Tag: ಪಪುವಾ ನ್ಯೂಗಿನಿ ತಂಡ

  • ಟಿ-20 ವಿಶ್ವಕಪ್‍ಗೆ ಹೊಸ ತಂಡ ಎಂಟ್ರಿ

    ಟಿ-20 ವಿಶ್ವಕಪ್‍ಗೆ ಹೊಸ ತಂಡ ಎಂಟ್ರಿ

    ದುಬೈ: ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ ಪಪುವಾ ನ್ಯೂಗಿನಿ ತಂಡವು (ಪಿಎನ್‍ಜಿ) ಮೊದಲ ಬಾರಿಗೆ ಅರ್ಹತೆ ಪಡೆದುಕೊಂಡಿದೆ.

    ದುಬೈನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಭಾನುವಾರ ನಡೆದ ಬಲಿಷ್ಠ ಕೀನ್ಯಾ ವಿರುದ್ಧ ಪಿಎನ್‍ಜಿ 45 ರನ್‍ಗಳ ಅಂತರದಿಂದ ಭರ್ಜರಿ ಗೆಲವು ಸಾಧಿಸಿದೆ. ಈ ಮೂಲಕ ಮೊತ್ತ ಮೊದಲ ಬಾರಿ ಟಿ-20 ವಿಶ್ವಕಪ್ ಟೂರ್ನಿಗೆ ಎಂಟ್ರಿ ಕೊಟ್ಟಿದೆ. ಇದನ್ನೂ ಓದಿ: ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್- 2020ಗೆ ಕಮ್‍ಬ್ಯಾಕ್

    ಭಾನುವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಿಎನ್‍ಜಿ ತಂಡವು, ಸೆಸೆ ಬಾವ್ 17 ರನ್, ನೋರ್ಮನ್ ವನುವಾ 54 ರನ್, ಜೇಸನ್ ಕಿಲಾ 12 ರನ್ ಸಹಾಯದಿಂದ ಎಲ್ಲ ವಿಕೆಟ್ ಕಳೆದುಕೊಂಡು 19.3 ಓವರ್‌ಗಳಲ್ಲಿ 118 ರನ್‍ಗಳನ್ನು ಪೇರಿಸಿತು. ಬಳಿಕ ಬೌಲಿಂಗ್‍ನಲ್ಲಿ ಮಿಂಚಿದ ಪಿಎನ್‍ಜಿ ಕೀನ್ಯಾ ತಂಡವನ್ನು 18.4 ಓವರ್‌ಗಳಲ್ಲಿ 73 ರನ್‍ಗಳಿಗೆ ಆಲ್‍ಔಟ್ ಮಾಡಿತು.

    ಕಿನ್ಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರೂ ಪಿಎನ್‍ಜಿಗೆ ಟಿ-20 ವಿಶ್ವಕಪ್ ಅರ್ಹತೆ ಖಚಿತವಾಗಿರಲಿಲ್ಲ. ಏಕೆಂದರೆ ಸ್ಕಾಟ್ಲೆಂಡ್ ಮತ್ತು ನೆದರ್ಲೆಂಡ್ಸ್ ನಡುವಣ ಪಂದ್ಯದ ಫಲಿತಾಂಶವನ್ನು ಆಧರಿಸಿತ್ತು. ಗ್ರೂಪ್ ಹಂತದಲ್ಲಿ ಆಡಿದ 6 ಪಂದ್ಯಗಳಲ್ಲಿ ಪಿಎನ್‍ಜಿ 5 ಗೆಲುವು ಮತ್ತು 1 ಸೋಲಿನೊಂದಿಗೆ ಒಟ್ಟು 10 ಅಂಕಗಳನ್ನು ಗಳಿಸಿತ್ತು. ಅಂತಿಮವಾಗಿ ಉತ್ತಮ ರನ್‍ರೇಟ್ ಆಧಾರದ ಮೇರೆಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ವಿಶ್ವಕಪ್ ಟಿಕೆಟ್ ಪಡೆದುಕೊಂಡಿದೆ.

    ಬ್ರಿಟೀಷ್ ಮಿಷಿನರಿಗಳು ಪಪುವಾ ನ್ಯೂಗಿನಿಯಲ್ಲಿ 1900ರಲ್ಲಿಯೇ ಕ್ರಿಕೆಟ್ ಪರಿಚಯಿಸಿದ್ದವು. ಆದರೆ ನ್ಯೂಗಿನಿ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಲು ಒಂದು ಶತಮಾನವನ್ನೇ ತೆಗೆದುಕೊಂಡಿದೆ. ಟಿ-20 ವಿಶ್ವಕಪ್‍ಗೆ ಎಂಟ್ರಿ ಪಡೆದ ಪಿಎನ್‍ಜಿಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

    ದುಬೈನಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ 14 ರಾಷ್ಟ್ರಗಳ ತಂಡಗಳು ಭಾಗವಹಿಸುತ್ತಿದ್ದು, ಈ ಪೈಕಿ ಪಿಎನ್‍ಜಿ ಮತ್ತು ಐರ್ಲೆಂಡ್ ಸೇರಿದಂತೆ ಆರು ತಂಡಗಳು 2020ರ ಟಿ-20 ವಿಶ್ವಕಪ್‍ನ ಮೊದಲ ಸುತ್ತಿನಲ್ಲಿ ಆಡುವ ಅವಕಾಶವನ್ನು ಪಡೆಯಲಿವೆ. ಇತರ ನಾಲ್ಕು ತಂಡಗಳನ್ನು ಅರ್ಹತಾ ಪಂದ್ಯಾವಳಿಯಿಂದಲೇ ನಿರ್ಧರಿಸಲಾಗುತ್ತದೆ. ಟಿ-20 ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ 2020ರ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಲಿದೆ.