್ತಂಗಡಿಯ ಪದ್ಮುಂಜ ಗ್ರಾಮದ ಮಲೆಂಗಲ್ಲು ರಕ್ಷಿತಾರಣ್ಯದಲ್ಲಿದ್ದ ಮುಸುವಗಳು ಆಹಾರ ಅರಸಿಕೊಂಡು ನಾಡಿಗೆ ಬಂದಿವೆ. ಬಾಳೆ, ಪಪ್ಪಾಯಿ ತಿನ್ನಲೆಂದು ಬಂದಿದ್ದಾಗ ಗುಂಡೇಟಿನ ಭಯದಿಂದ ಓಟ ಕಿತ್ತಾಗ ಈ ಮುಸಿಯ ಬಂಡೆ ಕಲ್ಲು ತಾಗಿ ಗಂಭೀರವಾಗಿ ಗಾಯಗೊಂಡು ನರಳಿದೆ.

    ಕೆಲ ಪ್ರಾಣಿಪ್ರಿಯರು ಮುಸುವಗೆ ನೀರು ಕೊಟ್ಟು ಆರೈಕೆ ಮಾಡಿದ್ದಾರೆ. ಜೊತೆಗೆ ಅರಣ್ಯಾಧಿಕಾರಿಗಳ ಮೂಲಕ ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಒಯ್ಯುವ ಕೆಲಸ ಮಾಡಿದ್ದಾರೆ.

  • ಯೋಗದ ಫಲ: ಬರಗಾಲದಲ್ಲೂ ಭರ್ಜರಿ ಬೆಳೆ ಬೆಳೆದ ರಾಯಚೂರಿನ ರೈತ

    ಯೋಗದ ಫಲ: ಬರಗಾಲದಲ್ಲೂ ಭರ್ಜರಿ ಬೆಳೆ ಬೆಳೆದ ರಾಯಚೂರಿನ ರೈತ

    -ಮೌಂಟ್ ಅಬುನಲ್ಲಿ ಮೊದಲ ಪ್ರಯೋಗವಾದ ಯೋಗಿ ಕೇಥಿ ಪದ್ಧತಿ
    -ಧ್ಯಾನದ ಮೂಲಕ ತೋಟದಲ್ಲಿ ಧನಾತ್ಮಕ ವಾತಾವರಣ ನಿರ್ಮಾಣ

    ರಾಯಚೂರು: ಇಡೀ ರಾಜ್ಯದಲ್ಲಿ ಅವಧಿಗೂ ಮುನ್ನವೇ ಆರಂಭವಾಗಿರುವ ಬಿಸಿಲು ಹಾಗೂ ಬರಗಾಲ ನೀರಿನ ಅಭಾವ ಉಂಟುಮಾಡಿದೆ. ನದಿ, ಕೆರೆಗಳು ಬತ್ತಿ ರೈತರು ಬರಗಾಲದ ಭೀಕರತೆಯನ್ನ ಅನುಭವಿಸುತ್ತಿದ್ದಾರೆ. ಇಂತಹ ಬರಗಾಲದಲ್ಲೂ ರಾಯಚೂರಿನ ರೈತರೊಬ್ಬರು ಬಂಗಾರದ ಬೆಳೆ ಬೆಳೆದಿದ್ದಾರೆ. ಅತ್ಯಂತ ದೇಶಿ ಪದ್ಧತಿಯಲ್ಲಿ ಧ್ಯಾನದ ಮೂಲಕ ಭರ್ಜರಿ ಫಸಲು ಸಿಕ್ಕಿದೆ. ಆ ರೈತನ ಜಮೀನು ನೋಡುವುದೇ ಕಣ್ಣಿಗೊಂದು ಹಬ್ಬ.

    ರಾಯಚೂರಿನ ಮಾನ್ವಿ ತಾಲೂಕಿನ ಸಿರವಾರ ಪಟ್ಟಣದ ರೈತ ಬಸವರಾಜ್ ಪಪ್ಪಾಯಿ ತೋಟದಲ್ಲಿ ಧ್ಯಾನ ಮಾಡುತ್ತಲೇ ಭರ್ಜರಿ ಬೆಳೆ ಬೆಳೆದಿದ್ದಾರೆ. ಮೂಲತಃ ಸೋಲಾರ್ ಸಿಸ್ಟಮ್ ವ್ಯಾಪಾರಿಯಾಗಿದ್ದ ಬಸವರಾಜ್ ಕೃಷಿಯ ಮೇಲಿನ ಒಲವಿನಿಂದ ಈಗ ರೈತರಾಗಿ ಯಶಸ್ಸು ಕಂಡಿದ್ದಾರೆ. ಇಲ್ಲಿನ ಗೊಲ್ಲದಿನ್ನಿ ಗ್ರಾಮದ ಬಳಿ 3 ಎಕರೆ 32 ಗುಂಟೆ ಜಮೀನು ಹೊಂದಿರುವ ಬಸವರಾಜ್ ಒಂದು ಬೋರ್‍ವೆಲ್ ಸಹಾಯದಿಂದ ಬರಡು ಭೂಮಿಯಲ್ಲಿ ಭರ್ಜರಿ ಪಪ್ಪಾಯಿ, ದಾಳಿಂಬೆ ಬೆಳೆದಿದ್ದಾರೆ.

    ಕೆಂಪು ಮಣ್ಣನ್ನ ಹೊಂದಿರುವ ಭೂಮಿಯಲ್ಲಿ ಹನಿನೀರಾವರಿ ಅಳವಡಿಸಿಕೊಂಡಿದ್ದಾರೆ. ಆದ್ರೆ ಇವರು ಬೆಳೆ ಬೆಳೆಯುತ್ತಿರುವ ಪದ್ಧತಿ ಮಾತ್ರ ಹೊಸತು. ಮೌಂಟ್ ಅಬು ನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ನಡೆಸಿದ ಯಶಸ್ವಿ ಪ್ರಯೋಗವಾದ ಯೋಗಿ ಕೇಥಿ ಪದ್ಧತಿ. ಅಂದ್ರೆ ಹೊಲದಲ್ಲಿ ಧ್ಯಾನ ಮಾಡುವ ಮೂಲಕ ಧನಾತ್ಮಕ ಶಕ್ತಿಯನ್ನ ಉಂಟುಮಾಡಿ ಉತ್ತಮ ಫಸಲನ್ನ ತೆಗೆಯುವುದು. ಈ ಪದ್ದತಿಯಲ್ಲಿ ಹೊಲದ ಮಾಲೀಕರಿಂದ ಹಿಡಿದು ಕೆಲಸಗಾರರು ಸಹ ಯಾವುದೇ ಮಾದಕ ವಸ್ತುಗಳ ವ್ಯಸನ ಮಾಡುವಂತಿಲ್ಲ.

    ಕಳೆದ 20 ವರ್ಷದಿಂದ ಜಾರಿಯಲ್ಲಿರುವ ಯೋಗಿ ಕೇಥಿ ಪದ್ಧತಿಯಲ್ಲಿ ರಾಜಸ್ಥಾನ,ಗುಜರಾತ್, ಮಹಾರಾಷ್ಟ್ರ ರೈತರು ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಈಗ ರಾಜ್ಯದಲ್ಲೂ ಇದರ ಪ್ರಯೋಗ ನಡೆದಿದೆ. ಸಾಮಾನ್ಯ ಪಪ್ಪಾಯಿ ತೋಟದಲ್ಲಿ ಒಂದು ಗಿಡಕ್ಕೆ 60 ಕೆ.ಜಿ ತೂಕದಷ್ಟು ಹಣ್ಣುಗಳು ಬಿಟ್ಟರೆ ಬಸವರಾಜ್ ತೋಟದಲ್ಲಿ 100 ಕೆ.ಜಿ. ತೂಕದಷ್ಟು ಅಂದ್ರೆ ಸರಾಸರಿ 80 ಹಣ್ಣುಗಳು ಸಿಗುತ್ತಿವೆ. ಕ್ರಿಮಿ, ಕೀಟ, ರೋಗಬಾಧೆಯಿಂದ ದೂರವಿರುವ ಬೆಳೆ ಸಂಪೂರ್ಣ ಸಾವಯವ ಗೊಬ್ಬರದಿಂದಾಗಿದ್ದು, ಕಡಿಮೆ ಖರ್ಚಿನ ಬೇಸಾಯವಾಗಿದೆ.

    2400 ಪಪ್ಪಾಯಿ, 2400 ದಾಳಿಂಬೆ ಗಿಡಗಳನ್ನ ಒಂದರ ಪಕ್ಕದಲ್ಲಿ ಒಂದನ್ನ ಬೆಳೆಸಿರುವುದರಿಂದ ಎರಡು ಬೆಳೆಗಳು ಪರಸ್ಪರ ಬೆಳವಣಿಗೆಗೆ ಸಹಕಾರಿಯಾಗಿವೆ. ಏಳು ತಿಂಗಳಲ್ಲೇ ಪಪ್ಪಾಯಿ ಉತ್ತಮ ಫಸಲು ಬಂದಿದ್ದು, ದಾಳಿಂಬೆ ಈಗ ಹೂ ಬಿಡುತ್ತಿದೆ. ಗಿಡದಲ್ಲೆ ಹಣ್ಣು ಮಾಗುವುದರಿಂದ ಅತ್ಯುತ್ತಮ ರುಚಿಯ ಹಣ್ಣುಗಳು ಸಿಗುತ್ತವೆ. ಮುಂಗಡವಾಗಿ ಕಾಯ್ದಿರಿಸಿ ಹಣ್ಣುಗಳನ್ನ ಕೊಳ್ಳಲು ವ್ಯಾಪಾರಿಗಳು ತಾವಾಗಿಯೇ ಬಸವರಾಜ್ ತೋಟಕ್ಕೆ ಭೇಟಿ ನೀಡುತ್ತಿದ್ದಾರೆ. ಭೀಕರ ಬರಗಾಲವಿದ್ದರೂ ಅತ್ಯಂತ ಕಡಿಮೆ ಪ್ರಮಾಣದ ನೀರನ್ನ ಬಳಸಿ ಬಸವರಾಜ್ ಉತ್ತಮ ಬೆಳೆ ಬೆಳೆದು ಮಾದರಿಯಾಗಿದ್ದಾರೆ. ಬೆಳೆ ಹಾಗೂ ನೂತನ ಕೃಷಿ ಪದ್ದತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಆಸಕ್ತರು ಬಸವರಾಜ್ ಅವರ ಮೋಬೈಲ್ ಸಂಖ್ಯೆ 9886838888 ಕ್ಕೆ ಸಂಪರ್ಕಿಸಬಹುದು.