Tag: ಪದ್ಮಶ್ರೀ ಪ್ರಶಸ್ತಿ

  • ಪದ್ಮಶ್ರೀ ಹರೇಕಳ ಹಾಜಬ್ಬ ಅವರಿಗೆ ಅರಸು ಪ್ರಶಸ್ತಿ ಪ್ರದಾನ

    ಪದ್ಮಶ್ರೀ ಹರೇಕಳ ಹಾಜಬ್ಬ ಅವರಿಗೆ ಅರಸು ಪ್ರಶಸ್ತಿ ಪ್ರದಾನ

    ಮಂಗಳೂರು: ಕಿತ್ತಳೆ ಹಣ್ಣು ಮಾರಾಟ ಮಾಡಿ ಬಂದ ಆದಾಯದಲ್ಲಿ ಗ್ರಾಮೀಣ ಭಾಗದ ಕನ್ನಡ ಶಾಲೆಯನ್ನು ಕಟ್ಟಿ ಬೆಳೆಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಮಂಗಳೂರಿನ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ವತಿಯಿಂದ ಅರಸು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

    ನಗರದ ಹಿರಿಯ ವೈದ್ಯ ಮತ್ತು ಪ್ರತಿಷ್ಠಾನದ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರತಿಷ್ಠಾನದ ವಿಶಂತಿ ಸಂಭ್ರಮದ ನೆನಪಿಗಾಗಿ ಈ ವರ್ಷದಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಅರಸು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಡಾ.ಮೋಹನ ಆಳ್ವ ಮತ್ತು ಡಾ.ಎಂ.ವಿ.ಕುಲಾಲ್ ಅವರಿಗೆ ಜನವರಿ 19 ರಂದು ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಅನಿವಾರ್ಯ ಕಾರಣದಿಂದ ಅಂದು ಗೈರುಹಾಜರಾಗಿದ್ದ ಹಾಜಬ್ಬ ಅವರಿಗೆ ಸರಳ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅಣ್ಣಯ್ಯ ಕುಲಾಲ್, “ಹಾಜಬ್ಬ ಅವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅದಕ್ಕೂ ಮುನ್ನವೇ ಹಾಜಬ್ಬನವರ ಸೇವೆಯನ್ನು ಪ್ರತಿಷ್ಠಾನ ಗುರುತಿಸಿ ಮೊದಲ ವರ್ಷದ ಅರಸು ಪ್ರಶಸ್ತಿ ಘೋಷಿಸಿತ್ತು. 19ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅವರು ಹಾಜರಾಗದಿದ್ದರೂ, ಇಂದು ಪದ್ಮಶ್ರೀ ಪುರಸ್ಕೃತರಾಗಿ ನಮ್ಮ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಹೆಮ್ಮೆಯ ವಿಚಾರ” ಎಂದರು.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಾಜಬ್ಬ ಅವರು, “ನಾನೆಂದೂ ಪ್ರಶಸ್ತಿಗಾಗಿ ಕೆಲಸ ಮಾಡಿಲ್ಲ. ಅನಕ್ಷರಸ್ಥನಾದ ನನಗೆ ಶಿಕ್ಷಣದ ಮಹತ್ವ ಗೊತ್ತಿತ್ತು. ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಎಲ್ಲ ಪ್ರತೀಕೂಲಗಳನ್ನೂ ಮೆಟ್ಟಿ ನಿಂತು ಸಮಾಜದ ಸಹಕಾರದೊಂದಿಗೆ ಕನ್ನಡ ಶಾಲೆಯನ್ನು ಕಟ್ಟಿ ಬೆಳೆಸಲು ಸಾಧ್ಯವಾಯಿತು. ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ” ಎಂದು ಬಣ್ಣಿಸಿದರು.

    ಪ್ರತಿಷ್ಠಾನದ ಕಾರ್ಯದರ್ಶಿ ಮಮತಾ ಅಣ್ಣಯ್ಯ ಕುಲಾಲ್, ರಾಜ್ಯ ಐಎಂಎ ಹಿರಿಯ ಉಪಾಧ್ಯಕ್ಷ ಡಾ.ಜಿ.ಕೆ.ಭಟ್ ಸಂಕಬಿತ್ತಿಲು, ವೀರನಾರಾಯಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ್, ಮಂಜಣ್ಣ ಬ್ರಿಗೇಡ್ ಅಧ್ಯಕ್ಷ ಮನೋಜ್ ಕುಮಾರ್ ಕೋಡಿಕೆರೆ, ಕನ್ನಡ ಕಟ್ಟೆಯ ಸುರೇಶ್ ಆಚಾರ್, ಕರವೇ ಕರಾವಳಿ ಅಧ್ಯಕ್ಷ ಜಾರ್ಜ್, ಸುಜೀರ್ ಕುಡುಪು, ಮಹಾಬಲ ಕುಲಾಲ್, ಬೈರಾಡಿ ಕೆರೆ ಸಂರಕ್ಷಣಾ ಸಮಿತಿಯ ಶೋಭಾ ಕೇಶವ್, ರಾಜೇಶ್ ಕುಂದರ್, ದೇವದಾಸ್ ಶೆಟ್ಟಿ, ಪ್ರಸಾದ್ ಕಣ್ಣೂರು, ಕುಲಾಲ್ ಯುವವೇದಿಕೆಯ ಅಕ್ಷಯ್ ಕುಲಾಲ್, ಜೇನುಗೂಡಿನ ಅನಿಲ್ ಮತ್ತು ಚಂದ್ರು, ಕುಂಭ ವೈದ್ಯಕೂಟದ ಡಾ.ಸುಷ್ಮಾ ಮತ್ತಿತರರು ಉಪಸ್ಥಿತರಿದ್ದರು.

  • ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಜಿಲ್ಲಾಡಳಿತದಿಂದ ಸನ್ಮಾನ

    ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಜಿಲ್ಲಾಡಳಿತದಿಂದ ಸನ್ಮಾನ

    ಮಂಗಳೂರು: ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಹರೇಕಳ ಹಾಜಬ್ಬರನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಇಂದು ಅಭಿನಂದಿಸಲಾಯಿತು. ನೆಹರೂ ಮೈದಾನದಲ್ಲಿ ನಡೆದ 71ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ವಿವಿಧ ಗಣ್ಯರು ಹಾಜಬ್ಬರನ್ನು ಸನ್ಮಾನಿಸಿ ಗೌರವಿಸಿದರು.

    ಸರಳ ಸಜ್ಜನಿಕೆಯ ಹರೇಕಳ ಹಾಜಬ್ಬರು ಕಿತ್ತಳೆ ಹಣ್ಣನ್ನು ಮಾರಿ 2000ನೇ ಇಸವಿಯಲ್ಲಿ ಶಾಲೆ ಕಟ್ಟಿದ್ದು ಬಡ ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಯನ್ನು ಹಾಜಬ್ಬರು ನಡೆಸುತ್ತಿದ್ದು, ಒಟ್ಟು 170 ಮಂದಿ ಬಡ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

    ಹಾಜಬ್ಬರು ಇಂದೂ ಕಿತ್ತಳೆ ಹಣ್ಣನ್ನು ಮಾರಿ ಹಣವನ್ನು ಶಾಲೆಯ ಅಭಿವೃದ್ಧಿಗೆ ಬಳಸುತ್ತಿದ್ದಾರೆ. ಅಕ್ಷರ ಸಂತ ಹಾಜಬ್ಬರ ಈ ನಿಸ್ವಾರ್ಥ ಸೇವೆಯನ್ನು ಗಮನಿಸಿ ಕೇಂದ್ರ ಸರ್ಕಾರ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹ ಅಪೂರ್ವ ಸಾಧಕನಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸನ್ಮಾನಿಸಿ ಅಭಿನಂದಿಸಿದೆ. ಇದನ್ನು ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಗೌರವ

  • ವೃಕ್ಷಮಾತೆ ಸಾಲು ಮರದ ತಿಮ್ಮಕ್ಕಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

    ವೃಕ್ಷಮಾತೆ ಸಾಲು ಮರದ ತಿಮ್ಮಕ್ಕಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

    ನವದೆಹಲಿ: ಪರಿಸರ ಸಂರಕ್ಷಣೆಗೆ ನೀಡಿರುವ ಕೊಡುಗೆಗೆ ಮಾನ್ಯತೆ ನೀಡಿ, ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅಲ್ಲದೆ ಟ್ವೀಟ್ ಮೂಲಕ ಸ್ವತಃ ರಾಷ್ಟ್ರಪತಿಗಳೇ ವೃಕ್ಷಮಾತೆಗೆ ಅಭಿನಂದನೆ ತಿಳಿಸಿದ್ದಾರೆ.

    ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್, ಪರ್ವತಾರೋಹಿ ಬಚೇಂದ್ರಿ ಪಾಲ್, ಜಾನಪದ ಗಾಯಕಿ ತೀಜನ್ ಬಾಯಿ, ಪರಿಸರಪ್ರೇಮಿ, ಕರ್ನಾಟಕದ ಸಾಲು ಮರದ ತಿಮ್ಮಕ್ಕ ಸೇರಿದಂತೆ 54 ಗಣ್ಯರಿಗೆ 2019ನೇ ಸಾಲಿನ ಪದ್ಮ ಪುರಸ್ಕಾರಗಳನ್ನು ಪ್ರಧಾನ ಮಾಡಿದ್ದಾರೆ. ಈ ಹಿಂದೆ ಮಾರ್ಚ್ 11ರಂದು ವಿವಿಧ ಕ್ಷೇತ್ರದಲ್ಲಿ ಸಾಧಿಸಿದ 56 ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಿ ರಾಷ್ಟ್ರಪತಿಗಳು ಗೌರವಿಸಿದ್ದರು. ಇದನ್ನೂ ಓದಿ: ದಿಗ್ಗಜರಿಗೆ ರಾಷ್ಟ್ರಪತಿಗಳಿಂದ ಪದ್ಮ ಗೌರವ ಪ್ರದಾನ

    ಟ್ವೀಟ್‍ನಲ್ಲಿ ಏನಿದೆ?
    ಸಮಾಜ ಸೇವೆ ಮಾಡಿದಂತಹ ಶ್ರೀಮತಿ ಸಾಲುಮರದ ತಿಮ್ಮಕ್ಕರವರಿಗೆ ರಾಷ್ಟ್ರಪತಿ ಪದ್ಮಶ್ರೀ ಪುರಸ್ಕಾರವನ್ನು ಪ್ರದಾನ ಮಾಡಿದ್ದಾರೆ. 107 ನೇ ವಯಸ್ಸಿನ ಕರ್ನಾಟಕದ ಶ್ರೀಮತಿ ತಿಮ್ಮಕ್ಕರವರು ಒಬ್ಬ ಪರಿಸರವಾದಿ ಹಾಗೂ ತನ್ನ ಹಳ್ಳಿಯಾದ ಹುಲಿಕಲ್‍ನಿಂದ ಕುದೂರುವರೆಗಿನ 4 ಕಿ.ಮೀ ಹೆದ್ದಾರಿಯ ಉದ್ದಗಲಕ್ಕೂ ಆಲದ ಮರಗಳನ್ನು ನೆಟ್ಟು ಹೆಸರುವಾಸಿಯಾಗಿದ್ದಾರೆ.

    ಪರಿಸರದ ಮೇಲೆ ತಮಗಿರುವ ಪ್ರೀತಿಯಿಂದ ರಸ್ತೆ ಬದಿಗಳಲ್ಲಿ ಮರಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ನೀರುಣಿಸಿ ಪೋಷಿಸಿ ತಿಮ್ಮಕ್ಕನವರು ವೃಕ್ಷಮಾತೆಯಾದವರು. ಸಾಲುಮರದ ತಿಮ್ಮಕ್ಕ ಮೂಲಕ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು. ಮಕ್ಕಳು ಇಲ್ಲವೆನ್ನುವ ಕಾರಣಕ್ಕೆ ರಸ್ತೆ ಬದಿಯ ಆಲದ ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಬೆಳೆಸಿ, ಪೋಷಿಸಿ ಪರಿಸರ ಉಳಿಸಿ ಎಂದು ಸಾರಿದ ವೃಕ್ಷಮಾತೆ. ಇದೇ ಕಾರಣಕ್ಕೆ ಅವರು ಸಾಲುಮರದ ತಿಮ್ಮಕ್ಕ ಎಂದು ಖ್ಯಾತಿ ಪಡೆದಿದ್ದಾರೆ.

    ಸಾಲು ಮರದ ತಿಮ್ಮಕ್ಕನವರು ನೆಟ್ಟ ಮರಗಳೆಲ್ಲವೂ ಕುದೂರಿನಿಂದ ಹುಲಿಕಲ್‍ನ ರಾಜ್ಯ ಹೆದ್ದಾರಿಯಲ್ಲಿ ಇಂದಿಗೂ ಇವೆ. ಈಗ ಇವುಗಳನ್ನು ಬೆಳೆಸುವ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ವಹಿಸಿಕೊಂಡಿದೆ. ಆದ್ರೆ ಇಳಿಯ ವಯಸಿನಲ್ಲೂ ತಿಮ್ಮಕ್ಕ ಅವರು ಮಾತ್ರ ಪರಿಸರ ರಕ್ಷಣೆ, ಕಾಳಜಿಯನ್ನು ಮರೆತಿಲ್ಲ. ಸ್ವಾರ್ಥವಿಲ್ಲದೆ ಪರಿಸರಕ್ಕಾಗಿ ಸೇವೆ ಸಲ್ಲಿಸಿದ ತಿಮ್ಮಕ್ಕ ಅವರ ಕಾರ್ಯವನ್ನು ಮೆಚ್ಚಿ ಈಗಾಗಲೇ ಹಲವು ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಗಳು ಲಭಿಸಿದೆ. ಬಿಬಿಸಿ 2016 ರಲ್ಲಿ ಜಗತ್ತಿನ ಅತಿ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕೂಡ ಸಾಲು ಮರದ ತಿಮ್ಮಕ್ಕ ಅವರು ಸ್ಥಾನ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv